ಆ
ಗಾಳಿಪಟ ಹಾರಿಸಲೇ ಇಲ್ಲ
ಸುಮ್ಮನೆ
ಮಾತಾಡ್ತಾ ನೆಡೆಯುತ್ತಿದ್ದ ನಾನು ತಲೆ ಎತ್ತಿ ನೋಡಿದೆ. ಹಾಗೇ ಅಲ್ಲೇ ನಿಂತೆ. ಸ್ವಲ್ಪ ಮುಂದೆ ಹೋದ
ವಿನೋದ್ ಮತ್ತು ಅಮರೇಶ್, ತಿರುಗಿ ನೋಡಿ `ಏನೋ?’ ಅಂದ್ರು. ಹಾಗೇ ಮೇಲಕ್ಕೆ ಕೈ ತೋರಿಸಿದೆ.
ಅವರೂ
ಹಿಂದೆ ಬಂದವರೇ `ಗಾಳಿಪಟ ನೋಡ್ದೇ ಇದ್ದಹಾಗೆ ನಿಂತಿದ್ದೀಯಲ್ಲ? ಏನ್ಸಮಾಚಾರ?’ ಅಂದ್ರು.
`ಚಿಕ್ಕಂದಿನಲ್ಲಿ,
ಅಪ್ಪ ಕೇರಳಾಪುರ ಅನ್ನೋ ಊರಲ್ಲಿ ಇದ್ದಾಗ, ಗಾಳಿಪಟ ತುಂಬಾ ಹಾರಿಸ್ತಿದ್ದೆ. ಬೆಂಗಳೂರಲ್ಲೂ, ಬಸವೇಶ್ವರನಗರದಲ್ಲಿ
ದೊಡ್ಡಮ್ಮನ ಮನೆಗೆ ರಜಕ್ಕೆ ಬಂದಾಗ ಹಾರಿಸಿದ್ದೀನಿ. ಈಗೆಲ್ಲೂ ಗಾಳಿಪಟಗಳು ಕಾಣೋದಿಲ್ಲ ಕಣ್ರೋ,’ ಅಂದೆ.
`ಈಗೆಲ್ಲಿ
ಹಾರ್ಸೋಕ್ಕಾಗುತ್ತೆ. ಎಲ್ಲಾ ಕಡೆ ಬಿಲ್ಡಿಂಗ್ ಗಳು. ಗಾಳಿನೇ ಬೀಸೋಲ್ಲ,’ ಅಂದ ಅಮರೇಶ.
`ಅಂತೂ
ನನ್ನ ಮಗಳಿಗೆ ಗಾಳಿಪಟ ಹಾರ್ಸೋದು ಹೇಳ್ಕೊಡ್ಬೇಕು ಕಣೋ. ಈಗಿನ ಜನರೇಶನ್ ಗೆ ಮರೆತೇ ಹೋಗಿದೆ ನೋಡು.
ಒಂದು ತಗೊಳ್ತೀನಿ,’ ಅಂದೆ. ನನ್ನ ಮಗಳು ಮರ ಹತ್ತೋದು ಕಲೀಬೇಕು, ಗೋಲಿ, ಬುಗುರಿ ಆಡಬೇಕು ಅನ್ನೋ ಹುಚ್ಚು
ಕನಸುಗಳಿಗೆ, ಅವಳು ಗಾಳಿಪಟ ಹಾರಿಸಬೇಕು ಅನ್ನೋದೂ ಸೇರಿಕೊಂಡಿತು.
`ಯಾರ್ಗೂ
ಹೇಳ್ಬೇಡ ಕಣೋ, ಇಲ್ಲಿ ತಗೊಂಡೆ ಅಂತ. ಶ್ರೀಲಂಕಾಗೆ ಹೋಗಿ ಗಾಳಿಪಟ ತಂದ ಅಂತ ನಗ್ತಾರೆ,’ ಅಂತ ವಿನೋದ್
ತಮಾಶೆ ಮಾಡಿದ.
ಕೊಲೊಂಬೋದ
ಸಮುದ್ರ ತೀರದಲ್ಲಿ ಸಾಯಂಕಾಲ ವಾಕಿಂಗ್ ಹೊರಟಿದ್ದೆವು. ನನ್ನ ಹೆಂಡತಿ ಅಂಬಿಕಾ ಮತ್ತು ಅಮರೇಶನ ಹೆಂಡತಿ
ಸೌಮ್ಯ, ಅಲ್ಲಿನ ಅಂಗಡಿಗಳಲ್ಲಿ ಏನೇನೋ ನೋಡ್ತಿದ್ದರು. ನಾವು ಮೂರು ಜನ ಮಾತ್ರ ನಮ್ಮ ಪಾಡಿಗೆ, ಬ್ಯಾಚುಲರ್
ಬಾಯ್ ವಿನೋದನ್ನ ಗೋಳುಹೊಯ್ಕೊಳ್ತಾ ಇದ್ದಾಗ ನನ್ನ ಕಣ್ಣಿಗೆ ಈ ಗಾಳಿಪಟ ಕಣ್ಣಿಗೆ ಬಿದ್ದದ್ದು.
ಆ
ಗಾಳಿಪಟ ಬಿಡ್ತಾ ಇದ್ದ ಹುಡುಗನ ಹತ್ತಿರ ಹೋಗಿ ನೋಡಿದೆ. ಅವನು ಗಾಳಿಪಟ ಮಾರೋಕೆ ಅಂತಲೇ ಅಲ್ಲಿ ಕೂತಿದ್ದ.
ಆ ಗಾಳಿಪಟಗಳು ನಾವು ಹಾರಿಸುತ್ತಿದ್ದ ಗಾಳಿಪಟಗಳಂತಿರಲಿಲ್ಲ. ಚಿಕ್ಕಂದಿನಲ್ಲಿ ನಾವೆಲ್ಲಾ ಪೇಪರಿನಲ್ಲಿ
ಗಾಳಿಪಟ ಮಾಡಿ, ಕೈಮಗ್ಗ ಇಟ್ಟವರನ್ನು ಕಾಡಿ, ಬೇಡಿ, ದಾರ ತಂದು ಗಾಳಿಪಟ ಹಾರಿಸುತ್ತಿದ್ದೆವು. ಇದು
ಒಂಥರಾ ತೆಳು ಪ್ಲಾಸ್ಟಿಕ್ ನಿಂದ ಮಾಡಿದ್ದು. ಅದರ ದಾರ ಕೂಡ. ಅಷ್ಟು ಸುಲಭವಾಗಿ ಹಾಳಾಗೋದಿಲ್ಲ ಅನ್ನಿಸ್ತು.
ರೇಟು
ಮಾತ್ರ ವಿದೇಶಿಯರಿಗೆ ಹೇಳಿದಂತೆ, 250 ರೂಪಾಯಿ ಅಂತ ಕೂಲಾಗಿ ಹೇಳ್ದ. ಚೌಕಾಶಿಗೆ ಬಗ್ಗುವವನಂತೆ ಕಾಣಲಿಲ್ಲ.
ಹಾಗೂ ಹೀಗೂ ಎಳೆದು, 150 ರೂಪಾಯಿ ಕೊಟ್ಟು, ಗಾಳಿಪಟ ಮತ್ತೆ ದಾರ ತಗೊಂಡು ಬಂದೆ.
ಬೆಂಗಳೂರಿಗೆ
ಬಂದವನೇ ನನ್ನ ಮಗಳು ಸೃಷ್ಟಿಗೆ ಗಾಳಿಪಟ ತೋರಿಸಿದೆ. ಅವಳಂತೂ ಖುಶಿಯಲ್ಲಿ ಕುಣಿದಾಡಿದಳು. ಅದನ್ನು
ಹಾರಿಸೋಕೆ ಅಂತ ಚಾಮರಾಜಪೇಟೆಯ ನನ್ನ ಅತ್ತೆಯ ಮನೆ ಟೆರೆಸ್ ಗೆ ತಗೊಂಡು ಹೋದಾಗ ಅದರ ಸಮಸ್ಯೆಗಳು ಅರ್ಥವಾದವು.
ಮನೆಯ
ಹಿಂಬಾಗದ ದಿಕ್ಕಿನಲ್ಲಿ ಹಲಸಿನ ಮರ ಅಡ್ಡ ಬರುತ್ತಿತ್ತು. ಮುಂದಿನ ಭಾಗದ ದಿಕ್ಕಿನಲ್ಲಿ ಕೇಬಲ್ ವೈರ್
ಗಳು ಇದ್ದವು. ಬಲಗಡೆಯಲ್ಲಿ ದೊಡ್ಡದಾದ ಮನೆಯಿದ್ದರೆ, ಎಡಭಾಗದಲ್ಲಿ ನೇರಳೆ ಮರ ಅಡ್ಡ ಬರುತ್ತಿತ್ತು.
ಇದೊಳ್ಳೆ ಗ್ರಹಚಾರ ಆಯ್ತಲ್ಲ ಅಂತ ಪೇಚಾಡಿಕೊಂಡೆ. ಆಗಲೇ ನೆನಪು ಬಂದಿದ್ದು ಕೆ.ಎನ್. ಫಾರ್ಮ್. ಗಾಳಿಪಟ
ಹಾರಿಸೋಕೆ ಅದಕ್ಕಿಂತ ಒಳ್ಳೆ ಜಾಗ ಇಲ್ಲ ಅಂದ್ಕೊಂಡೆ.
ಕೆ.ಎನ್.
ನಮ್ಮ ಸ್ನೇಹಿತ ಕೃಷ್ಣ ನಾರಾಯಣನನ್ನು ನಾವು ಕರೆಯುತ್ತಿದ್ದ ರೀತಿ. ಹೇಗೂ ಆ ಶನಿವಾರ ಅವರ ಫಾರ್ಮ್
ಗೆ ಹೋಗುವುದಿತ್ತು. ಆಗ ತಗೊಂಡು ಹೋಗೋಣ ಅಂತ ಯೋಚನೆ
ಮಾಡ್ದೆ. ಅಷ್ಟರಲ್ಲೇ ಇನ್ನೊಂದು ವಿಷಯ ತಲೆಗೆ ಬಂತು. ಸೃಷ್ಟಿಯ ಹುಟ್ಟಿದ ಹಬ್ಬಕ್ಕೆ ಮೂರು ವಾರ ಮಾತ್ರ
ಬಾಕಿ ಇತ್ತು. ಅವಳ ಐದನೇ ಹುಟ್ಟಿದ ಹಬ್ಬಕ್ಕೇ ಅವಳು ಗಾಳಿಪಟ ಹಾರಿಸುವುದನ್ನು ಕಲಿಯಲಿ ಅಂತ ಅನ್ನಿಸ್ತು.
ಬನ್ನೇರುಘಟ್ಟಕ್ಕೆ
ಹೊಂದಿಕೊಂಡಂತಿದ್ದ ಕೆ.ಎನ್ ಫಾರ್ಮ್ ಸುತ್ತುತ್ತಾ ಇರುವಾಗಲೇ ಅವರಿಗೆ ನಾನು ಗಾಳಿಪಟದ ವಿಷಯ ಹೇಳಿದೆ.
`ಅಲ್ವೋ… ಅದೇನು ಬರ್ತ್ ಡೇ ಅಂತ ಮುಹೂರ್ತ ಬೇರೆ. ಬರ್ತಾ ತರೋಕೆ ಆಗ್ಲಿಲ್ವಾ. ಇವತ್ತೂ ಹಾರಿಸ್ತಿದ್ಲು,
ಅವತ್ತೂ ಹಾರಿಸ್ತಿದ್ಲು. ನಾನೂ ಹಾರಿಸಿ ತುಂಬಾ ವರ್ಷ ಆಗಿತ್ತು. ಯಾವೂರೋ ನಿಂದು? ಇದನ್ನೆಲ್ಲಾ ನಿಂಗೆ
ಹೇಳ್ಕೊಡ್ಬೇಕಾ?’ ಅಂತ ಕೆ.ಎನ್ ರೇಗಿದರು. ನಾನು ಸುಮ್ಮನೆ ನಕ್ಕೆ.
ಕೆ.ಎನ್
ಹಾಗೇನೆ. ಮನಸ್ಸಿಗೆ ಬಂದಿದ್ದನ್ನು ನೇರವಾಗಿ ಹೇಳ್ತಿದ್ರು. ಜೀವನದಲ್ಲಿ ತುಂಬಾನೇ ಆಸಕ್ತಿ. ಒಂದು
ನಿಮಿಷ ಕೂತಲ್ಲಿ ಕೂರುತ್ತಿರಲಿಲ್ಲ. ಯಾವುದರಲ್ಲೂ ಆಸಕ್ತಿ ಇಲ್ಲ ಅಂತಿಲ್ಲ. ಏನು ನೋಡಿದ್ರೂ, ಅದನ್ನು
ಪೂರ್ತಿ ತಿಳ್ಕೊಳ್ಳೋವರೆಗೆ ಬಿಡ್ತಿರ್ಲಿಲ್ಲ.
`ಯಾವತ್ತು
ಬರುತ್ತೋ ಫೆಬ್ರವರಿ 15?’ ಅಂತ ಕೇಳಿದ್ರು.
`ಗುರುವಾರನೋ,
ಶುಕ್ರವಾರನೋ ಇರ್ಬೇಕು,’ ಅಂದೆ.
`ಸರಿ,
ನಾನೂ ಬರ್ತೀನಿ. ಸಾಯಂಕಾಲ ಆಗ್ಬಹುದು. ನೀನು ಬಂದಿರು. ಹ್ಯಾಗೂ ಶಿವಣ್ಣ ಇರ್ತಾನಲ್ಲ,’ ಅಂದ್ರು.
ಅವತ್ತಿಡೀ
ಸೃಷ್ಟಿ ಕೆ.ಎನ್ ಜೊತಯಲ್ಲೇ ಹೆಚ್ಚು ಸಮಯ ಕಳೆದಳು. ಫಾರ್ಮ್ ನಲ್ಲಿದ್ದ ಕೆರೆಯಲ್ಲಿ ಹರಿಗೋಲಿನಲ್ಲಿ
ಸುತ್ತಿದಳು. ಕೆ.ಎನ್ ಹೊಸದಾಗಿ ಮಾಡಿದ `ನೇಚರ್ ಕ್ಯಾಂಪ್’ ಸುತ್ತಿ, ಅವರು ರಾಜಸ್ಥಾನದಿಂದ ತಂದಿದ್ದ
ಕುದುರೆಯನ್ನು ಬಾಯಿ ಬಿಟ್ಟುಕೊಂಡು ನೋಡಿದಳು. ನಾನೂ ಫಾರ್ಮ್ ಗೆ ಹೋಗಿ ತುಂಬಾ ದಿನಗಳಾಗಿದ್ದವು. ಕೆ.ಎನ್
ತುಂಬಾ ಬದಲಾವಣೆ ಮಾಡಿದ್ದರು.
`ನೋಡು…
ಒಂದು ವರ್ಷದ ಮೇಲಾಯ್ತಲ್ಲ ನೀನು ಬಂದು.ಎಷ್ಟೆಲ್ಲಾ ಬದಲಾವಣೆ ಆಗಿದೆ ಅಂತ,’ ಎಲ್ಲವನ್ನೂ ತೋರಿಸುತ್ತಾ,
ಇನ್ನೂ ಏನೇನು ಮಾಡ್ಬೇಕು ಅಂತ ಹೇಳಿದ್ರು.
ಹಾಗೇನೆ,
`ನಿಮಗೆಲ್ಲ ವೈಲ್ಡ್ ಲೈಫ್ ಒಂದು ಶೋಕಿ ಕಣ್ರೋ. ಎಷ್ಟು ದಿನದಿಂದ ಹೇಳ್ತಿದ್ದೀನಿ ನಿಂಗೆ. ಇಬ್ಬರೂ
ಕೂತ್ಕೊಂಡು ಈ ಬನ್ನೇರುಘಟ್ಟಕ್ಕೆ ಒಂದು ರೂಪ ಕೊಡೋಣಾ ಅಂತ. ನೋಡ್ತಾ ನೋಡ್ತಾ, ಇಡೀ ಬೆಂಗಳೂರೇ ಇಲ್ಲಿವರೆಗೆ
ಬಂತು ನೋಡು,’ ಅಂತ ಬೈದರು.
ಬನ್ನೇರುಘಟ್ಟ
ಕಾಡನ್ನು ಉಳಿಸಲು ಕೆ.ಎನ್ ಅವರದೇ ಯೋಜನೆ ಹಾಕಿದ್ದರು. ಅದನ್ನು ಸರ್ಕಾರದಲ್ಲಿ ಕಾರ್ಯರೂಪಕ್ಕೆ ತರಲು
ಓಡಾಡುತ್ತಿದ್ದರು. ಅದಕ್ಕೆ ನನ್ನನ್ನೂ ಸೇರಿಸಿಕೊಂಡಿದ್ದರು. ಆದರೆ, ಅರಣ್ಯಾಧಿಕಾರಿಗಳನ್ನು ಮತ್ತು
ಜಿಲ್ಲಾಡಳಿತವನ್ನು ಒಂದೇ ಕಡೆ ಸೇರಿಸೋಕ್ಕೆ ಕಷ್ಟ ಆಗ್ತಿತ್ತು. `ಈ ಸಲ ಸೀರಿಯಸ್ ಆಗಿ ಮಾಡೋಣ,’ ಅಂದೆ.
ಕೆ.ಎನ್
ಪರಿಚಯವಾಗಿದ್ದೇ ನನ್ನ ವನ್ಯಜೀವಿಗಳ ಹುಚ್ಚಿನಿಂದ. 1997 ರಲ್ಲಿ, ನಾನು ವನ್ಯಜೀವಿಗಳ ಬಗ್ಗೆ ವರದಿ
ಬರೆಯಲು ಶುರ ಮಾಡಿದಾಗ, ಯಾರಾದರೊಬ್ಬರ ಹೇಳಿಕೆಯನ್ನು ತೆಗೆದುಕೊಳ್ಳಬೇಕಿತ್ತು. ವರದಿಗೆ ಸಂಬಂಧ ಪಟ್ಟ
ಎಲ್ಲಾ ದಾಖಲೆಗಳನ್ನು ಕೊಟ್ಟವರು, ತಮ್ಮ ಹೆಸರು ಬರಬಾರದೆಂದು ಹೇಳುತ್ತಿದ್ದರು. ಅಂಥಾ ಸಂದರ್ಭಗಳಲ್ಲಿ
ನನ್ನ ಸಹಾಯಕ್ಕೆ ಬರುತ್ತಿದ್ದಿದ್ದೇ ಈ ಕೆ.ಎನ್.
ವಿಲ್
ಪೆಗ್ ಎಂಬ ಗುಂಪನ್ನು ಕಟ್ಟಿ, ಸುಮಾರು ವರ್ಷ ಅದನ್ನು ನೆಡೆಸಿದ್ದರು. ನಾನು ಈ ವರದಿಗಳನ್ನು ಬರೆಯುವಾಗ,
ವಿಲ್ ಪೆಗ್ ಚಟುವಟಿಕೆಗಳು ನಿಂತು ಹೋಗಿತ್ತು. ಅದರ ಸದಸ್ಯರೆಲ್ಲ ತಮ್ಮ ವ್ಯವಹಾರಗಳಲ್ಲಿ ಮುಳುಗಿ ಹೋಗಿದ್ದರು.
ಕೆ.ಎನ್ ಮಾತ್ರ, ಇಸ್ರೋದ ತಮ್ಮ ಕೆಲಸಕ್ಕೆ ರಾಜೀನಾಮೆ ಕೊಟ್ಟು, ಸೋಲಾರ್ ಬೇಲಿಯ ವ್ಯವಹಾರು ಶುರುಮಾಡಿಕೊಂಡು,
ವಿಲ್ ಪೆಗ್ ಅಸ್ಥಿತ್ವವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದ್ದರು. ಹಾಗಾಗಿ, ತಮ್ಮ ಮತ್ತು ವಿಲ್ ಪೆಗ್
ಹೆಸರನ್ನು ಧಾರಾಳವಾಗಿ ಬಳಸಿಕೊಳ್ಳಲು ಅನುಮತಿ ನೀಡಿದ್ದರು.
ಕೆ.ಎನ್
ಹೆಸರು ಬಳಸಲು ಆರಂಭಿಸಿ ಒಂದು ವರ್ಷವಾದರೂ ನಾನು ಅವರನ್ನು ಭೇಟಿಯಾಗಿರಲಿಲ್ಲ. ನೇರವಾಗಿ ಮಾತು ಕೂಡ
ಆಡಿರಲಿಲ್ಲ. ಒಂದು ದಿನ ಕೆ.ಎನ್ ಅವರೇ ಫೋನ್ ಮಾಡಿದರು.
`ವಿನಯ್,
ಬನ್ನೇರುಘಟ್ಟದ ಹತ್ತಿರ ಶಿವಪುರದಲ್ಲಿ ಒಂದು ರಾಮಕೃಷ್ಣ ಆಶ್ರಮ ಇದೆ. ಅಲ್ಲಿ ಆಕ್ರಮವಾಗಿ ಕಲ್ಲು ಗಣಿಗಾರಿಕೆ
ನೆಡೆಯುತ್ತಿದೆ. ಸ್ವಾಮೀಜಿಯಂತೂ ಎಲ್ಲಾ ಥರ ಪ್ರಯತ್ನ ಮಾಡಿದರೂ, ಏನೂ ಮಾಡೋಕೆ ಆಗ್ತಾ ಇಲ್ಲ. ಅಲ್ಲಿನ
ಪಂಚಾಯ್ತಿಯವರೆಲ್ಲ ಶಾಮೀಲಾಗಿದ್ದಾರೆ. ನಿಮ್ಮ ಪೇಪರ್ ನಲ್ಲಿ ಒಂದು ರಿಪೋರ್ಟ್ ಹಾಕ್ತೀಯಾ?’ ಅಂತ ನೇರವಾಗಿ
ಕೇಳಿದ್ರು.
`ಅಲ್ಲಿನ
ಫೋಟೋ ಇದ್ದಿದ್ರೆ ಚೆನ್ನಾಗಿತ್ತು. ಸ್ವಾಮೀಜಿ ಹತ್ರಾನೂ ಮಾತಾಡಬೇಕಿತ್ತು. ಮುಂದಿನ ವಾರ ಯಾವಾಗಾದ್ರೂ
ಹೋಗಿ ಬರ್ತೀನಿ,’ ಅಂದೆ.
`ಫೋಟೋ
ನಾನೇ ತೆಗೆದಿದ್ದೀನಿ. ಸ್ವಾಮೀಜಿ ನಂಬರ್ ಬೇಕಾದ್ರೆ ಕೊಡ್ತೀನಿ. ಇಲ್ಲದೇ ಹೋದ್ರೆ ಬೆಂಗಳೂರಿನ ಆಶ್ರಮಕ್ಕೆ
ಕರೆಸ್ತೀನಿ,’ ಅಂದ್ರು.
`ಸರಿ,
ನಂಬರ್ ಕೊಡಿ. ಫೋಟೋ ಎಲ್ಲಿಂದ ಕಲೆಕ್ಟ್ ಮಾಡ್ಬೇಕು?’ ಅಂತ ಕೇಳ್ದೆ.
`ಅದೇನು
ಮಹಾ.. ನಿನ್ನ ಆಫೀಸಿಗೇ ಕಳುಹಿಸ್ತೀನಿ ಬಿಡು,’ ಅಂದ್ರು.
ಅವರು
ನೇರವಾಗಿ ಏಕವಚನಕ್ಕೆ ಇಳಿದರೂ, ನನಗೆ ಅದರಲ್ಲಿ ಅತ್ಮೀಯತೆ ಕಾಣಿಸಿತು. ಇನ್ನೊಂದು ಘಂಟೆಯೊಳಗೆ ಫೋಟೋ
ಬಂದು ನನ್ನ ಆಫೀಸಿನಲ್ಲಿ ಬಿದ್ದಿತ್ತು. ಫೋಟೋ ನೋಡಿದ ತಕ್ಷಣ ಅಲ್ಲಿ ಆಗುತ್ತಿದ್ದ ಅನಾಹುತ ಅರ್ಥವಾಯ್ತು.
ಸ್ವಾಮೀಜಿಗೆ ಮಾತಾಡಿ, ಒಂದು ವರದಿ ಬರೆದು ಹಾಕಿದೆ.
ಅದಾದ
ಒಂದು ವಾರದಲ್ಲಿ, ಆಗಿನ ಹೈಕೋರ್ಟ್ ನ್ಯಾಯಾಧೀಶರಾದ ಜಸ್ಟೀಸ್ ಸಲ್ಡಾನರವರು ಆ ಕಲ್ಲುಗಣಿಗೆ ಹೋಗಿಯೇಬಿಟ್ಟರು.
ವಾಪಾಸು ಬಂದವರೇ, ನನ್ನ ವರದಿಯನ್ನೇ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಅಂತ ಪರಿಗಣಿಸಿ, ಗಣಿಗಾರಿಕೆಯನ್ನು
ನಿಲ್ಲಿಸಿಯೇ ಬಿಟ್ಟರು. ಅದಾಗಿ ಇನ್ನೊಂದು ವಾರದ ನಂತರ, ಗಣಿಗಾರಿಕೆ ನಿಜವಾಗಲೂ ನಿಂತಿದೆಯಾ ಅಂತ ನಾನು
ನೋಡಲು ಹೋಗಿ, ಅಲ್ಲಿನ ಗಣಿಯವರಿಗೆ ಅದು ಗೊತ್ತಾಗಿ, ನನ್ನನ್ನು ಅಟ್ಟಾಡಿಸಿ, ದೊಡ್ಡ ಫಜೀತಿಯಾಗಿತ್ತು.
ಕೊನೆಗೆ ನಾನೇ ಅವರ ವಿರುದ್ದ ತಿರುಗಿಬಿದ್ದಾಗ, ವಿಷಯ ರಾಜಿ-ಪಂಚಾಯ್ತಿಯೊಂದಿಗೆ ಮುಕ್ತಾಯವಾಗಿ, ನಾನು
ವಾಪಾಸ್ ಬಂದೆ.
ಮರುದಿನ
ಕೆ.ಎನ್ ಗೆ ಫೋನ್ ಮಾಡಿ ವಿಷಯ ಹೇಳಿದೆ. `ಹೋಗ್ಲಿ ಬಿಡು. ಅಲ್ಲಿ ಸಧ್ಯಕ್ಕೆ ಗಣಿಗಾರಿಕೆ ನಿಂತಿದೆ.
ಶನಿವಾರ ಏನ್ಮಾಡ್ತಾ ಇದ್ದೀಯಾ? ಶುಕ್ರವಾರ ಸಾಯಂಕಾಲ, ಅಲ್ಲೇ ನನ್ನ ಫಾರ್ಮ್ ಗೆ ಹೋಗ್ತಾ ಇದ್ದೀನಿ.
ನೀನೂ ಬಾ,’ ಅಂದರು.
ಅಲ್ಲಿಯವರೆಗೆ
ಕೆ.ಎನ್ ಗೆ ಬನ್ನೇರುಘಟ್ಟದ ಹತ್ತಿರ ಫಾರ್ಮ್ ಇರೋದು ನಂಗೆ ಗೊತ್ತಿರಲಿಲ್ಲ. ಅದೂ ಅಲ್ದೆ, ಅವರ ಮುಖವನ್ನೇ
ನೋಡಿರಲಿಲ್ಲ. ಹಾಗೇ ಮನೆಗೆ ಬಂದವನೇ, ಆಗಿನ ನನ್ನ ರೂಂ ಮೇಟ್ ಆಗಿದ್ದ ರಾಜೇಶ್ ಗೆ ವಿಷಯ ಹೇಳ್ದೆ.
`ಹೋಗಿ ನೋಡೋಣ,’ ಅಂದ.
ಸರಿ,
ನೆಟ್ಟಕಲ್ಲಪ್ಪ ವೃತ್ತದ ಹತ್ತಿರ ಇರುವ ಅವರ ಮನೆಗೆ ಹೋದೆವು. ಅಲ್ಲಿಂದ ಅವರ ಜೀಪು ಹತ್ತಿ ಬನ್ನೇರುಘಟ್ಟದ
ಕಡೆಗೆ ಹೊರಟೆವು. ಜೀಪಿನಲ್ಲಿ ನೋಡಿದರೆ ಒಂದೆರೆಡು ಕಂತ್ರಿ ನಾಯಿಗಳು ಮುದುಡಿ ಕೂತಿದ್ದರು. `ಈ ನಾಯಿಗಳು
ಫಾರ್ಮಿಗಾ?’ ಅಂತ ಕೇಳ್ದೆ.
`ಹೌದು
ಕಣೋ. ಅಲ್ಲಿನ ನಾಯಿಗಳನ್ನು ಚಿರತೆ ತಿಂದು ಹಾಕಿದೆ,’ ಅಂದ್ರು.
`ಇವನ್ನ
ಬಿಟ್ಟರೆ ಚಿರತೆ ಇವನ್ನೂ ತಿನ್ನುತ್ತೆ,’ ಅಂದೆ.
`ತಿನ್ನಲಿ
ಬಿಡು. ಊರವರ ಕುರಿ ಹಿಡಿಯೋದು ಕಮ್ಮಿ ಆಗುತ್ತೆ. ಆ ಕುರಿಗಳನ್ನು ಚಿರತೆ ಹಿಡಿದ್ರೆ, ಅವರು ಚಿರತೆಯನ್ನ
ವಿಷ ಹಾಕಿ ಕೊಲ್ತಾರೆ. ಅದ್ರ ಬದಲು, ಬೀದಿ ನಾಯಿ ಹಿಡ್ಕೊಂಡು ತಿನ್ನಲಿ. ನಾನೂ ಅದಕ್ಕೆ ನಾಯಿ ಸಾಕೋದು,’
ಅಂದ್ರು. ನಾನೂ ಮತ್ತು ರಾಜೇಶ, ಮುಖ ಮುಖ ನೋಡಿಕೊಂಡೆವು.
ಆನೆಗಳ
ನಾಡಿನಲ್ಲಿರುವ ಈ ಫಾರ್ಮ್ ನಲ್ಲಿ ಏನೇನು ಬೆಳಿತಾರೆ ಅಂತ ನನಗೆ ಕುತೂಹಲವಿತ್ತು. ಆದ್ರೆ ಶಿವಪುರಕ್ಕಿಂತ
ತುಂಬಾ ಮುಂಚೆ, ರಾಗಿಹಳ್ಳಿಯ ಹತ್ತಿರ ಬಲಕ್ಕೆ ಇವರ ಫಾರ್ಮ್ ಇದ್ದಿದ್ದು. ಫಾರ್ಮ್ ತಲುಪಿದ ಮೇಲೆ ನೋಡಿದರೆ,
ಅಲ್ಲೋಂದು ಮನೆ ಬಿಟ್ಟರೆ ಇನ್ನೇನೂ ಇರಲಿಲ್ಲ. `ಇಲ್ಲೇನು ಬೆಳಿತೀರಾ?’ ಅಂತ ಕೇಳ್ದೆ.
`ಫಾರ್ಮ್
ಅಂದ್ರೆ ಅಗ್ರಿಕಲ್ಚರ್ ಫಾರ್ಮ್ ಅಲ್ಲ ಕಣೋ. ಈ ಜಾಗ ನಂಗೆ ತೋರಿಸಿದ್ದು ರಾಮಕೃಷ್ಣಾಶ್ರಮದ ಸ್ವಾಮೀಜಿನೇ.
ಇಲ್ಲಿ ಮೇಲುಗಡೆ ಇದೆಯಲ್ಲ ಬಂಡೆ, ಅದನ್ನ ದೊಡ್ಡಾನ ಗುಡ್ಡ ಅಂತ ಕರೀತಾರೆ. ಆ ರಾಗಿಹಳ್ಳಿ ಕಲ್ಲು ಗಣಿ
ನೋಡಿದ್ಯಲ್ಲ, ಅದರ ಮಾಲಿಕರು ಈ ಗುಡ್ಡದ ಮೇಲೂ ಕಣ್ಣು ಹಾಕಿದ್ದರು. ಸ್ವಾಮೀಜಿ ನನ್ನನ್ನು ಕರ್ಕೊಂಡು
ಬಂದು ತೋರಿಸಿದರು. ಇದನ್ನು ಹ್ಯಾಗಾದ್ರೂ ಮಾಡಿ ಉಳಿಸ್ಬೇಕೂ ಅಂತ ಹೇಳಿದ್ರು. ನಂಗೂ ಜಾಗ ಇಷ್ಟ ಆಯ್ತು.
ಈ ಗುಡ್ಡದ ಸುತ್ತ 35 ಎಕರೆಯನ್ನು ಸರ್ಕಾರದಿಂದ ದುಡ್ಡು ಕೊಟ್ಟು ತಗೊಂಡೆ. ಅದಕ್ಕೆ ಮೂರು ಕಡೆಯಿಂದಲೂ
ಬೇಲಿ ಹಾಕಿ, ಇನ್ನೊಂದು ಕಡೆಯನ್ನು ಹಾಗೇ ಬಿಟ್ಟಿದ್ದೀನಿ. ಕಾಡಿನ ಕಡೆಗೆ. ಎಲ್ಲಾ ಪ್ರಾಣಿಗಳೂ ಇಲ್ಲಿಗೆ
ಬರ್ತಾವೆ. ಅದಕ್ಕೆ ನೋಡು, ಬೇಸಿಗೆಯಲ್ಲಿ ಅವುಗಳಿಗೆ ಕುಡಿಯೋಕೆ ನೀರು ಸಿಗಲಿ ಅಂತ ಕೆರೆ ತೋಡಿಸ್ತಿದ್ದೀನಿ,’
ಅಂದ್ರು.
ಸ್ವಲ್ಪ
ಹೊತ್ತಿನ ಬಳಿಕೆ, ನಾವು ಮೂವರೂ ಗುಡ್ಡಕ್ಕೆ ನೆಡೆದುಕೊಂಡು ಹೋದೆವು. ಗುಡ್ಡದ ಮೇಲೆ ಕೆ.ಎನ್ ಒಂದು
ವಾಚ್ ಟವರ್ ಕಟ್ಟಿದ್ದರು. ಅಲ್ಲಿ ನಿಂತರೆ, ಇಡೀ ಬನ್ನೇರುಘಟ್ಟ ಕಾಡು ಕಾಣುತ್ತಿತ್ತು. ಅಂಥಾ ಸುಂದರವಾದ
ದೃಶ್ಯವನ್ನು ಕಾಪಾಡಿದ ಕೆ.ಎನ್ ಬಗ್ಗೆ ಹೆಮ್ಮೆ ಎನ್ನಿಸಿತು. ಅಲ್ಲಿಂದ ಮುಂದೆ, ಕೆ.ಎನ್ ಫಾರ್ಮ್ ಬಗ್ಗೆ
ವಿಪರೀತ ಸಲುಗೆ ಇಟ್ಟುಕೊಂಡೆ. ಇಷ್ಟ ಬಂದಾಗಲೆಲ್ಲ ಫಾರ್ಮ್ ಗೆ ಹೋಗ್ತಿದ್ದೆ. ವಾರದಲ್ಲಿ ಒಂದೆರೆಡು
ಸಲವಾದ್ರೂ ಕೆ.ಎನ್ ಭೇಟಿಯಾಗ್ತಿದ್ದೆ. ಎಷ್ಟೋ ಸಲ ನಾಗರಹೊಳೆಗೂ ಒಟ್ಟಿಗೆ ಹೋಗಿದ್ದೆವು.
ಅದು
ನನ್ನ ಮದುವೆಯಾಗುವವರೆಗೆ ಮುಂದುವರೆಯಿತು. ಆಮೇಲೆ ನಮ್ಮ ಭೇಟಿ ನಿಧಾನವಾಗಿ ಕಡಿಮೆಯಾಗತೊಡಗಿತು. ಹೋದರೂ,
ಫಾರ್ಮ್ ನಲ್ಲಿ ಉಳಿಯದೇ, ವಾಪಾಸ್ ಬರುತ್ತಿದ್ದೆ. ಸೃಷ್ಟಿಯ ಹುಟ್ಟಿದ ಹಬ್ಬಕ್ಕೆ ಬಂದ ಸಂದರ್ಭದಲ್ಲಿ
ಬಂದಾಗ ಎರಡು ದಿನ ಉಳಿಬೇಕು ಅಂತ ಅನ್ಕೊಂಡು, ಬೆಂಗಳೂರಿಗೆ ವಾಪಾಸ್ ಬಂದೆ.
ಕಣ್ಣು
ಮುಚ್ಚಿ ಬಿಡುವುದರೊಳಗೆ ಎರಡು ವಾರ ಕಳೆದು ಹೋಯ್ತು. ಅವತ್ತು ಶುಕ್ರವಾರ ಸಾಯಂಕಾಲ. ಕೆ.ಎನ್ ಗೆ ಫೋನ್
ಮಾಡಿ, ಮುಂದಿನ ಗುರುವಾರದ ಕಾರ್ಯಕ್ರಮದ ಬಗ್ಗೆ ನೆನಪಿಸಬೇಕು ಅಂತ ಯೋಚಿಸಿದೆ. ಫೋನ್ ಸಿಗಲಿಲ್ಲ. ಫಾರ್ಮ್
ನಲ್ಲಿದ್ದಾರೆ ಅಂತ ಗ್ಯಾರಂಟಿಯಾಯ್ತು. ಸರಿ, ಸೋಮವಾರ ಫೋನ್ ಮಾಡಿದ್ರಾಯ್ತು ಅಂತ ಸುಮ್ಮನಾದೆ. ಶನಿವಾರ
ರಾತ್ರಿ, ಸುಮಾರು 10.30 ಘಂಟೆಗೆ, ಪ್ರವೀಣ್ ಭಾರ್ಗವ್ ಒಂದು ಎಸ್.ಎಂ.ಎಸ್ ಕಳುಹಿಸಿದರು: `ಕೆ. ಎನ್
ನೋ ಮೋರ್,’ ಅಂತ.
ತಕ್ಷಣವೇ
ಪ್ರವೀಣ್ ಗೆ ಫೋನ್ ಮಾಡಿ ಕೇಳ್ದೆ: `ಏನಾಯ್ತು?’ ಅಂತ.
ಆಗಿದ್ದಿಷ್ಟು.
ಫಾರ್ಮಿನ ಕೆರೆಯ ಪಕ್ಕದಲ್ಲಿ, ನೆರಳಿಗೆ ಮತ್ತು ಹರಿಗೋಲುಗಳನ್ನು ಇಡಲು, ಕೆ.ಎನ್ ಒಂದು ಶೆಡ್ ಕಟ್ಟಿಸಿದ್ದರು.
ಇದ್ದಕ್ಕಿದ್ದಂತೆ, ಈ ಶೆಡ್ಡು ಸ್ವಲ್ಪ ಅಗಲ ಮಾಡಿದರೆ, ಅಲ್ಲಿ ವನ್ಯಜೀವಿ ಛಾಯಾಚಿತ್ರಗಳ ಒಂದು ಗ್ಯಾಲರಿ
ಮಾಡಬಹುದು ಅಂತ ಮನಸ್ಸಿಗೆ ಬಂತಂತೆ. ಹಾಗಾಗಿ, ಬೆಂಗಳೂರಿಂದ ಸ್ವಲ್ಪ ಹೆಂಚುಗಳನ್ನು ತರಲು ಹೇಳಿದ್ದರಂತೆ.
ಅವತ್ತು
ಫಾರ್ಮ್ ನಲ್ಲಿ, ಕೆ.ಎನ್ ಜೊತೆ ಅವರ ಪತ್ನಿ ಶೋಭಾ, ಅನಿಲ್ ಕುಂಬ್ಳೆ ತಮ್ಮ ದಿನೇಶ್ ಕುಂಬ್ಳೆ ಕೂಡ
ಇದ್ದರಂತೆ. ಸಾಯಂಕಾಲದ ಹೊತ್ತಿಗೆ ಹೆಂಚುಗಳು ಬಂದಿವೆ. ಬೆಳಗ್ಗೆ ಹಾಕಿಸಿದರಾಯ್ತು ಅಂತ ಎಲ್ಲರೂ ಹೇಳಿದರೂ,
ಕೆ.ಎನ್ ಮಾತ್ರ ಈಗಲೇ ಹಾಕಿಸಿದರೆ ಒಂದು ಕೆಲಸ ಮುಗಿಯುತ್ತೆ ಅಂತ ಹಟ ಹಿಡಿದರಂತೆ.
ಶೆಡ್ಡು
ಅಗಲ ಮಾಡೋಕೆ ಅಂತ, ಇದ್ದ ಶೆಡ್ಡಿನ ಛಾವಣಿಗೆ ಒಂದು ದೊಡ್ಡ ಕಬ್ಬಿಣದ ತೊಲೆಯನ್ನು ಹಾಕಿಸಿದ್ದರು. ಕೆಲಸದವನು
ಹೆಂಚು ಹಾಕಲು ಶುರು ಮಾಡಿದ ತಕ್ಷಣ, ಭಾರ ತಡೆಯದ ಸೂರು ಕೆಳಗೆ ಬರಲು ಆರಂಭಿಸಿತು. ಕೆ.ಎನ್ ಪಕ್ಕದಲ್ಲಿದ್ದ
ದಿನೇಶ್ ಕುಂಬ್ಳೆ, ಓಡಿ ಹೋಗಿ ಕೆರೆಗೆ ಹಾರಿದ್ದಾರೆ. ಆದರೆ, ಕೆ.ಎನ್ ಮಾತ್ರ, ಅಲ್ಲಾಡದೆ ನಿಂತಿದ್ದಾರೆ.
ಇಡೀ ಸೂರು ಅವರ ಮೇಲೆ ಬಿದ್ದರೆ, ಕಬ್ಬಿಣದ ತೊಲೆ ಅವರ ತಲೆಗೇ ಹೊಡೆದಿದೆ. ಎಲ್ಲರೂ ಸೇರಿ ಅವರನ್ನು
ಜೀಪಿನಲ್ಲಿ ಹಾಕಿಕೊಂಡು ಬೆಂಗಳೂರಿಗೆ ಬರುವ ಹೊತ್ತಿನಲ್ಲಿ, ಅವರು ತೀರಿಕೊಂಡಿದ್ದರು.
`ಸುಮಾರು
ಮುಕ್ಕಾಲು ನಿಮಿಷ ಸಮಯವಿತ್ತು ವಿನಯ್. ದಿನೇಶ್ ಓಡಲು ಕೂಗಿಕೊಂಡರೂ, ಏನೂ ಆಗೋಲ್ಲ ಕಣೋ ಅಂತ ಹೇಳ್ಕೊಂಡು
ಕೆ.ಎನ್ ಅಲ್ಲೇ ನಿಂತಿದ್ದನಂತೆ. ಬರೀ ಐದು ಹೆಜ್ಜೆ ಆ ಕಡೆ ಹೋಗ್ಬೇಕಿತ್ತು ಅಷ್ಟೆ. ನೆಡ್ಕೊಂಡು ಹೋಗಿದ್ರೂ
ಬಚಾವಾಗುತ್ತಿದ್ದ. ಎಲ್ಲಾ ಗ್ರಹಚಾರ,’ ಅಂದ್ರು ಪ್ರವೀಣ್.
ನಂಗೇನು
ಮಾತಾಡಬೇಕು ಅಂತ ಗೊತ್ತಾಗಲಿಲ್ಲ. ಬೆಳಗ್ಗೆ ಕೆಂಪೇಗೌಡ ಆಸ್ಪತ್ರೆಗೆ ಹೋಗಿ, ಅಲ್ಲಿಂದ ಕೆ.ಎನ್ ದೇಹದ
ಜೊತೆ ಅವರ ಮನೆಗೆ ಹೋದೆ. ದೇಹವನ್ನು ಮನೆಯ ಮುಂದೆ ಇಟ್ಟ ಮೇಲೆ ಏನು ಮಾಡ್ಬೇಕು ಅಂತ ನನಗೆ ಗೊತ್ತಾಗಲಿಲ್ಲ.
ಶೋಭಾರವರಾಗಲಿ, ಕೆ.ಎನ್ ನ ಇಬ್ಬರು ಹೆಣ್ಣು ಮಕ್ಕಳಾದ ಅರಣ್ಯ ಮತ್ತು ಕಾನನ, ನನಗೆ ಪರಿಚಯವಿರಲಿಲ್ಲ.
ಅಷ್ಟರಲ್ಲಿ ಚಿದಾನಂದ ಮೂರ್ತಿಯವರ ಮಗ ವಿನಯ್ ಸಿಕ್ಕಿದರು.
`ವಿನಯ್,
12 ಘಂಟೆಗೆ ಬಾಡಿ ಎತ್ತುತ್ತಾರಂತೆ,’ ಅಂದ್ರು.
`ಇಲ್ಲ
ವಿನಯ್. ಇನ್ನು ನಂಗೆ ಕೆ.ಎನ್ ನ ನೋಡೋಕೆ ಆಗೋಲ್ಲ,’ ಅಂದೆ.
`ಕ್ರಿಮೇಶನ್
ಗೆ ಇರೋಲ್ವ?’ ಅಂತ ಕೇಳಿದ್ರು.
`ಇಲ್ಲ,’
ಅಂದವನೇ, ಸೀದ ಕಾರು ಹತ್ತಿ ಮನೆ ಕಡೆ ಹೋದೆ.
ಅಲ್ಲಿಂದ
ಮುಂದೆ ನಾನು ಯಾವತ್ತೂ ರಾಗಿಹಳ್ಳಿಯ ಕಡೆಗೆ ಹೋಗಲೇ ಇಲ್ಲ. ಹಾಗೇ, ಆ ಗಾಳಿ ಪಟ ಕೂಡ ಹಾರಿಸಲೇ ಇಲ್ಲ…..
ಮಾಕೋನಹಳ್ಳಿ
ವಿನಯ್ ಮಾಧವ