ಮಂಗಳವಾರ, ನವೆಂಬರ್ 28, 2017

ಹಕ್ಕುಚ್ಯುತಿ


ಅವಿಶ್ಲೇಷಿತ ಹಕ್ಕು ಮತ್ತು ಆದ್ಯತೆಗಳ ಸುಳಿಯಲ್ಲಿ, ನಮ್ಮ ಸ್ಥಾನವೆಲ್ಲಿ?


ಮೊನ್ನೆ ಬೆಳಗಾವಿ ಅಧಿವೇಶನ ಮುಗಿಸಿ ರಾಕೇಶ್ ಪ್ರಕಾಶ್, ನಿರಂಜನ ಕಗ್ಗೆರೆ ಮತ್ತು ಸತೀಶ್ ಬಿ ಎಸ್ ಜೊತೆ ಹಿಂದಿರುಗುವಾಗ, ಜೆ ಎಚ್ ಪಟೇಲ್, ಬಂಗಾರಪ್ಪ, ಎಸ್ ಎಂ ಕೃಷ್ಣ ಮತ್ತು ಘೋರ್ಪಡೆಯವರಂಥಹ ಹಳೇ ರಾಜಕಾರಣಿಗಳ ವಿಷಯ ಮಾತನಾಡುತ್ತಿದ್ದೆವು. ಸತೀಶನು ಮೊದಲನೇ ಸಲ ಪಟೇಲರನ್ನು ಭೇಟಿಯಾದಾಗ, ಅವರು ಹೇಳಿದ ಕಥೆಯನ್ನು ನೆನಪಿಸಿಕೊಂಡ.

ಪಟೇಲರು ಸಂಸತ್ತಿಗೆ ಆಯ್ಕೆಯಾದಾಗ, ಶಿಮಮೊಗ್ಗದಲ್ಲಿ ಗೆಳೆಯರೊಡನೆ ಗುಂಡು ಹಾಕಲು ಹೋಗಿದ್ದರಂತೆ. ಮನೆವರೆಗೆ ಬಿಟ್ಟು ಬರುತ್ತೇವೆ ಅಂತ ಸ್ನೇಹಿತರು ಹೇಳಿದರೂ ಕೂಡ, ಪಟೇಲರು ತಾವೇ ನೆಡೆದುಕೊಂಡು ಹೋಗುವುದಾಗಿ ಹೇಳಿದರಂತೆ. ಸ್ವಲ್ಪ ದೂರ ಹೋದ ಮೇಲೆ ಪಟೇಲರಿಗೆ ಗುಂಡು ಜಾಸ್ತಿಯಾಗಿದ್ದು ಗೊತ್ತಾಗಿದೆ ಮತ್ತು ಮನೆ ಯಾವುದು ಅನ್ನೋದು ಗೊತ್ತಾಗುತ್ತಿಲ್ಲ. ಇಂಥಹ ಪರಿಸ್ಥಿತಿಯಲ್ಲಿ, ಪಂಚೆ ಕೂಡ ಜಾರಿ ಬಿದ್ದಿದೆ.

ಆಗ ಪೋಲಿಸೊಬ್ಬ ಬಂದು ವಿಚಾರಿಸಿದ್ದಾನೆ. ತಾನು ಇಲ್ಲಿನ ಸಂಸದ ಮತ್ತು ಮನೆ ಹುಡುಕುತ್ತಿದ್ದೇನೆ ಎಂದು ಹೇಳಿದಾಗ, ಪಟೇಲರ ತಲೆ ಮೇಲೆ ಮೊಟಕಿದ ಪೋಲಿಸಪ್ಪ, ನೆಟ್ಟಗೆ ಅವರನ್ನು ಲಾಕಪ್ಪಿನೊಳಗೆ ಹಾಕಿದ್ದಾನೆ. ಮುಂದೇನಾಯ್ತು ಅಂತ ಪಟೇಲರಿಗೆ ನೆನಪಿಲ್ಲವಂತೆ. ಗಡದ್ದಾಗಿ ನಿದ್ದೆ ಮಾಡಿದ್ದಾರೆ. ಬೆಳಗ್ಗೆ ಎದ್ದು ನೋಡಿದರೆ, ಪೋಲಿಸಪ್ಪ ಇವರ ಕಾಲು ಹಿಡಿದುಕೊಂಡು ಕೂತಿದ್ದನಂತೆ. ಒಂದೆರೆಡು ನಿಮಿಷದ ಬಳಿಕ ಏನಾಯ್ತು ಅಂತ ನೆನಪಿಸಿಕೊಂಡ ಪಟೇಲರು ನಕ್ಕು ಸುಮ್ಮನಾದರಂತೆ.

ಪಟೇಲರ ಹಿಂಬಾಲಕರಿಗೆ ಬಹಳ ಸಿಟ್ಟು ಬಂದಿತ್ತಂತೆ. ಪೋಲಿಸನ ಮೇಲೆ ಏನಾದರೂ ಕ್ರಮ ಜರುಗಿಸಬೇಕು ಎಂದು ಹೇಳಿದಾಗ, `ಅಲ್ರೋ…. ನಾನು ಎಂ ಪಿ ಥರ ಕಾಣದೆಹೋದರೆ, ಪೋಲಿಸನವದೇನು ತಪ್ಪು? ನಾನು ಪಾರ್ಲಿಮೆಂಟ್ ಮೆಂಬರ್ ಥರ ಕಾಣೋದಿಲ್ಲ ಅನ್ನೋದು ಈಗಲೇ ಗೊತ್ತಾಗಿದ್ದು ನೋಡು,’ ಅಂತ ಹೇಳಿ ಜೋರಾಗಿ ನಕ್ಕರಂತೆ. ಈ ಥರ ಹಳೇ ಕಹಿ ಘಟನೆಗಳನ್ನು ನಕ್ಕು ಕ್ಷಮಿಸಿದ ಹಲವಾರು ಘಟನೆಗಳು ಪಟೇಲರ ಮತ್ತು ಇನ್ನೊಬ್ಬ ಮಾಜೀ ಮುಖ್ಯಮಂತ್ರಿ ಗುಂಡೂರಾಯರ ಜೀವನಗಳಲ್ಲಿ ಬೇಕಾದಷ್ಟಿವೆ.

ಆದರೆ, ಈಗಿನ ರಾಜಕಾರಣಿಗಳು ಇಂತಹ ಘಟನೆಗಳಿಗೆ ಹೇಗೆ ಪ್ರತಿಕ್ರಿಯಿಸುತ್ತಿದ್ದರು? ಪಟೇಲರ ವ್ಯಕ್ತಿತ್ವದ ಹತ್ತಿರವೂ ಸುಳಿಯುತ್ತಿರಲಿಲ್ಲ. ಅದಲ್ಲದೆ, ಹಕ್ಕುಚ್ಯುತಿಯನ್ನು ನಿರ್ದಾಕ್ಷಿಣ್ಯವಾಗಿ ಆ ಪೋಲಿಸ್ ನವನ ಮೇಲೆ ಪ್ರಯೋಗಿಸುತ್ತಿದ್ದರು ಅನ್ನೋದು ನನ್ನ ಭಾವನೆ.

1997 ರಲ್ಲಿ, ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿ ಕೆಲಸ ಮಾಡುವಾಗ, ವಿಧಾನ ಮಂಡಲಗಳ ವರದಿ ಮಾಡುವ ಸಲುವಾಗಿ, ವಿಧಾನಸೌದದೊಳಗೆ ಇಣುಕಲು ಶುರುಮಾಡಿದೆ. ಯಾವುದಾದರೂ ಹಿರಿಯ ವರದಿಗಾರರಿಗೆ ಬೇರೆ ಕೆಲಸವಿದ್ದಾಗ, ನನ್ನನ್ನು ಕಳುಹಿಸುತ್ತಿದ್ದರು. ಆಗಿನ ರಾಜಕಾರಣಿಗಳು ಮಾತನಾಡುವಾಗ ತಬ್ಬಿಬ್ಬಾಗುತ್ತಿದ್ದದ್ದೂ ಉಂಟು.

ಒಂದು ಕಡೆ, ಪಟೇಲ್, ಎಂ ಪಿ ಪ್ರಕಾಶ್, ಎಂ ಸಿ ನಾಣಯ್ಯ, ಭೈರೇಗೌಡ, ಜಯಪ್ರಕಾಶ್ ಹೆಗಡೆ ಥರದವರೂ, ಇನ್ನೊಂದು ಕಡೆ, ಮಲ್ಲಿಕಾರ್ಜುನ ಖರ್ಗೆ, ಎಂ ವೈ ಘೋರ್ಪಡೆ ಥರದವರೂ ಮಾತನಾಡುವಾಗ, ಯಾವುದು ಬರೆಯಬೇಕು, ಯಾವುದು ಬಿಡಬೇಕು ಅನ್ನೋದು ಸಮಸ್ಯೆಯಾಗುತ್ತಿತ್ತು. ಮುಂದಿನ ಚುನಾವಣೆಗಳಲ್ಲಿ ಕೆಲವರು ಸೋತರೂ, ಎಸ್ ಕೃಷ್ಣ, ಕಾಗೋಡು ತಿಮ್ಮಪ್ಪ, ಕೆ ಎಚ್ ರಂಗನಾಥ್, ಎ ಎಚ್ ವಿಶ್ವನಾಥ್ ಥರದವರು ಒಳಗೆ ಬಂದಿದ್ದರು.

ಕಲಾಪದ ನಡುವೆ, ಮೊಗಸಾಲೆಗಳಲ್ಲಿ, ಈ ನಾಯಕರ ಸುತ್ತ ಮೊದಲ ಸಲ ಚುನಾಯಿತರಾದವರು ಕುಳಿತಿರುತ್ತಿದ್ದರು. ಹೆಚ್ಚಿನ ಸಮಯಗಳಲ್ಲಿ, ಸಂಸದೀಯ ನಡುವಳಿಕೆಗಳು, ಹಿಂದಿನ ಘಟನೆ ಮತ್ತು ಚರ್ಚೆಯ ಸುತ್ತ ಮಾತುಕತೆಗಳು ಸಾಗುತ್ತಿದ್ದವು. ನಾವು ಸಹ, ಈ ನಾಯಕರುಗಳನ್ನು ಪರಿಚಯ ಮಾಡಿಕೊಳ್ಳಲು ಸಮಯ ಕಾಯುತ್ತಿದ್ದವು. ಹಿರಿಯ ಪತ್ರಕರ್ತರು ಮತ್ತು ಬೇರೆ ಸದಸ್ಯರು ಇಲ್ಲದ ಸಮಯದಲ್ಲಿ ಮಾತಿಗೆ ಕೂರುತ್ತಿದ್ದೆವು. ರಾಜಕೀಯದ ಜೊತೆ, ಅವರು ಪತ್ರಿಕೆಗಳಲ್ಲಿನ ವರದಿಗಳ ಬಗ್ಗೆಯೂ ಚರ್ಚಿಸುತ್ತಿದ್ದರು ಮತ್ತು ಸಲಹೆಗಳನ್ನು ನೀಡುತ್ತಿದ್ದರು. ಅವರ ಪ್ರೌಡಿಮೆಯ ಬಗ್ಗೆ ಚಕಾರವೆತ್ತುವ ಹಾಗಿಲ್ಲ.

ಈ ಮೊದಲು, ಹಕ್ಕುಚ್ಯುತಿ ಅನ್ನೋದನ್ನ ಒಂದು ಸಲ ಮಾತ್ರ ನೋಡಿದ್ದೆ. ವಿಧಾನ ಪರಿಷತ್ ನಲ್ಲಿ, ಐಎಎಸ್ ಅಧಿಕಾರಿಯೊಬ್ಬರನ್ನು ಕರೆದು ಛೀಮಾರಿ ಹಾಕುವುದರೊಂದಿಗೆ, ಅದು ಮುಗಿದು ಹೋಗಿತ್ತು. ಆ ಘಟನೆ ನನಗೆ ಇಷ್ಟವಾಗಿರಲಿಲ್ಲ. ಆದರೂ ಏನೂ ಮಾಡುವ ಹಾಗಿರಲಿಲ್ಲ.

 ಕಳೆದ ವಾರದವರೆಗೆ, ಈ ಹಕ್ಕುಚ್ಯುತಿಯ ಬಗ್ಗೆ ನನಗೆ ತಪ್ಪು ಕಲ್ಪನೆಗಳಿದ್ದವು ಅಂತ ಅನ್ನಿಸುತ್ತದೆ. ಯಾಕೆಂದರೆ, ರವಿ ಬೆಳಗೆರೆ ಮತ್ತು ಅನಿಲ್ ರಾಜ್ ಅನ್ನೋ ಇಬ್ಬರು ಪತ್ರಕರ್ತರನ್ನು ಒಂದು ವರ್ಷ ಜೈಲು ಮತ್ತು 10000 ರೂಪಾಯಿ ಜುಲ್ಮಾನೆಯನ್ನು ಖಾಯಂಗೊಳಿಸಿದ ಮೇಲೆ, ಗೊಂದಲಕ್ಕೊಳಗಾಗಿದ್ದೇನೆ.

ಮೊದಲು ಮಾಡಿದ ಕೆಲಸ ಎಂದರೆ, ಹಕ್ಕುಭಾದ್ಯತಾ ಸಮಿತಿಯ ವರದಿಯನ್ನು ತೆಗೆದುಕೊಂಡು ಓದಿದೆ. ರವಿ ಬೆಳೆಗೆರೆ ಬರೆದ ಈ ವರದಿ ಹೇಗೆ ಹಕ್ಕುಚ್ಯುತಿಯಾಗಿದೆ ಎಂಬ ನಿರ್ಣಯಕ್ಕೆ ಸಮಿತಿ ಬಂದಿತು ಅನ್ನೋದರ ಸಾಧಕ-ಭಾದಕಗಳ ವಿಷ್ಲೇಶಣೆ ಮಾಡದೇ ಹೋದರೂ, ಕೆಲವು ವಿಷಯಗಳನ್ನು ಪ್ರಸ್ತಾಪ ಮಾಡಲೇಬೇಕಾಗುತ್ತದೆ.

ಮೊದಲನೆಯದಾಗಿ, ಸಮಿತಿಯೇ ಹೇಳುವಂತೆ, ಹಕ್ಕುಚ್ಯುತಿ ಎನ್ನುವುದಕ್ಕೆ ಯಾವುದೇ ವ್ಯಾಖ್ಯಾನವಿಲ್ಲ. ಆದರೂ, ಸಂಸತ್ ನಡುವಳಿಕೆಯ ಬಗ್ಗೆ, ಕೌಲ್ ಮತ್ತು ಶಖ್ತರ್ ಬರೆದಿರುವ `PRACTICE AND PROCEDURE OF PARLIAMENT’ ಎನ್ನುವ ಪುಸ್ತಕವನ್ನು ಆಧರಿಸಿ, ಹೀಗೆ ಹೇಳುತ್ತಾರೆ. ಅದನ್ನು ಕನ್ನಡಕ್ಕೆ ಅನುವಾದಿಸುವ ಗೋಜಿಗೆ ನಾನು ಹೋಗುವುದಿಲ್ಲ:

`It is breach of privilege and contempt of the House to make speeches, or print or publish any libels, reflecting on the character of proceedings of the house or its Committees, or any member of the House for or relating to his character or conduct as a member of Parliament’.
Speeches and writings reflecting on House or its Committees or member are punished by the House as contempt on the principle that such acts, ``tend to obstruct the House in the performance of their functions by diminishing the respect due to them.’’ 

The house may punish not only contempt’s arising out of facts of which the ordinary courts will take cognizance, but those of which they cannot, thus a libel on a member of Parliament any amount to a breach of privilege without being a libel under civil or criminal law.

ಅನಿಲ್ ರಾಜ್ ಯಾರು ಅಂತ ಗೊತ್ತಿಲ್ಲದಿದ್ದರೂ, ರವಿ ಬೆಳೆಗೆರೆಯನ್ನು ಇಪ್ಪತ್ತು ವರ್ಷಗಳಿಂದ ಬಲ್ಲೆ. ಎಷ್ಟೋ ಸಲ, ಕೆಲವು ಲೇಖನಗಳನ್ನು ಕುರಿತು, ಇದ್ಯಾಕೋ ವಿಪರೀತವಾಯ್ತು ಅಂತ ಮುಖಕ್ಕೆ ಹೊಡೆದಂತೆ ಹೇಳಿದ್ದೇನೆ ಮತ್ತು ಜಗಳವಾಡಿದ್ದೇನೆ. ಅನಿಲ್ ರಾಜ್ ವಿರುದ್ದ ದೂರು ಕೊಟ್ಟವರು ಬಿಜೆಪಿಯ ಎಸ್ ಆರ್ ವಿಶ್ವನಾಥ್ ಮತ್ತು ರವಿ ಬೆಳೆಗೆರೆಯ ವಿರುದ್ದ ದೂರು ನೀಡಿರುವವರು, ಆಗಿನ ಹಕ್ಕು ಭಾದ್ಯತಾ ಸಮಿತಿಯ ಅಧ್ಯಕ್ಷರು ಮತ್ತು ಈಗಿನ ಸಭಾಧ್ಯಕ್ಷರಾಗಿರುವ ಕೆ ಬಿ ಕೋಳೀವಾಡ್.

ಕೋಳೀವಾಡ್ ವಿರುದ್ದ ರವಿ ಬರೆದಿದ್ದ ವರದಿಯನ್ನು ಓದಿದ ಮೇಲೆ, ಇದು ಸದಭಿರುಚಿಯ ವರದಿ ಅಲ್ಲದಿದ್ದರೂ, ಹಕ್ಕುಚ್ಯುತಿ ಹೇಗಾಯ್ತು ಅನ್ನೋ ಅನುಮಾನ ಬಂತು. ಯಾಕಂದರೆ, ರವಿಯ ಹೆಚ್ಚಿನ ವರದಿಗಳನ್ನು ಓದಿದ್ದ ನನಗೆ, ರವಿ ನೂರಾರು ಸಲ ಜೈಲಿಗೆ ಹೋಗಿ ಬಂದಿರಬೇಕಾಗುತ್ತಿತ್ತು ಅನ್ನಿಸಿತುಅದು ರವಿಗಷ್ಟೇ ಸೀಮಿತವಾಗಿರುತ್ತಿರಲಿಲ್ಲ. ಎಷ್ಟೋ ನಿಯತಕಾಲ ಮತ್ತು ದಿನ ಪತ್ರಿಕೆಯ ವರದಿಗಾರರೂ ಜೈಲಿಗೆ ಹೋಗೋ ಪರಿಸ್ಥಿತಿ ಬಂದಿರುತ್ತಿತ್ತು.

ರವಿ ವಿರುದ್ದ ದೂರು ದಾಖಲಿಸಿದಾಗ, ಕೋಳೀವಾಡ್ ಹಕ್ಕುಭಾದ್ಯತಾ ಸಮಿತಿಯ ಅಧ್ಯಕ್ಷರಾಗಿದ್ದರು. ಆಗಿನ ಸಭಾಧ್ಯಕ್ಷರಾಗಿದ್ದ ಕಾಗೋಡು ತಿಮ್ಮಪ್ಪನವರು, ದೂರನ್ನು ಹಕ್ಕಭಾದ್ಯತಾ ಸಮಿತಿಗೆ ಕಳುಹಿಸಿದ್ದರು. ಅಂದರೆ, ದೂರು ನೀಡಿದವರೂ ಮತ್ತು ನ್ಯಾಯಾದೀಶರೂ ಒಬ್ಬರೇ ಆಗಿದ್ದಿದ್ದು, ಈ ದೂರಿನ ವೈಶಿಷ್ಟ್ಯ. ಸಭಾಧ್ಯಕ್ಷರಾಗಿ ಆಯ್ಕೆಯಾಗಿ, ಕಿಮ್ಮನೆ ರತ್ನಾಕರ್ ರವರಿಗೆ ಸಮಿತಿಯ ಅಧ್ಯಕ್ಷಗಿರಿ ಹಸ್ತಾಂತರಿಸುವ ಹೊತ್ತಿಗೆ, ಕೋಳೀವಾಡರು ತಮ್ಮ ವರದಿಯನ್ನು ತಯಾರು ಮಾಡಿ ಇಟ್ಟಿದ್ದರು. ಅನಿಲ್ ರಾಜ್ ವಿರುದ್ದದ ದೂರಿನ ವರದಿ ಮಾತ್ರ ತಯಾರಾಗದೇ ಉಳಿದಿತ್ತು.

ಕಿಮ್ಮನೆ ರತ್ನಾಕರ್, ಅನಿಲ್ ರಾಜ್ ವಿರುದ್ದ ದೂರಿನ ವರದಿ ತಯಾರು ಮಾಡಿ, ಸದನದ ಮುಂದೆ ಮಂಡಿಸಿದರು. ಸದನದ ಮುಂದೆ ಪುನರ್ವಿಮರ್ಶೆಗಾಗಿ ಮನವಿ ಬಂದಾಗ, ಒಕ್ಕೊರಳಿನಿಂದ ಮನವಿಯನ್ನು ತಿರಸ್ಕರಿಸಲಾಯಿತು. ಬಿಜೆಪಿಯ ಸುರೇಶ್ ಕುಮಾರ್ ಮಾತ್ರ ಇದರ ವಿರುದ್ದ ಧ್ವನಿ ಎತ್ತಿದರೆ, ಆರೋಗ್ಯ ಸಚಿವ ರಮೇಶ್ ಕುಮಾರ್, ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡಿದರುಮನವಿ ತಿರಸ್ಕಾರವಾದ ತಕ್ಷಣ, ದಿಕ್ಸೂಚಿಯಂತೆ, ಸಚಿವ ಕೆ ಜೆ ಜಾರ್ಜ್, ಟಿವಿ9 ಮತ್ತು ಜಗದೀಶ್ ಶೆಟ್ಟರ್ ವಿರುದ್ದ ಹಕ್ಕುಚ್ಯುತಿ ಮಂಡಿಸಿಯೇ ಬಿಟ್ಟರು.

ನನ್ನ ಪತ್ರಿಕೋದ್ಯಮ ಜೀವನದಲ್ಲಿ, ಕೋಳೀವಾಡ್ ರವರು, ನಾನು ನೋಡುತ್ತಿರುವ ಏಳನೇ ಸಭಾಧ್ಯಕ್ಷರು. ಹಿಂದೆಂದೂ, ಪತ್ರಕರ್ತರು ತಿರುಗಿ ಬೀಳುವುದು ಹೋಗಲಿ, ಸಭಾಧ್ಯಕ್ಷರ ಹಿಂದೆ ಮಾತನಾಡಲೂ ಹಿಂಜರಿಯುತ್ತಿದ್ದೆವು. ಯಾಕೋ ಏನೋ, ಕೋಳಿವಾಡರ ಜೊತೆ ವಾಗ್ವಾದಕ್ಕೇ ಎರಡು ಸಲ ಇಳಿದಿದ್ದರು.

ಕೋಳೀವಾಡರು ಸಭಾಧ್ಯಕ್ಷರಾದ ಸ್ವಲ್ಪದಿನದಲ್ಲೇ, ವಿಧಾನಮಂಡಳದ ನೌಕರರ ಗೃಹ ಸಹಕಾರಿ ಸಂಘವು, ಅವರ ಮಕ್ಕಳಿಗೆ ನಿವೇಶನಗಳನ್ನು ಮಂಜೂರು ಮಾಡಿತು. ಇದನ್ನು ಪ್ರಶ್ನಿಸಿದ ಪತ್ರಕರ್ತರ ಮೇಲೆ ಕೂಗಾಡಿದ ಕೋಳೀವಾಡರು, ಆ ಥರ ನಿವೇಶನ ತೆಗೆದುಕೊಳ್ಳುವುದರಲ್ಲಿ ತಪ್ಪೇನಿಲ್ಲ ಅಂತ ವಾದಿಸಿದರು. ಆದರೆ, ವಿಧಾನಸೌಧದ ವಜ್ರಮಹೋತ್ಸವಕ್ಕೆ 26 ಕೋಟಿ ರೂಪಾಯಿ ಖರ್ಚು ಮಾಡಲು ಹೊರಟಾಗ, ಪತ್ರಕರ್ತರು ಕೋಳೀವಾಡರ ಬಾಯಿ ಮುಚ್ಚಿಸಿದ್ದರು. ಮುಖ್ಯಮಂತ್ರಿಗಳು ಕೂಡ, ಬರೀ 10 ಕೋಟಿ ರೂಪಾಯಿ ಕೊಟ್ಟು ಸುಮ್ಮನಾದರು.

ಈ ವಿಷಯವನ್ನು ಇಲ್ಲಿಗೇ ನಿಲ್ಲಿಸುತ್ತೇನೆ.

ಪತ್ರಕರ್ತರನ್ನು ಹದ್ದುಬಸ್ತಿನಲ್ಲಿಡುವ ಪ್ರಯತ್ನವೇನೂ ಹೊಸದಲ್ಲ. ಹೋದ ವಿಧಾನ ಮಂಡಲದ ಅಧಿವೇಶನದಲ್ಲಿ, ಪಕ್ಷಾತೀತವಾಗಿ ಸದಸ್ಯರು ಪತ್ರಕರ್ತರ ಮೇಲೆ ಹರಿಹಾಯ್ದಿದ್ದರು. ಪತ್ರಕರ್ತರು, ರಾಜಕಾರಣಿಗಳ ಒಳ್ಳೇಕೆಲಸಗಳನ್ನು ಮಾತ್ರ ವರದಿ ಮಾಡಬೇಕೆಂದೂ ಆಗ್ರಹಿಸಿದರು. ಪತ್ರಕರ್ತರ ನಿಯಂತ್ರಣಕ್ಕೆ ಸಮಿತಿ ಮಾಡಬೇಕೆಂಬುದೂ ಒಂದು ಬೇಡಿಕೆಯಾಗಿತ್ತು.

ರವಿ ಬೆಳೆಗೆರೆಯ ಪ್ರಕರಣವಾದ ಮೇಲೆ, ನಾನು ಸುರೇಶ್ ಕುಮಾರ್ ಮತ್ತು ಕಿಮ್ಮನೆ ರತ್ನಾಕರ್ ರವರನ್ನು ಭೇಟಿ ಮಾಡಿದೆ. ಅವರ ಜೊತೆ ಮಾತನಾಡಿದ ವಿವರಗಳನ್ನು ತಡೆಹಿಡಿದಿದ್ದೇನೆ. ಇಬ್ಬರೂ ನನ್ನ ಪ್ರಕಾರ ಸಂಭಾವಿತರು. ನಾನು ಅವರಿಗೆ ಹೇಳಿದಿಷ್ಟೆ: ಈಗಿನ ವಿಧಾನ ಸಭೆಯಲ್ಲಿ, ಶೇ 10-15 ರಷ್ಟು ಸದಸ್ಯರನ್ನು ಹೊರತುಪಡಿಸಿ, ನಾವು ಇನ್ಯಾರಿಂದಲೂ, ಯಾವುದೇ ಒಳ್ಳೇ ಕೆಲಸ ಬಯಸಲಾಗುವುದಿಲ್ಲ. ವಿಧಾನಸಭೆಗೆ ಚುನಾಯಿತರಾಗುವವರ ಗುಣಮಟ್ಟ, ದಿನೇ ದಿನೇ ಇಳಿಯುತ್ತಿದೆ. ವಿಧಾನ ಪರಿಷತ್ ಸಹ ಇದಕ್ಕೆ ಹೊರತಾಗಿಲ್ಲ.

ವಿಧಾನಮಂಡಲದ ವರದಿಗಾರಿಕೆಯ ಶುರುವಿನಲ್ಲಿ, ಕೆಲವು ನಾಯಕರ ಸಹವಾಸ ನನಗೆ ಇಷ್ಟವಾಗುತ್ತಿತ್ತು. ಉತ್ತಮ ವಾಗ್ಮಿಗಳೂ ಮತ್ತು ಬದ್ದತೆಯಿದ್ದ ನಾಯಕರುಗಳು. ಎಲ್ಲಾ 224 ಜನರೂ ಉತ್ತಮವಾಗಿದ್ದರು ಅಂತ ಹೇಳೋಕಾಗದಿದ್ದರೂ, ಜ್ಙಾನ,ವಾಕ್ಚತುರತೆ ಮತ್ತು ಬದ್ದತೆಗೆ ಮಾನ್ಯತೆ ಸಿಗುತ್ತಿತ್ತು.

ಘೋರ್ಪಡೆಯವರು ಪಂಚಾಯತ್ ರಾಜ್ ಮಂತ್ರಿಗಳಾಗಿದ್ದಾಗ, ಕಾಂಗ್ರೆಸ್ಸಿಗರೇ ಆದ ಆತ್ಮಾನಂದರವರು ಒಂದು ಪ್ರಶ್ನೆಯನ್ನು ಕೇಳಿದರು. ಜಿಲ್ಲಾ ಮತ್ತು ಗ್ರಾಮ ಪಂಚಾಯತ್ ಗಳಲ್ಲಿ, ಎಂಎಲ್ಲೆ ಗಳಿಗೆ ಎಷ್ಟು ಹಣವನ್ನು ಮುಡುಪಾಗಿಟ್ಟಿದ್ದಾರೆ ಎಂದು. ಘೋರ್ಪಡೆಯವರು ಇಟ್ಟಿಲ್ಲ ಎಂದು ಹೇಳಿ ತಣ್ಣಗೆ ಕುಳಿತರು.

ಪಕ್ಷಾತೀತವಾಗಿ, ಹಿಂದಿನ ಸಾಲಿನ ಸದಸ್ಯರು ಇಡಲೇ ಬೇಕು ಎಂದು ಆಗ್ರಹಿಸಲು ಶುರುಮಾಡಿದರು. ಅದು ಗಲಾಟೆಯಾಗಿ ಪರಿವರ್ತನೆಯಾಯಿತು. ಸಭಾಧ್ಯಕ್ಷರಾಗಿದ್ದ ಎಂ ವಿ ವೆಂಕಟಪ್ಪನವರು, ಒಂದು ಸಭೆ ಕರೆಯುತ್ತೇನೆ ಅಂತ ಆಶ್ವಾಸನೆ ನೀಡಿ ಮುಗಿಸಿಬಿಡಿ ಅಂತ ಕೇಳಿಕೊಂಡರೂ, ಘೋರ್ಪಡೆಯವರು ಜಗ್ಗಲಿಲ್ಲ. `ನನಗೆ ಸುಳ್ಳು ಆಶ್ವಾಸನೆ ನೀಡೋ ಅಭ್ಯಾಸವಿಲ್ಲ. ಪಂಚಾಯ್ತಿಯಲ್ಲಿ ಕೆಲಸ ಮಾಡಬೇಕಾದವರು, ಅಲ್ಲಿ ಚುನಾವಣೆಗೆ ನಿಂತುಕೊಳ್ಳಲಿ. ಇಲ್ಲಿಗೆ ಬರುವುದು ಬೇಡ,’ ಅಂದು ಮುಗುಮ್ಮಾಗಿ ಕುಳಿತರು.

ಮುಖ್ಯಮಂತ್ರಿ ಎಸ್ ಎಂ ಕೃಷ್ಣರವರಿಂದ ಹಿಡಿದು, ಎಲ್ಲಾ ಹಿರಿಯ ಮಂತ್ರಿಗಳು ಮತ್ತು ಸದಸ್ಯರು ಮೌನವಾಗಿ ಕುಳಿತು, ಘೋರ್ಪಡೆಯವರಿಗೆ ಬೆಂಬಲ ಸೂಚಿಸಿದರು. ಬದ್ದತೆಯಿದ್ದ ಹಿಡಿಯಷ್ಟು ಸದಸ್ಯರು, ಇಡೀ ಸದನವನ್ನು ಮೌನದಲ್ಲೇ ಸೋಲಿಸಿದ್ದರು.

ಆದರೆ, ಮುಂದಿನ ಚುನಾವಣೆಯಲ್ಲೇ ಬದಲಾವಣೆ ಬಂದಿತ್ತು. 2004 ರ ಸಮ್ಮಿಶ್ರ ಸರ್ಕಾರದಲ್ಲಿ, ಬಿಜೆಪಿಯ ಗಾಲಿ ಜನಾರ್ಧನ ರೆಡ್ಡಿ, ವಿಧಾನ ಪರಿಶತ್ ನಲ್ಲಿ ಎಂ ಪಿ ಪ್ರಕಾಶ್ ರನ್ನು, ` ಈ ಶರಣನೊಬ್ಬ ಗೋಮುಖ ವ್ಯಾಗ್ರ’, ಎಂದು ಹೇಳಿದಾಗ, ಯಾರೂ ಅವರ ನೆರವಿಗೆ ಬರಲಿಲ್ಲ. ಗಣಿ ಧಣಿಗಳು, ರಿಯಲ್ ಎಸ್ಟೇಟ್ ಧಣಿಗಳು ಮತ್ತು ಇತರ ವ್ಯಾಪಾರಿಗಳು ಸದನಗಳನ್ನು ಆಕ್ರಮಿಸಿಕೊಂಡಾಗಿತ್ತು.

ಈಗೆಲ್ಲ, ವಿಧಾನಸಭೆಯ ಮೊಗಸಾಲೆಗಳಲ್ಲಿ ಚರ್ಚೆಯಾಗುವ ವಿಷಯವೆಂದರೆ, ಮುಂದಿನ ಚುನಾವಣೆಗೆ ಎಷ್ಟು ಖರ್ಚು ಮಾಡಬೇಕಾಗುತ್ತದೆ, ವಿರೋಧ ಪಕ್ಷದವರು ಎಷ್ಟು ಖರ್ಚು ಮಾಡಲು ತಯಾರಿದ್ದಾರೆ ಅನ್ನೋದೇ ಜಾಸ್ತಿ. ಅದನ್ನು ಬಿಟ್ಟರೆ, ಯಾವ ವಿಷಯದಿಂದ ಸಭೆಯಲ್ಲಿ ಗಲಭೇಯಾಗುತ್ತದೆ, ಇಂದು ಎಷ್ಟು ಹೊತ್ತಿಗೆ ಕಲಾಪಗಳು ಮುಗಿಯುತ್ತದೆ ಅನ್ನೋದು ಇನ್ನೊಂದು.

ವಿಧಾನ ಸಭೆಗಳ ಒಳಗಡೆಯ ಚರ್ಚೆಗಳೂ ಕೆಸರೆರೆಚಾಟ, ಕೂಗಾಟಗಳಿಗಿಂತ ಹೆಚ್ಚೇನೂ ನೆಡೆಯೋದಿಲ್ಲ. ವಿರೋಧ ಪಕ್ಷಗಳೂ ಮೊನಚು ಕಳೆದುಕೊಂಡು, ಮಂಕಾಗಿ ಕಾಣುತ್ತವೆ. ಯಾಕೋ, ಹಳೇ ನಾಯಕರುಗಳ ಮುಖ ಮುಂದೆ ಬಂದಂತಾಗಿ ಮನಸ್ಸಿಗೆ ಪಿಚ್ಚೆನಿಸುತ್ತದೆ.

ಈ ಎರಡು ದಶಕಗಳಲ್ಲಿ, ಪತ್ರಿಕೋದ್ಯಮವೂ ಬಹಳ ಬದಲಾವಣೆ ಕಂಡಿದೆ. ಟೆಲಿವಿಷನ್ ಚಾನಲ್ ಗಳು ನಾಯಿಕೊಡೆಗಳಂತೆ ಹುಟ್ಟಿಕೊಂಡು, ಸತ್ತಿವೆ. ಎಷ್ಟು ಹೊಸ ವರದಿಗಾರರು ಮತ್ತಿತರನ್ನು ಹುಟ್ಟುಹಾಕಿತೋ, ಅಷ್ಟೇ ನಿರುದ್ಯೋಗಿಗಳನ್ನೂ ಸೃಷ್ಟಿಸಿದೆ. ರಾಜಕಾರಣಿಗಳು ಸಹ ಟೆಲಿವಿಷನ್ ಚಾನಲ್ ಗಳ ಮಾಲೀಕರಾಗಿ, ಅದರಲ್ಲಿ ಕೆಲಸ ಮಾಡುವ ವರದಿಗಾರರ ಬಾಯಿಯನ್ನು ಭಾಗಶ: ಮುಚ್ಚಿದೆ. ಟಿ ಆರ್ ಪಿ, ಬ್ರೇಕಿಂಗ್ ನ್ಯೂಸ್ ಹುಚ್ಚಿನಲ್ಲಿ, ವಿಷಯ ತಿಳಿದುಕೊಳ್ಳುವ ವ್ಯವಧಾನವೂ ಇಲ್ಲ, ತಿಳುವಳಿಕೆಯೂ ಇಲ್ಲದವರಾಗಿದ್ದಾರೆ.

ಎರಡು ದಶಕಗಳ ನಂತರ, ನನಗೊಂದು ಪ್ರಶ್ನೆ ಎದ್ದಿದೆ: ಈ ಅವಿಶ್ಲೇಷಿತ ಹಕ್ಕು ಮತ್ತು ಆದ್ಯತೆಗಳ ನೆಡುವೆ, ನಮ್ಮ ಸ್ಥಾನ ಯಾವುದು?



ಶುಕ್ರವಾರ, ನವೆಂಬರ್ 17, 2017

ಇಂದಿರಾ ಗಾಂಧಿ


ಹುಲಿ ಸಂತತಿ ರಕ್ಷಿಸಿದ ದುರ್ಗೆ



ಅದ್ಯಾಕೋ ಗೊತ್ತಿಲ್ಲ, ಬಾಲ್ಯದಿಂದಲೂ ನಾನು ಕಾಂಗ್ರೆಸ್ ವಿರೋಧಿಯಾಗಿ ಬೆಳೆದೆ. ಬಹುಷ:, ನಾವು ಶಾಲೆಯಲ್ಲಿದ್ದಾಗ ತುರ್ತುಪರಿಸ್ಥಿತಿ ಇದ್ದದ್ದು, ಆಮೇಲೆ ಇಂದಿರಾ ಗಾಂಧಿ ಚುನಾವಣೆಯಲ್ಲಿ ಸೋತದ್ದು, ಮತ್ತೆ ಅಧಿಕಾರಕ್ಕೆ ಬಂದಿದ್ದೂ ಕಾರಣವಿರಬಹುದು.

ರಾಜಕೀಯ ಅಂದರೆ ಅರ್ಥವಾಗುವ ಮೊದಲೇ, ಇಂದಿರಾ ಗಾಂಧಿ ವಿರೋಧಿಯಂತೆ ಮಾತನಾಡುವುದು ಅಭ್ಯಾಸವಾಗಿ ಹೋಗಿತ್ತು.  ಬಾಂಗ್ಲಾದೇಶದ ಯುದ್ದ ಗೆದ್ದಾಗ, ಅಟಲ್ ಬಿಹಾರಿ ವಾಜಪೇಯಿಯವರು, ಇಂದಿರಾ ಗಾಂಧಿಯನ್ನು ದುರ್ಗೆಗೆ ಹೋಲಿಸಿದ್ದು ತಿಳಿದಾಗ ನನಗೆ ವಾಜಪೇಯಿಯವರ ಬಗ್ಗೆ ನಿರಾಶೆಯಾಗಿತ್ತು. ಆದರೂ, ಅವರನ್ನು ಬಹಳ ಇಷ್ಟಪಡುತ್ತಿದ್ದೆ.

ಬೆಂಗಳೂರು ಸೇರಿ, ಪತ್ರಿಕೋದ್ಯಮ ಶುರು ಮಾಡೋ ಹೊತ್ತಿಗೆ, ಎಲ್ಲರ ಮನೆಯ ದೋಸೆ ತೂತು ಅನ್ನೋದು ಅರ್ಥವಾಗಿತ್ತು. ಅದರ ಮಧ್ಯ, ಕೆಲವು ರಾಜಕಾರಣಿಗಳು ವೈಯಕ್ತಿಕವಾಗಿ ಇಷ್ಟವಾಗೋಕೆ ಶುರುವಾದವು. ಅವರುಗಳ ವೈಯಕ್ತಿಕ ದೌರ್ಬಲ್ಯಗಳನ್ನು ನಿರ್ಲಕ್ಷಿಸಿ, ಸಾಮಾಜಿಕ ಕಳಕಳಿ, ವಿಧ್ವತ್ತು ಮತ್ತು ಕೆಲವು ವಿಷಯಗಳಲ್ಲಿ ಅವರಿಗಿದ್ದ ಜ್ಙಾನ, ವಾಕ್ಚಾತುರ್ಯಗಳನ್ನು ಇಷ್ಟಪಡೋಕೆ ಶುರುಮಾಡಿದೆ. ಎಲ್ಲಾ ಪಕ್ಷಗಳನ್ನೂ ಒಂದೇ ಸಮನಾಗಿ ನೋಡೋದೂ ಅಭ್ಯಾಸವಾಗಿ ಹೋಗಿತ್ತು.

 ವನ್ಯಜೀವಿಗಳ ಬೆನ್ನುಹತ್ತಿ ಹೋದಾಗ ಕೆಲವು ಸತ್ಯಗಳು ಅರ್ಥವಾಗತೊಡಗಿದವು. ಕುದುರೆಮುಖ ಗಣಿಗಾರಿಕೆ ವಿರುದ್ದ ತಿರುಗಿ ಬಿದ್ದಾಗ ಸಹಾಯಕ್ಕೆ ಬಂದದ್ದು ಕಾನೂನು ಮಾತ್ರ. ಜಾಗತೀಕರಣ ಮತ್ತು ವ್ಯಾಪಾರಿಕರಣದ ಗುಂಗಿಗೆ ಬಿದ್ದ ದೇಶದಲ್ಲಿ, ಸಾರ್ವಜನಿಕ ವಲಯದ ಈ ಉದ್ದಿಮೆಯ ವಿರುದ್ದ ಹೋರಾಡೋದು ಸುಲಭದ ಮಾತಾಗಿರಲಿಲ್ಲ.

ಹೆಚ್ಚಾಗಿ, ವನ್ಯಜೀವಿ ಸಂರಕ್ಷಣಾ ಕಾಯ್ದೆ ಮತ್ತು ಪರಿಸರ ಸಂರಕ್ಷಣಾ ಕಾಯ್ದೆಯ ಮೊರೆಹೋಗಬೇಕಾಯ್ತು. ಕಾನೂನು ಹೋರಾಟದ ಮುಂಚೂಣಿಯಲ್ಲಿದ್ದ ಪ್ರವೀಣ್ ಭಾರ್ಗವ್, ಈ ಕಾಯ್ದೆಗಳ ಯಾವುದೇ ಪರಿಚ್ಚೇದಗಳನ್ನು ನಿರರ್ಗಳವಾಗಿ ಗಿಣಿ ಪಾಠದಂತೆ ಹೇಳುತ್ತಿದ್ದರು. ನಾನು ಬಾಯಿ ಬಿಟ್ಟುಕೊಂಡು ಕೇಳುತ್ತಿದ್ದೆ. ಈ ಎರಡೂ ಕಾಯ್ದೆಗಳು ಅನುಷ್ಟಾನವಾಗಿದ್ದು, ಕ್ರಮವಾಗಿ 1972 ಮತ್ತು 1980 ರಲ್ಲಿ. ಆದನ್ನು ತಂದವರೇ ಪ್ರಧಾನ ಮಂತ್ರಿ ಇಂದಿರಾ ಗಾಂಧಿ.

ಮೊದಮೊದಲಿಗೆ ಉದಾಸೀನ ಮಾಡಿದ್ದೆ. ಕಾಂಗ್ರೆಸ್ ಪಕ್ಷ ಅನ್ನೋದು ಇಂದಿರಾ ಗಾಂಧಿಯ ಕಪಿ ಮುಷ್ಟಿಯಲ್ಲಿತ್ತು. ಯಾವ ಕಾಯ್ದೆ ತಂದರೂ, ಎಲ್ಲರೂ ತಲೆ ತಗ್ಗಿಸಿ ಹೆಬ್ಬೆಟ್ಟು ಒತ್ತುತ್ತಿದ್ದರು ಅನ್ನೋ ಭಾವನೆ ಇತ್ತು. ನಿಧಾನವಾಗಿ ಕಾಂಗ್ರೆಸ್ ಪಕ್ಷ ಹಸು ಮತ್ತು ಹಾಲು ಕುಡಿಯುವ ಕರುವಿನ ಗುರುತಿನಿಂದ, ಹಸ್ತದ ಗುರುತಿಗೆ ಬಂದ ಬೆಳವಣಿಗೆಗಳನ್ನು ಗಮನಿಸಿದಾಗ, ಇಂದಿರಾ ಗಾಂಧಿಯ ಹಾದಿ ಅಷ್ಟೊಂದು ಸರಳವಾಗಿರಲಿಲ್ಲ ಅನ್ನೋದು ಅರ್ಥವಾಗಿತ್ತು. ಕಾಂಗ್ರೆಸ್ ಪಕ್ಷದಲ್ಲಿ ಅನೇಕ ಬಾರಿ ಭುಗಿಲೆದ್ದ ಬಂಡಾಯ, ವಿಭಜನೆ, ವೈಯಕ್ತಿಕ ಸೋಲುಗಳ ನೆಡುವೆಯೂ, ಇಂದಿರಾ ಗಾಂಧಿ ಪ್ರಶ್ನಾತೀತ ನಾಯಕಿಯಾಗಿ ಹೊರಹೊಮ್ಮಿದ್ದರು.

ಇವೆಲ್ಲದರ ನೆಡುವೆ, ಇಂತಹ ಎರಡು ಕಾನೂನುಗಳನ್ನು ಇಂದಿರಾ ಗಾಂಧಿ ಹೇಗೆ ಮತ್ತು ಏಕೆ ಜಾರಿ ಮಾಡಿದರು ಅನ್ನೋದು ಯಕ್ಷಪ್ರಶ್ನೆಯಾಗೇ ಉಳಿದಿತ್ತು. ಏಕೆಂದರೆ, ಈ ಕಾಯ್ದೆಗಳನ್ನು ಓದಿ, ಅರ್ಥಮಾಡಿಕೊಂಡವರಿಗೆ ಮಾತ್ರ ಅವುಗಳ ಆಳ ಮತ್ತು ಅಗಲ ಅರ್ಥವಾಗುವುದು. ಸೃಷ್ಟಿ, ಪ್ರಕೃತಿ, ಪರಿಸರ ಮತ್ತು ಸಮತೋಲನದ ಬಗ್ಗೆ ಕಾಳಜಿ ಮತ್ತು ತಿಳುವಳಿಕೆ ಇಲ್ಲದವರು ಮತ್ತು ಅವುಗಳ ಬಗ್ಗೆ ವೈಜ್ಞಾನಿಕ ವಿಶ್ಲೇಷಣೆ ಮಾಡದವರು, ಈ ಕಾಯ್ದೆಯನ್ನು ತರುವುದಿರಲಿ, ಅರ್ಥಮಾಡಿಕೊಳ್ಳಲೂ ಸಾಧ್ಯವಿಲ್ಲ.
ಇಂದಿರಾ ಗಾಂಧಿಯ ವೈಯಕ್ತಿಕ ಜೀವನ, ಅದರಲ್ಲೂ ಅವರು ಪ್ರಕೃತಿಯ ಬಗ್ಗೆ ಯಾತಕ್ಕಾಗಿ ಅಷ್ಟೊಂದು ಕಾಳಜಿ ವಹಿಸಿದ್ದರು ಅನ್ನೋದರ ಬಗ್ಗೆ ಯಾವುದೇ ಮಾಹಿತಿ ಸಿಗಲಿಲ್ಲ. ಕೆಲವು  ಪಠ್ಯಪುಸ್ತಕಗಳ ಜಾಳು ಜಾಳಾದ ವಿವರಗಳಂತೆ, ಆಕೆ ನೆಹರೂ ಪುತ್ರಿ, ಪರಿಸರದ ಬಗ್ಗೆ ಕಾಳಜಿ ಇದ್ದವರು, ಬಂಗ್ಲಾ ದೇಶದ ವಿಭಜನೆಗಾಗಿ ಪಾಕಿಸ್ತಾನದ ಸೇನೆಯನ್ನುಸೆದೆಬಡಿದವರು,  ಸರ್ವಾಧಿಕಾರಿಯಂತೆ ತುರ್ತುಪರಿಸ್ಥಿತಿ ಹೇರಿದವರು, ಇಂತಹ ವಿವರಗಳು ಮಾತ್ರ ಸಿಗುತ್ತಿದ್ದವು. ಆ ಸಂದರ್ಭದಲ್ಲೇ ಕೈಗೆ ಸಿಕ್ಕಿದ್ದು, ನಮ್ಮ ಜಿಲ್ಲೆಯವರೇ ಆದ, ಕೇಂದ್ರದ ಮಾಜಿ ಪರಿಸರ ಮತ್ತು ಅರಣ್ಯ ಮಂತ್ರಿ ಜೈರಾಂ ರಮೇಶ್ ಬರೆದ: `ಇಂದಿರಾ ಗಾಂಧಿ, ಎ ಲೈಫ್ ಇನ್ ನೇಚರ್’.

ಇಂದಿರಾ ಗಾಂಧಿಯ ಜೀವನದಲ್ಲಿ ಬರೆದ, ಬಂದ ಪತ್ರಗಳನ್ನೇ ಪ್ರಧಾನವಾಗಿಟ್ಟುಕೊಂಡು ಬರೆದ ಈ ಪುಸ್ತಕ ಕಥೆಯಂತೆ ಓದಿಸಿಕೊಂಡು ಹೋಗುವುದಿಲ್ಲ. ವಿವಿಧ ವರ್ಷಗಳ ಘಟನೆಗಳು ಹಿಂದೆ, ಮುಂದೆ ಓಡಾಡುತ್ತಿರುತ್ತವೆ. ಪುಸ್ತಕದ ಪೂರ್ತಿ ಇಂದಿರಾ ಗಾಂದಿಯವರ ಜೀವನದ ಪತ್ರ ವ್ಯವಹಾರಗಳ ಸುತ್ತ ಕೇಂದ್ರೀಕೃತವಾಗಿದೆ. ಆದರೆ, ಇಂದಿರಾ ಪ್ರಿಯದರ್ಶಿನಿ ಎಂಬ ಹುಡುಗಿ, ಇಂದಿರಾ ಗಾಂಧಿಯಾಗಿ ರೂಪುಗೊಂಡ ವಿವರಗಳು ವಿಸ್ತಾರವಾಗಿ ಅರ್ಥವಾಗುತ್ತದೆ.

ಅದು ಅಕ್ಟೋಬರ್ 27, 1984…. ಕಾಶ್ಮೀರದ ರಾಜ್ಯಪಾಲರ ಸಲಹೆಯ ವಿರುದ್ದವಾಗಿ, ಇಂದಿರಾ ಗಾಂಧಿ ಕಾಶ್ಮೀರ ಕಣಿವೆಗೆ ತಮ್ಮ ಮೊಮ್ಮಕ್ಕಳನ್ನು ಕರೆದುಕೊಂಡು ಹೊರಟೇಬಿಟ್ಟರು. ಅಂತಾ ರಾಜಕಾರಣವೇನಲ್ಲ. ವಸಂತ ಕಾಲದಲ್ಲಿ ಚಿನಾರ್ ಎಲೆಗಳು ಮೈದುಂಬಿ ರಂಗುರಂಗಾಗಿ ನಿಂತಿವೆ ಅನ್ನುವ ಸುದ್ದಿ ಸಿಕ್ಕಿತ್ತು. ಎಷ್ಟೋ ವರ್ಷಗಳಾಗಿದ್ದವು, ತನ್ನ ತವರೂರಿನಿ ಈ ವೈಭವ ನೋಡದೆ. ಎಷ್ಟೋ ಸಲ ಹೋಗಬೇಕೆಂದರೂ, ಬಿಡುವಿಲ್ಲದ ಕೆಲಸದಿಂದಾಗಿ ಆಗಿರಲಿಲ್ಲ.

ಈ ಸಲ ಮಾತ್ರ, ಹಿಂದು ಮುಂದು ನೋಡದೆ ಕಾಶ್ಮೀರಕ್ಕೆ ಹೋದವರೆ, ಚಿನಾರ್ ಮರಗಳ ಮಧ್ಯೆ ಮನಸಾರೆ ತಿರುಗಾಡಿದರು. ಅಷ್ಟೇ ಅಲ್ಲ, ತಮ್ಮ ಅತ್ಯಂತ ಪ್ರೀತಿಯ ದಿಚಿಗಾಂ ರಾಷ್ಟ್ರೀಯ ಉದ್ಯಾನವನಕ್ಕೂ ಭೇಟಿ ನೀಡಿದರು. ನಾಲ್ಕೇ ದಿನ, ತಮ್ಮ ಅಂಗರಕ್ಷಕನಿಂದಲೇ ಬರ್ಬರವಾಗಿ ಹತ್ಯೆಯಾದರು. ಓದಿ ಮನಸ್ಸಿಗೆ ಪಿಚ್ಚೆನಿಸಿತು.

ಎರಡು ಕಾಯ್ದೆಗಳ ಬಗ್ಗೆ ಬಹಳ ಕುತೂಹಲವಿತ್ತು. 1971-72, ಇಂದಿರಾ ಗಾಂಧಿ ಮಹತ್ತರ ಹೆಜ್ಜೆಗಳನ್ನು ಇಡುತ್ತಿದ್ದರು. ಬ್ಯಾಂಕುಗಳ ರಾಷ್ಟ್ರೀಕರಣ ಮಾಡಿದ ಬೆನ್ನಲ್ಲೇ, ಸೋವಿಯತ್ ದೇಶದ ಜೊತೆ ದ್ವಿಪಕ್ಷೀಯ ಸಂಬಂಧದ ವಿಷಯ ಸಹಿ ಹಾಕುವುದು, ಬಾಂಗ್ಲಾ ದೇಶ ವಿಮೋಚನೆಯಂತ ವಿಷಯಗಳಲ್ಲಿ ಮುಳುಗಿ ಹೋಗಿದ್ದರು. ಇದೇ ಸಮಯದಲ್ಲಿ, ನಕ್ಸಲ್ ಬಾರಿಯಲ್ಲಿ ಚಳುವಳಿಯೂ ಹುಟ್ಟಿಕೊಂಡಿತು. ಈ ವಿಷಯಗಳಲ್ಲಿ ಇಂದಿರಾ ಗಾಂಧಿಗೆ ಮಾರ್ಗದರ್ಶನ ನೀಡಲು ಅವರ ಕಾರ್ಯದರ್ಶಿ ಪಿ ಎನ್ ಹಕ್ಸರ್ ಇದ್ದರು.

ಆದರೆ, ಕಾರ್ಯದರ್ಶಿಯ ಸಹಾಯವಿಲ್ಲದೆ ಇಂದಿರಾ ಗಾಂಧಿಯ ಮೆದುಳು ಇನ್ನೊಂದು ದಿಕ್ಕಿನಲ್ಲಿ ಕೆಲಸ ಮಾಡುತ್ತಿತ್ತು. ಸ್ವಲ್ಪ ದಿನಗಳಲ್ಲೇ, ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ನು ಜಾರಿಗೆ ತಂದೇ ಬಿಟ್ಟರು.

ಜೂನ್ 1980 ರಲ್ಲಿ, ಇಂದಿರಾ ಗಾಂಧಿ ತಮ್ಮ ಎರಡನೇ ಮಗ ಸಂಜಯ ಗಾಂಧಿಯವರನ್ನು ಕಳೆದುಕೊಂಡಿದ್ದರು. ಆಗಸ್ಟ್ ತಿಂಗಳಲ್ಲಿ ಖ್ಯಾತ ಪಕ್ಷಿತಜ್ಞ ಸಲೀಂ ಆಲಿ ಸಂತಾಪ ಸೂಚಕ ಪತ್ರವನ್ನು ಬರೆದಾಗ, ಅದಕ್ಕೆ ಉತ್ತರಿಸುತ್ತಾ, `ನಾನು ಪರಿಸರದ ಬಗ್ಗೆಯ ಬಹಳಷ್ಟು ವಿಷಯಗಳನ್ನು ನಿಮಗೆ ಕಳುಹಿಸುತ್ತಿರುವುದನ್ನು, ನೀವು ಗಮನಿಸಿರುತ್ತೀರಿ.ಇದು ನಿಮಗೆ ದೊಡ್ಡ ಹೊರೆಯಾಗುವುದಿಲ್ಲ ಎಂದು ತಿಳಿಯುತ್ತೇನೆ ಮತ್ತು ನೀವು ಎಲ್ಲರಿಗೂ ಸಮಾಧಾನಕರ ಪರಿಹಾರ ಸೂಚಿಸುತ್ತೀರಿ ಎಂದು ನಂಬಿರುತ್ತೇನೆ. ಯಾಕಂದರೆ, ಪ್ರತೀ ರಾಜ್ಯಗಳೂ ತಮ್ಮ ಬೇಡಿಕೆಗಳ ಬಗ್ಗೆ ಹಠವಾದಿ ದೋರಣೆಯನ್ನು ತೆಳೆದಿರುತ್ತವೆ.’
ಮುಂದಿನ ಕೆಲವೇ ದಿನಗಳಲ್ಲಿ, ಪರಿಸರ ಸಂರಕ್ಷಣೆ ಕಾಯ್ದೆ ನಮ್ಮ ದೇಶದಲ್ಲಿ ಜಾರಿಯಾಯ್ತು. ಈ ಪರಿಯ ಕಳಕಳಿಯನ್ನು ಊಹಿಸಲೂ ಕಷ್ಟವೇ ಸರಿ.

ನೆಹರೂ ಬಗ್ಗೆ ಯಾವುದೇ ಆಭಿಪ್ರಾಯವಿದ್ದರೂ ಸರಿ. ನನ್ನ ಪ್ರಕಾರ, ದೇಶಕ್ಕೆ ಅವರ ಅತ್ಯುತ್ತಮ ಕೊಡುಗೆ ಇಂದಿರಾ ಗಾಂಧಿ. ಆಕೆಗೆ 13 ವರ್ಷವಿದ್ದಾಗ, ಸ್ವೀಡನ್ನಿನ ಮೌರಿಸ್ ಮೇಟರ್ಲಿಂಕ್ ಬರೆದ, ಜೇನ್ನೊಣದ ಜೀವನ ಪುಸ್ತಕವನ್ನು ಕೊಡುಗೆಯಾಗಿ ಕೊಟ್ಟರು. ಅಲ್ಲಿಂದ ಶುರುವಾದ ಪ್ರಕೃತಿಯ ಜೊತೆಯ ಕೊಂಡಿ, ಕೊನೆ ಉಸಿರಿರುವವರೆಗೂ ಉಳಿದುಕೊಂಡಿತು.
ಮೊದಲ ಬಾರಿಗೆ ಇಂದಿರಾ ಹುಲಿಯನ್ನು ನೋಡಿದ್ದು 1952 ರಲ್ಲಿ -- ಜೋಗ್ ಜಲಪಾತ ನೋಡಲು ಹೋದಾಗ. ದೆಹಲಿಯ ತೀನ್ ಮೂರ್ತಿ ಭವನದಲ್ಲಿ ಒಂದು ಸಣ್ಣ ಮೃಗಾಲಯವನ್ನಿಟ್ಟುಕೊಂಡು, ಅದರಲ್ಲಿ ಮೂರು ಹುಲಿಮರಿಗಳನ್ನು ಸಾಕಿಕೊಂಡಿದ್ದರೂ, ಕಾಡಿನಲ್ಲಿ ಕಂಡ ಹುಲಿಯ ಬಗ್ಗೆ ಇಂದಿರಾ ಗಾಂಧಿ ಅಭಿಮಾನದಿಂದ ವಿವರಿಸುತ್ತಾರೆ.

ಪರಿಸರ ಸಂರಕ್ಷಣೆ ಕಾಯ್ದೆ ತಂದಷ್ಟು ಸುಲಭವಾಗಿರಲಿಲ್ಲ. ಸ್ವಾತಂತ್ರ್ಯ ಬಂದ ಹೊಸತರಲ್ಲಿ, ಜನಗಳು, ಮಹಾರಾಜರು, ಹೊಸದಾಗಿ ಚುನಾಯಿತರಾದ ಸದಸ್ಯರುಗಳಿಗೆ ಅವರದೇ ಆದ ಅಭಿಪ್ರಾಯಗಳಿದ್ದವು. ಭರತ್ ಪುರ ಪಕ್ಷಿಧಾಮಕ್ಕೆ ಕಂಟಕ 1953 ರಲ್ಲೇ, ಅಲ್ಲಿನ ಮಹಾರಾಜನಿಂದ ಶುರುವಾಗಿತ್ತು. ಆಗ ನೆಹರೂ ಪ್ರಧಾನಿಯಾಗಿದ್ದರು. ಅದನ್ನು ರಾಷ್ಟ್ರೀಯ ಉದ್ಯಾನವನವನ್ನಾಗಿ ಘೋಷಿಸಲು, ಇಂದಿರಾ ಗಾಂಧಿ 1982 ರ ವರೆಗೆ ಕಾಯಬೇಕಾಯ್ತು. ಇತ್ತೀಚೆಗೆ ಹುಲಿ ಸಂತತಿ ಕಳ್ಳ ಬೇಟೆಯಿಂದ ನಾಶವಾದ ಸರಿಸ್ಕಾ ಕಾಡನ್ನು ಸಂರಕ್ಷಿಸಲು ಕೂಡ ಇಂದಿರಾ ಗಾಂಧಿ ತುಂಬಾ ಹೆಣಗಬೇಕಾಗಿತ್ತು.

ಪರಿಸರ ಮತ್ತು ಆರ್ಥಿಕೆ ಬೆಳವಣಿಗೆ ಬಗ್ಗೆ ಇಂದಿರಾ ಗಾಂಧಿಗಿದ್ದ ಸಮಚಿತ್ತವನ್ನು ಈ ಪುಸ್ತಕ ಬಹಳ ಚೆನ್ನಾಗಿ ವಿಶ್ಲೇಷಿಸುತ್ತದೆ. ನಮ್ಮ ಜನಸಂಖ್ಯೆ 50 ಕೋಟಿಗೆ ಹತ್ತಿರವಾಗುತ್ತಿದ್ದಾಗಲೇ, ಇಂದಿರಾ ಗಾಂದಿ ಕುಟುಂಬ ಯೋಜನೆ ಜಾರಿಗೊಳಿಸಲು ಆರಂಭಿಸಿದರು. ಅದು ಅಂತಾ ಯಶಸ್ಸೇನೂ ಕೊಡದಿದ್ದರೂ, ಆ ಥರದ ಚಿಂತನೆ ಈಗಿನ ರಾಜಕಾರಣಿಗಳ ಹತ್ತಿರವೂ ಸುಳಿದಿಲ್ಲ. ನಮ್ಮ ಜನಸಂಖ್ಯೆ 125 ಕೋಟಿ ದಾಟಿ, ಮುನ್ನುಗ್ಗುತ್ತಿದೆ. ಯಾವುದೇ ಪಕ್ಷದ ರಾಜಕಾರಣಿಯೂ ಆ ವಿಷಯ ಮಾತನಾಡುತ್ತಿಲ್ಲ. ಪ್ರಾಕೃತಿಕ ಸಂಪತ್ತಿಗೆ ಅನುಗುಣವಾಗಿ ಜನಸಂಖ್ಯೆ ಇದ್ದರೆ ಮಾತ್ರ ಆರ್ಥಿಕ ಸಧೃಡತೆ ಸಾಧ್ಯ ಅನ್ನೋ ಸತ್ಯವನ್ನು, ಜಿಡಿಪಿಯ ಸಂಖ್ಯಾಶಾಸ್ತ್ರದ ಮಿಥ್ಯದ ಕನಸಿನ ಕೆಳಗೆ ಗುಡಿಸುತ್ತಾರೆ. ಯಾಕಂದರೆ, ಜನಸಂಖ್ಯೆ ಎನ್ನುವುದು ಇವರಿಗೆ ಮತ ಸಂಪತ್ತು.

 ಈ ಪುಸ್ತಕವನ್ನೋದುವಾಗ ನನಗನ್ನಿಸಿದ್ದೆನೆಂದರೆ, ಕಾಂಗ್ರೆಸ್ಸಿಗರೂ ಸೇರಿದಂತೆ ಇಂದಿರಾ ಗಾಂಧಿಯನ್ನು ಸಂಪೂರ್ಣವಾಗಿ ಯಾರೂ ಅರ್ಥಮಾಡಿಕೊಳ್ಳಲು ಸಾಧ್ಯವಾಗಿರಲಿಲ್ಲ. ಈ ಪುಸ್ತಕ, ಮಿಥ್ಯಾರೋಪಕ್ಕೊಳಗಾದ ನಾಯಕಿಯೊಬ್ಬಳನ್ನು ಅರ್ಥಮಾಡಿಕೊಳ್ಳಲು ಸಹಕಾರಿಯಾಗುತ್ತದೆ ಮತ್ತು ಅದಕ್ಕಾಗಿ, ಜೈರಾಂ ರಮೇಶರಿಗೆ ಧನ್ಯವಾದಗಳನ್ನು ಅರ್ಪಿಸಬೇಕಾಗಿದೆ.

ಆದರೂ, ಈ ಪುಸ್ತಕದಿಂದಾಗಿ, ಜೈರಾಂ ರಮೇಶರ ಬಗ್ಗೆ ಒಂದು ಪ್ರಶ್ನೆ ಉಧ್ಬವಿಸುತ್ತದೆ. ಜೈರಾಂ ರಮೇಶ್ ರವರೇ ಹೇಳುವಂತೆ, ಅವರ ಇಪ್ಪತ್ತಾರು ತಿಂಗಳ ಮಂತ್ರಿಗಿರಿಯಲ್ಲಿ, ಅವರು ತೀವ್ರ ಆರ್ಥಿಕ ಬೆಳವಣಿಗೆಯ ಹರಿಕಾರನಿಂದ, ಆರ್ಥಿಕ ಬೆಳವಣಿಗೆಯು ಪರಿಸರ ಸಮತೋಲನದ ಪರಿಮಿತಿಯಲ್ಲಿರಬೇಕು ಅನ್ನೋ ವ್ಯಾಖ್ಯಾನಕ್ಕೆ ಇಳಿದರು.  ನಮ್ಮ ದೇಶವು, `ಈಗ ಆರ್ಥಿಕ ಬೆಳವಣಿಗೆ ಗಳಿಸಿ, ಮುಂದೆ ಅದಕ್ಕೆ ಬೆಲೆತೆರಬಹುದು,’ ಅನ್ನೋ ಅಂಧ ವಾದವನ್ನು ಒಪ್ಪಲು ಸಾಧ್ಯವೇ ಇಲ್ಲ. ನಮ್ಮ ದೇಶದಲ್ಲಿ ಆಗಲೇ 124 ಕೋಟಿ ಜನರಿದ್ದಾರೆ ಮತ್ತು ಮುಂದಿನ ಐವತ್ತು ವರ್ಷಗಳಲ್ಲಿ, ಇದಕ್ಕೆ ಇನ್ನೂ ಒಂದನೇ ಮೂರರಷ್ಟು ಜನ ಸೇರಿಕೊಳ್ಳಲಿದ್ದಾರೆ.  ಹವಾಮಾನ ಬದಲಾವಣೆ ಒಂದು ವಿನಾಶಕ ಸತ್ಯ. ಅದು ಮುಂಗಾರು ಮಳೆಯ ಚಕ್ರ, ಹಿಮಗಡ್ಡೆಗಳು ಮತ್ತು ಸಮುದ್ರ ಮಟ್ಟವನ್ನೇ ಬದಲಿಸಿದೆ. ಮಾಲಿನ್ಯ ಮತ್ತು ರಾಸಾಯನಿಕ ಕಲುಷಿತಗಳು ಜನರ ಆರೋಗ್ಯದ ಮೇಲೆ ಪರಿಣಾಮ ಬೀರತೊಡಗಿವೆ.

ಇಷ್ಟೆಲ್ಲಾ ಹೇಳಿದ ಜೈರಾಂ ರಮೇಶ್ ರವರೇ, ಇದೇ ಕಾಂಗ್ರೆಸ್ ಸರ್ಕಾರ, ವನ್ಯಜೀವಿಗಳಿಗೆ ಮಾರಕವಾಗುವ ಬುಡಕಟ್ಟು ಜನಾಂಗ ಹಕ್ಕು ಕಾಯ್ದೆಯನ್ನು ಜಾರಿಗೊಳಿಸುವಾಗ, ನೀವೇಕೆ ಮೌನ ವಹಿಸಿದ್ದಿರಿ? ಬುಡಕಟ್ಟು ಜನಾಂಗದವರಿಗೆ ಪುಸರ್ವಸತಿ ಎನ್ನುವುದು ವರವಾಗುತ್ತಿತ್ತು. ಅದರಿಂದ, ವನ್ಯಜೀವಿಗಳೂ ಬದುಕಿ, ಪರಿಸರ ಸಮತೋಲನವೂ ಆಗುತ್ತಿತ್ತು. ಇಂದಿರಾ ಗಾಂಧಿಯವರ ಎಲ್ಲಾ ಚಿಂತನೆಗಳನ್ನು ಅಂದಿನ ಪ್ರಧಾನ ಮಂತ್ರಿ ಮನಮೋಹನ್ ಸಿಂಘ, ಕಾಂಗ್ರೆಸ್ ನಾಯಕರುಗಳಿಗೆ ವಿವರಿಸಿ, ಅವರಿಗೆ ಪರಿಸ್ಥಿತಿ ಅರ್ಥಮಾಡಿಕೊಡುವ ಪ್ರಯತ್ನ ಮಾಡಿದ್ದೀರಾ?.... ನನಗಂತೂ ಗೊತ್ತಿಲ್ಲ.

1943 ರಲ್ಲಿ, ಅಹ್ಮದ್ ನಗರದ ಜೈಲಿನಲ್ಲಿದ್ದ ಇಂದಿರಾ ಗಾಂಧಿ, ಒಂದು ದೊಡ್ಡ ಬೇವಿನ ಮರ ಬಿದ್ದ ಬಗ್ಗೆ ತಮ್ಮ ತಂದೆ ನೆಹರುರವರಿಗೆ ಹೀಗೆ ಪತ್ರ ಬರೆಯುತ್ತಾರೆ.

`The potent bear whose hug
Was feared by all, is now a rug.’

ಯಾಕೋ ಅನ್ನಿಸಿತು… ಇಂದಿರಾ ಗಾಂಧಿ ಅಸ್ಥೆಯಿಂದ ತಂದ ಎರಡು ಕಾನೂನುಗಳ ಸ್ಥಿತಿಯೂ ಹೀಗೇ ಆಗುತ್ತಿದೆ ಅಂತ. ಆದರೆ, ಕೆಲವೆಡೆ ನ್ಯಾಯಾಂಗ ಮಧ್ಯ ಪ್ರವೇಶ ಮಾಡಿದ್ದರಿಂದ, ಅದರ ಮೂಲ ರೂಪಕ್ಕೆ ಧಕ್ಕೆಯಾಗಿಲ್ಲ ಅಷ್ಟೆ.

ಇಂದಿರಾ ಪ್ರಿಯದರ್ಶಿನಿ, ಇಂದಿರಾ ಗಾಂಧಿಯಾಗಿ ರೂಪುಗೊಂಡಿದ್ದು ನೆಹರು ಪುತ್ರಿಯಾದ್ದರಿಂದಲೂ ಅಲ್ಲ, ಫಿರೋಜ್ ಗಾಂಧಿಯ ಪತ್ನಿಯಾದ್ದರಿಂದಲೂ ಅಲ್ಲ. ಅದು ಆಕೆ ಪ್ರಕೃತಿಯ ಜೊತೆ ಬೆಸೆದುಕೊಂಡು ಬೆಳೆದು ಬದುಕಿದ ರೀತಿಯಿಂದಾಗಿ. ಅದನ್ನು ಸಂರಕ್ಷಿಸಲು ಆಕೆಗಿದ್ದ ಕಳಕಳಿ ಮತ್ತು ಅದಕ್ಕಾಗಿ ಆಕೆಗಿದ್ದ ಛಲ. ಆರ್ಥಿಕ ಬೆಳವಣಿಗೆ ಮತ್ತು ಸಂರಕ್ಷಣೆಯ ಸಮತೋಲನ ಕಾಪಾಡುವ ನಿಟ್ಟಿನಲ್ಲಿ ಆಕೆಗಿದ್ದ ವೈಜ್ಞಾನಿಕ ತಿಳುವಳಿಕೆ. ಈ ವಿಷಯದಲ್ಲಿ, ಯಾವುದೇ ಕೀಳು ರಾಜಕೀಯಕ್ಕೆ ಇಳಿಯದೇ, ಎಲ್ಲೂ ಹೊಂದಾಣಿಕೆ ಮಾಡಿಕೊಳ್ಳದೆ ಆಡಳಿತ ನೆಡೆಸಿದ್ದರಿಂದ.

ಇಂದಿರಾ ಗಾಂಧಿಯ ಸರ್ವಾಧಿಕಾರಿ ಧೋರಣೆಯ ಬಗ್ಗೆ ನನಗೆ ಮೊದಲಿಂದಲೂ ವಿರೋಧವಿತ್ತು. ಆದರೆ, 1969 ರಲ್ಲಿ, ತನ್ನ ಗೆಳತಿ


ಡೊರೋತಿ ನೋರ್ಮನ್ ರಿಗೆ ಬರೆದ ಪತ್ರವನ್ನು ನೋಡಿದ ಮೇಲೆ, ನನ್ನ ವಿಚಾರ ಬದಲಾಯಿತು. ಆ ಪತ್ರವನ್ನು ಇಂಗ್ಲಿಷ್ ನಲ್ಲೇ ಓದಿದರೆ ಉತ್ತಮ.

``Need I assure you that I am not closer to the communist or dictatorship of any kind. Unfortunately, the institution of bossism created a clash. Each state boss came to believe that he was the State. Perhaps because I have tried to be accommodating, they all thought I was weak. The last two years have been of tremendous pressure and difficulty. If it had been a question of myself or my position, it would not have mattered. But the manner in which I was pushed around, with a view to finally pushed me out of office, not only split Congress, but weakened it in long run.’’

ಇಂದಿರಾ ಗಾಂಧಿ ಎತ್ತರದ ವ್ಯಕ್ತಿಯಾಗೇ ಉಳಿಯುತ್ತಾರೆ. ಯಾವ ವಿರೋಧವನ್ನೂ ಲಕ್ಷಿಸದೆ, ಮುಂದಿನ ಪೀಳಿಗೆಗೆ ಏನನ್ನು ಉಳಿಸಬೇಕೆನ್ನುವುದನ್ನು, ಪ್ರಪಂಚ ಮಾತನಾಡುವ ಮೊದಲೇ ಮಾಡಿ ತೋರಿಸಿದ್ದರು.

ಈಗ ನಾನೂ ವಾಜಪೇಯಿಯವರ ಮಾತನ್ನು ಒಪ್ಪುತ್ತೇನೆ. ಆಕೆ ದುರ್ಗೆ…. ಹುಲಿಯ ಮೇಲೆ ಸವಾರಿ ಮಾಡಲಿಲ್ಲ. ಬದಲಾಗಿ, ಹುಲಿಗಳನ್ನು ನಮ್ಮ ಮತ್ತು ನಮ್ಮ ಮಕ್ಕಳ ಪೀಳಿಗೆಗೆ ಉಳಿಸಿದಾಕೆ…..

ಈ ಹೆಂಗಸನ್ನು ಎಷ್ಟೋ ವರ್ಷ ದ್ವೇಶಿಸಿದೆ, ನಂತರ ಗೌರವಿಸಿದೆ, ಈಗ ಪ್ರೀತಿಸಲಾರಂಭಿಸಿದೆ…… ಹುಟ್ಟು ಹಬ್ಬದ 

ಶುಭಾಶಯಗಳು ಇಂದಿರಮ್ಮ……





ಮಾಕೋನಹಳ್ಳಿ ವಿನಯ್ ಮಾಧವ. 

ಬುಧವಾರ, ನವೆಂಬರ್ 1, 2017

ಕನ್ನಡಿಗರು


ನನಗಿಷ್ಟವಾದ ಕನ್ನಡಿಗರು.....

2000 ನೇ ಇಸವಿ... ಮುದುವೆಯಾದ ತಕ್ಷಣ ಅಂಬಿಕಾಳನ್ನು ಕರೆದುಕೊಂಡು, ಕುಲು-ಮನಾಲಿಗೆ. ನಾಲ್ಕೈದು ದಿನ ಸುತ್ತಾಡಿದ ಮೇಲೆ, ಹೊರಡುವ ಹಿಂದಿನ ದಿನ ಊರೊಳಗೆ ಸುತ್ತಾಡಲು ಹೋಗಿದ್ದೆವು. ಒಂದು ಅಂಗಡಿಯಲ್ಲಿ ಅಂಬಿಕಾಳಿಗೆ ಬೌಧ್ದರ ಘಂಟೆಯೊಂದು ಇಷ್ಟವಾಯಿತು.

``ಕಿತನೇಕಾ ಹೈ?’’ ಅಂತ ಕೇಳಿದೆ.

``ತೀನ್ ಸೌ ಅಸ್ಸಿ,’’ ಅಂದಳು ಅಂಗಡಿಯಾಕೆ.

``ಜಾಸ್ತಿಯಾಯ್ತು… ಬೇರೆ ಕಡೆ ಕೊಡಿಸ್ತೀನಿ ಬಿಡು,’’ ಅಂತ ಅಂಬಿಕಾಳಿಗೆ ಹೇಳಿದೆ.

``ಜಾಸ್ತಿಯೇನೂ ಇಲ್ಲ… ಸ್ವಲ್ಪ ಕಡಿಮೆ ಮಾಡಿ ಕೊಡ್ತೀನಿ,’’ ಅಂದಳು, ಅಂಗಡಿಯ ಟಿಬೆಟನ್ ಹೆಂಗಸು.

``ಕೊಪ್ಪನಾ?’’ ಅಂತ ಕೇಳಿದೆ. (ಕುಶಾಲನಗರದಲ್ಲಿ ಬೈಲುಕುಪ್ಪೆಗೆ ಕೊಪ್ಪ ಅಂತ ಕರೀತ್ತಾರೆ)

``ಕೊಪ್ಪ ಗೊತ್ತಾ?’’ ಅಂತ ಹೆಂಗಸು ಕೇಳಿದಳು.

``ನಾ ಹುಟ್ಟಿದ್ದು ಸುಂಟಿಕೊಪ್ಪದಲ್ಲಿ. ಬೆಳೆದದ್ದು ಪಾಲಿಬೆಟ್ಟದಲ್ಲಿ. ಅಮ್ಮನ ಊರು ಸೋಮವಾರಪೇಟೆ,’’ ಅಂತ ಹೇಳಿದೆ.
``ಇನ್ನೂರೈವತ್ತು ಕೊಡಿ ಸಾಕು,’’ ಅಂತ ಘಂಟೆಯನ್ನು ಪೊಟ್ಟಣ ಕಟ್ಟೋಕೆ ಶುರು ಮಾಡಿದಳು.

ನಾನು ದುಡ್ಡು ಕೊಡೋ ಸಮಯದಲ್ಲಿ, ಆ ಹೆಂಗಸಿನ ಗಂಡ ಬಂದು, ಟಿಬೆಟನ್ ಭಾಷೆಯಲ್ಲಿ ಏನೋ ಕೇಳಿದ. ಅವಳ ಉತ್ತರದಿಂದ ಸಿಡಿಮಿಡಿಗೊಂಡ. ಆಕೆ ಕನ್ನಡದಲ್ಲಿ, ``ಅವರು ಸೋಮವಾರಪೇಟೆಯವರು, ನೀ ಸುಮ್ಮನಿರು,’’ ಅಂದಳು. ಗಂಡ ಪೆಚ್ಚಾಗಿ ನಕ್ಕ.

ಅವರಿಬ್ಬರೂ ಹುಟ್ಟಿ, ಬೆಳೆದದ್ದು ಬೈಲುಕುಪ್ಪೆಯಲ್ಲಂತೆ. ಎರಡು ವರ್ಷಗಳ ಹಿಂದೆ ಮನಾಲಿಗೆ ಬಂದು, ಅಂಗಡಿ ತೆರೆದಿದ್ದಾರಂತೆ. ವ್ಯಾಪಾರ ಚೆನ್ನಾಗಿದ್ದರೂ, ಯಾಕೋ ಬೈಲುಕುಪ್ಪೆನೇ ಇಷ್ಟವಂತೆ. ವಾಪಾಸ್ ಹೋಗುವ ಇರಾದೆ ಇದೆ ಅಂತ ಹೇಳಿದರು.

ನಾವೆಲ್ಲ ಕಾಲೇಜ್ ಓದುವಾಗ, ಟಿಬೆಟನ್ ರ ಹತ್ತಿರ, ಶೂ, ಜರ್ಕಿನ್ ಗಳನ್ನು ಕೊಳ್ಳುತ್ತಿದ್ದೆವು. ಆಗ, ವಿದೇಶೀ ಬ್ರಾಂಡ್ ದುಬಾರಿಯಾಗಿದ್ದು, ಟಿಬೆಟನ್ ಮಾಲುಗಳ ಮೇಲೆ ಅವಲಂಬಿತವಾಗಿದ್ದೆವು. ಕೊಡಗು ಜಿಲ್ಲೆಯ, ಯಾವುದೇ ಊರಿನ ಸಂತೆಗಳಲ್ಲೂ ಟಿಬೆಟನ್ ಗಳು ಬರುತ್ತಿದ್ದರು. ನಾನು ನೋಡಿದ ಹಾಗೆ, ಎಲ್ಲರೂ ಕನ್ನಡ ಮಾತನಾಡುತ್ತಿದ್ದರು ಸಹ. ಬೈಲುಕುಪ್ಪೆಯಲ್ಲಂತೂ, ಹಳ್ಳಿಯ ಕನ್ನಡಿಗರು, ಟಿಬೆಟನ್ ರ ಮನೆ ಕೆಲಸಕ್ಕೆ ಹೋಗುತ್ತಿದ್ದರು ಮತ್ತು ಟಿಬೆಟನ್ ಭಾಷೆ ಸಹ ಕಲಿತ್ತಿದ್ದರು.

ಇತ್ತೀಚಿನ ದಿನಗಳಲ್ಲಿ ಟಿಬೆಟನ್ ರ ಜೊತೆ ವ್ಯಾಪಾರ ಮಾಡಿಲ್ಲ ಮತ್ತು ಅವರ ಈಗಿನ ಜೀವನ ಶೈಲಿ ಬಗ್ಗೆ ಅಷ್ಟೇನು ಮಾಹಿತಿಯಿಲ್ಲ.

ಟೈಮ್ಸ್ ಆಫ್ ಇಂಡಿಯಾ ಮತ್ತು ಡೆಕ್ಕನ್ ಕ್ರಾನಿಕಲ್ ಕಛೇರಿಗಳು ರೆಸಿಡೆನ್ಸಿ ರಸ್ತೆಯ ಹತ್ತಿರ ಇದ್ದುದ್ದರಿಂದ, ನಾನು ಸಂತ ಜೋಸೆಫರ ಕಾಲೇಜಿನ ಹತ್ತಿರದ ಸೈನಿಕ ಭವನದಲ್ಲಿದ್ದ ವೈಲ್ಟ್ ಸ್ಪೈಸ್ ಅನ್ನೋ ಹೋಟೆಲ್ ಗೆ, ಆಗಾಗ ಮಧ್ಯಾಹ್ನ ಊಟಕ್ಕೆ ಹೋಗುತ್ತಿದ್ದೆ. ಕೆಲ ಕೊಡಗಿನ ಹುಡುಗರು ಸೇರಿ ನೆಡೆಸುತ್ತಿದ್ದ ಸಣ್ಣ ಹೋಟೆಲ್. ಅಕ್ಕಿ ರೊಟ್ಟಿ, ಪಂದಿ ಕರಿ ಥರದ ಕೊಡಗಿನ ಅಡುಗೆಗಳನ್ನು ಚೆನ್ನಾಗಿ ಮಾಡುತ್ತಿದ್ದರು.

ಅಲ್ಲಿ ಬಹಳ ಇಷ್ಟವಾಗಿದ್ದು, ಸಾಧಾರಣ ಹದಿನೆಂಟು-ಇಪ್ಪತ್ತು ವರ್ಷದ ಈ ಹುಡುಗ ಮನೋಜ್. ಅಲ್ಲಿ ಹಾಕುತ್ತಿದ್ದ ಇಂಗ್ಲಿಷ್ ಹಾಡುಗಳನ್ನು ಆಸಕ್ತಿಯಿಂದ ಕೇಳುತ್ತಿದ್ದ ನನಗೆ, ಎಲ್ಲಾ ಹಾಡುಗಳನ್ನೂ ಪೆನ್ ಡ್ರೈವ್ ಗೆ ಹಾಕಿಕೊಟ್ಟಿದ್ದ. ಒಂದೆರೆಡು ಸಲ ಕಾಣದಿದ್ದಾಗ, ವಿರಾಜಪೇಟೆಗೆ ಹೋಗಿದ್ದಾಗಿ ಹೇಳಿದ್ದ. ಅರಳು ಹುರಿದಂತೆ ಕನ್ನಡ ಮತ್ತು ಕೊಡವ ಭಾಷೆಯನ್ನು ಮಾತನಾಡುತ್ತಿದ್ದರೂ, ಇಂಗ್ಲಿಷ್ ಬಗ್ಗೆ ಅಷ್ಟೇನೂ ಒಲವು ತೋರಿಸುತ್ತಿರಲಿಲ್ಲ.

ಕೊನೆಗೆ ಎಷ್ಟರವರಗೆ ನಮ್ಮ ಸಂಬಂಧ ಬೆಳೆಯಿತೆಂದರೆ, ನಾನು ಎಷ್ಟು ಹೊತ್ತಿಗೆ ಬರುತ್ತೇನೆ ಮತ್ತು ಎಷ್ಟು ಜನ ಬರುತ್ತೇವೆ ಅಂತ ಮನೋಜನಿಗೆ ಫೋನ್ ಮಾಡಿ ಹೇಳಿದರೆ, ಅವನು ಅಷ್ಟು ಅಡುಗೆ ಮಾಡಿಸಿಡುತ್ತಿದ್ದ. ಒಂದು ದಿನ ಊಟವಾದ ಮೇಲೆ ಬಿಲ್ ಕೊಡುವಾಗ, ``ಸರ್, ನಾನೊಂದೆರೆಡು ತಿಂಗಳು ಇರೋದಿಲ್ಲ… ಊರಿಗೆ ಹೋಗಿ ಬರುತ್ತೇನೆ,’’ ಅಂತ ಮನೋಜ್ ಮೆಲ್ಲಗೆ ಹೇಳಿದ.

ಕೊಡಗು ಚೆನ್ನಾಗಿ ಗೊತ್ತಿರುವ ನಾನು, ``ಎಲ್ಲೋ ನಿಮ್ಮೂರು,’’ ಅಂತ ಕೇಳಿದೆ.

``ಅಸ್ಸಾಂ ಸರ್,’’ ಅಂದಾಗ, ಅಷ್ಟು ದಿನ ಕೊಡವರ ಹುಡುಗ ಅಂದುಕೊಂಡಿದ್ದ ನಾನು ದಂಗಾಗಿ ಹೋದೆ.

``ಅಲ್ವೋ… ನಾನು ನಿನ್ನನ್ನ ವಿರಾಜಪೇಟೆಯವನು ಅಂದ್ಕೊಂಡಿದ್ದೆನಲ್ಲೋ? ಇಷ್ಟು ಚೆನ್ನಾಗಿ ಕನ್ನಡ ಮತ್ತು ಕೊಡವ ತಕ್ ಮಾತಾಡ್ತೀಯಲ್ಲ. ಅದು ಹ್ಯಾಗೆ?’’ ಅಂತ ಕೇಳಿದೆ.

``ಬೆಂಗಳೂರಿಗೆ ಬಂದು ಏಳು ವರ್ಷ ಆಯ್ತು ಸರ್. ಆಗಿಂದ ಇವರ ಜೊತೆಯಲ್ಲೇ ಇದ್ದೇನೆ. ತುಂಬಾ ಚೆನ್ನಾಗಿ ನೋಡಿಕೊಂಡಿದ್ದಾರೆ. ಇವರ ಜೊತೆ ಇದ್ದೇ ನಾನು ಕನ್ನಡ, ಕೊಡವ ತಕ್ ಎಲ್ಲಾ ಕಲಿತಿದ್ದು. ಸ್ವಲ್ಪ ದಿನ ಊರಿಗೆ ಹೋಗಿ ಬರಬೇಕು ಸರ್,’’ ಅಂತ ನಕ್ಕ. ಅವನು ಬೇಡ ಅಂದರೂ, ಐನೂರು ರೂಪಾಯಿ ಅವನ ಜೇಬಿನಲ್ಲಿ ತುರುಕಿ, ಬಂದ ಮೇಲೆ ಫೋನ್ ಮಾಡು ಎಂದು ಹೇಳಿದೆ.

ಮನೋಜನ ಫೋನ್ ಬರಲಿಲ್ಲ. ಇದರ ಮಧ್ಯ, ನಮ್ಮ ಕಛೇರಿ ಕೂಡ ಕೋರಮಂಗಲಕ್ಕೆ ಸ್ಥಳಾಂತರವಾಯಿತು. ಒಂದೆರೆಡು ಸಲ ಹೋಟೆಲ್ ಗೆ ಹೋದಾಗ, ಅದು ಮುಚ್ಚಿತ್ತು. ಅಲ್ಲಿಂದ ಮುಂದೆ, ಆ ಹೋಟೆಲ್ ಕಡೆಗೆ ಹೋಗಲಿಲ್ಲ. ಒಂದು ಸಲ ಮನೋಜನಿಗೆ ಫೋನ್ ಮಾಡಲು ಪ್ರಯತ್ನಿಸಿದರೆ, ಈ ಸಂಖ್ಯೆ ಅಸ್ತಿತ್ವದಲ್ಲಿಲ್ಲ ಎಂದು ಬಂತು.

ರಾತ್ರಿ ಮನೆಗೆ ಹೋಗುವಾಗ, ಯಾವಾಗಾದರೊಮ್ಮೆ, ಸೌತ್ ಎಂಡ್ ಸರ್ಕಲ್ ಹತ್ತಿರ ಇರೋ ವಿಜಯ ಕಾಲೇಜಿನ ಎದುರು ಇರುವ ಹೌಸ್ ಆಫ್ ಕಬಾಬ್ ನಿಂದ ಏನಾದರೂ ಕಟ್ಟಿಸಿಕೊಂಡು ಹೋಗುತ್ತೇನೆ. ಏನು ಬೇಕು ಅಂತ ಹೇಳಿ, ಹದಿನೈದು ನಿಮಿಷವಾದರೂ ಕಾಯಬೇಕಾಗುತ್ತದೆ. ಒಂದು ಸಲ ಸಿಗರೇಟ್ ಖಾಲಿಯಾಗಿತ್ತು. ಪಕ್ಕದಲ್ಲೇ ಒಂದು ಡಬ್ಬಿ ಅಂಗಡಿ ಇಟ್ಟುಕೊಂಡವನಿಗೆ, ಒಂದು ಪ್ಯಾಕ್ ಕ್ಲಾಸಿಕ್ ಮೈಲ್ಟ್ ಕೊಡು, ಎಂದೆ.

ದುಡ್ಡು ಕೊಟ್ಟಾಗ, ``ಸರ್, ಇಪ್ಪತ್ತು ರೂಪಾಯಿ ಚಿಲ್ಲರೆ ಇದೆಯಾ,’’ ಅಂತ ಕೇಳಿದ.

ಇಪ್ಪತ್ತು ರೂಪಾಯಿ ಕೊಡುತ್ತಾ, ``ಪರವಾಗಿಲ್ಲ ಕಣಯ್ಯ ನೀನು. ಬೆಂಗಳೂರಿನಲ್ಲಿ, ಸಿಗರೇಟ್ ಮತ್ತು ಬೀಡಾ ಮಾರೋ ವ್ಯಾಪಾರನ ಉತ್ತರ ಪ್ರದೇಶದವರು ಬಂದು ಆಕ್ರಮಿಸಿಕೊಂಡಿದ್ದಾರೆ. ನೀನೊಬ್ಬ ಕನ್ನಡಿಗ ಅವರ ಮಧ್ಯ ಬದುಕುಳಿದಿದ್ದೀಯಲ್ಲಾ?’’ ಅಂತ ಹೇಳಿದೆ.

``ಸಾರ್, ನಾನೂ ಸಹ ಉತ್ತರ ಪ್ರದೇಶದವನು,’’ ಅಂತ ತಣ್ಣಗೆ ಹೇಳಿದ. ನಾನು ಪೆಚ್ಚಾದೆ.

``ಎಷ್ಟು ವರ್ಷ ಆಯ್ತು ಇಲ್ಲಿ ಬಂದು?’’ ಅಂತ ಕೇಳಿದೆ.

``ಎರಡು ವರ್ಷ ಸರ್,’’ ಅಂದ.

``ಇಷ್ಟು ಚೆನ್ನಾಗಿ ಕನ್ನಡ ಮಾತಾಡ್ತೀಯಲ್ಲಪ್ಪಾ?’’ ಅಂದೆ.

``ಬೆಳಗ್ಗೆ ಹೊತ್ತಲ್ಲಿ ಗಿರಾಕಿಗಳು ಕಡಿಮೆ ಇರ್ತಾರೆ. ಆಚೀಚಿನ ಅಂಗಡಿಯವರ ಜೊತೆ ಕನ್ನಡ ಮಾತಾಡಿ ಕಲಿತೆ. ಬಂದವರಲ್ಲಿ ಕಡಿಮೆ ಜನ ನನ್ನನ್ನು ಕನ್ನಡದಲ್ಲಿ ಮಾತಾಡಿಸೋದು ಸರ್. ನಾನೂ ನೋಡ್ತೀನಿ. ಅವರಿಗೆ ಕನ್ನಡ ಬರುತ್ತೆ ಅಂದರೆ, ನಾನೂ ಕನ್ನಡ ಮಾತಾಡ್ತೀನಿ. ಅವರಿಗೆ ಬರದೇ ಹೋದರೆ, ಹಿಂದಿಯಲ್ಲಿ ಮಾತಾಡ್ತೀನಿ. ಕನ್ನಡದಲ್ಲಿ ಮಾತಾಡೋಕೆ ಖುಶಿಯಾಗುತ್ತೆ ಸರ್,’’ ಅಂದ.

ಈಗಲೂ ಒಮ್ಮೊಮ್ಮೆ ಅವನನ್ನು ನೋಡ್ತಾ ಇರ್ತೀನಿ. ಸಿಗರೇಟ್ ಇಲ್ಲದೇ ಹೋದರೆ, ಅವನ ಬಳಿ ಕೊಂಡು ಕೊಳ್ಳುತ್ತೇನೆ. ಇದ್ದರೆ, ಮುಗುಳ್ನಕ್ಕು ಮುಂದೆ ಹೋಗ್ತೀನಿ. ಹೊರಗಡೆಯಿಂದ ಬಂದ ಜನ ಕನ್ನಡ ಮಾತಾನಾಡುವುದಿಲ್ಲ ಅಂತ ಬೊಬ್ಬೆ ಹೊಡೆಯುವವರನ್ನು ನೋಡಿದಾಗ, ನಮ್ಮವರು ಎಷ್ಟು ಜನ ಅಭಿಮಾನದಿಂದ ಕನ್ನಡ ಮಾತನಾಡುತ್ತಾರೆ ಅನ್ನೋ ಪ್ರಶ್ನೆ ಮೂಡುತ್ತದೆ. ಇದನ್ನೇ ಉತ್ತರ ಪ್ರದೇಶದ ಸಿಗರೇಟ್ ಮಾರುವ ಹುಡುಗ ನನಗೆ ಹೇಳಿದ್ದು…. ಕನ್ನಡ ಬರುವವರೂ ಹಿಂದಿಯಲ್ಲಿ ಕೇಳ್ತಾರೆ ಅಂತ. ಸಣ್ಣ, ಪುಟ್ಟ ವ್ಯಾಪಾರಿಗಳ ಹತ್ತಿರ ನಾವು ಕನ್ನಡದಲ್ಲಿ ಮಾತನಾಡಿದರೆ, ಅವರು ಎಲ್ಲಿಂದ ಬಂದವರಾದರೂ ಕನ್ನಡ ಕಲಿತೇ ಕಲಿಯುತ್ತಾರೆ ಅಂತ ನನಗೆ ಅನ್ನಿಸಿತು.

ರಾಜ್ಯೋತ್ಸವದ ಅಸಂಖ್ಯಾತ ಶುಭಾಷಯಗಳು ವಾಟ್ಸಪ್, ಫೇಸ್ ಬುಕ್ ಗಳಲ್ಲಿ ಹರಿದು ಬರುವಾಗ, ಯಾಕೋ ಈ ಮೂರು ಜನರ ಮುಖ ಕಣ್ಣ ಮುಂದೆ ಬಂದಂತಾಯಿತು.



ಮಾಕೋನಹಳ್ಳಿ ವಿನಯ್ ಮಾಧವ


ಗುರುವಾರ, ಸೆಪ್ಟೆಂಬರ್ 7, 2017

ಕಾಡುವ ತೇಜಸ್ವಿ

ನಿರುತ್ತರ………

`ಸರ್, ತೇಜಸ್ವಿಯವರು ಹೋಗಿಬಿಟ್ರಂತೆ’ ಅಂತ ಫೋನ್ ನಲ್ಲಿ ಆ ಕಡೆಯಿಂದ ಸ್ವರ ಬಂದಾಗ, ನನ್ನ ಕಾರು ಕೃಷ್ಣಗಿರಿ ದಾಟಿ, ಚೆನೈ ಕಡೆಗೆ ಧಾವಿಸುತ್ತಿತ್ತು. ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿ ಹಾಗೇ ಕೂತೆ.
`ಒಂದು ಗುಡ್ ಬೈನೂ ಇಲ್ಲ…. ಹೋಗಿಬಿಟ್ರಾ?’, ಅಂತ ಅನ್ನಿಸ್ತು.
ಗುಡ್ ಬೈ ಹೇಳೋಕೆ ಅವ್ರೇನಾದ್ರೂ ಊರಿಗೆ ಹೋಗ್ತಿದ್ರಾ? ಅಥವಾ ನಾನೇನು ಅವರ ಸಂಬಂಧಿಕನಾ? ಅವರ ಅಸಂಖ್ಯಾತ ಅಭಿಮಾನಿಗಳಲ್ಲಿ ನಾನೂ ಒಬ್ಬ, ಅಷ್ಟೆ. ನಾಲ್ಕಾರು ಸಲ ಭೇಟಿ ಮಾಡಿದ ತಕ್ಷಣ ಯಾಕೆ ಹೀಗೆ ಯೋಚನೆ ಮಾಡ್ತಿದ್ದೀನಿ? ಅನ್ನಿಸ್ತು.
ಸ್ವಲ್ಪ ದಿನದ ಹಿಂದೆ ಫೋನ್ ಮಾಡಿದಾಗ, ಮೈ ಪೂರ್ತಿ ಅಲರ್ಜಿ ಆಗಿದೆ ಮಾರಾಯ. ಯಾವುದೋ ಕೇರಳದ ಎಣ್ಣೆ ಟ್ರೈ ಮಾಡಿದ್ದೆ. ಮೈಸೂರಲ್ಲಿ ಆಸ್ಪತ್ರೆಯಲ್ಲಿ ಬೇರೆ ಇರಬೇಕಾಯ್ತು, ಅಂತ ಹೇಳಿದ್ರು. ಅದನ್ನು ಬಿಟ್ಟರೆ, ಯಾವುದೇ ತೊಂದರೆ ಇದ್ದಂತೆ ಕಾಣಿಸಲಿಲ್ಲ.
ವಾಪಾಸ್ ಮೂಡಿಗೆರೆಗೆ ಹೊರಡಲಾ? ಅಂತನೂ ಯೋಚನೆ ಮಾಡಿದೆ. ಹೋಗಿ ಏನು ಮಾಡುವುದು ಅನ್ನೋದು ಅರ್ಥ ಆಗಲಿಲ್ಲ. ನೂರಾರು ಅಭಿಮಾನಿಗಳು, ರಾಜಕಾರಣಿಗಳ ಮಧ್ಯ ನನಗೇನು ಕೆಲಸ ಅಂತಾನೂ ಅನ್ನಿಸ್ತು. ತೆಪ್ಪಗೆ ಚೆನೈ ಕಡೆಗೆ ಹೋದೆ.
ಊರಿಗೆ ಹೋದಾಗ ನಾಲ್ಕಾರು ಭಾರಿ ತೇಜಸ್ವಿಯವರ ಮನೆಗೂ ಹೋಗಿದ್ದೆ. ಹಾಗಾಗಿ, ನಾನು ಫೋನ್ ಮಾಡಿದ ತಕ್ಷಣ, ಎಲ್ಲಿದ್ದೀಯಾ? ಅಂತ ಕೇಳುತ್ತಿದ್ದರು. ಊರಿಗೆ ಬಂದಿದ್ದೇನೆ, ನಿಮ್ಮ ಮನೆಗೆ ಬರ್ತೀನಿ ಅಂದರೆ, `ಅಲ್ಲಾ ಮಾರಾಯ… ನೀವು ಬೆಂಗಳೂರಿನಲ್ಲಿರೋರಿಗೆ ತಲೇಲಿ ಏನಿದೆ ಅಂತೀನಿ? ನಿಮಗ್ ಮಾಡಾಕೆ ಕೆಲ್ಸ ಇಲ್ಲಾ ಅಂದ್ರೆ, ನಂಗೂ ಇಲ್ವಾ? ಇಲ್ಲಿ ಬಂದು ನನ್ನ ತಲೆ ತಿನ್ಬೇಡ,’ ಅಂತ ಮುಖಕ್ಕೆ ಹೊಡೆದಂತೆ ಹೇಳ್ತಿದ್ರು.
ಭಂಡಗೆಟ್ಟ ನಾನು, `ಸಾರ್, ಸಾಯಂಕಾಲ ದಾರದಹಳ್ಳಿಗೆ ಹೋಗ್ತಿದ್ದೀನಿ. ದಾರಿಲಿ ನಿಮ್ಮ ಮನೆಗೆ ಬಂದು ಹೋಗ್ತೀನಿ. ಮೂರುವರೆ, ನಾಲ್ಕು ಘಂಟೆಗೆ ಬರ್ತೀನಿ,’ ಅಂದರೆ, `ಅಯ್ಯೊಯ್ಯೊ, ಅಷ್ಟೊತ್ತಿಗೆ ಬರ್ಬೇಡ ಮಾರಾಯ. ಐದು ಘಂಟೆ ಮೇಲೆ ಬಾ… ಹತ್ತೇ ನಿಮಿಷ, ಆಯ್ತಾ? ನಂಗೆ ತುಂಬಾ ಕೆಲಸ ಇದೆ,’ ಅನ್ನುತ್ತಿದ್ದರು. ಹತ್ತು ನಿಮಿಷದೊಳಗೆ ಅವರ ಮನೆ ಬಿಟ್ಟ ಉದಾಹಾರಣೆಗಳಿಲ್ಲ. ಒಂದೆರೆಡು ಸಲ, ನಾಲ್ಕೈದು ಘಂಟೆ ಸಹ ಕಳೆದಿದ್ದೇನೆ.
ತೇಜಸ್ವಿಯವರು ತೀರಿ ಹೋದ ಒಂದೆರೆಡು ವರ್ಷ, ಅವರ ಪುಸ್ತಕ ಮತ್ತೆ ಮತ್ತೆ ತಿರುವಿ ಹಾಕುವಾಗ ಏನೋ ಕಳೆದು ಹೋದಂತೆ ಭಾಸವಾಗುತ್ತಿತ್ತು. ಆನಂತರ, ತೇಜಸ್ವಿಯವರು ಇಲ್ಲ ಅನ್ನೋದು  ಅಭ್ಯಾಸವಾಗಿಹೋಯಿತು.
ಮೂರ್ನಾಲ್ಕು ವರ್ಷದ ಹಿಂದೆ ಮಳೆಗಾಲದಲ್ಲಿ ಊರಿಗೆ ಹೋದಾಗ ಹಾಗೇ ಕೊಟ್ಟಿಗೆಹಾರದ ಸಮೀಪ ಮಲಯಮಾರುತಕ್ಕೆ ಒಂದು ಡ್ರೈವ್ ಹೋದೆ. ಅದರ ಪಕ್ಕದಲ್ಲೇ ಸರ್ಕಾರ ತೇಜಸ್ವಿಯವರ ಹೆಸರಿನಲ್ಲಿ ಜೀವಿ ವೈವಿಧ್ಯ ಸಂಶೋಧನಾ ಕೇಂದ್ರ ಸ್ಥಾಪಿಸಲು ಜಾಗ ನೀಡಲು ನಿರ್ಧಾರ ಮಾಡಿದ್ದು ನೋಡಿದಮೇಲೆ ಯಾಕೋ ಮತ್ತೆ ಕಾಡತೊಡಗಿದರು. ತೇಜಸ್ವಿಯವರ ವಿಷಯ ನಾನು ಹೆಚ್ಚು ಮಾತನಾಡುವುದು ಕೆಂಜಿಗೆ ಪ್ರದೀಪ್ ರವರ ಜೊತೆ ಮಾತ್ರ. ಅವತ್ತು ಫೋನ್ ಮಾಡಿದರೂ, ಮಾತನಾಡಲು ಆಗಲಿಲ್ಲ.
ಒಂದೆರೆಡು ತಿಂಗಳ ಬಳಿಕ ಮತ್ತೆ ಪ್ರದೀಪ್ ಗೆ ಫೋನ್ ಮಾಡಿ, ನಾನು ಮಲಯ ಮಾರುತಕ್ಕೆ ಹೋಗಿದ್ದು ಹೇಳಿದೆ. `ತುಂಬಾ ಚೆನ್ನಾಗಿತ್ತು ಪ್ರದೀಪಣ್ಣ.. ತೇಜಸ್ವಿ ಇದ್ದಿದ್ರೆಅಲ್ಲೇ ಎರಡು ಕಥೆ ಬರೀತಿದ್ರು ಅನ್ನಿಸ್ತಿದೆ,’ ಅಂದೆ.
`ಇರಬಹುದು… ನನ್ನ ಪ್ರಕಾರತೇಜಸ್ವಿ ಬರೆಯೋದು ತುಂಬಾ ಇತ್ತು ನೋಡಿ. ಅವ್ರು ಇಷ್ಟ ಬಂದಾಗ ಬರೆಯೋರುಫೋಟೋ ತೆಗೆಯೋರುಪೇಂಟಿಂಗ್ ಮಾಡೋರು ಇಲ್ದೆ ಹೋದ್ರೆಮೀನು ಹಿಡಿಯೋರು. ಅವರಿಗೆ ಮೀನು ಹಿಡಿಯೋದ್ರ ಬಗ್ಗೆ ಒಂದು ಪುಸ್ತಕ ಬರೀಬೇಕೂಂತ ತುಂಬಾ ಇಷ್ಟ ಇತ್ತು. ನನ್ನ ಹತ್ರ ತುಂಬಾ ಸಲ ಹೇಳಿದ್ರು,’ ಅಂದ್ರು ಪ್ರದೀಪ್.
`ಮತ್ಯಾಕೆ ಬರೀಲಿಲ್ಲ. ಅವ್ರಿಗೇನು ಅದನ್ನ ಬರೆಯೋದು ಕಷ್ಟ ಆಗ್ತಿರ್ಲಿಲ್ಲ ಅಲ್ವಾ?’ ಅಂದೆ.
`ಅವ್ರು ಯಾವುದೇ ಪುಸ್ತಕ ಬರೆಯೋಕೆ ಮುಂಚೆ ತುಂಬಾ ರಿಸರ್ಚ್ ಮಾಡ್ತಿದ್ರು. ಪ್ರತೀ ಸಲ ಮೀನು ಹಿಡಿಯೋಕೆ ಹೋದಾಗಲೂಏನಾದ್ರು ಒಂದು ಹೊಸ ವಿಷಯ ಹಿಡ್ಕೊಂಡು ಬರ್ತಿದ್ರು. ಸುಮಾರು ಪುಸ್ತಕಗಳನ್ನು ಓದಿದ್ರು. `ಹೆಮಿಂಗ್ವೆ ಬರೆದ ಓಲ್ಡ್ ಮ್ಯಾನ್ ಆಂಡ್ ದಿ ಸೀ ಅವರ ಮೇಲೆ ತುಂಬಾ ಪರಿಣಾಮ ಬೀರಿತ್ತು. ಎಷ್ಟೋ ಸಲ ನನ್ನ ಹತ್ರಾನೇ ಹೇಳಿದ್ರು.. ನೋಡಿ ಪ್ರದೀಪ್ಬರೆದ್ರೆ ಅಂತ ಪುಸ್ತಕ ಬರೀಬೇಕುಅಂತ. ಹಾಗಾಗೇ ಅವರು ಮೀನು ಹಿಡೀವಾಗ ತುಂಬಾ ಎಕ್ಸ್ ಪರಿಮೆಂಟ್ ಮಾಡ್ತಿದ್ರು,’ ಅಂದರು.
`ನೀವು ಓದಿದ್ರಾ ಆ ಪುಸ್ತಕ?’ ಅಂತ ನನ್ನನ್ನು ಕೇಳಿದಾಗನಾನು ಹೆಮಿಂಗ್ವೆಯ ಯಾವುದೇ ಪುಸ್ತಕ ಓದಿಲ್ಲ ಅಂತ ಹೇಳಿದೆ. `ಅದನ್ನ ಓದಬೇಕು ಕಣ್ರಿ. ಸಣ್ಣ ಪುಸ್ತಕ… ಅದಕ್ಕೆ ನೊಬೆಲ್ ಬಂದಿತ್ತು. ಮತ್ತೆ ಮತ್ತೆ ಓದಿಸುತ್ತೆ,’ ಅಂದರು.
`ಮತ್ತಿನ್ನೇನು ಬರೀಬೇಕು ಅಂತಿದ್ರೂ,’ ಅಂತ ಮೆಲ್ಲಗೆ ಕೇಳಿದೆ.
`ಅದನ್ನ ಹೇಳೋದು ಕಷ್ಟ ಕಣ್ರಿ. ಅವ್ರಿಗೆ ತುಂಬಾ ವಿಷಯಗಳಲ್ಲಿ ಆಸಕ್ತಿ ಇತ್ತು. ಅವರ ಇಷ್ಟವಾದ ಸಬ್ಜೆಕ್ಟ್ ಅಂದ್ರೆ ಫಿಸಿಕ್ಸ್ ಮತ್ತು ಮೆಟಾ ಫಿಸಿಕ್ಸ್ ನಲ್ಲಿ ತುಂಬಾ ಆಸಕ್ತಿ ಇತ್ತು. ಅದಷ್ಟೇ ಅಲ್ಲ. ಅವರು ಸೃಷ್ಟಿಯ ಮೂಲವನ್ನೇ ಹುಡುಕೋಕೆ ಹೊರಟಿದ್ದರು ಅಂತ ಕಾಣುತ್ತೆ. ನನಗೆ ಅರ್ಥವಾಗಿರೋ ಹಾಗೆ ಹೇಳಿದ್ರೆ…. ಅದೇ ಸರಿ ಅಂತಲ್ಲ.. ಅದು ನಾನು ಅರ್ಥ ಮಾಡಿಕೊಂಡ ರೀತಿ ಅಷ್ಟೆ. ಅವ್ರು ಒಂದು ಸೀರೀಸ್ ಆಫ್ ಪುಸ್ತಕಗಳಲ್ಲಿ ಇವೆಲ್ಲವನ್ನೂ ಹೊರಗೆ ತರಬೇಕೂಂತ ಇದ್ದರು ಅನ್ನಿಸುತ್ತೆ. ಅದು ಕನ್ನಡದ ಪುಸ್ತಕಗಳಲ್ಲೇ ವಿಭಿನ್ನವಾಗಿರಬೇಕು ಅಂತ ಅವರಿಗಿತ್ತು ಅಂತ ಕಾಣಿಸುತ್ತೆ. ಮಾಯಾ ಲೋಕ ಪುಸ್ತಕವನ್ನೇ ನೋಡಿಅದರ ಲೇ ಔಟ್ಪ್ರಿಂಟಿಂಗ್ ಫಾಂಟ್ಎಲ್ಲಾ ಬೇರೆ ಥರಾನೇ ಇದೆ. ಅದರ ಭಾಗ 2, 3, 4… ಹೀಗೇ ಎಷ್ಟು ಹೋಗ್ತಿತ್ತು ಅಂತಾನೂ ಗೊತ್ತಿಲ್ಲ. ಬಹುಶಃಅದರಲ್ಲಿ ಇವೆಲ್ಲ ಬರ್ತಿತ್ತು ಅಂತ ಕಾಣುತ್ತೆ. ಅಥವಾನಾನು ಹಾಗೆ ಅರ್ಥ ಮಾಡಿಕೊಂಡಿದ್ದೀನಿ,’ ಅಂದರು.
`ಪ್ರದೀಪಣ್ಣ… ಈ ಮಾಯಾ ಲೋಕ ನಂಗೆ ಸರಿಯಾಗಿ ಅರ್ಥವಾಗ್ಲಿಲ್ಲ. ಅದಕ್ಕೆ ಬೇರೆಯವರ ಒಪೀನಿಯನ್ ಕೇಳಿದ್ದೆ. ಕೆಲವರು ಅಂದ್ರು ಇದು ಕಾವೇರಿ ವಿವಾದ ಮನಸ್ಸಲ್ಲಿಟ್ಟುಕೊಂಡು ಬರೆದ ಹಾಗಿದೆ ಅಂತ. ಇನ್ನು ಕೆಲವರಿಗೆಇದು ಕಿರಗೂರಿನ ಗಯ್ಯಾಳಿಗಳು ಕಥೆಯ ಮುಂದುವರೆದ ಭಾಗ ಅನ್ನಿಸ್ತು,’ ಅಂತ ಕೇಳಿದೆ.
 `ಕಾವೇರಿ ವಿವಾದ ಅನ್ನೋದು ನಾನು ಒಪ್ಪೋದಿಲ್ಲ. ಕಿರುಗೂರಿನ ಗಯ್ಯಾಳಿಗಳು ಅನ್ನೋದು ಒಂದು ಥರದಲ್ಲಿ ಇರಬಹುದೇನೋ. ನಾನು ಅರ್ಥ ಮಾಡಿಕೊಂಡಿರೋದೇ ಬೇರೆ ಥರ. ಈಗಮಾಯಾ ಲೋಕ ಒಂದು ಹೂವಿನ ಎಸಳಿದ್ದ ಹಾಗೆ. ಅದರ ಮುಂದಿನ ಭಾಗಗಳೆಲ್ಲ ಇನ್ನೆಲ್ಲಾ ಎಸಳುಗಳು. ಎಲ್ಲೋ ಒಂದು ಕಡೆಗೆ ಸೇರಿಪೂರ್ತಿ ಹೂವಾಗುತ್ತೆ. ಆಮೇಲೆಪೂರ್ತಿ ಗಿಡವನ್ನೂ ಮಾಡುವ ಹೊತ್ತಿಗೆಇನ್ನಷ್ಟು ವಿಷಯಗಳು ಬಂದು ಸೇರಿರುತ್ತವೆ. ಕೊನೆಗೆ ಮರ ಗಿಡಗಳುಬೆಟ್ಟ ಗುಡ್ಡಗಳು ಎಲ್ಲಾ ಸೇರಿ ಕಾಡಾಗುವಾಗಸೃಷ್ಟಿಯ ಎಲ್ಲಾ ವಿಷಯಗಳೂ ಅದರಲ್ಲಿ ಚರ್ಚೆಯಾಗಬೇಕು ಅನ್ನೋದು ಅವರ ವಿಚಾರ ಇತ್ತು ಅಂತ ಕಾಣುತ್ತೆ. ಅವರಿಗೆ ಫಿಲಾಸಫಿಯಲ್ಲೂ ಆಸಕ್ತಿಯಿತ್ತು. ಇನ್ನೊಂದು ಪುಸ್ತಕ ಅವರು ಹೇಳ್ತಿದ್ದಿದ್ದು… ಆರ್ಟ್ ಆಫ್ ಮೋಟಾರ್ ಸೈಕಲ್ ಮೇಂಟೇನೆನ್ಸ್ ಅಂತೇನೋ ಬರುತ್ತೆ…’ ಅಂತ ಪ್ರದೀಪ್ ಹೇಳುವಾಗ, ನಾನು ಮಧ್ಯ ಬಾಯಿ ಹಾಕಿ, `ಜೆನ್ ಆಂಟ್ ಮೋಟಾರ್ ಸೈಕಲ್ ಮೇಂಟೇನೆನ್ಸ್.. ರಾಬರ್ಟ್. ಎಂ. ಪ್ರಿಸಿಗ್ ಬರೆದದ್ದು. ಅವನು ಲೀಲಾ ಅಂತ ಇನ್ನೊಂದು ಪುಸ್ತಕ ಬರೆದಿದ್ದಾನೆ. ತುಂಬಾ ಚೆನ್ನಾಗಿವೆ,’ ಅಂತ ಹೇಳಿದೆ.
`ಕರೆಕ್ಟ್… ಅದೇ ನೋಡಿ. ಅವರು ಕೊನೆಯಲ್ಲಿ ಸೃಷ್ಟಿ ಮತ್ತು ಸತ್ಯ ಅನ್ನೋದನ್ನ ವೈಜ್ಞಾನಿಕವಾಗಿ ಬರೆಯೋಕೆ ಯೋಚಿಸಿದ್ರು ಅನ್ನಿಸುತ್ತದೆ’, ಅಂದಾಗನನಗೆ ಫಕ್ಕನೆ ನಗು ಬಂದುಏನು ಬುದ್ದ ಆಗೋಕೆ ಹೊರಟಿದ್ರಾಅಂತ ಕೇಳೋಕೆ ನಾಲಿಗೆ ತುದಿಯವರೆಗೆ ಬಂದಿತ್ತು. ಆದರೆಪ್ರದೀಪ್ ರವರ ಮಾತಿನ ಲಹರಿ ಮುಗಿದಿರಲಿಲ್ಲ.
`ಬರವಣಿಗೆಗಳಿಗೆ ವೈಜ್ಞಾನಿಕ ತಳಹದಿ ಇರಬೇಕು ಅನ್ನೋದು ಅವರ ವಾದವಾಗಿತ್ತು. ಅದನ್ನು ಬರವಣಿಗೆ ರೂಪದಲ್ಲಿ ತರುವುದು ಕಷ್ಟ ಅಂತ ನಮಗೆ ಅನ್ನಿಸಿದ್ದರೂಆ ದಿಕ್ಕಿನಲ್ಲಿ ಅವರು ಪ್ರಯತ್ನ ಮಾಡುತ್ತಿದ್ದರು.  ಇದರಲ್ಲಿ ಕಾಲಮಾನಫಿಸಿಕ್ಸ್ಬಾಹ್ಯಾಕಾಶಜೀವರಾಶಿ ಎಲ್ಲವನ್ನೂ ಸೇರಿಸಿಮನುಷ್ಯನ ಚಿಂತನೆಗಳಿಗೆ ಒಂದು ಅರ್ಥ ಹುಡುಕೋ ಪ್ರಯತ್ನದಲ್ಲಿದ್ರುಅಂತ ಅನ್ನಿಸ್ತದೆ,’ ಅಂದರು.
`ಹಾಗಾದ್ರೆಅವರಿಗೆ ಸ್ಟೀಫನ್ ಹಾಪ್ಕಿನ್ಸ್ ನ `ಎ ಬ್ರೀಫ್ ಹಿಸ್ಟರಿ ಆಫ್ ಟೈಮ್’ ಕೂಡ ತುಂಬಾ ಇಷ್ಟದ ಪುಸ್ತಕ ಅಂತ ಕಾಣುತ್ತೆ,’ ಅಂತ ಕೇಳಿದೆ.
`ಅದನ್ನ ಅವ್ರು ಯಾವ ಕಾಲದಲ್ಲೋ ಓದಿ ಮುಗಿಸಿದ್ದರು. ಆ ಪುಸ್ತಕ ಬಂದಾಗಲೇಅವರು ಜರ್ಮನಿಯಿಂದ ಪುಸ್ತಕ ತರಿಸಿ ಓದಿದ್ದರು. ನನಗೆ ಸುಮಾರು ಸಲ ಅದನ್ನ ಕನ್ನಡಕ್ಕೆ ಅನುವಾದ ಮಾಡಲಿಕ್ಕೆ ಹೇಳಿದ್ರು. ಅದನ್ನ ಹ್ಯಾಗ್ರೀ ಕನ್ನಡದಲ್ಲಿ ಬರೆಯೋದು?,’ ಅಂತ ನಕ್ಕರು.
ತಲೆ ಗಿಮ್ಮೆನ್ನಲು ಶುರುವಾಯ್ತು. ಯಾಕೋ ತೇಜಸ್ವಿ ಮತ್ತೆ ಕಾಡಲು ಶುರು ಮಾಡಿದರು. ಮತ್ತೆ ಮಾಯಾ ಲೋಕ ಕೈಗೆತ್ತಿಕೊಂಡೆ. ಮಾಯಾಲೋಕದ ಕೊನೆ ಪುಟಕ್ಕೆ ಬರುವ ಹೊತ್ತಿಗೆ ಏನೋ ಹೊಳೆದಂತಾಯಿತು. `ಅಣ್ಣಪಣ್ಣ ಇದು ಬಸವನಗುಂಡಿ ಹತ್ರ ಹೇಮಾವತಿ ನದಿ ಸೇರುತ್ತದೆ ಅಂತ ಅಂದಾಜು ಮಾಡಿದ್ದ. ಆದರೆ, ಆ ಕುರುಚಲು ಕಾಡಿನಲ್ಲಿ ನೆಡೆಯುತ್ತಾ ನನಗೆ ನಿದಾನವಾಗಿ ಅನುಮಾನ ಶುರು ಆಯ್ತು. ಏಕೆಂದರೆ, ಈ ಹಳ್ಳ ಹೇಮಾವತಿ ನದಿಗೆ ಸಂಪೂರ್ಣ ವಿರುದ್ದ ದಿಕ್ಕಿನಲ್ಲಿ ಹರಿಯುತ್ತಿದೆ!’.
ಹೌದು, ಇದು ಮಹಾನದಿ ನೈಲ್ ಮೂಲ ಹುಡುಕಲು ಹೊರಟವರಿಗೆ ಉಂಟಾದ ಜಿಜ್ಞಾಸೆ! ಹಾಗಾದರೆ, ಇದು ಕಿರುಗೂರಿನ ಗಯ್ಯಾಳಿಯೂ ಅಲ್ಲ, ಕಾವೇರಿ ವಿವಾದವನ್ನು ಗುರಿ ಇಟ್ಟುಕೊಂಡು ಬರೆದದ್ದೂ ಅಲ್ಲ .... ನದೀ ಮೂಲಗಳಲ್ಲಿ ನೆಡೆಯುವ ಪ್ರಾಕೃತಿಕ ವೈಶಿಷ್ಟ್ಯಗಳು... ಮುಂದೆ? ಅದಕ್ಕೆ ಭಾಗ ಎರಡು ಬರಲೇ ಇಲ್ಲವಲ್ಲ!
ಅಲ್ಲಿಂದ ಪ್ರತೀ ಪುಸ್ತಕಕ್ಕೂ ಒಂದು ಹೊಸ ಆಯಾಮ ದೊರಕೋಕೆ ಶುರುವಾಯ್ತು. ಜುಗಾರಿ ಕ್ರಾಸ್ ಆಗಲಿ ಅಥವಾ ಚಿದಂಬರ ರಹಸ್ಯವಾಗಲಿ, ಒಂದು ಕಾದಂಬರಿ ಅನ್ನೋ ಮನೋಭಾವ ಬದಲಾಯಿತು. ಅದು `ಸೃಷ್ಟಿ ಮತ್ತು ಸತ್ಯ’ ಸಂಶೋಧನೆಯ ಒಂದು ಕೊಂಡಿ ಅನ್ನಿಸೋಕೆ ಶುರುವಾಯ್ತು. ಪ್ರಿಸಿಗ್ ಮಾಡಿದ್ದೂ ಇದನ್ನೇ.... ಮೋಟಾರ್ ಸೈಕಲ್ ಸವಾರಿ ಮಾಡುತ್ತಾ, ಮೌಲ್ಯವನ್ನು ಪ್ರಶ್ನಿಸಿದವನು, ಲೀಲಾ ಎನ್ನೋ ವೇಶ್ಯೆಯ ಜೊತೆ ಹಡ್ಸನ್ ನದಿಯಮೇಲೆ ತೇಲುತ್ತಾ, ನೈತಿಕತೆಯ ಬಗ್ಗೆ ಮಾತನಾಡಿದ್ದು.
ಕೀಟ ಜಗತ್ತಿನಿಂದ ಹಿಡಿದು, ಮಿಲ್ಲೇನಿಯಂ ಸೀರೀಸ್, ಫ್ಲೈಯಿಂಗ್ ಸಾಸರ್ ನಂಥಹ ವೈಜ್ಞಾನಿಕ ಹಿನ್ನಲೆಯ ಬರಹಗಳಿರಬಹುದು ಅಥವಾ ಕೃಷ್ಣೇಗೌಡರ ಆನೆ, ರಹಸ್ಯ ವಿಶ್ವದಂಥಹ ಲಘು ಕಥೆಗಳಿರಬಹುದು, ಅವುಗಳಿಗೆ ನನ್ನದೇ ಆದ ವಿಶ್ಲೇಷಣೆಗಳು ಬರತೊಡಗಿದವು. ಪ್ರತೀ ಪುಸ್ತಕ ಮತ್ತೆ ಓದಿದಾಗ, ನೂರಾರು ಪ್ರಶ್ನೆಗಳು ಮೂಡಲು ಶುರುವಾದವು. ಅವುಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಿದರೂ, ಎಷ್ಟೋ ಪ್ರಶ್ನೆಗಳು, ಪ್ರಶ್ನೆಗಳಾಗೇ ಉಳಿದವು.
ತೇಜಸ್ವಿ ಮುಟ್ಟಿದ ವಿಷಯಗಳೆಷ್ಟು ಅನ್ನೋದನ್ನ ಹಾಗೇ ಲೆಖ್ಖ ಹಾಕೋಕೆ ಶುರು ಮಾಡಿದೆ. ರಹಸ್ಯ ವಿಶ್ವದಂತ ಮುಗ್ದ ಕಥೆಯಿಂದ ಹಿಡಿದು, ಚರಿತ್ರೆ, ಅರ್ಥಶಾಸ್ತ್ರ, ಸಮಾಜ, ವಿಜ್ಙಾನದ ಎಲ್ಲಾ ಅಂಗಗಳೂ ಸೇರಿಹೋಗಿದ್ದವು. ಪ್ರತಿಯೊಂದು ವಿಷಯಕ್ಕೂ, ಸೃಷ್ಟಿಗೂ ಸಂಬಂಧವನ್ನು ಕಲ್ಪಿಸುವ ಅವರ ಬರವಣಿಗೆಗಳು, ಬಿಡಿಬಿಡಿಯಾಗಿ ಓದಿದಾಗ ಅರ್ಥವಾಗಿರಲಿಲ್ಲ ಅನ್ನಿಸಿತು.
ಯಾಕೋ, ಕರ್ವಾಲೋ ಮಾತ್ರ ಮತ್ತೆ ಪೂರ್ತಿ ಓದಲಾಗಲಾಗಲೇ ಇಲ್ಲ. ವಿಪರೀತ ಪ್ರಶ್ನೆಗಳೇಳತೊಡಗಿದವು. ಮೊದಲನೇ ಪುಟ ಮೂಡಿಗೆರೆಯ ಜೇನು ಸೊಸೈಟಿಯಿಂದ ಯಾಕೆ ಶುರುವಾಯ್ತು ಅನ್ನೋದೇ ಒಂದು ಪ್ರಶ್ನೆಯಾಗಿತ್ತು. ಏನೋ ತಡಕಾಡುವಾಗ, ಆಲ್ಬರ್ಟ್ ಐನ್ ಸ್ಟೀನ್ ಹೇಳಿದ ಮಾತು ಸಿಕ್ಕಿತು. `ಜಗತ್ತಿನಿಂದ ಜೇನುನೊಣಗಳು ಕಣ್ಮರೆಯಾದರೆ, ಭೂಮಿಯಲ್ಲಿ ಮನುಷ್ಯನ ಆಯಸ್ಸು ನಾಲ್ಕು ವರ್ಷ ಮಾತ್ರ.
ವಿಕಾಸದ ಕೊಂಡಿಯ ವಿಷಯಕ್ಕೆ ಬರುವ ಮುಂಚೆ, ವಿನಾಶದ ಮುನ್ಸೂಚನೆಯ ಬಗ್ಗೆಯೂ ಮಾತನಾಡಿದ್ದರು.
ಮುಂದೆ ಕಾಡಿಗೆ ಹೋದಾಗಲೆಲ್ಲ, ನನ್ನದೇ ರೀತಿಯಲ್ಲಿ ಪ್ರಕೃತಿಯನ್ನು ವಿಶ್ಲೇಷಿಸಲು ಶುರು ಮಾಡಿದೆ. ಬ್ರಹ್ಮಗಿರಿಗೆ ಹೋದಾಗ ನೋಡಿದ ಹಾರುವ ಓತಿ, ಎಂಟು ವರ್ಷ ಬೆಂಕಿ ಬೀಳದಂತೆ ನೋಡಿಕೊಂಡ ಜಾಗದಲ್ಲಿ, ಬೆಂಕಿ ನಿರೋಧಕ ಗಿಡಗಳು ಹುಟ್ಟಿದ್ದು, ನಾನು ಹುಟ್ಟೋಕೆ ಮುಂಚೆ ಭತ್ತದ ಗದ್ದೆಯಾಗಿ, ಜನರು ಖಾಲಿ ಮಾಡಿದ ಹಡ್ಲು ಒಂದು ನಿಧಾನವಾಗಿ ಜೌಗು ಪ್ರದೇಶವಾಗಿ ಪರಿವರ್ತನೆಗೊಳ್ಳುತ್ತಿದ್ದದ್ದು ನೋಡುವಾಗ, ತೇಜಸ್ವಿ ಡಾರ್ವಿನ್ ವಿಕಾಸವಾದವನ್ನು ಯಾಕೆ ಅಷ್ಟೊಂದು ಹಚ್ಚಿಕೊಂಡಿದ್ದರು ಅನ್ನೋದು ಅರ್ಥವಾಗಲು ಶುರುವಾಯ್ತು.
ಮುಂದೆ, ಅವತಾರ್, ಲೈಫ್ ಆಫ್ ಪೈ ಸೇರಿದಂತೆ, ಎಷ್ಟೋ ಸಿನೆಮಾಗಳು ಸಹ, ತೇಜಸ್ವಿಯವರ ವಿಚಾರಧಾರೆಯ ಮೂಸೆಯಿಂದ ಹೊರಬಂದಂತೆ ಅರ್ಥೈಸಿಕೊಂಡಿದ್ದೇನೆ ಅಂದರೂ ತಪ್ಪೇನಿಲ್ಲ.
ವಿಕಾಸವಾದವನ್ನು ಅಷ್ಟೊಂದು ಹಚ್ಚಿಕೊಂಡಿದ್ದರೂ, ಡಾರ್ವಿನ್ ನ `survival of the fittest’ ಗಿಂತ, `survival of adoptable’, ಅನ್ನೋದನ್ನ ತೇಜಸ್ವಿ ನಂಬಿದ್ದರು ಅನ್ನೋದು ನನ್ನ ಭಾವನೆ. ಅವರ ಜೀವನದಲ್ಲಿ ಅದನ್ನು ಅಳವಡಿಸಿಕೊಂಡಿದ್ದರು ಕೂಡ.
ದೇಶದಲ್ಲಿ ಬರಹಗಾರರೆಲ್ಲ ಇನ್ನೂ ಪ್ರಕಾಶಕರ ಜೊತೆ ಜಗಳವಾಡುವ ಹೊತ್ತಿನಲ್ಲಿ, ಅಮೇರಿಕಾದಿಂದ ಡೆಸ್ಕ್ ಟಾಪ್ ಪಬ್ಲಿಷರ್ ತರಿಸಿ, ಕನ್ಫ್ಯೂಸ್ ಆಗಿ, ಮಗುವಿನಂತೆ ರಚ್ಚೆ ಹಿಡಿದು, ಅದನ್ನು ಅರ್ಥಮಾಡಿಕೊಂಡು ಉಪಯೋಗಿಸಲು ಶುರುಮಾಡಿದ್ದರು. ನನಗೆ ತಿಳಿದಂತೆ, ಬೆಂಗಳೂರಲ್ಲಿದ್ದ ನನಗಿಂತ ಮುಂಚೆ ಡಿಜಿಟಲ್ ಕ್ಯಾಮೆರಾ ಉಪಯೋಗಿಸಲು ಶುರುಮಾಡಿದ್ದರು.
ಅವರ ಹೊಸ ವಿಚಾರಗಳು ಓದುತ್ತಾ ಹೋದಂತೆ, ವಾಸ್ತವತೆಯಿಂದ ದೂರ ಅವರೆಂದೂ ಬದುಕಿಲ್ಲ ಅನ್ನೋದು ಸ್ಪಷ್ಟವಾಗುತ್ತೆ. ಜಾಗತೀಕರಣ ಮತ್ತು ಹೊಸ ಆರ್ಥಿಕ ವ್ಯವಸ್ಥೆಯಿಂದಾಗುವ ಪರಿಣಾಮಗಳನ್ನು ವಿವರಿಸುತ್ತಲೇ, ಅದನ್ನು ಒಪ್ಪಿಕೊಂಡು ಬದುಕಲೇಬೇಕಾದ ಮತ್ತು ಅದರಲ್ಲೇ ನಮ್ಮ ಸ್ವಂತಿಕೆಯನ್ನು ಉಳಿಸಿಕೊಳ್ಳುವ ಅನಿವಾರ್ಯತೆಯನ್ನು ಹೇಳುತ್ತಾರೆ.
ಕರ್ನಾಟಕ ಸರ್ಕಾರ ಸಿದ್ದಪಡಿಸಿದ ಕನ್ನಡ ತಂತ್ರಾಂಶವನ್ನು ಮೈಕ್ರೋಸಾಫ್ಟ್ ಕಂಪನಿಗೆ ಯಾಕೆ ಕೊಡಬಾರದು ಅನ್ನೋದನ್ನ ನನ್ನ ಜೊತೆಯೂ ಮಾತಾಡಿದ್ದರು. ಅದರ ಸೋರ್ಸ್ ಕೋಡ್ ಎಲ್ಲರಿಗೂ ಲಭ್ಯ ಮಾಡದಿದ್ದರೆ, ನಾವೇ ಒಂದು ಹೊಸ ತಂತ್ರಾಂಶ ತಯಾರಿಸಬೇಕು ಅಂತಾನೂ ಹೋರಾಡಿದರು. ಆದರೆ, ಅವರು ಹೇಳಿದ ಕಾರಣಗಳು ನನಗೆ ಸರಿಯಾಗಿ ಅರ್ಥವಾಗುವ ಹೊತ್ತಿಗೆ, ಅವರಿರಲಿಲ್ಲ.
ಯಾವುದೇ `ಇಸಂ’ ಗಳಿಗೆ ಅಂಟಿಕೊಳ್ಳದೆ, ಸಾಮಾಜಿಕ ಜಾಡ್ಯಗಳನ್ನು ಎಗ್ಗಿಲ್ಲದೆ ಟೀಕಿಸಿ, ಆನೆಯಂತೆ ನೆಡೆದುಕೊಂಡು ಹೋದರು ಅನ್ನಿಸಿತು. ಮೈಸೂರಿನ ತಮ್ಮ ಮನೆಯಮೇಲೆ ದಾಳಿಗೆ ಕಾರಣರಾದ ಸಂಘಪರಿವಾರವನ್ನು ದ್ವೇಷಿಸಿದಷ್ಟೇ, ಜಾಗತಿಕ ಇಸ್ಲಾಂ ಮೂಲಭೂತವಾದವನ್ನೂ ದ್ವೇಷಿಸುತ್ತಿದ್ದರು. ಅವರೇ ಬೆಳೆದುಬಂದ ಸಮಾಜವಾದವನ್ನೂ, ರೈತರ ಚಳುವಳಿಗಳು ಹಾದಿ ತಪ್ಪಿದ್ದನ್ನೂ ಟೀಕಿಸಿದರು.
ನನ್ನ ಪಾಲಿಗಂತೂ ತೇಜಸ್ವಿ, ಓದಿದಷ್ಟೂ, ಬರೆದಷ್ಟೂ ಮುಗಿಯದ – ವಿಶ್ಲೇಷಿದಷ್ಟೂ ಅರ್ಥವಾಗದ, ಒಂದು ದೈತ್ಯವಾಗಿ ಪರಿವರ್ತನೆಗೊಂಡರು. ಕೋಟ್ಯಂತರ ವರ್ಷಗಳ ವಿಕಾಸವನ್ನೂ, ಸಮಕಾಲೀನ ಆರ್ಥಿಕ, ಸಾಮಾಜಿಕ ಮತ್ತು ವೈಜ್ಙಾನಿಕ ಬದಲಾವಣೆಯಳನ್ನೂ, ಹೊಸ ಆರ್ಥಿಕ ನೀತಿಯಿಂದ ಸಮಾಜವನ್ನು ನೈತಿಕ ಮತ್ತು ಭೌದ್ದಿಕ ದಿವಾಳಿಯತ್ತ ಕೊಂಡೊಯ್ಯುತ್ತಿರುವುದನ್ನೂ ಮತ್ತು ನಿಧಾನವಾಗಿ ಮನುಕುಲ ವಿನಾಶದತ್ತ ಜಾರುತ್ತಿರುವುದನ್ನೂ, ನಿರರ್ಗಳವಾಗಿ, ಸರಳವಾಗಿ ಪ್ರತಿಪಾದಿಸುತ್ತಿದ್ದರು, ಅನ್ನಿಸುತ್ತದೆ.
ನನ್ನ ಪ್ರಕಾರ, ತೇಜಸ್ವಿಯನ್ನು ವರ್ಣಿಸುವುದು, ಕುರುಡರು ಆನೆಯನ್ನು ಮುಟ್ಟಿ ವರ್ಣಿಸಿದ ಹಾಗೆ. ನಾನು ಯಾವ ಭಾಗವನ್ನು ತಡವಿ ಇಷ್ಟೊಂದು ಬರೆದೆ ಎಂದು ಗೊತ್ತಿಲ್ಲ.
ಈಗಲೂ ಅವರ ಮನೆಯ ಗೇಟಿನ ಮುಂದೆ ಕಾರಿನಲ್ಲಿ ಹೋಗುವಾಗ, `ಇಲ್ಲಿ ಬಂದು ನನ್ನ ಸಮಯ ಹಾಳುಮಾಡಬೇಡ ಮಾರಾಯ,’ ಅನ್ನೋ ಮಾತು ನೆನಪಾಗುತ್ತದೆ.
ಆಗೆಲ್ಲ ಹೋದಾಗ, ನಾನು ತೇಜಸ್ವಿಗೆ ಯಾವುದೇ ಪ್ರಶ್ನೆಗಳನ್ನು ಕೇಳಿದ ನೆನಪಿಲ್ಲ. ಈಗಲೂ ಅವರ ಸಮಯ ಹಾಳುಮಾಡುವಷ್ಟು ಸಮಯ ನನಗಿದೆ. ಅದರ ಜೊತೆ, ನೂರಾರು ಪ್ರಶ್ನೆಗಳಿವೆ. ಆದರೆ, ಅದನ್ನು ಕೇಳೋಕೆ ಅವರೇ ಇಲ್ಲ.
ಈಗಲೂ ನಾನು ಅವರ ತೋಟದ ಗೇಟಿನ ಮುಂದೆ ಹೋಗುವಾಗ ಬೋರ್ಡೊಂದು ಅಣಕಿಸುತ್ತದೆ – ನಿರುತ್ತರ.




ಮಾಕೋನಹಳ್ಳಿ ವಿನಯ್ ಮಾಧವ.