ವಿನ್ಯೂ, ಬಪ್ಪ ಓಗಾನಾ…..
ಅಂಬಿಕಾಳ ಧಾವಂತ ನೋಡಿ, ಒಳಗೊಳಗೇ ಕೆಟ್ಟ ಖುಷಿ ಅನುಭವಿಸುತ್ತಿದ್ದೆ. ಸಾಧಾರಣವಾಗಿ, ಅಂಬಿಕಾಳನ್ನು ನಾನು ಹೆಚ್ಚು ಕೆಣಕುವುದಿಲ್ಲ. ಸೆನ್ಸಿಟಿವ್ ಅಂತ ಸುಮ್ಮನಾಗಿಬಿಡುತ್ತೇನೆ. ಈ ಸಲ ಮಾತ್ರ, ಏನಾದರಾಗಲಿ ನೋಡೇಬಿಡೊಣ ಅಂತ ಎಡಬಿಡದೆ, ಎರಡು ದಿನದಿಂದ ಕಾಡಿದ್ದೆ.
``ನಂಗೆ ಈ ಥರ ಸಸ್ಪೆನ್ಸ ಇಷ್ಟ ಆಗೋಲ್ಲ’’ ಅಂತ ಗೊಣಗಿದಳು. ``ಒಂದ್ಸಲ ಅವಳನ್ನು ನೋಡಮ್ಮ. ತುಂಬಾ ಒಳ್ಳೆಯವಳು. ನಿನಗೇ ಇಷ್ಟ ಆಗ್ತಾಳೆ,’’ ಅಂದೆ. ಏನೇ ಹೇಳಿದರೂ, ಗಂಡನ ಹಳೇ ಗೆಳತಿಯನ್ನು ಒಪ್ಪಿಕೊಳ್ಳಲು ಅಂಬಿಕಾ ತಯಾರಿರಲಿಲ್ಲ.
ಆಯುಧ ಪೂಜೆಗೆ ಊರಿಗೆ ಹೋಗುವಾಗ, ಅರಕಲಗೂಡಿನ ಹತ್ತಿರ ನನ್ನ ಹಳೇ ಗೆಳತಿಯನ್ನು ಕಾಣಲು ಹೋಗುತ್ತೇವೆ ಎಂದು ಹೇಳಿದ್ದೆ. ಎಷ್ಟೇ ಕಾಡಿದರೂ, ಅವಳು ಯಾರು ಎಂಬ ವಿವರಗಳನ್ನು ಮಾತ್ರ ಕೊಡಲಿಲ್ಲ. ನನ್ನ ಗೆಳತಿಗೆ ಒಂದು ಸೀರೆಯನ್ನು ತೆಗೆಯುವ ಜವಾಬ್ದಾರಿಯನ್ನೂ ಅಂಬಿಕಾಳಿಗೆ ವಹಿಸಿದ್ದೆ. ಅದು ಅವಳಿಗೆ ಕಿರಿಕಿರಿಯಾಗಿದ್ದು.
ಆದರೂ ಗುಟ್ಟು ರಟ್ಟಾಗಿಯೇಬಿಟ್ಟಿತ್ತು. ಹೊರಡುವ ಹಿಂದಿನ ದಿನ, ಆಫೀಸಿನಲ್ಲಿ ಗಡಿಬಿಡಿಯಲ್ಲಿದ್ದಾಗ ಅಂಬಿಕಾ ಫೋನ್ ಮಾಡಿದಳು. ``ಸೀರೆ ತೆಗೆಯಲು ಹೇಳಿದ್ದರಲ್ಲ, ಯಾವ ವಯಸ್ಸಿನವರಿಗೆ ತೆಗೆಯಬೇಕು?’’ ಅಂತ ಕೇಳಿದಳು. ಗಡಿಬಿಡಿಯಲ್ಲಿದ್ದ ನಾನು, ``ನಿಮ್ಮಮ್ಮನ ವಯಸ್ಸು ಅಂತ ತಿಳ್ಕೊ,’’ ಅಂದೆ. ತಕ್ಷಣ ನಾಲಿಗೆ ಕಚ್ಚಿಕೊಂಡರೂ, ತಡವಾಗಿತ್ತು.
ಹನುಮಮ್ಮ…. ನಾಳೆ ಸಿಕ್ಕಿದಾಗ ಹೇಗೆ ರಿಯಾಕ್ಟ ಮಾಡ್ತಾಳೆ? ನನ್ನ ಮಗಳು ಸೃಷ್ಟಿಯನ್ನು ನೋಡಿದಾಗ ಏನು ಹೇಳಬಹುದು? ಅಂತ ಯೋಚನೆಗಳು ಬಂದವು. ಹಾಗೆಯೆ, ದಿನೇಶ್ ಮತ್ತು ಸುರೇಶ್ ಹೇಳಿದ್ದು ಸುಳ್ಳಾಗಿದ್ದರೇ? ಅಂತಾನೂ ಅನ್ನಿಸದಿರಲಿಲ್ಲ.
ಮೂವತ್ತೆರಡು ವರ್ಷದಮೇಲಾಗಿದೆ… ಹನುಮಮ್ಮನನ್ನು ನೋಡಿ. ಯಾಕೋ ಏನೋ, ಇತ್ತೀಚೆಗೆ ತುಂಬಾ ನೆನಪಾಗುತ್ತಿದ್ದಳು. ಅದಕ್ಕೆ ಕಾರಣವೂ ಇತ್ತು. ಪ್ರೆಸ್ ಕ್ಲಬ್ ನಲ್ಲಿ ಕೆಲಸ ಮಾಡುವ ದಿನೇಶನು ಕೇರಳಾಪುರದವನು ಅಂತ ಗೊತ್ತಾದಕೂಡಲೆ ನಾನು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಹನುಮಮ್ಮನ ಬಗ್ಗೆ ಕೇಳಿದೆ. ಈಗ ವಿಚಾರಿಸುತ್ತೀನಿ.. ನಾಳೆ ಊರಿಗೆ ಹೋಗುತ್ತಿದ್ದೀನಿ ಅಂತ ಕಥೆ ಹೇಳುತ್ತಾ ಎರಡು ವರ್ಷ ಕಳೆದಿದ್ದ. ಕೊನೆಗೆ ಒಂದು ದಿನ ``ಅಲ್ಲೇ ಇದ್ದಾಳಣ್ಣ. ಹೊಳಿ ಕಡಿಗಿ ಜನತಾ ಮನೆ ಮಾಡಿಕೊಂಡು ಇದ್ದಾಳೆ. ಬೇಕಾದರೆ ಸುರೇಶನನ್ನು ಕೇಳಣ್ಣ,’’ ಅಂದ. ಸರಿ, ಇದ್ದಾಳಲ್ಲ. ಹೋಗಿ ನೋಡಲೇಬೇಕು ಅಂದುಕೊಂಡು ಅಂಬಿಕಾಳನ್ನು ಕಾಡಲು ಆರಂಭಿಸಿದೆ.
ಅಣ್ಣನಿಗೆ ಕೇರಳಾಪುರಕ್ಕೆ ವರ್ಗವಾದಾಗ ನನಗೆ ಒಂಬತ್ತು ವರ್ಷವಾಗಿತ್ತು ಅಂತ ಕಾಣುತ್ತೆ. ವೆಂಕಟೇಶಣ್ಣನನ್ನು ಶಿವಮೋಗ್ಗದಲ್ಲಿ ದೊಡ್ಡಮ್ಮನ ಮನೆಗೆ ಓದಲು ಕಳುಹಿಸಿದ್ದರು. ಸಕಲೇಶಪುರದ ಕಾನ್ವೆಂಟ್ ನಿಂದ ಬಂದು ಬಯಲುಸೀಮೆಯ ಹಳ್ಳಿಯ ಸರಕಾರಿ ಶಾಲೆಗೆ ಸೇರಿದಾಗ, ನನಗೊಂತರಾ `ಕಲ್ಚರಲ್ ಶಾಕ್’ ಆಯಿತು. ಆದರೆ, ಬೇಗನೇ ಹೊಂದಿಕೊಂಡೆ. ಆದರ ಪರಿಣಾಮವಾಗಿ, ಒಂದಿನ ಸ್ನೇಹಿತನೊಬ್ಬನಿಗೆ `ನಿನ್ನಯ್ಯನ್’ ಅಂತ ಹೇಳಿದಾಗ, `ಕಲ್ಚರಲ್ ಶಾಕ್’ ಅಮ್ಮನಿಗೆ ವರ್ಗಾವಣೆಯಾಗಿ, ನಾನು ಸ್ನೇಹಿತರ ಜೊತೆ ಸುತ್ತಾಡುವುದಕ್ಕೆ ಕತ್ತರಿ ಬಿತ್ತು. ಹಾಗಾಗಿ, ಶಾಲೆಯ ಸಮಯ ಹೊರತುಪಡಿಸಿ, ಆಗಿನ ಕಾಲಕ್ಕೆ ಊರ ಹೊರಗಡೆ ಇದ್ದ ಆಸ್ಪತ್ರೆಯ ಆವರಣವೇ ನನ್ನ ಪ್ರಪಂಚವಾಯಿತು.
ಕೇರಳಾಪುರದ ಆಸ್ಪತ್ರೆ ಹಿಂದುಗಡೆಯೇ ನಮ್ಮ ಮನೆ ಇದ್ದದ್ದು. ಆಣ್ಣನನ್ನೂ ಸೇರಿಸಿ, ಆ ಆಸ್ಪತ್ರೆಯಲ್ಲಿ ಇದ್ದದ್ದು ಆರು ಜನ. ಆ ಆಸ್ಪತ್ರೆಯ ಆವರಣದ ಹಿಟ್ಲರ್ ನಂತೆ ನಮಗೆ ಕಾಣುತ್ತಿದ್ದ ನಿಂಗಶೆಟ್ಟಿ, ಕೃಷ್ಣ, ಆಯಾ ಲಕ್ಷ್ಮಮ್ಮ, ಧೋಬಿ ಲಕ್ಷ್ಮಮ್ಮ ಮತ್ತು ಹನುಮಮ್ಮ. ಬಂದ ಸ್ವಲ್ಪ ದಿನದಲ್ಲಿ, ಹನುಮಮ್ಮ ಅಮ್ಮನಿಗೆ ಆತ್ಮೀಯಳಾದಳು.
ಗುಂಡು ಹೊಡೆದಂತೆ ಮಾತು, ಕೆಲಸದಲ್ಲಿ ಕಳ್ಳತನವಿಲ್ಲ, ಬಾವಿಯಿಂದ ನೀರು ಸೇದಿ, ಎರಡು ಕೊಡಗಳನ್ನು ಒಮ್ಮೆಗೆ ತಲೆ ಮೇಲೆ ಹೊತ್ತುಕೊಂಡು, ಕೈಬೀಸಿಕೊಂಡು ಮನೆಗೆ ನೀರು ತುಂಬುವುದರಿಂದ ಹಿಡಿದು, ಆಸ್ಪತ್ರೆಯ ಆವರಣದಲ್ಲಿ ಅಮ್ಮ ಕೈಗೆತ್ತಿಕೊಂಡ ಹೂತೋಟದ ಉಸ್ತುವಾರಿಯವರೆಗೆ, ಹನುಮಮ್ಮನದೇ ಯಜಮಾನಿಕೆ.
ಸಾಯಂಕಾಲದ ಹೊತ್ತು ಅಮ್ಮ ಮನೆಯಿಂದ ಹೊರಗಡೆ ಇದ್ದಾಗ, ನನಗೆ ಮನೆ ಎದುರುಗಡೆ ಇದ್ದ ಜಾಗದಲ್ಲಿ ಸ್ನೇಹಿತರೋಡನೆ ಆಡಿಕೊಳ್ಳಲು ಅವಕಾಶವಿತ್ತು. ಆದರೆ, ನಿಂಗಶೆಟ್ಟಿ ಯಾರನ್ನೂ ಆಸ್ಪತ್ರೆಯ ಆವರಣದೊಳಗೆ ಬಿಡುತ್ತಿರಲಿಲ್ಲ. ಇದೊಳ್ಳೆ ಫಜೀತಿಯಾಯ್ತು ಅಂತ ಒಮ್ಮೆ ಹನುಮಮ್ಮನಿಗೆ ನನ್ನ ಕಷ್ಟ ಹೇಳಿಕೊಂಡೆ.
`ಯೋ ಶೆಟ್ಟಿ… ಮಗೀನ ಜೊತೆ ಆಡ್ಕೊಳ್ಳೊಕೆ ಬರಾ ಮಕ್ಕಳ್ನ ಯಾಕ್ಲಾ ತಡೀತಿ? ಏನಾಗ್ಯತಿ ನಿಂಗೆ?’ ಅಂತ ಹನುಮಮ್ಮ ಅಬ್ಬರಿಸಿದ್ದೇ ತಡ, ಏನೋ ಗೊಣಗುತ್ತಾ, ಪಂಚೆ ಮೇಲೆ ಕಟ್ಟಿಕೊಂಡು ಆಸ್ಪತ್ರೆಯೊಳಗೆ ಹೋದ. `ಡಾಕುಟ್ರಿಗೆ ನಾ ಯೋಳ್ತೀನಿ. ನೀನಿವನ ಸವಾಸಕ್ಕೆ ಬರ್ಬ್ಯಾಡ… ನೀ ಓಗಿ ಆಡ್ಕ ಮಗಾ’ ಅಂದಳು. ನಿಂಗಶೆಟ್ಟಿಯನ್ನು ಓಡಿಸಿ, ನನಗೆ ಆಟವಾಡಲು ಅನುವು ಮಾಡಿಕೊಟ್ಟ ಹನುಮಮ್ಮ ನನಗೆ ವೀರವನಿತೆಯಾಗಿ ಕಾಣತೊಡಗಿದಳು.
ಅಂದಿನಿಂದ ನನಗೆ ಹನುಮಮ್ಮನ ಮೇಲೆ ಇನ್ನಿಲ್ಲದ ಅಭಿಮಾನ ಶುರುವಾಯ್ತು. ಹನುಮಮ್ಮನ ಜೊತೆ ನಾನು ಎಲ್ಲಿ ಹೋಗಲೂ ಅಮ್ಮ ಆಕ್ಷೇಪಿಸುತ್ತಿರಲಿಲ್ಲ. ವಾರಕೊಮ್ಮೆ ನೆಡೆಯುವ ಸಂತೆಗೆ ಹೋಗಬೇಕು ಅಂತ ಅಮ್ಮನ ಹತ್ತಿರ ಕೇಳಿದಾಗ, ಮನೆಗೆ ಸಂತೆವ್ಯಾಪಾರ ಮಾಡಿಕೊಂಡು ಬರುತ್ತಿದ್ದ ಹನುಮಮ್ಮನ ಜೊತೆ ಕಳುಹಿಸಿದರು.
ದಾರಿಯುದ್ದಕ್ಕೂ, ಕೇಳಿದವರಿಗೆಲ್ಲ `ಡಾಕುಟ್ರ ಮಗ’ ಅಂತ ಪರಿಚಯ ಮಾಡುತ್ತಿದ್ದಳು. ಹತ್ತೂರಿಗೆ ಇದ್ದ ಒಂದೇ ಆಸ್ಪತ್ರೆಗೆ ಅಣ್ಣ ಒಬ್ರೇ ಡಾಕ್ಟರ್. ಹಾಗಾಗಿ, ಎಲ್ಲರೂ ತುಂಬಾ ಪ್ರೀತಿಯಿಂದ ನನ್ನನ್ನು ಮಾತನಾಡಿಸುತ್ತಿದ್ದರು. ಎಡವಟ್ಟಾಗಿದ್ದೇ ವ್ಯಾಪಾರ ಶುರುವಾದ ಮೇಲೆ..
ಸಂತೆಗೆ ಹೋಗಿ ಸರಿಯಾಗಿ ಅಭ್ಯಾಸವಿಲ್ಲದ ನಾನು, ಹನುಮಮ್ಮ ಚೌಕಾಸಿ ಮಾಡುವಾಗ ಗಡಿಬಿಡಿಯಾದೆ. `ಅಲ್ಲ ಹನುಮಮ್ಮ, ಅಮ್ಮ ನಿನಗೆ ದುಡ್ಡು ಕೊಟ್ಟುಂಟಲ್ಲ. ನೀನ್ಯಾಕೆ ಕಡಿಮೆ ರೇಟಿಗೆ ಕೇಳ್ತಿಯಾ’ ಅಂದುಬಿಟ್ಟೆ.
`ನೀನ್ಸೋಲ್ಪ ಬಾಯಿ ಮುಚ್ಚಿಕೊಂಡಿರ್ತಿಯಾ?’ ಅಂತ ಸಿರ್ರನೆ ರೇಗಿದಳು.
`ಅಲ್ಲಾ, ಅವರೆಲ್ಲ ಬಡವರಲ್ವಾ’ ಅಂತ ತಡವರಿಸಿದೆ.
`ಸುಮ್ಮನಿರ್ದೆ ಹೋದರೆ, ಇನ್ನೊಂದುಕಿಟ್ಟ ನಿನ್ನ ಸಂತೀಗೇ ಕರ್ಕೊಂಡು ಬರಲ್ಲ ನೋಡು’ ಅಂದುಬಿಟ್ಟಳು. ನಾನೂ, ಬಾಯಿ ಮುಚ್ಚಿಕೊಂಡು ಸುಮ್ಮನಾದೆ.
ಮನೆಗೆ ಬಂದವಳೇ, `ಅಮ್ಮ, ನಾನು ಮಾತ್ರ ವಿನ್ಯೂನ ಇನ್ನು ಸಂತೆಗೆ ಕರ್ಕೊಂಡು ಓಗಲ್ಲ. ಚೌಕಾಸಿ ಮಾಡೋಕೆ ಬಿಡಲ್ಲ ಕಣವ್ವ,’ ಅಂತ ನೆಡೆದದ್ದನೆಲ್ಲ ಹೇಳಿದಳು. ನಾನೂ ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದರೂ, ಅಮ್ಮ ಹನುಮಮ್ಮನ ಪರವಹಿಸಿದ್ದರಿಂದ, ಇನ್ನು ಮುಂದೆ `ಸಂತೆ ಯಾತ್ರೆ’ ಬಂದ್ ಅಂದುಕೊಂಡೆ.
ಅದರ ಮುಂದಿನ ವಾರವೇ, ನಾನು ರೂಮಿನಲ್ಲಿ ಮಲಗಿಕೊಂಡು ಯಾವುದೋ ಕಥೆ ಪುಸ್ತಕ ಓದುತ್ತಿರುವಾಗ, ಹನುಮಮ್ಮನ ಧ್ವನಿ ಕೇಳಿತು: `ವಿನ್ಯೂ… ಬಪ್ಪ ಓಗಾನಾ ಸಂತಿಗೆ.. ಒತ್ತಾಯ್ತು.’ ಲಗುಬಗನೆ ಎದ್ದು ಹನುಮಮ್ಮನ ಬಳಿಗೆ ಓಡಿದೆ.
ಕೇರಳಾಪುರ ಇರುವುದು ಕಾವೇರಿ ನದಿಯ ತೀರದಲ್ಲಿ. ಆಸ್ಪತ್ರೆಯ ಆವರಣದಿಂದ ಹೊರಗೇ ಹೋಗಲು ಅವಕಾಶವಿಲ್ಲದವನಿಗೆ, ಹೊಳೆ ಹತ್ತಿರ ಹೋಗುವುದು ಊಹಿಸಲೂ ಆಗುತ್ತಿರಲಿಲ್ಲ. ಅಂತೂ ಒಮ್ಮೆ ಧೈರ್ಯ ಮಾಡಿ ಅಮ್ಮನಿಗೆ ಕೇಳೇಬಿಟ್ಟೆ. ಅಲ್ಲೇ ಇದ್ದ ಹನುಮಮ್ಮ, `ಬುಡವ್ವ, ನಾ ಕರ್ಕಂಡು ಓಗಿ ಬತ್ತೀನಿ’ ಅಂದಳು. ಲಗುಬಗೆಯಿಂದ ಹನುಮಮ್ಮನ ಹಿಂದೆ ಹೊರಟೇಬಿಟ್ಟೆ. ಹೊಳೆ ಹತ್ತಿರ ಹೋದಾಗ, ಜನರು ಗುಂಪಾಗಿ ನಿಂತಿದ್ದರು. `ಡಾಕುಟ್ರ ಮಗ. ಹೊಳಿ ನೋಡ್ಬೇಕು ಅಂತು, ಕರ್ಕಂಡ್ ಬಂದೆ. ಅಂಗೇ, ಅರ್ಗೋಲಾಗೆ ಒಂದ್ ಸುತ್ತು ಆಕಿಸ್ಕೊಂಡ್ ಬತ್ತೀನಿ’, ಅಂದಳು ಹನುಮಮ್ಮ.
ಅವಳು ಏನೆಂದಳು ಅಂತ ಅರ್ಥವಾಗುವುದರೊಳಗೆ, ಆ ನದಿಯನ್ನು ದಾಟುವ ಏಕೈಕ ಸಾಧನವಾದ ಹರಿಗೋಲು ಬಂದೇ ಬಿಡ್ತು. `ಅಣ್ಣೋ, ಮಗೀನ ಜೊತೆ ಒಂದ್ ಸುತ್ತ್ ಆಕ್ಸು’ ಅಂತ, ನನ್ನನ್ನೂ
ಎಳೆದುಕೊಂಡು ಹರಿಗೋಲಿನೊಳಗೆ ಹತ್ತೇಬಿಟ್ಟಳು. ಜನರೆಲ್ಲ ಅಲ್ಲೇ ಕಾಯುತ್ತಿರುವಂತೆಯೇ, ಹರಿಗೋಲು ನನ್ನನ್ನು ಹೊಳೆಯೊಳಗೆ ಒಂದು ಸುತ್ತು ಹೊಡೆಸಿ ವಾಪಾಸ್ ತಂದು ಬಿಟ್ಟಿತು.
ಕಾಯಿಲೆ ಬಂದಾಗ ತಮ್ಮ ನೆರವಿಗೆ ಬರುವ ವೈದ್ಯರ ಮಗನ ಬಗ್ಗೆ ಆ ಜನಗಳು ತೋರಿಸಿದ ಪ್ರೀತಿ ಮತ್ತು ಕಾರಣವಿಲ್ಲದೆ ನಾನು ಹರಿಗೋಲಿನಲ್ಲಿ ಒಂದು ಸುತ್ತು ಹೋಗಿಬರುವವರೆಗೆ ಕಾದ ಆ ಜನಗಳ ಬಗ್ಗೆ ಯೋಚಿಸಿದರೆ,ಈಗಲೂ ಆಶ್ಚರ್ಯವಾಗುತ್ತದೆ.
ಮಲೆನಾಡಿನಲ್ಲಿ ಹುಟ್ಟಿ ಬೆಳೆದ ನನಗೆ, ಬಯಲುಸೀಮೆಯ ಈ ಹಳ್ಳಿಯ ರೀತಿ ರಿವಾಜುಗಳು ಸರಿಯಾಗಿ ಅರ್ಥವಾಗುತ್ತಿರಲಿಲ್ಲ. ಒಮ್ಮೆ ಶಾಲೆಯ ಹತ್ತಿರ ಬಿದ್ದಿದ್ದ, ಅರಿಶಿನ-ಕುಂಕುಮ ಹಚ್ಚಿದ್ದ ನಿಂಬೇಹಣ್ಣನ್ನು ದಾಟಿದೆ. ಪಕ್ಕದಲ್ಲೇ ಇದ್ದ ರಮೇಶ ಗಾಬರಿಯಿಂದ, `ಏನ್ರೀ, ಮಾಟ ಮಾಡಿದ ನಿಂಬೇಹಣ್ಣನ್ನು ದಾಟಿದ್ರಿ?’ ಅಂದ.
ಅಲ್ಲಿಯವರೆಗೆ ಮಾಟ ಎಂದರೇನು ಅಂತ ಗೊತ್ತಿಲ್ಲದ ನಾನು, `ದಾಟಿದ್ರೆ ಏನಾಯ್ತು?’ ಅಂದೆ.
`ರೀ, ಮಾಟ-ಮಂತ್ರನೆಲ್ಲ ಹಗುರವಾಗಿ ಮಾತಾಡಬಾರದು. ಅದನ್ನು ಯಾರ ಮೇಲೋ ಮಾಡಿರ್ತಾರೆ. ನಾವು ದಾಟಿದರೆ, ನಮ್ಮ ಮೇಲೆ ಬರುತ್ತೆ ಅಷ್ಟೆ. ಯಾರೋ ಸಾಯಲಿ ಅಂತ ಮಾಡಿದ್ದರೆ, ದಾಟಿದವರು ಸತ್ತು ಹೋಗುತ್ತಾರೆ, ಅಷ್ಟೆ,’ ಅಂದ.
ನಿಂಬೇಹಣ್ಣು ದಾಟಿದರೆ ಜನ ಹೇಗೆ ಸಾಯುತ್ತಾರೆ ಅಂತ ಅರ್ಥವಾಗಲಿಲ್ಲ. ಸೀದ ಮನೆಗೆ ಹೋದವನೇ, `ಅಮ್ಮ, ಮಾಟ ಅಂದ್ರೆ ಏನಮ್ಮಾ?’ ಅಂತ ಕೇಳಿದೆ. ನನಗ್ಯಾಕೆ ಹೆದರಿಸಬೇಕು ಅಂತಲೋ ಏನೋ, `ಅಂತದ್ದು ಏನೂ ಇಲ್ಲ. ಈ ಬಯಲು ಸೀಮೆಯವರಿಗೆ ಮಾಡಲು ಕೆಲಸವಿಲ್ಲ. ಸುಮ್ಮನೆ ಮಾಟ-ಮಂತ್ರ ಅಂತ ಮಾಡ್ತಾರೆ. ಅದರಿಂದ ಏನೂ ಆಗೋಲ್ಲ,’ ಅಂದರು.
ಮಾರನೇ ದಿನ, ಶಾಲೆಯಿಂದ ಹೊರಬಂದಾಗ, ಮಾಟ ಮಾಡಿಟ್ಟ ತೆಂಗಿನಕಾಯಿಯನ್ನು ನೋಡಿದೆ. ತಕ್ಷಣವೇ, ಅದನ್ನು ಫುಟ್ ಬಾಲ್ ತರ ಒದೆಯಲಾರಂಭಿಸಿದೆ. ನನ್ನ ಜೊತೆಯಲ್ಲಿದ್ದ ಸ್ನೇಹಿತರೆಲ್ಲ, ಭೂತವನ್ನು ಕಂಡಂತೆ ದಿಕ್ಕಾಪಾಲಾಗಿ ಓಡಿಹೋದರು. ನಾನು ತೆಂಗಿನಕಾಯಿಯನ್ನು ಒದ್ದುಕೊಂಡು ಮನೆಯವರೆಗೆ ಬಂದು, ಅಮ್ಮನಿಗೆ ವರದಿ ಒಪ್ಪಿಸಿದೆ. ನನ್ನ ಹುಚ್ಚಾಟ ಕಂಡು ಗಾಭರಿಯಾದರೂ, ಅಮ್ಮ ಅದನ್ನು ತೋರಿಸಿಕೊಳ್ಳಲಿಲ್ಲ. ಆ ತೆಂಗಿನಕಾಯಿಯನ್ನು ಹಾಗೆಯೇ ಒದ್ದುಕೊಂಡು, ಆಸ್ಪತ್ರೆಯ ಮೂಲೆಯಲ್ಲಿದ್ದ ಶವಾಗಾರದ ಹತ್ತಿರ ಬಿಟ್ಟುಬರಲು ಹೇಳಿದರು. ಯಾವುದಕ್ಕೂ ಹೆದರದ ನಾನು, ಹಾಗೆಯೇ ಮಾಡಿದೆ.
ನಾನು ತೆಂಗಿನಕಾಯಿ ಒದ್ದುಕೊಂಡು ಬಂದದ್ದನ್ನು, ಆಯಾ ಲಕ್ಷ್ಮಮ್ಮ, ಹನುಮಮ್ಮನಿಗೆ ಹೇಳಿದಳು ಅಂತ ಕಾಣುತ್ತೆ. ಹತ್ತು ನಿಮಿಷದ ನಂತರ ಆಸ್ಪತ್ರೆಯ ಹತ್ತಿರ ಹೋದಾಗ, `ನಮ್ಮಪ್ಪಾ, ಯಾಕೋ ಮಗಾ ಮಾಟಾನ ತುಳ್ದೇ? ಎಲ್ಲಾ ಕಾಟ್ಗಳೂ ನಿನ್ನಿಂದೂರ ಇರ್ಲಿ,’ ಅಂತ ಹೇಳಿ, ನನ್ನ ಮುಖಕ್ಕೆ ಕೈ ನೀವಳಿಸಿ, ನೆಲಕ್ಕೆ ತಾಗಿಸಿ, ದೃಷ್ಟಿ ತೆಗೆದಳು.
`ಅಯ್ಯೋ, ಅದೆಲ್ಲಾ ಏನೂ ಆಗಲ್ಲ ಬಿಡು ಹನುಮಮ್ಮ,’ ಅಂದೆ.
`ನೀ ಯೋಳ್ದಂಗೇ ಏನೂ ಆಗ್ದೆ ಇರ್ಲಿ ಸಿವಾ’, ಅಂತಾ ನನ್ನ ಎರಡೂ ಕೆನ್ನೆಗಳನ್ನೂ ಹಿಂಡಿದಳು.
ಒಂದಿನ ಅಮ್ಮ ಹನುಮಮ್ಮನ ಜೊತೆ ಏರು ಧ್ವನಿಯಲ್ಲಿ ಮಾತನಾಡುವುದು ಕೇಳಿತು. ನಾನು ಹೋಗುವಾಗ, ಹನುಮಮ್ಮ ಹೇಳುತ್ತಿದ್ದಳು: `ಇನ್ನೇನು ಮಾಡ್ಲವ್ವ. ನಂಗೇನು ಮಕ್ಳಾ, ಮರೀನ?’ ಅಂತ. `ಏನಾಯ್ತು?’ ಅಂತ ಕೇಳಿದ ನನಗೆ, `ದೊಡ್ಡವರ ಮಧ್ಯ ನಿನಗೇನು ಕೆಲಸ, ಒಳಗೆ ಹೋಗು,’ ಅಂತ ಅಮ್ಮ ಗದರಿದರು. ಒಳಗೆ ಹೋಗುವವನಿಗೆ ಒಂದಂತೂ ಗೊತ್ತಾಯ್ತು. ಹನುಮಮ್ಮನಿಗೆ ಮಕ್ಕಳಿಲ್ಲ ಅಂತ.
ಈ ಮಧ್ಯ, ರಮೇಶ ಒಂದು ದಿನ ಕೇಳಿದ: `ಹನುಮಮ್ಮ ನಿಮ್ಮ ಅಡಿಗೆ ಮನೆಗೆ ಬರ್ತಾಳಂತೆ ಹೌದಾ?’
`ಹೌದು’ ಅಂದೆ.
`ಅವಳು ಹೊಲತಿ ಕಣ್ರಿ’ ಅಂದ.
`ಹಂಗಂದ್ರೆ?’ ಅಂದೆ.
`ಅವಳು ಹೊಲೆಯರ ಜಾತಿ ಕಣ್ರಿ. ಅವರನ್ನೆಲ್ಲಾ ಮನೆಯೊಳಗೇ ಸೇರಿಸುವುದಿಲ್ಲ ನಾವು,’ ಅಂದ.
ಅಲ್ಲಿಯವರೆಗೆ, ನನಗೆ ನಾಯಿಗಳ ಜಾತಿ ಬಗ್ಗೆ ಗೊತ್ತಿತ್ತು. ಆ ಊರಿಗೆಲ್ಲಾ ಇದ್ದದ್ದು ಒಂದೇ ಜಾತಿ ನಾಯಿ. ನಮ್ಮ ಮನೆಯ ಜೂಲಿ, ಅದೂ ಪೊಮೇರಿಯನ್. ಈ ಮನುಷ್ಯರ ಜಾತಿ ಯಾವುದು ಮತ್ತು ಹೇಗೆ ಅಂತ ಅರ್ಥವಾಗಲಿಲ್ಲ.
ಮನೆಗೆ ಹೋದವನೇ, `ಅಮ್ಮ, ಹೊಲತಿ ಅಂದರೇನು? ಹನುಮಮ್ಮ ನಮ್ಮ ಅಡುಗೆ ಮನೆಗೆ ಬರಬಾರದಾ?’ ಅಂತ ಕೇಳಿದೆ.
`ಹನುಮಮ್ಮ ತುಂಬಾ ಕ್ಲೀನು. ಕೋಳಕಾಗಿದ್ದರೆ, ನಾನು ಬ್ರಾಹ್ಮಣರನ್ನೂ ಮನೆಯೊಳಗೆ ಸೇರಿಸುವುದಿಲ್ಲ,’ ಅಂತ ಅಮ್ಮ ಹೇಳಿದರು.
ಜಾತಿ ಎಂದರೇನು, ಹೊಲತಿ ಅಂದರೇನು ಅಂತ ಅರ್ಥವಾಗದೆ ತಲೆಕೆಟ್ಟು ಅಮ್ಮನ ಹತ್ತಿರ ಹೋದರೆ, ಅದಕ್ಕೆ ಬ್ರಾಹ್ಮಣರನ್ನೂ ಸೇರಿಸಿ, ತಲೆಯನ್ನು ಗೊಬ್ಬರ ಮಾಡಿಟ್ಟರು. ಅದರ ಮಧ್ಯ, ನಮ್ಮ ಮೇಷ್ಟರು ದಾಸೇಗೌಡರು, `ನೀವು ಒಕ್ಕಲಿಗ ಗೌಡರಾ?’ ಅಂತ ಬೇರೆ ಕೇಳಿದರು. ಆಣ್ಣನ ಹೆಸರಿನ ಮುಂದೆ `ಗೌಡ’ ಅಂತ ಇದ್ದದ್ದರಿಂದ, `ಹೌದು ಸರ್’ ಎಂದೆ. `ದಾಸ ಒಕ್ಕಲಿಗರಾ, ಮುಳ್ಳು ಒಕ್ಕಲಿಗರಾ?’ ಅಂತ ಕೇಳಿದರು. ಅದೇನೆಂದು ಅರ್ಥವಾಗದೆ, ಗಾಬರಿಯಾಗಿ `ಅಣ್ಣನನ್ನು ಕೇಳಬೇಕು’ ಅಂತ ಹೇಳಿ ಜಾಗ ಖಾಲಿ ಮಾಡಿದೆ.
ಜಾತಿ ಪದ್ದತಿ ಹಾಸುಹೊಕ್ಕಾಗಿದ್ದ ಈ ಹಳ್ಳಿಯಲ್ಲಿ, ಸಂಕೇತಿ ಬ್ರಾಹ್ಮಣರ ಸಂಖ್ಯೆ ಬಹಳವಿತ್ತು. ಅವರಲ್ಲಿ ಕೆಲವರು ಮನೆಗೂ ಬರುತ್ತಿದ್ದರು. ಮಾತೆತ್ತಿದರೆ `ಮಡಿ’ ಎನ್ನುತ್ತಿದ್ದರು. ಅವದು ಬಂದಾಗಲೆಲ್ಲ, ಜೂಲಿಯನ್ನು ಕೂಡಬೇಕಾಗಿತ್ತು. ಹಾಗೆಯೆ, ಕುರ್ಚಿಗಳ ಮೇಲಿನ ಮೆತ್ತೆಗಳನ್ನೂ ತೆಗೆಯಬೇಕಿತ್ತು. ಅವರು ಬಂದಾಗಲೆಲ್ಲ ರೇಜಿಗೆಯಾಗುತ್ತಿತ್ತು. ಆದರೆ, ಹಬ್ಬ-ಹರಿದಿನಗಳಲ್ಲಿ, ಅವರ ಮನೆಗಳಿಂದ ತಿಂಡಿಗಳ ರಾಶಿಯೇ ಬಂದು ಬೀಳುತ್ತಿತ್ತು. ಹನುಮಮ್ಮನಿಗೇನಾದರೂ ಆ ತಿಂಡಿಯನ್ನು ಬಡಿಸಲು ಹೋದರೆ, `ಆ ಆರೋರ ಮನೆ ತಿಂಡಿ ನಾ ತಿನ್ನಾಕಿಲ್ಲ. ನಿಮ್ಮನೇದೇ ಆಕಿ’ ಅಂದುಬಿಡುತ್ತಿದ್ದಳು. ಈ ಆರೋರು (ಹಾರುವವರು) ಅಂದರೇನು ಅಂತ ನನಗೆ ಅರ್ಥವಾಗಿದ್ದು, ನಾನು ಕಾಲೇಜು ಮೇಟ್ಟಿಲು ಹತ್ತಿದ ಮೇಲೆ.
ಇದೆಲ್ಲದರ ನೆಡುವೆ ನನಗೆ ಅರ್ಥವಾಗಿದ್ದಿಷ್ಟು. ಹನುಮಮ್ಮ ನಮ್ಮ ಮನೆಯೊಳಗೆ ಬರಲು ಏನೂ ತೊಂದರೆ ಇಲ್ಲ. ಅಷ್ಟರ ಮಟ್ಟಿಗೆ ನನಗೆ ಸಮಾಧಾನವಾಗಿತ್ತು. ನಾನು ಆರನೇ ತರಗತಿಗೆ ಬಂದಾಗ, ನನ್ನನ್ನು ಮೈಸೂರಿನ ರಾಮಕೃಷ್ಣ ವಿಧ್ಯಾಶಾಲೆಗೆ ರವಾನಿಸಲಾಯಿತು. ಅದರ ಮುಂದಿನ ವರ್ಷವೇ, ಅಣ್ಣನಿಗೆ ಕೇರಳಾಪುರದಿಂದ ವರ್ಗವಾಯಿತು.
ನಾನು ಹತ್ತನೇ ತರಗತಿಯಲ್ಲಿದ್ದಾಗ ಅಂತ ಕಾಣುತ್ತೆ. ಒಮ್ಮೆ ರಜಕ್ಕೆಂದು ಮನೆಗೆ ಹೋದಾಗ ಅಮ್ಮ ಹೇಳಿದರು: `ಹನುಮಮ್ಮ ಬಂದಿದ್ದಳು.’
ಮಲೆನಾಡಿನ ಕಾಫಿ ತೋಟಗಳನ್ನು ನೋಡಿ, ಗಾಭರಿಯಾಗಿದ್ದಳಂತೆ. ನಾನು ಮನೆಯಲ್ಲಿ ಇಲ್ಲದನ್ನು ನೋಡಿ ತುಂಬಾ ನಿರಾಸೆಯಾಯ್ತಂತೆ. `ವಿನ್ಯೂನ ನೋಡಬೇಕೂಂತ ಬಂದೆ ಕಣವ್ವಾ’ ಅಂತ ಅವಳ ಎಲೆ ಅಡಿಕೆ ಚೀಲವನ್ನು ನೆಲಕ್ಕಿಟ್ಟು ಹೇಳಿದಳಂತೆ.
`ನಾನು ವೆಂಕಟೇಶುನ ನೋಡ್ಬೇಕೂಂತ ಬಂದೆ’ ಅಂತ ಜೊತೆಯಲ್ಲಿ ಬಂದಿದ್ದ ನಿಂಗಶೆಟ್ಟಿ ಹೇಳಿದರೂ, ಅವನನ್ನು ಯಾರೂ ನಂಬಲಿಲ್ಲ.
`ಅಲ್ಲಮ್ಮ, ಹನುಮಮ್ಮನನ್ನು ಇಲ್ಲೇ ಬಂದು ಇರೋಕೆ ಹೇಳ್ಬೋದಲ್ಲಾ?’ ಅಂತ ಕೇಳಿದೆ. `ಅವಳ್ನ ಕಂಟ್ರೋಲ್ ಮಾಡೋದ್ಯಾರು? ಸರೀ ಕುಡೀತಾಳೆ. ಕೇಳಿದ್ರೆ, ಮಕ್ಕಳಿಲ್ಲ ಅಂತ ರಾಗ ಹಾಡ್ತಾಳೆ’ ಅಂದ್ರು ಅಮ್ಮ. ಯಾಕೋ, ಪಿಚ್ಚೆನಿಸಿತು.
ಮನೆಯಲ್ಲಿ, ಕೇರಳಾಪುರದ ವಿಷಯ ಬಂದಾಗಲೆಲ್ಲ, ಹನುಮಮ್ಮನ ವಿಷಯ ಬರದೆ ಮಾತು ಮುಗಿಯುತ್ತಿರಲಿಲ್ಲ…
ಅರಕಲಗೂಡು ದಾಟಿ, ರಾಮನಾಥಪುರದ ಮೇಲೆ ಕೇರಳಾಪುರದ ಕಡೆಗೆ ಹೊರಟಾಗ, ಅಂಬಿಕಾ ಮತ್ತು ಸೃಷ್ಟಿ ಬಹಳ ಉತ್ಸಾಹಗೊಂಡಿದ್ದರು. ಕಾವೇರಿ ತಟದ ಆ ನಾಡಿನ ಬತ್ತದ ಗದ್ದೆಗಳು, ಅಡಕೆ ಮತ್ತು ತೆಂಗಿನ ತೋಟಗಳನ್ನು ನೋಡಿ `ಇಲ್ಲೇ ಸ್ವಲ್ಪ ತೋಟ ತೆಗೆದುಕೊಂಡರೆ ಚೆನ್ನಾಗಿರುತ್ತೆ’ ಎಂದೂ ಮಾತಾಡಿದರು. ನನ್ನ ತಲೆ ತುಂಬಾ ಹನುಮಮ್ಮ ತುಂಬಿದ್ದಳು. ಅವಳು ಹೇಗಿರಬಹುದು ಅಂತ ಕಲ್ಪಿಸಿಕೊಳ್ಳಲು ಯತ್ನಿಸುತ್ತಿದ್ದೆ. ಆದರೆ, ತೆಳ್ಳಗೆ, ಕಪ್ಪಗೆ ಇರುವ ಹೆಂಗಸೊಬ್ಬಳು, ತಲೆಯಮೇಲೆ ಎರಡು ಕೊಡಪಾನ ಇಟ್ಟುಕೊಂಡು, ಕೈಬೀಸಿ ನೆಡೆಯುವ ಅಸ್ಪಷ್ಟ ಚಿತ್ರ ಮಾತ್ರ ತಲೆಯಲ್ಲಿ ಮೂಡುತ್ತಿತ್ತು.
ಕೇರಳಾಪುರದ ಚಿತ್ರಣ ಹೆಚ್ಚೇನು ಬದಲಾಗಿರಲಿಲ್ಲ. ಊರಿನೊಳಗೆ ಪ್ರವೇಶಿಸುವಾಗ, ಹೊಸ ರೈಸ್ ಮಿಲ್ ನೋಡಿದೆ. ಇದೇ ರಮೇಶನ ರೈಸ್ ಮಿಲ್ ಇರಬೇಕು ಎಂದುಕೊಂಡೆ. ನಿಲ್ಲಿಸದೆ, ಆಸ್ಪತ್ರೆಯ ಕಡೆ ಹೊರಟೆ. ದಾರಿಯಲ್ಲಿ, ನಾನು ನಾಲ್ಕನೇ ಕ್ಲಾಸ್ ಓದಿದ ಶಾಲೆ ಅಂಗನವಾಡಿಯಾಗಿ ಬದಲಾಗಿದ್ದನ್ನು ಗಮನಿಸಿದೆ. ಆಸ್ಪತ್ರೆಯ ಆವರಣ ಪ್ರವೇಶಿಸುತ್ತಲೇ, ಮೊದಲ ಬದಲಾವಣೆ ನೋಡೆದೆ. ಎರಡು ಚಿಕ್ಕ ಕಟ್ಟಡಗಳಿದ್ದ ಆಸ್ಪತ್ರೆಯನ್ನು ಸೇರಿಸಿ, ಒಂದೇ ಕಟ್ಟಡ ಮಾಡಲಾಗಿತ್ತು. ಅಮ್ಮನ ಹೂತೋಟ ಕಣ್ಮರೆಯಾಗಿ, ಎಲ್ಲೆಡೆ ಕಳೆ ಬೆಳೆದಿತ್ತು. ಆಸ್ಪತ್ರೆಯನ್ನು ಬಳಸಿಕೊಂಡು, ಹಿಂದೆ ಮನೆಕಡೆಗೆ ಹೋದೆ. ಯಾಕೋ ಏನೋ, ಮನೆ ಮುಂದೆ ಇದ್ದ ಮೈದಾನ ಚಿಕ್ಕದಾದಂತೆ ಕಂಡಿತು. ಮನೆ ಮುಂದೆ ಇದ್ದ ಬಾವಿಯ ಕಟ್ಟೆ ಬಿರುಕು ಬಿಟ್ಟಿತ್ತು.
ಒಟ್ಟಾರೆ, ನಾನು ಚಿಕ್ಕದ್ದಿನಲ್ಲಿ ಬದುಕಿದ್ದ ವಿಜಯನಗರ, ಹಾಳು ಹಂಪೆಯಂತೆ ಕಾಣುತ್ತಿತ್ತು.
ಏಕೋ ಮನಸ್ಸಿನಲ್ಲಿ ತಳಮಳ ಆರಂಭವಾಯಿತು. ಕಾರಿನಿಂದ ಇಳಿದು ಆಸ್ಪತ್ರೆಯೊಳಗೆ ಹೋದೆ. ಎಲ್ಲಾ ಬದಲಾಗಿತ್ತು. ಅಲ್ಲೇ ಒಂದು ಕೋಣೆಯೊಳಗ್ಗೆ, ಆಸ್ಪತ್ರೆ ಸಿಬ್ಬಂದಿಯಂತೆ ಕಾಣುವ ಇಬ್ಬರು ಮಾತನಾಡುತ್ತಿದ್ದರು. ಮೆಲ್ಲನೆ ಕೇಳಿದೆ : `ಇಲ್ಲಿ ಹನುಮಮ್ಮ ಅಂತ ಕೆಲಸ ಮಾಡುತ್ತಿದ್ದರಲ್ಲಾ… ಎಲ್ಲಿದ್ದಾರೆ ಈಗ?’
ಪ್ರಶ್ನಾರ್ಥಕವಾಗಿ ನನ್ನ ಮುಖ ನೋಡುತ್ತಾ ಉತ್ತರಿಸಿದ: `ಅವರು ಸತ್ತುಹೋಗಿರಬೇಕು. ನಾನಿಲ್ಲಿಗೆ ಬಂದು ಬರೀ ಎರಡು ವರ್ಷ ಆಗಿದೆ ಅಷ್ಟೆ. ಶ್ರೀನಿವಾಸನ್ನ ಕೇಳಿ. ಹದಿನೈದು ವರ್ಷದಿಂದ ಇದ್ದಾನೆ. ಅವನಿಗೆ ಗೊತ್ತಿರುತ್ತದೆ.’
ಶ್ರೀನಿವಾಸ ಯಾವುದೇ ಅಳುಕಿಲ್ಲದೆ ಹೇಳಿದ: `ಅವಳು ಸತ್ತು ಹತ್ತು-ಹದಿನೈದು ವರ್ಷ ಆಯ್ತು. ನಿಮಗೆ ಹೇಗೆ ಗೊತ್ತು?’
ಉತ್ತರಿಸಲು ಮನಸ್ಸಿಲ್ಲದೆ, ಕಾರಿಗೆ ಹಿಂದುರುಗಿದೆ. ನನ್ನ ಮುಖ ನೋಡಿ ಅಂಬಿಕಾಳಿಗೆ ಏನಾಗಿರಬಹುದೆಂದು ಗೊತ್ತಾಯ್ತು ಅಂತ ಕಾಣುತ್ತೆ. `ತುಂಬಾ ವರ್ಷದ ಹಿಂದೆನೇ ಸತ್ತು ಹೋದಳಂತೆ’ ಅಂದು ಕಾರು ಹತ್ತಿದೆ.
ವಾಪಾಸ್ ಹೋಗುತ್ತಾ ರಮೇಶನ ರೈಸ್ ಮಿಲ್ ಹತ್ತಿರ ನಿಲ್ಲಿಸಿದೆ. ಅವನ್ನನ್ನೂ ನೋಡಿ ಮೂವತ್ತು ವರ್ಷ ದಾಟಿತ್ತು. ಮಿಲ್ಲಿನ ಹತ್ತಿರವೇ ಅವನು, ಅವನ ತಮ್ಮ ಮಧು ಮತ್ತು ನಮ್ಮ ಇನ್ನೊಬ್ಬ ಸಹಪಾಠಿ ಬೂದನಗೆರೆ ನಾಗೇಂದ್ರ ಸಿಕ್ಕಿದರು. ರಮೇಶ ಎಷ್ಟೇ ಒತ್ತಾಯ ಮಾಡಿದರೂ, ಅವನ ಮನೆಗೆ ಹೋಗಲು ಮನಸ್ಸಾಗಲಿಲ್ಲ. ಇನ್ನೊಮ್ಮೆ ಬರುತ್ತೇನೆ ಅಂತ ಹೇಳಿ, ಕಾರು ಹತ್ತಿದೆ.
ಊರಿಗೆ ತಲುಪಿದ ಕೂಡಲೇ, ಅಮ್ಮನಿಗೆ ಹನುಮಮ್ಮ ತೀರಿಹೋದ ವಿಷಯ ಹೇಳಿದೆ. ಅಮ್ಮ ಮತ್ತು ಅಣ್ಣನಿಗೂ ಬೇಸರವಾಯಿತು. ಸಾಯಂಕಾಲ ಅಮ್ಮ ಅಂಬಿಕಾಳಿಗೆ ಹನುಮಮ್ಮನ ಬಗ್ಗೆ ಹೇಳುತ್ತಿದ್ದರು. `ವಿನಯ್ ನ ಕಂಡರೆ ಅವಳಿಗೆ ತುಂಬಾ ಪ್ರೀತಿ. ಹ್ಯಾಗೆ ಕರೀತಿದ್ಲು ಗೊತ್ತಾ…. ವಿನ್ಯೂ… ಬಪ್ಪಾ ಓಗಾನಾ’.
ಕೇಳಿಯೂ ಕೇಳದಂತೆ ಸೃಷ್ಟಿ ಜೊತೆ ಆಟವಾಡಲು ಆರಂಭಿಸಿದೆ.
ಆ ಸಲ, ಊರಿಂದ ಬೆಂಗಳೂರಿಗೆ ಹೊರಡುವಾಗ, ಹನುಮಮ್ಮನಿಗೆಂದು ತೆಗೆದಿದ್ದ ಸೀರೆಯನ್ನು ಊರಿನಲ್ಲೇ ಬಿಟ್ಟು ಬಂದೆ…
ಆ ಸಲ, ಊರಿಂದ ಬೆಂಗಳೂರಿಗೆ ಹೊರಡುವಾಗ, ಹನುಮಮ್ಮನಿಗೆಂದು ತೆಗೆದಿದ್ದ ಸೀರೆಯನ್ನು ಊರಿನಲ್ಲೇ ಬಿಟ್ಟು ಬಂದೆ…
ಮಾಕೋನಹಳ್ಳಿ ವಿನಯ್ ಮಾಧವ್.