ಶನಿವಾರ, ಜುಲೈ 14, 2012

ಸಂದರ್ಶನ



  
ಆ ಸಂದರ್ಶನ ಕಾವೇರಿ ನೀರಿನೊಂದಿಗೆ ಕೊಚ್ಚಿ ಹೋಗಿತ್ತು

`ಅಲ್ಲ ಕಣ್ಲೆ.. ನಾಳೆ ಬೆಳಗಾ ಮುಂದೆ ಒಂದ್ ಕೆಲ್ಸ ಮಾಡೋಣ. ಕೃಷ್ಣನ ಇಂಟರ್ ವ್ಯೂ ಮಾಡಾಣ.. ಏನಂತಿ?’
ಬಾಟ್ಲಿಯಿಂದ ಬೀರನ್ನು ಲೋಟಕ್ಕೆ ಸುರಿಯುತ್ತಿದ್ದ ನಾನು, ಒಂದು ಕ್ಷಣ ನಿಲ್ಲಿಸಿ, `ಹೂಂಅಂದವನೇ ಮತ್ತೆ ಸುರಿಯುವುದನ್ನು ಮುಂದುವರೆಸಿದೆ.
ಬಿಯರ್ ಸುರಿದುಕೊಂಡು ಒಂದು ಗುಟುಕು ಕುಡಿದವನೇ, ಬೇರರ್ ಕಡೆಗೆ ಕೈ ಬೀಸಿ ಕರೆದು, `ತಿನ್ನೋಕೆ ಏನಾದ್ರೂ ಬೇಕಾ?’ ಅಂತ ಕೇಳ್ದೆ.
ಕುಡಿಯೋದಿಲ್ಲ, ಸೇದೋದಿಲ್ಲ ಮತ್ತು ಮಾಂಸ ಸಹ ತಿನ್ನೋದಿಲ್ಲ. ಭರತನಿಗೆ ಒಂದು ಪ್ಲೇಟ್ ಪಕೋಡ ಮತ್ತು ಒಂದು ಪ್ಲೇಟ್ ಮೊಸರನ್ನ ಇದ್ರೆ ಸಾಕು. ಜ್ಯೂಸ್ ಕುಡಿಯೋಕೂ ಹಿಂದೆ ಮುಂದೆ ನೋಡ್ತಿದ್ದ. ಸರಿ, ಪಕೋಡ ಆರ್ಡರ್ ಮಾಡಿ, ಸಿಗರೇಟ್ ಹಚ್ಕೊಂಡೆ.
ಅಷ್ಟರವರೆಗೆ ಅಸಹನೆಯಿಂದ ನನ್ನನ್ನೇ ನೋಡ್ತಿದ್ದ ಭರತ, `ಅಲ್ಲಲೇ, ಒಂದು ಫೋನ್ ಮಾಡ್ಲೇ,’ ಅಂದ.
`ಯಾರಿಗೆ?’ ಅಂತ ಕೇಳ್ದೆ.
`ಅದೇ, ಕೃಷ್ಣನ ಜೊತೆ ಇರ್ತಾರಲ್ಲದಿನೇಶ್ ಅಥವಾ ಶ್ರೀಧರ್ ಗೆ. ಇಂಟರ್ ವ್ಯೂ ಫಿಕ್ಸ್ ಮಾಡೋಕೆ,’ ಅಂದ.
ನಂಗಂತೂ ರೇಗಿ ಹೋಯ್ತು. ಇದೇನು ಮೊದಲ ಸಲ ಅಲ್ಲ, ಭರತ ಮಾತಾಡಿದ್ದು ಅಸಂಬದ್ದ ಅಂತ ನಂಗೆ ಅನ್ನಿಸಿದ್ದು. `ಸ್ವಲ್ಪ ಸುಮ್ಮನಿರ್ತಿಯಾ? ನೋಡೋ, ಕೃಷ್ಣನ ಸರ್ಕಾರಕ್ಕೆ ಮೂರು ವರ್ಷ ತುಂಬಿದೆ. ಎಲ್ಲಾ ಎಡಿಟರ್ ಗಳೂ ಬಂದು ಅವರನ್ನ ಇಂಟರ್ ವ್ಯೂ ಮಾಡಿಕೊಂಡು ಹೋಗ್ತಿದ್ದಾರೆ. ನಾವಿಬ್ಬರು ಪುಟುಗೋಸಿ ರಿಪೋರ್ಟರ್ ಗಳು ಮಾಡಿದ ಇಂಟರ್ ವ್ಯೂ ಯಾರು ಪ್ರಿಂಟ್ ಮಾಡ್ತಾರೆ ಹೇಳು? ನಿನ್ನ ಮತ್ತು ನನ್ನ ಎಡಿಟರ್ ಗಳೂ ಬಂದು ಇಂಟರ್ ವ್ಯೂ ಮಾಡಿಯಾಗಿದೆ. ನಾವಿಬ್ಬರೂ ಮತ್ತಿನ್ನೇನು ಮಾಡೋದು ಹೇಳು. ಹಾಗೇನಾದ್ರೂ ಕೃಷ್ಣ ಜೊತೆ ಮಾತಾಡ್ಬೇಕು ಅಂತಿದ್ರೆ, ನಾಳೆ ನೋಡೋಣಂತೆ. ಯಾವಾಗಾದ್ರೂ ರೆಸ್ಟ್ ತಗೊಳ್ಳೋಕೆ ಅಂತ ನಿಂತಾಗ, ಇಬ್ಬರೇ ಮಾತಾಡ್ಸೋಕೆ ಅರೇಂಜ್ ಮಾಡ್ತೀನಿ,’ ಅಂದೆ.
ಆಗಿದ್ದಿಷ್ಟೆ. ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಪಾದಯಾತ್ರೆ ಹೊರಟಿದ್ದರು. ಕಳೆದ ಮೂರು ವರ್ಷಗಳಲ್ಲಿ, ಕೃಷ್ಣರವರಿಗೆ ಯಾವುದೂ ಸರಿ ಹೋಗಿರಲಿಲ್ಲ. ಮೊದಲ ಆರು ತಿಂಗಳು ಮಾತ್ರ ಹನಿಮೂನ್ ಪಿರಿಯಡ್ ಇದ್ದದ್ದು. ಅಲ್ಲಿಂದ ಮುಂದೆ ಬರೀ ಬರಗಾಲ, ಕೋರ್ಟ್ ಕೇಸ್ ಗಳು ಮತ್ತು ವೀರಪ್ಪನ್ ಹಾವಳಿ.
ಅದು ಹಾಳಾಗಿ ಹೋಗಲಿ ಅಂದರೆ, ಕೃಷ್ಣರವರು ತರಬೇಕು ಅಂತ ಇದ್ದ ಬದಲಾವಣೆಗಳಿಗೆ ಅವರ ಪಕ್ಷದವರೇ ವಿರೋಧವಾಗಿದ್ದರು. ಅಲ್ಲಿವರೆಗೆ ತಮ್ಮ ಪಾಡಿಗೆ ಬ್ಯುಸಿನೆಸ್ ಮಾಡಿಕೊಂಡಿದ್ದ ಕಾರ್ಪೋರೆಟ್ ಧಣಿಗಳು, ಸರ್ಕಾರದ ನಿರ್ಧಾರಗಳಲ್ಲಿ ಮೂಗು ತೂರಿಸಲು ಶುರುಮಾಡಿದ್ದರು. ಮಂತ್ರಿಗಳಂತೂ, ತಮ್ಮೊಳಗೆ ಹಾವು-ಮುಂಗುಸಿಗಳಂತೆ ಕಚ್ಚಾಡಲು ಶುರುಮಾಡಿ, ಸರ್ಕಾರದ ಮರ್ಯಾದೆಯನ್ನು ಮೂರಾಬಟ್ಟೆ ಮಾಡಿದ್ದರು.
ಆಗಲೇ ಶುರುವಾಗಿದ್ದು ತಮಿಳುನಾಡಿನ ತರಲೆ. ಕಾವೇರಿ ನೀರನ್ನು ಕರ್ನಾಟಕ ಬಿಡುತ್ತಿಲ್ಲ ಅಂತ ಸುಪ್ರೀಂ ಕೋರ್ಟ್ ಮೆಟ್ಟಲು ಹತ್ತಿದ್ದರು. ಏನೇ ಆದರೂ, ರಾಜ್ಯ ಸಂಕಷ್ಟದಲ್ಲಿದ್ದಾಗ ಕಾವೇರಿ ನೀರು ಬಿಡುವುದಿಲ್ಲ ಅಂತ ಕೃಷ್ಣರವರು, ಬೆಂಗಳೂರಿನಿಂದ ಕೆ.ಆರ್. ಸಾಗರದವರೆಗೆ  ಪಾದಯಾತ್ರೆ ಹೊರಡುತ್ತೇವೆ ಅಂತ ಘೋಷಿಸಿದರು.
ಅವರು ಹೊರಟ ತಕ್ಷಣವೇ, ದೇವೇಗೌಡರು ಅವರಿಗೆ `ವಿನೂತನ ಮಣ್ಣಿನ ಮಗಅಂತ ಬಿರುದು ದಯಪಾಲಿಸಿದರು. ಅವರ ಪಕ್ಷದವರೇ ಆದ ಮಂಡ್ಯದ ಜಿ.ಮಾದೇಗೌಡರು ಪಾದಯಾತ್ರೆಯ ವಿರದ್ದ ಧರಣಿ ಶುರುಮಾಡಿದರು. ಕೊನೆಗೂ ಮಾತುಕತೆಗಳಾಗಿ, ಮಂಡ್ಯದವರೆಗೆ ಪಾದಯಾತ್ರೆ ಮಾಡುವುದು ಅಂತ ನಿಶ್ಚಯವಾಯಿತು.
ಎಲ್ಲಾ ಪತ್ರಿಕೆಗಳಿಂದ ಹೊರಟಂತೆ, ನಮ್ಮ ಪತ್ರಿಕೆಯಿಂದ ನಾನೂ ಪಾದಯಾತ್ರೆಯಲ್ಲಿ ಕಾಲು ಹಾಕಿದೆ. ಹಾಗೇ, ಕನ್ನಡ ಪ್ರಭದಿಂದ ಭರತ್ ಬಂದಿದ್ದ. ಒಂಬತ್ತು ದಿನ ನೆಡೆದ ಮೇಲೆ, ಕೃಷ್ಣರವರು ಮಂಡ್ಯದ ಹೊರಭಾಗದಲ್ಲಿ, ಹೋಟೆಲ್ ಒಂದರಲ್ಲಿ ತಂಗಿದ್ದರು. ನಾನು ಮತ್ತು ಭರತ, ಮಂಡ್ಯದ ಹೋಟೆಲ್ ಒಂದರಲ್ಲಿ ರೂಮು ಮಾಡಿಕೊಂಡು ಉಳಿದಿದ್ದೆವು. ಮಾರನೇ ದಿನದ ಪಾದಯಾತ್ರೆ ಮುಗಿದ ನಂತರ, ಒಂದು ಸಾರ್ವಜನಿಕ ಸಭೆಯೊಂದಿಗೆ ನಮ್ಮ ಪಾದಯಾತ್ರೆ ಮುಕ್ತಾಯವಾಗುತ್ತಿತ್ತು.
ರಾತ್ರಿ ಊಟಕ್ಕೆ ಅಂತ ಹೋಟೆಲ್ ಒಂದರಲ್ಲಿ ಕೂತ ತಕ್ಷಣವೇ ಭರತನಿಗೆ ಇಂಟರ್ ವ್ಯೂ ವಿಷಯ ತಲೆಗೆ ಬಂದಿದ್ದು. ಯಥಾ ಪ್ರಕಾರ,ನಾನು ಅವನ ಮೇಲೆ ರೇಗಿದ್ದೆ.
`ಅಲ್ಲ ಕಣ್ಲೆನಾ ಹೇಳೋದ್ ಸ್ವಲ್ಪ ಕೇಳು. ನಮ್ಮ ಇಂಟರ್ ವ್ಯೂ, ಛೀಫ್ ಮಿನಿಸ್ಟರ್ ಕೃಷ್ಣನನ್ನು ಅಲ್ಲ. ಸೋಮನಹಳ್ಳಿಯ ಕೃಷ್ಣನನ್ನು…’ ಅಂತ ಹೇಳ್ದ.
`ಅಲ್ವೋ, ಮುಖ್ಯಮಂತ್ರಿಯಾದಮೇಲೆ ಸೋಮನಹಳ್ಳಿ ಕೃಷ್ಣ ಅನ್ನೋ ಐಡೆಂಟಿಟಿನೇ ಉಳಿಯೋದಿಲ್ವಲ್ಲೋ,’ ಅಂದೆ.
`ಅದನ್ನೇ ನಾನು ಹೇಳ್ತಿರೋದು. ನಾವು ಆ ಐಡೆಂಟಿಟಿನ ಮತ್ತೆ ಸೃಷ್ಟಿ ಮಾಡ್ಬೇಕು. ನಾವು ಮಖ್ಯಮಂತ್ರಿಯನ್ನು ಮಾತಾಡ್ಸಲೇ ಬಾರದು. ಬರೀ ಕೃಷ್ಣನನ್ನು ಮಾತ್ರ ಮಾತಾಡ್ಸಬೇಕು,’ ಅಂದ.
ಯಾಕೋ ವಿಷಯ ಕಾಂಪ್ಲಿಕೇಟ್ ಮಾಡ್ತಿದ್ದಾನೆ ಅನ್ನಿಸ್ತು. `ಸರಿಯಪ್ಪ, ಸೋಮನಹಳ್ಳಿ ಕೃಷ್ಣನ್ನೇ ಇಂಟರ್ ವ್ಯೂ ಮಾಡೋಣ. ಏನಂತ ಕೇಳ್ತೀಯಾ?’ ಅಂದೆ.
ಅಲ್ಲಿವರೆಗೆ ಸ್ವಲ್ಪ ಸಪ್ಪೆಯಾಗಿದ್ದ ಭರತ ಒಮ್ಮೆಲೆ ಉತ್ಸಾಹಗೊಂಡ. `ನೋಡ್ಲೆಕೃಷ್ಣ, ತಮ್ಮ ಜೀವನದಲ್ಲಿ ಎಷ್ಟೊ ಸಲ ಮಂಡ್ಯಕ್ಕೆ ಬಂದಿದ್ದಾರೆ. ಕಾರಲ್ಲಿ, ಬಸ್ಸಲ್ಲಿ, ಟ್ರೈನ್ ನಲ್ಲಿ ಮತ್ತೆ ಹೆಲಿಕಾಪ್ಟರ್ನಲ್ಲಿ ಕೂಡ. ಇದೇ ಮೊದಲ ಸಲ ನೆಡ್ಕೊಂಡು ಬರ್ತಿದ್ದಾರೆ. ಅವರಿಗೆ ದಾರಿಯಲ್ಲಿ ಏನನ್ನಿಸಿತು?’ ಅವರ ಜೀವನದಲ್ಲಿ, ಅದೂ ಈ ವಯಸ್ಸಿನಲ್ಲಿ ನೆಡೆಯುವಾಗ, ಅವರಿಗೆ ಬಂದ ಬಾಲ್ಯದ ನೆನಪುಗಳೇನು?.....’ ಅಂತ ಭರತ್ ಹೇಳ್ತಾನೇ ಇದ್ದ.
ಅಲ್ಲಿವರೆಗೆ ಒರಗಿ ಕುಳಿತು ಬಿಯರ್ ಕುಡಿಯುತ್ತಿದ್ದ ನಾನು, ನೆಟ್ಟಗೆ ಕೂತು ಕೇಳೋಕೆ ಶುರು ಮಾಡ್ದೆ. ಭರತ್ ಇನ್ನೂ ಮಾತಾಡ್ತಾ ಇದ್ದ ಹಾಗೇನೆ, ನನ್ನ ಮೊಬೈಲ್ ಫೋನ್ ಎತ್ತಿಕೊಂಡು, ದಿನೇಶ್ ನಂಬರ್ ಡಯಲ್ ಮಾಡಿ, ಹಾಗೇ ಎದ್ದು ಹೋದೆ.
`ಡೌಟು ವಿನಯ್ಸಾಹೇಬ್ರಿಗೆ ವಯಸ್ಸಾಗಿದೆ ನೋಡಿ. ನೆಡೆದೂ ನೆಡೆದೂ ಸುಸ್ತಾಗಿ ಹೋಗಿರ್ತಾರೆ. ಅದೂ ಅಲ್ದೆ, ಎಲ್ಲರಿಗೂ ಇಂಟರ್ ವ್ಯೂ ಕೊಟ್ಟೂ ಕೊಟ್ಟೂ ಸಾಕಾಗಿ ಹೋಗಿದೆ. ಅವ್ರು ಮಾತಾಡಲ್ಲ ಅನ್ಸುತ್ತೆ,’ ಅಂದ್ರು ದಿನೇಶ್.
`ನೋಡ್ರಿಇಷ್ಟು ದಿನದಲ್ಲಿ ಏನೂ ಕೇಳಿಲ್ಲ. ಇಂಟರ್ ವ್ಯೂ ಕೇಳ್ತಿದ್ದೀನಿ ಅಂದ್ರೆ, ಅದು ಡಿಫರೆಂಟ್ ಆಗಿರುತ್ತೆ. ಸಾಹೇಬ್ರು ಮಾತಾಡ್ತಾರೋ, ಇಲ್ವೋ ಅನ್ನೋದು ಆಮೇಲೆ ನೋಡೋಣ. ಬೆಳಗ್ಗೆ ಏಳುವರೆಗೆ ಬರ್ತೀನಿ, ಅಷ್ಟೆ,’ ಅಂತ ಹೇಳಿ ಫೋನ್ ಕಟ್ ಮಾಡಿದೆ.
ದಿನೇಶ್ ಗೇನೂ ಇದು ಹೊಸದಲ್ಲ. ಸಲಿಗೆ ಇದ್ದಿದ್ದರಿಂದ, ನಾನು ಒರೊಟೊರಟಾಗಿ ಹೇಳಿದ್ರೂ ಬೇಜಾರು ಮಾಡ್ಕೋತ್ತಿರಲಿಲ್ಲ. ಹಾಗೇಂತ, ನಾನ್ಯಾವತ್ತೂ ಅವರನ್ನು ಇಕ್ಕಟ್ಟಿಗೆ ಸಿಕ್ಕಿಸಿರಲಿಲ್ಲ.
`ನಾಳೆ ಬೆಳಗ್ಗೆ ಏಳೂವರೆಗೆ ಇಂಟರ್ ವ್ಯೂ ಕಣೋ,’ ಅಂತ ಹೇಳಿದ ತಕ್ಷಣ ಭರತನ ಮುಖ ಅರಳಿತು. ಇನ್ನೇನೋ ಹೇಳೋಕೆ ಅಂತ ಹೋದಾಗ, ನಾನೇ ಅಡ್ಡ ಹಾಕೆ ಹೇಳ್ದೆ: `ಏನು ಕೇಳ್ಬೇಕೂಂತ ಇದ್ದೀಯೋ, ಅದನ್ನ ಕೃಷ್ಣನ ಹತ್ತಿರ ಕೇಳು. ನನ್ನ ತಲೆ ತಿನ್ಬೇಡ,’ ಅಂತ.
ಮಾರನೇ ದಿನ ಬೆಳಗ್ಗೆ ಏಳೂವರೆ ಹೊತ್ತಿಗೆ ನಾವು ಕೃಷ್ಣ ತಂಗಿದ್ದ ಹೋಟೆಲ್ ಹೊರಗೆ ನಿಂತಿದ್ದೆವು. ಸೆಕ್ಯುರಿಟಿ ತಪ್ಪಿಸಿಕೊಳ್ಳೋಕೆ ಆಗ್ದೆ, ದಿನೇಶ್ ನನ್ನೇ ಹೋಟೆಲ್ ನಿಂದ ಹೊರಗೆ ಕರೆದು, ಮತ್ತೆ ಒಳಗೆ ಹೋದೆವು. ಕೃಷ್ಣರವರು ಉಳಿದುಕೊಂಡಿದ್ದ ರೂಮಿಗೆ ಕರೆದುಕೊಂಡು ಹೋದ ದಿನೇಶ್, ನಮ್ಮಿಬ್ಬರನ್ನು ಬಿಟ್ಟು ಸುಮ್ಮನೆ ನಿಂತರು.
ಕೃಷ್ಣರವರಿಗೆ ಇಂಟರ್ ವ್ಯೂ ಬಗ್ಗೆ ಏನೂ ಗೊತ್ತಿದ್ದಂತೆ ಕಾಣಲಿಲ್ಲ. ಕುರ್ಚಿಯಲ್ಲಿ ಕೂತು, ಕಾಲು ಮಸಾಜ್ ಮಾಡಿಸಿಕೊಳ್ಳುತ್ತಾ ಕೂತಿದ್ದರು. ನಮ್ಮನ್ನು ನೋಡಿ ನಕ್ಕರಷ್ಟೆ, ಮಾತಾಡಲು ಅಂಥಾ ಆಸಕ್ತಿ ತೋರಿಸಲಿಲ್ಲ.
`ಕಾಲು ನೋವೇನಾದ್ರೂ ಇದೆಯಾ ಸರ್?’ ಅಂತ ಕೇಳ್ದೆ.
`ಹಾಂಸ್ವಲ್ಪ. ಏಜ್ ಫ್ಯಾಕ್ಟರ್ ನೋಡಿ, ಒತ್ತಿಸಿಕೊಳ್ಳಬೇಕಾಗುತ್ತೆ,’ ಅಂತ ನಿರಾಸಕ್ತಿಯಿಂದ ಅಂದ್ರು. `ಯಾಕೋ ಕೈ ಕೊಡ್ತಿದೆ,’ ಅನ್ಕೊಂಡೆ.
ಒಂದು ಸೆಕೆಂಡ್ ತಡೆದು, ನಾನೇ ಭರತನ ಪ್ರಶ್ನೆ ಕದ್ದು, ಕೃಷ್ಣರಿಗೆ ಕೇಳಿದೆ: ` ಸರ್, ಜೀವನದಲ್ಲಿ ಲೆಖ್ಖವಿಲ್ಲದಷ್ಟು ಸಲ ಮಂಡ್ಯಕ್ಕೆ ಬಂದಿದ್ದೀರಿ. ಕಾರಲ್ಲಿ, ಬಸ್ಸಲ್ಲಿ, ಟ್ರೈನ್ ನಲ್ಲಿ ಮತ್ತೆ ಹೆಲಿಕಾಪ್ಟರ್ನಲ್ಲಿ ಕೂಡ. ಇದೇ ಮೊದಲ ಸಲ ನೆಡ್ಕೊಂಡು ಬರ್ತಿದ್ದೀರಿ. ನಿಮಗೆ ದಾರಿಯಲ್ಲಿ ಏನನ್ನಿಸಿತು?’
ಅಲ್ಲಿವರೆಗೆ ಅನ್ಯಮನಸ್ಕರಾಗಿ ಕೂತಿದ್ದ ಕೃಷ್ಣ ಒಂದೇ ಸಲ ನೆಟ್ಟಗೆ ಕುಳಿತರು. ಅವರ ಮುಖದಲ್ಲಿ ಏನೋ ಒಂದು ಥರದ ಮುಗುಳ್ನಗೆ ಮೂಡಿತು. ಧೀರ್ಘವಾಗಿ ಉಸಿರೆಳೆದುಕೊಂಡು, ಏನೋ ಯೋಚನೆ ಮಾಡಿಕೊಂಡು, ನಿಧಾನವಾಗಿ ಹೇಳಿದರು: `ಇದು ಮೊದಲನೇ ಸಲ ಅಲ್ಲ. ಬೆಂಗಳೂರಿಂದ, ಮಂಡ್ಯಕ್ಕೆ ಮೊದಲ ಸಲ. ಆದ್ರೆ, ಒಂದ್ಸಲ ಮಂಡ್ಯದಿಂದ ಸೋಮನಹಳ್ಳಿಗೆ ನೆಡೆದಿದ್ದೆ. ಆಗಿನ್ನೂ ನಾನು ಹೈಸ್ಕೂಲಿನಲ್ಲಿ ಓದುತ್ತಿದ್ದೆ. ಯಾವುದೋ ಮುಷ್ಕರವಾಗಿ, ರೈಲು ಮತ್ತು ಬಸ್ ಗಳು ಎರಡನ್ನೂ ನಿಲ್ಲಿಸಿದ್ದರು….,’ ಅಂತ ಗತಕಾಲಕ್ಕೆ ತೆರಳಿದರು.
ಅಲ್ಲಿಂದ ಮುಂದೆ, ಭರತ ಮತ್ತು ಕೃಷ್ಣರವರ ಸಂಭಾಷಣೆಯಾದರೆ, ನಾನು ಮೂಕ ಪ್ರೇಕ್ಷಕನಾಗಿ ಕೂತಿದ್ದೆ. ಕೆಲವು ಸಲ, ಕೃಷ್ಣರ ಸಹೋದರನಾದ ಎಸ್.ಎಂ.ಶಂಕರ್ ಕೆಲವು ವಿಷಯಗಳನ್ನು ನೆನಪಿಸುತ್ತಿದ್ದರು. ಇಂಟರ್ ವ್ಯೂ ಮುಗಿದಾಗ, ಕೃಷ್ಣರವರೇ ಹೇಳಿದ್ರು: `ಈ ಸಂಭಾಷಣೆ ತುಂಬಾ ಚೆನ್ನಾಗಿತ್ತು,’ ಅಂತ. ಹೊರಗಡೆ ಬರುವಾಗ ದಿನೇಶ್ ಮೆಲ್ಲನೆ ನನ್ನ ಕಿವಿಯಲ್ಲಿ ಹೇಳಿದ್ರು: `ಎಲ್ಲರೂ ರಾಜಕೀಯದ ಬಗ್ಗೆ ಕೇಳಿದ ಪ್ರಶ್ನೆಯನ್ನೇ ಕೇಳಿ, ಸಾಹೇಬರಿಗೆ ತಲೆ ಕೆಟ್ಟು ಹೋಗಿತ್ತು. ನಿಮ್ಮ ಪ್ರಶ್ನೆಗಳು ತುಂಬಾ ಚೆನ್ನಾಗಿದ್ದವು,’ ಅಂದರು.
ನಾನೂ ಮತ್ತು ಭರತ ಆಟೋ ಹತ್ತಿ ಸೀದ ಮಂಡ್ಯಕ್ಕೆ ಬಂದೆವು. ಇಂಟರ್ ನೆಟ್ ಪಾರ್ಲರ್ ಗೆ ಹೋದವರೇ, ಇಂಟರ್ ವ್ಯೂ ಬರೆಯಲು ಶುರುಮಾಡಿದೆವು. ಅಂದಿನ ಪಾದಯಾತ್ರೆಯಲ್ಲಿ ನೆಡೆಯುವುದು ನಮಗೆ ಅರ್ಥಹೀನವಾಗಿತ್ತು. ಇಂಟರ್ ವ್ಯೂ ಬರೆದು ಆಫೀಸಿಗೆ ಕಳುಹಿಸಿದವನೇ, ನಮ್ಮ ಸಂಪಾದಕರಾಗಿದ್ದ ಶಂತನು ದತ್ತರಿಗೆ ಫೋನ್ ಮಾಡಿ, `ಸರ್, ಕೃಷ್ಣರವರನ್ನು ಮಾತಾಡಿಸಿದ್ದೆ. ಅದನ್ನ ಇಂಟರ್ ವ್ಯೂ ಥರ ಬರೆದು ಕಳುಹಿಸಿದ್ದೇನೆ. ಸ್ವಲ್ಪ ನೋಡಿ,’ ಅಂದೆ.
`ಅವರ ಇಂಟರ್ ವ್ಯೂ ಆಗಲೇ ಅಚ್ಚಾಗಿದೆ. ನೋಡೋಣ,’ ಅಂದ್ರು. ಅಷ್ಟರೊಳಗೆ, ಭರತ ಕೂಡ ಇಂಟರ್ ವ್ಯೂ ಬರೆದು ಮುಗಿಸಿ ಬಂದ. ಇಬ್ಬರೂ ಕೃಷ್ಣರ ಪಾದಯಾತ್ರೆ ಮಂಡ್ಯ ತಲುಪುವುದನ್ನು ಕಾಯುತ್ತಾ ಕೂತೆವು.  ಒಂದು ಘಂಟೆಯೊಳಗೆ ಆಫೀಸಿನಿಂದ ಫೋನ್ ಮಾಡಿದ ದತ್ತ ಅವರು, `ವಿನಯ್, ಇಂಟರ್ ವ್ಯೂ ತುಂಬಾ ಇಂಟರೆಸ್ಟಿಂಗ್ ಆಗಿದೆ. ನಾಳೆಗೆ ತಗೊಳ್ತೀನಿ,’ ಅಂದ್ರು.
ಸಾಯಂಕಾಲದ ಸಾರ್ವಜನಿಕ ಸಭೆ ಮುಗಿಸಿದ ನಾನು ಮತ್ತುಭರತ, ಇಂಟರ್ ನೆಟ್ ಪಾರ್ಲರ್ಗೆ ಹೋಗಿ, ಸಣ್ಣ ಸುದ್ದಿಗಳನ್ನು ಬರೆದು ಕಳುಹಿಸಿದೆವು. ಹಾಗೇ, ಸಿಕ್ಕಿದ ಕಾರೊಂದನ್ನು ಹತ್ತಿ, ಬೆಂಗಳೂರು ತಲುಪಿದೆವು.
ಮನೆ ತಲುಪಿ, ಸ್ನಾನ ಮಾಡಿ ಮುಗಿಸುವ ಹೊತ್ತಿಗೆ ಭರತ ಫೋನ್ ಮಾಡಿ, `ಸುದ್ದಿ ಗೊತ್ತಾಯ್ತಾ?’ ಅಂದ.
`ಏನೋ?’ ಅಂತ ಕೇಳ್ದೆ.
`ಸುಪ್ರೀಂ ಕೋರ್ಟ್ ತೀರ್ಪು ನಾಳೆ ಇದೆ. ಕೋರ್ಟ್ ಹಿಗ್ಗಾ  ಮುಗ್ಗ ಜಾಡಿಸುತ್ತೆ ಅಂತ ರಾಜ್ಯದ ಲಾಯರ್ ಗಳು ಹೇಳಿದ್ರಂತೆ. ಅದಕ್ಕೆ ಕಾವೇರಿಯಿಂದ ತಮಿಳುನಾಡಿಗೆ ನೀರು ಬಿಟ್ಟಿದ್ದಾರೆ,’  ಅಂದ.
ಒಂದು ನಿಮಿಷ ಏನು ಹೇಳ್ಬೇಕು ಅಂತ ಗೊತ್ತಾಗಲಿಲ್ಲ. `ಥುತ್ತೇರಿಇದೂ ಎಡವಟ್ಟಾಯ್ತಾ ಕೃಷ್ಣನಿಗೆ. ಆ ಮನುಷ್ಯನ ಹಣೆಬರಹನೇ ಸರಿ ಇಲ್ಲ,’ ಅಂದೆ.
`ಏನಪ್ಪಾನಾವು ಇಂಟರ್ ವ್ಯೂ ಮಾಡಿದ ದಿನಾನೇ ಹೀಗಾಗ್ಬೇಕಾ?’ ಅಂದ.
`ಸಾಯಲಿ ಬಿಡು,’ ಅಂತ ಫೋನ್ ಇಟ್ಟೆ.
ಮಾರನೇ ದಿನ, ಕನ್ನಡ ಪ್ರಭದಲ್ಲಿ ಇಂಟರ್ ವ್ಯೂ ಮುಖಪುಟದಲ್ಲೇ ಬಂದಿತ್ತು. ನಮ್ಮ ಪತ್ರಿಕೆಯಲ್ಲಿ ಮಾತ್ರ, ಎರಡನೇ ಪುಟದಲ್ಲಿ ಹುಗಿದು ಕೂತಿತ್ತು. ಎರಡು ದಿನ ಬಿಟ್ಟು ವಿಧಾನಸೌಧದಲ್ಲಿ ದಿನೇಶ್ ಕೊಠಡಿಗೆ ಹೋಗಿದ್ದೆ. ಅಲ್ಲಿ ನಮ್ಮ ಪತ್ರಿಕೆಯಲ್ಲಿ ಅಚ್ಚಾಗಿದ್ದ ಇಂಟರ್ ವ್ಯೂ ಕತ್ತರಿಸಿ ಇಟ್ಟಿದ್ದರು.
`ಅಲ್ರೀ, ಇಷ್ಟು ಒಳ್ಳೆ ಇಂಟರ್ ವ್ಯೂ ಎರಡನೇ ಪುಟದಲ್ಲಿ ಹಾಕಿದ್ದಾರಲ್ರಿ. ಎಲ್ಲಿ ಬಂದಿದೇ ಅಂತ ಹುಡುಕಬೇಕಾಯ್ತು, ಅಂದ್ರು.
`ಅದು ಬಿಡಿ, ಕಾವೇರಿ ನೀರಲ್ಲಿ ಕೊಚ್ಕೊಂಡು ಹೋಯ್ತು,’ ಅಂತ ನಕ್ಕೆ


ಮಾಕೋನಹಳ್ಳಿ ವಿನಯ್ ಮಾಧವ

1 ಕಾಮೆಂಟ್‌: