ಶುಕ್ರವಾರ, ನವೆಂಬರ್ 17, 2017

ಇಂದಿರಾ ಗಾಂಧಿ


ಹುಲಿ ಸಂತತಿ ರಕ್ಷಿಸಿದ ದುರ್ಗೆ



ಅದ್ಯಾಕೋ ಗೊತ್ತಿಲ್ಲ, ಬಾಲ್ಯದಿಂದಲೂ ನಾನು ಕಾಂಗ್ರೆಸ್ ವಿರೋಧಿಯಾಗಿ ಬೆಳೆದೆ. ಬಹುಷ:, ನಾವು ಶಾಲೆಯಲ್ಲಿದ್ದಾಗ ತುರ್ತುಪರಿಸ್ಥಿತಿ ಇದ್ದದ್ದು, ಆಮೇಲೆ ಇಂದಿರಾ ಗಾಂಧಿ ಚುನಾವಣೆಯಲ್ಲಿ ಸೋತದ್ದು, ಮತ್ತೆ ಅಧಿಕಾರಕ್ಕೆ ಬಂದಿದ್ದೂ ಕಾರಣವಿರಬಹುದು.

ರಾಜಕೀಯ ಅಂದರೆ ಅರ್ಥವಾಗುವ ಮೊದಲೇ, ಇಂದಿರಾ ಗಾಂಧಿ ವಿರೋಧಿಯಂತೆ ಮಾತನಾಡುವುದು ಅಭ್ಯಾಸವಾಗಿ ಹೋಗಿತ್ತು.  ಬಾಂಗ್ಲಾದೇಶದ ಯುದ್ದ ಗೆದ್ದಾಗ, ಅಟಲ್ ಬಿಹಾರಿ ವಾಜಪೇಯಿಯವರು, ಇಂದಿರಾ ಗಾಂಧಿಯನ್ನು ದುರ್ಗೆಗೆ ಹೋಲಿಸಿದ್ದು ತಿಳಿದಾಗ ನನಗೆ ವಾಜಪೇಯಿಯವರ ಬಗ್ಗೆ ನಿರಾಶೆಯಾಗಿತ್ತು. ಆದರೂ, ಅವರನ್ನು ಬಹಳ ಇಷ್ಟಪಡುತ್ತಿದ್ದೆ.

ಬೆಂಗಳೂರು ಸೇರಿ, ಪತ್ರಿಕೋದ್ಯಮ ಶುರು ಮಾಡೋ ಹೊತ್ತಿಗೆ, ಎಲ್ಲರ ಮನೆಯ ದೋಸೆ ತೂತು ಅನ್ನೋದು ಅರ್ಥವಾಗಿತ್ತು. ಅದರ ಮಧ್ಯ, ಕೆಲವು ರಾಜಕಾರಣಿಗಳು ವೈಯಕ್ತಿಕವಾಗಿ ಇಷ್ಟವಾಗೋಕೆ ಶುರುವಾದವು. ಅವರುಗಳ ವೈಯಕ್ತಿಕ ದೌರ್ಬಲ್ಯಗಳನ್ನು ನಿರ್ಲಕ್ಷಿಸಿ, ಸಾಮಾಜಿಕ ಕಳಕಳಿ, ವಿಧ್ವತ್ತು ಮತ್ತು ಕೆಲವು ವಿಷಯಗಳಲ್ಲಿ ಅವರಿಗಿದ್ದ ಜ್ಙಾನ, ವಾಕ್ಚಾತುರ್ಯಗಳನ್ನು ಇಷ್ಟಪಡೋಕೆ ಶುರುಮಾಡಿದೆ. ಎಲ್ಲಾ ಪಕ್ಷಗಳನ್ನೂ ಒಂದೇ ಸಮನಾಗಿ ನೋಡೋದೂ ಅಭ್ಯಾಸವಾಗಿ ಹೋಗಿತ್ತು.

 ವನ್ಯಜೀವಿಗಳ ಬೆನ್ನುಹತ್ತಿ ಹೋದಾಗ ಕೆಲವು ಸತ್ಯಗಳು ಅರ್ಥವಾಗತೊಡಗಿದವು. ಕುದುರೆಮುಖ ಗಣಿಗಾರಿಕೆ ವಿರುದ್ದ ತಿರುಗಿ ಬಿದ್ದಾಗ ಸಹಾಯಕ್ಕೆ ಬಂದದ್ದು ಕಾನೂನು ಮಾತ್ರ. ಜಾಗತೀಕರಣ ಮತ್ತು ವ್ಯಾಪಾರಿಕರಣದ ಗುಂಗಿಗೆ ಬಿದ್ದ ದೇಶದಲ್ಲಿ, ಸಾರ್ವಜನಿಕ ವಲಯದ ಈ ಉದ್ದಿಮೆಯ ವಿರುದ್ದ ಹೋರಾಡೋದು ಸುಲಭದ ಮಾತಾಗಿರಲಿಲ್ಲ.

ಹೆಚ್ಚಾಗಿ, ವನ್ಯಜೀವಿ ಸಂರಕ್ಷಣಾ ಕಾಯ್ದೆ ಮತ್ತು ಪರಿಸರ ಸಂರಕ್ಷಣಾ ಕಾಯ್ದೆಯ ಮೊರೆಹೋಗಬೇಕಾಯ್ತು. ಕಾನೂನು ಹೋರಾಟದ ಮುಂಚೂಣಿಯಲ್ಲಿದ್ದ ಪ್ರವೀಣ್ ಭಾರ್ಗವ್, ಈ ಕಾಯ್ದೆಗಳ ಯಾವುದೇ ಪರಿಚ್ಚೇದಗಳನ್ನು ನಿರರ್ಗಳವಾಗಿ ಗಿಣಿ ಪಾಠದಂತೆ ಹೇಳುತ್ತಿದ್ದರು. ನಾನು ಬಾಯಿ ಬಿಟ್ಟುಕೊಂಡು ಕೇಳುತ್ತಿದ್ದೆ. ಈ ಎರಡೂ ಕಾಯ್ದೆಗಳು ಅನುಷ್ಟಾನವಾಗಿದ್ದು, ಕ್ರಮವಾಗಿ 1972 ಮತ್ತು 1980 ರಲ್ಲಿ. ಆದನ್ನು ತಂದವರೇ ಪ್ರಧಾನ ಮಂತ್ರಿ ಇಂದಿರಾ ಗಾಂಧಿ.

ಮೊದಮೊದಲಿಗೆ ಉದಾಸೀನ ಮಾಡಿದ್ದೆ. ಕಾಂಗ್ರೆಸ್ ಪಕ್ಷ ಅನ್ನೋದು ಇಂದಿರಾ ಗಾಂಧಿಯ ಕಪಿ ಮುಷ್ಟಿಯಲ್ಲಿತ್ತು. ಯಾವ ಕಾಯ್ದೆ ತಂದರೂ, ಎಲ್ಲರೂ ತಲೆ ತಗ್ಗಿಸಿ ಹೆಬ್ಬೆಟ್ಟು ಒತ್ತುತ್ತಿದ್ದರು ಅನ್ನೋ ಭಾವನೆ ಇತ್ತು. ನಿಧಾನವಾಗಿ ಕಾಂಗ್ರೆಸ್ ಪಕ್ಷ ಹಸು ಮತ್ತು ಹಾಲು ಕುಡಿಯುವ ಕರುವಿನ ಗುರುತಿನಿಂದ, ಹಸ್ತದ ಗುರುತಿಗೆ ಬಂದ ಬೆಳವಣಿಗೆಗಳನ್ನು ಗಮನಿಸಿದಾಗ, ಇಂದಿರಾ ಗಾಂಧಿಯ ಹಾದಿ ಅಷ್ಟೊಂದು ಸರಳವಾಗಿರಲಿಲ್ಲ ಅನ್ನೋದು ಅರ್ಥವಾಗಿತ್ತು. ಕಾಂಗ್ರೆಸ್ ಪಕ್ಷದಲ್ಲಿ ಅನೇಕ ಬಾರಿ ಭುಗಿಲೆದ್ದ ಬಂಡಾಯ, ವಿಭಜನೆ, ವೈಯಕ್ತಿಕ ಸೋಲುಗಳ ನೆಡುವೆಯೂ, ಇಂದಿರಾ ಗಾಂಧಿ ಪ್ರಶ್ನಾತೀತ ನಾಯಕಿಯಾಗಿ ಹೊರಹೊಮ್ಮಿದ್ದರು.

ಇವೆಲ್ಲದರ ನೆಡುವೆ, ಇಂತಹ ಎರಡು ಕಾನೂನುಗಳನ್ನು ಇಂದಿರಾ ಗಾಂಧಿ ಹೇಗೆ ಮತ್ತು ಏಕೆ ಜಾರಿ ಮಾಡಿದರು ಅನ್ನೋದು ಯಕ್ಷಪ್ರಶ್ನೆಯಾಗೇ ಉಳಿದಿತ್ತು. ಏಕೆಂದರೆ, ಈ ಕಾಯ್ದೆಗಳನ್ನು ಓದಿ, ಅರ್ಥಮಾಡಿಕೊಂಡವರಿಗೆ ಮಾತ್ರ ಅವುಗಳ ಆಳ ಮತ್ತು ಅಗಲ ಅರ್ಥವಾಗುವುದು. ಸೃಷ್ಟಿ, ಪ್ರಕೃತಿ, ಪರಿಸರ ಮತ್ತು ಸಮತೋಲನದ ಬಗ್ಗೆ ಕಾಳಜಿ ಮತ್ತು ತಿಳುವಳಿಕೆ ಇಲ್ಲದವರು ಮತ್ತು ಅವುಗಳ ಬಗ್ಗೆ ವೈಜ್ಞಾನಿಕ ವಿಶ್ಲೇಷಣೆ ಮಾಡದವರು, ಈ ಕಾಯ್ದೆಯನ್ನು ತರುವುದಿರಲಿ, ಅರ್ಥಮಾಡಿಕೊಳ್ಳಲೂ ಸಾಧ್ಯವಿಲ್ಲ.
ಇಂದಿರಾ ಗಾಂಧಿಯ ವೈಯಕ್ತಿಕ ಜೀವನ, ಅದರಲ್ಲೂ ಅವರು ಪ್ರಕೃತಿಯ ಬಗ್ಗೆ ಯಾತಕ್ಕಾಗಿ ಅಷ್ಟೊಂದು ಕಾಳಜಿ ವಹಿಸಿದ್ದರು ಅನ್ನೋದರ ಬಗ್ಗೆ ಯಾವುದೇ ಮಾಹಿತಿ ಸಿಗಲಿಲ್ಲ. ಕೆಲವು  ಪಠ್ಯಪುಸ್ತಕಗಳ ಜಾಳು ಜಾಳಾದ ವಿವರಗಳಂತೆ, ಆಕೆ ನೆಹರೂ ಪುತ್ರಿ, ಪರಿಸರದ ಬಗ್ಗೆ ಕಾಳಜಿ ಇದ್ದವರು, ಬಂಗ್ಲಾ ದೇಶದ ವಿಭಜನೆಗಾಗಿ ಪಾಕಿಸ್ತಾನದ ಸೇನೆಯನ್ನುಸೆದೆಬಡಿದವರು,  ಸರ್ವಾಧಿಕಾರಿಯಂತೆ ತುರ್ತುಪರಿಸ್ಥಿತಿ ಹೇರಿದವರು, ಇಂತಹ ವಿವರಗಳು ಮಾತ್ರ ಸಿಗುತ್ತಿದ್ದವು. ಆ ಸಂದರ್ಭದಲ್ಲೇ ಕೈಗೆ ಸಿಕ್ಕಿದ್ದು, ನಮ್ಮ ಜಿಲ್ಲೆಯವರೇ ಆದ, ಕೇಂದ್ರದ ಮಾಜಿ ಪರಿಸರ ಮತ್ತು ಅರಣ್ಯ ಮಂತ್ರಿ ಜೈರಾಂ ರಮೇಶ್ ಬರೆದ: `ಇಂದಿರಾ ಗಾಂಧಿ, ಎ ಲೈಫ್ ಇನ್ ನೇಚರ್’.

ಇಂದಿರಾ ಗಾಂಧಿಯ ಜೀವನದಲ್ಲಿ ಬರೆದ, ಬಂದ ಪತ್ರಗಳನ್ನೇ ಪ್ರಧಾನವಾಗಿಟ್ಟುಕೊಂಡು ಬರೆದ ಈ ಪುಸ್ತಕ ಕಥೆಯಂತೆ ಓದಿಸಿಕೊಂಡು ಹೋಗುವುದಿಲ್ಲ. ವಿವಿಧ ವರ್ಷಗಳ ಘಟನೆಗಳು ಹಿಂದೆ, ಮುಂದೆ ಓಡಾಡುತ್ತಿರುತ್ತವೆ. ಪುಸ್ತಕದ ಪೂರ್ತಿ ಇಂದಿರಾ ಗಾಂದಿಯವರ ಜೀವನದ ಪತ್ರ ವ್ಯವಹಾರಗಳ ಸುತ್ತ ಕೇಂದ್ರೀಕೃತವಾಗಿದೆ. ಆದರೆ, ಇಂದಿರಾ ಪ್ರಿಯದರ್ಶಿನಿ ಎಂಬ ಹುಡುಗಿ, ಇಂದಿರಾ ಗಾಂಧಿಯಾಗಿ ರೂಪುಗೊಂಡ ವಿವರಗಳು ವಿಸ್ತಾರವಾಗಿ ಅರ್ಥವಾಗುತ್ತದೆ.

ಅದು ಅಕ್ಟೋಬರ್ 27, 1984…. ಕಾಶ್ಮೀರದ ರಾಜ್ಯಪಾಲರ ಸಲಹೆಯ ವಿರುದ್ದವಾಗಿ, ಇಂದಿರಾ ಗಾಂಧಿ ಕಾಶ್ಮೀರ ಕಣಿವೆಗೆ ತಮ್ಮ ಮೊಮ್ಮಕ್ಕಳನ್ನು ಕರೆದುಕೊಂಡು ಹೊರಟೇಬಿಟ್ಟರು. ಅಂತಾ ರಾಜಕಾರಣವೇನಲ್ಲ. ವಸಂತ ಕಾಲದಲ್ಲಿ ಚಿನಾರ್ ಎಲೆಗಳು ಮೈದುಂಬಿ ರಂಗುರಂಗಾಗಿ ನಿಂತಿವೆ ಅನ್ನುವ ಸುದ್ದಿ ಸಿಕ್ಕಿತ್ತು. ಎಷ್ಟೋ ವರ್ಷಗಳಾಗಿದ್ದವು, ತನ್ನ ತವರೂರಿನಿ ಈ ವೈಭವ ನೋಡದೆ. ಎಷ್ಟೋ ಸಲ ಹೋಗಬೇಕೆಂದರೂ, ಬಿಡುವಿಲ್ಲದ ಕೆಲಸದಿಂದಾಗಿ ಆಗಿರಲಿಲ್ಲ.

ಈ ಸಲ ಮಾತ್ರ, ಹಿಂದು ಮುಂದು ನೋಡದೆ ಕಾಶ್ಮೀರಕ್ಕೆ ಹೋದವರೆ, ಚಿನಾರ್ ಮರಗಳ ಮಧ್ಯೆ ಮನಸಾರೆ ತಿರುಗಾಡಿದರು. ಅಷ್ಟೇ ಅಲ್ಲ, ತಮ್ಮ ಅತ್ಯಂತ ಪ್ರೀತಿಯ ದಿಚಿಗಾಂ ರಾಷ್ಟ್ರೀಯ ಉದ್ಯಾನವನಕ್ಕೂ ಭೇಟಿ ನೀಡಿದರು. ನಾಲ್ಕೇ ದಿನ, ತಮ್ಮ ಅಂಗರಕ್ಷಕನಿಂದಲೇ ಬರ್ಬರವಾಗಿ ಹತ್ಯೆಯಾದರು. ಓದಿ ಮನಸ್ಸಿಗೆ ಪಿಚ್ಚೆನಿಸಿತು.

ಎರಡು ಕಾಯ್ದೆಗಳ ಬಗ್ಗೆ ಬಹಳ ಕುತೂಹಲವಿತ್ತು. 1971-72, ಇಂದಿರಾ ಗಾಂಧಿ ಮಹತ್ತರ ಹೆಜ್ಜೆಗಳನ್ನು ಇಡುತ್ತಿದ್ದರು. ಬ್ಯಾಂಕುಗಳ ರಾಷ್ಟ್ರೀಕರಣ ಮಾಡಿದ ಬೆನ್ನಲ್ಲೇ, ಸೋವಿಯತ್ ದೇಶದ ಜೊತೆ ದ್ವಿಪಕ್ಷೀಯ ಸಂಬಂಧದ ವಿಷಯ ಸಹಿ ಹಾಕುವುದು, ಬಾಂಗ್ಲಾ ದೇಶ ವಿಮೋಚನೆಯಂತ ವಿಷಯಗಳಲ್ಲಿ ಮುಳುಗಿ ಹೋಗಿದ್ದರು. ಇದೇ ಸಮಯದಲ್ಲಿ, ನಕ್ಸಲ್ ಬಾರಿಯಲ್ಲಿ ಚಳುವಳಿಯೂ ಹುಟ್ಟಿಕೊಂಡಿತು. ಈ ವಿಷಯಗಳಲ್ಲಿ ಇಂದಿರಾ ಗಾಂಧಿಗೆ ಮಾರ್ಗದರ್ಶನ ನೀಡಲು ಅವರ ಕಾರ್ಯದರ್ಶಿ ಪಿ ಎನ್ ಹಕ್ಸರ್ ಇದ್ದರು.

ಆದರೆ, ಕಾರ್ಯದರ್ಶಿಯ ಸಹಾಯವಿಲ್ಲದೆ ಇಂದಿರಾ ಗಾಂಧಿಯ ಮೆದುಳು ಇನ್ನೊಂದು ದಿಕ್ಕಿನಲ್ಲಿ ಕೆಲಸ ಮಾಡುತ್ತಿತ್ತು. ಸ್ವಲ್ಪ ದಿನಗಳಲ್ಲೇ, ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ನು ಜಾರಿಗೆ ತಂದೇ ಬಿಟ್ಟರು.

ಜೂನ್ 1980 ರಲ್ಲಿ, ಇಂದಿರಾ ಗಾಂಧಿ ತಮ್ಮ ಎರಡನೇ ಮಗ ಸಂಜಯ ಗಾಂಧಿಯವರನ್ನು ಕಳೆದುಕೊಂಡಿದ್ದರು. ಆಗಸ್ಟ್ ತಿಂಗಳಲ್ಲಿ ಖ್ಯಾತ ಪಕ್ಷಿತಜ್ಞ ಸಲೀಂ ಆಲಿ ಸಂತಾಪ ಸೂಚಕ ಪತ್ರವನ್ನು ಬರೆದಾಗ, ಅದಕ್ಕೆ ಉತ್ತರಿಸುತ್ತಾ, `ನಾನು ಪರಿಸರದ ಬಗ್ಗೆಯ ಬಹಳಷ್ಟು ವಿಷಯಗಳನ್ನು ನಿಮಗೆ ಕಳುಹಿಸುತ್ತಿರುವುದನ್ನು, ನೀವು ಗಮನಿಸಿರುತ್ತೀರಿ.ಇದು ನಿಮಗೆ ದೊಡ್ಡ ಹೊರೆಯಾಗುವುದಿಲ್ಲ ಎಂದು ತಿಳಿಯುತ್ತೇನೆ ಮತ್ತು ನೀವು ಎಲ್ಲರಿಗೂ ಸಮಾಧಾನಕರ ಪರಿಹಾರ ಸೂಚಿಸುತ್ತೀರಿ ಎಂದು ನಂಬಿರುತ್ತೇನೆ. ಯಾಕಂದರೆ, ಪ್ರತೀ ರಾಜ್ಯಗಳೂ ತಮ್ಮ ಬೇಡಿಕೆಗಳ ಬಗ್ಗೆ ಹಠವಾದಿ ದೋರಣೆಯನ್ನು ತೆಳೆದಿರುತ್ತವೆ.’
ಮುಂದಿನ ಕೆಲವೇ ದಿನಗಳಲ್ಲಿ, ಪರಿಸರ ಸಂರಕ್ಷಣೆ ಕಾಯ್ದೆ ನಮ್ಮ ದೇಶದಲ್ಲಿ ಜಾರಿಯಾಯ್ತು. ಈ ಪರಿಯ ಕಳಕಳಿಯನ್ನು ಊಹಿಸಲೂ ಕಷ್ಟವೇ ಸರಿ.

ನೆಹರೂ ಬಗ್ಗೆ ಯಾವುದೇ ಆಭಿಪ್ರಾಯವಿದ್ದರೂ ಸರಿ. ನನ್ನ ಪ್ರಕಾರ, ದೇಶಕ್ಕೆ ಅವರ ಅತ್ಯುತ್ತಮ ಕೊಡುಗೆ ಇಂದಿರಾ ಗಾಂಧಿ. ಆಕೆಗೆ 13 ವರ್ಷವಿದ್ದಾಗ, ಸ್ವೀಡನ್ನಿನ ಮೌರಿಸ್ ಮೇಟರ್ಲಿಂಕ್ ಬರೆದ, ಜೇನ್ನೊಣದ ಜೀವನ ಪುಸ್ತಕವನ್ನು ಕೊಡುಗೆಯಾಗಿ ಕೊಟ್ಟರು. ಅಲ್ಲಿಂದ ಶುರುವಾದ ಪ್ರಕೃತಿಯ ಜೊತೆಯ ಕೊಂಡಿ, ಕೊನೆ ಉಸಿರಿರುವವರೆಗೂ ಉಳಿದುಕೊಂಡಿತು.
ಮೊದಲ ಬಾರಿಗೆ ಇಂದಿರಾ ಹುಲಿಯನ್ನು ನೋಡಿದ್ದು 1952 ರಲ್ಲಿ -- ಜೋಗ್ ಜಲಪಾತ ನೋಡಲು ಹೋದಾಗ. ದೆಹಲಿಯ ತೀನ್ ಮೂರ್ತಿ ಭವನದಲ್ಲಿ ಒಂದು ಸಣ್ಣ ಮೃಗಾಲಯವನ್ನಿಟ್ಟುಕೊಂಡು, ಅದರಲ್ಲಿ ಮೂರು ಹುಲಿಮರಿಗಳನ್ನು ಸಾಕಿಕೊಂಡಿದ್ದರೂ, ಕಾಡಿನಲ್ಲಿ ಕಂಡ ಹುಲಿಯ ಬಗ್ಗೆ ಇಂದಿರಾ ಗಾಂಧಿ ಅಭಿಮಾನದಿಂದ ವಿವರಿಸುತ್ತಾರೆ.

ಪರಿಸರ ಸಂರಕ್ಷಣೆ ಕಾಯ್ದೆ ತಂದಷ್ಟು ಸುಲಭವಾಗಿರಲಿಲ್ಲ. ಸ್ವಾತಂತ್ರ್ಯ ಬಂದ ಹೊಸತರಲ್ಲಿ, ಜನಗಳು, ಮಹಾರಾಜರು, ಹೊಸದಾಗಿ ಚುನಾಯಿತರಾದ ಸದಸ್ಯರುಗಳಿಗೆ ಅವರದೇ ಆದ ಅಭಿಪ್ರಾಯಗಳಿದ್ದವು. ಭರತ್ ಪುರ ಪಕ್ಷಿಧಾಮಕ್ಕೆ ಕಂಟಕ 1953 ರಲ್ಲೇ, ಅಲ್ಲಿನ ಮಹಾರಾಜನಿಂದ ಶುರುವಾಗಿತ್ತು. ಆಗ ನೆಹರೂ ಪ್ರಧಾನಿಯಾಗಿದ್ದರು. ಅದನ್ನು ರಾಷ್ಟ್ರೀಯ ಉದ್ಯಾನವನವನ್ನಾಗಿ ಘೋಷಿಸಲು, ಇಂದಿರಾ ಗಾಂಧಿ 1982 ರ ವರೆಗೆ ಕಾಯಬೇಕಾಯ್ತು. ಇತ್ತೀಚೆಗೆ ಹುಲಿ ಸಂತತಿ ಕಳ್ಳ ಬೇಟೆಯಿಂದ ನಾಶವಾದ ಸರಿಸ್ಕಾ ಕಾಡನ್ನು ಸಂರಕ್ಷಿಸಲು ಕೂಡ ಇಂದಿರಾ ಗಾಂಧಿ ತುಂಬಾ ಹೆಣಗಬೇಕಾಗಿತ್ತು.

ಪರಿಸರ ಮತ್ತು ಆರ್ಥಿಕೆ ಬೆಳವಣಿಗೆ ಬಗ್ಗೆ ಇಂದಿರಾ ಗಾಂಧಿಗಿದ್ದ ಸಮಚಿತ್ತವನ್ನು ಈ ಪುಸ್ತಕ ಬಹಳ ಚೆನ್ನಾಗಿ ವಿಶ್ಲೇಷಿಸುತ್ತದೆ. ನಮ್ಮ ಜನಸಂಖ್ಯೆ 50 ಕೋಟಿಗೆ ಹತ್ತಿರವಾಗುತ್ತಿದ್ದಾಗಲೇ, ಇಂದಿರಾ ಗಾಂದಿ ಕುಟುಂಬ ಯೋಜನೆ ಜಾರಿಗೊಳಿಸಲು ಆರಂಭಿಸಿದರು. ಅದು ಅಂತಾ ಯಶಸ್ಸೇನೂ ಕೊಡದಿದ್ದರೂ, ಆ ಥರದ ಚಿಂತನೆ ಈಗಿನ ರಾಜಕಾರಣಿಗಳ ಹತ್ತಿರವೂ ಸುಳಿದಿಲ್ಲ. ನಮ್ಮ ಜನಸಂಖ್ಯೆ 125 ಕೋಟಿ ದಾಟಿ, ಮುನ್ನುಗ್ಗುತ್ತಿದೆ. ಯಾವುದೇ ಪಕ್ಷದ ರಾಜಕಾರಣಿಯೂ ಆ ವಿಷಯ ಮಾತನಾಡುತ್ತಿಲ್ಲ. ಪ್ರಾಕೃತಿಕ ಸಂಪತ್ತಿಗೆ ಅನುಗುಣವಾಗಿ ಜನಸಂಖ್ಯೆ ಇದ್ದರೆ ಮಾತ್ರ ಆರ್ಥಿಕ ಸಧೃಡತೆ ಸಾಧ್ಯ ಅನ್ನೋ ಸತ್ಯವನ್ನು, ಜಿಡಿಪಿಯ ಸಂಖ್ಯಾಶಾಸ್ತ್ರದ ಮಿಥ್ಯದ ಕನಸಿನ ಕೆಳಗೆ ಗುಡಿಸುತ್ತಾರೆ. ಯಾಕಂದರೆ, ಜನಸಂಖ್ಯೆ ಎನ್ನುವುದು ಇವರಿಗೆ ಮತ ಸಂಪತ್ತು.

 ಈ ಪುಸ್ತಕವನ್ನೋದುವಾಗ ನನಗನ್ನಿಸಿದ್ದೆನೆಂದರೆ, ಕಾಂಗ್ರೆಸ್ಸಿಗರೂ ಸೇರಿದಂತೆ ಇಂದಿರಾ ಗಾಂಧಿಯನ್ನು ಸಂಪೂರ್ಣವಾಗಿ ಯಾರೂ ಅರ್ಥಮಾಡಿಕೊಳ್ಳಲು ಸಾಧ್ಯವಾಗಿರಲಿಲ್ಲ. ಈ ಪುಸ್ತಕ, ಮಿಥ್ಯಾರೋಪಕ್ಕೊಳಗಾದ ನಾಯಕಿಯೊಬ್ಬಳನ್ನು ಅರ್ಥಮಾಡಿಕೊಳ್ಳಲು ಸಹಕಾರಿಯಾಗುತ್ತದೆ ಮತ್ತು ಅದಕ್ಕಾಗಿ, ಜೈರಾಂ ರಮೇಶರಿಗೆ ಧನ್ಯವಾದಗಳನ್ನು ಅರ್ಪಿಸಬೇಕಾಗಿದೆ.

ಆದರೂ, ಈ ಪುಸ್ತಕದಿಂದಾಗಿ, ಜೈರಾಂ ರಮೇಶರ ಬಗ್ಗೆ ಒಂದು ಪ್ರಶ್ನೆ ಉಧ್ಬವಿಸುತ್ತದೆ. ಜೈರಾಂ ರಮೇಶ್ ರವರೇ ಹೇಳುವಂತೆ, ಅವರ ಇಪ್ಪತ್ತಾರು ತಿಂಗಳ ಮಂತ್ರಿಗಿರಿಯಲ್ಲಿ, ಅವರು ತೀವ್ರ ಆರ್ಥಿಕ ಬೆಳವಣಿಗೆಯ ಹರಿಕಾರನಿಂದ, ಆರ್ಥಿಕ ಬೆಳವಣಿಗೆಯು ಪರಿಸರ ಸಮತೋಲನದ ಪರಿಮಿತಿಯಲ್ಲಿರಬೇಕು ಅನ್ನೋ ವ್ಯಾಖ್ಯಾನಕ್ಕೆ ಇಳಿದರು.  ನಮ್ಮ ದೇಶವು, `ಈಗ ಆರ್ಥಿಕ ಬೆಳವಣಿಗೆ ಗಳಿಸಿ, ಮುಂದೆ ಅದಕ್ಕೆ ಬೆಲೆತೆರಬಹುದು,’ ಅನ್ನೋ ಅಂಧ ವಾದವನ್ನು ಒಪ್ಪಲು ಸಾಧ್ಯವೇ ಇಲ್ಲ. ನಮ್ಮ ದೇಶದಲ್ಲಿ ಆಗಲೇ 124 ಕೋಟಿ ಜನರಿದ್ದಾರೆ ಮತ್ತು ಮುಂದಿನ ಐವತ್ತು ವರ್ಷಗಳಲ್ಲಿ, ಇದಕ್ಕೆ ಇನ್ನೂ ಒಂದನೇ ಮೂರರಷ್ಟು ಜನ ಸೇರಿಕೊಳ್ಳಲಿದ್ದಾರೆ.  ಹವಾಮಾನ ಬದಲಾವಣೆ ಒಂದು ವಿನಾಶಕ ಸತ್ಯ. ಅದು ಮುಂಗಾರು ಮಳೆಯ ಚಕ್ರ, ಹಿಮಗಡ್ಡೆಗಳು ಮತ್ತು ಸಮುದ್ರ ಮಟ್ಟವನ್ನೇ ಬದಲಿಸಿದೆ. ಮಾಲಿನ್ಯ ಮತ್ತು ರಾಸಾಯನಿಕ ಕಲುಷಿತಗಳು ಜನರ ಆರೋಗ್ಯದ ಮೇಲೆ ಪರಿಣಾಮ ಬೀರತೊಡಗಿವೆ.

ಇಷ್ಟೆಲ್ಲಾ ಹೇಳಿದ ಜೈರಾಂ ರಮೇಶ್ ರವರೇ, ಇದೇ ಕಾಂಗ್ರೆಸ್ ಸರ್ಕಾರ, ವನ್ಯಜೀವಿಗಳಿಗೆ ಮಾರಕವಾಗುವ ಬುಡಕಟ್ಟು ಜನಾಂಗ ಹಕ್ಕು ಕಾಯ್ದೆಯನ್ನು ಜಾರಿಗೊಳಿಸುವಾಗ, ನೀವೇಕೆ ಮೌನ ವಹಿಸಿದ್ದಿರಿ? ಬುಡಕಟ್ಟು ಜನಾಂಗದವರಿಗೆ ಪುಸರ್ವಸತಿ ಎನ್ನುವುದು ವರವಾಗುತ್ತಿತ್ತು. ಅದರಿಂದ, ವನ್ಯಜೀವಿಗಳೂ ಬದುಕಿ, ಪರಿಸರ ಸಮತೋಲನವೂ ಆಗುತ್ತಿತ್ತು. ಇಂದಿರಾ ಗಾಂಧಿಯವರ ಎಲ್ಲಾ ಚಿಂತನೆಗಳನ್ನು ಅಂದಿನ ಪ್ರಧಾನ ಮಂತ್ರಿ ಮನಮೋಹನ್ ಸಿಂಘ, ಕಾಂಗ್ರೆಸ್ ನಾಯಕರುಗಳಿಗೆ ವಿವರಿಸಿ, ಅವರಿಗೆ ಪರಿಸ್ಥಿತಿ ಅರ್ಥಮಾಡಿಕೊಡುವ ಪ್ರಯತ್ನ ಮಾಡಿದ್ದೀರಾ?.... ನನಗಂತೂ ಗೊತ್ತಿಲ್ಲ.

1943 ರಲ್ಲಿ, ಅಹ್ಮದ್ ನಗರದ ಜೈಲಿನಲ್ಲಿದ್ದ ಇಂದಿರಾ ಗಾಂಧಿ, ಒಂದು ದೊಡ್ಡ ಬೇವಿನ ಮರ ಬಿದ್ದ ಬಗ್ಗೆ ತಮ್ಮ ತಂದೆ ನೆಹರುರವರಿಗೆ ಹೀಗೆ ಪತ್ರ ಬರೆಯುತ್ತಾರೆ.

`The potent bear whose hug
Was feared by all, is now a rug.’

ಯಾಕೋ ಅನ್ನಿಸಿತು… ಇಂದಿರಾ ಗಾಂಧಿ ಅಸ್ಥೆಯಿಂದ ತಂದ ಎರಡು ಕಾನೂನುಗಳ ಸ್ಥಿತಿಯೂ ಹೀಗೇ ಆಗುತ್ತಿದೆ ಅಂತ. ಆದರೆ, ಕೆಲವೆಡೆ ನ್ಯಾಯಾಂಗ ಮಧ್ಯ ಪ್ರವೇಶ ಮಾಡಿದ್ದರಿಂದ, ಅದರ ಮೂಲ ರೂಪಕ್ಕೆ ಧಕ್ಕೆಯಾಗಿಲ್ಲ ಅಷ್ಟೆ.

ಇಂದಿರಾ ಪ್ರಿಯದರ್ಶಿನಿ, ಇಂದಿರಾ ಗಾಂಧಿಯಾಗಿ ರೂಪುಗೊಂಡಿದ್ದು ನೆಹರು ಪುತ್ರಿಯಾದ್ದರಿಂದಲೂ ಅಲ್ಲ, ಫಿರೋಜ್ ಗಾಂಧಿಯ ಪತ್ನಿಯಾದ್ದರಿಂದಲೂ ಅಲ್ಲ. ಅದು ಆಕೆ ಪ್ರಕೃತಿಯ ಜೊತೆ ಬೆಸೆದುಕೊಂಡು ಬೆಳೆದು ಬದುಕಿದ ರೀತಿಯಿಂದಾಗಿ. ಅದನ್ನು ಸಂರಕ್ಷಿಸಲು ಆಕೆಗಿದ್ದ ಕಳಕಳಿ ಮತ್ತು ಅದಕ್ಕಾಗಿ ಆಕೆಗಿದ್ದ ಛಲ. ಆರ್ಥಿಕ ಬೆಳವಣಿಗೆ ಮತ್ತು ಸಂರಕ್ಷಣೆಯ ಸಮತೋಲನ ಕಾಪಾಡುವ ನಿಟ್ಟಿನಲ್ಲಿ ಆಕೆಗಿದ್ದ ವೈಜ್ಞಾನಿಕ ತಿಳುವಳಿಕೆ. ಈ ವಿಷಯದಲ್ಲಿ, ಯಾವುದೇ ಕೀಳು ರಾಜಕೀಯಕ್ಕೆ ಇಳಿಯದೇ, ಎಲ್ಲೂ ಹೊಂದಾಣಿಕೆ ಮಾಡಿಕೊಳ್ಳದೆ ಆಡಳಿತ ನೆಡೆಸಿದ್ದರಿಂದ.

ಇಂದಿರಾ ಗಾಂಧಿಯ ಸರ್ವಾಧಿಕಾರಿ ಧೋರಣೆಯ ಬಗ್ಗೆ ನನಗೆ ಮೊದಲಿಂದಲೂ ವಿರೋಧವಿತ್ತು. ಆದರೆ, 1969 ರಲ್ಲಿ, ತನ್ನ ಗೆಳತಿ


ಡೊರೋತಿ ನೋರ್ಮನ್ ರಿಗೆ ಬರೆದ ಪತ್ರವನ್ನು ನೋಡಿದ ಮೇಲೆ, ನನ್ನ ವಿಚಾರ ಬದಲಾಯಿತು. ಆ ಪತ್ರವನ್ನು ಇಂಗ್ಲಿಷ್ ನಲ್ಲೇ ಓದಿದರೆ ಉತ್ತಮ.

``Need I assure you that I am not closer to the communist or dictatorship of any kind. Unfortunately, the institution of bossism created a clash. Each state boss came to believe that he was the State. Perhaps because I have tried to be accommodating, they all thought I was weak. The last two years have been of tremendous pressure and difficulty. If it had been a question of myself or my position, it would not have mattered. But the manner in which I was pushed around, with a view to finally pushed me out of office, not only split Congress, but weakened it in long run.’’

ಇಂದಿರಾ ಗಾಂಧಿ ಎತ್ತರದ ವ್ಯಕ್ತಿಯಾಗೇ ಉಳಿಯುತ್ತಾರೆ. ಯಾವ ವಿರೋಧವನ್ನೂ ಲಕ್ಷಿಸದೆ, ಮುಂದಿನ ಪೀಳಿಗೆಗೆ ಏನನ್ನು ಉಳಿಸಬೇಕೆನ್ನುವುದನ್ನು, ಪ್ರಪಂಚ ಮಾತನಾಡುವ ಮೊದಲೇ ಮಾಡಿ ತೋರಿಸಿದ್ದರು.

ಈಗ ನಾನೂ ವಾಜಪೇಯಿಯವರ ಮಾತನ್ನು ಒಪ್ಪುತ್ತೇನೆ. ಆಕೆ ದುರ್ಗೆ…. ಹುಲಿಯ ಮೇಲೆ ಸವಾರಿ ಮಾಡಲಿಲ್ಲ. ಬದಲಾಗಿ, ಹುಲಿಗಳನ್ನು ನಮ್ಮ ಮತ್ತು ನಮ್ಮ ಮಕ್ಕಳ ಪೀಳಿಗೆಗೆ ಉಳಿಸಿದಾಕೆ…..

ಈ ಹೆಂಗಸನ್ನು ಎಷ್ಟೋ ವರ್ಷ ದ್ವೇಶಿಸಿದೆ, ನಂತರ ಗೌರವಿಸಿದೆ, ಈಗ ಪ್ರೀತಿಸಲಾರಂಭಿಸಿದೆ…… ಹುಟ್ಟು ಹಬ್ಬದ 

ಶುಭಾಶಯಗಳು ಇಂದಿರಮ್ಮ……





ಮಾಕೋನಹಳ್ಳಿ ವಿನಯ್ ಮಾಧವ. 

ಬುಧವಾರ, ನವೆಂಬರ್ 1, 2017

ಕನ್ನಡಿಗರು


ನನಗಿಷ್ಟವಾದ ಕನ್ನಡಿಗರು.....

2000 ನೇ ಇಸವಿ... ಮುದುವೆಯಾದ ತಕ್ಷಣ ಅಂಬಿಕಾಳನ್ನು ಕರೆದುಕೊಂಡು, ಕುಲು-ಮನಾಲಿಗೆ. ನಾಲ್ಕೈದು ದಿನ ಸುತ್ತಾಡಿದ ಮೇಲೆ, ಹೊರಡುವ ಹಿಂದಿನ ದಿನ ಊರೊಳಗೆ ಸುತ್ತಾಡಲು ಹೋಗಿದ್ದೆವು. ಒಂದು ಅಂಗಡಿಯಲ್ಲಿ ಅಂಬಿಕಾಳಿಗೆ ಬೌಧ್ದರ ಘಂಟೆಯೊಂದು ಇಷ್ಟವಾಯಿತು.

``ಕಿತನೇಕಾ ಹೈ?’’ ಅಂತ ಕೇಳಿದೆ.

``ತೀನ್ ಸೌ ಅಸ್ಸಿ,’’ ಅಂದಳು ಅಂಗಡಿಯಾಕೆ.

``ಜಾಸ್ತಿಯಾಯ್ತು… ಬೇರೆ ಕಡೆ ಕೊಡಿಸ್ತೀನಿ ಬಿಡು,’’ ಅಂತ ಅಂಬಿಕಾಳಿಗೆ ಹೇಳಿದೆ.

``ಜಾಸ್ತಿಯೇನೂ ಇಲ್ಲ… ಸ್ವಲ್ಪ ಕಡಿಮೆ ಮಾಡಿ ಕೊಡ್ತೀನಿ,’’ ಅಂದಳು, ಅಂಗಡಿಯ ಟಿಬೆಟನ್ ಹೆಂಗಸು.

``ಕೊಪ್ಪನಾ?’’ ಅಂತ ಕೇಳಿದೆ. (ಕುಶಾಲನಗರದಲ್ಲಿ ಬೈಲುಕುಪ್ಪೆಗೆ ಕೊಪ್ಪ ಅಂತ ಕರೀತ್ತಾರೆ)

``ಕೊಪ್ಪ ಗೊತ್ತಾ?’’ ಅಂತ ಹೆಂಗಸು ಕೇಳಿದಳು.

``ನಾ ಹುಟ್ಟಿದ್ದು ಸುಂಟಿಕೊಪ್ಪದಲ್ಲಿ. ಬೆಳೆದದ್ದು ಪಾಲಿಬೆಟ್ಟದಲ್ಲಿ. ಅಮ್ಮನ ಊರು ಸೋಮವಾರಪೇಟೆ,’’ ಅಂತ ಹೇಳಿದೆ.
``ಇನ್ನೂರೈವತ್ತು ಕೊಡಿ ಸಾಕು,’’ ಅಂತ ಘಂಟೆಯನ್ನು ಪೊಟ್ಟಣ ಕಟ್ಟೋಕೆ ಶುರು ಮಾಡಿದಳು.

ನಾನು ದುಡ್ಡು ಕೊಡೋ ಸಮಯದಲ್ಲಿ, ಆ ಹೆಂಗಸಿನ ಗಂಡ ಬಂದು, ಟಿಬೆಟನ್ ಭಾಷೆಯಲ್ಲಿ ಏನೋ ಕೇಳಿದ. ಅವಳ ಉತ್ತರದಿಂದ ಸಿಡಿಮಿಡಿಗೊಂಡ. ಆಕೆ ಕನ್ನಡದಲ್ಲಿ, ``ಅವರು ಸೋಮವಾರಪೇಟೆಯವರು, ನೀ ಸುಮ್ಮನಿರು,’’ ಅಂದಳು. ಗಂಡ ಪೆಚ್ಚಾಗಿ ನಕ್ಕ.

ಅವರಿಬ್ಬರೂ ಹುಟ್ಟಿ, ಬೆಳೆದದ್ದು ಬೈಲುಕುಪ್ಪೆಯಲ್ಲಂತೆ. ಎರಡು ವರ್ಷಗಳ ಹಿಂದೆ ಮನಾಲಿಗೆ ಬಂದು, ಅಂಗಡಿ ತೆರೆದಿದ್ದಾರಂತೆ. ವ್ಯಾಪಾರ ಚೆನ್ನಾಗಿದ್ದರೂ, ಯಾಕೋ ಬೈಲುಕುಪ್ಪೆನೇ ಇಷ್ಟವಂತೆ. ವಾಪಾಸ್ ಹೋಗುವ ಇರಾದೆ ಇದೆ ಅಂತ ಹೇಳಿದರು.

ನಾವೆಲ್ಲ ಕಾಲೇಜ್ ಓದುವಾಗ, ಟಿಬೆಟನ್ ರ ಹತ್ತಿರ, ಶೂ, ಜರ್ಕಿನ್ ಗಳನ್ನು ಕೊಳ್ಳುತ್ತಿದ್ದೆವು. ಆಗ, ವಿದೇಶೀ ಬ್ರಾಂಡ್ ದುಬಾರಿಯಾಗಿದ್ದು, ಟಿಬೆಟನ್ ಮಾಲುಗಳ ಮೇಲೆ ಅವಲಂಬಿತವಾಗಿದ್ದೆವು. ಕೊಡಗು ಜಿಲ್ಲೆಯ, ಯಾವುದೇ ಊರಿನ ಸಂತೆಗಳಲ್ಲೂ ಟಿಬೆಟನ್ ಗಳು ಬರುತ್ತಿದ್ದರು. ನಾನು ನೋಡಿದ ಹಾಗೆ, ಎಲ್ಲರೂ ಕನ್ನಡ ಮಾತನಾಡುತ್ತಿದ್ದರು ಸಹ. ಬೈಲುಕುಪ್ಪೆಯಲ್ಲಂತೂ, ಹಳ್ಳಿಯ ಕನ್ನಡಿಗರು, ಟಿಬೆಟನ್ ರ ಮನೆ ಕೆಲಸಕ್ಕೆ ಹೋಗುತ್ತಿದ್ದರು ಮತ್ತು ಟಿಬೆಟನ್ ಭಾಷೆ ಸಹ ಕಲಿತ್ತಿದ್ದರು.

ಇತ್ತೀಚಿನ ದಿನಗಳಲ್ಲಿ ಟಿಬೆಟನ್ ರ ಜೊತೆ ವ್ಯಾಪಾರ ಮಾಡಿಲ್ಲ ಮತ್ತು ಅವರ ಈಗಿನ ಜೀವನ ಶೈಲಿ ಬಗ್ಗೆ ಅಷ್ಟೇನು ಮಾಹಿತಿಯಿಲ್ಲ.

ಟೈಮ್ಸ್ ಆಫ್ ಇಂಡಿಯಾ ಮತ್ತು ಡೆಕ್ಕನ್ ಕ್ರಾನಿಕಲ್ ಕಛೇರಿಗಳು ರೆಸಿಡೆನ್ಸಿ ರಸ್ತೆಯ ಹತ್ತಿರ ಇದ್ದುದ್ದರಿಂದ, ನಾನು ಸಂತ ಜೋಸೆಫರ ಕಾಲೇಜಿನ ಹತ್ತಿರದ ಸೈನಿಕ ಭವನದಲ್ಲಿದ್ದ ವೈಲ್ಟ್ ಸ್ಪೈಸ್ ಅನ್ನೋ ಹೋಟೆಲ್ ಗೆ, ಆಗಾಗ ಮಧ್ಯಾಹ್ನ ಊಟಕ್ಕೆ ಹೋಗುತ್ತಿದ್ದೆ. ಕೆಲ ಕೊಡಗಿನ ಹುಡುಗರು ಸೇರಿ ನೆಡೆಸುತ್ತಿದ್ದ ಸಣ್ಣ ಹೋಟೆಲ್. ಅಕ್ಕಿ ರೊಟ್ಟಿ, ಪಂದಿ ಕರಿ ಥರದ ಕೊಡಗಿನ ಅಡುಗೆಗಳನ್ನು ಚೆನ್ನಾಗಿ ಮಾಡುತ್ತಿದ್ದರು.

ಅಲ್ಲಿ ಬಹಳ ಇಷ್ಟವಾಗಿದ್ದು, ಸಾಧಾರಣ ಹದಿನೆಂಟು-ಇಪ್ಪತ್ತು ವರ್ಷದ ಈ ಹುಡುಗ ಮನೋಜ್. ಅಲ್ಲಿ ಹಾಕುತ್ತಿದ್ದ ಇಂಗ್ಲಿಷ್ ಹಾಡುಗಳನ್ನು ಆಸಕ್ತಿಯಿಂದ ಕೇಳುತ್ತಿದ್ದ ನನಗೆ, ಎಲ್ಲಾ ಹಾಡುಗಳನ್ನೂ ಪೆನ್ ಡ್ರೈವ್ ಗೆ ಹಾಕಿಕೊಟ್ಟಿದ್ದ. ಒಂದೆರೆಡು ಸಲ ಕಾಣದಿದ್ದಾಗ, ವಿರಾಜಪೇಟೆಗೆ ಹೋಗಿದ್ದಾಗಿ ಹೇಳಿದ್ದ. ಅರಳು ಹುರಿದಂತೆ ಕನ್ನಡ ಮತ್ತು ಕೊಡವ ಭಾಷೆಯನ್ನು ಮಾತನಾಡುತ್ತಿದ್ದರೂ, ಇಂಗ್ಲಿಷ್ ಬಗ್ಗೆ ಅಷ್ಟೇನೂ ಒಲವು ತೋರಿಸುತ್ತಿರಲಿಲ್ಲ.

ಕೊನೆಗೆ ಎಷ್ಟರವರಗೆ ನಮ್ಮ ಸಂಬಂಧ ಬೆಳೆಯಿತೆಂದರೆ, ನಾನು ಎಷ್ಟು ಹೊತ್ತಿಗೆ ಬರುತ್ತೇನೆ ಮತ್ತು ಎಷ್ಟು ಜನ ಬರುತ್ತೇವೆ ಅಂತ ಮನೋಜನಿಗೆ ಫೋನ್ ಮಾಡಿ ಹೇಳಿದರೆ, ಅವನು ಅಷ್ಟು ಅಡುಗೆ ಮಾಡಿಸಿಡುತ್ತಿದ್ದ. ಒಂದು ದಿನ ಊಟವಾದ ಮೇಲೆ ಬಿಲ್ ಕೊಡುವಾಗ, ``ಸರ್, ನಾನೊಂದೆರೆಡು ತಿಂಗಳು ಇರೋದಿಲ್ಲ… ಊರಿಗೆ ಹೋಗಿ ಬರುತ್ತೇನೆ,’’ ಅಂತ ಮನೋಜ್ ಮೆಲ್ಲಗೆ ಹೇಳಿದ.

ಕೊಡಗು ಚೆನ್ನಾಗಿ ಗೊತ್ತಿರುವ ನಾನು, ``ಎಲ್ಲೋ ನಿಮ್ಮೂರು,’’ ಅಂತ ಕೇಳಿದೆ.

``ಅಸ್ಸಾಂ ಸರ್,’’ ಅಂದಾಗ, ಅಷ್ಟು ದಿನ ಕೊಡವರ ಹುಡುಗ ಅಂದುಕೊಂಡಿದ್ದ ನಾನು ದಂಗಾಗಿ ಹೋದೆ.

``ಅಲ್ವೋ… ನಾನು ನಿನ್ನನ್ನ ವಿರಾಜಪೇಟೆಯವನು ಅಂದ್ಕೊಂಡಿದ್ದೆನಲ್ಲೋ? ಇಷ್ಟು ಚೆನ್ನಾಗಿ ಕನ್ನಡ ಮತ್ತು ಕೊಡವ ತಕ್ ಮಾತಾಡ್ತೀಯಲ್ಲ. ಅದು ಹ್ಯಾಗೆ?’’ ಅಂತ ಕೇಳಿದೆ.

``ಬೆಂಗಳೂರಿಗೆ ಬಂದು ಏಳು ವರ್ಷ ಆಯ್ತು ಸರ್. ಆಗಿಂದ ಇವರ ಜೊತೆಯಲ್ಲೇ ಇದ್ದೇನೆ. ತುಂಬಾ ಚೆನ್ನಾಗಿ ನೋಡಿಕೊಂಡಿದ್ದಾರೆ. ಇವರ ಜೊತೆ ಇದ್ದೇ ನಾನು ಕನ್ನಡ, ಕೊಡವ ತಕ್ ಎಲ್ಲಾ ಕಲಿತಿದ್ದು. ಸ್ವಲ್ಪ ದಿನ ಊರಿಗೆ ಹೋಗಿ ಬರಬೇಕು ಸರ್,’’ ಅಂತ ನಕ್ಕ. ಅವನು ಬೇಡ ಅಂದರೂ, ಐನೂರು ರೂಪಾಯಿ ಅವನ ಜೇಬಿನಲ್ಲಿ ತುರುಕಿ, ಬಂದ ಮೇಲೆ ಫೋನ್ ಮಾಡು ಎಂದು ಹೇಳಿದೆ.

ಮನೋಜನ ಫೋನ್ ಬರಲಿಲ್ಲ. ಇದರ ಮಧ್ಯ, ನಮ್ಮ ಕಛೇರಿ ಕೂಡ ಕೋರಮಂಗಲಕ್ಕೆ ಸ್ಥಳಾಂತರವಾಯಿತು. ಒಂದೆರೆಡು ಸಲ ಹೋಟೆಲ್ ಗೆ ಹೋದಾಗ, ಅದು ಮುಚ್ಚಿತ್ತು. ಅಲ್ಲಿಂದ ಮುಂದೆ, ಆ ಹೋಟೆಲ್ ಕಡೆಗೆ ಹೋಗಲಿಲ್ಲ. ಒಂದು ಸಲ ಮನೋಜನಿಗೆ ಫೋನ್ ಮಾಡಲು ಪ್ರಯತ್ನಿಸಿದರೆ, ಈ ಸಂಖ್ಯೆ ಅಸ್ತಿತ್ವದಲ್ಲಿಲ್ಲ ಎಂದು ಬಂತು.

ರಾತ್ರಿ ಮನೆಗೆ ಹೋಗುವಾಗ, ಯಾವಾಗಾದರೊಮ್ಮೆ, ಸೌತ್ ಎಂಡ್ ಸರ್ಕಲ್ ಹತ್ತಿರ ಇರೋ ವಿಜಯ ಕಾಲೇಜಿನ ಎದುರು ಇರುವ ಹೌಸ್ ಆಫ್ ಕಬಾಬ್ ನಿಂದ ಏನಾದರೂ ಕಟ್ಟಿಸಿಕೊಂಡು ಹೋಗುತ್ತೇನೆ. ಏನು ಬೇಕು ಅಂತ ಹೇಳಿ, ಹದಿನೈದು ನಿಮಿಷವಾದರೂ ಕಾಯಬೇಕಾಗುತ್ತದೆ. ಒಂದು ಸಲ ಸಿಗರೇಟ್ ಖಾಲಿಯಾಗಿತ್ತು. ಪಕ್ಕದಲ್ಲೇ ಒಂದು ಡಬ್ಬಿ ಅಂಗಡಿ ಇಟ್ಟುಕೊಂಡವನಿಗೆ, ಒಂದು ಪ್ಯಾಕ್ ಕ್ಲಾಸಿಕ್ ಮೈಲ್ಟ್ ಕೊಡು, ಎಂದೆ.

ದುಡ್ಡು ಕೊಟ್ಟಾಗ, ``ಸರ್, ಇಪ್ಪತ್ತು ರೂಪಾಯಿ ಚಿಲ್ಲರೆ ಇದೆಯಾ,’’ ಅಂತ ಕೇಳಿದ.

ಇಪ್ಪತ್ತು ರೂಪಾಯಿ ಕೊಡುತ್ತಾ, ``ಪರವಾಗಿಲ್ಲ ಕಣಯ್ಯ ನೀನು. ಬೆಂಗಳೂರಿನಲ್ಲಿ, ಸಿಗರೇಟ್ ಮತ್ತು ಬೀಡಾ ಮಾರೋ ವ್ಯಾಪಾರನ ಉತ್ತರ ಪ್ರದೇಶದವರು ಬಂದು ಆಕ್ರಮಿಸಿಕೊಂಡಿದ್ದಾರೆ. ನೀನೊಬ್ಬ ಕನ್ನಡಿಗ ಅವರ ಮಧ್ಯ ಬದುಕುಳಿದಿದ್ದೀಯಲ್ಲಾ?’’ ಅಂತ ಹೇಳಿದೆ.

``ಸಾರ್, ನಾನೂ ಸಹ ಉತ್ತರ ಪ್ರದೇಶದವನು,’’ ಅಂತ ತಣ್ಣಗೆ ಹೇಳಿದ. ನಾನು ಪೆಚ್ಚಾದೆ.

``ಎಷ್ಟು ವರ್ಷ ಆಯ್ತು ಇಲ್ಲಿ ಬಂದು?’’ ಅಂತ ಕೇಳಿದೆ.

``ಎರಡು ವರ್ಷ ಸರ್,’’ ಅಂದ.

``ಇಷ್ಟು ಚೆನ್ನಾಗಿ ಕನ್ನಡ ಮಾತಾಡ್ತೀಯಲ್ಲಪ್ಪಾ?’’ ಅಂದೆ.

``ಬೆಳಗ್ಗೆ ಹೊತ್ತಲ್ಲಿ ಗಿರಾಕಿಗಳು ಕಡಿಮೆ ಇರ್ತಾರೆ. ಆಚೀಚಿನ ಅಂಗಡಿಯವರ ಜೊತೆ ಕನ್ನಡ ಮಾತಾಡಿ ಕಲಿತೆ. ಬಂದವರಲ್ಲಿ ಕಡಿಮೆ ಜನ ನನ್ನನ್ನು ಕನ್ನಡದಲ್ಲಿ ಮಾತಾಡಿಸೋದು ಸರ್. ನಾನೂ ನೋಡ್ತೀನಿ. ಅವರಿಗೆ ಕನ್ನಡ ಬರುತ್ತೆ ಅಂದರೆ, ನಾನೂ ಕನ್ನಡ ಮಾತಾಡ್ತೀನಿ. ಅವರಿಗೆ ಬರದೇ ಹೋದರೆ, ಹಿಂದಿಯಲ್ಲಿ ಮಾತಾಡ್ತೀನಿ. ಕನ್ನಡದಲ್ಲಿ ಮಾತಾಡೋಕೆ ಖುಶಿಯಾಗುತ್ತೆ ಸರ್,’’ ಅಂದ.

ಈಗಲೂ ಒಮ್ಮೊಮ್ಮೆ ಅವನನ್ನು ನೋಡ್ತಾ ಇರ್ತೀನಿ. ಸಿಗರೇಟ್ ಇಲ್ಲದೇ ಹೋದರೆ, ಅವನ ಬಳಿ ಕೊಂಡು ಕೊಳ್ಳುತ್ತೇನೆ. ಇದ್ದರೆ, ಮುಗುಳ್ನಕ್ಕು ಮುಂದೆ ಹೋಗ್ತೀನಿ. ಹೊರಗಡೆಯಿಂದ ಬಂದ ಜನ ಕನ್ನಡ ಮಾತಾನಾಡುವುದಿಲ್ಲ ಅಂತ ಬೊಬ್ಬೆ ಹೊಡೆಯುವವರನ್ನು ನೋಡಿದಾಗ, ನಮ್ಮವರು ಎಷ್ಟು ಜನ ಅಭಿಮಾನದಿಂದ ಕನ್ನಡ ಮಾತನಾಡುತ್ತಾರೆ ಅನ್ನೋ ಪ್ರಶ್ನೆ ಮೂಡುತ್ತದೆ. ಇದನ್ನೇ ಉತ್ತರ ಪ್ರದೇಶದ ಸಿಗರೇಟ್ ಮಾರುವ ಹುಡುಗ ನನಗೆ ಹೇಳಿದ್ದು…. ಕನ್ನಡ ಬರುವವರೂ ಹಿಂದಿಯಲ್ಲಿ ಕೇಳ್ತಾರೆ ಅಂತ. ಸಣ್ಣ, ಪುಟ್ಟ ವ್ಯಾಪಾರಿಗಳ ಹತ್ತಿರ ನಾವು ಕನ್ನಡದಲ್ಲಿ ಮಾತನಾಡಿದರೆ, ಅವರು ಎಲ್ಲಿಂದ ಬಂದವರಾದರೂ ಕನ್ನಡ ಕಲಿತೇ ಕಲಿಯುತ್ತಾರೆ ಅಂತ ನನಗೆ ಅನ್ನಿಸಿತು.

ರಾಜ್ಯೋತ್ಸವದ ಅಸಂಖ್ಯಾತ ಶುಭಾಷಯಗಳು ವಾಟ್ಸಪ್, ಫೇಸ್ ಬುಕ್ ಗಳಲ್ಲಿ ಹರಿದು ಬರುವಾಗ, ಯಾಕೋ ಈ ಮೂರು ಜನರ ಮುಖ ಕಣ್ಣ ಮುಂದೆ ಬಂದಂತಾಯಿತು.



ಮಾಕೋನಹಳ್ಳಿ ವಿನಯ್ ಮಾಧವ


ಗುರುವಾರ, ಸೆಪ್ಟೆಂಬರ್ 7, 2017

ಕಾಡುವ ತೇಜಸ್ವಿ

ನಿರುತ್ತರ………

`ಸರ್, ತೇಜಸ್ವಿಯವರು ಹೋಗಿಬಿಟ್ರಂತೆ’ ಅಂತ ಫೋನ್ ನಲ್ಲಿ ಆ ಕಡೆಯಿಂದ ಸ್ವರ ಬಂದಾಗ, ನನ್ನ ಕಾರು ಕೃಷ್ಣಗಿರಿ ದಾಟಿ, ಚೆನೈ ಕಡೆಗೆ ಧಾವಿಸುತ್ತಿತ್ತು. ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿ ಹಾಗೇ ಕೂತೆ.
`ಒಂದು ಗುಡ್ ಬೈನೂ ಇಲ್ಲ…. ಹೋಗಿಬಿಟ್ರಾ?’, ಅಂತ ಅನ್ನಿಸ್ತು.
ಗುಡ್ ಬೈ ಹೇಳೋಕೆ ಅವ್ರೇನಾದ್ರೂ ಊರಿಗೆ ಹೋಗ್ತಿದ್ರಾ? ಅಥವಾ ನಾನೇನು ಅವರ ಸಂಬಂಧಿಕನಾ? ಅವರ ಅಸಂಖ್ಯಾತ ಅಭಿಮಾನಿಗಳಲ್ಲಿ ನಾನೂ ಒಬ್ಬ, ಅಷ್ಟೆ. ನಾಲ್ಕಾರು ಸಲ ಭೇಟಿ ಮಾಡಿದ ತಕ್ಷಣ ಯಾಕೆ ಹೀಗೆ ಯೋಚನೆ ಮಾಡ್ತಿದ್ದೀನಿ? ಅನ್ನಿಸ್ತು.
ಸ್ವಲ್ಪ ದಿನದ ಹಿಂದೆ ಫೋನ್ ಮಾಡಿದಾಗ, ಮೈ ಪೂರ್ತಿ ಅಲರ್ಜಿ ಆಗಿದೆ ಮಾರಾಯ. ಯಾವುದೋ ಕೇರಳದ ಎಣ್ಣೆ ಟ್ರೈ ಮಾಡಿದ್ದೆ. ಮೈಸೂರಲ್ಲಿ ಆಸ್ಪತ್ರೆಯಲ್ಲಿ ಬೇರೆ ಇರಬೇಕಾಯ್ತು, ಅಂತ ಹೇಳಿದ್ರು. ಅದನ್ನು ಬಿಟ್ಟರೆ, ಯಾವುದೇ ತೊಂದರೆ ಇದ್ದಂತೆ ಕಾಣಿಸಲಿಲ್ಲ.
ವಾಪಾಸ್ ಮೂಡಿಗೆರೆಗೆ ಹೊರಡಲಾ? ಅಂತನೂ ಯೋಚನೆ ಮಾಡಿದೆ. ಹೋಗಿ ಏನು ಮಾಡುವುದು ಅನ್ನೋದು ಅರ್ಥ ಆಗಲಿಲ್ಲ. ನೂರಾರು ಅಭಿಮಾನಿಗಳು, ರಾಜಕಾರಣಿಗಳ ಮಧ್ಯ ನನಗೇನು ಕೆಲಸ ಅಂತಾನೂ ಅನ್ನಿಸ್ತು. ತೆಪ್ಪಗೆ ಚೆನೈ ಕಡೆಗೆ ಹೋದೆ.
ಊರಿಗೆ ಹೋದಾಗ ನಾಲ್ಕಾರು ಭಾರಿ ತೇಜಸ್ವಿಯವರ ಮನೆಗೂ ಹೋಗಿದ್ದೆ. ಹಾಗಾಗಿ, ನಾನು ಫೋನ್ ಮಾಡಿದ ತಕ್ಷಣ, ಎಲ್ಲಿದ್ದೀಯಾ? ಅಂತ ಕೇಳುತ್ತಿದ್ದರು. ಊರಿಗೆ ಬಂದಿದ್ದೇನೆ, ನಿಮ್ಮ ಮನೆಗೆ ಬರ್ತೀನಿ ಅಂದರೆ, `ಅಲ್ಲಾ ಮಾರಾಯ… ನೀವು ಬೆಂಗಳೂರಿನಲ್ಲಿರೋರಿಗೆ ತಲೇಲಿ ಏನಿದೆ ಅಂತೀನಿ? ನಿಮಗ್ ಮಾಡಾಕೆ ಕೆಲ್ಸ ಇಲ್ಲಾ ಅಂದ್ರೆ, ನಂಗೂ ಇಲ್ವಾ? ಇಲ್ಲಿ ಬಂದು ನನ್ನ ತಲೆ ತಿನ್ಬೇಡ,’ ಅಂತ ಮುಖಕ್ಕೆ ಹೊಡೆದಂತೆ ಹೇಳ್ತಿದ್ರು.
ಭಂಡಗೆಟ್ಟ ನಾನು, `ಸಾರ್, ಸಾಯಂಕಾಲ ದಾರದಹಳ್ಳಿಗೆ ಹೋಗ್ತಿದ್ದೀನಿ. ದಾರಿಲಿ ನಿಮ್ಮ ಮನೆಗೆ ಬಂದು ಹೋಗ್ತೀನಿ. ಮೂರುವರೆ, ನಾಲ್ಕು ಘಂಟೆಗೆ ಬರ್ತೀನಿ,’ ಅಂದರೆ, `ಅಯ್ಯೊಯ್ಯೊ, ಅಷ್ಟೊತ್ತಿಗೆ ಬರ್ಬೇಡ ಮಾರಾಯ. ಐದು ಘಂಟೆ ಮೇಲೆ ಬಾ… ಹತ್ತೇ ನಿಮಿಷ, ಆಯ್ತಾ? ನಂಗೆ ತುಂಬಾ ಕೆಲಸ ಇದೆ,’ ಅನ್ನುತ್ತಿದ್ದರು. ಹತ್ತು ನಿಮಿಷದೊಳಗೆ ಅವರ ಮನೆ ಬಿಟ್ಟ ಉದಾಹಾರಣೆಗಳಿಲ್ಲ. ಒಂದೆರೆಡು ಸಲ, ನಾಲ್ಕೈದು ಘಂಟೆ ಸಹ ಕಳೆದಿದ್ದೇನೆ.
ತೇಜಸ್ವಿಯವರು ತೀರಿ ಹೋದ ಒಂದೆರೆಡು ವರ್ಷ, ಅವರ ಪುಸ್ತಕ ಮತ್ತೆ ಮತ್ತೆ ತಿರುವಿ ಹಾಕುವಾಗ ಏನೋ ಕಳೆದು ಹೋದಂತೆ ಭಾಸವಾಗುತ್ತಿತ್ತು. ಆನಂತರ, ತೇಜಸ್ವಿಯವರು ಇಲ್ಲ ಅನ್ನೋದು  ಅಭ್ಯಾಸವಾಗಿಹೋಯಿತು.
ಮೂರ್ನಾಲ್ಕು ವರ್ಷದ ಹಿಂದೆ ಮಳೆಗಾಲದಲ್ಲಿ ಊರಿಗೆ ಹೋದಾಗ ಹಾಗೇ ಕೊಟ್ಟಿಗೆಹಾರದ ಸಮೀಪ ಮಲಯಮಾರುತಕ್ಕೆ ಒಂದು ಡ್ರೈವ್ ಹೋದೆ. ಅದರ ಪಕ್ಕದಲ್ಲೇ ಸರ್ಕಾರ ತೇಜಸ್ವಿಯವರ ಹೆಸರಿನಲ್ಲಿ ಜೀವಿ ವೈವಿಧ್ಯ ಸಂಶೋಧನಾ ಕೇಂದ್ರ ಸ್ಥಾಪಿಸಲು ಜಾಗ ನೀಡಲು ನಿರ್ಧಾರ ಮಾಡಿದ್ದು ನೋಡಿದಮೇಲೆ ಯಾಕೋ ಮತ್ತೆ ಕಾಡತೊಡಗಿದರು. ತೇಜಸ್ವಿಯವರ ವಿಷಯ ನಾನು ಹೆಚ್ಚು ಮಾತನಾಡುವುದು ಕೆಂಜಿಗೆ ಪ್ರದೀಪ್ ರವರ ಜೊತೆ ಮಾತ್ರ. ಅವತ್ತು ಫೋನ್ ಮಾಡಿದರೂ, ಮಾತನಾಡಲು ಆಗಲಿಲ್ಲ.
ಒಂದೆರೆಡು ತಿಂಗಳ ಬಳಿಕ ಮತ್ತೆ ಪ್ರದೀಪ್ ಗೆ ಫೋನ್ ಮಾಡಿ, ನಾನು ಮಲಯ ಮಾರುತಕ್ಕೆ ಹೋಗಿದ್ದು ಹೇಳಿದೆ. `ತುಂಬಾ ಚೆನ್ನಾಗಿತ್ತು ಪ್ರದೀಪಣ್ಣ.. ತೇಜಸ್ವಿ ಇದ್ದಿದ್ರೆ, ಅಲ್ಲೇ ಎರಡು ಕಥೆ ಬರೀತಿದ್ರು ಅನ್ನಿಸ್ತಿದೆ,’ ಅಂದೆ.
`ಇರಬಹುದು… ನನ್ನ ಪ್ರಕಾರ, ತೇಜಸ್ವಿ ಬರೆಯೋದು ತುಂಬಾ ಇತ್ತು ನೋಡಿ. ಅವ್ರು ಇಷ್ಟ ಬಂದಾಗ ಬರೆಯೋರು, ಫೋಟೋ ತೆಗೆಯೋರು, ಪೇಂಟಿಂಗ್ ಮಾಡೋರು ಇಲ್ದೆ ಹೋದ್ರೆ, ಮೀನು ಹಿಡಿಯೋರು. ಅವರಿಗೆ ಮೀನು ಹಿಡಿಯೋದ್ರ ಬಗ್ಗೆ ಒಂದು ಪುಸ್ತಕ ಬರೀಬೇಕೂಂತ ತುಂಬಾ ಇಷ್ಟ ಇತ್ತು. ನನ್ನ ಹತ್ರ ತುಂಬಾ ಸಲ ಹೇಳಿದ್ರು,’ ಅಂದ್ರು ಪ್ರದೀಪ್.
`ಮತ್ಯಾಕೆ ಬರೀಲಿಲ್ಲ. ಅವ್ರಿಗೇನು ಅದನ್ನ ಬರೆಯೋದು ಕಷ್ಟ ಆಗ್ತಿರ್ಲಿಲ್ಲ ಅಲ್ವಾ?’ ಅಂದೆ.
`ಅವ್ರು ಯಾವುದೇ ಪುಸ್ತಕ ಬರೆಯೋಕೆ ಮುಂಚೆ ತುಂಬಾ ರಿಸರ್ಚ್ ಮಾಡ್ತಿದ್ರು. ಪ್ರತೀ ಸಲ ಮೀನು ಹಿಡಿಯೋಕೆ ಹೋದಾಗಲೂ, ಏನಾದ್ರು ಒಂದು ಹೊಸ ವಿಷಯ ಹಿಡ್ಕೊಂಡು ಬರ್ತಿದ್ರು. ಸುಮಾರು ಪುಸ್ತಕಗಳನ್ನು ಓದಿದ್ರು. `ಹೆಮಿಂಗ್ವೆ ಬರೆದ ಓಲ್ಡ್ ಮ್ಯಾನ್ ಆಂಡ್ ದಿ ಸೀ’ ಅವರ ಮೇಲೆ ತುಂಬಾ ಪರಿಣಾಮ ಬೀರಿತ್ತು. ಎಷ್ಟೋ ಸಲ ನನ್ನ ಹತ್ರಾನೇ ಹೇಳಿದ್ರು.. ನೋಡಿ ಪ್ರದೀಪ್, ಬರೆದ್ರೆ ಅಂತ ಪುಸ್ತಕ ಬರೀಬೇಕು, ಅಂತ. ಹಾಗಾಗೇ ಅವರು ಮೀನು ಹಿಡೀವಾಗ ತುಂಬಾ ಎಕ್ಸ್ ಪರಿಮೆಂಟ್ ಮಾಡ್ತಿದ್ರು,’ ಅಂದರು.
`ನೀವು ಓದಿದ್ರಾ ಆ ಪುಸ್ತಕ?’ ಅಂತ ನನ್ನನ್ನು ಕೇಳಿದಾಗ, ನಾನು ಹೆಮಿಂಗ್ವೆಯ ಯಾವುದೇ ಪುಸ್ತಕ ಓದಿಲ್ಲ ಅಂತ ಹೇಳಿದೆ. `ಅದನ್ನ ಓದಬೇಕು ಕಣ್ರಿ. ಸಣ್ಣ ಪುಸ್ತಕ… ಅದಕ್ಕೆ ನೊಬೆಲ್ ಬಂದಿತ್ತು. ಮತ್ತೆ ಮತ್ತೆ ಓದಿಸುತ್ತೆ,’ ಅಂದರು.
`ಮತ್ತಿನ್ನೇನು ಬರೀಬೇಕು ಅಂತಿದ್ರೂ,’ ಅಂತ ಮೆಲ್ಲಗೆ ಕೇಳಿದೆ.
`ಅದನ್ನ ಹೇಳೋದು ಕಷ್ಟ ಕಣ್ರಿ. ಅವ್ರಿಗೆ ತುಂಬಾ ವಿಷಯಗಳಲ್ಲಿ ಆಸಕ್ತಿ ಇತ್ತು. ಅವರ ಇಷ್ಟವಾದ ಸಬ್ಜೆಕ್ಟ್ ಅಂದ್ರೆ ಫಿಸಿಕ್ಸ್ ಮತ್ತು ಮೆಟಾ ಫಿಸಿಕ್ಸ್ ನಲ್ಲಿ ತುಂಬಾ ಆಸಕ್ತಿ ಇತ್ತು. ಅದಷ್ಟೇ ಅಲ್ಲ. ಅವರು ಸೃಷ್ಟಿಯ ಮೂಲವನ್ನೇ ಹುಡುಕೋಕೆ ಹೊರಟಿದ್ದರು ಅಂತ ಕಾಣುತ್ತೆ. ನನಗೆ ಅರ್ಥವಾಗಿರೋ ಹಾಗೆ ಹೇಳಿದ್ರೆ…. ಅದೇ ಸರಿ ಅಂತಲ್ಲ.. ಅದು ನಾನು ಅರ್ಥ ಮಾಡಿಕೊಂಡ ರೀತಿ ಅಷ್ಟೆ. ಅವ್ರು ಒಂದು ಸೀರೀಸ್ ಆಫ್ ಪುಸ್ತಕಗಳಲ್ಲಿ ಇವೆಲ್ಲವನ್ನೂ ಹೊರಗೆ ತರಬೇಕೂಂತ ಇದ್ದರು ಅನ್ನಿಸುತ್ತೆ. ಅದು ಕನ್ನಡದ ಪುಸ್ತಕಗಳಲ್ಲೇ ವಿಭಿನ್ನವಾಗಿರಬೇಕು ಅಂತ ಅವರಿಗಿತ್ತು ಅಂತ ಕಾಣಿಸುತ್ತೆ. ಮಾಯಾ ಲೋಕ ಪುಸ್ತಕವನ್ನೇ ನೋಡಿ, ಅದರ ಲೇ ಔಟ್, ಪ್ರಿಂಟಿಂಗ್ ಫಾಂಟ್, ಎಲ್ಲಾ ಬೇರೆ ಥರಾನೇ ಇದೆ. ಅದರ ಭಾಗ 2, 3, 4… ಹೀಗೇ ಎಷ್ಟು ಹೋಗ್ತಿತ್ತು ಅಂತಾನೂ ಗೊತ್ತಿಲ್ಲ. ಬಹುಶಃ, ಅದರಲ್ಲಿ ಇವೆಲ್ಲ ಬರ್ತಿತ್ತು ಅಂತ ಕಾಣುತ್ತೆ. ಅಥವಾ, ನಾನು ಹಾಗೆ ಅರ್ಥ ಮಾಡಿಕೊಂಡಿದ್ದೀನಿ,’ ಅಂದರು.
`ಪ್ರದೀಪಣ್ಣ… ಈ ಮಾಯಾ ಲೋಕ ನಂಗೆ ಸರಿಯಾಗಿ ಅರ್ಥವಾಗ್ಲಿಲ್ಲ. ಅದಕ್ಕೆ ಬೇರೆಯವರ ಒಪೀನಿಯನ್ ಕೇಳಿದ್ದೆ. ಕೆಲವರು ಅಂದ್ರು ಇದು ಕಾವೇರಿ ವಿವಾದ ಮನಸ್ಸಲ್ಲಿಟ್ಟುಕೊಂಡು ಬರೆದ ಹಾಗಿದೆ ಅಂತ. ಇನ್ನು ಕೆಲವರಿಗೆ, ಇದು ಕಿರಗೂರಿನ ಗಯ್ಯಾಳಿಗಳು ಕಥೆಯ ಮುಂದುವರೆದ ಭಾಗ ಅನ್ನಿಸ್ತು,’ ಅಂತ ಕೇಳಿದೆ.
 `ಕಾವೇರಿ ವಿವಾದ ಅನ್ನೋದು ನಾನು ಒಪ್ಪೋದಿಲ್ಲ. ಕಿರುಗೂರಿನ ಗಯ್ಯಾಳಿಗಳು ಅನ್ನೋದು ಒಂದು ಥರದಲ್ಲಿ ಇರಬಹುದೇನೋ. ನಾನು ಅರ್ಥ ಮಾಡಿಕೊಂಡಿರೋದೇ ಬೇರೆ ಥರ. ಈಗ, ಮಾಯಾ ಲೋಕ ಒಂದು ಹೂವಿನ ಎಸಳಿದ್ದ ಹಾಗೆ. ಅದರ ಮುಂದಿನ ಭಾಗಗಳೆಲ್ಲ ಇನ್ನೆಲ್ಲಾ ಎಸಳುಗಳು. ಎಲ್ಲೋ ಒಂದು ಕಡೆಗೆ ಸೇರಿ, ಪೂರ್ತಿ ಹೂವಾಗುತ್ತೆ. ಆಮೇಲೆ, ಪೂರ್ತಿ ಗಿಡವನ್ನೂ ಮಾಡುವ ಹೊತ್ತಿಗೆ, ಇನ್ನಷ್ಟು ವಿಷಯಗಳು ಬಂದು ಸೇರಿರುತ್ತವೆ. ಕೊನೆಗೆ ಮರ ಗಿಡಗಳು, ಬೆಟ್ಟ ಗುಡ್ಡಗಳು ಎಲ್ಲಾ ಸೇರಿ ಕಾಡಾಗುವಾಗ, ಸೃಷ್ಟಿಯ ಎಲ್ಲಾ ವಿಷಯಗಳೂ ಅದರಲ್ಲಿ ಚರ್ಚೆಯಾಗಬೇಕು ಅನ್ನೋದು ಅವರ ವಿಚಾರ ಇತ್ತು ಅಂತ ಕಾಣುತ್ತೆ. ಅವರಿಗೆ ಫಿಲಾಸಫಿಯಲ್ಲೂ ಆಸಕ್ತಿಯಿತ್ತು. ಇನ್ನೊಂದು ಪುಸ್ತಕ ಅವರು ಹೇಳ್ತಿದ್ದಿದ್ದು… ಆರ್ಟ್ ಆಫ್ ಮೋಟಾರ್ ಸೈಕಲ್ ಮೇಂಟೇನೆನ್ಸ್ ಅಂತೇನೋ ಬರುತ್ತೆ…’ ಅಂತ ಪ್ರದೀಪ್ ಹೇಳುವಾಗ, ನಾನು ಮಧ್ಯ ಬಾಯಿ ಹಾಕಿ, `ಜೆನ್ ಆಂಟ್ ಮೋಟಾರ್ ಸೈಕಲ್ ಮೇಂಟೇನೆನ್ಸ್.. ರಾಬರ್ಟ್. ಎಂ. ಪ್ರಿಸಿಗ್ ಬರೆದದ್ದು. ಅವನು ಲೀಲಾ ಅಂತ ಇನ್ನೊಂದು ಪುಸ್ತಕ ಬರೆದಿದ್ದಾನೆ. ತುಂಬಾ ಚೆನ್ನಾಗಿವೆ,’ ಅಂತ ಹೇಳಿದೆ.
`ಕರೆಕ್ಟ್… ಅದೇ ನೋಡಿ. ಅವರು ಕೊನೆಯಲ್ಲಿ ಸೃಷ್ಟಿ ಮತ್ತು ಸತ್ಯ ಅನ್ನೋದನ್ನ ವೈಜ್ಞಾನಿಕವಾಗಿ ಬರೆಯೋಕೆ ಯೋಚಿಸಿದ್ರು ಅನ್ನಿಸುತ್ತದೆ’, ಅಂದಾಗ, ನನಗೆ ಫಕ್ಕನೆ ನಗು ಬಂದು, ಏನು ಬುದ್ದ ಆಗೋಕೆ ಹೊರಟಿದ್ರಾ? ಅಂತ ಕೇಳೋಕೆ ನಾಲಿಗೆ ತುದಿಯವರೆಗೆ ಬಂದಿತ್ತು. ಆದರೆ, ಪ್ರದೀಪ್ ರವರ ಮಾತಿನ ಲಹರಿ ಮುಗಿದಿರಲಿಲ್ಲ.
`ಬರವಣಿಗೆಗಳಿಗೆ ವೈಜ್ಞಾನಿಕ ತಳಹದಿ ಇರಬೇಕು ಅನ್ನೋದು ಅವರ ವಾದವಾಗಿತ್ತು. ಅದನ್ನು ಬರವಣಿಗೆ ರೂಪದಲ್ಲಿ ತರುವುದು ಕಷ್ಟ ಅಂತ ನಮಗೆ ಅನ್ನಿಸಿದ್ದರೂ, ಆ ದಿಕ್ಕಿನಲ್ಲಿ ಅವರು ಪ್ರಯತ್ನ ಮಾಡುತ್ತಿದ್ದರು.  ಇದರಲ್ಲಿ ಕಾಲಮಾನ, ಫಿಸಿಕ್ಸ್, ಬಾಹ್ಯಾಕಾಶ, ಜೀವರಾಶಿ ಎಲ್ಲವನ್ನೂ ಸೇರಿಸಿ, ಮನುಷ್ಯನ ಚಿಂತನೆಗಳಿಗೆ ಒಂದು ಅರ್ಥ ಹುಡುಕೋ ಪ್ರಯತ್ನದಲ್ಲಿದ್ರು, ಅಂತ ಅನ್ನಿಸ್ತದೆ,’ ಅಂದರು.
`ಹಾಗಾದ್ರೆ, ಅವರಿಗೆ ಸ್ಟೀಫನ್ ಹಾಪ್ಕಿನ್ಸ್ ನ `ಎ ಬ್ರೀಫ್ ಹಿಸ್ಟರಿ ಆಫ್ ಟೈಮ್’ ಕೂಡ ತುಂಬಾ ಇಷ್ಟದ ಪುಸ್ತಕ ಅಂತ ಕಾಣುತ್ತೆ,’ ಅಂತ ಕೇಳಿದೆ.
`ಅದನ್ನ ಅವ್ರು ಯಾವ ಕಾಲದಲ್ಲೋ ಓದಿ ಮುಗಿಸಿದ್ದರು. ಆ ಪುಸ್ತಕ ಬಂದಾಗಲೇ, ಅವರು ಜರ್ಮನಿಯಿಂದ ಪುಸ್ತಕ ತರಿಸಿ ಓದಿದ್ದರು. ನನಗೆ ಸುಮಾರು ಸಲ ಅದನ್ನ ಕನ್ನಡಕ್ಕೆ ಅನುವಾದ ಮಾಡಲಿಕ್ಕೆ ಹೇಳಿದ್ರು. ಅದನ್ನ ಹ್ಯಾಗ್ರೀ ಕನ್ನಡದಲ್ಲಿ ಬರೆಯೋದು?,’ ಅಂತ ನಕ್ಕರು.
ತಲೆ ಗಿಮ್ಮೆನ್ನಲು ಶುರುವಾಯ್ತು. ಯಾಕೋ ತೇಜಸ್ವಿ ಮತ್ತೆ ಕಾಡಲು ಶುರು ಮಾಡಿದರು. ಮತ್ತೆ ಮಾಯಾ ಲೋಕ ಕೈಗೆತ್ತಿಕೊಂಡೆ. ಮಾಯಾಲೋಕದ ಕೊನೆ ಪುಟಕ್ಕೆ ಬರುವ ಹೊತ್ತಿಗೆ ಏನೋ ಹೊಳೆದಂತಾಯಿತು. `ಅಣ್ಣಪಣ್ಣ ಇದು ಬಸವನಗುಂಡಿ ಹತ್ರ ಹೇಮಾವತಿ ನದಿ ಸೇರುತ್ತದೆ ಅಂತ ಅಂದಾಜು ಮಾಡಿದ್ದ. ಆದರೆ, ಆ ಕುರುಚಲು ಕಾಡಿನಲ್ಲಿ ನೆಡೆಯುತ್ತಾ ನನಗೆ ನಿದಾನವಾಗಿ ಅನುಮಾನ ಶುರು ಆಯ್ತು. ಏಕೆಂದರೆ, ಈ ಹಳ್ಳ ಹೇಮಾವತಿ ನದಿಗೆ ಸಂಪೂರ್ಣ ವಿರುದ್ದ ದಿಕ್ಕಿನಲ್ಲಿ ಹರಿಯುತ್ತಿದೆ!’.
ಹೌದು, ಇದು ಮಹಾನದಿ ನೈಲ್ ಮೂಲ ಹುಡುಕಲು ಹೊರಟವರಿಗೆ ಉಂಟಾದ ಜಿಜ್ಞಾಸೆ! ಹಾಗಾದರೆ, ಇದು ಕಿರುಗೂರಿನ ಗಯ್ಯಾಳಿಯೂ ಅಲ್ಲ, ಕಾವೇರಿ ವಿವಾದವನ್ನು ಗುರಿ ಇಟ್ಟುಕೊಂಡು ಬರೆದದ್ದೂ ಅಲ್ಲ .... ನದೀ ಮೂಲಗಳಲ್ಲಿ ನೆಡೆಯುವ ಪ್ರಾಕೃತಿಕ ವೈಶಿಷ್ಟ್ಯಗಳು... ಮುಂದೆ? ಅದಕ್ಕೆ ಭಾಗ ಎರಡು ಬರಲೇ ಇಲ್ಲವಲ್ಲ!
ಅಲ್ಲಿಂದ ಪ್ರತೀ ಪುಸ್ತಕಕ್ಕೂ ಒಂದು ಹೊಸ ಆಯಾಮ ದೊರಕೋಕೆ ಶುರುವಾಯ್ತು. ಜುಗಾರಿ ಕ್ರಾಸ್ ಆಗಲಿ ಅಥವಾ ಚಿದಂಬರ ರಹಸ್ಯವಾಗಲಿ, ಒಂದು ಕಾದಂಬರಿ ಅನ್ನೋ ಮನೋಭಾವ ಬದಲಾಯಿತು. ಅದು `ಸೃಷ್ಟಿ ಮತ್ತು ಸತ್ಯ’ ಸಂಶೋಧನೆಯ ಒಂದು ಕೊಂಡಿ ಅನ್ನಿಸೋಕೆ ಶುರುವಾಯ್ತು. ಪ್ರಿಸಿಗ್ ಮಾಡಿದ್ದೂ ಇದನ್ನೇ.... ಮೋಟಾರ್ ಸೈಕಲ್ ಸವಾರಿ ಮಾಡುತ್ತಾ, ಮೌಲ್ಯವನ್ನು ಪ್ರಶ್ನಿಸಿದವನು, ಲೀಲಾ ಎನ್ನೋ ವೇಶ್ಯೆಯ ಜೊತೆ ಹಡ್ಸನ್ ನದಿಯಮೇಲೆ ತೇಲುತ್ತಾ, ನೈತಿಕತೆಯ ಬಗ್ಗೆ ಮಾತನಾಡಿದ್ದು.
ಕೀಟ ಜಗತ್ತಿನಿಂದ ಹಿಡಿದು, ಮಿಲ್ಲೇನಿಯಂ ಸೀರೀಸ್, ಫ್ಲೈಯಿಂಗ್ ಸಾಸರ್ ನಂಥಹ ವೈಜ್ಞಾನಿಕ ಹಿನ್ನಲೆಯ ಬರಹಗಳಿರಬಹುದು ಅಥವಾ ಕೃಷ್ಣೇಗೌಡರ ಆನೆ, ರಹಸ್ಯ ವಿಶ್ವದಂಥಹ ಲಘು ಕಥೆಗಳಿರಬಹುದು, ಅವುಗಳಿಗೆ ನನ್ನದೇ ಆದ ವಿಶ್ಲೇಷಣೆಗಳು ಬರತೊಡಗಿದವು. ಪ್ರತೀ ಪುಸ್ತಕ ಮತ್ತೆ ಓದಿದಾಗ, ನೂರಾರು ಪ್ರಶ್ನೆಗಳು ಮೂಡಲು ಶುರುವಾದವು. ಅವುಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಿದರೂ, ಎಷ್ಟೋ ಪ್ರಶ್ನೆಗಳು, ಪ್ರಶ್ನೆಗಳಾಗೇ ಉಳಿದವು.
ತೇಜಸ್ವಿ ಮುಟ್ಟಿದ ವಿಷಯಗಳೆಷ್ಟು ಅನ್ನೋದನ್ನ ಹಾಗೇ ಲೆಖ್ಖ ಹಾಕೋಕೆ ಶುರು ಮಾಡಿದೆ. ರಹಸ್ಯ ವಿಶ್ವದಂತ ಮುಗ್ದ ಕಥೆಯಿಂದ ಹಿಡಿದು, ಚರಿತ್ರೆ, ಅರ್ಥಶಾಸ್ತ್ರ, ಸಮಾಜ, ವಿಜ್ಙಾನದ ಎಲ್ಲಾ ಅಂಗಗಳೂ ಸೇರಿಹೋಗಿದ್ದವು. ಪ್ರತಿಯೊಂದು ವಿಷಯಕ್ಕೂ, ಸೃಷ್ಟಿಗೂ ಸಂಬಂಧವನ್ನು ಕಲ್ಪಿಸುವ ಅವರ ಬರವಣಿಗೆಗಳು, ಬಿಡಿಬಿಡಿಯಾಗಿ ಓದಿದಾಗ ಅರ್ಥವಾಗಿರಲಿಲ್ಲ ಅನ್ನಿಸಿತು.
ಯಾಕೋ, ಕರ್ವಾಲೋ ಮಾತ್ರ ಮತ್ತೆ ಪೂರ್ತಿ ಓದಲಾಗಲಾಗಲೇ ಇಲ್ಲ. ವಿಪರೀತ ಪ್ರಶ್ನೆಗಳೇಳತೊಡಗಿದವು. ಮೊದಲನೇ ಪುಟ ಮೂಡಿಗೆರೆಯ ಜೇನು ಸೊಸೈಟಿಯಿಂದ ಯಾಕೆ ಶುರುವಾಯ್ತು ಅನ್ನೋದೇ ಒಂದು ಪ್ರಶ್ನೆಯಾಗಿತ್ತು. ಏನೋ ತಡಕಾಡುವಾಗ, ಆಲ್ಬರ್ಟ್ ಐನ್ ಸ್ಟೀನ್ ಹೇಳಿದ ಮಾತು ಸಿಕ್ಕಿತು. `ಜಗತ್ತಿನಿಂದ ಜೇನುನೊಣಗಳು ಕಣ್ಮರೆಯಾದರೆ, ಭೂಮಿಯಲ್ಲಿ ಮನುಷ್ಯನ ಆಯಸ್ಸು ನಾಲ್ಕು ವರ್ಷ ಮಾತ್ರ.
ವಿಕಾಸದ ಕೊಂಡಿಯ ವಿಷಯಕ್ಕೆ ಬರುವ ಮುಂಚೆ, ವಿನಾಶದ ಮುನ್ಸೂಚನೆಯ ಬಗ್ಗೆಯೂ ಮಾತನಾಡಿದ್ದರು.
ಮುಂದೆ ಕಾಡಿಗೆ ಹೋದಾಗಲೆಲ್ಲ, ನನ್ನದೇ ರೀತಿಯಲ್ಲಿ ಪ್ರಕೃತಿಯನ್ನು ವಿಶ್ಲೇಷಿಸಲು ಶುರು ಮಾಡಿದೆ. ಬ್ರಹ್ಮಗಿರಿಗೆ ಹೋದಾಗ ನೋಡಿದ ಹಾರುವ ಓತಿ, ಎಂಟು ವರ್ಷ ಬೆಂಕಿ ಬೀಳದಂತೆ ನೋಡಿಕೊಂಡ ಜಾಗದಲ್ಲಿ, ಬೆಂಕಿ ನಿರೋಧಕ ಗಿಡಗಳು ಹುಟ್ಟಿದ್ದು, ನಾನು ಹುಟ್ಟೋಕೆ ಮುಂಚೆ ಭತ್ತದ ಗದ್ದೆಯಾಗಿ, ಜನರು ಖಾಲಿ ಮಾಡಿದ ಹಡ್ಲು ಒಂದು ನಿಧಾನವಾಗಿ ಜೌಗು ಪ್ರದೇಶವಾಗಿ ಪರಿವರ್ತನೆಗೊಳ್ಳುತ್ತಿದ್ದದ್ದು ನೋಡುವಾಗ, ತೇಜಸ್ವಿ ಡಾರ್ವಿನ್ ವಿಕಾಸವಾದವನ್ನು ಯಾಕೆ ಅಷ್ಟೊಂದು ಹಚ್ಚಿಕೊಂಡಿದ್ದರು ಅನ್ನೋದು ಅರ್ಥವಾಗಲು ಶುರುವಾಯ್ತು.
ಮುಂದೆ, ಅವತಾರ್, ಲೈಫ್ ಆಫ್ ಪೈ ಸೇರಿದಂತೆ, ಎಷ್ಟೋ ಸಿನೆಮಾಗಳು ಸಹ, ತೇಜಸ್ವಿಯವರ ವಿಚಾರಧಾರೆಯ ಮೂಸೆಯಿಂದ ಹೊರಬಂದಂತೆ ಅರ್ಥೈಸಿಕೊಂಡಿದ್ದೇನೆ ಅಂದರೂ ತಪ್ಪೇನಿಲ್ಲ.
ವಿಕಾಸವಾದವನ್ನು ಅಷ್ಟೊಂದು ಹಚ್ಚಿಕೊಂಡಿದ್ದರೂ, ಡಾರ್ವಿನ್ ನ `survival of the fittest’ ಗಿಂತ, `survival of adoptable’, ಅನ್ನೋದನ್ನ ತೇಜಸ್ವಿ ನಂಬಿದ್ದರು ಅನ್ನೋದು ನನ್ನ ಭಾವನೆ. ಅವರ ಜೀವನದಲ್ಲಿ ಅದನ್ನು ಅಳವಡಿಸಿಕೊಂಡಿದ್ದರು ಕೂಡ.
ದೇಶದಲ್ಲಿ ಬರಹಗಾರರೆಲ್ಲ ಇನ್ನೂ ಪ್ರಕಾಶಕರ ಜೊತೆ ಜಗಳವಾಡುವ ಹೊತ್ತಿನಲ್ಲಿ, ಅಮೇರಿಕಾದಿಂದ ಡೆಸ್ಕ್ ಟಾಪ್ ಪಬ್ಲಿಷರ್ ತರಿಸಿ, ಕನ್ಫ್ಯೂಸ್ ಆಗಿ, ಮಗುವಿನಂತೆ ರಚ್ಚೆ ಹಿಡಿದು, ಅದನ್ನು ಅರ್ಥಮಾಡಿಕೊಂಡು ಉಪಯೋಗಿಸಲು ಶುರುಮಾಡಿದ್ದರು. ನನಗೆ ತಿಳಿದಂತೆ, ಬೆಂಗಳೂರಲ್ಲಿದ್ದ ನನಗಿಂತ ಮುಂಚೆ ಡಿಜಿಟಲ್ ಕ್ಯಾಮೆರಾ ಉಪಯೋಗಿಸಲು ಶುರುಮಾಡಿದ್ದರು.
ಅವರ ಹೊಸ ವಿಚಾರಗಳು ಓದುತ್ತಾ ಹೋದಂತೆ, ವಾಸ್ತವತೆಯಿಂದ ದೂರ ಅವರೆಂದೂ ಬದುಕಿಲ್ಲ ಅನ್ನೋದು ಸ್ಪಷ್ಟವಾಗುತ್ತೆ. ಜಾಗತೀಕರಣ ಮತ್ತು ಹೊಸ ಆರ್ಥಿಕ ವ್ಯವಸ್ಥೆಯಿಂದಾಗುವ ಪರಿಣಾಮಗಳನ್ನು ವಿವರಿಸುತ್ತಲೇ, ಅದನ್ನು ಒಪ್ಪಿಕೊಂಡು ಬದುಕಲೇಬೇಕಾದ ಮತ್ತು ಅದರಲ್ಲೇ ನಮ್ಮ ಸ್ವಂತಿಕೆಯನ್ನು ಉಳಿಸಿಕೊಳ್ಳುವ ಅನಿವಾರ್ಯತೆಯನ್ನು ಹೇಳುತ್ತಾರೆ.
ಕರ್ನಾಟಕ ಸರ್ಕಾರ ಸಿದ್ದಪಡಿಸಿದ ಕನ್ನಡ ತಂತ್ರಾಂಶವನ್ನು ಮೈಕ್ರೋಸಾಫ್ಟ್ ಕಂಪನಿಗೆ ಯಾಕೆ ಕೊಡಬಾರದು ಅನ್ನೋದನ್ನ ನನ್ನ ಜೊತೆಯೂ ಮಾತಾಡಿದ್ದರು. ಅದರ ಸೋರ್ಸ್ ಕೋಡ್ ಎಲ್ಲರಿಗೂ ಲಭ್ಯ ಮಾಡದಿದ್ದರೆ, ನಾವೇ ಒಂದು ಹೊಸ ತಂತ್ರಾಂಶ ತಯಾರಿಸಬೇಕು ಅಂತಾನೂ ಹೋರಾಡಿದರು. ಆದರೆ, ಅವರು ಹೇಳಿದ ಕಾರಣಗಳು ನನಗೆ ಸರಿಯಾಗಿ ಅರ್ಥವಾಗುವ ಹೊತ್ತಿಗೆ, ಅವರಿರಲಿಲ್ಲ.
ಯಾವುದೇ `ಇಸಂ’ ಗಳಿಗೆ ಅಂಟಿಕೊಳ್ಳದೆ, ಸಾಮಾಜಿಕ ಜಾಡ್ಯಗಳನ್ನು ಎಗ್ಗಿಲ್ಲದೆ ಟೀಕಿಸಿ, ಆನೆಯಂತೆ ನೆಡೆದುಕೊಂಡು ಹೋದರು ಅನ್ನಿಸಿತು. ಮೈಸೂರಿನ ತಮ್ಮ ಮನೆಯಮೇಲೆ ದಾಳಿಗೆ ಕಾರಣರಾದ ಸಂಘಪರಿವಾರವನ್ನು ದ್ವೇಷಿಸಿದಷ್ಟೇ, ಜಾಗತಿಕ ಇಸ್ಲಾಂ ಮೂಲಭೂತವಾದವನ್ನೂ ದ್ವೇಷಿಸುತ್ತಿದ್ದರು. ಅವರೇ ಬೆಳೆದುಬಂದ ಸಮಾಜವಾದವನ್ನೂ, ರೈತರ ಚಳುವಳಿಗಳು ಹಾದಿ ತಪ್ಪಿದ್ದನ್ನೂ ಟೀಕಿಸಿದರು.
ನನ್ನ ಪಾಲಿಗಂತೂ ತೇಜಸ್ವಿ, ಓದಿದಷ್ಟೂ, ಬರೆದಷ್ಟೂ ಮುಗಿಯದ – ವಿಶ್ಲೇಷಿದಷ್ಟೂ ಅರ್ಥವಾಗದ, ಒಂದು ದೈತ್ಯವಾಗಿ ಪರಿವರ್ತನೆಗೊಂಡರು. ಕೋಟ್ಯಂತರ ವರ್ಷಗಳ ವಿಕಾಸವನ್ನೂ, ಸಮಕಾಲೀನ ಆರ್ಥಿಕ, ಸಾಮಾಜಿಕ ಮತ್ತು ವೈಜ್ಙಾನಿಕ ಬದಲಾವಣೆಯಳನ್ನೂ, ಹೊಸ ಆರ್ಥಿಕ ನೀತಿಯಿಂದ ಸಮಾಜವನ್ನು ನೈತಿಕ ಮತ್ತು ಭೌದ್ದಿಕ ದಿವಾಳಿಯತ್ತ ಕೊಂಡೊಯ್ಯುತ್ತಿರುವುದನ್ನೂ ಮತ್ತು ನಿಧಾನವಾಗಿ ಮನುಕುಲ ವಿನಾಶದತ್ತ ಜಾರುತ್ತಿರುವುದನ್ನೂ, ನಿರರ್ಗಳವಾಗಿ, ಸರಳವಾಗಿ ಪ್ರತಿಪಾದಿಸುತ್ತಿದ್ದರು, ಅನ್ನಿಸುತ್ತದೆ.
ನನ್ನ ಪ್ರಕಾರ, ತೇಜಸ್ವಿಯನ್ನು ವರ್ಣಿಸುವುದು, ಕುರುಡರು ಆನೆಯನ್ನು ಮುಟ್ಟಿ ವರ್ಣಿಸಿದ ಹಾಗೆ. ನಾನು ಯಾವ ಭಾಗವನ್ನು ತಡವಿ ಇಷ್ಟೊಂದು ಬರೆದೆ ಎಂದು ಗೊತ್ತಿಲ್ಲ.
ಈಗಲೂ ಅವರ ಮನೆಯ ಗೇಟಿನ ಮುಂದೆ ಕಾರಿನಲ್ಲಿ ಹೋಗುವಾಗ, `ಇಲ್ಲಿ ಬಂದು ನನ್ನ ಸಮಯ ಹಾಳುಮಾಡಬೇಡ ಮಾರಾಯ,’ ಅನ್ನೋ ಮಾತು ನೆನಪಾಗುತ್ತದೆ.
ಆಗೆಲ್ಲ ಹೋದಾಗ, ನಾನು ತೇಜಸ್ವಿಗೆ ಯಾವುದೇ ಪ್ರಶ್ನೆಗಳನ್ನು ಕೇಳಿದ ನೆನಪಿಲ್ಲ. ಈಗಲೂ ಅವರ ಸಮಯ ಹಾಳುಮಾಡುವಷ್ಟು ಸಮಯ ನನಗಿದೆ. ಅದರ ಜೊತೆ, ನೂರಾರು ಪ್ರಶ್ನೆಗಳಿವೆ. ಆದರೆ, ಅದನ್ನು ಕೇಳೋಕೆ ಅವರೇ ಇಲ್ಲ.
ಈಗಲೂ ನಾನು ಅವರ ತೋಟದ ಗೇಟಿನ ಮುಂದೆ ಹೋಗುವಾಗ ಬೋರ್ಡೊಂದು ಅಣಕಿಸುತ್ತದೆ – ನಿರುತ್ತರ.




ಮಾಕೋನಹಳ್ಳಿ ವಿನಯ್ ಮಾಧವ.

ಮಂಗಳವಾರ, ಮೇ 16, 2017

ಗೋರಕ್ಷಕ




ಈ ಗೋರಕ್ಷಕ ಕೇಸರಿ ಪಡೆಯವರಲ್ಲ

ಮೊನ್ನೆ ಊರಿಗೆ ಹೋಗಿದ್ದಾಗ ಅಮ್ಮ, ನೋಡೋ ಈ ಇನ್ವಿಟೇಶನ್.... ಅರಸು ಮಗನ ಮದುವೆ ಕಾಗದ ಅಂದರು. ಒಂದು ಕ್ಷಣ ಯಾವ ಅರಸು ಅಂತ ತಲೆಗೆ ಹೊಳೀಲಿಲ್ಲ.... ಆಮೇಲೆ ನೆನಪಾಯ್ತು... ನಮ್ಮ ಊರಲ್ಲಿ ಇದ್ದ ಪಶುವೈದ್ಯ ನಿರೀಕ್ಷಕರಾಗಿ ಕೆಲಸ ಮಾಡುತ್ತಿದ್ದ ಕೃಷ್ಣರಾಜು ಅರಸ್ ಅಂತ.
ಕೃಷ್ಣರಾಜಉ ಅರಸ್ ರನ್ನು ಒಂದೆರೆಡು ಸಲ ನೋಡಿರಬಹುದಷ್ಟೆ. ಅಂಥಾ ನೆನಪಿಲ್ಲ. ನಮ್ಮ ಊರಾದ ಮೇಲೆ, ಅವರು ದಾರದಹಳ್ಳಿಗೆ ವರ್ಗವಾಗಿ ಹೋದರು. ಅವರ ಪತ್ನಿ ಪದ್ಮಲತಾರವರು ನಮ್ಮೂರ ಶಾಲೆಯಲ್ಲೇ ಶಿಕ್ಷಕಿಯಾಗಿದ್ದಾರೆ. ಹಾಗಾಗಿ ನಮ್ಮೂರಿನ ಸಂಬಂಧ ಅವರಿಗೆ ಪೂರ್ತಿಯೇನೂ ಕಡಿದು ಹೋಗಿಲ್ಲ.
 ನೋಡು, ಆ ಇನ್ವಿಟೇಷನ್ ಹ್ಯಾಗಿದೆ ಅಂತ.... ಪೂರ್ತಿ ದನಗಳ ಬಗ್ಗೆನೇ ಇದೆ. ಈ ಕಾಲದಲ್ಲಿ ಯಾರು ದನಗಳನ್ನ ಇಷ್ಟೊಂದು ಪ್ರೀತಿಸ್ತಾರೆ, ಅಂತ ಅಮ್ಮ ಹೇಳಿದಾಗ, ಪತ್ರಿಕೆಯನ್ನು ಹೊರಕ್ಕೆ ತೆಗೆದೆ. ಮೊದಲನೇ ಪುಟದಲ್ಲೇ ಕಾಮಧೇನುವಿನ ಕೃಪೆಯ ಈ ವಿವಾಹಕ್ಕೆ ಆಹ್ವಾನ ಅಂತ ಶುರುವಾಗಿದ್ದು, ವಧು-ವರರಿಗಿಂತ, ಹಸು-ಕರುಗಳೇ ಪತ್ರಿಕೆ ತುಂಬಾ ರಾರಾಜಿಸುತ್ತಿದ್ದವು.
ನಮ್ಮ ಮನೆಯಲ್ಲಿ ಹಸು ಸಾಕುವುದನ್ನು ನಿಲ್ಲಿಸಿ ಸಾಧಾರಣ ಹದಿನೈದು ವರ್ಷವಾಯಿತು. ಮೊದಲೆಲ್ಲ, ನಮ್ಮ ಗೆಂಡೆಹಳ್ಳಿ ಮನೆಯಲ್ಲಿ ಹಸು, ಎಮ್ಮೆಗಳು ಯಾವಾಗಲೂ ಇರುತ್ತಿದ್ದವು. ಅವನ್ನು ಕಾಯೋಕೆ ಅಂತ ಹುಡುಗರೂ ಇರುತ್ತಿದ್ದರು.
ರಜಕ್ಕೆ ಗೆಂಡೇಹಳ್ಳಿಗೆ ಹೋದಾಗ, ದನ, ಎಮ್ಮೆಗಳನ್ನು ನೋಡೋದೇ ಒಂದು ಸಂಭ್ರಮ. ಅಮ್ಮ ಮಾತ್ರ ದನದ ಕೊಟ್ಟಿಗೆಗೆ ಹೋಗೋಕೆ ಬಿಡುತ್ತಿರಲಿಲ್ಲ. ಅಂತೂ, ಕದ್ದು ಹೋಗೋದು ತಪ್ಪಿಸೋಕೆ ಆಗುತ್ತಿರಲಿಲ್ಲ. ದನ ಕಾಯೋದು ಇಷ್ಟ ಆದರೂ, ಹೋದರೆ ಪೆಟ್ಟು ಬೀಳೋದು ಗ್ಯಾರಂಟಿ ಅಂತ ಗೊತ್ತಿದ್ದರಿಂದ, ಹೋಗುತ್ತಿರಲಿಲ್ಲ.
ಆಗೆಲ್ಲ ದನ ಮೇಯಿಸಲು ಬೇಕಾದಷ್ಟು ಹರ (ಕೊಡಗಿನ ಕಡೆಯಲ್ಲಿ ಬಾಣೆ ಅಂತ ಕರೆಯುತ್ತಾರೆ) ಇರುತ್ತಿದ್ದವು. ಸಾಧಾರಣವಾಗಿ ಈಚಲು ಗುತ್ತಿ, ಈಚಲು ಮರ, ನೇರಳೆ ಮರ ಮತ್ತು ಚೊಟ್ಟೇಹಣ್ಣಿನ ಮರಗಳೇ ಜಾಸ್ತಿ. ಮೊದಲನೇ ಮಳೆಯಾದಾಗ ಮಾತ್ರ ಹಣ್ಣುಬಿಟ್ಟು, ಮೂರ್ನಾಲ್ಕು ದಿನಗಳಲ್ಲಿ ಖಾಲಿಯಾಗುವ ಚೊಟ್ಟೆಹಣ್ಣಂತೂ, ಇತ್ತೀಚೆಗೆ ನಮ್ಮ ಕಡೆ ಕಣ್ಮರೆಯಾಗಿ ಹೋಗಿದೆ. ಈಚಲು ಮರ ಮತ್ತು ಗುತ್ತಿಗಳೂ ಇಲ್ಲ ಮತ್ತೆ ಈಗಿನ ಮಕ್ಕಳಿಗೆ ಈಚಲು ಹಣ್ಣು ಮತ್ತು ಖರ್ಜೂರ ಒಂದೇ ರುಚಿ ಅಂತ ಹೇಳಿದರೆ, ಅದೆಲ್ಲಿ ಬೆಳೆಯುತ್ತವೆ? ಅಂತ ಕೇಳ್ತಾವೆ. ನಾಮಾವಶೇಷವಾಗಿ ಹೋಗಿವೆ.
ಗೆಂಡೇಹಳ್ಳಿಯಲ್ಲಿ ಹಸುಗಳಿಗಿಂತ ಎಮ್ಮೆಗಳದ್ದೇ ನೆನಪು ನನಗೆ ಹೆಚ್ಚು. ಪ್ರತೀ ಸಲ ಹೋದಾಗ, ಒಂದೊಂದು ಎಮ್ಮೆಯ ಕಥೆ ಇರುತ್ತಿತ್ತು. ಅಜ್ಜಿ, ರಮೇಶ ಅನ್ನೋ ಅನಾಥ ಹುಡುಗನನ್ನು ಸಾಕಿಕೊಂಡಿದ್ದರು. ಒಂದ್ಸಲ ಅವನು ಎಮ್ಮೆಯನ್ನು ಮೇಯೋಕೆ ಬಿಟ್ಟ ತಕ್ಷಣ, ಅದರ ಬೆನ್ನ ಮೇಲೆ ಕೂತು, `ಯಾರೇ ಕೂಗಾಡಲಿ, ಊರೇ ಹೋರಾಡಲಿ,’ ಅಂತ ಡಾ! ರಾಜ್ ಕುಮಾರ್ ಶೈಲಿಯಲ್ಲಿ ಹಾಡೋಕೆ ಶುರು ಮಾಡಿದ್ದಾನೆ. ಬೇಸಿಗೆಯಾದ್ದರಿಂದ ಎಮ್ಮೆ ನೇರವಾಗಿ ಮನೆ ಹಿಂದುಗಡೆ ಇದ್ದ ಕರೆಗೆ ಇಳಿದಿದೆ. ಈಜು ಬರದ ರಮೇಶನನ್ನು ಅಲ್ಲೇ ಯಾರೋ ನೋಡಿ, ನೀರಿನಿಂದ ಹೊರಗೆ ಎಳೆದು ಹಾಕಿದ್ದರು.
ಚಿಕ್ಕಂದಿನಲ್ಲಿ, ಬುದ್ದಿ ಇಲ್ಲದ ಕೆಲಸ ಮಾಡಿದಾಗಲೆಲ್ಲ, ಎಮ್ಮೆ, ಕೋಣ ಅಂತ ಬೈತಿದ್ದರು. ಗೆಂಡೇಹಳ್ಳಿಯಲ್ಲಿದ್ದ ಒಂದು ಎಮ್ಮೆ ಅಜ್ಜಿಗೆ ಬಿಟ್ಟು, ಯಾರಿಗೂ ಹಾಲು ಕೊಡುತ್ತಿರಲಿಲ್ಲ. ಯಾರಾದರೂ ಕೆಚ್ಚಲಿಗೆ ಕೈ ಹಾಕಿದರೆ, ಒದೆಯುತ್ತಿತ್ತು. ಆದರೆ, ಹಾಲು ಮಾತ್ರ ಧಂಡಿಯಾಗಿ ಕೊಡ್ತಿತ್ತು.
ಹೀಗೇ ಒಂದ್ಸಲ ಅಜ್ಜಿ ನೆಂಟರ ಮನೆಗೆ ಹೋಗಿದ್ದರು. ಚಿಕ್ಕಂದಿನಿಂದ ನಮ್ಮ ಮನೆಯಲ್ಲಿ ಬೆಳೆದ ಮಣಿ (ಎರಡು ವಾರಗಳ ಹಿಂದೆ ತೀರಿಕೊಂಡ) ತುಂಬಾ ಯೋಚನೆ ಮಾಡಿ, ಅಜ್ಜಿಯ ಹಳೇ ಸೀರೆಯೊಂದನ್ನು ಸುತ್ತಿಕೊಂಡು, ಹಾಲು ಕರೆದ. ಯಾವುದೇ ಪ್ರತಿರೋಧ ವ್ಯಕ್ತ ಪಡಿಸದೆ, ಎಮ್ಮೆ ಹಾಲು ಕೊಟ್ಟಿತು.
ಹೀಗೇ ಒಂದೆರೆಡು ಸಲ ಆದ ಮೇಲೆ, ಮಣಿ ಆ ಸೀರೆಯನ್ನು ತಾನೇ ಇಟ್ಟುಕೊಂಡು, ಅಜ್ಜಿ ಇಲ್ಲದಾಗ ಹಾಲು ಕರೆಯಲು ಉಪಯೋಗಿಸುತ್ತಿದ್ದ. ಒಂದ್ಸಲ ಮಣಿ ಹಾಲು ಕರೆಯುತ್ತಿದ್ದಾಗ, ಮನೆಯೊಳಗಿಂದ ಯಾರೋ ಕರೆದಿದ್ದಾರೆ. ಏನು ಮಾಡ್ತಿದ್ದೀನಿ ಅಂತ ಮರೆತ ಮಣಿ ಉತ್ತರಿಸಿದ್ದಾನೆ. ಗಂಡಸರ ಧ್ವನಿ ಕೇಳಿದ ಎಮ್ಮೆ, ರಪ್ಪಂತ ಒದ್ದ ರಭಸಕ್ಕೆ, ಮಣಿ ಮತ್ತೆ ಹಾಲಿನ ತಪ್ಪಲೆ ಮಾರು ದೂರ ಹೋಗಿ ಬಿದ್ದಿದ್ದಾರೆ. ಮಣಿಗೆ ಸುಧಾರಿಸಿಕೊಳ್ಳಲು ಒಂದು ವಾರವೇ ಬೇಕಾಯ್ತಂತೆ. ಅಲ್ಲಿಂದ ಮುಂದೆ ಮಣಿ ಯಾವತ್ತೂ ಆ ಸಾಹಸಕ್ಕೆ ಕೈ ಹಾಕಲಿಲ್ಲ. ಎಮ್ಮೆಯೂ ಅಷ್ಟೆ, ಹಾಲು ಕರೆಯುವ ಮುನ್ನ ಅಜ್ಜಿಯ ಧ್ವನಿ ಕೇಳದೆ, ಹಾಲು ಕರೆಯಲು ಬಿಡುತ್ತಿರಲಿಲ್ಲ.
ನಾವು ಮೂಡಸಸಿಯ ಮನೆಗೆ ಮೊದಲನೇ ಹಸುವನ್ನು ಶಿವಮೊಗ್ಗದ ಲಲಿತ ದೊಡ್ಡಮ್ಮನ ಮನೆಯಿಂದ ತಂದದ್ದು. ಗೌರಿ ಹಬ್ಬದ ಸಮಯದಲ್ಲಿ ಹುಟ್ಟಿದ್ದರಿಂದ, ಅದಕ್ಕೆ ಗೌರಿ ಅಂತಲೇ ಹೆಸರಿಟ್ಟಿದ್ದರು. ನಮ್ಮ ಮನೆಗೆ ಬಂದ ಮೇಲೆ, ಅದು ಹಾಕಿದ ಕರು ಮಂಗಳವಾರ ಹುಟ್ಟಿದ್ದರಿಂದ, ಅದನ್ನ ಮಂಗಳ ಅಂತ ಕರೀತಿದ್ವಿ.
ನಮ್ಮೂರಿನ ಮಲೆನಾಡು ಗಿಡ್ಡ ಮತ್ತೆ ಉಳಿದ ದನಗಳಿಗೆ ಹೋಲಿಸಿದರೆ, ಈ ಜರ್ಸಿ ದನಗಳು ಬಹಳ ಮುಗ್ದ ಪ್ರಾಣಿಗಳು. ದಿನಾ ಬೆಳಗ್ಗೆ ಅವುಗಳಿಗೆ ರೊಟ್ಟಿ ಅಥವಾ ಕಡುಬನ್ನು ಕೈಯಾರೆ ತಿನ್ನಿಸುತ್ತಿದ್ದೆವು. ಮನೆ ಸುತ್ತ ಸುಮಾರು ಸೀಬೇ ಹಣ್ಣಿನ ಮರಗಳಿದ್ದವು. ಸೀಬೇ ಹಣ್ಣು ಇಷ್ಟವಾದರೂ, ಅವುಗಳು ಕೆಳಗೇ ನೇತಾಡುತ್ತಿದ್ದರೂ, ಬಾಯಿ ಹಾಕಿ ತಿನ್ನಬೇಕು ಅಂತ ಗೊತ್ತಾಗುತ್ತಿರಲಿಲ್ಲ. ಸೀಬೇ ಹಣ್ಣಿನ ಪಕ್ಕ ನಿಂತು, ಸೀಬೇ ಹಣ್ಣನೊಮ್ಮೆ, ಅಮ್ಮನ ಮುಖವನ್ನೊಮ್ಮೆ ನೋಡುತ್ತಾ ನಿಂತಿರುತ್ತಿದ್ದವು. ನಾವ್ಯಾರಾದರೂ ಹೋಗಿ ಕಿತ್ತು ತಿನ್ನಿಸಿದರೆ, ತಿನ್ನುತ್ತಿದ್ದವು.
ಗೌರಿ ಮತ್ತು ಮಂಗಳ ಸುಮಾರು ಕರುಗಳನ್ನು ಹಾಕಿದ್ದು ನೆನಪಿದೆ. ಮನೆಯಲ್ಲಿ ಹಾಲು, ಮೊಸರು, ಬೆಣ್ಣೆ ಮತ್ತು ತುಪ್ಪ ಧಂಡಿಯಾಗಿ ಇರುತ್ತಿತ್ತು. ಹೆಚ್ಚಿನವು ಗಂಡು ಕರುಗಳಾದ್ದರಿಂದ, ಅವುಗಳನ್ನು ನಮ್ಮ ತೋಟಕ್ಕೆ ಬಯಲುಸೀಮೆಯ ಬಾಣಾವರ-ಜಾವಗಲ್ ಕಡೆಯಿಂದ ಬರುತ್ತಿದ್ದ ಆಳುಗಳು, ಹೊಲದ ಕೆಲಸಕ್ಕೆ ಅಂತ ತೆಗೆದುಕೊಂಡು ಹೋಗುತ್ತಿದ್ದರು. ವಯಸ್ಸಾದ ಮೇಲೆ ಗೌರಿ ಕರು ಹಾಕುವುದನ್ನು ನಿಲ್ಲಿಸಿತ್ತು. ಅದೇ ಸಮಯದಲ್ಲಿ, ಹೆಣ್ಣು ಕರುವಿಗೆ ಜನ್ಮಕೊಡುವ ಸಮಯದಲ್ಲಿ ಪಶುವೈದ್ಯ ನಿರೀಕ್ಷಕನ ಎಡವಟ್ಟಿನಿಂದ ಮಂಗಳ ಸತ್ತು ಹೋಯಿತು. ಹುಟ್ಟುತ್ತಲೇ ತಬ್ಬಲಿಯಾದ ಕರುವನ್ನು, ಗೌರಿ ತುಂಬಾ ಚೆನ್ನಾಗಿ ನೋಡಿಕೊಂಡಿತ್ತು. ಕೈ ತುತ್ತು ಹಾಕಿ ಬೆಳೆಸಿದ ಮಂಗಳ ಸತ್ತಿದ್ದನ್ನು ಅಮ್ಮ ಎಷ್ಟೋ ವರ್ಷ ಹೊಟ್ಟೆ ಉರಿದುಕೊಂಡು ಹೇಳುತ್ತಿದ್ದರು.
ಆ ಸಮಯದಲ್ಲೇ ನಮ್ಮೂರಿಗೆ ಬಂದಿದ್ದು ಈ ಅರಸ್. ಯಾವಾಗಲೂ ರಜಕ್ಕೆ ಹೋದಾಗ ಅಮ್ಮ ಹೊಸ ನಿರೀಕ್ಷಕರ ಬಗ್ಗೆ ಹೇಳುತ್ತಿದ್ದರು. ಕೆಲಸದಲ್ಲಿ ತುಂಬಾ ಆಸಕ್ತಿ ಇದ್ದು, ಹಸುಗಳಿದ್ದ ಮನೆಗಳಿಗೆ ಹೋಗಿ ಚಿಕಿತ್ಸೆ ನೀಡುತ್ತಿದ್ದರು. ಹಸು ನೋಡಿಕೊಳ್ಳಲು ಜನ ಸಿಗೋದು ಕಷ್ಟವಾದ ಮೇಲೆ, ಅಮ್ಮ ಹಸುವನ್ನು ನಮ್ಮ ಸಂಬಂಧಿಕರಿಗೇ ಕೊಟ್ಟರು. ಆಗ ಅರಸ್ ತುಂಬಾ ಬೇಜಾರು ಮಾಡಿಕೊಂಡು, ಅಮ್ಮನಿಗೆ ಇಟ್ಟುಕೊಳ್ಳಿ ಅಂತ ವಿನಂತಿಸಿಕೊಂಡಿದ್ದರಂತೆ.
ಆ ಹೊತ್ತಿಗಾಗಲೇ ಹಸು ಮತ್ತೆ ಎಮ್ಮೆ ಸಾಕೋದನ್ನು ನಮ್ಮ ಕಡೆಯಲ್ಲಿ ನಿಲ್ಲಿಸಿಯಾಗಿತ್ತು. ದನ ಮೇಯಿಸೋಕೆ ಮತ್ತು ಕೊಟ್ಟಿಗೆ ನೋಡಿಕೊಳ್ಳೋಕೆ ಜನ ಸಿಕ್ಕುತ್ತಿರಲಿಲ್ಲ. ಹರಗಳೆಲ್ಲ ಕಾಫೀ ತೋಟಗಳಾಗಿ, ಮೇಯಿಸಲು ಜಾಗವೂ ಇರಲಿಲ್ಲ. ಹಸು ಸಾಕಲೇ ಬೇಕು ಅಂತ ಹಟವಿದ್ದವರು ಜರ್ಸಿ ದನಗಳನ್ನು ತಂದು, ಕೊಟ್ಟಿಗೆಯೊಳಗೇ ಸಾಕುವುದು ಶುರುವಾಗಿತ್ತು. ಈಗಲೂ ಅಷ್ಟೆ.... ಅಲ್ಲೊಬ್ಬರು, ಇಲ್ಲೊಬ್ಬರು ಜರ್ಸಿ ದನಗಳನ್ನು ಸಾಕಿರುವುದು ಬಿಟ್ಟರೆ, ಮುಂಚಿನಂತೆ ನಮ್ಮ ನಾಡ ದನಗಳು ಮತ್ತು ಎಮ್ಮೆಗಳು ಕಾಣೆಯಾಗಿವೆ. ಅವೇನಿದ್ದರೂ, ಮೂಡಿಗರೆಯಿಂದ ಆಚೆಗೆ ಉಳಿದುಕೊಂಡಿವೆ ಅಂತ ನನ್ನ ಭಾವನೆ.
ನಾವೂ, ಹಾಲು ಬೇಕಾದಗ ಪ್ರಹ್ಲಾದಣ್ಣನ ಮನೆ ಅಥವಾ ತುದಿಯಾಲ ಮಂಜುನಾಥಣ್ಣನ ಮನೆಗಳಿಂದ ಕೊಳ್ಳುತ್ತೇವೆ. ಇಲ್ಲದೇ ಹೋದರೆ ಇದ್ದೇ ಇದೆ..... ಡೈರಿಯ ಪ್ಲಾಸ್ಟಿಕ್ ಚೀಲದ ಹಾಲು.
ಇತ್ತೀಚೆಗೆ ದಾರದಹಳ್ಳಿಗೆ ಹೋದಾಗಲೆಲ್ಲ ಬಹಳ ಜನ ಅರಸ್ ವಿಷಯ ಮಾತನಾಡುವುದನ್ನು ಕೇಳಿದ್ದೇನೆ. ಆಮೇಲೆ ಗೊತ್ತಾಯ್ತು, ದಾರದಹಳ್ಳಿಯಲ್ಲಿದ್ದ ಸಣ್ಣ ಪಶುವೈದ್ಯಶಾಲೆಯನ್ನು ಒಂದು ದನಗಳ ಬಗ್ಗೆ ವಸ್ತು ಸಂಗ್ರಹಾಲಯವನ್ನಾಗಿ ಮಾಡಿದ್ದಾರೆ ಅಂತೆ. ಅದರಲ್ಲಿ ದನಗಳ ಬಗ್ಗೆ ಎಷ್ಟೊಂದು ಮಾಹಿತಿ ಅನ್ನೋದನ್ನು ಜನಗಳು ಹೇಳೋದು ಕೇಳಿದರೆ, ಇಡೀ ದೇಶದಲ್ಲಿ ಅಷ್ಟೊಂದು ಮಾಹಿತಿ ಎಲ್ಲೂ ಸಿಗೋದು ಅನುಮಾನ.
ಆಹ್ವಾನ ಪತ್ರಿಕೆ ನೋಡಿ ಯಾಕೋ ಮನಸ್ಸಿಗೆ ಪಿಚ್ಚೆನಿಸಿತು. ನಾನೇ ವ್ಯಾನಿನಲ್ಲಿ ತಂದ ಗೌರಿ ಮತ್ತು ಅದರ ಕರು ಮಂಗಳ ಕಣ್ಣ ಮುಂದೆ ಹಾದು ಹೋದಂತೆ ಅನ್ನಿಸಿತು. ಚಿಕ್ಕಂದಿನಲ್ಲಿ ನಮ್ಮ ಗೆಂಡೆಹಳ್ಳಿ ಮನೆಯಲ್ಲಿ ಇದ್ದ ದನ, ಎಮ್ಮೆಗಳೂ ನೆನಪಾದವು. ಈಗ, ಗೆಂಡೆಹಳ್ಳಿಯಲ್ಲಿದ್ದ ಕೊಟ್ಟಿಗೆ ಕೆಡವಿ, ಅಲ್ಲಿ ಆಳುಗಳಿಗೆ ಮನೆಗಳನ್ನು ಕಟ್ಟಿದ್ದೇವೆ. ನೋಡಿಕೊಳ್ಳೋಕೆ ಕಷ್ಟ ಅಂತ ದೊಡ್ಡ ನಾಯಿಗಳನ್ನು ಸಾಕೋದು ನಿಲ್ಲಿಸಿ, ಡ್ಯಾಶ್ ಹೌಂಡ್ ಥರದ ಸಣ್ಣ ನಾಯಿಗಳನ್ನು ಸಾಕೋಕೆ ಶುರುಮಾಡಿದ್ದೇವೆ. ಮಲೆನಾಡಿನಲ್ಲಿ ಪಶುಸಂಗೋಪನೆ ಕ್ಷೀಣಿಸುತ್ತಿರುವ ಈ ಸಂಧರ್ಭದಲ್ಲಿ, ಅರಸ್ ಎಂಥಹಾ ಕ್ರಾಂತಿ ಮಾಡುತ್ತಿದ್ದಾರೆ ಅಂತ ಅನ್ನಿಸಿತು.
ಸಮಾಧಾನದ ವಿಷಯವೆಂದರೆ, ಅವರ ಈ ಕ್ರಾಂತಿ ಗುರುತಿಸದೇ ಹೋಗಿಲ್ಲಿ. ಕರ್ನಾಟಕದಲ್ಲಷ್ಟೇ ಅಲ್ಲ, ಆಂದ್ರ ಪ್ರದೇಶದಲ್ಲೂ ಅವರ ಪ್ರತಿಭೆಯನ್ನು ಗುರುತಿಸಿದ್ದಾರೆ. ಹೋದ ವರ್ಷ, ಕನ್ನಡ ಪ್ರಭ-ಸುವರ್ಣ ನ್ಯೂಸ್ ಕೊಡುವ `ಅಸಮಾನ್ಯ ಕನ್ನಡಿಗ’ ಪ್ರಶಸ್ತಿ ಕೂಡ ಇವರ ಪಾಲಾಯಿತು.
ನನಗೆ ಅದಕ್ಕಿಂತ ಖುಷಿ ಕೊಟ್ಟಿದ್ದು, ಅವರ ಆಹ್ವಾನ ಪತ್ರಿಕೆ.  

ಮಾಕೋನಹಳ್ಳಿ ವಿನಯ್ ಮಾಧವ್


ಬುಧವಾರ, ಫೆಬ್ರವರಿ 22, 2017

ಮಡುಗಟ್ಟಿದ ಮೌನಗಳು



ಮೌನಗಳು ಮಾತಾಡಿದಾಗ......



ಬೆಳಗಿನ ಜಾವ ಒಂದೂವರೆ ದಾಟಿತ್ತು. ಬೆಳಗ್ಗೆ ಬೇಗ ಎದ್ದು ಆಫೀಸಿಗೆ ಹೊರಡುವುದಿದ್ದರೂ, ಪುಸ್ತಕ ಮುಗಿಸಿಯೇ ಮಲಗಬೇಕೂಂತ ಹಠ ತೊಟ್ಟಿದ್ದೆ. ಜೆಫ್ರಿ ಆರ್ಚರ್ ನ ಸಣ್ಣ ಕಥೆ: ಕ್ರಿಸ್ಟೀನಾ ರೋಸಾಂತಿಲ್.... ಅದರ ನಂತರ, ಪುಸ್ತಕದಲ್ಲಿ ಓದಲು ಇನ್ನೂ ಮೂರ್ನಾಲ್ಕು ಕಥೆಗಳಿದ್ದವು. ಕಥೆಯ ಕೊನೆಯ ವಾಕ್ಯ ಮುಗಿಯುವಾಗ, ನನಗರಿವಿಲ್ಲದೆ ಫಳ್ಳನೆ ಕಣ್ಣಿಂದ ನೀರು ಹರಿಯಲಾರಂಭಿಸಿತು.

ಇನ್ನೊಂದು ಮಂಚದಲ್ಲಿ ಮಲಗಿದ್ದ ಸ್ನೇಹಿತನಿಗೆ ತೊಂದರೆಯಾಗಬಾರದು ಅಂತ ಕೋಣೆಯಿಂದ ಎದ್ದು ಹೊರಬಂದೆ. ಯಾಕೋ ತಡೆಯಲಾಗಲಿಲ್ಲ. ಒಬ್ಬ ಮುದುಕನ ಮೂವತ್ತು ವರ್ಷಗಳ ಮೌನ ಮನಸ್ಸನ್ನು ಕಲಕಿಬಿಟ್ಟಿತ್ತು.

ಹಾಗೇ ಯೋಚನೆ ಮಾಡಿದೆ... ನಾವು ಹೈಸ್ಕೂಲಿನಲ್ಲಿದ್ದಾಗ, ಇಂಗ್ಲಿಷ್ ಮೇಷ್ಟ್ರು ಎಂ ರಾಮರಾವ್, ಕಾಬೂಲಿವಾಲ ಪಾಠ ಮಾಡುತ್ತಿದ್ದರು. ಕಥೆಯ ಕೊನೆಯ ಘಟ್ಟದಲ್ಲಿ ಕಾಬೂಲಿವಾಲ ಮೌನವಾಗಿ ತನ್ನ ಪುಟ್ಟ ಮಗಳ ಹಸ್ತದ ಗುರುತನ್ನು ನೋಡುತ್ತಾ ಕುಳಿತ ಪ್ರಸಂಗವನ್ನು ವಿವರಿಸುವಾಗ, ಇಡೀ ತರಗತಿಯೇ ಕಣ್ಣೀರಲ್ಲಿ ಮುಳುಗಿತ್ತು. ಖುಶ್ವಂತ್ ಸಿಂಘ್ ಬರೆದ `ಎ ಲವ್ ಸ್ಟೋರಿ ಇನ್ ಲಂಡನ್’ ಇರಬಹುದು, ಓ ಹೆನ್ರಿಯ ಕಥೆಗಳಿರಬಹುದು -- `ಮೌನ’ ಬಹಳವಾಗಿ ಕಾಡುತ್ತದೆ.

ಕಥೆಗಳಲ್ಲೇ ಇಷ್ಟೊಂದು ಭಾವುಕತೆಯಾದರೆ, ಕ್ಯಾರೆಲ್ ಮತ್ತು ಆಯೆಲೀನಾರ ಪರಿಸ್ಥಿತಿ ಏನಾಗಿರಬಹುದು? ವಿಮಾನ ಏರುವ ಮುನ್ನ, ಅಮ್ಮ ಕ್ಯಾರೆಲ್ಲಳ ಕೈ ಚೀಲದೊಳಗೆ ಒಂದು ನೋಟ್ ಪುಸ್ತಕ ಹಾಕಿ, ಆಮೇಲೆ ಓದು ಅಂತಾಳೆ. ಆಯೆಲೀನಾಗೆ ಪುಸ್ತಕ ಕೊಟ್ಟು, ಪುರುಸೊತ್ತಾದಗ ಓದು ಅಂತಾಳೆ. ಓದಿದಾಗ, ಐವತ್ತು ವರ್ಷಗಳ ಹಿಂದೆ ತಮ್ಮ ತಾಯಿ ಯುದ್ದಕೈದಿಯಾಗಿದ್ದಾಗ, ಸತತವಾಗಿ ಮೂರು ತಿಂಗಳು ಜಪಾನಿ ಸೈನಿಕರು ಅತ್ಯಾಚಾರವೆಸಗಿದ ವಿಷಯ ಅನಾವರಣವಾಗುತ್ತದೆ. ಆಕೆ, ಜಪಾನಿ ಸೈನಿಕರಿಗೆ ಸುಖದಾಯಿ ಹೆಂಗಸಾಗಿ ಉಪಯೋಗಿಸಲ್ಪಟ್ಟಿದ್ದಳು. ದಿನಗಟ್ಟಲೆ, ಲೆಖ್ಖವಿಲ್ಲದಷ್ಟು ಸೈನಿಕರು ತಮ್ಮ ಲೈಂಗಿಕ ತೃಷೆಯನ್ನು ಅಮಾನುಷವಾಗಿ ತೀರಿಸಿಕೊಂಡಿದ್ದರು.

ಯಾನ್ ರಫ್ ಓ’ ಹರ್ನ್, ತನ್ನ `ಅರೆಶತಮಾನದ ಮೌನ’ ವನ್ನು ಮುರಿಯುವುದು ಹೀಗೆ.

ಯುದ್ದ ಕ್ರೌರ್ಯದ ಭಯಾನಕತೆಯನ್ನು ಈ ಪುಸ್ತಕಕ್ಕಿಂತ ಚೆನ್ನಾಗಿ ವಿವರಿಸಲು ಸಾಧ್ಯವೇ? ನನಗೆ ಗೊತ್ತಿಲ್ಲ. ಸುಖದಾಯಿಯಾಗಿ ತನ್ನನ್ನು ಉಪಯೋಗಿಸಿದ ಜಪಾನಿಯರು ತನಗೆ ಹೂವಿನ ಹೆಸರಿಟ್ಟಿದ್ದರಿಂದ, ಇಡೀ ಜೀವನ ಹೂವನ್ನು ಸಹಿಸಿಕೊಳ್ಳದ ಪರಿಸ್ಥಿತಿಯಲ್ಲಿ ಯಾನ್ ಬದುಕುತ್ತಾಳೆ. ಜಪಾನಿಯರ ಕ್ಯಾಂಪ್ ಗಳಲ್ಲಿ ಸಾವು ಸಹಜ ಕ್ರಿಯೆಯಾಗಿತ್ತಂತೆ.... ಮೈ ನಡುಗಿ ಹೋಯಿತು.

ಯುದ್ದಕ್ಕಿಂತ ಮೊದಲು ಗೆದೊಂಗ್ ಸೊಂಗೋದಲ್ಲಿದ್ದ ಜಪಾನಿ ದಂಪತಿಗಳು ಪುಟ್ಟ ಯಾನ್ ಳನ್ನು ಎಷ್ಟೊಂದು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು.  ಆದರೆ, ಅದೇ ಸಮಯದಲ್ಲಿ, ಇವರು ಜಪಾನ್ ದೇಶದ ಗುಪ್ತಚರರಾಗಿ ಕೆಲಸ ಮಾಡುತ್ತ, ಇಂಡೋನೇಸಿಯಾದಲ್ಲಿದ್ದ ಡಚ್ ಗಳ ಮೇಲಿನ ಕ್ರೌರ್ಯಕ್ಕೂ ಕಾರಣರಾಗುತ್ತಾರೆ. ಇಂಥಹ ಸಂದರ್ಭದಲ್ಲಿ ಮಾನವೀಯತೆಯ ಮೇಲೆ ನಂಬಿಕೆ ಉಳಿಯಲು ಸಾಧ್ಯವೇ?

ಆದರೆ, ಜಪಾನಿಯರ ಕ್ರೌರ್ಯ ತಪ್ಪಿಸಿಕೊಳ್ಳಲು ಸ್ವಯಿಚ್ಚೆಯಿಂದ ಸುಖದಾಯಿಯಾದ ಈಘೋನ್ಯಾಳ ಮಾನವೀಯತೆ ನೋಡಿದಾಗ, ಒಂದು ವಾರವಿಡೀ ಇವಳ ಕೋಣೆಯಲ್ಲಿ ಕಳೆದು, ಕಡೆ ಪಕ್ಷ ರಾತ್ರಿಯ ಸರದಿ ಅತ್ಯಾಚಾರ ತಡೆಯುವ ಜಪಾನಿ ಸೈನಿಕನನ್ನು ನೋಡಿದಾಗ, ಮನಸ್ಸು ನವಿರಾಗುತ್ತದೆ.

ಮುಂದೆ, ಯುದ್ದ ಕ್ರೌರ್ಯಗಳ ಸಾಕ್ಷಿಯಾದಾಗ, ಯಾನ್ ತನ್ನ ಗಂಡನ ಎದುರು ಹೋರಾಡಿರಬಹುದಾದ ಜಪಾನಿ ಸೈನಿಕ ಮತ್ತು ತನ್ನ ತಂದೆ ಹಿಂಸೆ ಅನುಭವಿಸಿದ ಕ್ಯಾಂಪ್ ನ ಕಮಾಂಡಟ್ ಜೊತೆ ಊಟ ಮಾಡುತ್ತಾಳೆ, ಮತ್ತು ಅವರನ್ನು ಅಪ್ಪಿಕೊಳ್ಳುತ್ತಾಳೆ. ಎಲ್ಲದ್ದಂಕ್ಕಿಂತ ಹೆಚ್ಚಾಗಿ, ಮೌನ ಮುರಿದ ಮೊದಲನೇ ಭಾಷಣದಲ್ಲೇ, ಎಲ್ಲರನ್ನು ಕ್ಷಮಿಸಿದ್ದಾಗಿ ಹೇಳುತ್ತಾಳೆ.

ಯುದ್ದ ಕೊನೆಯಾದಾಗ, ಯಾನ್ ಮೇಲಿನ ಅತ್ಯಾಚಾರದ ವಿವರ ಮತ್ತು ಸನ್ಯಾಸಿನಿಯಾಗಬೇಕೆಂಬ ಬಯಕೆಯನ್ನು ಕೇಳಿದಾಗ, ನೀನು ಹೀಗೇ ಇರೋದು ಒಳ್ಳೆಯದು ಎಂದು ಹೇಳುವ ಪಾದ್ರಿಗಿಂತ, ಆಕೆಯ ಕಥೆ ಗೊತ್ತಿದ್ದೂ ಆಕೆಯನ್ನು ಮದುವೆಯಾಗುವ ಟಾಮ್, ಆತನ ಕುಟುಂಬದವರು ಮತ್ತು ಆಕೆಯನ್ನು ತುಂಬುತೋಳಿನಿಂದ ಸ್ವೀಕರಿಸುವ ವಾಲ್ಸಲಿ ಜನಗಳು, ಏಸುವಿಗೆ ಹತ್ತಿರದವರಾಗಿ ಕಾಣುತ್ತಾರೆ. ತಮ್ಮ ಮಗಳ ಮೇಲಿನ ಅತ್ಯಾಚಾರದ ವಿವರಗಳನ್ನು ಕೇಳಿದ ತಂದೆ ಮತ್ತು ತಾಯಿ, ತಾನು ಮದುವೆಯಾಗಲಿರುವ ಹುಡುಗಿಯ ಕಥೆ ಕೇಳಿದ ಟಾಮ್,  ಮುಂದೆಂದೂ ಆ ವಿಷಯವನ್ನು ಚರ್ಚಿಸಲು ಹೋಗುವುದಿಲ್ಲ.

 ಮಡುಗಟ್ಟಿದ ಮೌನ.....

ಕೆಲವು ತಿಂಗಳ ಹಿಂದೆ, ನನ್ನ ಹಿರಿಯ ಸ್ನೇಹಿತರೂ, ಇಂಡಿಯನ್ ಎಕ್ಸ್ ಪ್ರೆಸ್ನ ಹಿರಿಯ ಸಹೋದ್ಯೋಗಿಯೂ ಆಗಿದ್ದ ಅರುಣ್ ಫೋನ್ ಮಾಡಿ, ನಾನು ಯಾನ್ ಆತ್ಮಚರಿತ್ರೆಯನ್ನು ಕನ್ನಡಕ್ಕೆ ಅನುವಾದಿಸುತ್ತಿದ್ದೇನೆ, ಆಕೆ ಆಸ್ಟ್ರೇಲಿಯಾದಲ್ಲಿದ್ದಾರೆ. ಅನುವಾದಕ್ಕೆ ಅವರ ಸಹಮತ ಬೇಕಾಗಿದೆ. ಅವರನ್ನು ಸಂಪರ್ಕಿಸುವಂತವರನ್ನು ಹುಡುಕಲು ಸಾಧ್ಯವೇ ಎಂದರು. ನಾನೂ ಆಸ್ಟ್ರೇಲಿಯಾಗೆ ವಲಸೆ ಹೋಗಿರುವ ಒಂದಿಬ್ಬರು ಸ್ನೇಹಿತರನ್ನು ಸಂಪರ್ಕಿಸಿ, ಅಲ್ಲಿನ ಯಾವುದೋ ಒಂದು ಪತ್ರಿಕೆಯ ಸಂಪಾದಕರಿಗೂ ಇ-ಮೇಲ್ ಕಳುಹಿಸಿದೆ. ಏನೂ ಆಗಲಿಲ್ಲ. 
ಹದಿನೈದು ದಿನದ ಹಿಂದೆ, ನನ್ನ ಪುಸ್ತಕ ಬಿಡುಗಡೆ ಅಂತ ವಾಟ್ಸಪ್ ನಲ್ಲಿ ಅರುಣ್ ಮೆಸೆಜ್ ಕಳುಹಿಸಿದರು. ಯಾನ್ ಪುಸ್ತಕ ಬಿಡುಗಡೆಯೂ ಆಯ್ತು.

ನನ್ನ ಮತ್ತು ಅರುಣ್ ರವರ ಸ್ನೇಹ ಎರಡು ದಶಕಗಳಿಂದಲೂ ಇದೆ. ಅವರು ನನ್ನನ್ಯಾಕೆ ಸಹಿಸಿಕೊಂಡಿದ್ದಾರೆ ಅಂತ ಕೆಲವು ಸಲ ಅನ್ನಿಸುತ್ತೆ. ಅರುಣ್ ಮಿತಭಾಷಿ. ನನ್ನ ಬಾಯಿಯನ್ನು ನಾನು ಮಾತ್ರ ಮುಚ್ಚಿಸಬಹುದು. ಆದರೆ, ಈ ಪುಸ್ತಕವನ್ನು ಓದುವಷ್ಟು ಸಮಯವೂ, ನಾನು ಮೌನವಾಗಿದ್ದೆ. ಅರುಣ್ ಮಾತನಾಡುತ್ತಿದ್ದರು.
ಥ್ಯಾಂಕ್ಸ್ ಅರುಣ್ ಸರ್.......


ಮಾಕೋನಹಳ್ಳಿ ವಿನಯ್ ಮಾಧವ.