ಶನಿವಾರ, ಜನವರಿ 28, 2012

ಅಪರಿಚಿತ


ಕರ್ಫ್ಯೂ ಮಧ್ಯದಲ್ಲೊಂದು ಸಿಗರೇಟ್ ಪುರಾಣ

ಹೈದರಾಬಾದ್ ತಲುಪಿದ ತಕ್ಷಣ ಮಾಡಿದ ಮೊದಲ ಕೆಲಸ ಎಂದರೆ ಕಾಚಿಗುಡ ಹುಡುಕಿ, ಅಲ್ಲಿ ಟೂರಿಸ್ಟ್ ಹೋಂ ಲಾಡ್ಜ್  ನಲ್ಲಿ ರೂಂ ಮಾಡಿದ್ದು. ಬೆಂಗಳೂರಿಂದ ಇನ್ನೂ ಕೆಲವರು ಬರಹುದು ಅಂತ ಗೊತ್ತಿತ್ತು. ಬೆಂಗಳೂರಿನ ಮಂಗಳೂರು ಕರೆಸ್ಪಾಂಡೆನ್ಸ್ ಕಾಲೇಜಿನಲ್ಲಿ ನನಗೆ ಹೇಳಿದ್ದರು.  ಮಧ್ಯಾಹ್ನದ ಹೊತ್ತಿಗೆ ಯಾರಾದರೂ ಸಿಗಬಹುದು ಅಂತ ಅನ್ಕೊಂಡಿದ್ದೆ, ಆದರೆ ಯಾರೂ ಸಿಗಲಿಲ್ಲ.
ಲಾಡ್ಜ್ ನಲ್ಲಿ ರೂಂ ಮಾತ್ರ ಇತ್ತು. ಊಟಕ್ಕೆ ರಸ್ತೆ ದಾಟಿ, ಇದೇ ಲಾಡ್ಜ ನವರ ರೆಸ್ಟೋರಂಟ್ ಗೆ ಹೋಗಬೇಕಿತ್ತು. ರಾತ್ರಿ ಊಟಕ್ಕೆ ಹೋದಾಗ, ಪಕ್ಕದ ಟೇಬಲ್ ನಲ್ಲಿ ಇಬ್ಬರು ಕನ್ನಡದಲ್ಲಿ ಮಾತಾಡುತ್ತಿದ್ದರು. ಅವರು ಬೆಂಗಳೂರಿನವರಾ ಅಂತ ವಿಚಾರಿಸಿದರೆ, ಅವರು ಅಲ್ಲಿನವರೇ ಅಂತ ಗೊತ್ತಾಯ್ತು. ಕಾಚಿಗುಡ ಸ್ವಲ್ಪ ಜಾಸ್ತಿ ಕನ್ನಡದವರು ಇರುವ ಜಾಗ ಅಂತ ನನಗೆ ಹೇಳಿದರು.
ಸರಿ, ತಲೆ ಕೆರ್ಕೊಂಡು ರೂಮಿಗೆ ತಲುಪಿ, ಪುಸ್ತಕ ತೆಗೆದು ಓದಲು ಶುರುಮಾಡಿದಾಗ, ಯಾರೋ ಬಾಗಿಲು ತಟ್ಟಿದರು. ತೆಗೆದಾಗ: `ನೀವು ಬೆಂಗಳೂರಿಂದ ಪರೀಕ್ಷೆ ಬರೆಯಲು ಬಂದಿದ್ದೀರಾ?’ ಅಂತ ಕೇಳಿದರು. `ಹೌದು ಬನ್ನಿ,’ ಅಂತ ಒಳಗೆ ಕರೆದೆ.
ಅವರ ಹೆಸರು ಶ್ರೀಧರ್ ಅಂತ. ಅವರು ಅಕೌಂಟೆಂಟ್ ಎಂದೂ, ಫೆರಾ ಕೇಸ್ ಗಳನ್ನು ನೋಡಿಕೊಳ್ಳುತ್ತೇನೆಂದೂ ಪರಿಚಯ ಮಾಡಿಕೊಂಡರು. ಮೊದಲನೆಯದಾಗಿ, ನನಗೆ ಫೆರಾ ಕೇಸ್ ಅಂದರೇನು ಅಂತ ಗೊತ್ತಿರಲಿಲ್ಲ. ಮತ್ತು, ನನಗೆ ಪರಿಚಯ ಹೇಳಿಕೊಳ್ಳಲು ಏನೂ ಇರಲಿಲ್ಲ. ಚಿಕ್ಕಮಗಳೂರಿನವನೆಂದೂ, ತಂದೆ ಡಾಕ್ಟರ್ ಎಂದೂ ಪರಿಚಯ ಮಾಡಿಕೊಂಡೆ. ಹಾಗೇ ಮಾತಾಡ್ತಾ ಕೂತಿದ್ದಾಗ, ಇನ್ನಿಬ್ಬರು ಒಳಗೆ ಬಂದರು. ಒಬ್ಬರು ಶಂಕರ್ ಅಂತ, ಇನ್ನೊಬ್ಬರು ಆನಂದ್ ಅಂತ.  ಆನಂದ್ ಎನ್ಐಐಟಿ  ಯಲ್ಲಿ ಕಂಪ್ಯೂಟರ್ ಕಲಿಯುತ್ತಿದ್ದರಂತೆ, ಆದರೆ ಶಂಕರ್ ನನ್ನಂತೆಯೇ, ಏನೂ ಮಾಡುತ್ತಿಲ್ಲ ಎಂದರು.
ನನಗೂ, ಶಂಕರ್ ಗೂ ಏನಾದರೂ ಕೆಲಸ ಹುಡುಕಲು ಡಿಗ್ರಿ ಬೇಕು. ಆದರೆ, ಶ್ರೀಧರ್ ಮತ್ತೆ ಆನಂದ್ ಗೆ ಯಾಕೆ ಬೇಕು? ಅಂತ ಕೇಳುತ್ತಿದ್ದಾಗಲೇ, ನಮ್ಮೆಲ್ಲರಿಗಿಂತ ಸ್ವಲ್ಪ ವಯಸ್ಸಾಗಿದ್ದವರೊಬ್ಬರು ಒಳಗೆ ಬಂದು: `ನಾನು ಶೇಖರ್ ಅಂತ. ನೇವಿಯಲ್ಲಿದ್ದೇನೆ. ನಮ್ಮ ಸರ್ವೀಸ್ ಹದಿನೈದು ವರ್ಷ ಮಾತ್ರ. ಈಗ ಬಿ.ಇ.ಎಲ್ ನಲ್ಲಿ ಪೋಸ್ಟಿಂಗ್. ಮುಂದಿನ ವರ್ಷ ರಿಟೈರ್ ಆಗ್ತೀನಿ. ನಮ್ಮ ಡಿಫೆನ್ಸ್ ನಲ್ಲಿ ಡಿಪ್ಲೋಮಾ ಅಂತ ಕೊಡೋದ್ರಿಂದ, ಡಿಗ್ರಿ ಒಂದಿರಲಿ ಅಂತ ಬಂದಿದ್ದೀನಿ,’ ಅಂದರು.
ಒಟ್ಟಿನಲ್ಲಿ, ನಾವೆಲ್ಲರೂ ನಾನಾ ಕಾರಣಗಳಿಂದ `ಡಿಗ್ರಿ ವಂಚಿತರು’. ಉಸ್ಮೇನಿಯಾ ವಿಶ್ವವಿಧ್ಯಾಲಯದಲ್ಲಿ, ಒಂದೇ ಬಾರಿಗೆ ಪರೀಕ್ಷೆ ಬರೆದು, ಡಿಗ್ರಿ ಸಂಪಾದಿಸಲು, 1990 ನೇ ಇಸವಿಯ ಅಕ್ಟೋಬರ್ ತಿಂಗಳಲ್ಲಿ ಹೈದರಾಬಾದಿಗೆ ಬಂದಿದ್ದೆವು. ರಾತ್ರಿ ಹೊತ್ತಿಗೆ ಐದಿದ್ದವರು, ಬೆಳಗ್ಗೆ ತಿಂಡಿ ತಿನ್ನಲು ಹೊರಡುವ ಹೊತ್ತಿಗೆ ಹತ್ತು ಜನವಾಗಿದ್ದೆವು.
ಮೊದಲ ಹತ್ತು ದಿನ ಅಂಥಾ ವಿಶೇಷವೇನೂ ನೆಡೆಯಲಿಲ್ಲ. ಲಾಡ್ಜ್ ನಲ್ಲಿ ಕಾಲೇಜಿನ ವಾತಾವರಣವಿತ್ತು. ಬೆಳಗ್ಗೆ ಎಲ್ಲರೂ ಪರೀಕ್ಷೆಗೆ ಹೋಗಿ ಬಂದರೆ, ಸಾಯಂಕಾಲ ಸ್ವಲ್ಪ ಹೊತ್ತು ಹರಟೆ ಹೊಡೆಯುತ್ತಿದ್ದೆವು. ಎಲ್ಲರಿಗಿಂತ ಚಿಕ್ಕವನಾಗಿದ್ದು, ನಾನು ನೋಡಿದ ಕುದುರೆಗೆ ಮೂರು ಕೊಂಬು ಇದೇ ಎಂದು ವಾದಿಸುವ ವಿತಂಡವಾದಿಯಾಗಿದ್ದ ನನ್ನ ಕಾಲೆಳೆದು, ಎಲ್ಲಾರೂ ಮಜಾ ತೆಗೆದುಕೊಳ್ಳುತ್ತಿದ್ದರು. ಹತ್ತು ದಿನಗಳಲ್ಲಿ, ಬೆಳಗ್ಗೊಂದು, ಮಧ್ಯಾಹ್ನ  ಒಂದರಂತೆ, ಇಪ್ಪತ್ತು ಪೇಪರ್ ಬರೆದಮೇಲೆ, ಹತ್ತು ದಿನ ವಿರಾಮವಿತ್ತು. ಅದಾದ ನಂತರ ಕನ್ನಡ ಮತ್ತು ಇಂಗ್ಲಿಷ್ ಪರೀಕ್ಷೆ ಇದ್ದವು. ಅವತ್ತು ಸಾಯಂಕಾಲ ವಾಪಾಸ್ ಬರುತ್ತ ಶೇಖರ್ ಗೆ ಹೇಳಿದೆ: `ಇನ್ನು ಹತ್ತು ದಿನ ಹೈದರಾಬಾದ್ ಪೂರ್ತಿ ಸುತ್ತಬೇಕು,’ ಅಂತ.
`ವಿನಯ್, ಬೇಗನೆ ಹೋಟೆಲ್ ಸೇರಬೇಕು. ಅದ್ವಾನಿ ಬಿಹಾರದಲ್ಲಿ ಅರೆಸ್ಟ್ ಆಗಿದ್ದಾರೆ. ಗಲಾಟೆಯಾಗಬಹುದು,’ ಅಂದರು.
`ಅಲ್ಲಾ ಸರ್, ಅದ್ವಾನಿ ಬಿಹಾರದಲ್ಲಿ ಅರೆಸ್ಟ್ ಆದರೆ, ಇಲ್ಯಾಕೆ ಗಲಾಟೆಯಾಗುತ್ತೆ?’ ಅಂತ ಕೇಳಿದೆ.
`ಸುಮ್ಮನೆ ನೆಡೀರಿ. ಅದನ್ನಾಮೇಲೆ ಮಾತಾಡೋಣ,’ ಅಂತ ಬೇಗ ಬೇಗನೆ ನೆಡೆದರು. ದಾರಿಯುದ್ದಕ್ಕೂ ಜನಗಳು ಗುಂಪು ಗುಂಪಾಗಿ ನಿಂತಿದ್ದರು. ಲಾಡ್ಜ್ ತಲುಪಿದ ತಕ್ಷಣ ಶೇಖರ್ ಮತ್ತು ಶಂಕರ್ ಒಳಗೆ ಹೋದರು. ನಾನು ಸಿಗರೇಟ್ ಅಂಗಡಿಗೆ ಹೋದಾಗ, ಅವನು ಬಾಗಿಲು ಮುಚ್ಚುತ್ತಿದ್ದ. `ಏನು? ಇಷ್ಟು ಬೇಗ?’ ಅಂತ ಹಿಂದಿಯಲ್ಲಿ ಕೇಳಿದೆ.
`ಪೋಲಿಸರು ಮೂರು ದಿನ ಕರ್ಫ್ಯೂ ಹಾಕಿದ್ದಾರೆ,’ ಅಂದ.
ತಕ್ಷಣವೇ ನೂರು ರೂಪಾಯಿ ನೋಟು ಕೊಟ್ಟು, ಅಷ್ಟಕ್ಕೂ ಸಿಗರೇಟ್ ಕೊಡು ಅಂದೆ. ಹನ್ನೆರಡು ಪ್ಯಾಕ್ ಸಿಗರೇಟು ನನ್ನ ಕಡೆಗೆ ನೀಡಿದವನೇ, ಬಾಗಿಲು ಹಾಕಿ, ಹಿಂದಕ್ಕೆ ತಿರುಗಿಯೂ ನೋಡದೆ ಹೊರಟು ಹೋದ. ಸಿಗರೇಟ್ ತೆಗೆದುಕೊಂಡ ನಾನು, ಏನಾಗ್ತಾ ಇದೆ ಅಂತ ಲಾಡ್ಜ್ ಬಾಗಿಲಲ್ಲಿ ನಿಂತು ನೋಡುತ್ತಿದ್ದಾಗಲೇ, ವ್ಯಾನುಗಳಲ್ಲಿ ಬಂದಿಳಿದ ಪೋಲಿಸರು ನಮ್ಮನ್ನು ಒಳಗೆ ಹೋಗುವಂತೆ ಹೇಳಿದರು.
ಕರ್ಫ್ಯೂ ಅನ್ನೋದು ಎಂಥಾ ಬೋರು ಅನ್ನೋದು ಮರುದಿನ ಮಧ್ಯಾಹ್ನವೇ ಗೊತ್ತಾಯ್ತು. ಮೊಬೈಲ್, ಇಂಟರ್ ನೆಟ್ ಏನೂ ಇಲ್ಲದ ಕಾಲ. ಟೆಲಿವಿಷನ್ ಕೂಡ ಬರೀ ದೂರದರ್ಷನ್ ಚಾನೆಲ್ ಬರುತ್ತಿತ್ತು. ಊಟ, ತಿಂಡಿಯನ್ನು ಲಾಡ್ಜ್ ನವರೇ ಸರಬರಾಜು ಮಾಡಿದರು. ಎರಡು ಇಡ್ಲಿಗೆ ಹತ್ತು ರೂಪಾಯಿ. ಮಧ್ಯಾಹ್ನ ಒಂದು ಪ್ಲೇಟ್ ಅನ್ನ, ಸಾಂಬಾರಿಗೆ ಇಪ್ಪತ್ತೈದು ರೂಪಾಯಿ. ಹೊಟ್ಟೆಯ ಯಾವ ಮೂಲೆಗೂ ಸಾಲದಾಗಿತ್ತು. ಬೆಳಗ್ಗಿನಿಂದ ಒಂದರ ಹಿಂದೊಂದು ಸಿಗರೇಟ್ ಸುಡುತ್ತಿದ್ದೆ.
ಮಧ್ಯಾಹ್ನ ಊಟವಾದ ಮೇಲೆ ಟೆರೆಸ್ ನಲ್ಲಿ ಸಿಗರೇಟ್ ಸೇದಿ ರೂಮಿನ ಕಡೆಗೆ ಬಂದೆ. ರೂಮಿನ ಬಾಗಿಲಿನಲ್ಲಿ ಸ್ವಲ್ಪ ವಯಸ್ಸಾದವರೊಬ್ಬರು ನಿಂತಿದ್ದರು. ಅವರನ್ನು ಕೆಳಗಡೆ ಅಂತಸ್ಥಿನ ಕಾರಿಡಾರಿನಲ್ಲಿ ನೋಡಿದ್ದೆ. ಯಾರು ಎದುರಿಗೆ ಸಿಕ್ಕಿದರೂ ಮುಗುಳ್ನಗುತ್ತಿದ್ದರು. ತುಂಬ ವಿನಮ್ರತೆಯಿಂದ ಇಂಗ್ಲಿಷ್ ನಲ್ಲಿ ಕೇಳಿದರು: `ನೀವು ಸಿಗರೇಟ್ ಸೇದುತ್ತಿದ್ದೀರಲ್ಲಾ, ನಿಮಗೆ ಎಲ್ಲಿ ಸಿಕ್ಕಿತು?’ ಅಂತ.
`ಓ ಅದಾ? ಪೋಲಿಸರು ಕರ್ಫ್ಯೂ ಹಾಕಿದರಲ್ಲಾ, ಆಗಲೇ ಕೊಂಡುಕೊಂಡಿದ್ದೆ,’ ಅಂದೆ.
`ನಿಮಗೆ ತೊಂದರೆ ಇಲ್ಲದಿದ್ದರೆ, ನನಗೆ ಒಂದು ಸಿಗರೇಟ್ ಸಿಗಬಹುದೇ?’ ಅಂತ ದೈನತೆಯಿಂದ ಕೇಳಿದರು. ಏನೂ ಮಾತಾಡದೆ, ಜೇಬಿನಿಂದ ಸಿಗರೇಟ್ ಪ್ಯಾಕ್ ತೆಗೆದು, ಅವರ ಮುಂದೆ ಇಟ್ಟೆ. ಲಗುಬಗೆಯಿಂದ ಒಂದು ಸಿಗರೇಟ್ ತೆಗೆದು ಹಚ್ಚಿದವರೇ, ಧೀರ್ಘವಾಗಿ ಹೊಗೆ ಎಳೆದುಕೊಂಡು ಹೇಳಿದರು: `ಕಳೆದ ಇಪ್ಪತ್ತೈದು ವರ್ಷಗಳಿಂದ ಸಿಗರೇಟ್ ಸೇದುತ್ತಿದ್ದೇನೆ. ಇವತ್ತೇ ಮೊದಲನೇ ದಿನ, ಬೆಳಗ್ಗಿನಿಂದ ಒಂದೂ ಸಿಗರೇಟ್ ಸೇದಿರಲಿಲ್ಲ,’ ಅಂದರು.
ನಂಗಾಗ ಇನ್ನೂ ಇಪ್ಪತ್ತೊಂದು ವರ್ಷ. ಏನೂ ಮಾತಾಡದೆ ರೂಮಿನೊಳಗೆ ಹೋದವನೇ ಒಂದು ಪ್ಯಾಕ್ ಸಿಗರೇಟ್ ತೆಗೆದುಕೊಂಡು ಬಂದು ಅವರ ಕೈಯಲ್ಲಿಟ್ಟೆ. `ನಾನು ಈ ಬ್ರಾಂಡ್ ಸೇದುವುದಿಲ್ಲ. ಆದರೆ, ಇವತ್ತು ಸೇದಲೇ ಬೇಕು. ಇದಕ್ಕೆಷ್ಟು ಕೊಡಲಿ?’ ಅಂತ ಕೇಳಿದರು. `ಇರಲಿ ಬಿಡಿ ಸರ್,’ ಅಂತ ನಕ್ಕೆ. ಅವರೂ ಹೆಚ್ಚಿಗೆ ಒತ್ತಾಯಿಸದೆ, ಥ್ಯಾಂಕ್ಸ್ ಹೇಳಿ ಹೊರಟು ಹೋದರು.
ಅವರು ಆ ಕಡೆ ಹೋಗುತ್ತಲೇ, ರೂಮಿನಲ್ಲಿದ್ದ ಶಂಕರ್: `ಅಲ್ರೀ, ಅವರ್ಯಾರು ಅಂತಾನೇ ಗೊತ್ತಿಲ್ಲ. ಒಂದು ಪ್ಯಾಕ್ ಸಿಗರೇಟ್ ಕೊಟ್ರಲ್ಲ. ದುಡ್ಡು ಜಾಸ್ತಿಯಾಗಿದೆಯಾ ನಿಮಗೆ?’ ಅಂದ್ರು.
`ಇರ್ಲಿ ಬಿಡಿ ಸರ್, ನಮ್ಮ ತಂದೆ ವಯಸ್ಸಾಗಿದೆ ಅವರಿಗೆ. ಅವರ ಮುಖ ನೋಡಿದ್ರೆ ಯಾರ ಮುಂದೆನೂ ಕೈ ಚಾಚಿದವರ ಥರ ಕಾಣೋಲ್ಲ. ಅವರ ಮಗನ ವಯಸ್ಸಿನವನ ಜೊತೆ ಸಿಗರೇಟ್ ಕೇಳುವಾಗ ಅವರಿಗೆ ಎಷ್ಟು ನಾಚಿಗೆಯಾಗಿರಬೇಕು,’ ಅಂದೆ.
`ಸುಮ್ನಿರಿ ನೀವು. ಸ್ವಲ್ಪ ಅತಿ ಕಣ್ರಿ. ಜೀವನದಲ್ಲಿ ಇವೆಲ್ಲಾ ನೆಡೆಯೋಲ್ಲ. ನಾವು ಬದುಕೋ ದಾರಿ ಕಲೀಬೇಕು. ಇಲ್ಲದಿದ್ದರೆ ಕಷ್ಟ,’ ಅಂದ್ರು. ನಾನು ನಕ್ಕು ಸುಮ್ಮನಾದೆ.
ಸಾಯಂಕಾಲ ಕಾಫಿ ಕುಡಿದ ಮೇಲೆ, ಕೆಳಗಡೆ ಲಾಡ್ಜ್ ನ ಮುಂಬಾಗದ ಕಬ್ಬಿಣದ ಗೇಟ್ ಸಂದಿಯಲ್ಲಿ ಹೊರಗಡೆ ನೋಡುತ್ತಾ, ಸಿಗರೇಟ್ ಸೇದುತ್ತಾ ನಿಂತಿದ್ದೆ. ಹತ್ತು ಹೆಜ್ಜೆಗೊಬ್ಬರಂತೆ ಪೋಲಿಸರು ಕೈಯಲ್ಲಿ ಬಂದೂಕು ಹಿಡಿದುಕೊಂಡು ನಿಂತಿದ್ದರು. ನಮ್ಮ ಲಾಡ್ಜ್ ಮುಂದೆ ನಿಂತಿದ್ದ ಪೋಲಿಸ್ ಆಗಾಗ ತಿರುಗಿ ನನ್ನನ್ನು ನೋಡುತ್ತಿದ್ದರು. ಒಮ್ಮೆ ತಿರುಗಿ ನೋಡಿದಾಗ ನಾನು ನಕ್ಕೆ. ಅದಕ್ಕೆ ಅವನು ನಕ್ಕ. ಹಿಂದಿಯಲ್ಲಿ ಕೇಳಿದೆ: `ನಿಮ್ಮೂರು ಯಾವುದು?’
`ಕರ್ನಾಟಕ… ಬಿಜಾಪುರ,’ ಅಂದ. `ಓ, ನೀವು ಬಿಜಾಪುರದವರಾ?’ ಅಂತ ಕನ್ನಡದಲ್ಲಿ ಕೇಳಿದ್ದೇ  ತಡ, ಅವರು ಕೂಡ `ನೀಮ್ಮ ಊರು ಯಾವುದು?’ ಅಂತ ಕನ್ನಡದಲ್ಲಿ ಕೇಳಿದರು.  ಅಲ್ಲಿಂದ ಅದೂ, ಇದೂ ಮಾತು ಶುರುವಾಯ್ತು. ನನಗೆ ಗೊತ್ತಾಗಿದ್ದೇನೆಂದ್ರೆ, ಅವರ ಹೆಸರು ಬಸಪ್ಪ ಅಂತೇನೋ ಇರಬೇಕು ಮತ್ತು ಅವರು ಬಿ.ಎಸ್.ಎಫ್. ನಲ್ಲಿ ಕೆಲಸ ಮಾಡುತ್ತಿದ್ದರು. ಮಾತಿನ ಮಧ್ಯ ನಾನು ಊಟದ ವಿಷಯದಲ್ಲಿ ತೊಂದರೆ ಆದದ್ದನ್ನು ಹೇಳಿದಾಗ, ಅವರು ಹೇಳಿದರು: `ಇಲ್ಲೇ ಹತ್ತಿರದಲ್ಲಿ ಮಂಜರ ಬಾರ್ ಅಂತ ಇದೆ. ಅದು ತೆಗೆದಿರುತ್ತದೆ. ಯಾಕೆಂದ್ರೆ, ಪೋಲಿಸರಿಗೆ ಬೇಕಾಗಿ ಅದನ್ನು ತೆಗೆಯಲು ಬಿಟ್ಟಿದ್ದಾರೆ. ಕತ್ತಲಾದ ಮೇಲೆ ನಮಗೆ ಊಟ ತರಲು ನಾನೂ ಹೋಗುತ್ತೇನೆ. ಆಗ ಬೇಕಾದರೆ ನಿನ್ನನ್ನೂ ಕರ್ಕೊಂಡು ಹೋಗ್ತೀನಿ. ಬಿರಿಯಾನಿ  ಊಟ,’ ಅಂದರು.
ಸಿಕ್ಕಾಬಟ್ಟೆ ಖುಶಿಯಾಯ್ತು. ಮೇಲಕ್ಕೆ ಹೋದವನೇ ಶಂಕರ್ ಮತ್ತು ಶ್ರೀಧರ್ ಗೆ ವಿಷಯ ಹೇಳಿದೆ. ಸಸ್ಯಹಾರಿಯಾಗಿದ್ದ ಶ್ರೀಧರ್, `ರೀ, ಅದೆಲ್ಲಾ ರಿಸ್ಕ್ ತಗೋಬೇಡ್ರಿ. ಗೊತ್ತಿಲ್ಲದ ಊರಲ್ಲಿ ಏನೋ ಮಾಡೋಕೆ ಹೋಗಿ ಒಂದಕ್ಕೆರಡು ಆದರೆ ಕಷ್ಟ,’ ಅಂದರು. ಶಂಕರ್ ಮತ್ತೆ ಉಳಿದವರು: `ನಮಗೂ ಪಾರ್ಸೆಲ್ ತರೋಕೆ ಆಗುತ್ತಾ,’ಅಂತ ಕೇಳಿದ್ರು. ಸರಿ, ಯರ್ಯಾರಿಗೆ ಬೇಕು ಅಂತ ಒಂದು ಪಟ್ಟಿ ಮಾಡಿಕೊಂಡು, ಖಾಲಿ ಬ್ಯಾಗ್ ಬೆನ್ನಿಗೆ ತಗುಲಿಸಿಕೊಂಡು ಕೆಳಕ್ಕೆ ಹೊರಟೆ. ಮೆಟ್ಟಲನ್ನು ಇಳಿಯುವಾಗ, ಕೆಳ ಅಂತಸ್ಥಿನಲ್ಲಿ ಆ ವಯಸ್ಸಾದವರು ಕಾರಿಡಾರಿನಲ್ಲಿ ಏನೋ ಯೋಚಿಸುತ್ತಾ ನಿಂತಿದ್ದರು. ನನ್ನ ನೋಡಿ ನಕ್ಕ ತಕ್ಷಣ ನಾನು ಅವರ ಹತ್ತಿರ ಹೋದವನೇ ವಿಷಯ ಹೇಳಿ, ಅವರಿಗೂ ಏನಾದರೂ ತಿನ್ನಲು ಬೇಕಾ, ಅಂತ ಕೇಳಿದೆ.
`ನಾನು ಸಾಧಾರಣ ರಾತ್ರಿ ಊಟ ಮಾಡುವುದಿಲ್ಲ. ಬಾರ್ ನಲ್ಲಿ ಡ್ರಿಂಕ್ಸ್ ಸಿಕ್ಕಿದರೆ ತರೋಕೆ ಆಗುತ್ತಾ? ನಿಮಗೆ ಬೇಜಾರಿಲ್ಲದಿದ್ದರೆ,’ ಅಂತ ಹೇಳಿದರು. ನಾನು ತೊಂದರೆ ಇಲ್ಲ ಅಂದಾಗ ರೂಮಿನೊಳಗೆ ದುಡ್ಡು ಕೊಡಲು ಕರೆದರು. ಅದು ಡಬಲ್ ರೂಂ. ಒಬ್ಬರಿಗೆ ಡಬಲ್ ರೂಂ ಯಾಕೆ ಅಂತ ನೋಡುವಾಗ ಗೊತ್ತಾಯ್ತು, ಅದು ಏರ್ ಕಂಡೀಷನರ್ ಇರುವ ರೂಂ ಅಂತ. ಸಿಗರೇಟನ್ನು ಸಾಹೇಬರು ರೇಷನ್ ತರಹ ಉಪಯೋಗಿಸುತ್ತಿದ್ದರು. ಆಗಲೇ ಐದಾರು ಸಿಗರೇಟನ್ನು ಸುಟ್ಟಿದ್ದರೂ, ಎಲ್ಲವನ್ನೂ ಮುಕ್ಕಾಲು ಸೇದಿ, ಆರಿಸಿ ಜೋಪಾನವಾಗಿಟ್ಟಿದ್ದರು. ತುಂಬಾ ಪೇಪರ್ ಮತ್ತು ಫೈಲ್ ಗಳನ್ನು ಟೇಬಲ್ ಮೇಲೆ ಹರಡಿಕೊಂಡಿದ್ದರು.
`ವ್ಯಾಟ್  69 ಅಥವಾ ಆ ಥರದೇ ಒಳ್ಳೆ ಡ್ರಿಂಕ್ ಸಿಕ್ಕಿದರೆ ನೋಡಿ. ಜೊತೆಯಲ್ಲಿ ನೆಂಚಿಕೊಳ್ಳಲು ಗೋಡಂಬಿ ಸಿಕ್ಕಿದರೆ ಒಳ್ಳೆಯದು. ತಿನ್ನಲು ಇನ್ನೇನೂ ಬೇಡ. ಬಾರ್ ನಲ್ಲಿ ಸಿಗರೇಟ್ ಸಿಕ್ಕಿದರೆ, ಬ್ರಿಸ್ಟಲ್ ತನ್ನಿ,’ ಅಂದು ಐನೂರು ರೂಪಾಯಿ ಕೊಟ್ಟರು. ಅಷ್ಟೊಂದು ದುಡ್ಡು ನೋಡಿ ಸ್ವಲ್ಪ ಗಾಬರಿಯಾದರೂ, ಸರಿ ಅಂತ ಹೊರಡಲು ತಿರುಗಿದಾಗ ಹೇಳಿದರು: `ನಿಮ್ಮನ್ನು ಕರ್ಕೊಂಡು ಹೋಗ್ತಾರಲ್ಲ, ಅವರಿಗೂ ಕುಡಿಯಲು ಏನಾದ್ರು ಡ್ರಿಂಕ್ಸ್ ಕೊಡಿಸಿ. ದುಡ್ಡು ಹೆಚ್ಚಾದರೆ ಸಂಕೋಚವಿಲ್ಲದೆ ನನಗೆ ಹೇಳಿ, ನಾ ನು ಕೊಡ್ತೀನಿ,’ ಅಂದರು.
ಬಸಪ್ಪನ ಜೊತೆ ಉತ್ಸಾಹದಿಂದಲೇ ಹೊರಟೆ. ಐದು ನಿಮಿಷದಲ್ಲಿ ಉತ್ಸಾಹ ಕಮ್ಮಿಯಾಗಿ, ಯಾಕೋ ಒಳಗೊಳಗೆ ಹೆದರಿಕೆ ಶುರುವಾಯ್ತು. ಎಲ್ಲಾ ಕಡೆ ಖಾಲಿ ರಸ್ತೆಗಳು. ಬರೀ ಬಂದೂಕು ಹಿಡಿದ ಪೋಲಿಸರು. ಎಲ್ಲಿಂದ, ಯಾವ ಗುಂಪು ಬಂದು ಗಲಾಟೆ ಮಾಡಬಹುದು ಅಂತ ನೋಡ್ತಿದ್ದೆ. `ಹೈದರಾಬಾದ್ ನಲ್ಲಿ ಗಲಾಟೆ ಆಗಿದೆಯಾ?’ ಅಂತ ಬಸಪ್ಪನ್ನ ಕೇಳ್ದೆ. `ಚಾರ್ ಮಿನಾರ್ ಮತ್ತೆ ಲಕಡಿ ಕಾ ಫೂಲ್ ಏರಿಯಾದಲ್ಲಿ ಆಗಿದೆ ಅಂತ ವೈರ್ ಲೆಸ್ ಮೆಸೆಜ್ ಇತ್ತು. ಮೂರ್ನಾಲ್ಕು ಜನ ಸತ್ತಿರಬೇಕು,’ ಅಂದರು.
`ಈ ಕರ್ಫ್ಯೂ ಕರ್ಮ ಕಣ್ರಿ. ಏನೂ ಸಿಗೋಲ್ಲ,’ ಅಂ ತ ಗೊಣಗಿದೆ. `ಬೆಳಗ್ಗೆ ಆರೂವರೆಯಿಂದ ಏಳು ಘಂಟೆಯವರೆಗೆ ರಿಲಾಕ್ಸ್ ಮಾಡಿರುತ್ತಾರೆ. ಆಗ ಅಂಗಡಿ, ಬೇಕರಿಗಳು ತೆಗೆದಿರುತ್ತವೆ. ನಿಮಗೇನು ಬೇಕೋ ತೆಗೆದಿಟ್ಟುಕೊಂಡಿರಿ,’ ಅಂದರು. ಮಾತಾಡ್ತಾ ಬಾರ್ ಬಂದೇ ಬಿಡ್ತು. ಜಾಸ್ತಿ ಗಿರಾಕಿಗಳಿರಲಿಲ್ಲ.  ಆದರೆ ತುಂಬಾ ಜನ ಪಾರ್ಸೆಲ್ ಮಾಡಿಸಿಕೊಳ್ಳುತ್ತಿದ್ದರು. ಹೆಚ್ಚಿನವರೆಲ್ಲಾ ಪೋಲಿಸರೇ. ನಾನೂ ಊಟದ ಪಾರ್ಸೆಲ್ ಆರ್ಡರ್ ಮಾಡಿ, ಬಾರ್ ಕೌಂಟರ್ ಹತ್ತಿರ ಹೋಗಿ ವ್ಯಾಟ್ 69 ಇದೆಯಾ ಅಂತ ಕೇಳಿದೆ. ಮೇಲಿಂದ ಕೆಳಗಿನವರೆಗೆ ನನ್ನನ್ನು ನೋಡಿದ ಬಾರ್ ಕೌಂಟರ್ ನಲ್ಲಿ ಇದ್ದವನು: `ಪೂರ್ತಿ ಬಾಟಲ್ ಇಲ್ಲ. ನಾಲ್ಕೈದು ಪೆಗ್ ಉಳಿದಿರಬೇಕು. ಮುನ್ನೂರು ರೂಪಾಯಿ ಆಗುತ್ತೆ,’ ಅಂದ. `ಸರಿ ಕೊಡಿ’ ಅಂತ ಹೇಳಿ, ಬಸಪ್ಪನಿಗೆ ಅರ್ಧ ಬಾಟಲ್ ರಮ್ ಸಹ ತಗೊಂಡೆ. ಸಿಗರೇಟ್ ಕೇಳಿದಾಗ, ಬ್ರಿಸ್ಟಲ್ ಇರಲಿಲ್ಲ. ಬೇರೆ ಬ್ರಾಂಡ್ ಸಿಗರೇಟ್ ಗೆ ಇಪ್ಪತ್ತೈದು ರೂಪಾಯಿ ಹೇಳಿದ. ಬೆಳಗ್ಗೆ ನೋಡಿದರಾಯ್ತು ಅಂತ ಸುಮ್ಮನಾಗಿ, ಅವನು ಕೊಟ್ಟ ಬಿಲ್ಲನ್ನು ಜೋಪಾನವಾಗಿ ಇಟ್ಟುಕೊಂಡೆ.
ರಮ್ ಕೊಟ್ಟಾಗ ಬಸಪ್ಪನಿಗೆ ಖುಶಿಯಾಯ್ತು. `ಏನ್ರಿ ಪಾರ್ಟಿನಾ’ ಅಂತ ಕೇಳಿದ್ರು. `ಇಲ್ಲ, ನಾನು ಕುಡಿಯೋಲ್ಲ,’ ಅಂದೆ. `ಮತ್ತೇನೋ ತಗೊಂಡ್ರಿ?’ ಅಂದರು. `ಓ ಅದಾ… ನಮ್ಮ ಲಾಡ್ಜಲ್ಲಿ ಒಬ್ಬರು ವಯಸ್ಸಾದವರು ಇದ್ದಾರೆ. ಅವರಿಗೆ,’ ಅಂದೆ.
ರೂಮಿಗೆ ಹೋಗಿ ಪಾರ್ಸೆಲ್ ಇಟ್ಟು ಬಾಟಲ್ ತೆಗೆದುಕೊಂಡು ಕೆಳಕ್ಕೆ ಹೊರಟಾಗ ಶಂಕರ್ ತಮಾಷೆ ಮಾಡಿದ್ರು: `ಏನ್ರಿ ವಿನಯ್? ಅಂಕಲ್ ನಿಮ್ಮನ್ನ ದತ್ತು ತಗೊಳ್ಳೋ ಹಾಗಿದೆ?’. ಕೆಳಗೆ ರೂಮಿಗೆ ಹೋದಾಗ, ಅವರು ಏನೋ ಫೈಲ್ ನೋಡಿಕೊಂಡು ಬರೆಯುತ್ತಿದ್ದರು. `ಬನ್ನಿ, ನೀವೂ ಸ್ವಲ್ಪ ತಗೊಳ್ಳಿ,’ ಅಂದರು. `ಇಲ್ಲ ಸರ್, ನಾನು ಕುಡಿಯೋದಿಲ್ಲ,’ ಅಂದೆ.
`ಒಂದ್ಸಲನೂ ಟ್ರೈ ಮಾಡಿಲ್ವಾ?’ ಅಂತ ಮುಗುಳ್ನಕ್ಕರು.
`ಕಾಲೇಜಿನಲ್ಲಿದ್ದಾಗ ಕುಡೀತ್ತಿದ್ದೆ. ಬೆಂಗಳೂರಿಗೆ ಬಂದ ಮೇಲೆ ನಿಲ್ಲಿಸಿದೆ,’ ಅಂದು ಬಿಲ್ಲು ಮತ್ತು ಚಿಲ್ಲರೆಯನ್ನು ಅವರ ಮುಂದೆ ಇಟ್ಟಾಗ, ಅವರು ಮೆಲ್ಲಗೆ ನನ್ನ ಕೆನ್ನೆ ತಟ್ಟಿ ಮುಗುಳ್ನಕ್ಕರು. `ಸರ್, ನಿಮ್ಮ ಮನೆಯವರಿಗೆ ಇಲ್ಲಿ ಸಿಕ್ಕಿಹಾಕಿಕೊಂಡಿರೋದು ಹೇಳಿದ್ದೀರಾ?’ ಅಂತ ಕೇಳಿದಾಗ: `ಮನೆಯವರು ಅಂತ ಯಾರೂ ಇಲ್ಲ. ನಾನು ಮದುವೆ ಆಗಿಲ್ಲ. ನಮ್ಮ ಆಫೀಸಿನವರಿಗೆ ಹೇಳಿದ್ದೀನಿ. ನಾಳೆಯ ಹೊತ್ತಿಗೆ ಏನಾಗುತ್ತೆ ಅಂತ ನೋಡಬೇಕು,’ ಅಂದರು.
`ಸರ್, ಡ್ರಿಂಕ್ಸ್ ಮಾಡೋಕೆ ಟೆರೆಸ್ ಒಳ್ಳೆ ಜಾಗ. ಅಲ್ಲಿಂದ ಬಿರ್ಲಾಮಂದಿರ ಚೆನ್ನಾಗಿ ಕಾಣುತ್ತೆ. ರಾತ್ರಿ ಬೇರೆ ಲೈಟ್ ಹಾಕಿರುತ್ತಾರೆ. ಹೊಳೆಯುತ್ತಿರುತ್ತದೆ,’ ಎಂದೆ.
`ಇಲ್ಲ, ಸ್ವಲ್ಪ ಕೆಲಸ ಇದೆ. ಬೆಳಗ್ಗೆ ಸಿಕ್ತೀನಿ,’ ಅಂದರು. `ಸರ್, ಬೆಳಗ್ಗೆ ಅರ್ಧ ಘಂಟೆ ಕರ್ಫ್ಯೂ ರಿಲ್ಯಾಕ್ಸ್ ಆಗಿರುತ್ತೆ. ಅವಾಗ ನಿಮ್ಮ ಸಿಗರೇಟ್ ಸಿಗಬಹುದು. ಈಗ ಇಟ್ಕೊಂಡಿರಿ,’ ಅಂತ ಇನ್ನೊಂದು ಪ್ಯಾಕ್ ಸಿಗರೇಟ್ ಕೊಟ್ಟೆ. ಅವರು ಮತ್ತೆ ನನ್ನ ಕೆನ್ನೆ ತಟ್ಟಿ `ಗುಡ್ ನೈಟ್’ ಅಂದರು.
ಊಟಮಾಡಲು ಎಲ್ಲರೂ ಟೆರೆಸ್ ಗೆ ಹೋದಾಗ `ಅಂಕಲ್’ ವಿಷಯ ಬಂತು. ಅವರಿಗೆ ಮದುವೆಯಾಗಿಲ್ಲ ಅಂತ ಹೇಳಿದ ತಕ್ಷಣ ಎಲ್ಲರೂ: `ವಿನಯ್, ಸರಿಯಾಗಿ ನೋಡ್ಕೊಳ್ರಿ. ಲೈಫ್ ಸೆಟಲ್ ಆಗುತ್ತೆ,’ ಅಂತ ತಮಾಷೆ ಮಾಡಿದರು.
ಬೆಳಗ್ಗೆ ಎದ್ದವರೇ, ನಾವೆಲ್ಲರೂ ಹೋಟೆಲ್ ನಿಂದ ಹೊರಗೆ ಹೋದೆವು. ಅರ್ಧ ಘಂಟೆಯ ಸ್ವಾತಂತ್ರ ಅನುಭವಿಸಲು. ನಾನಂತೂ ಎಲ್ಲಾ ಅಂಗಡಿಗಳನ್ನೂ ಸುತ್ತಿದೆ. ಹಣ್ಣು, ತರಕಾರಿ ಮತ್ತು ಇತರೆ ಹಾಳಾಗುವ ವಸ್ತುಗಳನ್ನು ವ್ಯಾಪಾರಿಗಳು ಕೈಗೆ ಬಂದಷ್ಟು ಬೆಲೆಗೆ ಮಾರುತ್ತಿದ್ದರು. ನನಗೆ ಬೇಕಾದಷ್ಟು ಬ್ರೆಡ್, ಬಿಸ್ಕೆಟ್ ಮತ್ತು ಬಾಳೆಹಣ್ಣುಗಳನ್ನು ತೆಗೆದುಕೊಂಡು, ನಿಧಾನವಾಗಿ ರೂಮಿಗೆ ವಾಪಾಸ್ ಬಂದಾಗ, `ಅಂಕಲ್’ ಬಾಗಿಲಿನಲ್ಲೇ ನನಗೆ ಕಾಯುತ್ತಿದ್ದರು. ಅವರ ಕೈಯಲ್ಲಿ ಒಂದು ದೊಡ್ಡ ಕವರ್ ಇತ್ತು. `ನಿಮ್ಮಿಂದ ನೆನ್ನೆ ತುಂಬಾ ಸಹಾಯವಾಯಿತು. ಇಟ್ ಇಸ ಜಸ್ಟ್ ಎ ಟೋಕನ್ ಆಫ್ ಅಪ್ರೆಸಿಯೇಷನ್,’ ಅಂತ ನಂಗೆ ಕೊಟ್ಟರು. ನೋಡಿದರೆ, ಇಪ್ಪತ್ತು ಪ್ಯಾಕ್ ಸಿಗರೇಟ್ ಇರುವ ಒಂದು ಕಾರ್ಟೂನ್ ಮತ್ತು ಇನ್ನೊಂದು ಸೀಲ್ ಮಾಡಿದ ಪ್ಯಾಕೆಟ್ ಇತ್ತು. `ಇದೆಲ್ಲಾ ಯಾಕೆ ಸರ್?’ ಅಂದೆ. ಅವರು ಕೆನ್ನೆ ತಟ್ಟಿ: `ಪರ್ವಾಗಿಲ್ಲ, ಇಟ್ಕೊಳ್ಳಿ,’ ಅಂದು ಅವರ ರೂಮಿನ ಕಡೆ ಹೋದರು.
ರೂಮಿನೊಳಗೆ ಹೋಗಿ ಆ ಪ್ಯಾಕೆಟ್ ಒಳಗಡೆ ಏನಿದೆ ಅಂತ ನೋಡಲು ತೆಗೆದೆ. ಅಷ್ಟರೊಳಗೆ ಶಂಕರ್ ಬಂದು ಕಾಫಿಗೆ ಕರೆದರು. ಸರಿ, ಅದನ್ನು ಬ್ಯಾಗಿನೊಳಗೆ ತುರುಕಿ, ಕಾಫಿಗೆ ಹೋದೆ. ಕಾಫಿ ಕುಡಿದು ವಾಪಾಸ್ ಬರುವಾಗ, `ಅಂಕಲ್’ ಲಾಬಿಯಲ್ಲಿ ಫೋನ್ ನಲ್ಲಿ ಮಾತಾಡ್ತಾ ಇದ್ದರು. ನಾನು ನಕ್ಕೆ. ಫೋನ್ ಮುಗಿಸಿದವರೇ ನನ್ನನ್ನು ಲಾಬಿಯಲ್ಲಿದ್ದ ಸೋಫಾ ಕಡೆ ಕೈಮಾಡಿ ಕರೆದರು. ಅದೂ ಇದೂ ಮಾತಾಡುತ್ತಾ ನನ್ನ ವಿಷಯ ಕೇಳಿದರು. ನಾನು ಮುಂದೆ ಏನು ಮಾಡಬೇಕೆಂದಿದ್ದೇನೆ ಅಂತಾನೂ ಕೇಳಿದರು. `ಡಿಗ್ರಿ ಸಿಕ್ಕಿದ ತಕ್ಷಣ ಇಂಡಿಯನ್ ಮಿಲಿಟರಿ ಅಕಾಡೆಮಿ ಪರೀಕ್ಷೆ ಬರೆದು ಆರ್ಮಿ ಸೇರಬೇಕೆಂದಿದ್ದೇನೆ’ ಎಂದಾಗ ಮುಗುಳ್ನಕ್ಕರು. ಸುಮಾರು ಒಂದು ಘಂಟೆ ರಾಜಕೀಯ ಮತ್ತು ದೇಶದ ಆರ್ಥಿಕ ಸ್ಥಿತಿಗಳ ಬಗ್ಗೆ ಮಾತಾಡಿದರು. ಅದ್ಭುತಾದ ಇಂಗ್ಲಿಷ್ ನಲ್ಲಿ ಮಾತಾಡಿದಾಗ, ವೆಸ್ಟ್ ಇಂಡೀಸ್ ಬೌನ್ಸರ್ ಗಳಿಗೆ ತಿಣುಕಾಡುತ್ತಿದ್ದ ಭಾರತದ ಬ್ಯಾಟ್ಸ್ ಮನ್ ಗಳ ಅವಸ್ಥೆಯಂತಾಗಿತ್ತು ನನ್ನ ಸ್ಥಿತಿ. ಅವರು ಮುಕ್ತ ಮಾರುಕಟ್ಟೆಯ ಬಗ್ಗೆ ಮಾತಾಡಿದಾಗ, ನನಗವರು ಬಂಡವಾಳಶಾಹಿಯ ತರಹ ಕಂಡುಬಂದರು. ನಾನೂ ಬಿಡದೆ, ಮೂಡಿಗೆರೆಯ ಕಮ್ಯುನಿಸ್ಟ್ ನಾಯಕ ಬಿ ಕೆ ಸುಂದರೇಶ್ ವಿಷಯ ಪ್ರಸ್ತಾವಿಸಿ, ಸಾಮಾಜಿಕ ನ್ಯಾಯದ ಬಗ್ಗೆ ಭಾಷಣ ಬಿಗಿದೆ. ಎಲ್ಲವನ್ನೂ ಸಮಾಧಾನವಾಗಿ ಕೇಳಿಕೊಂಡ ಅವರು, `ನಮ್ಮ ಕಂಪನಿ ಹತ್ತಿರ ಕೂಡ ಸ್ವಲ್ಪ ಕಾಫೀ ಎಸ್ಟೇಟ್ ಇದೆ’ ಅಂದರು.
`ಯಾವುದು?’ ಅಂತ ಕೇಳಿದಾಗ, `ಕನ್ಸಾಲಿಡೇಟೆಡ್ ಕಾಫಿ’ ಅಂದರು. `ಅದು ದೊಡ್ಡ ಎಸ್ಟೇಟ್, ಟಾಟಾದವರು ತೆಗೆದುಕೊಂಡಿದ್ದಾರೆ,’ ಅಂದಾಗ ಅವರು ಮುಗುಳ್ನಗುತ್ತಾ ತಲೆ ಆಡಿಸಿದರು. ಅದರಲ್ಲಿ ಕೆಲಸ ಮಾಡುತ್ತಿದ್ದ ನನ್ನ ಗೆಳೆಯರೊಂದಿಬ್ಬರ ಹೆಸರು ಹೇಳಿದಾಗ, ಅವರು ಗೊತ್ತಿಲ್ಲ ಎಂಬಂತೆ ತಲೆ ಆಡಿಸಿದರು.
ಅಲ್ಲಿಂದ ನಾವು ಹೊರಡುವಾಗ `ಅಂಕಲ್’ ಹೇಳಿದರು: `ನೀನು ತುಂಬಾ ಪ್ರಾಮಾಣಿಕ ಮತ್ತು ಮುಗ್ದ. ಜೀವನದಲ್ಲಿ ಮುಂದೆ ಬರ್ತೀಯ,’ ಅಂತ.
ನನಗಂತೂ ತುಂಬಾನೇ ಬೇಜಾರಾಯ್ತು. ನಾನು ಸಮಾಜವಾದದ ಬಗ್ಗೆ ಅಷ್ಟೆಲ್ಲಾ ಮಾತಾಡಿದರೂ ನನ್ನ ಬುದ್ದಿವಂತಿಕೆಯನ್ನು ಅವರು ಗುರುತಿಸಲಿಲ್ಲ ಅಂತ. ಮುಗ್ದ ಅಂತ ಹೇಳಿದ್ದು ನನ್ನ ಆತ್ಮಾಭಿಮಾನವನ್ನು ಕೆಣಕಿತ್ತು. ಏನೂ ಮಾತಾಡದೆ ರೂಮಿನ ಕಡೆಗೆ ನೆಡೆದೆ.
ಮಧ್ಯಾಹ್ನ ಊಟಮಾಡಿ, ಟೆರೆಸ್ ಗೆ ಹೋಗಿ ಸಿಗರೇಟ್ ಸೇದಿ ರೂಮಿನ ಕಡೆಗೆ ಬರುತ್ತಿರುವಾಗ, ರೂಂ ಬಾಯ್ ಬಂದು ಹೇಳಿದ: `ಇಂಜಿನಿಯರ್ ಸಾಬ್ ನಿಮ್ಮನ್ನು ಹುಡುಕುತ್ತಿದ್ದಾರೆ.’
`ಯಾವ ಇಂಜಿನೀಯರ್ ಸಾಬ್?’ ಅಂತ ಕೇಳಿದಾಗ, `ಕೆಳಗಿನ ರೂಮಿನವರು. ಲಾಬಿಯಲ್ಲಿದ್ದಾರೆ,’ ಅಂತ ಹೇಳಿದ.
ಕೆಳಗೆ ಲಾಬಿಗೆ ಹೋದಾಗ, ಬೆಂಗಳೂರಿನಿಂದ ಬಂದವರು ಮೂಲೆಯಲ್ಲಿ ಗುಂಪಾಗಿ ನಿಂತು ಮಾತಾಡ್ತಾ ಇದ್ದರು. ಸೋಫಾ ಮೇಲೆ `ಅಂಕಲ್’ ಕೂತಿದ್ದರೆ, ಅವರ ಎದುರು ಯಾರೋ ಪೋಲಿಸ್ ಆಫಿಸರ್ ಕೂತಿದ್ದರು. ಸೋಫಾದ ಸುತ್ತ ನಾಲ್ಕೈದು ಪೋಲಿಸರು ಇದ್ದರು.
`ಏನಾಯ್ತು?’ ಅಂತ ನೋಡುತ್ತಿರುವಾಗಲೇ, `ಅಂಕಲ್’ ನನ್ನನ್ನು ನೋಡಿ ಮುಗುಳ್ನಗುತ್ತಾ ಎದ್ದರು. ಅವರ ಹಿಂದೆಯೇ ಪೋಲಿಸರು ಕೂಡ. ನನ್ನ ಹೆಗಲಿಗೆ ಕೈ ಹಾಕಿ, `ವಿಮಾನ ಹಾರಾಟ ಮತ್ತೆ ಶುರುವಾಗಿದೆಯಂತೆ. ನಾನು ಬಾಂಬೆಗೆ ಹೊರಟೆ,’ ಅಂತ ಮಾತಾಡಿಸಿಕೊಂಡು, ಲಾಡ್ಜ್ ನಿಂದ ಹೊರಗೆ ಕರೆದುಕೊಂಡು ಬಂದರು. ಹೊರಗಡೆ, ಒಂದು ಬೆಂಝ್ ಕಾರು, ಅದರ ಹಿಂದೆ ಒಂದು ಪೋಲಿಸರ ಅಂಬಾಸಡರ್ ಕಾರ್ ನಿಂತಿದ್ದವು. ಅವುಗಳ ಮುಂದೊಂದು, ಹಿಂದೊಂದು ಪೋಲಿಸ್ ಜೀಪ್ ನಿಂತಿದ್ದವು. ಕಾರಿಗೆ ಹತ್ತುವ ಮುಂಚೆ ಜೇಬಿನಿಂದ ಅವರ ಕಾರ್ಡ್ ಕೊಟ್ಟು ಹೇಳಿದರು: `ಬಾಂಬೆಗೆ ಬಂದಾಗ ಫೋನ್ ಮಾಡಿ.’
ಕಾರು ಹೋದ ಮೇಲೆ ಕಾರ್ಡ್ ಓದಿದೆ. `ಅಂಕಲ್’ ನ ಮೊದಲ ಹೆಸರು ಹೇಗೆ ಓದಬೇಕು ಅಂತ ಗೊತ್ತಾಗಲಿಲ್ಲ. ಅದಾದ ಮೇಲೆ ಡಿ.ಇಂಜಿನಿಯರ್ ಅಂತ ಇತ್ತು. ಅಡ್ರಸ್ ಏನೋ ಟಾಟಾ ಹೌಸ್, ಬಾಂಬೆ ಅಂತ ಇತ್ತು.
ಒಳಗ್ಗೆ ಬರುತ್ತಲೇ ಶೇಖರ್ ನನ್ನ ಕೈಯಿಂದ ಕಾರ್ಡ್ ಕಿತ್ತುಕೊಂಡು `ಯಾರ್ರೀ ಅವರು?’ ಅಂತ ಕೇಳಿದರು. ಕಾರ್ಡ್ ಓದುತ್ತಲೇ ಹೌಹಾರಿದಂತೆ ಕಂಡ ಅವರು, `ಇವರ್ಯಾಕ್ರೀ ಈ ಹೋಟೆಲ್ ನಲ್ಲಿ ಇದ್ದರು?’ ಅಂತ ಕೇಳಿದರು.
`ನಂಗೊತ್ತಿಲ್ಲ ಸರ್. ಯಾರು ಸರ್ ಅವರು?’ ಅಂತ ಅವರಿಗೇ ಪ್ರಶ್ನೆ ಮಾಡಿದೆ.
`ರೀ, ಇವರು ಟಾಟಾದ ಎಲೆಕ್ಟ್ರಿಕ್ ಡಿವಿಶನ್ ನಲ್ಲಿ ಡೈರೆಕ್ಟರ್ ಕಣ್ರಿ. ಈ ಕಂಪನಿ ಬಿ.ಇ.ಎಲ್ ನ ಕಸ್ಟಮರ್ ಕೂಡ. ತುಂಬಾ ದೊಡ್ಡ ಪೋಸ್ಟ್ ನಲ್ಲಿದ್ದಾರೆ ಕಣ್ರಿ. ಮೊದಲೇ ಗೊತ್ತಾಗಿದ್ರೆ ಕೂತು ಮಾತಾಡಬಹುದಿತ್ತು,’ ಅಂದರು.
ಉಳಿದವರೆಲ್ಲ, `ಹೊಡೆದ್ರಲ್ರಿ ಲಾಟರಿ. ಪರೀಕ್ಷೆ ಮುಗಿಸಿ ಬಾಂಬೆಗೆ ಹೋಗಿ ಅಂಕಲ್ ನ ಮೀಟ್ ಮಾಡಿ. ಚೆನ್ನಾಗಿ ಇಂಪ್ರೆಸ್ ಮಾಡಿದ್ದೀರ. ಟಾಟಾ ಕಂಪನಿಯಲ್ಲಿ ಒಳ್ಳೆ ಕೆಲಸ ಕೊಡಿಸ್ತಾರೆ. ಸೆಟಲ್ ಆಗಿಬಿಡಬಹುದು,’ ಅಂತ ತಮಾಷೆ ಮಾಡಲು ಶುರು ಮಾಡಿದ್ರು.
ರೂಮಿಗೆ ಹೋದಾಗ ಅಂಕಲ್ ಕೊಟ್ಟಿದ್ದ ಪ್ಯಾಕೆಟ್ ನೆನಪಾಯ್ತು. ತೆಗೆದು ನೋಡಿದರೆ, ಐದು ಸಿಗಾರ್ ಗಳಿದ್ದ ಒಂದು ಪ್ಯಾಕೆಟ್ ಮತ್ತು ಸುಂದರವಾಗಿದ್ದ ಒಂದು ಲೈಟರ್ ಇತ್ತು. ನಮ್ಮ ಜೊತೆ ಇದ್ದ ದಿಲೀಪ್ ಎನ್ನುವವರು ಸಿಗಾರ್ ಪ್ಯಾಕೆಟ್ ತೆಗೆದುಕೊಂಡು ನೋಡಿ: `ಇದು ಹವಾನಾ ಸಿಗಾರ್. ವೈನ್ ಡಿಪ್’ ಅಂದರು. ನಾನು ಲೈಟರ್ ಹತ್ತಿಸಿದಾಗ, ಅದರಿಂದ ಬೆಂಕಿ ಜೊತೆ ಮ್ಯೂಸಿಕ್ ಕೂಡ ಬಂತು. `ಮ್ಯುಸಿಕಲ್ ಬೀಚ್ ಲೈಟರ್’ ಅಂದರು ದಿಲೀಪ್.
ಎಂದೂ ಸಿಗಾರ್ ಸೇದಿರದ ನನಗೆ, ದಿಲೀಪ್ ಇಲ್ಲದಿದ್ದಿದ್ದರೆ ಅದನ್ನು ಸೇದಲು ಆಗುತ್ತಲೇ ಇರಲಿಲ್ಲ. ಅವರಿಗೂ ಒಂದು ಕೊಟ್ಟು, ನಾನೂ ಒಂದು ಹತ್ತಿಸಿಕೊಂಡೆ. ಅಲ್ಲಿಂದ ಮುಂದೆ ಎಲ್ಲರೂ ನನಗೆ ತಮಾಷೆ ಮಾಡುತ್ತಿದ್ದರು: `ವಿನಯ್ ಗೆ ಬಿಡಿ. ಪರೀಕ್ಷೆ ಮುಗಿದ ತಕ್ಷಣ ಬಾಂಬೆಗೆ ಹೋದರೆ ಸಾಕು. ಲೈಫ್ ಸೆಟಲ್,’ ಅಂತ.
ಬೆಂಗಳೂರಿಗೆ ವಾಪಾಸ್ ಬಂದು ಎಷ್ಟೋ ವರ್ಷಗಳವರೆಗೆ, ಆ ಕಾರ್ಡ್ ಮತ್ತು ಲೈಟರ್ ಜೋಪಾನವಾಗಿ ಇಟ್ಟಿದ್ದೆ. ರೂಂ, ಮನೆಗಳನ್ನು ಬದಲಾಯಿಸುವಾಗ ಮಧ್ಯದಲ್ಲೆಲ್ಲೋ ಕಳೆದುಹೋಯಿತು. ಹಾಗೆಯೇ, ಅಂಕಲ್ ಕೂಡ…


ಮಾಕೋನಹಳ್ಳಿ ವಿನಯ್ ಮಾಧವ್

ಶನಿವಾರ, ಜನವರಿ 21, 2012

ದಂಡುಪಾಳ್ಯ


ಬ್ರೇಕಿಂಗ್ ನ್ಯೂಸ್…..

ಯಾವುದೇ ಗಡಿಬಿಡಿಯಿಲ್ಲದೆ, ಹೈಕೋರ್ಟ್ ಕಡೆ ಹೋಗುವುದೋ, ಅಥವಾ ಪ್ರೆಸ್ ಕ್ಲಬ್ ಕಡೆಯೋ ಅಂತ ಯೋಚಿಸುತ್ತಾ ಹೆಲ್ಮೆಟ್ ತೆಗೆದುಕೊಳ್ಳುವಾಗಲೇ ರವಿ ಬೆಳೆಗೆರೆಯಿಂದ ಫೋನ್ ಬಂತು.
`ವಿನಯ್, ನಿಮಗೆ ಬಾಣಸವಾಡಿ ಇನ್ಸಪೆಕ್ಟರ್ ಛಲಪತಿ ಗೊತ್ತಾ?’
`ಇಲ್ಲಾ ಸರ್, ಹೆಸರೇ ಕೇಳಿಲ್ಲ.ಯಾಕ್ಸಾರ್ ? ಏನ್ಸಮಾಚಾರ?’ ಅಂತ ಕೇಳಿದೆ.
`ಸ್ವಲ್ಪ ಹುಡುಕಿ ವಿನಯ್. ಬೆಂಗಳೂರಿಗೆ ಹೊಸಬ ಅಂತ ಕಾಣುತ್ತೆ. ಒಂದು ಒಳ್ಳೆ ಕೇಸ್ ಹಿಡ್ದಿದ್ದಾನೆ ಕಣ್ರಿ. ಸುಮಾರು ಮರ್ಡರ್ ಮಾಡಿದ್ದಾರೆ ಅಂತ ಕಾಣುತ್ತೆ. ಅವರೆಲ್ಲಾ ಮೈಸೂರಿನಲ್ಲಿ ಅರೆಸ್ಟ್ ಆಗಿದ್ದ ಕತ್ತೆ ಸೀನನ ಗ್ಯಾಂಗ್ ನವರಾ ಅಂತ ಬೇಕಿತ್ತು,’ ಅಂದ್ರು.
`ಬಾಣಸವಾಡಿದಾದ್ರೆ ತೊಂದರೆ ಇಲ್ಲ ಸರ್. ನೋಡ್ತೀನಿ,’ ಅಂದೆ.
`ಮಧ್ಯಾಹ್ನದೊಳಗೆ ಬೇಕು ವಿನಯ್. ಇವತ್ತು ಎಡಿಷನ್ ಡೆಡ್ ಲೈನ್,’ ಅಂದರು.
ಆಗೆಲ್ಲ ಬೆಂಗಳೂರಿನ ಕ್ರೈಂ ಸಮಸ್ಯೆಗಳೇ ವಿಚಿತ್ರವಾಗಿದ್ದವು. ತಿಂಗಳಿಗೊಂದ್ಸಾರಿ ಟ್ಯಾನರಿ ರೋಡ್ ನಲ್ಲಿ ಕೋಮುಗಲಭೆ, ವಾರಕ್ಕೊಂದ್ನಾಲ್ಕು ಕೊಲೆ, ಸರ ಅಪಹರಣ… ಹೀಗೆ. ರೌಡಿಗಳ ಬೀದಿ ಕಾಳಗಗಳೂ ಕಮ್ಮಿಯಾಗಿದ್ದರಿಂದ, ಸುದ್ದಿಗಾಗಿ ಕ್ರೈಂ ರಿಪೋರ್ಟರ್ ಗಳು ಸ್ವಲ್ಪ ಪರದಾಡುತ್ತಿದ್ದರು.
ಅಲ್ಲೊಂದು, ಇಲ್ಲೊಂದು ಮೊಬೈಲ್ ಫೋನ್ ಗಳು, ಖಾಸಗಿ ಟೆಲಿವಿಷನ್ ಚಾನೆಲ್ ಗಳೂ ಕಮ್ಮಿ. ನಮಗೆ ಸುದ್ದಿ ಕೊಡುವ ಪೋಲಿಸ್ ಆಫಿಸರ್ ಗಳು, ಸ್ಟೇಶನ್ ಹೊರಗಡೆ ಹೋಗಿದ್ದರೆ, ಅವರನ್ನು ಹುಡುಕಿಕೊಂಡು ಹೋಗಬೇಕಿತ್ತು. ನಾನು ಆಗಷ್ಟೆ ಹೈಕೋರ್ಟ್ ರಿಪೋರ್ಟಿಂಗ್ ಕೂಡ ಶುರು ಮಾಡಿಕೊಂಡಿದ್ದೆ.
ಇವನ್ಯಾವನಪ್ಪಾ ಕತ್ತೆ ಸೀನ ಅಂದ್ರೆ? ಎಲ್ಲೂ ಕೇಳಿಲ್ಲವಲ್ಲಾ? ಅಂದ್ಕೊಂಡು ಸಿದ್ದಪ್ಪನಿಗೆ ಫೋನ್ ಮಾಡಿದೆ. ಸಿದ್ದಪ್ಪ ಆಗ ಫ್ರೇಜರ್ ಟೌನ್ ಸಬ್ ಇನ್ಸಪೆಕ್ಟರ್ ಆಗಿದ್ದರು. `ಸಾಹೇಬರು ಡಿಕನ್ಸನ್ ರೋಡ್ ಹತ್ತಿರ ಹೋಗಿದ್ದಾರೆ. ಏನೋ ಲಾ ಅಂಡ್ ಆರ್ಡರ್ ಪ್ರಾಬ್ಲಂ,’ ಅಂತ ಸ್ಟೇಷನ್ ನಲ್ಲಿ ಮಾಹಿತಿ ಸಿಕ್ಕಿತು.
ಅಲ್ಲಿಗೆ ಹೋದಾಗ ಮೊದಲು ಸಿಕ್ಕಿದ್ದು ಎಸಿಪಿ ಗಣಪತಿ. ಅದ್ಭುತವಾದ ಪೋಲಿಸ್ ಅಧಿಕಾರಿ, ಮಾತು ಕಮ್ಮಿ. ಅವರಿಂದ ಸುದ್ದಿ ತೆಗೆಯುವುದು ಸಾಧ್ಯವೇ ಇಲ್ಲದ ವಿಷಯ. ಅವರಿದ್ದಾಗ, ಕೆಳ ಅಧಿಕಾರಿಗಳು ಮಾತಾಡುವುದನ್ನು ಊಹಿಸಲೂ ಸಾಧ್ಯವಿಲ್ಲ.
`ಏನು ವಿನಯ್? ಇಷ್ಟು ದೂರ ಬಂದಿದ್ದು?’ ಅಂದರು.
`ಏನಿಲ್ಲ ಸರ್. ಏನೋ ಪ್ರಾಬ್ಲಂ ಅಂತ ಸುದ್ದಿ ಬಂತು. ಏನೂ ಕೆಲಸ ಇರಲಿಲ್ಲ. ಹಾಗೇ ಬಂದೆ,’ ಅಂದೆ.
ಯಾಕೋ ನನ್ನ ಮಾತು ನಂಬಿದಂತೆ ಕಾಣಲಿಲ್ಲ. `ಹೌದಾ? ಇಷ್ಟು ಸಣ್ಣ ಪ್ರಾಬ್ಲಂಗಳಿಗೆ ನೀವು ಜಾಗಕ್ಕೆ ಬಂದಿದ್ದು ನಾನು ನೋಡೇ ಇಲ್ಲಾ?’ ಅಂದರು. `ಯಾಕೋ ತಗುಲಿಕೊಂಡೆ’ ಅಂತ ಸುತ್ತ ನೋಡಿದೆ. ಸಿದ್ದಪ್ಪ ದೂರದಲ್ಲಿ ನಾಲ್ಕೈದು ಪೋಲಿಸರಿಗೆ ಏನೋ ಹೇಳುತ್ತಿದ್ದರು. `ಇಲ್ಲಾ ಸರ್, ಯಾರೋ ಊಟಕ್ಕೆ ಸಿಕ್ತೀನಿ ಅಂದಿದ್ದರು. ಹಾಗೇ ಇದನ್ನೂ ನೋಡಿಕೊಂಡು ಹೋಗೋಣ ಅಂತ ಬಂದೆ,’ ಅಂದವನೇ ಅಲ್ಲಿಂದ ಮುಂದಕ್ಕೆ ಹೊರಟು, ಸಿದ್ದಪ್ಪನ ಹತ್ತಿರ ನಿಲ್ಲಿಸಿದೆ.
ಜಾಸ್ತಿಹೊತ್ತು ಮಾತಾಡಿದರೆ ಎಡವಟ್ಟಾಗುತ್ತದೆ ಅಂತ ನೇರವಾಗಿ ವಿಷಯಕ್ಕೆ ಬಂದೆ. `ಬಾಣಸವಾಡಿಯಲ್ಲಿ ಹಿಡ್ಕೊಂಡಿದ್ದಾರಲ್ಲ, ಅವರೆಲ್ಲಾ ಕತ್ತೆ ಸೀನನ ಗುಂಪಿನವರಾ?’ ಅಂತ ಕೇಳಿದೆ.
`ಕತ್ತೆ ಸೀನ ಅಂದ್ರೆ ಯಾರು? ಇದೆಲ್ಲಾ ಈಗ ಬರೆಯೋಕೆ ಹೋಗಬೇಡ. ಈ ಗ್ಯಾಂಗ್ ನಲ್ಲಿ ಒಬ್ಬ ಕೃಷ್ಣ ಅಂತ, ಶ್ರೀರಂಗಪಟ್ಟಣದ ಜೈಲಿಂದ ತಪ್ಪಿಸಿಕೊಂಡು ಬಂದಿದ್ದ. ಇವರಷ್ಟು ಕೆಟ್ಟ ಕೊಲೆಗಡುಕರನ್ನ ನಾನು ಸರ್ವಿಸ್ ನಲ್ಲೇ ನೋಡಿಲ್ಲ. ಗಣಪತಿ ಸಾಹೇಬರು ಮತ್ತೆ ಸುರೇಶ್ ಬಾಬು ಸಾಹೇಬರು ಪರ್ಸನಲ್ ಆಗಿ ಮಾನಿಟರ್ ಮಾಡ್ತಿದ್ದಾರೆ. ಮೂರ್ನಾಲ್ಕು ಟೀಮ್ ಇನ್ವೆಸ್ಟಿಗೇಟ್ ಮಾಡ್ತಾಇವೆ. ನಾನೂ ಇದ್ದೀನಿ. ಹದಿನೈದು ದಿನ ತಾಳು, ಎಲ್ಲಾ ಡೀಟೇಲ್ಸ್ ಕೊಡ್ತೀನಿ. ಈಗ ಹೊರಡು ನೀನು,’ ಅಂದರು.
ಸರಿ, ರವಿ ಬೆಳೆಗೆರೆಗೆ ಫೋನ್ ಮಾಡಿ ವಿಷಯ ಹೇಳಿದೆ. `ಅಷ್ಟು ಸಾಕು ಬಿಡಿ. ಇದೇ ಬೇಕಾಗಿದ್ದು,’ ಅಂದ್ರು.
`ಸರ್, ಕತ್ತೆ ಸೀನ ಅಂದ್ರೆ ಯಾರು. ಅದು ಇವರಿಗೆ ಗೊತ್ತಿಲ್ಲ,’ ಅಂದೆ.
`ನಾಳೆ ನಮ್ಮ ಎಡಿಷನ್ ನೋಡಿ,’ ಅಂದ್ರು ರವಿ.
ಮಾರನೇ ದಿನ ಹಾಯ್ ಬೆಂಗಳೂರಿನಲ್ಲಿ ಮುಖಪುಟದಲ್ಲಿ ಬಂದಿತ್ತು: `ಕತ್ತೆ ರಕ್ತ ಕುಡಿದು…’ ಅಂತ.
ಸುಮಾರು 1994 ರಲ್ಲಿ ಮೈಸೂರಿನ ಎಸಿಪಿ ತಮ್ಮಯ್ಯ ಎಂಬ ಆಫಿಸರ್ ಈ ಗ್ಯಾಂಗನ್ನು ಬಂದಿಸಿದ್ದರಂತೆ. ಗುಂಪಿನ ನಾಯಕನಾದ ಸೀನ ಎಂಬುವವನಿಗೆ ವಿಚಿತ್ರ ಖಯಾಲಿ ಇತ್ತಂತೆ. ಅಮವಾಸ್ಯೆಯ ದಿನ, ದೇವತೆಯನ್ನು ಪೂಜೆ ಮಾಡಿ, ಕತ್ತೆಯ ರಕ್ತವನ್ನು ಇಂಜೆಕ್ಷನ್ ಸಿರಿಂಜ್ ನಲ್ಲಿ ಹೀರಿ, ಅದನ್ನು ಕುಡಿದು ದರೋಡೆ ಮಾಡಲು ಹೊರಡುತ್ತಿದ್ದನಂತೆ. ಕೈಗೆ ಸಿಕ್ಕಿದವರನ್ನು ಕೊಲೆ ಮಾಡಿ, ಅವರಲ್ಲಿದ್ದದನ್ನು ಲೂಟಿಮಾಡುತ್ತಿದ್ದರಂತೆ. ಹೆಂಗಸರಿದ್ದರೆ, ಅವರನ್ನು ರೇಪ್ ಮಾಡುತ್ತಾ, ಅವರ ಕುತ್ತಿಗೆಯನ್ನು ಸೀಳುತ್ತಿದ್ದರಂತೆ. ಅವರು ಸಾಯುವಾಗ ಹೊರಡುವ ಸದ್ದನ್ನು ಕೇಳುತ್ತಾ, ಇವರುಗಳು ಕೇಕೆ ಹಾಕುತ್ತಿದ್ದರಂತೆ. ಗಂಡಸರನ್ನೂ ಕೆಲವು ಬಾರಿ ಲೈಂಗಿಕ ಹಿಂಸೆಗೆ ಗುರಿಪಡಿಸಿ ಕೊಲ್ಲುತ್ತಿದ್ದರಂತೆ. ಮೈಸೂರು ಪೋಲಿಸರು ಇವರನ್ನು ಬಂಧಿಸುವ ಹೊತ್ತಿಗೆ, ಇವರು 10-12 ಕೊಲೆಗಳನ್ನು ಮಾಡಿದ್ದರಂತೆ.
ಇವರ ಗುಂಪಿನ ಕೃಷ್ಣ ತಪ್ಪಿಸಿಕೊಂಡು ಬಂದು, ಹೊರಗಡೆ ಇದ್ದರವನ್ನು ಕಲೆಹಾಕಿ, ಮತ್ತೆ ಕೊಲೆಗಳನ್ನು ಆರಂಭಿಸಿದ್ದ. ಅವನ ಗುಂಪಿನವರನ್ನೇ ಬಾಣಸವಾಡಿಯ ಪೋಲಿಸರು ಹಿಡಿದದ್ದು.
ಈ ಸುದ್ದಿ ಬಂದ ಎರಡೇ ದಿನಗಳಲ್ಲಿ ಪೋಲಿಸ್ ಕಮೀಷನರ್ ರೇವಣ್ಣಸಿದ್ದಯ್ಯ ಪ್ರೆಸ್ ಕಾನ್ಫರೆನ್ಸ್ ಮಾಡಿ, ಈ ಗುಂಪು ಮಾಡಿದ್ದ 20ಕ್ಕೂ ಹೆಚ್ಚು ಕೊಲೆಗಳನ್ನು ಬಹಿರಂಗಪಡಿಸಿದರು. ನಮ್ಮ ಪೇಪರ್ ನಿಂದ ಹರ್ಷ ಹೋಗಿದ್ದ. ಮಧ್ಯಾಹ್ನದ ಹೊತ್ತಿಗೆ ಸುರೇಶ್ ಬಾಬು ನನಗೆ ಫೋನ್ ಮಾಡಿ, ಬರಲು ಹೇಳಿದರು.
ಅಡಿಷನಲ್ ಕಮೀಷನರ್ ಆಗಿದ್ದ ಸುರೇಶ್ ಬಾಬು ಕಂಡರೆ ನನಗೆ ಈಗಲೂ ಗೌರವ. ನಗುತ್ತಲೇ ಅವರ ಕೋಣೆಗೆ ಹೋದವನೇ: `ಕಂಗ್ರಾಚ್ಯುಲೇಷನ್ಸ್ ಸರ್,’ ಎಂದೆ.
ಗಂಭೀರವಾಗಿ ಕುಳಿತಿದ್ದ ಸುರೇಶ್ ಬಾಬು, : `ವಿನಯ್, ರವಿಗೆ ಈ ಗ್ಯಾಂಗ್ ಬಗ್ಗೆ ಇನ್ಫರ್ಮೇಶನ್ ಯಾರು ಕೊಟ್ಟಿದ್ದು?’
ತಬ್ಬಿಬ್ಬಾದ ನಾನು: `ನಂಗೊತ್ತಿಲ್ಲ ಸರ್… ಅವರಿಗೇ ಯಾವುದೋ ಕಡೆಯಿಂದ ಬಂದಿರಬೇಕು,’ ಅಂದೆ.
`ಮೈಸೂರಿಂದ ಬಂದಿರೊದು ನಂಗೆ ಗೊತ್ತು. ಅದೇ ಗ್ಯಾಂಗಿನವರು ಇವರು ಅಂತ ಯಾರು ಕೊಟ್ಟಿದ್ದು?’ ಅಂತ ಕೇಳಿದರು.
ಸಾಧಾರಣವಾಗಿ, ಸುರೇಶ್ ಬಾಬುರವರ ಇನ್ಫರ್ಮೇಶನ್ ತಪ್ಪಿರೋಲ್ಲ. ಸುಮ್ಮನೆ ಕೂತೆ. `ನಿಮಗೆಲ್ಲಾ ಸೀರಿಯೆಸ್ ನೆಸ್ ಇಲ್ಲ. ನನಗೆ ಇನ್ನೂ ಒಂದು ತಿಂಗಳಾದರು ಈ ಗ್ಯಾಂಗ್ ನವರು ಬೇಕಿತ್ತು. ನಿನ್ನ ತಲೆಹರಟೆಯಲ್ಲಿ ಅವರನ್ನ ಕೋರ್ಟ್ ಗೆ ಕಳುಹಿಸಿದೆ. ಇನ್ನೂ ಇಪ್ಪತ್ತು ಕೊಲೆಗಳ ಇನ್ವೆಸ್ಟಿಗೇಶನ್ ಬಾಕಿ ಇದೆ,’ ಅಂತ ಹೇಳಿ ನನ್ನ ಮುಖ ನೋಡಿದರು.
ನನಗೆ ಮಾತಾಡಲು ಏನೂ ಇರಲಿಲ್ಲ. ಸುಮ್ಮನೆ ತಲೆ ತಗ್ಗಿಸಿ ಕೂತೆ. `ಇವರು ಕೈತಪ್ಪಿ ಹೋದವರು, ಮತ್ತೆ ಕೈಗೆ ಸಿಕ್ಕಿದರು ಗೊತ್ತಾ? ಮೂರ್ನಾಲ್ಕು ವರ್ಷಗಳಿಂದ ಪತ್ತೆಯಾಗದ ಕೊಲೆಗಳ ಹಿಂದೆ ಇವರುಗಳ ಕೈವಾಡ ಇದೆ. ಕೃಷ್ಣ ಸಿಕ್ಕಿದ್ದು ಸಮೇತ ದೇವಸ್ಥಾನದ ಹುಂಡಿ ಕದಿಯಲು ಹೋದಾಗ. ಅವರೆಲ್ಲರನ್ನೂ ಕುಡುಕರು ಅಂದ್ಕೊಂಡು ಬಿಡೋಕೆ ರೆಡಿಯಾಗಿದ್ದರು. ಯಾಕೋ ಅನುಮಾನ ಬಂದು ಸ್ವಲ್ಪ ವರ್ಕ್ ಮಾಡಲು ಹೇಳ್ದೆ. ಹದಿನೈದು ದಿನ ವರ್ಕ್ ಮಾಡಿದರೂ ಬಾಯಿ ಬಿಡಲಿಲ್ಲ. ಕೊನೇ ದಿನ, ಆ ಚಿಕ್ಕ ಹುಡುಗ ಇದ್ದಾನಲ್ಲ, ಚಿಕ್ಕ ಹನುಮ, ಅವ್ನು ಒಂದು ರಾಬರಿ ವಿಷಯ ಬಾಯಿಬಿಟ್ಟ. ಅವನು ಮನೆ ತೋರಿಸಿದಾಗ ಗೊತ್ತಾಯ್ತು, ಸರಿಯಾದ ಕೇಸ್ ಇದು ಅಂತ. ಜ್ನಾಪಕ ಇದೆಯಾ… ಟ್ಯಾನರಿ ರೋಡಲ್ಲಿ ಒಬ್ಬ ಮಂತ್ರವಾದಿ ಮತ್ತೆ ಅವನ ಶಿಷ್ಯನ್ನ ವಿಕೃತವಾಗಿ ಕೊಲೆ ಮಾಡಿದ್ದರು. ನಾವು ಅವರನ್ನು ಸಲಿಂಗ ಕಾಮಿಗಳು ಅಂತ ತಿಳ್ಕೊಂಡಿದ್ದೆವಲ್ಲಾ, ಅದೇ ಮನೆ. ಈ ಹುಡುಗ ಹೊರಗಡೆ ನಿಂತು ಯಾರಾದರೂ ಬಂದರೆ ಸಿಗ್ನಲ್ ಕೊಡುತ್ತಿದ್ದ. ಅವನಿಗೆ ಒಳಗಡೆ ಕೊಲೆಯಾಗಿದ್ದು ಗೊತ್ತಿರಲಿಲ್ಲ. ಹಾಗಾಗಿ ಬಾಯಿ ಬಿಟ್ಟ. ಇನ್ನೇನು ಕೊನೆ ಹಂತಕ್ಕೆ ಬಂತು ಅನ್ನುವಾಗ, ನೀನು ರವಿಗೆ ಬಾಯಿ ಬಿಟ್ಟೆ, ಅಲ್ವಾ,’ ಅಂದರು.
ನಾನು ಏನಾಯ್ತು ಅಂತ ವಿವರಣೆ ಕೊಡಲು ಹೋಗಲಿಲ್ಲ. `ಸಾರಿ ಸರ್,’ ಅಂದೆ. `ಹೋಗಲಿ ಬಿಡು. ಏನ್ಮಾಡೋಕ್ಕಾಗುತ್ತೆ,’ ಅಂತ ಹೇಳಿದರು.
ಅಲ್ಲಿಂದ ನೇರವಾಗಿ ಕೆ.ಜಿ.ಹಳ್ಳಿ ಪೋಲಿಸ್ ಸ್ಟೇಷನ್ ಗೆ ಹೋದೆ. ಆರಡಿಗೂ ಹೆಚ್ಚಿದ್ದ ಆಜಾನುಭಾಹು ಇನ್ಸ್ಪೆಕ್ಟರ್ ಪ್ರತಾಪ್ ಸಿಂಘ್ ಕೈ ಚಾಚಿಕೊಂಡು ಕೂತಿದ್ದರು. ಅವರ ಕೈಯನ್ನು ಒಬ್ಬ ಒತ್ತುತ್ತಿದ್ದ. `ಏನಾಯ್ತು?’ ಅಂತ ಕೇಳಿದೆ.
`ಆ ಕೊಲೆಗಡುಕರ ಮೇಲೆ ವರ್ಕ್ ಮಾಡ್ತಿದ್ದೆ. ಮೈಯೆಲ್ಲಾ ನೋವು. ನೋಡೋಕೆ ಸಣ್ಣಗಿದ್ದಾರೆ. ಬಾಯಿನೇ ಬಿಡೋಲ್ಲ. ಈಗ ಬೇರೆ ಹದಿನೈದು ದಿನದಲ್ಲಿ ಇನ್ವೆಸ್ಟಿಗೇಶನ್ ಮುಗೀಬೇಕು. ಅಷ್ಟೇದಿನ ಪೋಲಿಸ್ ಕಸ್ಟಡಿ ಇರೋದು. ಏನ್ಮಾಡೊದು ಅಂತಾನೇ ಗೊತ್ತಾಗ್ತಿಲ್ಲ,’ ಅಂದರು.
ಒಳಗೆ ಹೋಗಿ ಸಿಕ್ಕಿಬಿದ್ದವರನ್ನು ನೋಡಿದೆ. ಪೋಲಿಸ್ ವರ್ಕಿಂಗ್ ಇನ್ನೂ ನೆಡೀತಿತ್ತು. ಅವರ್ಯಾರೂ ಬಗ್ಗುವವರಂತೆ ಕಾಣಲಿಲ್ಲ. ಅದರ ಬದಲು, `ಹೊರಗೆ ಬಂದಾಗ ನೊಡ್ಕೋತ್ತೀವಿ,’ ಅನ್ನುವಂತಿತ್ತು ಅವರ ಮುಖದ ಭಾವನೆಗಳು.
ಆಫೀಸಿಗೆ ಬಂದಾಗ, ಹರ್ಷ ಕೂಗಾಡುತ್ತಿದ್ದ. `ಏನಾಯ್ತೋ?’ ಅಂತ ಕೇಳಿದಾಗ, `ಅಲ್ಲಾ, ಹಾಯ್ ಬೆಂಗಳೂರಿಗೆ ಮೊದಲು ಕೊಟ್ಟು, ಆಮೇಲೆ ಪ್ರೆಸ್ ಕಾನ್ಫರೆನ್ಸ್ ಮಾಡಿದ್ದಾರೆ, ಆ ಕಮೀಷನರ್. ಅವರ ವಿರುದ್ದ ಬರೆಯಕೂಡದು ಅಂತ ಈ ಒಪ್ಪಂದ,’ ಅಂದ.
ಇದೇ ಮಾತನ್ನು ಎರಡು ವರ್ಷಗಳ ಮುಂಚೆ ನಾನೇ ಹೇಳಿದ್ದೆ. ರವಿಯ ಜೊತೆ ಆಗ ನನಗಷ್ಟು ಸಲಿಗೆ ಇರಲಿಲ್ಲ. ಶ್ಯಾಮ್ ಮತ್ತು ರವಿ ಎಂಬ ಸೀರಿಯಲ್ ಕಿಲ್ಲರ್ ಗಳನ್ನು ಹಿಡಿದ ವಿಷಯ ಹಾಯ್ ಬೆಂಗಳೂರಿನಲ್ಲಿ ಮೊದಲು ಬಂದಾಗ, ಪ್ರೆಸ್ ಕಾನ್ಫರೆನ್ಸ್ ನಲ್ಲೇ ರೇವಣ್ಣಸಿದ್ದಯ್ಯರವರನ್ನು ಕೇವಲವಾಗಿ ಮಾತಾಡಿದ್ದೆ. ಸುರೇಶ್ ಬಾಬು ನನ್ನನ್ನು ಸಮಾಧಾನ ಮಾಡಿದ್ದರು. ಈಗಿನ ಕ್ರೈಂ ಹುಡುಗರೂ ತಿರುಗಿ ಬಿದ್ದಿದ್ದರು. `ಅಲ್ಲ ಕಣೋ, ಕತ್ತೆ ಸೀನನ ಗ್ಯಾಂಗ್ ವಿಷಯ ಮಾತ್ರ ಇದೆ. ಇವರುಗಳು ಬೆಂಗಳೂರಿನಲ್ಲಿ ಮಾಡಿದ್ದು ಏನೂ ಬಂದಿಲ್ಲವಲ್ಲೋ,’ ಅಂದೆ. ಆದರೆ, ಕೇಳುವ ಸ್ಥಿತಿಯಲ್ಲಿ ಹರ್ಷ ಇರಲಿಲ್ಲ.
ಮಾರನೇ ದಿನ, ಯಾವುದೇ ಪತ್ರಿಕೆಯಲ್ಲಿ, ಈ ಕೇಸ್ ಗೆ ಸಿಗೆಬೇಕಾದ ಮಾನ್ಯತೆ ಸಿಕ್ಕಿರಲಿಲ್ಲ. ನನಗ್ಯಾಕೋ ಕಸಿವಿಸಿಯಾಯ್ತು. ಕತ್ತೆ ಸೀನನ ಚರಿತ್ರೆ ಮತ್ತು ಈ ಗ್ಯಾಂಗ್ ನ ವಿವರಗಳನ್ನು ಸೇರಿಸಿ ಒಂದು ಕಥೆ ಬರೆದರೂ, ಡೆಸ್ಕ್ ನಲ್ಲಿದ್ದ ಉತ್ತರ: `ಇಷ್ಟೊಂದು ಭಯಂಕರವಾಗಿದೆ, ಇದನ್ನು ಬೆಳಗ್ಗೆ ಎದ್ದು ಯಾರಾದ್ರು ಓದಿದ್ರೆ, ಮೂಡ್ ಹಾಳಾಗುತ್ತೆ, ಅಷ್ಟೆ,’ ಅಂದರು.
ಒಂದು ವಾರ ಹಾಗೇ ಕಳೆಯಿತು. ಒಂದು ದಿನ ಸಾಯಂಕಾಲ ಆಫೀಸಿಗೆ `ದಿ ವೀಕ್’ ನಲ್ಲಿ ಕೆಲಸ ಮಾಡುತ್ತಿದ್ದ ಚೇತನ್ ಕೃಷ್ಣಸ್ವಾಮಿ ಬಂದ. `ಹಾಯ್ ವಿನಯ್, ಏನ್ಮಾಡ್ತಿದ್ದೀಯಾ?’ ಅಂತ ಕೇಳಿದ.
ಏನೊ ಹೊಳೆದಂತಾಗಿ, `ಚೇತನ್, ಬಾ ಇಲ್ಲಿ,’ ಅಂತ ಹಳೇ ಪೇಪರ್ ಗಳ ಫೈಲ್ ಹತ್ತಿರ ಕರೆದುಕೊಂಡು ಹೋಗಿ ಅವನಿಗೆ ಈ ಕೊಲೆಗಡುಕರ ಕಥೆ ಹೇಳಿದೆ. `ಹಾಯ್ ಬೆಂಗಳೂರಲ್ಲಿ ಬಂತು ಅಂತ ಇದಕ್ಕೆ ಪಬ್ಲಿಸಿಟಿ ಕಮ್ಮಿ ಸಿಕ್ಕಿದೆ. ನಲವತ್ತು ಕೊಲೆಯಾದರೂ ಮಾಡಿದ್ದಾರೆ. ನಿನಗೇನಾದರೂ ಬೇಕಾದರೆ, ಪ್ರತಾಪ್ ಸಿಂಘ್ ಗೆ ಹೇಳ್ತಿನಿ,’ ಅಂದೆ.
ನಾಳೆ ಹೇಳ್ತೀನಿ ಅಂದ ಚೇತನ್, ಮಾರನೇ ದಿನ ಮಧ್ಯಾಹ್ನವೇ ಫೋನ್ ಮಾಡಿ, `ನಾನು ಪ್ರತಾಪ್ ಸಿಂಘ್ ಭೇಟಿಯಾಗಬೇಕು,’ ಅಂದ. ಸರಿ, ಪ್ರತಾಪ್ ಸಿಂಘ್ ನಂಬರ್ ಕೊಟ್ಟು, ಅವರಿಗೂ ಫೋನ್ ಮಾಡಿ ಹೇಳಿದೆ. ಮುಂದಿನ ನಾಲ್ಕು ದಿನ ಚೇತನ್ ಪತ್ತೆಯೇ ಇರಲಿಲ್ಲ. ಅವತ್ತೊಂದು ಭಾನುವಾರ ಬೆಳಗ್ಗೆ ಚೇತನ್ ಫೋನ್ ಮಾಡಿ, `ನಮ್ಮ ಮ್ಯಾಗಝೀನ್ ನೋಡ್ದಾ?’ ಅಂತ ಕೇಳಿದ.
`ಇಲ್ಲ. ಯಾಕೆ, ನಿನ್ನ ಸ್ಟೋರಿ ಬಂತಾ?’ ಅಂತ ಕೇಳಿದೆ.
`ಆರು ಪೇಜ್ ಬಂದಿದೆ. ಥ್ಯಾಂಕ್ಸ್ ಕಣೋ. ಎಲ್ಲಾರಿಗೂ ಖುಷಿಯಾಗಿದೆ. ನೋಡಿ ಹೇಳು, ಇಲ್ಲದಿದ್ದರೆ ನಿನ್ನ ಆಫೀಸಿಗೆ ಬೇಕಾದರೆ ಒಂದು ಕಾಪಿ ಕಳುಹಿಸುತ್ತೇನೆ,’ ಅಂದ.
ನಿಜಕ್ಕೂ ಚೇತನ್ ಅಧ್ಬುತವಾದ ಕೆಲಸ ಮಾಡಿದ್ದ. ನನಗೆ ಗೊತ್ತಿರದ ಎಷ್ಟೋ ವಿಷಯಗಳನ್ನು ಕಲೆ ಹಾಕಿದ್ದ. ಹಾಗೆ, ಈ ಗ್ಯಾಂಗಿನವರ ಊರಾದ ಕೋಲಾರದ ಹತ್ತಿರದ ದಂಡುಪಾಳ್ಯಕ್ಕೂ ಹೋಗಿ ಬಂದಿದ್ದ. ಹಾಗೆಯೇ, ಗ್ಯಾಂಗಿನ ಲೀಡರ್ ಆದ ಕೃಷ್ಣನನ್ನೂ ಮಾತಾಡಿಸಿದ್ದ.
ಅಲ್ಲಿಂದ ಮುಂದೆ ಈ ಗ್ಯಾಂಗ್ ನವರು ದಂಡುಪಾಳ್ಯ ಗ್ಯಾಂಗ್ ಅಂತಲೇ ಪ್ರಸಿದ್ದಿಯಾದರು. ಅವರು ಜೈಲಿಂದ ತಪ್ಪಿಸಿಕೊಂಡು, ಮತ್ತೆ ಅವರನ್ನು ಹಿಡಿದದ್ದೂ ಅಯ್ತು. ಆಗೊಂದು, ಈಗೊಂದು ಸಲ ಪತ್ರಿಕೆಯಲ್ಲಿ ಅವರ ಬಗ್ಗೆ ಬರುತ್ತಿತ್ತು. ಒಂದೆರೆಡು ವರ್ಷಗಳು ಕಳೆದವು, ಒಂದು ಖಾಸಗೀ ಟೆಲಿವಿಷನ್ ಚಾನೆಲ್ ಇವರ ಬಗ್ಗೆ ಒಂದು ದೊಡ್ಡ `ಕ್ರೈಂ ನ್ಯೂಸ್’ ಮಾಡಿತು. ಒಮ್ಮೆಲೆ, ದಂಡುಪಾಳ್ಯ ಗ್ಯಾಂಗ್ ಎಲ್ಲರ ಬಾಯಲ್ಲಿ ಓಡಾಡಲು ಶುರುವಾಯ್ತು.
ಒಂದಿನ ಸಾಯಂಕಾಲ ಆಫೀಸಿನಿಂದ ಮನೆಗೆ ಬಂದಾಗ ನನ್ನ ಅತ್ತೆ ಹೇಳಿದರು: `ಟೀವಿಯಲ್ಲಿ ದಂಡುಪಾಳ್ಯ ಗ್ಯಾಂಗ್ ತೋರಿಸುತ್ತಿದ್ದರು. ನೋಡಿದರೆ ಹೆದರಿಕೆಯಾಗುತ್ತೆ. ಮನೆಯ ಸುತ್ತ ಗ್ರಿಲ್ ಹಾಕಿಸಬೇಕು,’ ಅಂದರು.
`ಹೌದಾ?’ ಅಂತ ಹೇಳಿ ನಕ್ಕೆ….


ಮಾಕೋನಹಳ್ಳಿ ವಿನಯ್ ಮಾಧವ್

ಶನಿವಾರ, ಜನವರಿ 14, 2012

ವೀರಪ್ಪನ್


ಅಣ್ಣಾವ್ರ ಅಪಹರಣದ ಹಿಂದೊಂದು ಗಾಳಿಪಟ


ಬೆಳಗ್ಗಿನಿಂದ ಆಫೀಸಿನಲ್ಲಿ ಮುಖ ದಪ್ಪ ಮಾಡಿಕೊಂಡು ಓಡಾಡುತ್ತಿದ್ದೆ. ಯಾರೇ ಮಾತಾಡಿದರೂ ರೇಗುತ್ತಿತ್ತು. ನನ್ನನ್ನು ನಾನೇ ಸಮಾಧಾನ ಮಾಡಿಕೊಳ್ಳೊಕೆ ನೋಡಿದರೂ ಪ್ರಯೋಜನವಾಗುತ್ತಿರಲಿಲ್ಲ. ಒಂದ್ಹತ್ಸಲನಾದ್ರೂ ಗೊಣಗಿಕೊಂಡಿದ್ದೆ: `ಯಾವನಿಗೆ ಬೇಕು ಈ ಕೆಲಸ? ಕತ್ತೆ ಥರ ದುಡೀಬೇಕು. ನಮಗಿಷ್ಟ ಇದ್ದಿದ್ದು ಮಾಡೋಣ ಅಂದ್ರೆ, ಎಲ್ಲಾದಕ್ಕೂ ಕಲ್ಲು ಹಾಕ್ತಾರೆ.’
ಆಗಿದ್ದಿಷ್ಟೆ. ಡಾ. ರಾಜ್ ಕುಮಾರ್ ಅವರನ್ನು ಅವರ ಗಾಜನೂರು ಮನೆಯಿಂದ ವೀರಪ್ಪನ್ ಅಪಹರಿಸಿ ನಾಲ್ಕು ದಿನಗಳಾಗಿದ್ದವು. ಆ ನಾಲ್ಕು ದಿನಗಳೂ, ಬೆಳಗ್ಗಿನಿಂದ ರಾತ್ರಿಯವರೆಗೆ ಆಫೀಸಿಗೆ ಏನೇನು ಸುದ್ದಿ ಬೇಕೋ, ಅಲ್ಲೇಲ್ಲಾ ತಿರುಗಾಡಿಕೊಂಡು ಬರುತ್ತಿದ್ದೆ. ಐದನೇ ದಿನಕ್ಕೆ ಬೆಂಗಳೂರಿನಿಂದ ಇನ್ನೇನೂ ಸುದ್ದಿ ಜಾಸ್ತಿ ಹುಟ್ಟೋದಿಲ್ಲ ಅಂತ ಅರ್ಥವಾಗತೊಡಗಿತು. ಏನಾದರೂ ಮುಖ್ಯಮಂತ್ರಿ ಅಥವಾ ಹೋಂ ಮಿನಿಸ್ಟರ್ ಮಾತಾಡಿದರೆ ಸುದ್ದಿ, ಇಲ್ಲದಿದ್ದರೆ ಯಾವುದಾದರೂ ಊಹಾಪೋಹ ಅಷ್ಟೆ.
ಬೆಳಗ್ಗೆನೇ ನಮ್ಮ ಬ್ಯುರೋ ಛೀಫ್ ಆಗಿದ್ದ ಮಟ್ಟುವಿಗೆ ಎಲ್ಲವನ್ನೂ ವಿವರಿಸಿ, `ಸರ್, ಇನ್ನೊಂದು ವಾರವಾದರೂ ರಾಜ್ ಕುಮಾರ್ ಅವರು ಬಿಡುಗಡೆ ಆಗುವ ಸಾಧ್ಯತೆ ಇಲ್ಲ. ನಾನು ಚಾಮರಾಜನಗರಕ್ಕೆ ಹೋಗುತ್ತೇನೆ. ಅಲ್ಲಿ ಕೆಲವು ಲೋಕಲ್ಸ್ ಗೊತ್ತಿದ್ದಾರೆ. ಒಳ್ಳೆ ಸ್ಟೋರಿಗಳು ಸಿಕ್ತಾವೆ,’ ಅಂದೆ.
`ಅಲ್ಲಿಗೆ ಮೈಸೂರು ರಿಪೋರ್ಟರ್ ಗಳು ಹೋಗಿದ್ದಾರೆ,’ ಅಂದರು.
`ಅವರ ಪಾಡಿಗೆ ಅವರ ಸ್ಟೋರಿ ಮಾಡಲಿ ಸರ್. ನಾನು ಅಲ್ಲಿನ ಯಾವುದೇ ಅಧಿಕಾರಿಗಳನ್ನು ಮಾತಾಡ್ಸೋಲ್ಲ. ನಾನು ಕಾಡೊಳಗೆ ಹೋಗ್ತಾ ಇದ್ದೀನಿ,’ ಅಂದೆ.
`ನೀನು ಹೋದರೆ ಅವರು ಬೇಜಾರು ಮಾಡ್ಕೋತ್ತಾರೆ. ಮತ್ತೆ ಇಲ್ಲಿ ಏನಾದರೂ ಬೆಳವಣಿಗೆ ಆದರೆ ನನಗೆ ನೀನಿರಬೇಕು. ನೀ ಹೋಗೋದು ಬೇಡ,’ ಅಂತ ಕಡ್ಡಿ ಮುರಿದ ಹಾಗೆ ಹೇಳಿದರು.
ನಾನು ಹೋದರೆ ಯೋಗಿಗಾಗಲಿ, ಶಿವಕುಮಾರ್ ಗೆ ಆಗಲಿ ಏನೂ ಬೇಜಾರಾಗೋದಿಲ್ಲ ಅಂತ ನನಗೆ ಅನ್ನಿಸಿತು. `ಸರ್, ಒಂದು ವಾರ ಯಾವುದೇ ಬೆಳವಣಿಗೆ ಆಗಲು ಸಾಧ್ಯನೇ ಇಲ್ಲ. ಹಾಗೇನಾದರೂ ಆದರೆ, ತಕ್ಷಣ ವಾಪಾಸ್ ಬರ್ತೀನಿ,’ ಅಂತ ಕೇಳಿದರೂ, ಮಟ್ಟು ಒಪ್ಪಲಿಲ್ಲ.
ಇದೇನು ನನಗೆ ಹೊಸ ಅನುಭವವೇನಲ್ಲ. ಮುಂಚೆನೂ ತುಂಬಾ ಸಲ ಆಗಿತ್ತು. ಆಗೆಲ್ಲಾ ನಿರಾಸೆ ಆಗುತ್ತಿದ್ದರೆ, ಈ ಸಲ ಮಾತ್ರ ಸಿಟ್ಟೇ ಬಂದಿತ್ತು. ಅವತ್ತು ಮಟ್ಟು ಕೂಡ ಒಂದೆರೆಡು ಸಲ ಮಾತಾಡಿಸಲು ನೋಡಿದರೂ, ನಾನು ಮುಖ ಕೊಟ್ಟು ಮಾತಾಡಲಿಲ್ಲ. ಕಂಪ್ಯೂಟರ್ ಕಡೆ ನೋಡುತ್ತಾ, ಕೇಳಿದ ಪ್ರಶ್ನೆಗೆ ಉತ್ತರ ಕೊಟ್ಟು ಸುಮ್ಮನಾದೆ.
ಮೂರೂವರೆ ಹೊತ್ತಿಗೆ ರವಿ ಬೆಳೆಗೆರೆ ಫೋನ್ ಮಾಡಿ, `ಏನ್ಮಾಡ್ತಿದ್ದೀರಾ?’ ಅಂತ ಕೇಳಿದರು. `ಏನಿಲ್ಲಾ ಸರ್, ಆಫೀಸ್ ನಲ್ಲಿ ಕೂತಿದ್ದೀನಿ,’ ಅಂದೆ.
`ಬನ್ರಿ, ಚಾಮರಾಜ ನಗರಕ್ಕೆ ಹೋಗಿ, ವೀರಪ್ಪನ್ ಸಿಕ್ಕಿದ್ರೆ ಮಾತಾಡ್ಸಿಕೊಂಡು ಬರೋಣ,’ ಅಂತ ನಕ್ಕರು.
`ಆಫೀಸಲ್ಲಿ ಕೇಳ್ದೆ ಸರ್, ಹೋಗೋದು ಬೇಡ ಅಂದ್ರು,’ ಅಂದೆ.
`ರಜಾ ಹಾಕಿ ಬನ್ರಿ… ಮೂರು ದಿನ ಹೋಗಿ ಬರೋಣ. ಇವತ್ತು ಎಡಿಷನ್ ಬೇಗ ಮುಗಿಸ್ತೀನಿ. ಏಳು ಘಂಟೆಗೆ ಹೊರಡೋಣ,’ ಅಂದು ಫೋನ್ ಇಟ್ಟರು.
ಮೊದಲೇ ಮೂಡ್ ಸರಿ ಇರಲಿಲ್ಲ. ಸೀದ ಹೋದವನೆ, ಒಂದು ಲೀವ್ ಲೆಟರ್ ಗೀಚಿ, ಮಟ್ಟುವಿನ ಮುಂದೆ ಹಿಡಿದು, `ಸರ್, ನಾಲ್ಕು ದಿನ ರಜಾ ಹೋಗ್ತಿದ್ದೀನಿ,’ ಅಂದೆ. ಬೆಳಗ್ಗಿನಿಂದ ನನ್ನ ಅವತಾರ ನೋಡಿದ್ದ ಮಟ್ಟು ಏನೂ ಮಾತಾಡಲಿಲ್ಲ.
ಸೀದ ಮನೆಗೆ ಹೋದವನೇ, ಬ್ಯಾಗಿನಲ್ಲಿ ಎರಡು ಜೊತೆ ಬಟ್ಟೆ ತುಂಬಿಕೊಂಡು ರವಿ ಆಫಿಸ್ ಗೆ ಹೊರಟೆ. ರವಿ ಬರೆಯುತ್ತಾ ಕೂತಿದ್ದವರು, ನನ್ನನ್ನು ನೋಡಿದ ತಕ್ಷಣ: `ವಿನಯ್, ಒಂದು ಜಿಪ್ಸಿಗೆ ಹೇಳಿದ್ದೆ… ಅದು ಚಾಮರಾಜಪೇಟೆಯಲ್ಲಿ, ನನ್ನ ಫ್ರೆಂಡ್ ಆಫಿಸ್ ನಲ್ಲಿ ಇದೆ. ನಾನು ಎಡಿಷನ್ ಮುಗಿಸಬೇಕು. ನೀವು ಹೋಗಿ ತಗೊಂಡು ಬನ್ನಿ,’ ಅಂತ ಅಡ್ರೆಸ್ ಕೊಟ್ಟರು. ನನಗಿನ್ನೇನೂ ಕೆಲಸವಿರಲಿಲ್ಲ. ಸೀದ ಆ ಆಫೀಸಿಗೆ ಹೋಗಿ, ಜಿಪ್ಸಿ ತಗೊಂಡು ಬಂದು ಕಾಯುತ್ತಾ ಕುಳಿತೆ. ಸ್ವಲ್ಪ ಹೊತ್ತಿಗೆ ನಿವೇದೀತಾ ಬಂದು ಹೇಳಿದಳು: `ಎಡಿಷನ್ ಮುಗಿಯೋಕ್ಕೆ, ಬೆಳಗ್ಗಿನ ಜಾವ ಒಂದು ಘಂಟೆ ಆದರೂ ಆಗುತ್ತೆ.’
ಅದೇನೂ ನನಗೆ ಹೊಸದಾಗಿರಲಿಲ್ಲ. ರವಿ ಆಫಿಸ್ ನಲ್ಲಿ ಬೆಳಗ್ಗಿನ ಜಾವ ಎರಡು ಘಂಟೆಯವರೆಗೆ ಕಾಯ್ದದ್ದೂ ಇತ್ತು. ಹಾಗೆ, ಹೀಗೆ ಕಾಲಹರಣ ಮಾಡಿ, `ಹೊರಡುವ ಸಮಯಕ್ಕೆ ಎಬ್ಬಿಸಿ’ ಅಂತ ಹೇಳಿ, ಸೋಫಾದ ಮೇಲೆ ಮುದುಡಿಕೊಂಡೆ. ನನ್ನನ್ನು ರವಿ ಎಬ್ಬಿಸಿದಾಗ, ಸಮಯ ಎರಡು ಘಂಟೆ ದಾಟಿತ್ತು. ಮುಖ ತೊಳೆದುಕೊಂಡು ಹೊರಟಾಗ ಹೇಳಿದೆ: `ಸರ್, ನೀವು ಮಲ್ಕೊಳ್ಳಿ. ನಾನು ಡ್ರೈವ್ ಮಾಡ್ತೀನಿ,’ ಅಂತ..
ಅವರದೊಂಥರಾ ಕೋಳಿ ನಿದ್ರೆ ಇದ್ದಹಾಗಿತ್ತು. ಬೆಂಗಳೂರಲ್ಲಿ ಮಲಗಿದವರು, ಮಳವಳ್ಳಿಗೆ ತಲುಪುವ ಹೊತ್ತಿಗೆ ಎದ್ದಿದ್ದರು. ಅಲ್ಲೇ ಒಂದು ಬೇಕರಿಯಲ್ಲಿ ಟೀ ಕುಡಿದು ಮಾತಾಡುತ್ತಾ ಹೊರಟವರು, ಐದು ಘಂಟೆಯ ಹೊತ್ತಿಗೆ ಚಾಮರಾಜನಗರ ತಲುಪಿದ್ದೆವು.
ನಾವು ಅಲ್ಲಿಗೆ ತಲುಪುವುದರೊಳಗೆ, ಮೂರು ದಿನಗಳ ಹಿಂದೆ ಅಲ್ಲಿಗೆ ಬಂದಿದ್ದ ಪ್ರಕಾಶ್, ಐ.ಬಿ ಯಲ್ಲಿ ಒಂದು ರೂಮು ಮಾಡಿದ್ದ. ಪ್ರಕಾಶ್ ಆಗ ಸುಪ್ರಭಾತ ಅನ್ನೋ ಟೆಲಿವಿಷನ್ ಸೇರಿಕೊಂಡಿದ್ದ. ನಾವು ತಲುಪಿ ಸ್ವಲ್ಪ ಮಲಗುವುದರೋಳಗೆ, ರವಿಯನ್ನು ನೋಡಲು ಅವರದೊಂದು ದೊಡ್ಡ ಅಭಿಮಾನಿ ಬಳಗ ಬಂತು. ಸರಿ, ನಾನು ಸ್ನಾನ ಮಾಡಿಕೊಂಡು, ಊರು ತಿರುಗಲು ಪ್ರಕಾಶನ ಜೊತೆ ಹೊರಟೆ.
ವಾಪಾಸು ಬರುವ ಹೊತ್ತಿಗೆ, ಗುಂಪು ದೊಡ್ಡದಾಗಿತ್ತು. ಹತ್ತೂವರೆ ಸುಮಾರಿಗೆ ರವಿ ಹೊರಟರು. ಅವರೇ ಡ್ರೈವಿಂಗ್ ತೆಗೆದುಕೊಂಡರು. ತಕ್ಷಣವೇ ಎಲ್ಲಿಂದಲೋ ಬಂದ ರವಿಯವರ ರಿಪೋರ್ಟರ್ ರಾ ಸೋಮನಾಥ, ಜೀಪಿನ ಹಿಂದೆ ಹತ್ತಿಕೊಂಡ. ಸ್ವಲ್ಪ ದೂರ ಹೋದಮೇಲೆ ರವಿ ಹೇಳಿದರು: `ಸೋಮನಾಥ ಎಂಥಾ ಕಥೆ ಕಳುಹಿಸಿದ್ದ ಗೊತ್ತಾ? ನೆನ್ನೆ ರಾತ್ರಿ ಬೇಕಂತಲೇ ಹೇಳಲಿಲ್ಲ. ಅದು ನಮ್ಮ ಈ ಸಲ ಎಡಿಷನ್ ಲೀಡ್. ರಾಜ್ ಕುಮಾರ್ ಕಿಡ್ನ್ಯಾಪ್ ಗಿಂತ ಹದಿನೈದು ದಿನ ಮುಂಚೆ ಇಬ್ಬರು ಕೊಯಮತ್ತೂರು ಜೈಲಿನಿಂದ ಬಿಡುಗಡೆ ಆಗ್ತಾರೆ. ನೇರವಾಗಿ ಅವರು ಗಾಜನೂರಿನಲ್ಲಿ ಅಣ್ಣಾವ್ರ ಮನೆಯಲ್ಲಿ ಕೆಲಸಕ್ಕೆ ಸೇರಿಕೊಳ್ತಾರೆ. ಅವರೇ ವೀರಪ್ಪನ್ ಗೆ ರಾಜ್ ಕುಮಾರ್ ಬಗ್ಗೆ ಇನ್ಫರ್ ಮೇಷನ್ ಕೊಟ್ಟಿದ್ದು,’ ಅಂದರು.
`ರಾತ್ರಿನೇ ಹೇಳಿದ್ದರೆ ನಾನೂ ಬರೀತ್ತಿದ್ದೆ’ ಅಂತ ಹೇಳಿ ಹಿಂದೆ ತಿರುಗಿ ಸೋಮನಾಥ್ ಗೆ ತಮಾಷೆ ಮಾಡಿದೆ. `ಅದಕ್ಕೇ ಹೇಳಲಿಲ್ಲ,’ ಅಂದ್ರು ರವಿ. ಅಲ್ಲಿಂದ ನೇರವಾಗಿ ಗಾಜನೂರಿಗೆ ಹೋದೆವು. ಅಲ್ಲಿ ರಾಜ್ ಕುಮಾರ್ ಅವರ ಮನೆಗೆ ಹೋದಾಗ, ದೊಡ್ಡ ಗುಂಪು, ಪೋಲಿಸರು ಎಲ್ಲಾ ಇದ್ದರು.
`ಒಳಗೆ ಹೋಗೊಣ,’ ಅಂದೆ.
`ಅಲ್ಲೇನಿರಲ್ಲ ಬಿಡಿ. ಎಲ್ಲಾರಿಗೆ ಹೇಳಿದ ಕಥೆನೇ ನಮಗೂ ಹೇಳ್ತಾರೆ. ಅದನ್ನೇನೂ ನಾವು ಬರೆಯೋಕೆ ಆಗೋಲ್ಲ,’ ಅಂದ್ರು ರವಿ. ಸರಿ, ಜೀಪು ತಾಳವಾಡಿ ಕಡೆಯಿಂದ ದಿಂಬಂ ದಾರಿ ಹಿಡಿಯಿತು. `ಅಲ್ಲಾ ಸರ್, ವಿರಪ್ಪನ್ ಇಂಟರ್ ವ್ಯೂ ಮಾಡಬೇಕಾದರೆ ಏನು ಮಾಡಬೇಕು?’ ಅಂತ ಕೇಳಿದೆ.
`ಒಂದಾರು ತಿಂಗಳು ಎಲ್ಲಾ ಕೆಲಸ ಬಿಟ್ಟು ಇಲ್ಲಿ ತಿರುಗಬೇಕು. ಆಗ ಎಲ್ಲಾದರೂ ಸಿಕ್ಕೇ ಸಿಗುತ್ತಾನೆ,’ ಅಂದ್ರು ರವಿ.
`ಅಂದ್ರೆ, ವೇಷ ಬದಲಿಸಿಕೊಂಡಾ?’ ಅಂತ ಕೇಳಿದೆ.
`ಹಾಗ್ಮಾಡಿದ್ರೆ, ಪೋಲಿಸ್ ಅಂತ ಅವನಿಗೆ ಸಂಶಯ ಬರುತ್ತೆ. ಇಲ್ಲಿನವರಿಗೆ ನಾವ್ಯಾರು ಅಂತ ಗೊತ್ತಿದ್ರೆ ಒಳ್ಳೆದು,’ ಅಂದ ಸೋಮನಾಥ. ಅಷ್ಟರಲ್ಲಿ, ಒಂದು ತಿರುವಿನ ಹತ್ತಿರ ಬಂದಾಗ, ಯಾರೋ ಇಬ್ಬರು ಹುಡುಗರು ಬೈಕಿನ ಜೊತೆ ಕೂತಿದ್ದರು. ಹತ್ತಿರ ಹೋಗಿ ನಿಲ್ಲಿಸಿದವರೇ, ರವಿ `ಏನೋ ಪ್ರವೀಣ್? ಇಲ್ಲೇನು ಮಾಡ್ತಿದ್ದೀರ?’ ಅಂತ ಕೇಳಿದರು.
ನೋಡಿದರೆ, ಬೈಕ್ ನಿಂದ ಬಿದ್ದು ಪ್ಯಾಂಟ್ ಹರಿದಿತ್ತು. ಮೊಣಕೈನಿಂದ ರಕ್ತ ಹರಿಯುತ್ತಿತ್ತು. ಅವನ ಹೆಸರು ರಾ ಪ್ರವೀಣ್ ಅಂತ ಗೊತ್ತಾಯ್ತು. ರಾಜ್ ಕುಮಾರ್ ಅವರ ಉಗ್ರಾಭಿಮಾನಿ. ಮದುವೆಯಾಗಿ ಹದಿನೈದು ದಿನಗಳಾಗಿತ್ತಂತೆ. ಅಣ್ಣಾವ್ರ ಅಪಹರಣ ಗೊತ್ತಾಗಿ, ಯಾರಿಗು ಹೇಳದೆ, ಒಂದು ಚೀಟಿ ಬರೆದಿಟ್ಟು ಕಾಡಿಗೆ ಬಂದಿದ್ದಾನೆ.
`ಅಲ್ಲಪ್ಪ… ಯಾವ ಕಡೆ ಸರಿಯಾಗಿ ಬೈಕ್ ಓಡಿಸಬಹುದು ಅಂತ ನೋಡ್ಕೊಂಡು ಬರಬೇಕು. ಕಾಡುದಾರಿಗೆ ಯಾಕೆ ಇಳಿಸ್ದೆ?’ ಅಂತ ನಾನು ಕೇಳ್ದೆ. ಅವನೇನೋ ಉತ್ತರ ಕೊಡಲು ಹೋದಾಗ ರವಿಯೇ ಅವನಿಗೆ ಈ ಥರ ಹುಡುಕಿದರೆ ಅಣ್ಣಾವ್ರಾಗಲೀ, ವೀರಪ್ಪನ್ ಆಗಲೀ ಸಿಗೋದಿಲ್ಲ ಅಂಥ ಹೇಳಿ, ಅವನಿಗೆ ಬೆಂಗಳೂರಿಗೆ ವಾಪಾಸ್ ಹೋಗಲು ಹೇಳಿದರು.
ಅವರು ಮಾತಾಡುತ್ತಿದ್ದಾಗ ಜೀಪಿನ ಕೆಳಗಿಂದ ಏನೋ ಹರಿದಂತಾಗಿ ಬಗ್ಗಿ ನೋಡಿದೆ. `ಸರ್, ಕೂಲೆಂಟ್ ಕೈ ಕೊಟ್ಟಿದೆ. ಪೂರ್ತಿ ಲೀಕ್ ಆಗಿದ ಅಂತ ಕಾಣುತ್ತೆ,’ ಅಂತ ಹೇಳಿ ಬಾನೆಟ್ ತೆಗೆದೆ. ನನ್ನ ಊಹೆ ಸರಿಯಾಗಿತ್ತು. ಕೂಲೆಂಟ್ ಕ್ಯಾನ್ ಇರಬೇಕಾದ ಸ್ಥಳದಲ್ಲಿ ಇರಲಿಲ್ಲ. ಅದನ್ನು ವಾಪಾಸ್ ಇಡುವ ಹೊತ್ತಿಗೆ, ಕೂಲೆಂಟ್ ಹೆಚ್ಚು ಕಡಿಮೆ ಖಾಲಿಯಾಗಿತ್ತು.
`ಈಗೇನ್ಮಾಡೋದು?’ ಅಂತ ರವಿ ಕೇಳಿದರು. `ಏನಿಲ್ಲ, ನೀರು ಹಾಕಿ ಓಡಿಸ್ಬೇಕು. ಇಂಜಿನ್ ಹೀಟ್ ಆಗದ್ದಿದ್ರೆ ಪರವಾಗಿಲ್ಲ. ಹೀಟ್ ಆದರೆ ಕಷ್ಟ,’ ಅಂದೆ. ಸರಿ, ಆ ಕೂಲೆಂಟ್ ಕ್ಯಾನ್ ಗೇ ನೀರು ಹಾಕಿ, ಪ್ರವೀಣ್ ಗೆ ಬೈ ಹೇಳಿ, ಸ್ವಲ್ಪ ದೂರ ಹೊಗುವುದರಲ್ಲೇ ಇಂಜಿನ್ ಹೀಟ್ ಆಯ್ತು. ಮತ್ತೆ ಸ್ವಲ್ಪ ನೀರು ಹಾಕಿ, ನಾನೇ ಡ್ರೈವಿಂಗ್ ತಗೊಂಡೆ. ದಿಂಬಂ ತಲುಪುವುದರೊಳಗೆ ನಮಗೆ ಸಾಕುಬೇಕಾಗಿತ್ತು.
ಅಲ್ಲಿಂದ ಒಂದೇ ದಾರಿ ಇದ್ದಿದ್ದು. ಸರಿ, ನೇರವಾಗಿ ಸತ್ಯಮಂಗಲಕ್ಕೆ ಹೋದೆವು. ಅಲ್ಲಿ, ಒಂದು ಗ್ಯಾರೇಜಿನಲ್ಲಿ ಜೀಪನ್ನು ಬಿಟ್ಟು, ಪಕ್ಕದ ಹೋಟೆಲ್ ನಲ್ಲಿ ಊಟಕ್ಕೆ ಹೋದೆವು. ರವಿ ಒಂದೆರೆಡು ಪಗ್ ಹಾಕಿದರು. ನಾನು ಮತ್ತು ಸೋಮನಾಥ್, ಬರೀ ಊಟ ಮಾಡಿ ಹೊರಗೆ ಬಂದೆವು.
ಏನೇ ಮಾಡಿದರೂ ಕೂಲೆಂಟ್ ಕ್ಯಾನ್ ಸರಿಮಾಡಲು ಆ ಗ್ಯಾರೇಜಿನವನಿಗೆ ಆಗಲಿಲ್ಲ. ಮತ್ತೆ, ಸತ್ಯಮಂಗಲದಲ್ಲೇಲ್ಲೂ ಕೂಲೆಂಟ್ ಸಿಗಲಿಲ್ಲ. ಆದರೆ, ಅದರಿಂದ ನೀರು ಸೋರದಂತೆ ಮಾತ್ರ ಏನೋ ವ್ಯವಸ್ಥೆ ಮಾಡಿದ್ದ. ರವಿ ಡ್ರೈವ್ ಮಾಡ್ತೀನಿ ಅಂದಾಗ: `ಮೊದಲೇ ಜೀಪ್ ಸರಿ ಇಲ್ಲ. ಜೊತೇಲಿ, ನೀವು ಗುಂಡು ಬೇರೆ ಹಾಕಿದ್ದೀರ. ನಾನೇ ಮಾಡ್ತಿನಿ,’ ಅಂದೆ. ನಾವು ಮತ್ತೆ ದಿಂಬಂ ತಲುಪುವ ಹೊತ್ತಿಗೆ ಕತ್ತಲಾಗತೊಡಗಿತು.
ನಾನೂ ಸೋಮನಾಥನೂ, ಉತ್ಸಾಹದಿಂದ ಅದೂ ಇದೂ ಮಾತಾಡುತ್ತಿದ್ದೆವು. ಮಧ್ಯದಲ್ಲಿ, ರವಿ ಮೌನವಾಗಿರುವುದನ್ನು ನಾನು ಗಮನಿಸಿಯೇ ಇರಲಿಲ್ಲ. ದಿಂಬಂ ದಾಟಿ ಸ್ವಲ್ಪ ದೂರ ಹೋದಮೇಲೆ, ಅದೂ ಇದೂ ಮಾತಾಡುತ್ತಾ, `ಈಗ ವೀರಪ್ಪನ್ ನಮ್ಮನ್ನ ಅಡ್ಡ ಹಾಕಿದ್ರೆ ಮಜಾ ಇರುತ್ತೆ, ಅಲ್ವಾ ಸರ್?’ ಅಂದೆ.
`ಏನು ಮಣ್ಣು ಮಜಾ? ನೀವು ಪ್ರಪಂಚ ಅಂದ್ರೆ ನೀವೊಬ್ಬರೇ ಅನ್ಕೊಂಡಿದ್ದೀರ. ಬೇರೆಯವರಿಗೆ ತಲೆ ಇಲ್ಲಾ ಅನ್ಕೊಂಡಿದ್ದೀರ,’ ಅಂತ ಕೂಗಾಡೋಕೆ ಶುರು ಮಾಡಿದ್ರು. ಏನಾಯ್ತು ಅಂತ ಅರ್ಥವಾಗದೆ ನಾನು: `ಯಾಕೆ ಸರ್? ಏನಾಯ್ತು? ಯಾಕೆ ಇದ್ದಕ್ಕಿದ್ದ ಹಾಗೆ ಕೂಗಾಡ್ತಾ ಇದ್ದೀರ?’ ಅಂತ ಕೇಳ್ದೆ.
`ಬೆಳಗ್ಗಿಂದ ನೋಡ್ತಿದ್ದೀನಿ. ಎಲ್ಲಾ ನೀವೇ ಮಾಡ್ತೀರ, ಮಾತಾಡ್ತೀರ. ನಮಗೇನು ಇಲ್ಲೆಲ್ಲಾ ಡ್ರೈವಿಂಗ್ ಮಾಡಬೇಕು ಅಂತ ಇಷ್ಟ ಇರೋಲ್ವ?’ ಅಂತ ಮತ್ತೆ ಕೂಗಾಡಿದರು. ಓಹೋ.. ಇದಾ ವಿಷ್ಯ ಅಂತ ನಗು ಬಂತು. ಆದರೆ, ರವಿಯ ಕೂಗಾಟ ನಾಲ್ಕೈದು ನಿಮಿಷ ಮುಂದುವರೆಯಿತು. ನನಗೂ ತಾಳ್ಮೆ ತಪ್ಪಲು ಶುರುವಾಯ್ತು. ಒಮ್ಮೆಗೆ ಬ್ರೇಕ್ ಹಾಕಿದವನೇ, `ನೋಡ್ರಿ, ಈ ಜೀಪ್ ಇಸ್ಕೊಂಡು ಬಂದವರು ನೀವು. ಗಾಡಿ ಪ್ರಾಬ್ಲಂ ಇತ್ತು ಅಂತ ನಾನು ಡ್ರೈವಿಂಗ್ ತಗೊಂಡೆ. ನೀವು ಡ್ರೈವ್ ಆದರೂ ಮಾಡ್ಕೊಂಡು ಹೋಗಿ, ಇಲ್ಲಾ ನಿಮ್ಮ ತಲೆ ಮೇಲಾದರೂ ಇಟ್ಕೊಳ್ಳಿ. ನಂಗೇನಾಗಬೇಕು,’ ಅಂದವನೇ, ನನ್ನ ಬ್ಯಾಗ್ ತೆಗೆದುಕೊಂಡು, ಜೀಪಿನಿಂದ ಇಳಿದು, ಕತ್ತಲಲ್ಲಿ ತಿರುಗಿ ನೆಡೆದುಕೊಂಡು ಹೋಗಲಾರಂಭಿಸಿದೆ.
ರವಿ ಏನೂ ಮಾತಾಡಲಿಲ್ಲ. ಸೋಮನಾಥ ಮಾತ್ರ ನನ್ನ ಹಿಂದೆ ಬರುತ್ತಾ: `ಸರ್, ಇಷ್ಟಕ್ಕೆಲ್ಲಾ ಯಾಕೆ ಸರ್ ಗಲಾಟೆ. ಬನ್ನಿ ಸರ್. ಈ ಕಾಡಲ್ಲಿ ಎಲ್ಲಿ ಹೋಗ್ತೀರ? ಕತ್ತಲೆ ಬೇರೆ ಆಗಿದೆ,’ ಅಂದ. `ನೀವಿದಕ್ಕೆಲ್ಲಾ ಬರ್ಬೇಡಿ. ನೋಡಿ ಜೀಪ್ ಹೋಗ್ತಾ ಇದೆ. ನೀವು ಹೋಗಿ ಹತ್ಕೊಳಿ. ಇಲ್ದೆ ಹೋದ್ರೆ, ನನ್ನ ಜೊತೆ ಕಾಡಲ್ಲಿರಬೇಕಾಗುತ್ತೆ,’ ಅಂದೆ. ಸೋಮನಾಥ ಓಡುತ್ತಾ ಹೋಗಿ, ಜೀಪ್ ಹತ್ತಿಕೊಂಡ.
ನಾನಿಳಿದ ಜಾಗ ಕಗ್ಗಾಡಾಗಿತ್ತು. ಜೀಪು ಹೋದಮೇಲಂತೂ ಪೂರ್ತಿ ಕತ್ತಲಾಗಿದ್ದರಿಂದ, ರಸ್ತೆ ಸಹ ಸರಿಯಾಗಿ ಕಾಣುತ್ತಿರಲಿಲ್ಲ. ಬರುವಾಗ, ಹೆಚ್ಚೂ ಕಡಿಮೆ ಒಂದು ಕಿಲೋಮೀಟರ್ ಹಿಂದೆ, ಚೆಕ್ ಪೋಸ್ಟ್ ಹತ್ತಿರ ಒಂದು ಟೀ ಅಂಗಡಿ ನೋಡಿದ್ದೆ.  ನಮ್ಮ ಕಾಫೀ ತೋಟಗಳಲ್ಲಿ ಮಾಡಿದಂತೆ, ಕತ್ತಲಲ್ಲೇ ಅಂದಾಜಿನ ಮೇಲೆ ಕಾಲು ಹಾಕಿದೆ. ಸ್ವಲ್ಪ ದೂರ ನೆಡೆದ ಮೇಲೆ ದೂರದಲ್ಲಿ ಮಿಣುಕು ದೀಪ ಕಾಣಿಸಿತು. ಸರಿ, ಅಂಗಡಿ ಬಂತು ಅಂತ ಆ ಕಡೆಗೇ ಕಾಲು ಹಾಕಿದೆ.
ಕತ್ತಲಲ್ಲಿ ಬೆನ್ನಿಗೆ ಬ್ಯಾಗ್ ತಗುಲಿಸಿಕೊಂಡು ಬಂದ ನನ್ನನ್ನು ನೋಡಿ ಅಂಗಡಿಯವನಿಗೆ ಆಶ್ಚರ್ಯವಾದರೂ ತೋರಿಸಿಕೊಳ್ಳಲಿಲ್ಲ. ಒಂದೆರೆಡು ಟೀ ಕುಡಿದು, ಸಿಗರೇಟು ಸೇದುತ್ತಾ ಕುಳಿತೆ. ಹತ್ತಿರದ ಚೆಕ್ ಪೋಸ್ಟ್ ನಲ್ಲಿ ಆಗೊಂದು, ಈಗೊಂದು ವಾಹನಗಳು ಬಂದು ನಿಲ್ಲುತ್ತಿದ್ದವು. ಒಂಬತ್ತು ಘಂಟೆಯ ಹೊತ್ತಿಗೆ ಅಂಗಡಿಯವನೇ ಧೈರ್ಯ ಮಾಡಿ ಕೇಳಿದ: `ಎಲ್ಲಿಗೆ ಹೋಗಬೇಕು ಸರ್?’
`ಚಾಮರಾಜನಗರಕ್ಕೆ. ಬಸ್ ಎಷ್ಟು ಹೊತ್ತಿಗೆ ಇದೆ?’
`ನಗರಕ್ಕೆ ಬಸ್ ಇಲ್ಲ ಸರ್. ಇನ್ನು ಬೆಳಗ್ಗೆನೆ. ಚೆಕ್ ಪೋಸ್ಟ್ ಹತ್ರ ಯಾವುದಾದರೂ ಲಾರಿ ಬರ್ತವೆ. ಅಲ್ಲಿ ನಿಮ್ಮವರೇ ಇರ್ತಾರಲ್ಲ ಕೇಳಿ. ಹತ್ತಿಸ್ತಾರೆ,’ ಅಂದ.
ಆಗ ಅರ್ಥವಾಗಿದ್ದು ನಂಗೆ, ಅಂಗಡಿಯವನು ನನ್ನ ಪೋಲಿಸ್ ಅನ್ಕೊಂಡಿದ್ದ ಅಂತ. ಸುಮ್ಮನೆ ನಕ್ಕು ಚೆಕ್ ಪೋಸ್ಟ್ ಹತ್ತಿರ ಹೋಗಿ, ಅಲ್ಲಿದ್ದ ಪೋಲಿಸ್ ಜೊತೆ ಮಾತಾಡ್ದೆ. `ಏನ್ ಸಾರ್ ನೀವು. ಈ ಕತ್ತಲಲ್ಲಿ ಕಾಡಲ್ಲಿ ಅಲೀತಿದ್ದೀರಲ್ಲ. ಇಲ್ಲೆಲ್ಲಾ ಆನೆ ಕಾಟ ಜಾಸ್ತಿ. ನಿಮ್ಮ ಬೆಂಗಳೂರು ರಿಪೋರ್ಟರ್ ಗಳಿಗೆ ಇವೇನೂ ಗೊತ್ತಾಗಲ್ಲ. ಎಲ್ಲಾ ಆನೆಗಳನ್ನೂ ಸರ್ಕಸ್ ಆನೆಗಳು ಅನ್ಕೊಂಡಿರ್ತೀರ. ಕಾಡು ಅಂದ್ರೆ ಗೊತ್ತಿರೋದಿಲ್ಲ ನಿಮಗೆ,’ ಅಂತ ಬೈಕೊಂಡೇ ಒಂದು ಲಾರಿ ಹತ್ತಿಸಿದ. ಚಾಮರಾಜನಗರ ತಲುಪುವ ಹೊತ್ತಿಗೆ ಘಂಟೆ ಹನ್ನೊಂದಾಗಿತ್ತು.
ಐ.ಬಿ. ಗೆ ನೇರವಾಗಿ ಹೋದವನೇ, ಪ್ರಕಾಶನ ರೂಮಿನ ಬಾಗಿಲು ತಟ್ಟಿದೆ. ನನಗಾಗೇ ಕಾಯ್ತಿದ್ದ ಅಂತ ಕಾಣುತ್ತೆ. ಬಾಗಿಲು ತೆಗೆದವನೇ `ಊಟ ಆಯ್ತಾ?’ ಅಂತ ಕೇಳಿದ.
ಇಲ್ಲ ಅನ್ನುವ ಹಾಗೆ ತಲೆ ಆಡಿಸಿದೆ. `ಬಾ, ಬಸ್ ಸ್ಯ್ಟಾಂಡ್ ಹತ್ತಿರ ಸಿಗಬಹುದು,’ ಅಂದ. `ಬೇಡ… ಹಸಿವಿಲ್ಲ,’ ಅಂತ ಹೇಳಿ ಮುಖ ತೊಳೆಯಲು ಹೋದೆ. ಬರುವ ಹೊತ್ತಿಗೆ ಟೇಬಲ್ ಮೇಲೆ ಮೂರು ಬಾಳೆಹಣ್ಣು ಇಟ್ಟಿದ್ದ. ಸರಿ, ತಿಂದು ಏನೂ ಮಾತಾಡದೆ ಮಲಗಿದೆವು.
ಬೆಳಗ್ಗೆ ಎದ್ದು ಕಾಫಿಕುಡಿಯತ್ತಾ ಪ್ರಕಾಶನಿಗೆ ಹೇಳಿದೆ: `ರಾತ್ರಿ ಜಗಳ ಆಯ್ತು.’
`ರವಿ ಹೇಳಿದ್ರು. ರಾತ್ರಿನೇ ಬೆಂಗಳೂರಿಗೆ ಹೋದರು,’ ಅಂದ.
`ಸರಿ, ನಿನ್ನ ಪ್ರೋಗ್ರಾಂ ಏನು?’ ಅಂತ ಕೇಳಿದೆ.
`ನಾಳೆ ಅಥವಾ ನಾಡಿದ್ದು ವೀರಪ್ಪನ್ ಹೆಂಡತಿ ಮುತ್ತುಲಕ್ಷ್ಮಿ ಇಂಟರ್ ವ್ಯೂ ಮಾಡ್ತಿದ್ದೀನಿ. ಅದಕ್ಕೆ ಮೆಟ್ಟೂರು ಅಥವಾ ಕೊಯಮತ್ತೂರಿಗೆ ಹೋಗಬೇಕಾಗುತ್ತೆ. ಇವತ್ತೇನಾದ್ರು ಮಾಡಬೇಕು…ಏನು ಅಂತ ಗೊತ್ತಿಲ್ಲ,’ ಅಂದ.
`ಇವತ್ತು ನಾನಿರ್ತೀನಿ. ತಿಂಡಿ ತಿಂದು ನೋಡೋಣ, ಏನಾಗುತ್ತೆ ಅಂತ,’ ಅಂದೆ.
ತಿಂಡಿಗೆ ಹೊರಟಾಗ ನಾನು ಡೆಕ್ಕನ್ ಹೆರಾಲ್ಡ್ ಪೇಪರ್ ತಗೊಂಡೆ. ಮುಖಪುಟದಲ್ಲೇ ದೊಡ್ಡದಾಗಿ ಬಂದಿತ್ತು: `ತಾಳವಾಡಿಯ ಹತ್ತಿರದ ಟಿಪ್ಪೂ ಮಲ್ಲಿಗೆ ಮಂಟಪದ ಹತ್ತಿರ ವೀರಪ್ಪನ್ ಡಾ. ರಾಜ್ ಜೊತೆ ಇದ್ದಾನೆ. ಅಲ್ಲಿ ಎರಡು ಕಲ್ಯಾಣಿಗಳಿವೆ. ಒಂದು ಕಲ್ಯಾಣಿಯಲ್ಲಿ ರಾಜ್ ಸ್ನಾನಮಾಡುವುದನ್ನು ದನ ಕಾಯಲು ಹೋದ ಹುಡುಗರು ನೊಡಿದ್ದಾರೆ,’ ಅಂತ.
ಅದನ್ನು ಪ್ರಕಾಶನಿಗೆ ತೋರಿಸಿ, `ಏನು ಮಡೋದು?’ ಅಂತ ಕೇಳಿದೆ.
`ಅಲ್ಲಿಗೆ ಹ್ಯಾಗೋ ಹೋಗೋದು? ಮತ್ತೆ, ವೀರಪ್ಪನ್ ನೆನ್ನೆ ಅಲ್ಲಿದ್ದರೆ, ಇವತ್ತು ಇರ್ತಾನಾ?’ ಅಂತ ಕೇಳಿದ.
`ವೀರಪ್ಪನ್ ಸಿಗೋದು ಅಷ್ಟರಲ್ಲೇ ಇದೆ. ಅವನಿದ್ದರೆ, ಅಲ್ಲಿ ಕ್ಯಾಂಪ್ ಮಾಡಿದ ಬೆಂಕಿ ಗುರುತಿರುತ್ತದೆ. ಇನ್ನೇನಾದ್ರೂ ಸಿಗುತ್ತಾ ನೋಡಬಹುದು. ತಾಳವಾಡಿಗೆ ಹೋಗಿ, ಯಾರನ್ನಾದರೂ ಕೇಳಿದರೆ ದಾರಿ ಹೇಳ್ತಾರೆ,’ ಎಂದೆ.
`ಸರಿ, ನಡಿ ಹೋಗೋಣ,’ ಅಂದ ಪ್ರಕಾಶ್.
ಪ್ರಕಾಶ್ ಅಫೀಸಿನಿಂದ ಒಂದು ಟಾಟಾ ಸುಮೋ ಕಳಿಸಿದ್ದರು. ಡ್ರೈವರ್, ಕ್ಯಾಮೆರಾಮನ್ ಜೊತೆ ಹೊರಟೆವು. ಕ್ಯಾಮೆರಾಮನ್ ಒಬ್ಬ ತಮಿಳಿನ ಹುಡುಗ. ಬಾಲು ಅಂತ ಏನೊ ಇರಬೇಕು. ತಾಳವಾಡಿಗೆ ಬಂದವರೇ, ಅಲ್ಲಿನ ಅಂಗಡಿಯಲ್ಲಿ ಟಿಪ್ಪುವಿನ ಮಲ್ಲಿಗೆ ಮಂಟಪದ ಬಗ್ಗೆ ಕೇಳಿದೆವು. ಯಾರಿಗೂ ಮಲ್ಲಿಗೆ ಮಂಟಪದ ಬಗ್ಗೆ ಗೊತ್ತಿರಲಿಲ್ಲ. ಅವರಿಗೆ ಗೊತ್ತಿದ್ದು ಟಿಪ್ಪು ಶಿಕಾರಿಗೆ ಬಂದಾಗ ಇರುತ್ತಿದ್ದ ಜಾಗ. ಅಲ್ಲಿ ಎರಡು ಕಲ್ಯಾಣಿಗಳು ಇವೆ ಅಂತ ಕೂಡ ಹೇಳಿದರು. ಅವರಲ್ಲೊಬ್ಬನನ್ನು ಪುಸಲಾಯಿಸಿ ಸುಮೋಗೆ ಹತ್ತಿಸಿಕೊಂಡೆವು. ಒಂದೆರಡು ಕಿಲೋಮೀಟರ್ ಹೋಗುವುದರೊಳಗೆ, ಡ್ರೈವರ್ ಹೇಳಿದ: `ಈ ರಸ್ತೆಯಲ್ಲಿ ಹೋಗೋಕೆ ಸಾಧ್ಯನೇ ಇಲ್ಲಾ’ ಅಂತ.
 ಅಲ್ಲಿಂದ ಎಲ್ಲಾರೂ ನೆಡೆಯಲು ಶುರು ಮಾಡಿದ್ವಿ. ಬಾಲು ದೊಡ್ಡದೊಂದು ಕ್ಯಾಮೆರಾ ಹೆಗಲ ಮೇಲೆ ಹೊತ್ತುಕೊಂಡು ನೆಡೆಯಲು ಶುರು ಮಾಡಿದ. ಒಂದು ಕಿಲೋಮೀಟರ್ ಹೋದ ತಕ್ಷಣ ನಮ್ಮ ಜೊತೆ ತಾಳವಾಡಿಯಿಂದ ಬಂದವನು ಹೇಳಿದ: `ಸರ್, ಇಲ್ಲೇ ಬಲಗಡೆ ಇರೋದು ಮೊದಲನೇ ಕಲ್ಯಾಣಿ.’
ನಾವು ನೆಡೆಯುತ್ತಿದ್ದ ದಾರಿ ಕುರುಚಲು ಕಾಡಿನ ಮಧ್ಯ ಇತ್ತು. ಕಲ್ಯಾಣಿಯ ಸುತ್ತ ಮಾತ್ರ ದೊಡ್ಡ ಮರಗಳಿದ್ದು, ರಸ್ತೆಗೆ ಸರಿಯಾಗಿ ಕಾಣುತ್ತಿರಲಿಲ್ಲ. ಅಲ್ಲಿಗೆ ಹೋಗಿ ನೋಡಿದ ತಕ್ಷಣ ನಾನು ಮತ್ತು ಪ್ರಕಾಶ್ ಮುಖ ನೋಡಿಕೊಂಡೆವು. ತುಂಬಾ ಹಳೆಯ ಸುಂದರವಾದ ಕಲ್ಯಾಣಿ. ನೀರಿನ ಮೇಲೆ ಒಂದಡಿ ಪಾಚಿ ಕಟ್ಟಿ, ವಾಸನೆ ಬರುತ್ತಿತ್ತು. ಅಲ್ಲಿ ರಾಜ್ ಅವರು ಸ್ನಾನ ಮಾಡುವುದಿರಲಿ, ಕಾಲು ತೊಳೆಯುವುದೂ ಸಾಧ್ಯವಿರಲಿಲ್ಲ. `ಟಿಪ್ಪು ಮಂಟಪದ ಹತ್ತಿರ ಇನ್ನೊಂದು ಸಣ್ಣದಿದೆ  ಸರ್,’ ಅಂದ, ನಮ್ಮ ಜೊತೆ ಬಂದವನು.
ಮುಂದೆ ನೆಡೆಯಲು ಶುರು ಮಾಡಿದಾಗ ಗೊತ್ತಾಯ್ತು, ಇವರುಗಳ ಒಂದು ಕಿಲೋಮೀಟರ್ ನಲ್ಲಿ, ಸುಮಾರು ಕಿಲೋಮೀಟರ್ ಗಳು ಇರ್ತಾವೆ ಅಂತ. ಕುರುಚಲು ಕಾಡಿನಲ್ಲಿ ನೆರಳಿಗೆ ಮರಗಳೂ ಇಲ್ಲ. ಸೂರ್ಯ ನೆತ್ತಿಯ ಮೇಲೆ ಹೊಡೆಯುತ್ತಿದ್ದ. ನಾಲ್ಕು ಕಿಲೋಮೀಟರ್ ನೆಡೆದಮೇಲೆ ಹೇಳಿದ, ಇದೇ ಜಾಗ ಸರ್.
ಅದು ಬೆಟ್ಟದ ಇಳಿಜಾರಿನಲ್ಲಿ, ಕಣಿವೆಗೆ ಮುಖ ಮಾಡಿಕೊಂಡಿದ್ದ ಜಾಗ. ಎದುರುಗಡೆ, ನೀಲಗಿರಿ ಪರ್ವತ. ಬಲಕ್ಕೂ, ಎಡಕ್ಕೂ ನೋಡಿದರೆ, ಕಣ್ಣಿಗೆ ಕಾಣುವಷ್ಟು ದೂರ ಕಣಿವೆ. ಮಧ್ಯದಲ್ಲಿ, ಎರಡು ಜಾಗಗಳನ್ನು ಮಟ್ಟಮಾಡಿದಂತೆ ಇತ್ತು. ಮಲ್ಲಿಗೆ ಮಂಟಪ ಅಂತ ಕರೆಯುವ ಯಾವುದೇ ಕುರುಹುಗಳು ಇರಲಿಲ್ಲ. `ಇಲ್ಲಿ ಟಿಪ್ಪು ಮತ್ತೆ ಅವರ ಸೈನಿಕರು ಕ್ಯಾಂಪ್ ಮಾಡುತ್ತಿದ್ದರಂತೆ. ಅಲ್ಲಿ, ಅವರ ಕುದುರೆಗಳನ್ನು ಕಟ್ಟುತ್ತಿದ್ದರಂತೆ,’ ಅಂತ ಹೇಳಿದ.
 `ಇನ್ನೊಂದು ಕಲ್ಯಾಣಿ ಎಲ್ಲಿ?’ ಅಂದೆ.
`ಅಲ್ಲಿ, ಆ ಬಂಡೆಯ ಹಿಂದೆ ಇದೆ,’ ಅಂತ ಸ್ವಲ್ಪ ಎತ್ತರದ ಜಾಗ ತೋರಿಸಿದ.
ಅಲ್ಲಿ ಹೋಗಿ ನೋಡಿದರೆ, ಕಲ್ಯಾಣಿ ಏನೂ ಇರಲಿಲ್ಲ. ಬಂಡೆಯ ಸಂದಿಯಲ್ಲಿ ಸಣ್ಣ ನೀರಿನ ಹೊಂಡ ಇತ್ತು. ಈ ನೀರನ್ನೂ ಯಾವ ಮನುಷ್ಯರೂ, ಯಾವುದೇ ಕಾರಣಕ್ಕೆ ಉಪಯೋಗಿಸಲು ಆಗುತ್ತಿರಲಿಲ್ಲ. ಆ ಕಣಿವೆಯನ್ನು ನೋಡಿದಾಗ, ಇಲ್ಲಿ ವೀರಪ್ಪನ್ ಹಿಡಿದಂತೆಯೇ, ಅಂದುಕೊಂಡೆ.
`ಯಾರ್ ಬರ್ದಿದ್ದು ಸ್ಟೋರಿ?’ ಅಂತ ಪ್ರಕಾಶ್ ಕೇಳಿದ.
`ಖಾನ್ ಕಣೋ. ಸರಿಯಾದ ಗಾಳಿಪಟ ಹಾರ್ಸಿದ್ದಾನೆ ಬಿಡು,’ ಅಂತ ನಕ್ಕೆ. ಬಂದ ತಪ್ಪಿಗೆ, ಪ್ರಕಾಶ್ ಆ ಸ್ಥಳದ್ದೇ ಒಂದು ಸಣ್ಣ ಡಾಕ್ಯುಮೆಂಟೇಶನ್ ಮಾಡಿದ. ವಾಪಾಸು ಬಿಸಿಲಿನಲ್ಲಿ ಐದು ಕಿಲೋಮೀಟರ್ ನೆಡೆದು ಬರುವ ಹೊತ್ತಿಗೆ, ಎಲ್ಲಾರೂ ಸುಟ್ಟ ಬದನೇಕಾಯಿಯಂತೆ ಆಗಿದ್ದೆವು. ದಾರಿಯಲ್ಲಿ ಬಾಲನಿಗೆ ಕ್ಯಾಮೆರಾ ಎತ್ತಿಕೋಬೇಕಾ ಅಂತ ಕೇಳಿದರೂ, ಆ ಹುಡುಗ `ಇಲ್ಲಾ ಸರ್, ನನಗೆ ಅಭ್ಯಾಸ ಇದೆ,’ ಅಂತ ನಯವಾಗಿ ನಿರಾಕರಿಸಿದ.
ಅಲ್ಲಿಂದ ಹೊರಟು, ಗಾಜನೂರು ಮಾರ್ಗವಾಗಿ ಹೋಗೋಣ ಅಂತ ಹೊರಟೆವು. ದಾರಿಯಲ್ಲಿ ಎರಡು-ಮೂರು `ಪ್ರೆಸ್’ ಬೋರ್ಡ್ ಹಾಕಿಕೊಂಡ ಕಾರುಗಳು ನಿಂತಿದ್ದೆವು. ಇಳಿದು ನೋಡಿದರೆ, ಎಲ್ಲಾ ಮೈಸೂರು ರಿಪೋರ್ಟರ್ ಗಳು. ನಮ್ಮ ಯೋಗಿ ಕೂಡ ಅಲ್ಲಿದ್ದ. ನನ್ನ ನೋಡಿದ ತಕ್ಷಣ, `ಏನಪ್ಪಾ, ಬಂದ್ಬಿಟ್ಟೀದ್ದೀಯ?’ ಅಂತ ನಕ್ಕ.
`ಸ್ಟೋರಿ ಬರಿಯೋಕಲ್ಲಪ್ಪ. ರಜ ಹಾಕಿ ಬಂದಿದ್ದೀನಿ. ಅದೇನಿದ್ದರೂ, ನಿಂದೇನೆ,’ ಅಂತ ನಕ್ಕೆ.
`ನಿನೇ ಬರ್ದಿದ್ರೆ ಸರಿಯಿತ್ತು ಕಣೋ. ಇಬ್ಬರು ಫಾರಿನರ್ ಗಳನ್ನ ಕರ್ಕೊಂಡು ಬಂದಿದ್ದೀನಿ. ಒಳ್ಳೆ ಹವಾನಾ ಸಿಗಾರ್ ತಂದಿದ್ದಾರೆ. ಬೆಳಗ್ಗಿಂದ ಮಜವಾಗಿದ್ದೀನಿ,’ ಅಂತ ನಕ್ಕ.
`ಸರಿ ಬಿಡು. ನಾನೂ ಬೆಂಗಳೂರಿಗೆ ನಾಳೆ ಹೊರಟೆ,’ ಅಂತ ನಕ್ಕು ಹೊರಟೆ.
ಚಾಮರಾಜನಗರಕ್ಕೆ ಬರುವ ಹೊತ್ತಿಗೆ ಕಣ್ಣು ಬಿಡಲು ಆಗುತ್ತಿರಲಿಲ್ಲ. ಬಲವಂತಕ್ಕೊಂದು ಬೀರ್ ಕುಡಿದು ಮಲಗಿದವನಿಗೆ ಬೆಳಗ್ಗೆ ಎಂಟು ಘಂಟೆಗೆ ಎಚ್ಚರವಾಯ್ತು. ರೆಡಿಯಾಗಿ ತಿಂಡಿ ತಿನ್ನುವ ಹೊತ್ತಿಗೆ, ಪ್ರಕಾಶನಿಗೆ ಮುತ್ತುಲಕ್ಷ್ಮಿಯ ಇಂಟರ್ ವ್ಯೂ ಇನ್ನೆರೆಡು ದಿನ ಬಿಟ್ಟು ಅಂತ ಗೊತ್ತಾಯ್ತು.
`ಬರ್ತೀಯ ತಮಿಳುನಾಡು ಕಡೆಗೆ?’ ಅಂತ ಕೇಳ್ದ.
`ಇಲ್ಲ ಬಿಡು. ಬಸ್ ಸ್ಟ್ಯಾಂಡ್ ಗೆ ಡ್ರಾಪ್ ಕೊಡು. ಯಾವುದಾದರೂ ಬಸ್ ಹಿಡ್ಕೊಂಡು ಬೆಂಗಳೂರಿಗೆ ಹೋಗ್ತೀನಿ,’ ಅಂದೆ.


ಮಾಕೋನಹಳ್ಳಿ ವಿನಯ್ ಮಾಧವ

ಶನಿವಾರ, ಜನವರಿ 7, 2012

ಸುಗ್ಗಿ


ದೇವರುಂದದ ಅಂದರ್-ಬಾಹರ್ ಮತ್ತು ಅವತಿಯ ಗುಂಡು-ತುಂಡು

ಶಾಂತೀನಗರದ ಕಡೆಯಿಂದ ಡಬ್ಬಲ್ ರೋಡ್ ಗೆ ಬರುವಾಗಲೆಲ್ಲ `ಸನ್ನಿ ರೂಮ್’ ಕಡೆ ತಿರುಗಿ ನೋಡದೇ ಇರುವುದಿಲ್ಲ. ಸನ್ನಿ ರೂಮಿನ ಬಗ್ಗೆ ಇರುವ ಕಥೆಗಳನ್ನೆಲ್ಲಾ ಸೇರಿಸಿದರೆ, ಒಂದು ಸಣ್ಣ ಪುಸ್ತಕವಂತೂ ಆಗುತ್ತದೆ. ಅಲ್ಲಿಗೆ ಹೋದಾಗ ದಿನಕ್ಕೊಂದು ಕುತೂಹಲಕಾರಿ ಘಟನೆಯ ಬಗ್ಗೆ ಚರ್ಚೆಯಾಗುತ್ತಿತ್ತು. ಅಲ್ಲಿ ಬರುತ್ತಿದ್ದ ತರಹೇವಾರಿ ಜನಗಳೂ ಒಂದೊಂದು ಪಾತ್ರಧಾರಿಗಳಾಗಿ ಕಾಣಿಸುತ್ತಿದ್ದರು.
ಸನ್ನಿ ನಮ್ಮ ಜೊತೆ ಉಡುಪಿಯಲ್ಲಿ ಓದುತ್ತಿದ್ದ ಬೆನ್ನಿ ಪೌಲ್ ನ ಅಣ್ಣ. ಬೆಂಗಳೂರಿಗೆ ಬಂದ ಹೊಸದರಲ್ಲಿ, ಇಲ್ಲಿನ ನಿಗೂಢ ಪ್ರಪಂಚವನ್ನು ಪರಿಚಯಿಸುವಲ್ಲಿ ಮತ್ತು ನಮ್ಮನ್ನು ಬೆಂಗಳೂರಿನ ಬದುಕಿಗೆ ಹೊಂದಿಸುವಲ್ಲಿ, ಈ ರೂಮಿನ ಪಾತ್ರ ಬಹಳ ದೊಡ್ಡದು.
ಸನ್ನಿಯನ್ನು ನೋಡದಿದ್ದವರು ಸಹ ಸನ್ನಿ ರೂಮಿನ ಬಗ್ಗೆ ಮಾತಾಡುತ್ತಿದ್ದರು. ಯಾರಿಗೋ ಸನ್ನಿಯನ್ನು ಪರಿಚಯಿಸಿದಾಗ ಅವರು: `ನಿಮ್ಮನ್ನು ಸನ್ನಿ ರೂಮಿನಲ್ಲಿ ನೋಡಿದ್ದೇನೆ’ ಅಂದಿದ್ದರು. ಅಲ್ಲಿನ ಪಾತ್ರದಾರಿಗಳಲ್ಲಿ ಕಡಿಮೆ ಮಾತಾಡುತ್ತಿದ್ದದ್ದೇ ಸನ್ನಿಯಾದ್ದರಿಂದ, ಅವರ ರೂಮಿಗೇ ತಾವು ಬಂದಿದ್ದೇವೆ  ಅಂತ ತುಂಬಾ ಜನರಿಗೆ ಗೊತ್ತಾಗ್ತಿರಲಿಲ್ಲ.
ಅಲ್ಲಿ ಪರಿಚಯವಾದ ಮಾಧವ ಮೂರ್ತಿಯನ್ನು ನಾವೆಲ್ಲಾ ಬಾಯಿ ಬಿಟ್ಟುಕೊಂಡು ನೋಡುತ್ತಿದ್ದೆವು. 13 ಇಸ್ಪೀಟ್ ಎಲೆಗಳನ್ನು ತನಗೆ ಮಾತ್ರ ಕಾಣಿಸುವಂತೆ ಜೋಡಿಸಿಕೊಂಡು, ಷೇರು ಮಾರ್ಕೆಟ್ ನ ಒಳಗುಟ್ಟುಗಳನ್ನು ನಿರರ್ಗಳವಾಗಿ ಮಾತಾಡುತ್ತಾ, ಪಕ್ಕದವರಿಗೆ ಯಾವ ಎಲೆ ಬೇಕಾಗಬಹುದು ಅಂತ  ಊಹಿಸಿಕೊಂಡೇ ಕಾರ್ಡ್ ಎಸೆಯುತ್ತಿದ್ದರು. ಕುದುರೆ ರೇಸ್ ಯಾವತ್ತೂ ತಪ್ಪಿಸುತ್ತಿರಲಿಲ್ಲ. ಅವರ ಮಾತು ಎಷ್ಟು ಚೆನ್ನಾಗಿರುತ್ತಿತ್ತು ಎಂದರೆ, ಅವರು ಪ್ರತೀಸಲ ಈ ಜೂಜಿನಲ್ಲಿ ದುಡ್ಡು ಕಳ್ಕೋತ್ತಾರೆ ಅನ್ನೋದನ್ನೇ ಮರೆತು ಬಿಡುತ್ತಿದ್ದೆವು.
ಇಸ್ಪೀಟಿನಲ್ಲಿ ಜಾಸ್ತಿ ಸೋಲದ ನನ್ನನ್ನು ಒಂದ್ಸಲ ಕುದುರೆ ರೇಸ್ ಗೂ ಕರ್ಕೊಂಡು ಹೋಗಿದ್ದರು. ತಲೆ ಬುಡ ಗೊತ್ತಿರದ ನನ್ನ ಕೈಯಲ್ಲಿ ಒಂದಿಪ್ಪತ್ತು ರೂಪಾಯಿ ಕಟ್ಟಿಸಿದರು. ಹೊರಗೆ ಬರುವಾಗ, ನನ್ನ ಮತ್ತು ಅವರ ಜೇಬಿನಲ್ಲಿ ತಲಾ ಆರುನೂರು ರೂಪಾಯಿ ಕೂತಿದ್ದವು. ತೊಂಬತ್ತನೇ ಇಸವಿಯಲ್ಲಿ ಅದು ದೊಡ್ಡ ದುಡ್ಡು. `ರೀ, ನಿಮ್ಮ ಗೆರೆ ತುಂಬಾ ಚೆನ್ನಾಗಿದೆ ಕಣ್ರಿ. ನಾಳೆನೂ ಬರೋಣ,’ ಅಂದರು. ಅದೇನಾಯ್ತೋ ಗೊತ್ತಿಲ್ಲ, ನಾನು ಮಾರನೇ ದಿನ ಹೋಗಲಿಲ್ಲ. ಮಾಧವ ಮೂರ್ತಿ ಮಾತ್ರ ತುಂಬಾನೇ ಬೇಜಾರು ಮಾಡಿಕೊಂಡರು.
`ಇಷ್ಟೊಳ್ಳೆ ಗೆರೆ ಇದ್ದೂ ಎನಕ್ಯಾಶ್ ಮಾಡಿಕೊಳ್ಳದೇ ಇರೋರು ನೀವೊಬ್ಬರೇ ಕಣ್ರಿ’ ಅಂತಿದ್ರು.
ಒಂದಿನ ಸನ್ನಿ ರೂಮಿಗೆ ನಾನು ತಲುಪಿದಾಗ, ಸನ್ನಿ ಮತ್ತು ಮಾಧವ ಮೂರ್ತಿ ಇಬ್ಬರೇ ಗಂಭೀರವಾಗಿ ಮಾತಾಡ್ತಾ ಇದ್ದರು. `ಅವರು ಹೀಗ್ ಮಾಡ್ತಾರೆ ಅಂತ ಅನ್ಕೊಂಡಿರ್ಲಿಲ್ಲ,’ ಅಂತ ಮಾಧವ ಮೂರ್ತಿ ಹೇಳಿದಾಗ, ಸನ್ನಿ: `ಅವ್ನು ಸ್ವಲ್ಪ ಹಾಗೇನೆ’ ಅಂತ ಹೇಳ್ತಿದ್ದರು.
`ಯಾರ್ರೀ ಅದು?’ ಅಂತ ಕೇಳಿದೆ.
`ಎಂ ಬಿ ಕಣ್ರಿ. ಮಾಧವ ಮೂರ್ತಿ ಏನೋ ಟಿಂಬರ್ ವ್ಯಾಪಾರ ಮಾಡೋಣ ಅಂತ ಅವನ ಕೈಲಿ 30,000 ಕೊಟ್ಟರೆ, ಇಸ್ಪಿಟ್ಟಿನಲ್ಲಿ ಕಳೆದಿದ್ದಾನೆ,’ ಅಂದ್ರು.
`ಎಲ್ಲಿ? ಹಾನುಬಾಳು ಕ್ಲಬ್ಬಲ್ಲಾ?’ ಅಂತ ಕೇಳಿದೆ.
`ಇಲ್ಲಾ. ದೇವರುಂದ ಜಾತ್ರೇಲಿ. ಅವರ ತಂದೆ ಹತ್ತಿರ ಕೇಳಿದೆ. ಅವನ ಕೈಲಿ ಯಾಕೆ ದುಡ್ಡು ಕೊಟ್ಟಿದ್ರಿ ಅಂತ ನಂಗೇ ಬೈದರು. ಅವನ ತಂಗಿಗೇನೋ ಮದುವೆಗೆ ಓಡಾಡ್ತಾ ಇದ್ದಾರಂತೆ. ಮದುವೆ ಮುಗಿದ ಮೇಲೆ ನೋಡೋಣ ಅಂದ್ರು,’ ಅಂತ ಮಾಧವ ಮೂರ್ತಿ ತಲೆ ಕೆರಿತಾ ಹೇಳಿದರು.
ಎಂ ಬಿ ರವಿ ನಮಗೇನು ಹೊಸಬನಲ್ಲ. ಸನ್ನಿ ಜೊತೆ ಶೃಂಗೇರಿಯಲ್ಲಿ ಓದುತ್ತಿದ್ದ. ಅವನ ಉಗ್ರ ಪ್ರತಾಪಗಳನ್ನು ನಾವು ಕಾರ್ಕಾಳ ಮತ್ತು ಉಡುಪಿಯಲ್ಲಿ ಓದುವಾಗ ಕೇಳುತ್ತಿದ್ದೆವು. ಊರಿನಲ್ಲಿ ಇದ್ದಾಗ, ಯಾವುದೋ ತರಲೆ ಪೋಲಿಸ್ ಕೇಸ್ ನಲ್ಲಿ ಸಿಕ್ಕಿಕೊಂಡು, ಬೆಂಗಳೂರಿಗೆ ಬಂದು ಸನ್ನಿ ರೂಮಿನಲ್ಲಿ ಒಂದು ವರ್ಷ ಇದ್ದ. ಒಂದೆರೆಡು ಕಂಪನಿಗಳಲ್ಲಿ ಸೇಲ್ಸ್ ಮನ್ ಕೆಲಸಕ್ಕೂ ಸೇರಿದ್ದ. ಎಲ್ಲಿಗೆ ಕರೆದರೂ ಇಲ್ಲ ಅಂತ ಹೇಳ್ತಿರಲಿಲ್ಲ. ಆದರೆ, ತನ್ನ ಜೇಬಿನಲ್ಲಿರುವ ಆಸ್ತಿ ವಿವರಗಳನ್ನು ಬಹಿರಂಗವಾಗಿ ಘೋಷಿಸಿ, ಅದರ ಮೇಲಿನ ಖರ್ಚನ್ನು ಬೇರೆಯವರು ಭರಿಸಬೇಕು ಅಂತ ಹೇಳುವಷ್ಟು ಪ್ರಾಮಾಣಿಕನಾಗಿದ್ದ. ಕೆಲಸಕ್ಕಿಂತ ಜಾಸ್ತಿ ಸನ್ನಿ ರೂಮಿನಲ್ಲಿ ನೆಡೆಯುತ್ತಿದ್ದ ಇಸ್ಪೀಟು ಟೇಬಲ್ ನಲ್ಲಿ ಹೆಚ್ಚಿನ ಸಮಯ ಕಳೆದು, ಒಂದು ದಿನ ಸದ್ದಿಲ್ಲದೆ ಹಾನುಬಾಳಿನ ಹತ್ತಿರದ ತನ್ನ ಊರಿಗೆ ಸೇರಿಕೊಂಡಿದ್ದ.
ದೇವರುಂದದ ಜಾತ್ರೆ ಹೆಸರು ಕೇಳಿದ ತಕ್ಷಣ ಅಮ್ಮ ನೆನಪಾಯ್ತು. ಕಾಲೇಜಿನಲ್ಲಿದ್ದಾಗ ಒಂದ್ಸಲ `ಅಮ್ಮ, ದೇವರುಂದದ ಜಾತ್ರೆಗೆ ಒಂದ್ಸಲ ಹೋಗ್ಬೇಕು. ನೋಡೇ ಇಲ್ಲ,’ ಅಂದಿದ್ದೆ.
ಅಮ್ಮನ ಕಾಲಲ್ಲಿದ್ದಿದ್ದು ಕೈಗೆ ಬರದಿದ್ದು ಹೆಚ್ಚು. `ಅಲ್ಲಿ ಕುಡಿದು, ಇಸ್ಪೀಟ್ ಆಡಿಕೊಂಡು, ಹುಡುಗಿಯರನ್ನ ನೋಡೋಕೆ ಬರೋರೆ ಜಾಸ್ತಿ. ಇವನೊಬ್ಬ ಅಲ್ಲಿಗೆ ಹೋಗೋಕೆ ಕಡಿಮೆ ಇದ್ದ,’ ಅಂತ ಬೈದಿದ್ದರು. ಅಮ್ಮ ಹೇಳಿದ್ದೇನೂ ಸುಳ್ಳಿರಲಿಲ್ಲ. ಬೇರೆ ಯಾವ ಘನಂದಾರಿ ಉದ್ದೇಶಗಳೂ ನನ್ನ ತಲೆಯಲ್ಲಿ ಇರಲಿಲ್ಲ. ದೇವರುಂದ ಜಾತ್ರೆಯಲ್ಲಿ ಇಸ್ಪೀಟು ಆಡುವಷ್ಟು ದುಡ್ಡಿಲ್ಲದಿದ್ದರೂ, ಚೆನ್ನಾಗಿ ಬೈನೆ ಕಳ್ಳು ಮಾತ್ರ ಏರಿಸುತ್ತಿದ್ದೆ. ನಮ್ಮೂರಲ್ಲೂ ಕಳ್ಳು ಸಿಕ್ಕಿದರೂ, ದೇವರುಂದದ ಸುತ್ತ ಮುತ್ತ ಸ್ವಲ್ಪ ಹೇರಳವಾಗೇ ಸಿಗುತ್ತಿತ್ತು.
ದೇವರುಂದದ ಜಾತ್ರೆಯೆ ಅಂಥದ್ದು. ಅಲ್ಲಿನವರನ್ನು ಕೇಳಿದರೆ, ಸಾವಿರದ ಇನ್ನೂರು ವರ್ಷಗಳ ಇತಿಹಾಸ ಇದೆ ಅಂತಾರೆ. ಯುಗಾದಿಯ ಸಮಯದಲ್ಲಿ ನೆಡೆಯುವ ಮೂರುದಿನದ ಜಾತ್ರೆ ಅದು. ತುಂಬಾ ಸಂಪ್ರದಾಯಕವಾಗಿ ನೆಡೆಯುತ್ತದೆ ಅಂದರೆ ತಪ್ಪಾಗಲಾರದು. ಇತ್ತೀಚಿನ ದಿನಗಳಲ್ಲಿ ಮಲೆನಾಡಿನ ಎಷ್ಟೋ ಸಂಪ್ರದಾಯಗಳು ನಾವು ನೋಡುತ್ತಿದ್ದಂತೆ ಕಣ್ಮುಚ್ಚಿವೆ.
ಹಾನುಬಾಳಿನ ಸುತ್ತಾ ಮುತ್ತ, ಇತ್ತೀಚಿನವರೆಗೂ ಬತ್ತದ ಕುಯ್ಲು ಮುಗಿದ ಕೂಡಲೇ, ಸ್ವಲ್ಪ ಬತ್ತವನ್ನು ಐನೋರಿಗೆ ಕೊಡೋ ಸಂಪ್ರದಾಯವಿತ್ತಂತೆ. ಬತ್ತವನ್ನು, ಕುಲ್ವಾಡಿಗಳು ಮನೆ ಮನೆಯಿಂದ ಸಂಗ್ರಹಿಸಿ, ತಲೆಮೇಲೆ ಹೊತ್ತುಕೊಂಡು ಹೋಗಿ, ಗುತ್ತಿಯ ಹತ್ತಿರವಿರುವ ಐನೋರ ಮನೆಗೆ ಹಾಕಿ ಬರುತ್ತಿದ್ದರಂತೆ. ಇತ್ತೀಚಿನ ವರ್ಷಗಲಲ್ಲಿ ಕುಲ್ವಾಡಿಗಳೆಲ್ಲಾ ಬೇರೆ ಕೆಲಸಗಳಿಗೆ ಹೋಗಲಾರಂಬಿಸಿದ ಮೇಲೆ, ಈ ಸಂಪ್ರದಾಯ ಕೈ ಬಿಟ್ಟಿದ್ದರು.
ಹಂಜುಗೊಡನಹಳ್ಳಿ ವಿಶ್ವಣ್ಣನಿಗೆ ಕೇಳಿದರೆ: `ನೋಡ್ರಿ, ಜನರು ಆರ್ಥಿಕವಾಗಿ ಪ್ರಭಲರಾಗಿ ಹೋದಂತೆ, ಸಾಮಾಜಿಕ ಸಮಾನತೆ ಕೇಳ್ತಾರೆ. ಮುಂಚೆ ಎಲ್ಲರೂ ಸಂಪ್ರದಾಯಗಳನ್ನು ಸೇವೆ ಅಂತ ಮಾಡ್ತಿದ್ರು. ಈಗ ಅದಕ್ಕೂ ಕೂಲಿ ಬಂದಿದೆ. ಇಂಥಾ ಸಮಯದಲ್ಲಿ ಸಂಪ್ರದಾಯಗಳು ಮುರಿದು ಬೀಳ್ತಾವೆ ಅಷ್ಟೆ,’ ಅಂತ ಹೇಳಿದ್ರು.
ಎಷ್ಟೇ ಸಂಪ್ರದಾಯಗಳು ಮುರಿದಿದ್ದರೂ, ದೇವರುಂದದ ಜಾತ್ರೆ ಮಾತ್ರ ತನ್ನ ಖ್ಯಾತಿಯನ್ನು ಕಳೆದುಕೊಂಡಿಲ್ಲ. ಇಲ್ಲಿ ಎಷ್ಟೋ ಹುಡುಗಿಯರಿಗೆ ಗಂಡು ನೋಡಲಾಗುತ್ತದೆ. ಹೆಂಗಸರಂತೂ, ಚಾಚೂ ತಪ್ಪದೆ ಸಂಪ್ರದಾಯಗಳನ್ನು ಪಾಲಿಸುತ್ತಾರೆ. ಅವರವರ ಪಾಲಿನ ಕೆಲಸಗಳನ್ನು ಸಾಮಾಜಿಕ ಸಮಾನತೆಯ ಬಗ್ಗೆ ಮಾತಾಡದೇ ಮಾಡುತ್ತಾರೆ.
ಆದರೆ, ಇವೆಲ್ಲಕ್ಕಿಂತ ಕುಖ್ಯಾತಿ ಎಂದರೆ, ಅಲ್ಲಿನ ಅಂದರ್-ಬಾಹರ್. ಜಾತ್ರೆಯಲ್ಲಿ ಸಂಪ್ರದಾಯಗಳು ಚಾಚೂ ತಪ್ಪದೆ ನೆಡೆಯುವಾಗ, ದೇವಸ್ಥಾನದ ಹತ್ತಿರ ಕಾಡಿನೊಳಗೆ, ಮರದ ಕೆಳಗೆ ಜಮಖಾನ ಹಾಸಿಕೊಂಡು ಮೂರುದಿನ ನೆಡೆಯುತ್ತೆ ಈ ಆಟ.
ಇದಕ್ಕೇನೂ ಸಾವಿರ ವರ್ಷದ ಇತಿಹಾಸವಿಲ್ಲ. ಆದರೆ, ಯಾವಾಗ ಶುರುವಾಯ್ತು ಅಂತ ಯಾರಿಗೂ ಸರಿಯಾಗಿ ಗೊತ್ತಿಲ್ಲ. ನಲವತ್ತೈವತ್ತು ವರ್ಷಗಳ ಹಿಂದೆ ಶುರುವಾಗಿರಬಹುದು. ಸುತ್ತಮುತ್ತ ಹಳ್ಳಿಗಳಿಂದ ಹಿಡಿದು, ದೂರದ ಬಳ್ಳಾರಿಯಿಂದಲೂ ಜನಗಳೂ ಇಲ್ಲಿ ಅಂದರ್-ಬಾಹರ್ ಆಡಲು ಬರುತ್ತಾರೆ. ಮೂರುದಿನಗಳಲ್ಲಿ ಕೋಟಿಗಟ್ಟಲೆ ದುಡ್ಡು ಜಮಖಾನದ ಮೇಲೆ ಬಿದ್ದು ಹೊರಳಾಡುತ್ತದೆ ಮತ್ತು ಗೋಣಿಚೀಲಗಳಲ್ಲಿ ತುಂಬಿಸಲ್ಪಡುತ್ತದೆ. ಆ ಮೂರು ದಿನಗಳಲ್ಲಿ ಯಾರ ಮನೆ ಹಾಳಾಗುತ್ತದೆ ಮತ್ತು ಯಾರ ಮನೆ ಉದ್ದಾರವಾಗುತ್ತೆ ಅಂತ ಹೇಳಲು ಕಷ್ಟ.
ಎಲ್ಲಾ ಜುಗಾರಿ ಕೇಂದ್ರಗಳಂತೆ, ದೇವರುಂದದ ಜಾತ್ರೆಯಲ್ಲಿ ಸಹ ಸಣ್ಣ ಪ್ರಮಾಣದಲ್ಲಿ ಶುರುವಾಯ್ತಂತೆ. ಎಪ್ಪತ್ತರ ದಶಕದಲ್ಲಿ, ಹಾಸನದ ರೌಡಿಗಳಾದ ಮಾರಿಗುಡಿ ಮತ್ತು ನಾಗರಾಜರ ಕಣ್ಣು ಇದರ ಮೇಲೆ ಬಿತ್ತಂತೆ. ಅವರು ಬರಲು ಶುರು ಮಾಡಿದಮೇಲೆ, ಇದು ದೊಡ್ಡ ಪ್ರಮಾಣದಲ್ಲಿ ಬೆಳೆಯಲಾರಂಭಿಸಿತಂತೆ. ಕೆಲವು ಸಲ ಪೋಲಿಸ್ ರೈಡ್ ಆದರೂ, ದುಡ್ಡುಕೊಟ್ಟು `ಸರಿ’ ಮಾಡಿಕೊಂಡರಂತೆ. ಆ ರೌಡಿಗಳಿಬ್ಬರೂ ಕೊಲೆಯಾದರೂ, ದೇವರುಂದದ ಅಂದರ್-ಬಾಹರ್ ಖದರ್ ಮಾತ್ರ ಹಾಗೇ ಉಳಿದಿದೆ. ಒಮ್ಮೊಮ್ಮೆ ಅನ್ನಿಸುತ್ತೆ, ಅಂದರ್-ಬಾಹರ್ ಇಲ್ಲದಿದ್ದರೆ, ದೇವರುಂದದ ಜಾತ್ರೆ ಇಷ್ಟೊಂದು ವೈಭವ ಉಳಿಸಿಕೊಳ್ಳುತ್ತಿರಲಿಲ್ಲ ಅಂತ.
ಹಣದ ಪ್ರಭಾವ ಜಾಸ್ತಿಯಾದಂತೆ, ಮಲೆನಾಡಿನ ಕಡೆ ಸುಗ್ಗಿ ಹಬ್ಬಗಳೂ ನಿಧಾನವಾಗಿ ಕಣ್ಮರೆಯಾಗುತ್ತಿವೆ. ನಮ್ಮೂರ ಸುಗ್ಗಿಯನ್ನಂತೂ, ನಮ್ಮ ತಂದೆ ಕೂಡ ನೋಡಿಲ್ಲ. ಆದರೆ, ಎಲ್ಲೆಲ್ಲಿ ಉಳಿದಿವೆಯೋ, ಅಲ್ಲಿ ಮಾತ್ರ ತುಂಬಾ ಶ್ರದ್ಧೆಯಿಂದ ನೆಡೆಯುತ್ತದೆ. ಸುಗ್ಗಿ ನೆಡೆಯುವಷ್ಟು ದಿನವೂ, ಊರಿನವರು ಗುಂಡು-ತುಂಡುಗಳಿಂದ ದೂರ. ತಣ್ಣೀರಿನ ಸ್ನಾನ ಮತ್ತು ಕಾಲಿಗೆ ಚಪ್ಪಲಿ ಕೂಡ ಹಾಕುವುದಿಲ್ಲ.
ಇದಕ್ಕೆಲ್ಲಾ ಅಪವಾದವಿದ್ದದ್ದೇ ಅವತಿಯ ಸುಗ್ಗಿ.  ಚಿಕ್ಕಂದ್ದಿನಲ್ಲಿ ಸರಳತ್ತೆ ಮನೆಗೆ ಹೋಗುವುದೆಂದರೆ ನಮಗೆಲ್ಲಾ ಖುಷಿ. ದೊಡ್ಡವರು ಕೊಡುವ ಎರಡೆರಡು ರೂಪಾಯಿಗಳು ಸೇರಿ, ಹತ್ತಿಪ್ಪತ್ತು ರೂಪಾಯಿಗಳನ್ನು ಜೇಬಿನಲ್ಲಿ ಸಿಕ್ಕಿಸಿಕೊಂಡು, ಸುಗ್ಗಿಯಲ್ಲಿ ಮಾರಾಟವಾಗುವ ಗಿಲಕಿಗಳನ್ನೆಲ್ಲ ಕೊಂಡು, ಟರ್ರೋ… ಅಂತ ಶಬ್ಧ ಮಾಡಿಕೊಂಡು ಓಡಾಡುತ್ತಿದ್ದೆವು.
ಅಲ್ಲಿನ ವಿಶೇಷ ಎಂದರೆ, ಗುಂಡು-ತುಂಡು. ಸುಗ್ಗಿಯ ಸಮಯದಲ್ಲಿ ಯಾರ ಮನೆಗೆ ಹೋದರೂ,  ಯಥೇಚ್ಚವಾಗಿ ಮಾಂಸದೂಟ ತಯಾರಾಗಿರುತ್ತಿತ್ತು. ಜೊತೆಯಲ್ಲಿ, ಕಳ್ಳು ಮತ್ತು ವಿಸ್ಕಿ ಧಾರಾಳವಾಗಿ ಇಟ್ಟಿರುತ್ತಿದ್ದರು. ದೇವರು ಏಳುವ ಹೊತ್ತಿಗೆ, ಜನರ ಮೈಯಲ್ಲೇ ದೇವರು ಬಂದಿರುವಂತೆ ಗುಂಡು ಕೆಲಸ ಮಾಡುತ್ತಿತ್ತು.
ಇದಕ್ಕೊಂದು ಕಥೆಯಿದೆ. ತುಂಬಾ ವರ್ಷಗಳ ಮುಂಚೆ, ಎಲ್ಲಾ ಕಡೆಗಳಂತೆ ಅವತಿಯಲ್ಲೂ ಸುಗ್ಗಿ ಸಸ್ಯಹಾರಿ ಹಬ್ಬವಾಗಿತ್ತಂತೆ. ಸಂಪ್ರದಾಯದ ಪ್ರಕಾರ, ದೇವರು ಏಳುವ ಮುಂಚೆ, ಊರವರು ಊಟ ಸಹ ಮಾಡುವುದಿಲ್ಲ. ಒಂದು ಸುಗ್ಗಿಯಲ್ಲಿ ಯಾಕೋ ದೇವರು ಏಳುವುದು ತಡವಾಯ್ತಂತೆ. ದಿನವಿಡೀ ಕಳೆದು ಮಧ್ಯರಾತ್ರಿಯಾದರೂ ದೇವರು ಏಳಲೇಇಲ್ಲ. ಕಾದೂ ಕಾದೂ ಸುಸ್ತಾಗಿ, ಊರವರು ಕಣ್ಣುಬಿಡಲೂ ಆಗದೆ ಮಲಗಿದರು. ಬೆಳಗ್ಗಿನ ಜಾವದಲ್ಲಿ ದೇವರು ಎದ್ದೇ ಬಿಡ್ತು. ಕುಣಿಯುವುದಿರಲಿ, ಊರವರಿಗೆ ನಿಲ್ಲಲೂ ತ್ರಾಣವಿರಲಿಲ್ಲ.
ಆದರೆ, ತಮಟೆ ಬಡಿಯುವನೊಬ್ಬ ಮಾತ್ರ ಹಿಂದಿನ ದಿನ ಚೆನ್ನಾಗಿ ಗುಂಡು ಹಾಕಿ, ಮಾಂಸದೂಟ ಮಾಡಿ ಮಲಗಿದ್ದ. ದೇವರು ಎದ್ದ ಕೂಡಲೆ, ತಮಟೆ ಬಡಿಯುತ್ತಾ, ಸಕತ್ತಾಗಿ ಕುಣಿದ. ಅದನ್ನು ನೋಡಿದ ದೇವರು ಅಪ್ಪಣೆ ಕೊಡಿಸಿತಂತೆ: `ನಾನು ಬರುವವರೆಗೆ ಹಸಿದಿದ್ದು ಎದ್ದು ನಿಲ್ಲಲೂ ತಾಕತ್ತಿಲ್ಲದೆ ಹೊದರೆ ಹೇಗೆ. ತಮಟೆ ಬಡಿಯುವವನನ್ನು ನೋಡಿ, ನನ್ನ ಹ್ಯಾಗೆ ಕರ್ಕೊಳ್ತಿದ್ದಾನೆ. ಮುಂದಿನ ಸುಗ್ಗಿಯಿಂದ, ಎಲ್ಲರೂ ಅವನ ಥರ ಚೆನ್ನಾಗಿ ಕುಡಿದು-ತಿಂದು, ನಾನು ಬರುವಾಗ ಸಂತೋಷದಿಂದ ಕರ್ಕೋಬೇಕು.’
ದೇವರೇ ಅಪ್ಪಣೆ ಕೊಡಿಸಿದ ಮೇಲೆ ಇನ್ನೇನು. ಅವತಿಯ ಸುಗ್ಗಿ ಸ್ವರ್ಗವಾಗಿ ಹೋಗಿತ್ತು. ಸುಗ್ಗಿ ಪೂಜೆ ಮುಗಿದ ಮೇಲೆ, ಹೊರಗಡೆಯಿಂದ ಬಂದ ನೆಂಟರನ್ನು ಮನೆಗೆ ಕರೆಯುವುದು ವಾಡಿಕೆ. ಹೋದಲ್ಲೆಲ್ಲ ಒಂದ್ಸೊಲ್ಪ ಗುಂಡು ಮತ್ತು ಎರಡು ತುಂಡು ಬಾಯಿಗೆ ಹಾಕಿಕೊಂಡರೂ ಸಾಕು, ನಾಲ್ಕು ದಿನದ `ಕೋಟಾ’ ಮುಗಿದೇ ಹೋಗುತ್ತಿತ್ತು. ಅವರವರ ಮನೆಗೆ ಹ್ಯಾಗೆ ಕಾರ, ಜೀಪು ಡ್ರೈವಿಂಗ್ ಮಾಡಿಕೊಂಡು ಹೊಗ್ತಿದ್ದರು ಅನ್ನೋದೇ ಆಶ್ಚರ್ಯ.
ದೊಡ್ಡವರಾದಮೇಲೆ ಅವತಿಯ ಸುಗ್ಗಿಗೆ ಹೋಗಲೂ ಆಗಲೇ ಇಲ್ಲ. ಒಂದೆರೆಡು ವರ್ಷಗಳ ಹಿಂದೆ, ಸರಳತ್ತೆ ಮಗ ರಘು ಅಣ್ಣನ ಮನೆ ಗೈಹಪ್ರವೇಶದ ಸಮಯದಲ್ಲಿ ಯಾಕೋ ಸುಗ್ಗಿ ನೆನಪಾಯ್ತು.
`ರಘಣ್ಣ, ಈ ಸತಿ ಅವತಿ ಸುಗ್ಗಿಗೆ ಬರಬೇಕು ಕಣ್ರಿ’, ಅಂದೆ.
`ಅದೆಲ್ಲಿದೆ ಸುಗ್ಗಿ? ಅದು ನಿಂತು ಐದಾರು ವರ್ಷ ಆಯ್ತು,’ ಅಂದರು.
`ಯಾಕೆ? ಏನಾಯ್ತು?’ ಅಂದೆ.
`ಊರವರ ಸಣ್ಣ ಜಗಳ… ಮಧ್ಯ ರಾಜಕೀಯ. ಎಲ್ಲಾ ಸೇರಿ ಕೋರ್ಟ್ ಮೆಟ್ಟಿಲೂ ಹತ್ತಿ, ನಿಂತೇ ಹೋಯ್ತು,’ ಅಂದರು. ಎಷ್ಟೇ ಕೇಳಿದರೂ, ವಿವರಗಳನ್ನು ಹೇಳಲಿಲ್ಲ.
ಕೊನೆಗೆ, ಅವತಿ ಕಡೆಯಲ್ಲಿದ್ದ ನನ್ನ ಗೆಳೆಯರನ್ನು ಕೇಳಿ ಸ್ವಲ್ಪ ವಿವರಗಳನ್ನು ತಿಳ್ಕೊಂಡೆ. ಸಂಪ್ರದಾಯದಂತೆ, ದೀವರ ಮಕ್ಕಳು  ಸುಗ್ಗಿ ತೇರು ಕಟ್ಟುತ್ತಿದ್ದರಂತೆ ಮತ್ತು ಅದನ್ನು ಗೌಡರು ಎಳೆಯುತ್ತಿದ್ದರಂತೆ. ದೀವರ ಮಕ್ಕಳೂ ತಾವೂ ಸಹ ಗೌಡರು ಅಂತ ಹೇಳ್ಕೊಂಡ್ರೂ, ಗೌಡರು ಅಷ್ಟು ಸುಲಭವಾಗಿ ಅವರನ್ನು ಒಪ್ಪಿಕೊಳ್ಳೋದಿಲ್ಲ. ಮುಂಚಿನಿಂದಲೂ ಅವರು ಆರ್ಥಿಕವಾಗಿ ಹಿಂದುಳಿದ್ದವರು ಕೂಡ. ಇತ್ತೀಚಿನ ದಿನಗಳಲ್ಲಿ ಅವರು ಕೂಡ ಕಾಫಿತೋಟ ಮಾಡಿ, ಮಕ್ಕಳನ್ನು ಹೊರಗಡೆ ಓದಿಸಿ, ಕಾರು, ಜೀಪು ಇಟ್ಟುಕೊಂಡು ಅನಕೂಲವಾಗಿದ್ದಾರೆ.
ಒಂದು ವರ್ಷ ಸುಗ್ಗಿಯ ಸಮಯದಲ್ಲಿ ದೀವರ ಮಕ್ಕಳು ತೇರು ಕಟ್ಟಲು ಒಪ್ಪಲಿಲ್ಲ. ಎಲ್ಲರೂ ಸೇರಿ ತೇರು ಕಟ್ಟೋಣ ಮತ್ತು ಎಳೆಯೋಣ. ದೀವರ ಮಕ್ಕಳೇ ಏಕೆ ತೇರು ಕಟ್ಟಬೇಕು? ಗೌಡರೇ ಏಕೆ ಅದನ್ನು ಎಳೆಯಬೇಕು? ಅಂತ ವರಾತ ತೆಗೆದರು. ಸರಿ, ಊರವರೆಲ್ಲಾ ಪಂಚಾಯ್ತಿ ಕೂತರು. ರಘು ಆಣ್ಣನ ಚಿಕ್ಕಮ್ಮ ಮಸ್ಕಲಿ ರತ್ನತ್ತೆ ದೀವರ ಮಕ್ಕಳ ಪರ ವಹಿಸಿದರು. ಪಂಚಾಯ್ತಿ ಚುನಾವಣೆಯಲ್ಲಿ ಕುಟುಂಬದವರ್ಯಾರೂ ಅವರ ಪರ ನಿಲ್ಲದಿದ್ದರಿಂದ, ಅವರೇ ದೀವರ ಮಕ್ಕಳಿಗೆ ಹಚ್ಚಿಕೊಟ್ಟು ಚಿತಾವಣೆ ನೆಡೆಸಿದ್ದಾರೆ ಅಂತ ಗೌಡರುಗಳು ಭಾವಿಸಿದರು. ಏನೇ ಮಾಡಿದರೂ, ಗೌಡರುಗಳು ಸಂಪ್ರದಾಯ ಬದಲಾವಣೆಗೆ ಒಪ್ಪಲಿಲ್ಲ. ತೇರು ಕಟ್ಟದಿದ್ದರೆ ದೀವರ ಮಕ್ಕಳಿಗೆ ಬಹಿಷ್ಕಾರ ಹಾಕುವುದಾಗಿ ಧಮಕಿ ಹಾಕಿದರು. ದೀವರ ಮಕ್ಕಳು ಕೋರ್ಟ್ ಮೆಟ್ಟಿಲು ಹತ್ತಿದರು. ಅಲ್ಲಿಗೆ ನೆಗೆದು ಬಿತ್ತು ಅವತಿಯ ಸುಗ್ಗಿ.
ಯಾಕೋ ಕಸಿವಿಸಿಯಾಯ್ತು. ಬರಿ ತೇರು ಯಾರು ಕಟ್ಟಬೇಕು ಅನ್ನೋ ವಿಷಯಕ್ಕೆ ಸುಗ್ಗೀನೇ ಬಲಿ ಕೊಡೋದೇ? ದೇವರುಂದ ಜಾತ್ರೆಯಲ್ಲೂ ಈ ಥರದ ಸಂಪ್ರದಾಯಗಳಿದ್ದಾವೆ ಮತ್ತೆ ಅಲ್ಲೂ ಬೇರೆ ಜಾತಿಯವರು ಪ್ರಭಲರಾಗಿದ್ದಾರೆ. ಯಾವುದೇ ವ್ಯತ್ಯಾಸಗಳಿದ್ದರೂ, ತೇರು ಕಟ್ಟಿ, ಜಾತ್ರೆ ಶುರು ಮಾಡಿಕೊಟ್ಟು, ಜಮಖಾನದ ಹತ್ತಿರ ಹೊರಡುತ್ತಾರೆ.
ಅವತಿಯಲ್ಲಿ ದೇವರು, ಗುಂಡು-ತುಂಡಿನ ಜೊತೆ, ಅಂದರ್-ಬಾಹರ್ ಗೂ ಅಪ್ಪಣೆ ಕೊಡಿಸಿದ್ದರೆ, ಸುಗ್ಗಿ ಇನ್ನೂ ಸ್ವಲ್ಪ ಕಾಲ ಉಳಿಯುತ್ತಿತ್ತೇನೋ ಅಂತ ಅನ್ನಿಸ್ತು.

ಮಾಕೋನಹಳ್ಳಿ ವಿನಯ್ ಮಾಧವ್