ಗುರುವಾರ, ಏಪ್ರಿಲ್ 5, 2018

ತೇಜಸ್ವಿ



ತೇಜಸ್ವಿ ಮತ್ತು ಅರ್ಥವಾಗದ ವಿಷಯಗಳು



ನಮ್ಮ ಪ್ರೆಸ್ ಕ್ಲಬ್ ನಲ್ಲಿ ಕಾಮ್ರೇಡ್ ನಾಗೇಶ್ ರನ್ನು ನೋಡಿದಾಗಲೆಲ್ಲ ತೇಜಸ್ವಿ ಹೇಳುತ್ತಿದ್ದ ಮಾತುಗಳು ನೆನಪಾಗುತ್ತದೆ : `ಈ ಲೆಫ್ಟಿಸ್ಟ್ ಗಳು ಇದ್ದಾರಲ್ಲ, ಒಂಥರಾ ಭ್ರಮೆಯಲ್ಲಿರ್ತಾರೆ. ರಾತ್ರಿ ಪೂರ ಕುಡ್ದು, ನಾಳೆ ಬೆಳಗ್ಗೆಯಿಂದ ಕ್ರಾಂತಿ ಶುರುವಾಗುತ್ತೆ ಅಂತ ವಾದ ಮಾಡಿ, ಮನೆಗೆ ಹೋಗಿ ಮಲಗಿ, ಬೆಳಗ್ಗೆ ಹ್ಯಾಂಗ್ ಓವರ್ ನಲ್ಲಿ ಏಳ್ತಾರೆ. ಮತ್ತೆ ಅವತ್ತು ಕೂಡಾ ಅದೇ ಕಥೆಯಾಗಿರ್ತದೆ’.

ನಮ್ಮ ಪ್ರೆಸ್ ಕ್ಲಬ್ ನಲ್ಲಿ ಎಡ ಪಂಥೀಯರ ಸಂಖ್ಯೆ ಕಡಿಮೆಯಾದರೂ, ಪೂರ್ತಿ ನಶಿಸಿ ಹೋಗಿಲ್ಲ. ಹಾಗಂತ ಬಲ ಪಂಥೀಯರೇ ತುಂಬಿ ಹೋಗಿದ್ದಾರೆ ಅಂತ ನನಗನ್ನಿಸೋದಿಲ್ಲ. ಮುಂಚೆ ಎಡ ಪಂಥೀಯರಾಗಿದ್ದವರೆಲ್ಲ ಈಗ ಅವರವರ ಜಾತಿ ಪಂಥೀಯರಾದಂತೆ ಅನ್ನಿಸೋಕೆ ಶುರುವಾಗಿದೆ.

ಆದರೆ ನಮ್ಮ ನಾಗೇಶ್ ಒಂಥರಾ.... ಪೂರ್ತಿ ಎಡ ಪಂಥೀಯರಲ್ಲ. ಆದರೆ, ಬಲ ಪಂಥೀಯ ದ್ವೇಷಿ ಅಂತ ಹೇಳಬಹುದು. ಜಾತಿವಾದಿಯೂ ಅಲ್ಲ. ಯಾರ ಮಾತನ್ನೂ ಅಷ್ಟು ಸುಲಭವಾಗಿ ಒಪ್ಪಿಕೊಳ್ಳೋ ಸ್ವಭಾವವಲ್ಲ. ಯಾರಿಗೂ ಹಾನಿ ಮಾಡುವುದಿಲ್ಲ. ಆಗಾಗ, ಬೇಡದ ಕೆಲಸ ಮಾಡಲು ಕೈ ಹಾಕಿ, ಸೆಲ್ಫ್ ಗೋಲ್ ಹೊಡ್ಕೊಳೋ ಗಿರಾಕಿ. ಇತ್ತೀಚೆಗೆ ನಾಗೇಶ್ ಅದೇ ಥರ ಸೆಲ್ಫ್ ಗೋಲ್ ಹೊಡ್ಕೊಂಡಾಗ, ತೇಜಸ್ವಿಯವರು ಮೈಸೂರಿನಲ್ಲಿ ಉದಯ ರವಿ ಪ್ರೆಸ್ ಮಾಡಿದ ಘಟನೆ ನೆನಪಾಯ್ತು. ನಮ್ಮ ನಾಗೇಶ್, ಒಂಥರಾ....

ನಾಗೇಶ್ ಬೆಳೆದು ಬಂದ ದಾರಿಯಲ್ಲಿ ಎಡವಿಕೊಂಡದ್ದು ಸಾಹಿತಿಗಳು ಮತ್ತು ರೈತ ಚಳುವಳಿಗಳಿಗೆ. ಚಿಕ್ಕ ವಯಸ್ಸಿನಲ್ಲೇ, ಪ್ರೊಫೆಸರ್ ನಂಜುಂಡಸ್ವಾಮಿಯವರಿಗೆ ಮಾರು ಹೋಗಿ, ಇನ್ನೂ ಅವರ ಗುಂಗಿನಿಂದ ಹೊರಬರಲಾಗದೇ ಇರುವವರಲ್ಲಿ, ನಾಗೇಶ್ ಕೂಡ ಒಬ್ಬರು. ರೈತ ಸಂಘದ ಎಷ್ಟೋ ಬೆಳವಣಿಗೆಗಳನ್ನು ಹತ್ತಿರದಿಂದ ಮೂಕಪ್ರೇಕ್ಷಕರಾಗಿ ನೋಡಿರುವವರು. ಯಾಕಂದರೆ, ಆಗ ಇವರಿಗೆ ಇನ್ನೂ ನಾಯಕರಾಗುವ ವಯಸ್ಸಾಗಿರಲಿಲ್ಲ.

ಹೀಗೇ ಮಾತಾಡ್ತಾ ಇದ್ದಾಗ, ನಾಗೇಶ್ ರೈತ ಸಂಘದ ಒಂದು ಕಥೆ ಹೇಳಿದ್ದರು. 1983 ರ ಸಮಯದಲ್ಲಿ, ತೇಜಸ್ವಿಯವರು ಸಹ ರೈತ ಸಂಘದ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ಆಗ, ರೈತ ಸಂಘವು  ಚುನಾವಣೆಗೆ ಸ್ಪರ್ಧಿಸುವ ನಿರ್ಧಾರ ಮಾಡಿತ್ತು. ಬೆಂಗಳೂರಿನ ಗಾಂಧಿ ಭವನದಲ್ಲಿ ಸಭೆಯಲ್ಲಿ ಪ್ರೊಫೆಸರ್, ತೇಜಸ್ವಿ ಸೇರಿದಂತೆ, ಎಲ್ಲಾ ರೈತ ಸಂಘದ ನಾಯಕರೂ ಸೇರಿದ್ದರು. ಪ್ರೊಫೆಸರ್ ಮತ್ತು ತೇಜಸ್ವಿಯವರು ವೇದಿಕೆ ಮೇಲೆ ಕುಳಿತಿದ್ದರು.

ಭಾಷಣಗಳು ನೆಡೆಯುತ್ತಿದ್ದಾಗ, ತೇಜಸ್ವಿಯವರು ಶೌಚಾಲಯದ ಕಡೆಗೆ ಹೋಗಲೆಂದು ವೇದಿಕೆಯ ಕೆಳಗೆ ಇಳಿದರಂತೆ. ಬಾಗಿಲ ಹತ್ತಿರ ಒಂದಿಬ್ಬರು ತೇಜಸ್ವಿಯವರನ್ನು ತಡೆದು, `ಸರ್, ನೀವು ವೇದಿಕೆಯ ಮೇಲೆ ಹೋಗಿ. ಆ ಕಡೆ ಬೇರೇನೇ ಚರ್ಚೆ ನೆಡೆಯುತ್ತಿದೆ. ಲಿಂಗಾಯಿತರೆಲ್ಲ ಸೇರಿ, ನಮ್ಮ ಸರ್ಕಾರದಲ್ಲಿ ನಂಜುಂಡಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡ್ಬೇಕೂಂತ ಕೂತಿದ್ದಾರಂತೆ. ಒಕ್ಕಲಿಗರೆಲ್ಲ ನಿಮ್ಮನ್ನು ಮಾಡ್ಬೇಕೂಂತ ಇದ್ದೀವಿ. ನೀವು ಕೆಳಗೆ ಬಂದರೆ, ಲಿಂಗಾಯಿತರು ನಂಜುಂಡಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡುವ ವಿಷಯದಲ್ಲಿ ನಿಮ್ಮನ್ನು ಒಪ್ಪಿಸಿಬಿಡುವ ಸಾಧ್ಯತೆ ಇದೆ. ನೀವು ಮೇಲೆ ಇದ್ದರೆ, ಉಳಿದ ವಿಷಯವನ್ನು ನಾವು ನಿಭಾಯಿಸಿಕೊಳ್ಳುತ್ತೇವೆ,’ ಅಂದರಂತೆ.

`ತಾಳ್ರಯ್ಯ... ರೀಸಸ್ ಗೆ ಹೋಗಿ ಬಂದು ಬಿಡ್ತೀನಿ. ಆಮೇಲೆ ನೀವು ಹೇಳಿದ ಹಾಗೇ ಮಾಡೋಣ,’ ಅಂತ ಹೊರಗಡೆ ಹೋದ ತೇಜಸ್ವಿ, ಅಲ್ಲೇ ಒಂದು ಕುರ್ಚಿಯ ಮೇಲೆ ತಮ್ಮ ಹೆಗಲಲ್ಲಿದ್ದ ಹಸಿರು ಶಾಲನ್ನು ಇಟ್ಟು, ಸಭೆ ಮುಗಿಯುವ ಹೊತ್ತಿಗೆ ಮೂಡಿಗೆರೆ ಸೇರಿಕೊಂಡರಂತೆ.

ಮಾರನೇ ದಿನ ಪ್ರೋಫೆಸರ್ ನಂಜುಂಡಸ್ವಾಮಿ ಫೋನ್ ಮಾಡಿದಾಗ, `ಅಲ್ಲಾಕಣ್ರಿ, ಇನ್ನೂ ಎಲೆಕ್ಷನ್ ಗೆ ನಿಂತಿಲ್ಲ, ಗೆದ್ದಿಲ್ಲ. ಈಗ್ಲೇ ಸಂಘದಲ್ಲಿ ಯಾವ ಜಾತಿಯವರು ಮುಖ್ಯಮಂತ್ರಿ ಆಗ್ಬೇಕೂಂತ ಶುರುವಾದ್ರೆ, ರೈತರು ಉದ್ದಾರ ಕಣ್ರಿ. ನಾನು ಸಂಘದ ಕಡೆ ಬರೋಲ್ಲ,’ ಅಂತ ಫೋನ್ ಕುಕ್ಕಿದರಂತೆ. ಆಮೇಲೆಂದೂ ಅವರು ರೈತ ಸಂಘದ ಚಟುವಟಿಕೆಗಳಲ್ಲಿ ಕಾಣಿಸಿಕೊಳ್ಳಲೇ ಇಲ್ಲವಂತೆ.

 ಈ ವಿಷಯ ಮೊನ್ನೆ ಹಿಂದೂ ದಿನಪತ್ರಿಕೆಯ ಮುರಳೀಧರ ಖಜಾನೆ ಜೊತೆ ಮಾತನಾಡುವಾಗ ಈ ವಿಷಯ ಬಂತು. ಎಡ ಪಂಥ ಮತ್ತು ರೈತ ಚಳುವಳಿಯ ಹಿನ್ನೆಯಲ್ಲಿ ಬಂದ ಖಜಾನೆಗೆ ಸಿಟ್ಟೇ ಬಂದಿತು. `ಯಾರೋ, ಏನೋ ಮಾತಾಡಿದ್ರು ಅಂತ ಶಾಲು ಎಸೆದು ಹೋಗ್ಬಿಟ್ರೆ, ಅವ್ರನ್ನ ನಂಬಿಕೊಂಡು ಬಂದವರೆಲ್ಲ ಎಲ್ಲಿಗೆ ಹೋಗಬೇಕು? ಅದೇ ವಿಷಯದಲ್ಲಿ ನಾನು ತೇಜಸ್ವಿ ಜೊತೆ ಒಂದೆರೆಡು ಸಲ ಜಗಳ ಆಡಿದ್ದೇನೆ,’ ಅಂದ.

`ಅವ್ರನ್ನ ನಂಬ್ಕೊಂಡು ಯಾರಯ್ಯ ಅಲ್ಲಿ ಬಂದಿದ್ದವರು? ಅದೊಂದು ಚಳುವಳಿ ಮತ್ತೆ ಎಲ್ಲರಿಗೂ ಅವರದೇ ಆದ ಆಕಾಂಕ್ಷೆಗಳಿರ್ತವೆ. ಹಾಗಾಗಿ ಬಂದಿರ್ತಾರೆ ಅಷ್ಟೆ. ತೇಜಸ್ವಿಗೆ ಇಷ್ಟ ಆಗಲಿಲ್ಲ ಎದ್ದು ಹೋದ್ರು. ಆಮೇಲೆ ಶಾಮಣ್ಣನ್ನ (ಕಡಿದಾಳ್) ಕಂಡ್ರೆ ಪ್ರೊಫೆಸರ್ ಗೆ ಇಷ್ಟ ಆಗ್ಲಿಲ್ಲ  ಅಂತ ಸಂಘದಿಂದ ಹೊರಗೆ ಹಾಕಿರ್ಲಿಲ್ವಾ? ಅದಕ್ಯಾಕೆ ನೀನು ಸಿಟ್ಟಾಗ್ಬೇಕು?’ ಅಂತ ಕೇಳಿದೆ.

`ಅಲ್ಲ ಮಾರಾಯ... ನಂಬಿ ನಾಯಕತ್ವ ಕೊಟ್ಟಿರ್ತೀವಿ. ಇಷ್ಟ ಇಲ್ಲ ಅಂತ ಮಧ್ಯದಲ್ಲಿ ಎದ್ದು ಹೋದರೆ? ನಾವೆಲ್ಲ ಎಷ್ಟು ತೊಂದರೆಗೊಳಗಾದ್ವಿ ಅಂತ ನಿಂಗೆ ಗೊತ್ತಾ. ರೈತ ಚಳುವಳಿ ಹಾಳಾಗಿದ್ದೇ ಹೀಗೆ. ನಾಯಕತ್ವ ವಹಿಸಿಕೊಂಡವರೆಲ್ಲ ಮಧ್ಯದಲ್ಲಿ ಎದ್ದು ಹೋದರೆ, ರೈತರು ಏನು ಮಾಡ್ಬೇಕು?’ ಅಂತ ಕೂಗಾಡೋಕೆ ಶುರು ಮಾಡಿದ.

`ಅಲ್ಲಾ ಮಾರಾಯ... ತೇಜಸ್ವಿ ಚಳುವಳಿಗೆ ಅನಿವಾರ್ಯ ಅಂತ ನಿನಗ್ಯಾರು ಹೇಳಿದ್ರು? ಯಾವುದೇ ಚಳುವಳಿಗೆ ಯಾರೂ ಅನಿವಾರ್ಯವಲ್ಲ. ಅವರು ಹೋದರೆ, ನೀನೇ ನಾಯಕತ್ವ ವಹಿಸಿಕೋಬೇಕಿತ್ತು. ನೀನೇ ಸರ್ಕಾರನ ಪ್ರಶ್ನಿಸಬೇಕಿತ್ತು. ನಾಯಕರು ಅನ್ನಿಸಿಕೊಳ್ಳೋರು ಒಂದು ಮೇಲ್ಪಂಕ್ತಿ ಹಾಕಿ ಕೊಡ್ತಾರೆ ಅಷ್ಟೆ. ಇನ್ನುಳಿದ ಹಾಗೆ, ಜನಗಳು ಅದನ್ನು ಮುಂದುವರೆಸಿಕೊಂಡು ಹೋಗಬೇಕು. ಒಬ್ಬ ನಾಯಕ ಹೋದರೆ, ಆ ಜಾಗಕ್ಕೆ ಇನ್ನೊಬ್ಬ ಬರಬೇಕು. ಇಲ್ಲದೇ ಹೋದರೆ, ಅದು ಸಂಘಟನೆ ಅಂತ ಅನ್ನಿಸಿಕೊಳ್ಳೋದಿಲ್ಲ. ರೈತ ಸಂಘ ಮುಳುಗೋಕೆ ಇನ್ನೂ ಹತ್ತಾರು ಕಾರಣಗಳಿವೆ,’ ಅಂದೆ.

`ನಾವು ಅನುಭವಿಸಿದ ನೋವು ನಿನಗೆ ಹೇಗೆ ಅರ್ಥವಾಗಬೇಕು?’ ಅಂತ ಗೊಣಗುತ್ತಾ ಖಜಾನೆ ಮಾತು ಮುಗಿಸಿದ. ಖಜಾನೆ ಹೇಳಿದ್ದು ಸರಿಯಾಗಿತ್ತು. ನನಗಿಂತ ವಯಸ್ಸಿನಲ್ಲಿ ಹಿರಿಯನಾದ ಖಜಾನೆ, ಚಳುವಳಿಗಳನ್ನು ತುಂಬಾ ಹಚ್ಚಿಕೊಂಡಿದ್ದ. ಆ ನೋವು ನನಗೆ ಅರ್ಥವಾಗುವ ಸಾಧ್ಯತೆ ಬಹಳ ಕಡಿಮೆ.

ತೇಜಸ್ವಿಯವರು ಯಾವುದೇ ತತ್ವ ಸಿದ್ದಾಂತಗಳಿಗೆ ಅಂಟಿಕೊಂಡಿದ್ದು ನಾನು ನೋಡಿಲ್ಲ. ಉದಯ ರವಿಯ ಮೇಲೆ ಎಬಿವಿಪಿ ಹುಡುಗರು ದಾಳಿ ಮಾಡಿದ ಸಮಯದಿಂದ, ಬಲ ಪಂಥೀಯರ ವಿಷಯದಲ್ಲಿ ಕಟು ನಿಲುವು ತೆಗೆದುಕೊಂಡರೂ, ಅದಕ್ಕೋಸ್ಕರ ಎಡ ಪಂಥಕ್ಕೆ ವಾಲಿದವರಲ್ಲ. ಅವರ ಹೊಸ ವಿಚಾರಗಳು ಸಂಕಲನವನ್ನು ಓದುವಾಗ, ಎಲ್ಲರನ್ನೂ ಎಗ್ಗಿಲ್ಲದೆ ಟೀಕಿಸುವ ಅವರ ಸ್ವಭಾವ ಅರ್ಥವಾಗುತ್ತದೆ.

ಮೂಡಿಗೆರೆಯ ಕಮ್ಯುನಿಸ್ಟ್ ನಾಯಕ ದಿವಂಗತ ಬಿ ಕೆ ಸುಂದರೇಶ್ ಬಗ್ಗೆ ಒಳ್ಳೆಯ ಅಭಿಪ್ರಾಯ ಹೊಂದಿದ್ದರೂ, ಹೊಸ ವಿಚಾರಗಳಲ್ಲಿ ಕಾರ್ಲ್ ಮಾರ್ಕ್ಸ್ ನ ವಿಚಾರಧಾರೆಯನ್ನು ಅಧ್ಬುತವಾಗಿ ವಿಮರ್ಶಿಸಿದ್ದಾರೆ. ಅವರ ಪ್ರಕಾರ, ಕಾರ್ಲ್ ಮಾರ್ಕ್ಸ್ ತತ್ವ ಹುಟ್ಟುತ್ತಲೇ ಸೋತಿತ್ತು. ಯಾಕಂದರೆ, ಆ ತತ್ವವು ಆಗಿನ ಕಾಲದಲ್ಲಿ ಕೈಗಾರಿಕರಣ ಹೊಂದಿದ್ದ ಯೂರೋಪ್ ನ ಇಂಗ್ಲೆಂಡ್, ಫ್ರಾನ್ಸ್ ಮತ್ತು ಅಮೆರಿಕಾ ದೇಶಗಳಲ್ಲಿ ಹೆಚ್ಚು ಜನಪ್ರಿಯವಾಗಬೇಕಿತ್ತು. ಅಲ್ಲಿ ಆಳುವವರ ಮತ್ತು ಆಳಿಸಿಕೊಳ್ಳುವವರ ಅಂತರ ಹೆಚ್ಚಾಗಿತ್ತೇ ಹೊರತು, ರಷ್ಯಾ, ಚೈನಾ ಮತ್ತು ದಕ್ಷಿಣ ಅಮೆರಿಕಾ ದೇಶಗಳಲಲ್ಲ. ಹಾಗಾಗಿ, ಅದು ಸಲ್ಲದ ಪ್ರದೇಶಗಳಲ್ಲಿ ಮಾತ್ರ ಪ್ರಭಲವಾಗಿ ಹರಡಿ, ಆ ದೇಶದ ಸ್ಥಿತಿಗತಿಗಳನ್ನೂ ಹಾಳು ಮಾಡಿತ್ತು.

ಎಡ-ಬಲಗಳನ್ನು ತಿರಸ್ಕರಿಸಿದ ಮಾತ್ರಕ್ಕೆ, ಕಾಂಗ್ರೆಸ್ ಅಥವಾ ಜನತಾ ಪಕ್ಷಗಳಿಗೆ ಮಣೆ ಹಾಕಲೂ ಹೋಗಲಿಲ್ಲ. ದೇಶವನ್ನು ಅಧಿಕಾರಶಾಹಿಗಳ ತೆಕ್ಕೆಗೆ ದೂಡಿದವರೇ ಈ ಎರಡೂ ಪಕ್ಷಗಳು ಅನ್ನೋದು ಅವರ ವಿಚಾರವಾಗಿತ್ತು. ಅದು ವಾಸ್ತವ ಕೂಡ. ಹೊಸ ವಿಚಾರಗಳಲ್ಲಿ, ಭೂ ಸುಧಾರಣೆ ಹರಿಕಾರ ಎಂದೇ ಹೆಸರಾಗಿರುವ ದಿ. ದೇವರಾಜ್ ಅರಸು ಅವರನ್ನು ಮುಲಾಜಿಲ್ಲದೆ ತರಾಟೆಗೆ ತೆಗೆದುಕೊಂಡಿರುವುದನ್ನೂ ಕಾಣಬಹುದು. ಅರಸುರವರನ್ನು ಟೀಕಿಸುವುದು ಎಂದರೆ ಇಂದಿಗೂ ಊಳಿಗಮಾನ್ಯ ಪದ್ದತಿಯನ್ನು ಪ್ರತಿಪಾದಿಸುವುದು ಎಂದೇ ಭಾವಿಸುತ್ತಾರೆ. ತೇಜಸ್ವಿಯವರನ್ನು ಬಿಟ್ಟರೆ, ಅರಸುರವರನ್ನು ಟೀಕಿಸಿದವರು ಕೇಶವರೆಡ್ಡಿ ಹಂದ್ರಾಳ ಮಾತ್ರ ಅಂತ ನನಗನ್ನಿಸುತ್ತದೆ.

ನಂತರದ ದಿನದಲ್ಲಿ, ಲಂಕೇಶರ ಜೊತೆ ಸೇರಿ ಪ್ರಗತಿರಂಗ ಅನ್ನೊ ಸಂಘ ಕಟ್ಟಿದರೂ, ಅದು ಕಡಿದು ಕಟ್ಟೆ ಹಾಕಿದ್ದು ಅಷ್ಟರಲ್ಲೇ ಇದೆ. ಕೊನೆಗೂ, ಇವರ ರಾಜಕೀಯ ನಿಲುವೇನು ಅನ್ನೋದು ನನಗೆ ಅರ್ಥವಾಗಲೇ ಇಲ್ಲ. ಆರ್ಥಿಕ ಉದಾರೀಕರಣ ಸಾಮಾಜಕ್ಕೆ ಪಿಡುಗು ಅನ್ನೋದನ್ನು ಹೇಳುತ್ತಲೇ, ಅದೊಂದು ಅನಿವಾರ್ಯ ಭೂತ ಮತ್ತು ಅದರಲ್ಲಿ ನಮ್ಮದೇ ಆದ ಸ್ಥಾನಮಾನ ಕಂಡುಕೊಳ್ಳುವ ಅನಿವಾರ್ಯತೆ ಇದೆ ಅಂತ ಹೇಳಿದ್ದರು.

ಒಮ್ಮೆ ತೇಜಸ್ವಿಯವರನ್ನು ಹೆಮಿಂಗ್ವೆಗೆ ಹೋಲಿಸಿ ಬರೆದ ಲೇಖನವನ್ನು ಓದಿದ್ದೆ. ಹಾಗೇ ಅದರ ವಿಷಯವನ್ನು, ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿ ನನ್ನ ಹಿರಿಯರಾಗಿದ್ದ ನಚ್ಚಿಯವರ ಜೊತೆ ಪ್ರಸ್ತಾವಿಸಿದೆ. `ಇಲ್ವೋ ಮಾಕೋನಹಳ್ಳಿ... ಅವರಿಬ್ಬರನ್ನು ಒಂದೇ ತಕ್ಕಡಿಗೆ ಹಾಕಿ ತೂಗೋಕೆ ಆಗೋದಿಲ್ಲ. ಇಬ್ಬರೂ ಬದುಕಿದ ರೀತಿಗಳೇ ಬೇರೆ. ಹೆಮಿಂಗ್ವೆ ಹೆಮಿಂಗ್ವೆನೇ, ತೇಜಸ್ವಿ ತೇಜಸ್ವಿನೇ,’ ಅಂತ ಹೇಳಿದರು. ಅವತ್ತು ಆ ಮಾತು ನನಗಿಷ್ಟವಾಗಿರಲಿಲ್ಲ. ಕೆಲವು ವರ್ಷಗಳ ಮೇಲೆ, ನಚ್ಚಿ ಹೇಳಿದ್ದು ಸರಿ ಅಂತ ಅನ್ನಿಸ್ತು.

ಜೀವನದಲ್ಲಿ ಅರ್ಥವಾಗದ ವಿಷಯಗಳು ಎಷ್ಟೋ ಇರುತ್ತವೆ. ಕೆಲವೊಮ್ಮೆ, ಅರ್ಥವಾಗಿಯೂ, ಅರ್ಥವಾಗದೇ ಇರುವ ವಿಷಯಗಳೂ ಇವೆ. ಅದು ಗ್ರಹಿಕೆಯ ಲೋಪವೋ, ಅಥವಾ ಅರ್ಥವಾಗಿದೆ ಅನ್ನೋ ತಪ್ಪು ಗ್ರಹಿಕೆಯೋ ಅನ್ನುವುದೇ ಒಂದು ಗೊಂದಲದ ಗೂಡು.

ನನ್ನ ಅಭಿಪ್ರಾಯದಲ್ಲಿ, ಮನುಷ್ಯನನ್ನು ಹೆಚ್ಚಾಗಿ ಕಾಡುವ ವಿಷಯಗಳೆಂದರೆ, ಮೌನ ಮತ್ತು ಸಾವು. ಕಾಡಿನಲ್ಲಿ ಒಬ್ಬನೇ ಕುಳಿತು, ಶೂನ್ಯದತ್ತ ದೃಷ್ಟಿ ನೆಟ್ಟು, ಮೌನದ ನೀರವತೆಯನ್ನು ಅನುಭವಿಸುವುದರಿಂದ ಅಪಾರ ಮನಶಾಂತಿ ದೊರಕುತ್ತದೆ ಅನ್ನೋದು ನನ್ನ ಅಭಿಪ್ರಾಯ. ಅದನ್ನು ತೇಜಸ್ವಿಯವರು ಅಪಾರವಾಗಿ ಅನುಭವಿಸಿದ್ದರು.

ಅದೇ, ಸಾವಿನ ಬಗ್ಗೆ ಯೋಚನೆ ಮಾಡಿದರೆ, ಗೊಂದಲಗಳೇ ಹೆಚ್ಚಾಗುತ್ತದೆ. ಅಮರ ಅನ್ನೋ ಪದಕ್ಕೆ ಅರ್ಥ ಹುಡುಕೋಕೆ ಹೋಗೋದು ಒಂದು ಸಾಹಸವೇ ಸರಿ.

ಹನ್ನೊಂದು ವರ್ಷಗಳ ಕೆಳಗೆ, ಏಪ್ರಿಲ್ ಒಂದನೇ ತಾರೀಖಿನಂದು ಎಷ್ಟು ನಕ್ಕಿದ್ದೆನೋ ಏನೋ? ಮೂರ್ಖರ ದಿನವಲ್ಲವೇ ಅದು? ಆದರೆ, ಇನ್ನೂ ನಾಲ್ಕು ದಿನಗಳ ನಂತರ ದೊಡ್ಡ ಮೂರ್ಖನಾಗುವೆ ಅನ್ನೋದು ಗೊತ್ತಿರಲಿಲ್ಲ. ತೇಜಸ್ವಿಯವರ ಮಾಯಾ ಲೋಕದ ಎರಡನೇ ಭಾಗಕ್ಕಾಗಿ ಕಾಯುತ್ತಿದ್ದ ಕಾಲ ಅದು. ಒಂದು ಗುಡ್ ಬೈನೂ ಹೇಳದೆ ಹೋಗಿಬಿಟ್ಟರು.
ಸಾವೇ ಕೊನೆಯಾಗಿದ್ದರೆ, ಅವತ್ತೇ ತೇಜಸ್ವಿಯೂ ನಮ್ಮೆಲ್ಲರ ಜೀವನದಿಂದ ಹೊರಗಾಗಬೇಕಿತ್ತು. ಪ್ರಕೃತಿ, ಪರಿಸರ, ವಿಕಾಸ, ವಿಜ್ಞಾನ, ದಿನ ನಿತ್ಯದ ಜೀವನ, ರಾಜಕೀಯ, ರೈತರ ಬವಣೆ ಎಲ್ಲವನ್ನೂ ಸರಳವಾಗಿ ಜನರ ಮನ ಮುಟ್ಟುವಂತೆ ಬರೆದು, ಹಾಗೇ ನಮ್ಮೊಳಗೆ ಉಳಿದುಕೊಂಡರು. ಹಾಗೇಕೆ? ಸಾವಿನ ನಂತರವೂ ತೇಜಸ್ವಿ ನನ್ನ ಜೀವನದಿಂದ ಏಕೆ ಮಾಸಿ ಹೋಗಿಲ್ಲ ಅಂತ ಎಷ್ಟೋ ಸಲ ನನ್ನನ್ನು ನಾನೇ ಕೇಳಿಕೊಂಡಿದ್ದೇನೆ. ಉತ್ತರ ಇನ್ನೂ ಸಿಕ್ಕಿಲ್ಲ.

ಜೀವನದಲ್ಲಿ ನನಗರ್ಥವಾಗದ ವಿಷಯಗಳ ಪಟ್ಟಿ ದೊಡ್ಡದಿದೆ. ಅದರಲ್ಲಿ ಒಂದು.... ತೇಜಸ್ವಿ.


ಮಾಕೋನಹಳ್ಳಿ ವಿನಯ್ ಮಾಧವ




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ