ಭಾನುವಾರ, ನವೆಂಬರ್ 13, 2011

ಬ್ಯಾರಿ



ನಮ್ಮ ಡಾಕ್ಟರ್ ಮಗಳಿಗೊಂದು ಗಂಡು

ಆಗಲೇ, ಮೂರು ಸಲ ಆಗಿತ್ತು, ಅಮ್ಮ ನನ್ನನ್ನು ಎಬ್ಬಿಸಲು ಶುರುಮಾಡಿ. ಘಂಟೆ ಏಳೂಕಾಲು ದಾಟಿತ್ತು. ಊರಿಗೆ ಹೋದಾಗಲೆಲ್ಲಾ ಇದೊಂದು ರಗಳೆ, ಸೂರ್ಯವಂಶಸ್ಥನೆಂದೇ ನಂಬಿ ಏಳೂವರೆಯವರೆಗೆ ಮಲಗುತ್ತಿದ್ದ ನನ್ನನ್ನು ಎಬ್ಬಿಸಲು ಅಮ್ಮ ಮತ್ತು ಅಣ್ಣ ಹರ ಸಾಹಸ ಮಾಡುತ್ತಿದ್ದರು. ನಾನು ಎದ್ದು ಪ್ರಾತವಿಧಿಗಳನ್ನು ಮುಗಿಸುವ ಹೊತ್ತಿಗೆ, ಅವರ ತಿಂಡಿ ಮುಗಿದು, ಅರ್ಧ ದಿನದ ಕೆಲಸ ಮುಗಿದಿರುತ್ತಿತ್ತು. ನನ್ನ ಸಹೋದರ ವೆಂಕಟೇಶನೂ ಇದಕ್ಕೆ ಹೊರತಲ್ಲ.

ಡಾಕ್ಟರೆ, ನಿಮ್ಮ ಮಗಳಿಗೆ ಒಂದು ಒಳ್ಳೆ ಗಂಡು ನೋಡಿದ್ದಲ್ಲಎಂದು ರಾಗವಾದ ಧ್ವನಿ ಹೊರಗಿನಿಂದ ಕೇಳಿಬಂತು. ಮಾತಿನನ ಧಾಟಿ ನೀಡಿದರೆ, ಯಾರೋ ಬ್ಯಾರಿ ಇರಬೇಕು ಅಂದುಕೊಂಡೆ. ಇದಿನಬ್ಬನ ಧ್ವನಿ ನನಗೆ ಪರಿಚಿತ. ಇದು ಯಾವುದೋ ಹೊಸ ಧ್ವನಿ ಅಂದುಕೊಂಡು, ನೋಡಲು ಎದ್ದೆ.

ಅಷ್ಟರಲ್ಲೇ, `ಯಾರದು ಗಂಡು?’ ಅಂತ ಅಣ್ಣನ ದ್ವನಿ ತೇಲಿ ಬಂತು. ಇರುವುದೇ ನಾನು ಮತ್ತು ವೆಂಕಟೇಶಣ್ಣ. ಗಂಡು ನೋಡಲು ಇವರಿಗ್ಯಾವ ಮಗಳಿದ್ದಾರೆ? ಅಂದುಕೊಂಡು, ಕೋಣೆಯಿಂದ ಹೊರಗೆ ಹೊರಟೆ.
ಅಷ್ಟರಲ್ಲಿ ಬ್ಯಾರಿ ಧ್ವನಿ ಹೇಳಿತು… ‘ನಮ್ಮ ಬೇಂಕ್ ಮೇನೇಜರ್ ಜಯೇಶ್ ಇದ್ದಾರಲ್ಲ…. ಒಳ್ಳೆ ಗಂಡು ಅಲ್ಲವಾ?. ಮಾಕೋನಹಳ್ಳಿ ಹ್ಯಾಂಡ್ ಪೋಸ್ಟ್ ನಲ್ಲಿರುವ  ಸ್ಟೇಟ್ ಬ್ಯಾಂಕ್ ಅಫ್ ಮೈಸೂರು ಶಾಖೆಗೆ ಜಯೇಶ್ ಎಂಬ ಯುವಕರೊಬ್ಬರು  ಬಂದಿದ್ದಾರೆ ಅಂತ ಗೊತ್ತಿತ್ತು. ಗೌಡರು ಮತ್ತು ಒಳ್ಳೆಯ ಅಧಿಕಾರಿ ಅಂತ ಜನಗಳು ಮಾತನಾಡುತ್ತಿದ್ದದ್ದು ನನ್ನ ಕಿವಿಗೆ ಬಿದ್ದಿತ್ತು. ಆದರೆ ಅವರಿಗೆ ಹೆಣ್ಣು ಹುಡುಕೋ ಕೆಲಸ ಅಣ್ಣ ಯಾಕೆ ಮಾಡ್ತಾ ಇದ್ದಾರೆ ಅಂತ ಅರ್ಥ ಆಗಲಿಲ್ಲ.
ಅಷ್ಟರಲ್ಲಿ ಅಣ್ಣನೇ ಕೇಳಿದರು: ಅಲ್ಲ ಕಣೋ, ಗಂಡೇನೋ ಒಳ್ಳೆಯದೆ, ಆದರೆ ಅವರಿಗೆ ಕೊಡೋಕೆ ನನಗೆ ಮಗಳೆಲ್ಲಿದ್ದಾಳೆ?’. ಅಷ್ಟರಲ್ಲಿ, ನಾನು ಕೋಣೆಯಿಂದ ಹೊರಬಂದಿದ್ದೆ. ಬಿಳಿ ಅಂಗಿ ತೊಟ್ಟು, ಬಣ್ಣ ಬಣ್ಣದ ಲುಂಗಿ ಹಾಕಿಕೊಂಡು, ಪೆಚ್ಚಾಗಿ ತನ್ನ ಬಿಳಿಯಾದ ತಲೆ ಕೂದಲೆಳೆಗೆ ಕೈತೋರಿಸಿಕೊಂಡಿದ್ದ ಬ್ಯಾರಿಯ ದರ್ಶನವಾಯಿತು.
ಮಗಳಿಲ್ಲವಾ! ನಾನು ಇಲ್ಲೇ ನೋಡಿದ್ದೇನಲ್ಲಾ?’’ ಅಂದಾಗ ನನಗೆ ಅರ್ಥವಾಯಿತು. ಊರಿನ ಎಲ್ಲಾ ಮನೆಗಳಲ್ಲಿರುವಂತೆ, ಡಾಕ್ಟರಿಗೂ ಮಗಳಿದ್ದಾಳೆಂದು ಈ ಬ್ಯಾರಿ ಅಂದುಕೊಂಡಿದ್ದ ಅಂತ ಕಾಣುತ್ತೆ. ಕಾಲೇಜುಗಳಿಗೆ ರಜವಿದ್ದಾಗ ಬಂದು ಹೋಗುತ್ತಿದ್ದ ನಮ್ಮ ಸಂಬಂಧಿ ಹುಡುಗಿಯರ ಪೈಕಿ ಯಾರೋ ಡಾಕ್ಟರ ಮಗಳು ಅಂತ ತಿಳಿದುಕೊಂಡಿದ್ದ.
ನಾನು ಹೊರಗೆ ಬಂದಿದ್ದು ನೋಡಿ ಅಣ್ಣ ನನ್ನನ್ನು ತಮ್ಮ ಕಿರಿಯ ಮಗ, ಉಡುಪಿಯಲ್ಲಿ ಓದುತ್ತಿದ್ದಾನೆ ಎಂದು ಪರಿಚಯಿಸಿದರು. ಹಾಗೆಯೇ, ಇವನು ಖೋಜು ಬ್ಯಾರಿ ಎಂದು ಹೇಳಿದರು. , ಇವರೇನಾಅಂದೆ.
ಖೋಜು ಬ್ಯಾರಿಯನ್ನು ತಮ್ಮ ಕಡೆಯಲ್ಲಿ ಗೊತ್ತಿಲ್ಲದವರಿಲ್ಲ. ಹೆಸರು ಖ್ವಾಜಾ ಬ್ಯಾರಿ ಅಂತ, ಆದರೆ ಜನಗಳ ಬಾಯಲ್ಲಿ ಖೋಜು ಬ್ಯಾರಿ ಆಗಿದ್ದ. ಆದರೆ, ಅದಕ್ಕೆಂದೂ ತಲೆ ಕೆಡಿಸಿಕೊಂಡವನಲ್ಲ. ಏನಿದ್ದರೂ, ಊರು ಊರು ತಿರುಗಿ, ಅವನ ವ್ಯಾಪಾರ ಮಾಡಿಕೊಂಡು ಅವನ ಪಾಡಿಗೆ ಅವನಿರುತ್ತಿದ್ದ.
ರಸ್ತೆ ವ್ಯವಸ್ತೆ ಮತ್ತು ವಾಹನ ಸೌಕರ್ಯಗಳು ಸರಿಯಿಲ್ಲದ ಎಂಬತ್ತರ ದಶಕದಲ್ಲಿ, ಚಿಕ್ಕಮಗಳೂರು ಜಿಲ್ಲೆಯ ಕಾಫಿ ತೋಟಗಳಲ್ಲಿ ಬ್ಯಾರಿಗಳದೊಂದು ದೊಡ್ಡ ಪಾತ್ರವಿತ್ತು. ಕಾಫಿ ತೋಟ ಮಾಲಿಕರಿಗೆ ಬೇಕಾಗುವ ಚಿಲ್ಲರೆ ಗೊಬ್ಬರ, ತೋಟಕ್ಕೆ ಹಾಕುವ ಸುಣ್ಣ, ಮೈಲುತುತ್ತ(ಕಾಪರ್ ಸಲ್ಪೇಟ್), ಮೆಣಸಿನ ಬಳ್ಳಿಗಳು ಮುಂತಾದವನ್ನು ಸರಬರಾಜು ಮಾಡುವುದಲ್ಲದೆ, ಚಿಲ್ಲರೆ ಅಡಿಕೆ, ಏಲಕ್ಕಿ ಮತ್ತು ಮೆಣಸನ್ನು ಕೊಳ್ಳುತ್ತಲೂ ಇದ್ದರು. ಇವರ ಚೌಕಾಸಿಯನ್ನು ನೋಡುವುದೇ ಒಂದು ಮಜಾ. ಕೈಗೆ ಸಿಕ್ಕಿದ ಬಸ್ಸು , ಕಂಡವರ ಕಾರು, ಜೀಪು, ಆಟೋರಿಕ್ಷಾ ಹತ್ತಿಕೊಂಡು, ವ್ಯಾಪಾರ ಕುದುರಿಸಿಕೊಂಡು ದಿನವಿಡೀ ತೋಟದಿಂದ ತೋಟಕ್ಕೆ ಸುತ್ತುತ್ತಿರುತ್ತಿದದ್ದ.
ಖೋಜು ಬ್ಯಾರಿ ಸಾದಾರಣವಾಗಿ ಮಾಕೋನಹಳ್ಳಿ ಸುತ್ತಮುತ್ತ ವ್ಯಾಪಾರ ಮಾಡಿಕಕೊಂಡಿದ್ದನು. ಬೇರೆ ಊರುಗಳಿಗೆ ಹೋದರೆ, ಬೇರೆ ಬ್ಯಾರಿಯ ಹೆಸರು ಕೇಳಿ ಬರುತಿತ್ತು. ಹಾಗಾಗಿ, ಬ್ಯಾರಿಗಳ ಈ ಸಾಮಾಜ್ಯ ಕಾಫಿ ಬೆಳೆಯುವ ಎಲ್ಲಾ ಪ್ರದೇಶದಲ್ಲೂ ಇದೆ ಎಂದು ತಿಳಿದುಕೊಂಡಿದ್ದೆ. ಕೇರಳದ ಮಲಬಾರು ಪ್ರದೇಶದಿಂದ ಬಂದ ಈ ಮುಸ್ಲಿಂ ಸಮುದಾಯ, ತಮ್ಮದೇ ಒಂದು ಅಸ್ತಿತ್ವವನ್ನು ಸ್ಥಾಪಿಸಿಕೊಂಡಿದ್ದರು. ಬಹು ಪತ್ನಿತ್ವ, ಮನೆ ತುಂಬಾ ಮಕ್ಕಳು ಮತ್ತು ಕೈತುಂಬಾ ಕೆಲಸ. ಒಂಥರಾ, ಅಲೆಮಾರಿ ಜೀವನ ಅವರದು. ಆದರೆ, ಬೇರೆ ಮುಸ್ಲಿಂಗಳು ಇವರ ಹತ್ತಿರ ಅಷ್ಟೇನು ಸಂಬಂಧ ಬೆಳಸಿದ್ದು ನಾನು ನೋಡಿಲ್ಲ.
ಇವರು ಪೂರ್ತಿ ಮುಸ್ಲಿಂ ಅಲ್ಲವಂತೆ. ಟೀಪ್ಪು ಸುಲ್ತಾನನ ಸೇನಾಪತಿಯೊಬ್ಬ ಮಲಬಾರ್ ಪ್ರದೇಶದಲ್ಲಿ ಹಿಂದುಗಳಿಗೆ ಬಲವಂತವಾಗಿ ದನದ ಮಾಂಸ ತಿನ್ನಿಸಿದ್ದರಿಂದ ಇವರು ಮುಸ್ಲಿಂ ಆದರಂತೆ ಅಂತ ಕಥೆ ಕೇಳಿದ್ದೆ. ಆ ಸೇನಾಪತಿಯ ಚರಿತ್ರೆ ಕೆದುಕಲು ಅಂಥಾ ಉತ್ಸಾಹವೇನೂ ಬರಲಿಲ್ಲ.
ಅರವತ್ತು ಮತ್ತು ಎಪ್ಪತ್ತರ ದಶಕಗಳಲ್ಲಿ, ಇವರು ಇನ್ನೂ ಮೂರು ವ್ಯಾಪಾರಗಳನ್ನು ಮಾಡುತ್ತಿದ್ದರು. ಸೈಕಲ್ ಮೇಲೆ ಮೀನುಗಳನ್ನು, ಸೀರೆಗಳನ್ನು ಮತ್ತು ಪಾತ್ರೆಗಳನ್ನು ಹೊತ್ತು ಮಾರುವುದು. ಆಗ, ಜನಗಳು ಮೂಡಿಗೆರೆ ಮತ್ತು ಚಿಕ್ಕಮಗಳೂರಿನ ದರ್ಷನ ಮಾಡುತ್ತಿದ್ದದ್ದು   ಬರೀ ಮದುವೆ ಸೀಸನ್ ನಲ್ಲಿ ಮಾತ್ರ. ಈ ಮೂರು ಸರಕುಗಳಿಗೆ ಮನೆ ಹೆಂಗಸರು ಮಾತ್ರ ಗ್ರಾಹಕರು.
  ಬ್ಯಾರಿಗಳದ್ದು ಒಂದೇ ಸಮಸ್ಯೆ ಎಂದರೆ ಅವರು ಮಾತನಾಡುವ ಕನ್ನಡ. ಮೊದಲೇ ರಾಗವಾಗಿ ಮಾತನಾಡುವ ಅವರ ಕನ್ನಡದಲ್ಲಿ, ಅಲ್ಪವಿರಾಮ ಮತ್ತು ಪೂರ್ಣ ವಿರಾಮಗಳು ಸ್ಥಾನಪಲ್ಲಟವಾಗಿ, ಸಂಭಾಷಣೆಗಳಿಗೆ ಆಪಾರ್ಥವನ್ನು ಕೊಡುತ್ತವೆ. ಸೀರೆ ಮಾರಲು ಮನೆಗೆ ಬಂದವನೋಬ್ಬನ ಸಂಭಾಷಣೆ ಹೀಗಿರುತ್ತದೆ: ಅಮ್ಮ, ನೀವು ಚಾಪೆ ಹಾಸಿ, ನಾನು ಸೀರೆ ಬಿಚ್ಚುತ್ತೇನೆ.
ಸುತ್ತಲಿರುವ ಆಳು-ಕಾಳುಗಳು ಮುಸಿ ಮುಸಿ ನಗುತ್ತಿದ್ದರೆ, ಗಂಡನೆಂಬ ಮಹಾಶಯನ ತಲೆ ಚೆಚ್ಚಿಕೊಳ್ಳಬೇಕು ಅಷ್ಟೆ.
ಇನ್ನೊಂದು ಸಂಭಾಷಣೆ ಹೀಗಿದೆ: ಅಮ್ಮ, ನಿಮ್ಮ ಗಂಡ ನಾನು, ನನ್ನ ಹೆಂಡತಿ ನೀವು, ಒಮ್ಮೆ ಮೆಂಗಳೂರಿಗೆ ಹೋಗುವ’.
ರಾಗವಾಗಿ ಮಾತನಾಡುವಾಗ ಅಲ್ಪವಿರಾಮ ಸ್ಥಾನಪಲ್ಲಟವಾಗಿ, ಆ ಅಮ್ಮನು ಬ್ಯಾರಿಯ ಹೆಂಡತಿಯಾಗಿಯೂ, ಆಕೆಯ ಗಂಡ ಬ್ಯಾರಿಯಾಗಿಯೂ ಪರಿವರ್ತಿತವಾಗಿ, ಪಕ್ಕದಲ್ಲಿರುವ  ಅಮ್ಮನ ಗಂಡ ಜಾಣ ಕಿವುಡಿಗೆ ಮೊರೆಹೋಗುವಂತಾಗುತ್ತದೆ.
ಆದರೂ ಅವರ ಮೇಲೆ ಅಷ್ಟೇನು ಸಿಟ್ಟು ಬರುವುದಿಲ್ಲ. ಯಾಕೆಂದರೆ, ಅವರೂ ಯಾರೊಡನೆಯೂ ಸಿಟ್ಟು ಮಾಡಿಕೊಳ್ಳುವುದಿಲ್ಲ. ನಮ್ಮ ಮನೆಯ ಹತ್ತಿರ ಅಂಗಡಿ ಹಾಕಿಕೊಂಡು, ಎತ್ತಿನಗಾಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದ ಇದಿನಬ್ಬನಿಗೆ 16 ಮಕ್ಕಳಿದ್ದವು.
ಕಲ್ಲಿನ ಜೊತೆಯಾದರೂ ಕಾರಣವಿಲ್ಲದೆ ಜಗಳವಾಡಬಲ್ಲ ನಮ್ಮ ತೋಟದ ಕೆಲಸಕ್ಕೆ ಬರುತ್ತಿದ್ದ ರಮೇಶ, ಅದೇಕೋ ಒಂದು ದಿನ ಇದಿನಬ್ಬನಿಗೆ ತಗುಲಿಕೊಂಡ. ರಮೇಶನಎಲ್ಲಾ ವಿತಂಡವಾದಗಳಿಗೂ ಇದಿನಬ್ಬ ಸಹನೆಯಿಂದಲೇ ಉತ್ತರಿಸುತ್ತಿದ್ದ.ಸ್ವಲ್ಪ ಸಹನೆ ಕಳೆದುಕೊಂಡಾಗ ಇದಿನಬ್ಬ ಹೇಳಿದ :ಅಲ್ವೋ, ನಿನಗೇನು ಗೊತ್ತು ಜೀವನ. ನಾನು ಹದಿನಾರು ಮಕ್ಕಳನ್ನು ಮಾಡಿದ್ದೇನೆ.
ಸರ್ರನೆ ಬಂತು ರಮೇಶನ ಉತ್ತರ: ``ಅದೇನು ಮಹಾ, ನಾಯಿಗಳೂ ಮಾಡ್ಕೋತ್ತಾವೆ ಹದಿನೆಂಟು.
ಪರಿಸ್ಥಿತಿ ವಿಕೋಪಕ್ಕೆ ಹೋಗಬಹುದೇನೋ ಅಂತ ಗಾಬರಿಯಿಂದ ಇದಿನಬ್ಬನ ಮುಖ ನೋಡಿದೆ. ನಗುತ್ತಾ ಹೇಳಿದ: ಅವು ಸುಮ್ಮನೆ ಬೊಗಳುತ್ತಾ ಕಾಲಹರಣ ಮಾಡೋಲ್ಲ. ಅಷ್ಟೂ ಮಕ್ಕಳನ್ನು ಚೆನ್ನಾಗಿ ಸಾಕ್ತಾವೆ.
ಹಾಗಂತ ಎಲ್ಲಾ ಬ್ಯಾರಿಗಳೂ ಸಹನಶೀಲರೂ, ಕಷ್ಟಪಟ್ಟು ದುಡಿಯುವವರೂ ಆಗಿರುತ್ತಾರಂತ ಹೇಳಲಾಗುವುದಿಲ್ಲ. ನಮ್ಮ ಕುಟುಂಬಕ್ಕೆ ಮರೆಯಲಾಗದ ಆಘಾತವೆಂದರೆ, ಮನೆಯ ಕೆಲಸ ಹುಡುಗಿಯೊಬ್ಬಳು ಕೊಲೆಯಾಗಿದ್ದು. ಆ ಹುಡುಗಿಗೆ ಐದು ವರ್ಷ ಕೂಡ ದಾಟಿರಲಿಲ್ಲ ಅನ್ನಿಸುತ್ತೆ. ಮನೆ ಕೆಲಸಕ್ಕೆ ಹುಡುಗಿ ಬೇಕು ಅಂತ ತೋಟಕ್ಕೆ ಆಳುಗಳನ್ನು ಸರಬರಾಜು ಮಾಡುವ ಮೇಸ್ತ್ರಿಗೆ ಅಮ್ಮ ಹೇಳಿದ್ದರು. ಹಾಸನದ ಕಡೆಯಿಂದ, ಆಳುಗಳ ಜೊತೆ ಈ ಹುಡುಗಿಯನ್ನೂ ಕಳುಹಿಸಿದರು. ನೋಡಿದ ತಕ್ಷಣ, ಆ ಹುಡುಗಿ ತುಂಬಾ ಚಿಕ್ಕವಳು, ವಾಪಸ್ ಕಳುಹಿಸಿ ಅಂತ ಅಮ್ಮ ಹೇಳಿದರು. ಆದರೆ ಯಾರ ಜೊತೆ ಕಳುಹಿಸುವುದು? ಮೇಸ್ತ್ರಿಬಂದಿಲ್ಲ. ಬೇರೆ ಆಳುಗಳು ಕೆಲಸಕ್ಕೆ ಹೊರಡಬೇಕು ಸದ್ಯಕ್ಕೆ ಇರಲಿ, ಮೇಸ್ತ್ರಿ ಬಂದ ಮೇಲೆ ವಾಪಸ್ ಕಳುಹಿಸಿದರಾಯಿತು ಎಂದು ಸುಮ್ಮನಾದರು.
ಆಮೇಲೆ ತಿಳಿದಿದ್ದೇನೆಂದರೆ, ಆ ಹುಡುಗಿಯ ಮನೆಯಲ್ಲಿ ಊಟಕ್ಕೂ ಕಷ್ಟ. ಏನೂ ಕೆಲಸ ಮಾಡಲು ಆಗದಿದ್ದರೂ, ಮುಗ್ದವಾಗಿ ಅಮ್ಮನ ಹಿಂದೆ ಮುಂದೆ ಸುತ್ತುತ್ತಾ, ಕೊಟ್ಟದನ್ನು ತಿಂದು, ಮೂಲೆಯಲ್ಲಿ ಮುದುಡಿ ಮಲಗುತ್ತಿತ್ತು. ನಾನಾಗಲೇ ಬೆಂಗಳೂರು ಸೇರಾಗಿತ್ತು. ವೆಂಕಟೇಶಣ್ಣನೂ ಬೆಂಗಳೂರಿನತ್ತ ಮುಖಮಾಡುತ್ತಿದ್ದ. ಸರಿ ಇಲ್ಲೇ ಇರಲಿ ಅಂತ ಸುಮ್ಮನಾದರು.
ಯಾವುದೋ ಮದುವೆಗೆಂದು ಮನೆಯವರೆಲ್ಲ ಬಣಕಲ್ ಗೆ ಹೋಗಿದ್ದಾಗ, ಈ ಹುಡುಗಿಯ ಕೊಲೆಯಾಗಿತ್ತು. ಸಾಧಾರಣವಾಗಿ, ಅಂಥ ಸಂದರ್ಬಗಳಲ್ಲಿ ತೋಟದ ರೈಟರ್ ಆಗಿದ್ದ ಕೃಷ್ಣ ಮನೆಯಲ್ಲಿರುತ್ತಿದ್ದ. ಅವತ್ತು ಮೂಡಿಗೆರೆಗೆ ಹೋಗಿ ಬರುವ ಹೊತ್ತಿಗೆ ಅನಾಹುತವಾಗಿತ್ತು. ಇದಿನಬ್ಬನ  ಕೊನೆ ಮಗ ಚೋರೆ ಮೋಣುವನ್ನು ಪೊಲೀಸರು ಬಂಧಿಸಿದರು. ಆದರೂ.
ಇದಿನಬ್ಬನ ಜೊತೆ ನಮ್ಮ ಕುಟುಂಬದ ಸಂಬಂಧ ಕೆಡಲಿಲ್ಲ. ಅಣ್ಣನಿಗೆ ಮಾತ್ರ ಈ ಘಟನೆಯ ಆಘಾತದಿಂದ ಹೊರಬರಲು ಬಹಳ ದಿನ ಹಿಡಿಯಿತು.
ರಾಮ ಜನ್ಮಭೂಮಿ ಮತ್ತು ದತ್ತಪೀಠಗಳ ಬಗ್ಗೆ ಈ ಬ್ಯಾರಿಗಳ ನಿಲುವೇನಾಗಿರಬಹುದೆಂದು ನನಗೆ ಒಂದೆರಡು ಸಲ ಕಾಡಿತ್ತು. ಅಷ್ಟರಲ್ಲಾಗಲೇ, ಕಾಫಿನಾಡಿನಲ್ಲಿ ಮಹತ್ತರ ಬದಲಾವಣೆಗಳಾಗಿದ್ದವು. ಕಾಫಿ ಮುಕ್ತ ಮಾರುಕಟ್ಟೆಯಾದ ನಂತರ, ಕಾರುಗಳ ಸಂಖ್ಯೆ ಗಣನೀಯವಾಗಿ  ಹೆಚ್ಚಾಗಿತ್ತು. ಅಲ್ಲಿಯವರೆಗೆ  ಮುದುಡಿ ಕುಳಿತ್ತಿದ್ದ ಗೌಡರ ಹುಡುಗರೂ ಕಾಫಿ ಮತ್ತಿತರ ವ್ಯಾಪಾರಕ್ಕಿಳಿದರು. ಮೂಡಿಗೆರೆ, ಚಿಕ್ಕಮಗಳೂರಿಗೆ, ತಮ್ಮ ತೋಟಕ್ಕಿಂತ ಹೆಚ್ಚಾಗಿ ಹೋಗಲಾರಂಭಿಸಿದರು. ಹಾಗೆಯೆ, ನಗರ ಪ್ರದೇಶಗಳಲ್ಲಿ ವಲಸೆ ಹೋಗುವ ಬ್ಯಾರಿಗಳ ಸಂಖ್ಯೆಯೂ ಹೆಚ್ಚಾಯಿತು. ನಾನು ಬೆಂಗಳೂರು ಸೇರಿದ ಪ್ರಯುಕ್ತ, ಬ್ಯಾರಿಗಳ ವಿಷಯ ಅಷ್ಟೇನೂ ತಿಳಿಯುತ್ತಿರಲಿಲ್ಲ.
ಮೊನ್ನೆ ಅಮ್ಮನ ಜೊತೆ ಫೋನಿನಲ್ಲಿ ಮಾತನಾಡುವಾಗ ತೋಟದ ಯಾವುದೋ ಕೆಲಸದ ಬಗ್ಗೆ ಹೇಳುತ್ತಿದ್ದರು. ನೆನ್ನೆ ಮಾಡಿಸೋಣ ಅಂತ ಇದ್ದೆ. ಆ ಬ್ಯಾರಿ ಹುಡುಗರು ಏನೇ ಕೆಲಸ ಇದ್ದರೂ ಮೊನ್ನೆಗೇ ಮುಗಿಸಬೇಕು. ನೆನ್ನೆ ಕೃಷ್ಣಜನ್ಮಾಷ್ಟಮಿ ಇರುವುದರಿಂದ ಕೆಲಸಕ್ಕೆ ಹೊರಡುವುದಿಲ್ಲ ಅಂದರು. ಅದಕ್ಕೆ ಮಾಡಿಸಿ ಮುಗಿಸಿದೆ. ಅಂದರು.
ಯಾವ ಬ್ಯಾರಿ ಹುಡುಗರು?” ಅಂತ ಕೇಳಿದೆ. ಅದೇ, ಆ ಚೊರೆ ಮೋಣು ಇದ್ದನಲ್ಲ ಅವನ ಅಣ್ಣ ಮೋಣು ಮತ್ತೆ ಅವನಣ್ಣ ಅಬ್ಬು. ಕೃಷ್ಣಜನ್ಮಾಷ್ಟಮಿಯ ದಿನ ಮೂಡಿಗೆರೆಯಲ್ಲಿ ಎಣ್ಣೆ ಹಚ್ಚಿದ ಕಂಭ ಹತ್ತಿ ಕಾಯಿ ಒಡೆಯುವ ಆಟ ಇರುತ್ತಲ್ಲ, ಅದಕ್ಕೆ ಇವರ ಗುಂಪೂ ಪ್ರತೀ ವರ್ಷ ಹೋಗ್ತದೆ. ಈ ವರ್ಷ ಇವರ ಗುಂಪು ಗೆಲ್ತು ಅಂತ ಯಾರೋ ಮಾತಾಡ್ತಿದ್ದರು. ನಾಳೆ ಬಂದಾಗ ಕೇಳಬೇಕು.ಅಂದರು.
ಯಾಕೋ ದತ್ತ ಪೀಠ ನೆನಪಾಗಿ ಮುಗುಳ್ನಕ್ಕೆ

ಮಾಕೋನಹಳ್ಳಿ ವಿನಯ್ ಮಾಧವ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ