ಹೀಗೊಬ್ಬ ಮಹಾರಾಜ
ಹೊಸಪೇಟೆ ಬಿಟ್ಟು ಸಂಡೂರಿನ ದಾರಿ ಹಿಡಿದಾಗ, ನಾನು ಸತೀಷನಷ್ಟೇ ಉತ್ಸಹದಲ್ಲಿದ್ದೆ ಕಾರಣ ಬೇರೆ. ಏಳು ವರ್ಷಗಳಾಗಿದೆ ಅವರನ್ನು ನೋಡಿ. ಎಷ್ಟು ಸಲ ಬರಬೇಕು ಅಂದು ಕೊಂಡಿದ್ದೆ, ಆದರೆ ಆಗಿರಲಿಲ್ಲ. ಅಕ್ರಮ ಗಣಿಗಾರಿಕೆನೋ, ಸುಡುಗಾಡೋ, ಅಂತೂ ಘೋರ್ಪಡೆಯವರನ್ನು ಮತ್ತೆ ನೋಡುತ್ತೇನೆ.
ಬಳ್ಳಾರಿಗೆ ಹೊರಡುವ ಮೊದಲು ಸಂಡೂರಿಗೆ ಫೋನ್ ಮಾಡಿ ವಿಚಾರಿಸಿದ್ದೆ. ಘೋರ್ಪಡೆಯವರನ್ನು ನೋಡಿಕೊಳ್ಳುವ ಕುಮಾರ್ ಆಗಲಿ, ಸಂಡೂರು ಮ್ಯಾಂಗನೀಸ್ ಕಂಪನಿ ಜಂಟಿ ವ್ಯವಸ್ತಾಪಕ ನಿರ್ದೇಶಕ ನಾಜೀಮ್ ಶೇಖ್ ಆಗಲಿ ಯಾವುದೇ ಆಶ್ವಾಸನೆ ನೀಡಿರಲಿಲ್ಲ.
“ ಸಾಹೇಬರು ನಡೆದಾಡುವ, ಮಾತನಾಡುವ ಸ್ತಿತಿಯಲ್ಲಿಲ್ಲ. ತುಂಬಾ ವರ್ಷದಿಂದ ಗೊತ್ತು ಅಂತೀರ. ಗಣಿಗಾರಿಕೆ ಬಗ್ಗೆ ಆದರೆ ನಾವೇ ಮಾತಾಡುತ್ತೇವೆ. ಸಾಹೇಬರು ಹುಶಾರಾಗಿದ್ದರೆ, ಒಂದೈದು ನಿಮಿಷ ಮಾತನಾಡಬಹುದು.” ಅಂದಿದ್ದರು.
ಅಷ್ಟಾದರೂ ಸಾಕು ಅಂದುಕೊಂಡೆ.
ಕಾಡು ಪ್ರಾಣಿಗಳನ್ನರಸಿ ನಾಗರಹೊಳೆ, ಬಂಡಿಪುರಕ್ಕೆ ಹೋದಾಗಲೆಲ್ಲ ಘೋರ್ಪಡೆಯವರ ಫೋಟೊಗಳನ್ನು ನೋಡುತ್ತಿದ್ದೆ. ಸಂಡೂರಿನ ಮಹಾರಾಜ ಮತ್ತು ರಾಜ್ಯದ ಮಂತ್ರಿ ಅನ್ನುವುದು ಬಿಟ್ಟು ಅವರ ಬಗ್ಗೆ ನನಗೇನು ತಿಳಿದಿರಲಿಲ್ಲ. ರಾಜಕೀಯ ವರದಿಗಾಗಿ ವಿಧಾನಸೌಧ ಪ್ರವೇಶಿಸಿದಾಗಿ ಮೊದಲ ಭಾರಿಗೆ ನೋಡಿದೆ. ವನ್ಯಜೀವಿಗಳ ಬಗ್ಗೆ ಇಷ್ಟೊಂದು ಆಸಕ್ತಿ ಇರುವವರು, ಅರಣ್ಯ ಮಂತ್ರಿ ಆಗುವುದು ಬಿಟ್ಟು ಪಂಚಾಯತ್ ರಾಜ್ ಮಂತ್ರಿ ಯಾಕಾಗಿದ್ದಾರೆ ಅನ್ನಿಸಿತು. ಇದೇ ಪ್ರಶ್ನೆ ಮುಂದೆ ಎಂ.ಪಿ. ಪ್ರಕಾಶ್ ವಿಷಯದಲ್ಲೂ ಕಾಡಿತ್ತು.
ವನ್ಯಜೀವಿ ಛಾಯಾಗ್ರಹಕ್ಕೆ ಕೈ ಹಾಕಿ, ಯದ್ವಾತದ್ವ ಫೋಟೊ ತೆಗೆದು, ಬೆಂಗಳೂರಿನ ಛಾಯಾಗ್ರಾಹಕ ಮಿತ್ರರ ತಲೆ ತಿನ್ನುತಿದ್ದ ನನಗೆ ದೊಡ್ಡ ಮಿಕ ನೋಡಿ ಸಂತೋಷವೇನೋ ಆಯಿತು. ಆದರೆ, ಪತ್ರಿಕಾ ವರದಿಗಾರರನ್ನು ಓಲೈಸದೆ, ಅವರ ಪಾಡಿಗೆ ಇರುವ ಘೋರ್ಪಡೆಯವರು, ವಿಧಾನಸೌಧದ ವರದಿಗಾರರ ಮಧ್ಯ ಅಂಥಹ ‘ಪಾಪ್ಯುಲರ್ ಫಿಗರ್’ ಏನೂ ಆಗಿರಲಿಲ್ಲ. ‘ಆಫ್ ದಿ ರೆಕಾರ್ಡ್ ಸ್ಟೋರಿ’ ಎಂಬ ವರದಿಗಾರ- ರಾಜಕಾರಣಿಗಳ ನೆಂಟಸ್ತನವನ್ನು ಆಫ್ ಮಾಡಿಕೊಂಡು, ಎಗ್ಗಿಲ್ಲದ ಒಂಟಿ ಸಲಗನಂತೆ ಸುತ್ತುತ್ತಿದ್ದರು. ನಾನೂ ಖೆಡ್ಡಾಕ್ಕೆ ಕೆಡವಲು ಕಾಯುತ್ತಿದ್ದೆ.
ಅಂತಹದೊಂದು ಸಂದರ್ಭ ಬಂದೇ ಬಿಟ್ಟಿತು. ವಿಧಾನಸಭೆಯ ಮೊಗಸಾಲೆಯಲ್ಲಿ, ಒಬ್ಬರೇ ಅನ್ಯ ಮನಸ್ಕರಾಗಿ ಕುಳಿತಿದ್ದ ಘೋರ್ಪಡೆಯವರ ಪಕ್ಕದಲ್ಲಿ ಧೈರ್ಯಮಾಡಿ ಕುಳಿತೇ ಬಿಟ್ಟೆ. ತಿರುಗಿ ಏನು ಎಂಬಂತೆ ತಲೆ ಆಡಿಸಿದರು.
ಸಾರ್, ನಾನು ವಿನಯ್ ಮಾಧವ್ ಅಂತ. ಇಂಡಿಯನ್ ಎಕ್ಸ್ ಪ್ರೆಸ್ ರಿಪೋರ್ಟರ್ ಎಂದೆ. ತಲೆ ಆಡಿಸಿ ಸುಮ್ಮನಾದರು. ಏನಾದರೂ ಮಾತನಾಡಲೇ ಬೇಕಿತ್ತು. ಎಲ್ಲಾದರು ಎದ್ದು ಹೋದರೆ ಅಂತ ಭಯ ಬೇರೆ.
ಸರ್, ಕೆರೆಯಲ್ಲಿ ಸ್ನಾನ ಮಾಡುತ್ತಿದ್ದ ಆನೆ ಫೋಟೋ ಕಲ್ಕೆರೆ ಗೆಸ್ಟ್ ಹೌಸ್ನಲ್ಲಿ ನೋಡಿದ್ದೆ, ಚೆನ್ನಾಗಿದೆ ಎಂದೆ. “ ಅದು ತೆಗೆದದ್ದು ನಾಗರಹೊಳೆಯಲ್ಲಿ, ಕಲ್ಕೆರೆಗೆ ಹೇಗೆ ಬಂತು?” ಅಂದರು. ಆಗಲೆ ನನಗೆ ಹೊಳೆದದ್ದು ನಾನು ಫೋಟೋ ನೋಡಿದ್ದು ನಾಗರಹೊಳೆಯ ಸುಂಕದಕಟ್ಟೆ ಗೆಸ್ಟ್ ಹೌಸ್ ನಲ್ಲಿ ಹೊರತು ಬಂಡೀಪುರದ ಕಲ್ಕೆರೆಯಲಲ್ಲ ಅಂತ. ಪೇಚಾಡಿಕೊಂಡರೂ, ಹೇಳಿದ ಸುಳ್ಳಿನ ಜೊತೆ ಬದುಕಲೇ ಬೇಕಾದ ಅನಿರಾರ್ಯತೆ ಬಂದಿತ್ತು.
ಆದರೆ. ಅವರೇ ಮಾತು ಮುಂದುವರೆಸಿದರು. “ ನೀವ್ಯಾಕೆ ಅಲ್ಲಿ ಹೋಗಿದ್ದಿರಿ?”
ಗೆದ್ದೆ ಅಂದು ಕೊಂಡವನೆ, ನನ್ನ ವನ್ಯ ಜೀವಿ ಛಾಯಾಗ್ರಹಣದ ಹವ್ಯಾಸದ ಬಗ್ಗೆ ಕೊರದೆ. ಸ್ವಲ್ಪ ಇಂಪ್ರೆಸ್ ಮಾಡೋಕೆ ಅಂತ ಹೇಳಿದೆ, “ ನಿಮ್ಮ ಟೈಮ್ ನಲ್ಲಿ, ನೀವೇ ನಂಬರ್ ಒನ್ ಸರ್.” ಅಷ್ಟರವತೆಗೆ ಆಸಕ್ತಿಯಿಂದ ಕೇಳುತ್ತಿದ್ದವರು ಗಂಭೀರವಾದರು. “ ಹೌದು. ನನಗೆ ಕಾಂಪಿಟೇಷನ್ ಎಲ್ಲಿತ್ತು? ಆಗ ಅದೊಂದು ದುಬಾರಿ ಅಭ್ಯಾಸವೇ ಹೊರತು, ಪ್ರೊಫೇಷನ್ ಆಗಿರಲಿಲ್ಲ. ನನ್ನ ಹತ್ತಿರ ಲೆನ್ಸ್ ಬದಲಾಯಿಸೋ ಕ್ಯಾಮರಾ ಇದ್ದರೆ, ಬೇರೆಯವರು ಸಣ್ಣ ಕ್ಯಾಮರಾಗಳನ್ನು ಉಪಯೋಗಿಸುತ್ತಿದ್ದರು. ನನ್ನ ಜೀಪ್ ನಲ್ಲಿ ಕ್ಯಾಮೆರಾ ಮೌಂಟ್ ಮಾಡಬಹುದಿತ್ತು, ಯಾವ ಫೋಟೋಗ್ರಾಫರ್ ಗಳ ಬಳಿಯೂ ಅಷ್ಟಾಗಿ ಹಣಕಾಸಿನ ಅನುಕೂಲಗಳಿರಲಿಲ್ಲ. ಐ ವಾಸ್ ಆನ್ ಅಡ್ವಾಂಟೇಜಿಯಸ್ ಸೈಡ್.” ಎಂದರು.
ಪೆಚ್ಚಾಗಿ ಅವರ ಮುಖವನ್ನೇ ನೋಡುತ್ತಾ ಕುಳಿತೆ. “ಏನಿವೇ, ಹ್ಯಾವ್ ಯೂ ಗಾಟ್ ಎನಿ ಗುಡ್ ಪಿಕ್ಚರ್ಸ್?” ಎಂದು ಕೇಳಿದರು. ನಾಲ್ಕೈದು ಒಳ್ಳೆಯವು ಇವೆ ಸರ್. ಪ್ರಯತ್ನ ಮಾಡ್ತಾ ಇದ್ದೀನಿ ಎಂದೆ. “ ಕೀಪ್ ಅಪ್ ದಿ ಇಂಟರೆಸ್ಟ್, ಯು ವಿಲ್ ಕಮ್ ಅಕ್ರಾಸ್ ಗುಡ್ ಒನ್ಸ್” ಎಂದು ಹೇಳಿ ಎದ್ದು ಹೋದರು.
ಅಷ್ಟರಲ್ಲಾಗಲೇ ಬೆವತು ಹೋಗಿದ್ದೆ. ಏನೋ ಒಂದು, ಅಂತೂ ಪರಿಚಯವಾಯಿತ್ತಲ್ಲ ಅಂತ ಸಮಾಧಾನ ಮಾಡಿಕೊಂಡು ನಿಧಾನವಾಗಿ ಹೊರಟೆ.
ಅಂದಿನಿಂದ ಎಲ್ಲೇ ಕಂಡರೂ, ಏನು ಎನ್ನುವಂತೆ ತಲೆ ಆಡಿಸುತ್ತಿದ್ದರು. ಆಗೊಮ್ಮೆ ಈಗೊಮ್ಮೆ ಕಾಡಿಗೆ ಹೋಗಿದ್ದಾ? ಅಂತ ಕೇಳುತ್ತಿದ್ದರು. ನಾನೂ ಕೂಡ ನಗುವಿನಲ್ಲೇ ಉತ್ತರಿಸುತ್ತಿದ್ದೆ. ಮೊದಲನೆಯ ಭೇಟಿಯ ನಂತರ ಇವರ ಜೊತೆ ಕಡಿಮೆ ಮಾತನಾಡಿದರೆ ಮಾತ್ರ ನನಗೆ ಕ್ಷೇಮ ಅಂತ ನಿರ್ಧರಿಸಿದ್ದೆ. ಆಗಾಗ ಬದಲಿಸಿಕೊಳ್ಳುತ್ತಿದ್ದ ನಮ್ಮ ಈ ಉಭಯಕುಷಲೋಪರಿಗಳನ್ನು ನೋಡುತ್ತಿದ್ದ ಪತ್ರಕರ್ತ ಮಿತ್ರರು. ಆಫ್ ದಿ ರೆಕಾರ್ಡ್ ಸುದ್ದಿಗಳನ್ನು ಕೇಳುವಂತೆ ಹೇಳುತ್ತಿದ್ದರು. ನಾನು ನಕ್ಕು ಸುಮ್ಮನಾಗುತ್ತಿದ್ದೆ.
ಈ ನಡುವೆ, ಘೋರ್ಪಡೆಯವರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಕ್ಕಿಕೊಂಡಿದ್ದಾರೆಂಬ ಕಥೆಗಳು ಕೇಳಿ ಬರತೊಡಗಿದವು. ಇದೇ ಸಮಯದಲ್ಲಿ, ಆಗಿನ ಎಸ್.ಎಂ. ಕೃಷ್ಣ ಸರ್ಕಾರ, ಘೋರ್ಪಡೆಯವರ ಸಾಮ್ಯದ ಸಂಡೂರ್ ಮ್ಯಾಂಗನೀಸ್ ಕಂಪನಿಯ 35 ಕೋಟಿ ವಿದ್ಯುತ್ ಶುಲ್ಕ ಬಾಕಿಯನ್ನು ಮನ್ನಾ ಮಾಡಿತ್ತು. ಮೊದಲೇ ಕಡಿಮೆ ಮಾತನಾಡುತ್ತಿದ್ದ ಘೋರ್ಪಡೆಯವರು ಅಂತರ್ಮುಖಿಯಾಗಿ, ಮೌನಕ್ಕೆ ಶರಣಾದರು.
ಕೃಷ್ಣಾರವರ ಸಹವರ್ತಿಯೊಬ್ಬರನ್ನು ಇದರ ಬಗ್ಗೆ ವಿಚಾರಿಸಿದೆ. ಸ್ವಲ್ಪ ದಿನಗಳ ಹಿಂದೆ, ಘೋರ್ಪಡೆಯವರು, ಕೃಷ್ಣರವನ್ನು ಭೇಟಿಯಾಗಿ, ರಾಜಿನಾಮೆ ಕೊಡುವ ಇಂಗಿತ ವ್ಯಕ್ತಪಡಿಸಿದರಂತೆ. ಪಂಚಾಯತ್ ರಾಜ್ ಗಳಿಗೆ ಹೆಚ್ಚಿನ ಅಧಿಕಾರ ಕೊಡುವ ನಿಟ್ಟಿನಲ್ಲಿ ಹೊಸ ನೀತಿಯ ಕರಡನ್ನು ತಯಾರಿಸುತ್ತಿದ್ದವರು, ಏಕಾ ಏಕಿ ಈ ನಿರ್ಧಾರಕ್ಕೆ ಏಕೆ ಬಂದರೆಂದು ಕೃಷ್ಣರವರು ವಿಚಾರಿಸಿದಾಗ, ವೈಯಕ್ತಿಕ ಸಮಸ್ಯೆಗಳಿಗೆ ಸಮಯ ಸಿರುತ್ತಿಲ್ಲ ಎಂದಷ್ಟೇ ಹೇಳಿದರಂತೆ. ಅವರ ಸಮಸ್ಯೆಗಳ ಬಗ್ಗೆ ತಿಳಿದಿದ್ದ ಕೃಷ್ಣ, ಹೊಸ ನೀತಿಯನ್ನು ಮುಗಿಸಿದ ನಂತರ ನಿರ್ಧಾರ ತೆಗೆದುಕೊಳ್ಳುವಂತೆ ಹೇಳಿದಲ್ಲದೆ, ಅವರ ವೈಯಕ್ತಿಕ ಸಮಸ್ಯೆಗಳ ಬಗ್ಗೆ ತಾವೂ ಗಮನ ಹರಿಸುವುದಾಗಿ ಆಶ್ವಾಸನೆ ನೀಡಿದರಂತೆ.
ಮಂತ್ರಿ ಮಂಡಲದ ಸಭೆಗೆ ವಿಷಯ ಬರುವವರೆಗೆ ವಿಷಯ ಘೋರ್ಪಡೆಯವರಿಗೆ ತಿಳಿಯದಂತೆ ಎಚ್ಚರ ವಹಿಸಲಾಗಿತ್ತಂತೆ. ಸರ್ಕಾರ ಮನ್ನಾ ಮಾಡಿದ ಮೇಲೆ ಇರಸು ಮುರುಸಾದರೂ, ಘೋರ್ಪಡೆಯವರು ಆ ವಿಷಯವನ್ನು ಯಾರ ಹತ್ತಿರವೂ ಮಾತನಾಡಲಿಲ್ಲವಂತೆ .
ಏಕೋ ಏನೋ ಈ ವಿಷಯವನ್ನು ಮತ್ತೆ ಕೆದಕಲು ಇಷ್ಟವಾಗಲಿಲ್ಲ. ಇಂದಿಗೂ ಅದೇ ಸತ್ಯ ಅಂತ ನಂಬಿದ್ದೇನೆ.
ಸ್ವಲ್ಪ ದಿನಗಳ ನಂತರ, ಘೋರ್ಪಡೆಯವರು ಪತ್ರಿಕಾಗೋಷ್ಟಿ ಕರೆದು ಪಂಚಾಯತ್ ರಾಜ್ ಹೊಸ ನೀತಿಯನ್ನು ಪ್ರಕಟಿಸಿದರು. ಅದರ ಹಿಂದೆಯೇ, ತಾವು ಮುಂದಿನ ಚುನಾವಣೆ ಸಮಯದಲ್ಲಿ. ರಾಜಕೀಯ ನಿವೃತ್ತಿ ಹೊಂದುವುದಾಗಿ ಘೋಷಿಸಿದರು. ಪತ್ರಿಕಾ ಘೋಷ್ಟಿ ಮುಗಿದ ಕೂಡಲೇ ಘೋರ್ಪಡೆಯವರ ಹತ್ತಿರ ಹೋಗಿ: “ ಸಾರ್, ಪಂಚಾಯತ್ ರಾಜ್ ನೀತಿ ಮುಗಿದರೇನಂತೆ, ಫಾರೆಸ್ಟ್ ನಲ್ಲಿ ತುಂಬಾ ಕೆಲಸ ಇದೆಯಲ್ಲಾ,” ಅಂದೆ. “ ನೀನು ಮಾಡು ನನಗೆ ತುಂಬಾ ಕೆಲಸ ಇದೆ. ಊರಲ್ಲಿ ಮಕ್ಕಳು ಕಾಯುತ್ತಿದ್ದಾರೆ.’’ ಎಂದು ಹೇಳಿ ಹೊರಟು ಹೋದರು.
ಮುಂದಿನ ವಿಧಾನಮಂಡಲದ ಅಧಿವೇಶನದಲ್ಲಿ, ಘೋರ್ಪಡೆಯವರು ತುಂಬಾ ಉಲ್ಲಾಸಿತರಾದಂತಿದ್ದರು, ಸಿಕ್ಕಾಗ ಮಾತನಾಡುತ್ತಿದ್ದರು. ಒಂದು ದಿನ ಕಲಾಪದ ಸಮಯದಲ್ಲಿ ಮಂಡ್ಯದ ಸದಸ್ಯ ಎಂ.ಎಸ್. ಆತ್ಮಾನಂದ ಪ್ರಶ್ನೆಯೊಂದನ್ನು ಕೇಳಿದರು. ಪಂಚಾಯತ್ ರಾಜ್ ಸಂಸ್ಥೆಗಳ ಸದಸ್ಯರೂ ಆಗಿರುವ ವಿಧಾನಸಭಾ ಸದಸ್ಯರ ವಿವೇಚನೆಗೆ ಎಷ್ಟು ನಿಧಿ ಇಡಲಾಗಿದೆ. ?
ತಣ್ಣನೆಯ ದ್ವನಿಯಲ್ಲಿ ಘೋರ್ಪಡೆಯವರು ಹೇಳಿದರು: “ ಏನೂ ಇಟ್ಟಿಲ್ಲ”
ವಿಷಯವಿಷ್ಟೇ. ವಿಧಾನಸಭೆ ಸದಸ್ಯರಿಗೆ, ಅವರ ಕ್ಷೇತ್ರಾಭಿವೃದ್ದಿಗಾಗಿ ನಿಧಿ ಮೀಸಲಿಡುವುದಾಗಿ ಸರ್ಕಾರ ಘೋಷಿಸಿತು. ಸತತ ಬರಗಾಲದಿಂದ ಕೆಂಗೆಟ್ಟ ಸರ್ಕಾರ, ಆ ಹಣವನ್ನು ಬರ ಪರಿಹಾರಕ್ಕಾಗಿ ವಿನಿಯೋಗಿಸಿತು. ಕ್ಷೇತ್ರದ ಜನರು ರಸ್ತೆ, ಕುಡಿಯುವ ನೀರಿಗಾಗಿ ಶಾಸಕರ ಬೆನ್ನು ಬಿದ್ದಾಗ, ಯಾವುದೇ ಯೋಜನೆಗಳಿಲ್ಲದೆ, ಶಾಶಕರು ಕಣ್ಣು ಕಣ್ಣು ಬಿಡುವ ಪರಿಸ್ಥಿತಿ ಉದ್ಬವಿಸಿತ್ತು, ಆದರೆ, ಪಂಚಾಯತ್ ರಾಜ್ ಹೊಡ ನೀತಿಯಲ್ಲಿ, ಅಲ್ಲಿನ ಸದಸ್ಯರಿಗೆ ನಿಧಿ ಮೀಸಲಿಟ್ಟಿತು. ಪಂಚಾಯತ್ ರಾಜ್ ಸಂಸ್ಥೆಗಳಿಗೆ ನೇರವಾಗಿ ಹಣ ಬಿಡುಗಡೆಯಾಗುತ್ತಿದ್ದರಿಂದ, ಆ ಹಣಕ್ಕೆ ಸರ್ಕಾರ ಕೈ ಹಾಕುವಂತಿರಲಿಲ್ಲ. ಶಾಸಕರು ತಮಗೆ ಅಲ್ಲೂ ನಿಧಿ ಮೀಸಲಿಡುವಂತೆ ಕೇಳಿದ್ದರು.
ಘೋರ್ಪಡೆಯವರೇನೋ ತಣ್ಣಗೆ ಉತ್ತರಿಸಿದರು. ಆದರೆ, ವಿಧಾನಸಭೆಯ ಸದಸ್ಯರು ಗರಂ ಆದರು. ಪಕ್ಷ ಭೇದ ಮರೆತು, ಎಲ್ಲರೂ ಘೋರ್ಪಡೆಯವರ ಮೇಲೆ ಮುಗಿಬಿದ್ದು, ಧರಣಿಗೆ ಮುಂದಾದರು. ವಿಷಯವನ್ನು ಅಲ್ಲಿಗೇ ಮುಗಿಸಲು ಹವಣಿಸುತ್ತಾ, ಸಭಾಧ್ಯಕ್ಷ ಎಂ.ವಿ. ವೆಂಕಟಪ್ಪ. “ ಘೋರ್ಪಡೆಯವರೆ, ಒಪ್ಪಿಕೊಂಡಿ ಬಿಡಿ” ಎಂದರು.
“ ಯಾಕೆ ಒಪ್ಪಿಕೋ ಬೇಕು ? ಆ ಹಣ ಇರುವುದು ಪಂಚಾಯತ್ ರಾಜ್ ಸಂಸ್ಥೆಗಳಿಗೆ ಹೊರತು, ವಿಧಾನಮಂಡಲಕ್ಕಲ್ಲ. ಯಾವುದೇ ಕಾರಣಕ್ಕೂ ನಾನು ಒಪ್ಪುವುದಿಲ್ಲ.” ಅಂದೇ ಬಿಟ್ಟರು.
ಪರಿಸ್ಥಿತಿ ಬಿಗಡಾಯಿಸಿತು. ಅಲ್ಲಿಯವರೆಗೆ ಶಾಂತವಾಗಿ ಕುಳಿತಿದ್ದ ಘೋರ್ಪಡೆಯವರ ಮುಖ ಕೆಂಪೇರ ತೊಡಗಿತು. ವೆಂಕಟಪ್ಪನವರು “ ಒಂದು ಸಭೆ ಕರೆದು ತೀರ್ಮಾನ ತೆಗೆದುಕೊಳ್ಳುತ್ತೇನೆ ಅಂತ ಏನಾದರು ಹೇಳಿ, ವಿಷಯ ಮುಗಿಸಿ ಬಿಡೋಣ” ಎನ್ನ ತೊಡಗಿದರು.
ಒಮ್ಮೆಲೆ ಎದ್ದು ನಿಂತ ಘೋರ್ಪಡೆಯವರು. “ ಪಂಚಾಯತ್ ರಾಜ್ ರಾಜೀವ್ ಗಾಂಧಿಯ ಕನಸಿನ ಕೂಸು ಅವುಗಳನ್ನು ಬಲಪಡಿಸಬೇಕು ಎಂದು ಹೊಸ ನೀತಿ ತಂದಿರುವುದು. ರಸ್ತೆ. ಕುಡಿಯುವ ನೀರು ವಿಧಾನಸಭೆಯ ಸದಸ್ಯರ ಕೆಲಸ ಅಲ್ಲ. ಇಲ್ಲಿಯ ಕೆಲಸ ಏನಿದ್ದರೂ ಶಾಸನಗಳನ್ನು ಮಾಡುವುದು. ಅದು ಬಿಟ್ಟು ಪಂಚಾಯ್ತಿ ರಾಜಕೀಯ ಮಾಡುವ ಆಸೆ ಇರುವವರು ಅಲ್ಲಿ ಚುನಾವಣೆ ನಿಲ್ಲಬೇಕು. ವಿಧಾನಸಭೆಗೆ ಬಂದು ಪಂಚಾಯ್ತಿಗಳಲ್ಲಿ ಕೈ ಹಾಕಬಾರದು” ಎಂದು ಹೇಳಿ ಕುಳಿತೇ ಬಿಟ್ಟರು.
ಇಂತಹ ಸಂದರ್ಭಗಳಲ್ಲಿ, ಮುಖ್ಯಮಂತ್ರಿಗಳು ಮಧ್ಯಪ್ರವೇಶಿಸುವುದು ಸಾಮಾನ್ಯ. ಈ ಕಲಾಪ ನಡೆಯುವಾಗ, ಕೃಷ್ಣರವರು ಪಕ್ಕದಲ್ಲಿದ್ದ ತಮ್ಮ ಕೊಠಡಿಯಲ್ಲಿ ಕುಳಿತು, ದೂರರ್ಷನದಲ್ಲಿ ಕಲಾಪವನ್ನು ವೀಕ್ಷಿಸುತಿದ್ದರು. ಆದರೆ, ಸದನಕ್ಕೆ ಬಂದು ಮಧ್ಯ ಪ್ರವೇಶಿಸಲು ಧೈರ್ಯಮಾಡಲಿಲ್ಲ.
ಈ ಘಟನೆಯ ನಂತರ ನನಗೆ ಘೋರ್ಪಡೆಯವರನ್ನು ಮಹಾರಾಜ ಎಂದು ಒಪ್ಪಿಕೊಳ್ಳಲು ಮನಸ್ಸು ಬರಲಿಲ್ಲ. ಎಲ್ಲಾ ಅಧಿಕಾರಗಳನ್ನು ತಮ್ಮಲ್ಲೇ ಇಟ್ಟುಕೊಂಡು, ಪಾಳೆಗಾರಿಕೆಯಲ್ಲಿ ಆಳುತಿದ್ದ ಆ ಮಹಾರಾಜರೆಲ್ಲಿ ? ಜನಗಳಿಗೆ ಅಧಿಕಾರ ಹಂಚಲು ಹೋರಾಡುತ್ತಿದ್ದ ಈ ಮಹಾರಾಜರೆಲ್ಲಿ?
ಮುಂದಿನ ಚುನಾವಣೆಯಲ್ಲಿ ಘೋರ್ಪಡೆಯವರು ಸ್ಪರ್ಧಿಸಲಿಲ್ಲ. ಕೆಲವು ತಿಂಗಳ ಬಳಿಕೆ ಪತ್ರಿಕೆಯೊಂದರಲ್ಲಿ, ಘೋರ್ಪಡೆಯವರು ಸಂಡೂರಿನ ಶಾಲಾ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದಾರೆ ಎಂಬ ಸುದ್ದಿ ಓದಿ ಅವರನ್ನು ಭೇಟಿಯಾಗ ಬೇಕೆಂದು ಆಸೆಯಾಯ್ತು. ಒಂದೆರಡು ಬಾರಿ ಫೋನಿನಲ್ಲಿ ಸಂಪರ್ಕಿಸಲು ವ್ಯರ್ಥ ಪ್ರಯತ್ನಗಳೂ ಆದವು. ಇಂದು, ನಾಳೆ ಎನ್ನುತ್ತಾ, ಸಮಯಕ್ಕೆ ಮರ್ಯಾದೆ ಇಲ್ಲದೆ ಬೆಂಗಳೂರಿನಲ್ಲಿ ಏಳು ವರ್ಷಗಳು ಕಳೆದು ಹೋಗಿದ್ದವು.
ಹೊಸಪೇಟೆಯಿಂದ ಸಂಡೂರಿಗೆ 28 ಕಿಲೋಮೀಟರ್ ಮಾತ್ರ ಆದರೆ ಎರಡು ಘಂಟೆ ಪ್ರಯಾಣ. ದಾರಿಯುದ್ದಕ್ಕೂ ಸತೀಶ ಪಾಳುಬಿದ್ದಂತಿದ್ದ ಗಣಿಗಳ ಫೋಟೋ ತೆಗೆಯುತ್ತಿದ್ದ. ಬೆಳಿಗ್ಗೆ ತಿಂಡಿ ತಿನ್ನದೆ ಹೊರಟ ಪ್ರಯುಕ್ತ, ಘೋರ್ಪಡೆಯವರ ಶಿವಪುರ ಅರಮನೆಗೆ ತಲುಪುವ ಹೊತ್ತಿಗೆ, ಹೊಟ್ಟೆಯಲ್ಲಿ ಇಲಿಗಳು ಓಡಾಡುವ ಅನುಭವಾಗುತ್ತಿತ್ತು.
ಶೇಖ್ ಅವರು ಘೋರ್ಪಡೆಯವರು ನಮ್ಮ ಜೊತೆ ಮಾತನಾಡುತ್ತಾರೆ ಎಂಬ ಸಿಹಿ ಸುದ್ದಿಯನ್ನು ಕೊಟ್ಟರು. ಅರ್ಧ ಘಂಟೆ ಅವರ ಜೊತೆಯಲ್ಲಿ ಮಾತನಾಡಿ ಒಳಗೆ ಹೋದೆವು. ಎಲ್ಲಿ ನೋಡಿದರೂ, ಘೋರ್ಪಡೆಯವರು ತೆಗೆದ ವನ್ಯಜೀವಿಗಳ ಛಾಯಾಚಿತ್ರಗಳೇ. ಅವರ ಬಗ್ಗೆ ಅಷ್ಟೊಂದು ತಿಳಿದಿಲ್ಲದಿದ್ದ ಸತೀಶ ಮಾತ್ರ ಬೆರಗಾಗಿ ಹೋಗಿದ್ದ. “ ಸ್ವಲ್ಪ ಕೇಳಿದ್ದೆ ಅಣ್ಣ, ಇಂಥಾ ಫೋಟೋಗ್ರಾಫರ್ ಅಂತ ಗೊತ್ತಿರಲಿಲ್ಲ ನೋಡಿ,” ಅಂದ.
ಘೋರ್ಪಡೆಯವರ ಕಛೇರಿ ಒಂದು ಶಾಲಾ ಕೊಠಡಿಯಂತಿತ್ತು. ಆರೋಗ್ಯ ಕೆಡಲಾರಂಭಿಸಿದ ಮೇಲೆ, ಮಕ್ಕಳನ್ನು ಅರಮನೆಗೆ ಕರೆಸಿ ಪಾಠ ಹೇಳುವ ಪರಿಪಾಟ ಮಾಡಿಕೊಂಡಿದ್ದು ನನಗೆ ತಿಳಿದಿತ್ತು. ಎರಡೇ ನಿಮಿಷದಲ್ಲಿ ಕುಮಾರ್ ಗಾಲಿ ಕುರ್ಚಿಯನ್ನು ತಳ್ಳಿಕೊಂಡು ಬಂದರು. ಅದೇ ನಗು, ಸ್ವಲ್ಪ ದಪ್ಪಗಾಗಿದ್ದಾರೆ ಅಂತ ಅನಿಸಿತು. ಮುಂದೆ ಹೋದವನೇ ಅವರ ಕಾಲು ಮುಟ್ಟಿ ನಮಸ್ಕರಿಸಿದೆ. ಹಿಂದೆ ತಿರುಗಿ ಬರುವಾಗ ಸತೀಶನ ಮುಖ ನೋಡಿದರೆ. ಕರೆಂಟ್ ಹೊಡೆದ ಹಾಗಿತ್ತು. ಹತ್ತಾರು ವರ್ಷಗಳಿಂದ ನನ್ನ ಸ್ವಭಾವ ಗೊತ್ತಿದ್ದ ಅವನಿಗೆ, ನಾನು ಒಬ್ಬ ರಾಜಕಾರಣಿಯ ಕಾಲು ಮುಟ್ಟಿದ್ದು ಶಾಕಿಂಗ್ ಆಗಿತ್ತು. ನಾನೇನೂ ಮಾತಾಡಲು ಹೋಗಲಿಲ್ಲ.
ಈ ಏಳು ವರ್ಷಗಳಲ್ಲಿ, ನಾನು ಘೋರ್ಪಡೆಯವರು ಸ್ಮೃತಿಪಟಲದಿಂದ ಹಿಂದೆ ಸರಿದಿದ್ದೆ. ವನ್ಯ ಜೀವಿಗಳ ವಿಷಯ ಬಂದ ಕೂಡಲೇ ಕೇಳಿದರು. “ ಹ್ಯಾವ್ ಯೂ ಗಾಟ್ ಎನಿ ಗುಡ್ ಪಿಕ್ಚರ್ಸ್ ?” ಲಗುಬಗೆಯಿಂದ ನನ್ನ ಐಪ್ಯಾಡ್ ತೆಗೆದು, ಆಪ್ರಿಕಾದಲ್ಲಿ ತೆಗೆದ ಚಿತ್ರಗಳನ್ನು ಅವರ ಮುಂದಿಟ್ಟೆ. ಕೆಲವು ಚಿತ್ರಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಘೋರ್ಪಡೆಯವರು ಮರದ ಮೇಲೆ ಕುಳಿತ ಚಿರತೆಯನ್ನು ನೋಡುತ್ತಲೇ, `ಲೈಟಿಂಗ್ ಸರಿ ಇಲ್ಲ ನೋಡು’ ಎಂದರು.
ಆಪ್ರಿಕಾದ ರೋಲರ್ ಹಕ್ಕಿ ಚಿತ್ರ ತೋರಿಸುತ್ತಾ. “ ಸರ್, ಈ ಹಕ್ಕಿಯಲ್ಲಿ 72 ಬಣ್ಣಗಳಿರುತ್ತವಂತೆ, ನನಗೆ ಗೊತ್ತೇ ಇರಲಿಲ್ಲ.” ಎಂದೆ.
“ ಯಾಕೆ ಗೊತ್ತಿರಬೇಕು? ಬೇಕಾಗಿರುವುದು ಒಳ್ಳೆಯ ಚಿತ್ರ. ತೆಗೆದ ಮೇಲೆ ತಿಳಿದುಕೊಳ್ಳಬಹುದು ಹೊರತು, ಚಿತ್ರ ತೆಗೆಯಲು ಅದು ಮಾನದಂಡವಲ್ಲ. ನೋಡು ಇದರ ಲೈಟಿಂಗ್ ಎಷ್ಟು ಚೆನ್ನಾಗಿದೆ.’ ಎಂದರು.
ಬೆಂಗಳೂರಿಗೆ ಹೋದ ಮೇಲೆ, ಅವರು ಇಷ್ಟಪಟ್ಟ ನಾಲ್ಕಾರು ಚಿತ್ರಗಳನ್ನು ಅಚ್ಚು ಹಾಕಿಸಿ ಅವರಿಗೆ ಕಳುಹಿಸಬೇಕು ಅಂದು ಕೊಂಡೆ.
ಸಂದರ್ಶನಕ್ಕೆ, ಏಕೋ ಏನೋ ರಾಜಕೀಯ ಪ್ರಶ್ನೆಗಳನ್ನು ಕೇಳುವುದು ಬೇಡ ಎಂದೆನಿಸಿತು. ನೀವು ತೆಗೆದ ಕೊನೆ ಚಿತ್ರ ಯಾವುದು ಅಂತ ಕೇಳಿದೆ. “ ಈಗ ತೆಗೆಯುತ್ತೇನಲ್ಲ, ಅದೇ” ಅಂದರು. ಏನೆಂದು ಅರ್ಧವಾಗುವುದರೊಳಗೆ, ಕುಮಾರ್ ಅವರ ನಿಕಾನ್ ಕ್ಯಾಮೆರಾ ಕೈಗಿಟ್ಟರು. “ ಕಡೆಯ ಚಿತ್ರ ಅಂತ ಏನೂ ಇಲ್ಲ. ಕೊನೆಯವರೆಗೆ ತೆಗೆಯುತ್ತಲೇ ಇರಬೇಕು ಎಂದರು.’’ ಮಾತನಾಡುತ್ತಾ, ನನ್ನ ಚಿತ್ರಗಳನ್ನು ತೆಗೆಯಲು ಆರಂಭಿಸಿದರು.
ಸುಮ್ಮನೆ ಮಕ್ಕಳ ಪಾಠದ ಬಗ್ಗೆ ವಿಷಯ ತೆಗೆದೆ. “ ನೀಡು, ಗ್ರಾಮೀಣ ಪ್ರದೇಶದ ಮಕ್ಕಳು ಪ್ರತಿಭಾವಂತರು, ಆದರೆ, ಇಂಗ್ಲೀಷ್ ಭಾಷೆಯಲ್ಲಿ ಸೋಲುತ್ತಾರೆ. ಇಂಗ್ಲೀಷ್ ನಲ್ಲಿ ಒಳ್ಳೆ ಅಂಕ ಪಡೆದರೂ, ಅದನ್ನು ಉಪಯೋಗಿಸಲು ಬರುವುದಿಲ್ಲ. ಇಲ್ಲಿ ನಾನು ಮಕ್ಕಳಿಗೆ ಅವರ ಪಠ್ಯಪುಸ್ತಕದ ಬಗ್ಗೆ ಹೇಳಿಕೊಡುವುದಿಲ್ಲ. 4ನೇ ತರಗತಿಯಿಂದ 9ನೇ ತರಗತಿಯವರೆಗಿನ ಮಕ್ಕಳು ಬಂದು ಇಂಗ್ಲೀಷ್ ಉಪಯೋಗಿಸುವುದನ್ನು ಕಲಿಯುತ್ತಾರೆ.’’
ಹಾಗೇ ಮಾತನಾಡುತ್ತ ಗಣಿಗಾರಿಕೆಯ ವಿಷಯಕ್ಕೂ ಬಂತು. ಸುಪ್ರೀಂ ಕೋರ್ಟ್ ಆದೇಶದಂತೆ, ಎಲ್ಲಾ ಗಣಿಗಳ ಜೊತೆ, ಘೋರ್ಪಡೆಯವರ ಗಣಿಗಳಲ್ಲೂ ಕೆಲಸ ಸ್ಥಗಿತಗೊಂಡಿತ್ತು. ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ ವರದಿಯಲ್ಲಿ, ಕೇಂದ್ರದ ಸಮಿತಿ ಘೋರ್ಪಡೆಯವರ ಕಂಪನಿಗೆ ಮಾತ್ರ ಸ್ವಚ್ಚ ವ್ಯವಹಾರದ ಚೀಟಿ ಕೊಟ್ಟಿತ್ತು. ಆದರೆ ಎಲ್ಲಾ ಗಣಿಗಳಿಗೆ ಅನ್ವಯವಾದದ್ದು, ಇವರಿಗೂ ಆಯಿತು.
ಗಣಿಗಳೆಲ್ಲ ತಮ್ಮ ಕಾರ್ಮಿಕರನ್ನು ಕೆಲಸದಿಂದ ತೆಗೆದರೂ, ಸಂಡೂರಿನ ಧಣಿ ಯಾವುದೇ ಕಾರ್ಮಿಕರನ್ನು ಕೆಲಸದಿಂದ ತೆಗೆಯದಂತೆ ಆದೇಶಿಸಿದ್ದರು. ಕಂಪನಿಯು 2000 ಕಾರ್ಮಿಕರನ್ನು ಗಣಿಗಾರಿಕೆ ನಡೆಸಿದ ಪ್ರದೇಶದಲ್ಲಿ ಗಿಡ ನೆಡುವ ಮತ್ತು ನೋಡಿಕೊಳ್ಳುವ ಕೆಲಸಕ್ಕೆ ಹಚ್ಚಿದರು. ಆದಾಯ ನಿಂತು ಹೋದ ಕಂಪನಿಗೆ ಇದು ದೊಡ್ಡ ಹೊರಯಂತೂ ಆಗಿದೆ ಅಂತ ಶೇಖ್ ಹೇಳಿದರು.
“ ಅವರೆಲ್ಲಿ ಹೋಗಬೇಕು? ಇಡೀ ಜಿಲ್ಲೆಯಲ್ಲಿ ಎಲ್ಲೂ ಕೆಲಸ ಸಿಗುತಿಲ್ಲ. ನಾವೂ ಕೈ ಬಿಟ್ಟರೆ, ಅವರ ಸಂಸಾರಗಳ ಗತಿ ಏನು?'' ಅಂತ ಹೇಳಿದರು. ಇದು ಬದಲಾಗುವ ವ್ಯಕ್ತಿತ್ವವಲ್ಲ ಎಂದುಕೊಂಡು, ಹೊರಡಲು ಎದ್ದು ನಿಲ್ಲುತ್ತಾ ಸತೀಶನ ಮುಖ ನೋಡಿದೆ. ಕ್ಯಾಮೆರಾ ಹಿಡಿದುಕೊಂಡು ಏನೋ ಗಾಢವಾಗಿ ಯೋಚಿಸುತ್ತಿದ್ದ. ಇನ್ನೊಮ್ಮೆ ಘೋರ್ಪಡೆಯವರ ಕಾಲು ಮಟ್ಟಿ ನಮಸ್ಕರಿಸಿ ಹಿಂದೆ ತಿರುಗಿದಾಗ, ಸತೀಶನೂ ಮುಂದೆ ಬಂದು ಅವರ ಕಾಲಿಗೆ ನಮಸ್ಕರಿಸಿದ.
ಅರಮನೆ ಹೊರಗೆ ನಡೆಯುತ್ತಾ ಸತೀಶ ಪಿಸುಗುಟ್ಟಿದ. “ ಅಣ್ಣ, ಇವರು ಇಷ್ಟೊಂದು ದೊಡ್ಡ ವ್ಯಕ್ತಿತ್ವ ಅಂತ ಗೊತ್ತಿರಲಿಲ್ಲ. ಇಂಥವರೂ ಇದ್ದಾರೆ ಅಂದರೆ ನಂಬೋಕೆ ಕಷ್ಟ.’’
“ ಇವರು, ಕೆ.ಎಚ್.ರಂಗನಾಥ್ ಎಲ್ಲಾ ವಿನಾಶದ ಅಂಚಿನಲ್ಲಿರುವ ವ್ಯಕ್ತಿತ್ವಗಳು, ಮುಂದೆ ಬರ್ತಾರೋ ಇಲ್ಲವೋ ಗೊತ್ತಿಲ್ಲ. ಅದಕ್ಕೆ ನಾನು ಕಾಲು ಮುಟ್ಟಿ ನಮಸ್ಕರಿಸಿದು.’’ ಎಂದೆ.
ನನಗೂ ಹಾಗೆ ಅನಿಸಿತು, ಅಂದ ಸತೀಶ.
ಬೆಂಗಳೂರಿಗೆ ಬಂದ ತಕ್ಷಣ ರಂಗನಾಥ್ ಅವರನ್ನು ಕಾಣಬೇಕು ಅನ್ನಿಸಿತು. ಘೋರ್ಪಡೆಯವರಂತೆ ನನಗೇನು ಅವರ ಹತ್ತಿರ ಸಲುಗೆ ಇರಲಿಲ್ಲ. ಆದರೂ ಹೋಗಬೇಕು ಎನಿಸಿತು. ಇವತ್ತು, ನಾಳೆ ಎನ್ನುತ್ತಾ ಹದಿನೈದು ದಿನ ಕಳೆಯುದರೊಳಗೆ, ರಂಗನಾಥ್ ತೀರಿಕೊಂಡರು. ಘೋರ್ಪಡೆಯವರಿಗೆ ಕೊಡಬೇಕು ಅಂದುಕೊಂಡ ಚಿತ್ರಗಳನ್ನು ಅಚ್ಚುಹಾಕಿಸಲೂ ಕೊಟ್ಟರಲಿಲ್ಲ. ಪ್ರತಿ ತಪ್ಪಿಗೂ ಬೆಂಗಳೂರನ್ನು ಶಪಿಸುತ್ತಾ, ಘೋರ್ಪಡೆಯವರ ನೆನೊಪಿನ ಬಗ್ಗೆ ಏನಾದರೂ ಬರೆಯೋಣ ಎಂದು ಕುಳಿತುಕೊಂಡ ಎರಡು ವಾರದಲ್ಲಿ ನಾಲ್ಕು ಸಾಲು ಬರೆದು ಬಿಟ್ಟು ಬಿಟ್ಟಿದೆ.
ಶನಿವಾರ ವಾರದ ರಜೆಯಾದ್ದರಿಂದ ಬರೆದು ಮುಗಿಸಬಹುದು ಎಂದು ಕೊಂಡಿದ್ದೆ. ಹಿರಿಯ ಮಿತ್ರ ಉಮಾಪತಿಯವರು ಕೂಡ ಘೋರ್ಪಡೆಯವರನ್ನು ಕುರಿತು ಬರೆದಿಡು ಎಂದು ಹೇಳಿ ಮೂರು ವಾರವಾಗುತ್ತಾ ಬಂದಿತ್ತು. ಟೀವಿ ನೋಡುತ್ತಾ, ಮಗಳ ಜೊತೆ ಆಟವಾಡುತ್ತಿದ್ದಾಗ, ಸಾಗ್ಗೆರೆ ರಾಮಸ್ವಾಮಿ ಕರೆ ಮಾಡಿ, ಘೋರ್ಪಡೆಯವರು ತೀರಿ ಹೋದರಂತೆ, ಸ್ವಲ್ಪ ಕನ್ ಫರ್ಮ ಮಾಡ್ತೀರಾ? ಅಂದರು.
ಹಿರಿಯ ಛಾಯಾಗ್ರಾಹಕರಾದ ರಾಮಸ್ವಾಮಿಯವರಿಗೆ ಬಂದ ಈ ಸುದ್ದಿನ್ನು ಕನ್ ಫರ್ಮ್ ಮಾಡುವ ಅವಶ್ಯಕತೆ ಏನೂ ಕಾಣಲಿಲ್ಲ. ಟೀವಿ ಚಾನಲ್ ಬದಲಾಯಿಸಿದಾಗ, ಸುದ್ದಿ ಆಗಲೇ ಬಿತ್ತರವಾಗುತ್ತಿತ್ತು. ಏನೂ ಹೇಳಲು ತೋಚದೆ ಸುಮ್ಮನೆ ಕುಳಿತವನಿಗೆ ಎರಡು ನಿಮಿಷಗಳ ನಂತರ ಅನಿಸಿತ್ತು. “ ಅವರು ತೆಗೆದ ಕೊನೆಯ ಚಿತ್ರ ನನ್ನದಾಗಿರಲಿ.”
ಅಂದು ಶೇಖ್ ಅವರೊಂದಿಗೆ ಮಾತನಾಡುವಾಗಿ, ಬಹಳ ದಿನದಿಂದ “ಹಾರ್ನ ಬಿಲ್’ ನೋಡಿಲ್ಲ ಅಂದಿದ್ದರು. ಸಮೀಪದ ತಮ್ಮ ಮೆನಗೆ ಹತ್ತಿರ ದಿನಾ ಬರುತ್ತದೆಂದೂ. ಅಲ್ಲಿಗೆ ಬಂದರೆ ಚಿತ್ರ ಸಹ ತೆಗೆಯಬಹುದೆಂದು ಶೇಖ್ ಹೇಳಿದ್ದರು. ಆ ಹಾರ್ನಬಿಲ್ ಅವರಿಗೆ ಸಿಕ್ಕಿರಲಿ ಅನ್ನಿಸಿತು.
ಏನೂ ಮಾಡಲು ತೋಚದೆ, ಲ್ಯಾಪ್ ಟಾಪ್ ತೆಗೆದು, ಘೋರ್ಪಡೆಯವರ ನೆನಪನ್ನು ಬರೆದಿಡುವ ಕಾರ್ಯ ಮುಂದುವರೆಸಿದೆ. . . .
ಮಾಕೋನಹಳ್ಳಿ ವಿನಯ್ ಮಾಧವ್
Your write up about Ghorpade has made me emotional. When I had been to Sandur, I could not meet Ghorpade. He was busy. In the show room of the NGO run by him I was buying some books. There was only one copy of his book of rare photographs - Sunlights and shadows - was there. I wanted to buy that too. But only one copy was there and the Manager was not ready to sell it as it was kept only to show it to the visitors. When I expressed my keen interest to buy it he called Ghorpade to seek his permission. Ghorpade was kind enough to gift the book to me. He asked the Manager over phone to give the book to me. The care he was taking about the tribal women working in the center was awesome. I wanted to visit the school he was running for the rural children and the language lab he had set-up for those children. I envy for your opportunity to meet him.
ಪ್ರತ್ಯುತ್ತರಅಳಿಸಿ