ಶನಿವಾರ, ಡಿಸೆಂಬರ್ 31, 2011

ಶ್ರೀಲಂಕಾ


ಸ್ಟೆನ್ ಗನ್ ಮತ್ತು ರಷ್ಯನ್ ಹುಡುಗಿಯರು…





ಯಾಕೊ ಶಿವಾನಂದ ವೃತ್ತದಲ್ಲಿ ಸಿಗ್ನಲ್ ತುಂಬಾ ಹೊತ್ತು ನಿಂತಿತ್ತು. ಹಾಗೇ, ಸುತ್ತಲೂ ಇದ್ದ ಒಂದೊಂದೇ ಬೋರ್ಡ್ ಗಳನ್ನು ಓದುತ್ತಿದ್ದೆ. `ಶ್ರೀಲಂಕಾದಲ್ಲಿ, ಮೂರು ದಿನ ಮತ್ತು ಎರಡು ರಾತ್ರಿಗೆ ಬರೀ 11 ಸಾವಿರ’ ಅಂತ ದೊಡ್ಡದಾದ ಬೋರ್ಡ್ ಕಾಣಿಸಿತು.
2006ನೇ ಇಸವಿ ಮುಗಿಯಲು ಇನ್ನು ಹದಿನೈದು ದಿನ ಬಾಕಿ ಇತ್ತು. ಹಾಗೇ ಫೋನ್ ಎತ್ತಿ ಅಂಬಿಕಾಗೆ ಫೋನ್ ಮಾಡಿ ಕೇಳಿದೆ: `ಹೊಸ ವರ್ಷಕ್ಕೆ ಶ್ರೀಲಂಕಾಗೆ ಹೋಗೋಣ್ವಾ?’. ಮೊದಲು ತಮಾಷೆ ಅನ್ಕೊಂಡವಳು, ಬೋರ್ಡ್ ಬಗ್ಗೆ ಹೇಳಿದಾಗ, `ಜೊತೆಗ್ಯಾರು ಬರ್ತಿದ್ದಾರೆ?’ ಅಂತ ಕೇಳಿದಳು.
ಅಲ್ಲೀವರೆಗೆ, ನಾನೂ ಯೋಚನೆ ಮಾಡಿರ್ಲಿಲ್ಲ. ಸರಿ, ನನ್ನ ಹೈಸ್ಕೂಲ್ ಗೆಳೆಯ ಮತ್ತು ಎವರ್ ಗ್ರೀನ್ ಬ್ಯಾಚೆಲರ್ ವಿನೋದ್ ಗೆ ಫೋನ್ ಮಾಡಿದೆ. ಹಾಗೇನೆ, ಎಲ್ಲಾದಕ್ಕೂ `ಆಗೊಲ್ಲ’ ಅಂತ ಶುರುಮಾಡುವ ಅಮರೇಶ್ ದಾಸಪ್ಪ ಮತ್ತು ಅವನ ಹೆಂಡತಿ ಸೌಮ್ಯಳನ್ನೂ ಹೊರಡಿಸಿದೆ.
ಲಂಕೆಯನ್ನು ತಲುಪಿದ ತಕ್ಷಣ ಮಾಡಿದ ಮೊದಲ ಕೆಲಸ ಎಂದರೆ, ವಿಮಾನ ನಿಲ್ದಾಣದಲ್ಲಿದ್ದ ಸುಂಕರಹಿತ ಮಾಲ್ ನಲ್ಲಿ ಸುತ್ತಾಡಿದ್ದು. ನಾವು ಮೂವರೂ ವೈನ್ ಶಾಪ್ ನಲ್ಲಿ ತುಂಬಾನೇ ಬ್ಯುಸಿಯಾಗಿದ್ದ ಕಾರಣ ಅಂಬಿಕಾ ಮತ್ತು ಸೌಮ್ಯ ಅವರ ದಾರಿ ನೋಡಿಕೊಂಡರು. ಎರಡು ಗಂಟೆ ಬಿಟ್ಟು ನಾವೆಲ್ಲಾ ಕೆಳಗೆ ಬಂದು ನಮ್ಮ ನಮ್ಮ ಬ್ಯಾಗ್ ತಗೊಳ್ಳೋಕೆ ಬಂದೆವು. ಅಮರೇಶ್ ದಾಸನ ಬ್ಯಾಗ್ ಮಾತ್ರ ನಾಪತ್ತೆ. ಹೆಚ್ಚು ಕಡಿಮೆ ಒಂದು ಗಂಟೆ ಹುಡುಕಿದ ಮೇಲೆ, ಅಮರೇಶನ ಬ್ಯಾಗ್ ನಂತೆ ಕಾಣುವ ಇನ್ನೊಂದು ಬ್ಯಾಗ್ ಅಲ್ಲಿತ್ತು. ಯಾಕೋ ಅನುಮಾನ ಬಂದು ವಿಚಾರಿಸಿದರೆ, ನನ್ನ ಅನುಮಾನ ಸರಿಯಾಗೇ ಇತ್ತು. ಯಾರೋ ಅಮರೇಶನ ಬ್ಯಾಗನ್ನು ತೆಗೆದುಕೊಂಡು, ಅವರದನ್ನು ಬಿಟ್ಟು ಹೋಗಿದ್ದರು. ಸರಿ, ನಿಲ್ದಾಣದವರಿಗೆ ನಮ್ಮ ಹೋಟೆಲ್ ನ ವಿವರಗಳನ್ನು ಕೊಟ್ಟು, ಹೊರಟೆವು.
ಮಾರನೇ ದಿನ ಬೆಳಗ್ಗೆ, ಎಲ್ಲರ ಸ್ನಾನವಾದರೂ ಅಮರೇಶ ಮಾತ್ರ ಹಾಸಿಗೆ ಮೇಲೇ ಕೂತಿದ್ದ. `ಏನೋ? ಅಂಡರ್ ವೇರ್ ಸಾಲ ಬೇಕಾ ಸ್ನಾನ ಮಾಡೋಕೆ?’ ಅಂತ ನಾವು ತಮಾಶೆ ಮಾಡುತ್ತಿರುವಾಗಲೇ, ಬ್ಯಾಗ್ ತೆಗೆದುಕೊಂಡು ಹೋಗಿದ್ದವರು ಬಂದು, ಕ್ಷೆಮೆ ಕೇಳಿ, ಬ್ಯಾಗನ್ನು ವಾಪಾಸ್ ಕೊಟ್ಟು ಹೋದರು.
ಆ ದಿನವಿಡೀ ನಾವು ಕೊಲಂಬೋ ನಗರವನ್ನು ಸಿಟಿ ಬಸ್ನಲ್ಲಿ ಸುತ್ತಾಡಿದೆವು. ನಮಗೆ ತಿಳಿದದ್ದಿಷ್ಟು. ಶ್ರೀಲಂಕಾ ಜನಗಳು, ತಮ್ಮ ದೇಶವನ್ನು ತುಂಬಾ ಶುಚಿಯಾಗಿಡುತ್ತಾರೆ. ತುಂಬಾ ಮೃದುಭಾಷಿಗಳು. ನೆಡೆದುಕೊಂಡು ಹೋಗುವಾಗ, ಯಾವುದೇ ಕಾರಣದಿಂದ ನಾವು ರಸ್ತೆಗೆ ಇಳಿದರೆ, ಎಲ್ಲಾ ಕಡೆಗಳಿಂದ ಬರುವ ವಾಹನಗಳೂ ನಿಲ್ಲುತ್ತವೆ. ಯಾವುದೇ ಚಾಲಕರ ಮುಖದಲ್ಲಿ ಅಸಹನೆ ಇರುವುದಿಲ್ಲ. ನಗುತ್ತಲೇ, `ರಸ್ತೆ ದಾಟಿ’ ಎಂಬಂತೆ ಕೈ ತೋರಿಸುತ್ತಾರೆ. ಇವೆಲ್ಲಾ ನಮ್ಮ ದೇಶದಲ್ಲಿ ಸಾಧ್ಯವಿಲ್ಲ.
ಸಾಯಂಕಾಲದ ಹೊತ್ತಿಗೆ, ನನಗೆ ಲಂಕನ್ನರು ತುಂಬಾ ಇಷ್ಟವಾಗತೊಡಗಿದರು. ನಾವಿದ್ದ ಹೋಟೆಲ್ ಗಲಧರಿ ಸಮುದ್ರ ತೀರದಲ್ಲೇನೊ ಇತ್ತು. ಅದರ ಎದುರಿನಲ್ಲಿದ್ದಿದ್ದು, ಶ್ರೀಲಂಕಾದ ಹಳೇ ಸಂಸತ್ ಭವನ. ಹಿಂದುಗಡೆ, ವಿಶ್ವ ವಾಣಿಜ್ಯ ಕೇಂದ್ರ ಮತ್ತು ಶ್ರೀಲಂಕಾ ರಿಸರ್ವ್ ಬ್ಯಾಂಕ್. ಸ್ವಲ್ಪ ಹಿಂದೆ ಹೋಗಿ ನೋಡಿದಾಗ ಗೊತ್ತಾಯ್ತು, ಅದು ಶ್ರೀಲಂಕಾದ ನೌಕಾನೆಲೆ ಅಂತ. ಸುತ್ತಾ ಮುತ್ತಾ ಹೋಟೆಲ್ ಗಳು ಇದ್ದರೂ, ಅದು ಮಿಲಿಟರಿಯ ಚಟುವಟಿಕೆ ಕೇಂದ್ರ ಅಂತ ಗೊತ್ತಾಯ್ತು. ಎಲ್ ಟಿ ಟಿ ಇ ಏನಾದರೂ ಕೊಲಂಬೋ ಮೇಲೆ ದಾಳಿ ನೆಡೆಸಿದರೆ, ಅದು ಇದೇ ಜಾಗವನ್ನು ಅಯ್ದುಕೊಳ್ಳುತ್ತದೆ ಅಂತ ನನ್ನ ಕ್ರೈಂ ರಿಪೋರ್ಟರ್ ಮನಸ್ಸು ಹೇಳಿತು.
ಸಾಯಂಕಾಲ ಹೋಟೆಲ್ ಗೆ ವಾಪಾಸ್ ಬಂದವರೇ, ಎಲ್ಲರೂ ಸುತ್ತಾಡಲು ಹೊರಟೆವು. ಹೊರಗೆ ಬಂದ ತಕ್ಷಣ, ನಾನು ಹಳೇ ಸಂಸತ್ ಭವನದ ಫೋಟೋ ತೆಗೆಯಲು ಹೊರಟೆ. `ಸರ್…ಸರ್..’ ಅಂತ ಯಾರೊ ಕರೆದ ಹಾಗಾಯಿತು. ನೋಡಿದರೆ, ಶ್ರೀಲಂಕಾದ ಪೋಲಿಸ್ ನಿಂತಿದ್ದ. ಸಿಂಹಳಿ ಭಾಷೆಯಲ್ಲಿ, ವಿನಮ್ರನಾಗಿ ಏನೋ ಹೇಳಿದ. `ನಾನು ಟೂರಿಸ್ಟ್. ನನಗೆ ನಿಮ್ಮ ಭಾಷೆ ಅರ್ಥವಾಗುವುದಿಲ್ಲ,’ ಅಂತ ನಗುತ್ತಲೇ ಇಂಗ್ಲಿಷ್ ನಲ್ಲಿ ಹೇಳಿದೆ.
`ಸೆಕ್ಯುರಿಟಿ ಝೋನ್ ಸರ್… ನೋ ಫೋಟೋಸ್,’ ಅಂತ ಇಂಗ್ಲಿಶ್ ನಲ್ಲಿ ಹೇಳಿದ. ಅವನ ವಿನಮ್ರತೆ ನೋಡಿ ದಂಗಾಗಿ ಹೋದೆ. ಮಾತು ಮಾತಿಗೆ ಕೂಗಾಡುವ ನಮ್ಮ ಪೋಲಿಸರ ನೆನಪಾಯ್ತು.
ಕೂಡಲೇ ಅವನ ಕ್ಷೆಮೆ ಕೇಳಿ, ಡಿಜಿಟಲ್ ಕ್ಯಾಮರಾದಲ್ಲಿದ್ದ ಫೋಟೋಗಳನ್ನು ಅವನ ಎದುರೇ ಅಳಿಸಿ ಹಾಕಿದೆ. ಸಮುದ್ರ ತೀರವನ್ನಂತೂ ತುಂಬಾನೆ ಶುಚಿಯಾಗಿಟ್ಟಿದ್ದರು. ಸಣ್ಣ ಅಂಗಡಿ ಮತ್ತು ಹೋಟೆಲ್ ಗಳಿಗಾಗಿ ಸಿಮೆಂಟಿನ ಕಟ್ಟೆ ಕಟ್ಟಿದ್ದರು. ಏನಾದರೂ ಎಸೆಯಬೇಕಿದ್ದರೆ, ಎಲ್ಲರೂ ಕಸದ ಬುಟ್ಟಿಗಳನ್ನು ಹುಡುಕಿ ಅದರಲ್ಲಿ ಹಾಕುತ್ತಿದ್ದರು. ಯಾರಾದರೂ ನೆಲದ ಮೇಲೆ ಎಸೆದರೆ, ಆ ಅಂಗಡಿಯವರೇ ಬಂದು, ಅವುಗಳನ್ನು ಹೆಕ್ಕಿ, ಕಸದ ಬುಟ್ಟಿಗೆ ಹಾಕುತ್ತಿದ್ದರು. ವರ್ಷದ ಕೊನೆಯಾದ್ದರಿಂದ ಜನಗಳೂ ಬಹಳಷ್ಟಿದ್ದರು.
ರೂಮಿಗೆ ಬರುವಾಗಲೇ ನಾವು ಹೊರಗಡೆಯಿಂದ ಊಟ ಕಟ್ಟಿಸಿಕೊಂಡು ಬಂದಿದ್ದೆವು. ನಾವು ಮೂರು ಜನ ಹುಡುಗರು ಒಂದು ಕೋಣೆಯಲ್ಲಿದ್ದರೆ, ಅಂಬಿಕಾ ಮತ್ತು ಸೌಮ್ಯ ಇನ್ನೊಂದು ಕೋಣೆಯಲ್ಲಿದ್ದರು. ಮೇಲುಗಡೆಗೆ ಬರುವಾಗಲೇ ಹುಡುಗಿಯರಿಬ್ಬರೂ ಕೆಳಗೆ ಡಿಸ್ಕೋ ಇರುವುದನ್ನು ವಿಚಾರಿಸಿಕೊಂಡು ಬಂದಿದ್ದರು. ಆ ಹೋಟೆಲ್ ನಲ್ಲಿ ಉಳಿದುಕೊಂಡವರಿಗೆ ಪ್ರವೇಶ ಉಚಿತ ಅಂತಾನೂ ತಿಳಿದುಕೊಂಡಿದ್ದರು.
ಸ್ವಲ್ಪ ಹೊತ್ತಿಗೆ, `ಡಿಸ್ಕೋ ಗೆ ಹೋಗೋಣ’ ಅಂತ ವರಾತ ತೆಗೆದರು. ನಾವು ಮೂರೂ ಜನರೂ ಯಾವುದೇ ಆಸಕ್ತಿ ತೋರಿಸಲಿಲ್ಲ. `ಬೇಕಾದರೆ, ನೀವಿಬ್ಬರೇ ಹೋಗಿ ಬನ್ನಿ’ ಅಂತ ಹೇಳಿದೆವು. `ನೀವೂ ಗಂಡಸ್ರಾ! ಹೆಂಡತಿಯರನ್ನು ಡಿಸ್ಕೋಗೆ ಒಬ್ಬರೇ ಹೋಗಿ ಅಂತೀರಲ್ಲಾ,’ ಅಂತ ಇಬ್ಬರೂ ಜಗಳಕ್ಕೆ ನಿಂತಾಗ, ವಿನೋದ್ ಮುಸಿ ಮುಸಿ ನಕ್ಕ.
ನಮ್ಮ ಹೆಂಡತಿಯರು ನಮ್ಮ ಗಂಡಸ್ತನವನ್ನೇ ಪ್ರಶ್ನೆ ಮಾಡಿದ್ದು, ನಮ್ಮಿಬ್ಬರ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಎದುರುಗಡೆ ಟೇಬಲ್ ಮೇಲೆ, ಎರಡು ಲೀಟರ್ ಜಾನಿ ವಾಕರ್ ನಮ್ಮನ್ನು ಕೈ ಬೀಸಿ ಕರೆಯುತ್ತಿತ್ತು. ಹೆಂಗಸರಿಬ್ಬರೂ ಗೊಣಗುತ್ತಾ ಡಿಸ್ಕೋ ತೆಕ್ ಕಡೆಗೆ ಹೋದರು.
ಹನ್ನೆರಡು ಗಂಟೆಗೆ ವಾಪಾಸ್ ಬಂದವರೇ ಹೊಸವರ್ಷಕ್ಕೆ ವಿಶ್ ಮಾಡಿ, ನಾವೇನಾದರೂ ಡಿಸ್ಕೋ ತೆಕ್ ಬರುವ ಯೋಚನೆ ಇದೆಯೇ ಅಂತ ಚೆಕ್ ಮಾಡಿದರು. ಪ್ರಯೋಜನವಾಗಲಿಲ್ಲ… ಗೊಣಗುತ್ತಾ ಹೊರಟರು. ನನಗೂ ಮತ್ತು ವಿನೋದ್ ಗೂ ಹೊರಗಡೆ ಒಂದು ಸುತ್ತು ವಾಕಿಂಗ್ ಹೋಗುವ ಮನಸ್ಸಿದ್ದರೂ, ಅಮರೇಶನಿಗಿರಲಿಲ್ಲ. ಸರಿ, ಅವನನ್ನು ರೂಮಿನಲ್ಲೇ ಬಿಟ್ಟು, ನಾವಿಬ್ಬರೂ ಹೊರಟೆವು.
ಹಾಗೇ ಬೀಚಿನ ಕಡೆಯಿಂದ ದೊಡ್ಡದೊಂದು ಸುತ್ತು ಹೊಡೆದು, ಬೇಕಾಬಿಟ್ಟಿ ಮಾತಾಡುತ್ತಾ ಮುಖ್ಯರಸ್ತೆಗೆ ತಲುಪಿದೆವು. ರಸ್ತೆಯಲ್ಲಿ ಯಾರೂ ಇರಲಿಲ್ಲ ಮತ್ತು ಒಳಗಿದ್ದ ಜಾನಿ ವಾಕರ್ ಇಷ್ಟ ಬಂದಿದ್ದನ್ನು ಮಾತಾಡಿಸುತ್ತಿದ್ದ. ಸ್ವಲ್ಪ ದೂರ ಹೋದಮೇಲೆ, ಒಂದರ್ದ ಕಿಲೋಮೀಟರ್ ದೂರದಲ್ಲಿರುವ ಟ್ರಾಫಿಕ್ ಸಿಗ್ನಲ್ ಕಾಣಿಸಿತು. ಆ ಸಿಗ್ನಲ್ ನಲ್ಲಿ ಎಡಕ್ಕೆ ರೋಡು ದಾಟಿದರೆ, ಇನ್ನೊಂದು ಅರ್ಧ ಕಿಲೋಮೀಟರ್ ನಲ್ಲಿ ನಮ್ಮ ಹೋಟೆಲ್.
ಏನನ್ನಿಸಿತೋ  ಏನೋ… `ಬಾ ಆ ಕಡೆ ಹೋಗೋಣ’ ಅಂತ ವಿನೋದ್ ಗೆ ಹೇಳಿ ಒಂದೇ ಉಸಿರಿಗೆ ರಸ್ತೆ ದಾಟಿ, ಆ ಕಡೆ ಫುಟ್ ಪಾತ್ ಗೆ ಹೋದೆ. ರಸ್ತೆ ಮಧ್ಯದ ವಿಭಜನೆ ಯಾಕೋ ತುಂಬಾ ಎತ್ತರ ಇದೆ ಅಂತ ಅನ್ನಿಸಿತು. `ಏನೋ, ಡಿವೈಡರ್ ಒಳ್ಳೆ ಕಾಂಪೌಂಡ್ ಥರ ಇದೆಯಲ್ಲೋ,’ ಅಂತ ಹೇಳಿ ಮುಗಿಸುವುದರೊಳಗೆ ಯಾವುದೋ ಭಾರವಾದ ಹೆಜ್ಜೆಗಳು ನಮ್ಮ ಕಡೆಗೇ ಓಡಿ ಬಂದಂತೆ ಅನ್ನಿಸಿತು. ತಿರುಗಿ ನೋಡಿದಾಗ, ಕತ್ತಲಲ್ಲಿ ಇಬ್ಬರು ನಮ್ಮಕಡೆಗೇ ಓಡಿಬರುತ್ತಿದ್ದರು. ಅವರ ಕೈಯಲ್ಲಿ ಏನೋ ಇದ್ದಂತೆ ಅನ್ನಿಸಿತು. ಮತ್ತೆ ಸರಿಯಾಗಿ ನೋಡಿದಾಗ, ಅವರಿಬ್ಬರ ಕೈಯಲ್ಲಿದ್ದದು… ಸ್ಟೆನ್ ಗನ್.
ಕೈ ಕಾಲು ಒಮ್ಮೆಲೇ ತಣ್ಣಗಾದಂತೆ ಅನ್ನಿಸಿತು. ಕುಡಿದಿದ್ದ ಹೆಂಡ, ಹಿಡಿದಿದ್ದ ಹುಚ್ಚು ಎರಡೂ ಇಳಿದು ಹೋಯ್ತು. ನಾನೂ, ವಿನೋದ್ ಕಲ್ಲಿನಂತೆ ನಿಂತೆವು. ಇಬ್ಬರೂ ಹತ್ತಿರ ಬಂದಾಗ ಗೊತ್ತಾಯ್ತು ಅವರು ಸೈನಿಕರು ಅಂತ. ಇಬ್ಬರಿಗೂ ಹದಿನೆಂಟು ವರ್ಷ ಇರಬಹುದು, ಆದರೆ ಕಟ್ಟುಮಸ್ತಾಗಿದ್ದರು. ಟ್ರಿಗರ್ ಮೇಲೆ ಕೈ ಇಟ್ಟುಕೊಂಡೇ, ನಮ್ಮನ್ನು ಮೇಲಿಂದ ಕೆಳಗೆ ಅಳೆಯುತ್ತಾ, ನಯವಾಗಿಯೇ ಏನೋ ಸಿಂಹಳೀ ಭಾಷೆಯಲ್ಲಿ ಹೇಳಿದರು.
ತೊದಲುತ್ತಲೇ ಹೇಳಿದೆ: `ಐ ಕಾಂಟ್ ಅಂಡರ್ ಸ್ಟ್ಯಾಂಡ್ ಯುವರ್ ಲಾಂಗ್ವೇಜ್,’ ಅಂತ. `ಮಿಲಿಟರಿ ಝೋನ್ ಸರ್, ರೆಸ್ಟ್ರಿಕ್ಟೆಡ್ ಏರಿಯಾ… ನೋ ವಾಕಿಂಗ್ ಆನ್ ದಿಸ್ ಸೈಡ್ ಆಫ್ ಫುಟ್ ಪಾತ್. ಮಿಲಿಟರಿ ಛೀಫ್ ಹೌಸ್. ವಾಕಿಂಗ್ ಓನ್ಲಿ ದಟ್ ಸೈಡ್ ಸರ್.’
ಕುಡಿದಿದ್ದ ಹೆಂಡ, ಹಿಡಿದಿದ್ದ ಹುಚ್ಚು ಎರಡೂ ಇಳಿದು ಹೋಯ್ತು. ನನಗೇ ಕೇಳಿಸದಷ್ಟು ಮೆಲ್ಲಗೆ `ಸಾರಿ’ ಅಂದು, ಮತ್ತೆ ರಸ್ತೆ ದಾಟಿ ಆ ಕಡೆಯ ಫುಟ್ ಪಾತ್ ಹತ್ತಿ, ಸಿಗ್ನಲ್ ಕಡೆ ನೆಡೆಯಲು ಶುರುಮಾಡಿದೆವು. ಎರಡು, ಮೂರು ನಿಮಿಷ ಬಾಯಿಂದ ಮಾತೇ ಹೊರಡಲಿಲ್ಲ. ಸ್ವಲ್ಪ ಸುಧಾರಿಸಿಕೊಂಡು ವಿನೋದ್ ಗೆ ಹೇಳಿದೆ: `ಡೆಲ್ಲಿಯಲ್ಲಾಗಿದ್ದರೆ, ನಮ್ಮ ಸೆಕ್ಯುರಿಟಿಯವರು, ಮೊದಲು ಗುಂಡು ಹೊಡೆದು, ಆಮೇಲೆ ನಾವು ಯಾರು ಅಂತ ವಿಚಾರಿಸುತ್ತಿದ್ದರು.’
`ಹೌದಾ? ಯಾಕ್ಹಾಗೆ?’ ಅಂತ ಕೇಳಿದ.
`ಗೊತ್ತಿಲ್ಲ ಕಣೋ. ನಾನೂ ಸೆಕ್ಯುರಿಟಿ ವಿಷಯ ಬಂದಾಗ, ಅದೇ ಸರಿ ಅನ್ಕೊಂಡಿದ್ದೆ. ನಮ್ಮಷ್ಟೇ ಇವರಿಗೂ ರಿಸ್ಕ್ ಇದೆ. ಆದ್ರೆ, ಇವರ ಪೋಲಿಸ್, ಮಿಲಿಟರಿಯವರು ಬಿಹೇವ್ ಮಾಡೋದನ್ನ ನೋಡಿದರೆ, ನಮ್ಮವರದು ಅತೀ ಆಯ್ತು ಅಂತ ಅನ್ನಿಸುತ್ತೆ. ವರ್ಷಕ್ಕೊಂದಿಬ್ಬರಾದರೂ ಈ ಥರ ಸಾಯ್ತಾರೆ ಡೆಲ್ಲೀಲಿ. ಇಲ್ಲಿನ ಪೋಲಿಸ್ ಜನಗಳ ಹತ್ತಿರ ನೆಡ್ಕೊಳ್ಳೋದು ನೋಡಿದ್ರೆ, ನಮ್ಮವರು ಇವರ ಕಾಲು ಸಂಧಿ ನುಸಿಯಬೇಕು ಅಷ್ಟೆ,’ ಅಂದೆ.
ಹಾಗೇ ಸಿಗ್ನಲ್ ದಾಟಿ ಹೋಟೆಲ್ ಕಡೆ ತಿರುಗಿದೆವು. ಸ್ವಲ್ಪ ದೂರ ಭಾಷಣ ಬಿಗಿಯುತ್ತಾ ಸಾಗಿದ ನನಗೆ, ವಿನೋದ್ ನನ್ನ ಜೊತೆ ಇಲ್ಲ ಅನ್ನಿಸಿ ತಿರುಗಿ ನೋಡಿದೆ. ಅವನು, ಮೂವತ್ತು ಅಡಿ ಹಿಂದೆ ಯಾರೋ ಇಬ್ಬರ ಜೊತೆ ಮಾತಾಡ್ತಾ ಇದ್ದ. `ಏನಪ್ಪಾ ಇದು?’ ಅಂತ ಕಾಯ್ತಾ ನಿಂತೆ. ವಿನೋದ್ ಏನೋ ಕೈ ಆಡಿಸುತ್ತಾ ನನ್ನ ಕಡೆ ಬಂದ.
`ಯಾರೋ ಅದು? ಏನಂತೆ?’ ಅಂತ ಕೇಳ್ದೆ.
`ಥೂ… ಹುಡುಗಿ ಬೇಕಾ ಅಂತ ಕೇಳ್ತಿದ್ದಾರೆ,’ ಅಂದ.
ನಾನಲ್ಲೇ ನಿಂತು ತಿರುಗಿ ನೋಡಿದೆ. `ಅಲ್ಲಾ ಕಣೋ, ನಾವಿಬ್ಬರು ಊಟ ಕಟ್ಟಿಸಿಕೊಂಡು ಬರುವಾಗಲೂ ಯಾರೋ ನಿನ್ನ ಕೇಳಿದ್ರು. ಈಗಲೂ ಕೇಳ್ತಿದ್ದಾರೆ. ನಿಂಗೆ ಮದುವೆ ಆಗಿಲ್ಲ ಅಂತ ಹಣೆಮೇಲೆ ಬರ್ಕೊಂಡು ಓಡಾಡ್ತಿದ್ದಿಯಾ?’ ಅಂದೆ.
`ನಡಿ ಅಣ್ನ ಸುಮ್ನೆ. ರೂಮಿಗೆ ಹೋಗೊಣ,’ ಅಂದ ವಿನೋದ್.
`ಅಲ್ಲಾ ಕಣೋ, ನಾನೂ ಜೊತೆಯಲ್ಲಿದ್ದೆ. ನನ್ಯಾರೂ ಕೇಳ್ಲಿಲ್ಲ. ಎಲ್ಲಾರೂ ನಿನ್ನೇ ಕೇಳ್ತಾರಲ್ಲಾ, ಏನ್ಕತೆ ಅಂತ ಕೇಳ್ದೆ,’ ಅಂತ ಚುಡಾಯಿಸುತ್ತಲೇ ರೂಮಿಗೆ ಬಂದೆವು.
ಅಂಬಿಕಾ ಮತ್ತು ಸೌಮ್ಯ, ರೂಮಿನಲ್ಲಿ ಅಮರೇಶನ ಜೊತೆ ಕೂತಿದ್ದರು. ನಮ್ಮನ್ನು ನೋಡುತ್ತಲೇ, `ಏನ್ರೋ ಅದೂ?’ ಅಂದ.
`ನೋಡೋ, ಇವನ ಹಣೇ ಮೇಲೇನಾದರೂ ಮದುವೆ ಆಗಿಲ್ಲ ಅಂತ ಬರ್ದಿದೆಯಾ ಅಂತ. ಎರಡು ಸಲ ಇವನಿಗೆ ಹುಡುಗಿ ಬೇಕಾ ಅಂತ ಕೇಳಿದರು. ಪಕ್ಕದಲ್ಲಿ ನಾನಿದ್ದರೂ, ನನಗೆ ಕ್ಯಾರೆ ಅನ್ನಲಿಲ್ಲ. ನಾನೇನು ಗಂಡಸಿನ ತರ ಕಾಣೋಲ್ವಾ. ಇವನಿಗಿಂತ ಎತ್ತರ ಇದ್ದೀನಿ ಮತ್ತೆ ಬಾಡಿನೂ ಮೇಂಟೇನ್ ಮಾಡಿದ್ದೀನಿ,’ ಅಂತ ನಗುತ್ತಾ ಹೇಳಿದೆ.
ತಕ್ಷಣವೇ ಅವರು ಮೂರೂ ಜನ ವಿನೋದ್ ಮೇಲೆ ಮುಗಿಬಿದ್ದರು. ನಾನಂತೂ, ನನ್ನ ಗಂಡಸ್ತನವನ್ನು ಅಲಕ್ಷಿಸಿದ ಆ ಮಧ್ಯವರ್ತಿಗಳ ಮೇಲೆ ಮನಸೋ ಇಚ್ಚೆ ದಾಳಿ ನೆಡೆಸಿದೆ. ನನ್ನ ಹೆಂಡತಿ ನನ್ನ ಗಂಡಸ್ತನ ಪ್ರಶ್ನಿಸಿದಾಗಲೂ ಅಷ್ಟೊಂದು ತಲೆ ಕೆಡಿಸಿಕೊಂಡಿರಲಿಲ್ಲ. ಇದೊಂದು ನನ್ನ ವಿರುದ್ದದ ಪಿತೂರಿ ಅಂತಲೇ ವಾದಿಸಿದೆ.
ನಮ್ಮ ಕಾಟ ತಡೆಯಲಾಗದೆ, ವಿನೋದ್ ಅವನ ಮತ್ತು ಮಧ್ಯವರ್ತಿಗಳ ಮಧ್ಯ ನೆಡೆದ ಮಾತುಕತೆ ವಿವರಿಸಿದ. ಸರ್ ಹುಡುಗಿ ಬೇಕಾ ಅಂತ ಕೇಳಿದಾಗ, ವಿನೋದ್, ನಾನು ಸಂಸಾರದ ಜೊತೆ ಬಂದಿದ್ದೇನೆ ಅಂತ ಹೇಳಿದ್ದಾನೆ. ಅದಕ್ಕೆ ಅವರು, `ಪರವಾಗಿಲ್ಲ ಸರ್, ರೂಮಿಗೆ ಹೋಗಿ ಪಂಚೆ ಉಟ್ಕೊಂಡು ಬೀಚಿಗೆ ಬನ್ನಿ. ಒಳ್ಳೇ ರಷ್ಯನ್ ಹುಡುಗಿಯರು. ಅಲ್ಲಿಗೇ ಕರೆದುಕೊಂಡು ಬರ್ತೀವಿ,’ ಅಂದಿದ್ದಾರೆ. ಏನು ಹೇಳ್ಬೇಕು ಅಂತ ಗೊತ್ತಾಗದೆ, ವಿನೋದ್ ಓಡಿ ಬಂದಿದ್ದಾನೆ.
`ಇವರಿಬ್ಬರಿಗಾದರೆ ಸಂಸಾರ. ನಿಮಗ್ಯವದ್ರೀ ಸಂಸಾರ? ಹೋಗಿ ರಷ್ಯನ್ ಹುಡುಗಿಯರನ್ನು ನೋಡಿಕೊಂಡಾದರೂ ಬನ್ರಿ,’ ಅಂತ ಅಂಬಿಕಾ ಮತ್ತು ಸೌಮ್ಯ ಕಾಲೆಳೆಯಲು ಶುರು ಮಾಡಿದರು. ನಮ್ಮ ಕಾಟ ತಡೆಯಲಾಗದೆ, ವಿನೋದ್ ಮುಸುಕೆಳೆದುಕೊಂಡು ಮಲಗಿದ. ಎಷ್ಟೇ ಕರೆದರೂ ಮಾತಾಡದಿದ್ದಾಗ, ಹೆಂಗಸರಿಬ್ಬರೂ ಅವರ ರೂಮಿನ ಕಡೆ ಹೊರಟರು.
ಸ್ವಲ್ಪ ಹೊತ್ತಿಗೆ ಅಮರೇಶ್ ಕೂಡ ಮಲಗಲು ಅಣಿಯಾದ. ರಷ್ಯನ್ ಹುಡುಗಿಯರ ಗಲಾಟೆಯಲ್ಲಿ, ಸ್ಟೆನ್ ಗನ್ ನಳಿಗೆಗೆ ಎದೆಕೊಟ್ಟಿದ್ದು ಮರೆತೇ ಹೋಗಿತ್ತು. ನಗುತ್ತಾ ಜಾನಿ ವಾಕರ್ ಕಡೆಗೆ ಕೈ ಚಾಚಿದೆ.

ಮಾಕೋನಹಳ್ಳಿ ವಿನಯ್ ಮಾಧವ್

                                                                                                              

ಗುರುವಾರ, ಡಿಸೆಂಬರ್ 22, 2011

ಶನಿ


ಶನಿಪುತ್ರನಿಗೇ ಶನಿಕಾಟ…..

ಆಗ ನಾನಿನ್ನೂ ಪತ್ರಿಕಾರಂಗಕ್ಕೆ ಬಂದಿರಲಿಲ್ಲ. ಜೆ.ಪಿ. ನಗರದ ಸಾರಕ್ಕಿ ಗೇಟ್ ಹತ್ತಿರ ಗೆಳೆಯರ ಜೊತೆ ಮನೆ ಮಾಡಿಕೊಂಡಿದ್ದೆ. ಅವರೆಲ್ಲ ಕೆಲಸಕ್ಕೆ ಹೋಗುತ್ತಿದ್ದರು. ಆದರೆ ನಾನು ಮಾತ್ರ ಮನೆಯಲ್ಲಿರುತ್ತಿದ್ದೆ. ಸಾಯಂಕಾಲ, ಯಾರಾದರೂ ಬೇಗ ಮನೆಗೆ ಬಂದರೆ, ಬನಶಂಕರಿ ದೇವಸ್ಥಾನದ ಹತ್ತಿರ ಇದ್ದ ಶಾಸ್ತ್ರಿ ಬೇಕರಿಗೆ ವಾಕಿಂಗ್ ಹೋಗುತ್ತಿದ್ದೆವು.
ಅವನನ್ನು ಮೊದಲು ನೋಡಿದ್ದು ಬೇಕರಿಯ ಪಕ್ಕದಲ್ಲೇ… ಬೇಕರಿಗೆ ಹೊಂದಿಕೊಂಡಂತೆ, ಬೀಡಿ, ಸಿಗರೇಟಂಗಡಿ ತರಹದ ಮರದ ಗೂಡಿನಲ್ಲಿ, ಶನಿಮಹಾತ್ಮನ ಫೋಟೋ ಹಾಕಿದ ಗುಡಿಇತ್ತು. ಅದರೆದುರು, ಒಂದು ಕುರ್ಚಿಯ ಮೇಲೆ ಕಾವಿಬಟ್ಟೆ, ಮುಕ್ಕಾಲು ಅಡಿ ಎತ್ತರದ ಪೇಟ, ಚಿತ್ರವಿಚಿತ್ರವಾದ ಹಾರಗಳು ಮತ್ತು ನಾಮಗಳನ್ನು ಹಾಕಿಕೊಂಡು ಕೂತಿರುತ್ತಿದ್ದ. ಜೊತೆಯಲ್ಲಿ ಯಾವಾಗಲೂ ಒಬ್ಬ ಹುಡುಗ. ಆಚೀಚೆ ಹೋಗುವ ಹುಡುಗಿಯರ ಕಡೆ ಕಣ್ಣು ಹಾಯಿಸುತ್ತಾ, ಆ ಹುಡುಗನ ಜೊತೆ ಏನೋ ಮಾತಾಡುತ್ತಾ ಇರುತ್ತಿದ್ದ.
ಯಾವಾಗಲೂ ಮನಸ್ಸಿನಲ್ಲಿ ಬೈಕೋತ್ತಿದ್ದೆ. ಇವನ್ಯಾವನೋ, ಶನಿ ಹೆಸರಿನಲ್ಲಿ ದಂಧೆ ಮಾಡ್ತಾ ಇದ್ದಾನೆ ಅಂತ. ಪಕ್ಕದಲ್ಲಿ ದೊಡ್ಡ ಬೋರ್ಡ್ ಬೇರೆ. ಕನಕಪುರದ ಹತ್ತಿರ ಶನಿಮಹಾತ್ಮ ದೇವಸ್ಥಾನ ಕಟ್ಟುವುದರ ಬಗ್ಗೆ.
ಒಂದಿನ, ಕೆಂಪೇಗೌಡ ಕಾಲೇಜಿನಲ್ಲಿ ಓದುತ್ತಿದ್ದ ಚಿಕ್ಕಮಗಳೂರಿನ ಹಾರ್ಜಳ್ಳಿ ವಿನಯ್ ಬಂದಿದ್ದ. ಶಾಸ್ತ್ರಿ ಬೇಕರಿಯ ಹತ್ತಿರ ಹೋದಾಗ, `ಇವನೊಬ್ಬ ಶನಿ ಕಣೋ… ಹುಡಿಗೀರಿಗೆ ಲೈನ್ ಹೊಡಿತಾ ಕೂತಿರ್ತಾನೆ’ ಅಂದೆ.
ಆ ಕಡೆ ನೋಡಿದವನೇ, : `ಇವ್ನಾ! ಇಲ್ಲಿದ್ದಾನಾ… ಆಮೇಲೆ ಹೇಳ್ತೀನಿ ತಾಳು,’ ಅಂದ.
ವಾಪಾಸು ನೆಡೆದುಕೊಂಡು ಹೋಗುವಾಗ ವಿನಯ್ ಹೇಳಿದ: `ನಮ್ಮ ಹಾಸ್ಟೆಲ್ (ಬನಶಂಕರಿ ಎರಡನೇ ಹಂತದಲ್ಲಿ) ಇದೆಯಲ್ಲಾ, ಅಲ್ಲಿ ಒಂದು ಮಸಾಜ್ ಪಾರ್ಲರ್ ಇತ್ತು. ಇವನು ಅಲ್ಲಿ ವಾಚ್ ಮ್ಯಾನ್ ಆಗಿದ್ದ. ನಾಲ್ಕೈದು ವರ್ಷದ ಹಿಂದೆ ಪೋಲಿಸ್ ರೈಡ್ ಮಾಡಿದಾಗ, ಇವನನ್ನೂ ಅರೆಸ್ಟ್ ಮಾಡಿದ್ದರು. ಅಲ್ಲಿಗೆ ಇವನೇ `ಪಿಂಪ್’ ಅಂತೆ. ಜೈಲಿಂದ ವಾಪಾಸ್ ಬಂದ ಮೇಲೆ, ಒಂದೆರಡು ಸಲ ಹಾಸ್ಟೆಲ್ ಹತ್ತಿರ ಬಂದಿದ್ದ. ನಮ್ಮ ಹಾಸ್ಟೆಲ್ ನಲ್ಲಿ ಅವನ ಹಳೇ ಗಿರಾಕಿಗಳನ್ನು ಹುಡುಕಿಕೊಂಡು. ಆಮೇಲೆ ಇವತ್ತೇ ನೋಡಿದ್ದು.’
ವಿನಯ್, ತುಂಬಾ ಸಂಭಾವಿತ ಹುಡುಗ. ಯಾವತ್ತೂ, ಯಾರ ಮೇಲೂ ಕೆಟ್ಟದಾಗಿ ಮಾತಾಡಿದವನಲ್ಲ. ಹಾಗೇ, ಮೊದಲ ಸಲ ನೋಡಿದಾಗಲೇ ನನಗೆ ಆ ಶನಿಸ್ವಾಮಿಯ ಬಗ್ಗೆ ಕೆಟ್ಟ ಅಭಿಪ್ರಾಯ ಬಂದಿತ್ತು. ನಾವೂ ಹುಡುಗಿಯರನ್ನು ನೋಡುತ್ತಿದ್ದೆವು, ಆದರೆ ಅವನು ಹುಡುಗಿಯರ ಕಡೆ ಕಣ್ಣುಹಾಯಿಸುವ ರೀತಿ ನನಗೆ ಇಷ್ಟವಾಗಿರಲಿಲ್ಲ. ಆಸಾಮಿ ನನಗಿಂತ ಬಲವಾಗಿದ್ದ. ಏನೋ ಯಡವಟ್ಟು ಗಿರಾಕಿ ಅಂತ ಅನ್ನಿಸುತ್ತಿತ್ತು. ವಿನಯ್ ಹೇಳಿದ ಮೇಲೆ ಅನುಮಾನವೇ ಉಳಿಯಲಿಲ್ಲ.
ನಾನು ಇಂಡಿಯನ್ ಎಕ್ಷ್ ಪ್ರೆಸ್ ಗೆ ಸೇರಿದ ಮೇಲೆ, ಕ್ರೈಂ ರಿಪೋರ್ಟಿಂಗ್ ಸಲುವಾಗಿ, ಊರಿಡೀ ಸುತ್ತುತ್ತಿರುತ್ತಿದ್ದೆ. . ಈ ಶನಿ ಸ್ವಾಮಿ ಆಗಾಗ ದಾರಿಯಲ್ಲಿ ಸಿಗುತ್ತಿದ್ದ. `ಕೈನೆಟಿಕ್ ಸ್ಪಾರ್ಕ್’ ಅನ್ನೋ ಡಬ್ಬಾ ಮೊಪೆಡ್ ಮೇಲೆ ಓಡಾಡುತ್ತಿದ್ದ. ಕೆಲವುಸಲ, ಮೆಜೆಸ್ಟಿಕ್ ನಿಂದ ರಾಜಾಜಿನಗರಕ್ಕೆ ಹೋಗುವ ದಾರಿಯಲ್ಲಿದ್ದ, ಇನ್ನೊಂದು ಸಣ್ಣ ಶನಿಮಹಾತ್ಮ ಗೂಡಿನ ಹತ್ತಿರವೂ ಕೂತಿರುತ್ತಿದ್ದ. ಸ್ವಲ್ಪ ದಿನ ಬಿಟ್ಟು, ಅವನನ್ನು ಒಂದು ಹಳೇ ಫಿಯಟ್ ಕಾರಿನಲ್ಲಿ ಓಡಾಡುವುದು ನೋಡಿದೆ. ಇನ್ನೂ ಕೆಲವು ದಿನ ಬಿಟ್ಟು, ಒಂದು ಕಂಟೆಸ್ಸಾ ಕಾರನ್ನು ಓಡಿಸಿಕೊಂಡು ಹೋಗುವುದನ್ನೂ ನೋಡಿದೆ. ಅವನನ್ನು ನೋಡಿದಾಗಲೆಲ್ಲ, ಯಾಕೋ ಕಿರಿಕಿರಿಯಾಗುತ್ತಿತ್ತು.
ಒಂದಿನ ಪೋಲಿಸ್ ಕಮೀಷನರ್ ರೇವಣ್ಣಸಿದ್ದಯ್ಯರವರ ಕೊಠಡಿಗೆ ಹೋಗೋಣ ಅಂತ ಹೋದರೆ, ಹೊರಗಡೆ ಶನಿಸ್ವಾಮಿ ನಿಂತಿದ್ದ. ಏನಪ್ಪಾ ಇದೂ ಅನ್ಕೊಂಡು, ಪಕ್ಕದಲ್ಲೇ ಇದ್ದ ಸೆಂಟ್ರಿ ಸೋಮುನ ಕೇಳಿದೆ: `ಸಾಹೇಬ್ರು ಬ್ಯುಸಿನಾ?’ ಅಂತ.
ಸೋಮು ಉತ್ತರಿಸುವುದರೊಳಗೆ ಈ ಸ್ವಾಮಿ ಮಧ್ಯ ಬಾಯಿ ಹಾಕಿ: `ಬೇಗ ಹೇಳಪ್ಪಾ ಸಾಹೇಬರಿಗೇ… ಇವತ್ತು ನಿನ್ನ ಹಣೆಬರಹ ಚೆನ್ನಾಗಿದೆ, ಬುಧವಾರ ಬಂದಿದ್ದೀನಿ. ಶನಿವಾರ ಬಂದು, ನೀನು ಹೀಗೆ ಲೇಟ್ ಮಾಡಿದ್ದರೆ, ನನ್ನ ಮೇಲೆ ಶನಿ ಅವಾಹನೆಯಾಗಿ….’ ಅಂತ ಕೂಗಾಡೊಕೆ ಶುರು ಮಾಡ್ದ.
ನನಗೇನಾಯ್ತೋ ಏನೋ, `ಏನೋ ಮಾಡ್ತಿದ್ದೆ? ಅವನ ಕೆಲ್ಸ ಮಾಡೋಕೆ ಬಿಡು. ಕಮಿಷನರ್ ಫ್ರೀ ಇದ್ರೆ ನಿನ್ನ ನೋಡ್ತಾರೆ,’ ಅಂತ ಅವನ ಕಡೆ ನುಗ್ಗೇಬಿಟ್ಟೆ. ಪಕ್ಕದಲ್ಲಿದ್ದ ಕನ್ನಡ ಪ್ರಭದ ಅಶೋಕ್ ರಾಮ್ ನನ್ನ ಬೆನ್ನು ಹಿಡಿದು, `ಹೋಗಲಿ ಬಾ’ ಅಂದ. ಸರಿ, ಅಲ್ಲಿಂದ ಹೊರಟೆವು.
`ಅಲ್ವೋ, ಇದ್ದಕ್ಕಿದ್ದಂತೆ ನಿನಗೇನಾಯ್ತೋ ಅವನ ಮೇಲೆ ಎಗರಾಡೋಕೆ?’ ಅಂದ ಅಶೋಕ.
`ನಿಂಗೊತ್ತಿಲ್ಲ ಕಣೋ… ಇವನೊಬ್ಬ ಪಿಂಪ್. ಹ್ಯಾಗೆ ಕಾನ್ಸ್ಟೇಬಲ್ ಗಳ ಮೇಲೆ ರೋಫ್ ಹಾಕ್ತಾನೆ ನೋಡು,’ ಅಂತ ಹೇಳಿ, ಆ ಸ್ವಾಮಿಯ ಬಗ್ಗೆ ನನಗೆ ಗೊತ್ತಿದ್ದನೆಲ್ಲ ಹೇಳಿದೆ.
`ಸರಿ ಕಣೋ, ಅವನು ಪಿಂಪ್ ಆದರೆ ನಿನಗೇನೋ ಕಷ್ಟ? ಬೆಂಗಳೂರಲ್ಲಿ ಸಾವಿರಾರು ಜನ ಇದ್ದಾರೆ, ಎಲ್ಲಾರ ಮೇಲೆ ಎಗರಿ ಹೋಗ್ತೀಯಾ? ಅದು ನಿನ್ನ ಕೆಲಸ ಅಲ್ಲ. ಮತ್ತೆ, ಅವನಿಗೆ ಏನಾದರೂ ಮಾಡ್ಬೇಕಾದರೆ ನಿನ್ನ ಹತ್ತಿರ ಏನಾದರೂ ಎವಿಡೆನ್ಸ್ ಇರಬೇಕು. ರೋಡಲ್ಲಿ ಕೂಗಾಡದಲ್ಲ,’ ಅಂದ.
ನನಗೂ ಸರಿ ಅನ್ನಿಸ್ತು. ಯಾಕೋ ಸ್ವಲ್ಪ ಜಾಸ್ತಿನೇ ರಿಯಾಕ್ಟ ಮಾಡ್ದೆ ಅಂತಾನೂ ಅನ್ನಿಸ್ತು. ಮಾರನೇ ದಿನ ಬಂದು ಸೋಮುವನ್ನು ಆ ಶನಿಸ್ವಾಮಿ ಯಾಕೆ ಬಂದಿದ್ದ ಅಂತ ಕೇಳಿದೆ. `ಯಾವುದೋ ಸೈಟ್ ವಿಷಯ… ಪೋಲಿಸ್ ಇವನಿಗೆ ಸಪೋರ್ಟ್ ಮಾಡಿಲ್ಲ ಅಂತ ಸಾಹೇಬರಿಗೆ ಹೇಳೋಕೆ ಬಂದಿದ್ದ,’ ಅಂತ ಹೇಳಿದ. ನಾನು ಆ ವಿಷಯ ಅಶೋಕ್ ಗೆ ಹೇಳ್ದೆ.
ಎರಡನೇ ದಿನ ಅಶೋಕ್ ಬಂದವನೇ, `ನಿನ್ನ ಫ್ರೆಂಡ್ ವಿಷಯ ಗೊತ್ತಾಯ್ತು ಕಣೋ,’ ಅಂದ.
ಯಾರೋ ಅದೂ? ಅಂತ ಕೇಳಿದರೆ, `ಅವನೇ ಕಣೋ, ಶನಿಸ್ವಾಮಿ. ಅವನು ಜಯನಗರದ 8ನೇ ಬ್ಲಾಕ್ ನಲ್ಲಿ ಯಾರದೋ ಸೈಟ್ ಹೊಡೆಯೋಕೆ ನೋಡಿದ್ದಾನೆ. ಅವರು ಅವನ ಸೊಂಟ ಮುರಿಯೋ ಹಾಗೆ ಬಾರಿಸಿದ್ದಾರೆ. ಆ ಕಂಟೆಸ್ಸಾ ಕಾರ್ ವಿಷ್ಣುವರ್ಧನ್ ದಂತೆ. ಯಾವುದೋ ಪೂಜೆ ಮಾಡಿಸ್ತೀನಿ ಅಂತ ತಗೊಂಡು ಹೋದವನು, ವಾಪಾಸ್ ಕೊಟ್ಟಿಲ್ಲವಂತೆ,’ ಅಂತ ವಿಸ್ತಾರವಾದ ವರದಿ ಕೊಟ್ಟ.
`ಈಗೇನು ಮಾಡೋಣ?’ ಅಂತ ಕೇಳಿದೆ. `ಸಧ್ಯಕ್ಕೆ ಕ್ರೈಂ ರಿಪೋರ್ಟ್ ಮಾಡೋಣ. ಸಮಯ ಬಂದಾಗ ನೋಡೋಣ,’ ಅಂತ ತಣ್ಣಗೆ ಹೇಳಿದ ಅಶೋಕ.
ಅದಾಗಿ ಸ್ವಲ್ಪ ದಿನಗಳನಂತರ, ಪದ್ಮನಾಭನಗರದ ಹತ್ತಿರ ಇರುವ ಅಶೋಕನ ಮನೆ ಹತ್ತಿರ ಹೋಗಿದ್ದೆ. ಮೆಟ್ಟಲು ಹತ್ತುವಾಗ ಸುಮ್ಮನೆ ಅಲ್ಲಿ ನಿಂತ ಕಾರಿನ ಕಡೆ ನೋಡಿದೆ. ಅನುಮಾನವೇ ಇಲ್ಲ… ಆ ಶನಿಸ್ವಾಮಿ ಓಡಿಸುತ್ತಿದ್ದ ಫಿಯಟ್ ಕಾರ್. `ಅಲ್ವೋ ಅಶೋಕ, ಆ ಕಾರ್ ಯಾಕೆ ಅಲ್ಲಿ ನಿಂತಿದೆ?’ ಅಂತ ಕೇಳ್ದೆ.
`ಆಗಾಗ ನಿಂತಿರ್ತದೆ ಕಣೋ. ಆ ಮನೇಲಿ ಭಜನೆ ಎಲ್ಲಾ ಆಗ್ತಾ ಇರ್ತದೆ. ಯಾಕೆ? ಏನ್ಸಮಚಾರ?’ ಅಂತ ಕೇಳಿದ.
`ಅದು ಶನಿ ಸ್ವಾಮಿ ಕಾರ್ ಕಣೊ,’ ಅಂದೆ.
`ಓ… ಇದೇ ಕಾರಾ ಅವನ್ದು? ಕೆಲವು ಸಲ ಕಂಟೆಸ್ಸಾ ಕಾರ್ ಸಮೇತ ನಿಂತಿರ್ತದೆ. ಅದೇ ಇರ್ಬೇಕು ವಿಷ್ಣುವರ್ಧನ್ ದು. ಅದೇನಾ ಭಜನೆ? ನೋಡೋಣ ತಾಳು,’ ಅಂದ.
ಒಂದೇ ವಾರದಲ್ಲಿ ಅಶೋಕ ಹೇಳಿದ: `ಆ ಸ್ವಾಮಿಯ ಎರಡೂ ಕಾರ್ ಸೀಝ್ ಆಗಿ ಜಯನಗರ ಪೋಲಿಸ್ ಸ್ಟೇಷನ್ ಹತ್ತಿರ ಇದೆ.’
ಆಗಿದ್ದಿಷ್ಟು. ಅಶೋಕ ಆ ಕಾರ್ ಬರುವುದನ್ನು ಕಾಯ್ದು, ಅದರಿಂದ ಸ್ವಾಮಿ ಇಳಿಯುವುದನ್ನು ನೋಡಿ ಧೃಡಪಡಿಸಿಕೊಂಡಿದ್ದಾನೆ. ಆಮೇಲೆ, ಬೆಂಗಳೂರು ದಕ್ಷಿಣ ಡಿ.ಸಿ.ಪಿ ಆಗಿದ್ದ ಸತ್ಯನಾರಾಯಣ ರಾವ್ ಅವರಿಗೆ ಹೇಳಿದ್ದಾನೆ. ಅವರು ವಿಚಾರಿಸಿ ನೋಡಿದಾಗ, ಆ ಎರಡೂ ಕಾರುಗಳನ್ನು ಈ ಶನಿಸ್ವಾಮಿ ಪೂಜೆಯ ಹೆಸರಿನಲ್ಲಿ ತಂದು ವಾಪಾಸ್ ಕೊಟ್ಟಿರಲಿಲ್ಲ. ಆ ವಿಷಯದಲ್ಲಿ, ದೂರುಗಳೂ ದಾಖಲಾಗಿದ್ದವು. ಪೋಲಿಸರು, ಎರಡೂ ಕಾರುಗಳನ್ನು ಜಪ್ತಿ ಮಾಡಿದ್ದರು.
ಸತ್ಯನಾರಾಯಣ ರಾವ್ ಅವರಿಗೆ ಫೋನ್ ಮಾಡಿ, `ಸರ್, ಆ ಕಂಟೆಸ್ಸಾ ಕಾರ್ ವಿಷ್ಣುವರ್ಧನ್ ದಾ? ಅಂತ ಕೇಳಿದೆ. `ಅದೆಲ್ಲಾ ಯಾಕೆ ವಿನಯ್? ಕಂಪ್ಲೇಂಟ್ ಇತ್ತು, ಸೀಝ್ ಮಾಡಿದ್ದೇವೆ. ಅಷ್ಟು ಸಾಕು ಬಿಡಿ,’ ಅಂದರು.
ನನಗೇನೋ ಬಹಳ ಖುಶಿಯಾಗಿತ್ತು. ಕೆಟ್ಟ ಖುಶಿ ಅಂತಾರಲ್ಲ… ಹಾಗೆ. ಅಶೋಕ ಏನೋ ಈ ಸ್ವಾಮಿಗೆ ಒಂದು ದಾರಿ ತೋರಿಸಿದ್ದಾನೆ. ನಾನೂ ಏನಾದರೂ ಮಾಡಬೇಕು ಅಂತ ತಲೆಯಲ್ಲಿ ಹುಳ ಕೊರೆಯೋಕೆ ಶುರು ಆಯ್ತು.
ಆಗ ತಲೆಗೆ ಬಂದಿದ್ದೇ ಕಸ್ತೂರಿ ರಂಗನ್. ಆಗ ತಾನೇ, ಬೆಂಗಳೂರು ಕಾರ್ಪೋರೇಶನ್ ನಲ್ಲಿ ಬಿ.ಎಮ್.ಟಿ.ಎಫ್.ಗೆ ವರ್ಗವಾಗಿ ಬಂದಿದ್ದರು. ಸರಿ, ಅವರ ಹತ್ತಿರ ಹೋಗಿ, ಅದೂ ಇದೂ ಮಾತಾಡುತ್ತಾ, ಶನಿಸ್ವಾಮಿಯ ಕಥೆಗೆ ಒಗ್ಗರಣೆ ಸೇರಿಸಿ ಹೇಳಿದೆ.
ಸಮಾಧಾನವಾಗಿ ಕೇಳಿದ ಕಸ್ತೂರಿ ರಂಗನ್, `ಮತ್ತಿನ್ನೇನು ಮಾಡಿದ್ರು ಸ್ವಾಮಿಗಳು?’ ಅಂತ ನನ್ನನ್ನೇ ಕೇಳಿದರು. ನಿಜ ಹೇಳ್ಬೇಕು ಅಂದ್ರೆ, ನನ್ನ ಹತ್ರ ಈ ಕಥೆ ಬಿಟ್ಟರೆ ಏನೂ ಸರಕು ಇರಲಿಲ್ಲ. `ಅವನು ಕನಕಪುರದ ಹತ್ತಿರ ಒಂದು ದೇವಸ್ಥಾನ ಕಟ್ತಾನಂತೆ. 40 ಎಕರೆ ಜಾಗದಲ್ಲಿ. ಅದ್ಯಾರದ್ದೋ ಏನೋ?’ ಅಂದೆ.
`ಅದಿರಲಿ. ಆ ಶಾಸ್ತ್ರಿ ಬೇಕರಿ ಹಿಂದೆ ಒಂದು ಸಣ್ಣ ಹೊಂಡ ಇದೆಯಲ್ಲ, ಅದೂ ಮತ್ತೆ ರೋಡಿನ ಆಚೆಕಡೆ ಇರುವ ಎರಡೆಕರೆ ಜಾಗಕ್ಕೆ ನಕಲಿ ಪೇಪರ್ ತಯಾರು ಮಾಡಿಕೊಂಡಿದ್ದಾನೆ. ಎಲ್ಲಾ ಸೇರಿದರೆ ಜಾಗ ಕೋಟಿಗಟ್ಟಲೆ ಬೆಲೆ ಬಾಳುತ್ತೆ. ಜಾಗ ಕಾರ್ಪೋರೇಶನ್ ದು ಬೇರೆ. ಏನಾಗುತ್ತೋ ನೋಡೋಣ, ದೇವರಿಚ್ಚೆ,’ ಅಂತ ರಾಗವಾಗಿ ಹೇಳಿದರು. ಕಸ್ತೂರಿ ರಂಗನ್ ಅವರನ್ನು ಗೊತ್ತಿದ್ದ ನನಗೆ, ಇನ್ನು ಈ ಸ್ವಾಮಿಯ ಕಥೆ ಮುಗಿಯಿತು ಅಂತ ಗ್ಯಾರಂಟಿಯಾಯ್ತು.
ಅವತ್ತಿನಿಂದ, ದಿನಾ ಸಾಯಂಕಾಲ ಕಸ್ತೂರಿ ರಂಗನ್ ಅವರ ಆಫೀಸಿಗೆ ಫೋನ್ ಮಾಡಿ, ಯಾವುದಾದರೂ ಡೆಮಾಲಿಷನ್ ಇದೆಯಾ ಅಂತ ಕೇಳೋಕೆ ಶುರು ಮಾಡ್ದೆ. ಎರಡು ವಾರವಾಗಿರಬಹುದು, ಅಲ್ಲಿನ ಟೆಲಿಫೋನ್ ಆಪರೇಟರ್ ಗೆ ಏನೋ ಸಂಶಯ ಬಂತು. ಯಾವತ್ತೂ, ಯಾವ ವರದಿಗಾರರೂ ಇಲ್ಲಿಗೆ ಫೋನ್ ಮಾಡೋದಿಲ್ಲ. ಇವನ್ಯಾಕೆ ಹೀಗೆ ದಿನಾ ಮಾಡ್ತಾ ಇರ್ತಾನೆ ಅಂತ. ಒಂದಿನ ಕೇಳೇಬಿಟ್ಟ: `ಸರ್, ಏನಾದರೂ ವಿಷಯ ಇತ್ತಾ. ದಿನಾ ಡಿಮಾಲಿಷನ್ ಬಗ್ಗೆ ಕೇಳ್ತೀರಲ್ಲಾ,’ ಅಂತ.
ಸ್ವಲ್ಪ ಅನುಮಾನಿಸುತ್ತಲೇ: `ಅಲ್ಲಾ, ಸಾಹೇಬರು ಹೇಳ್ತಾ ಇದ್ದರು. ಆ ಬನಶಂಕರಿ ದೇವಸ್ಥಾನದ ಹತ್ತಿರ ಏನೋ ನಕಲಿ ದಾಖಲೆ ಸೃಷ್ಟಿಮಾಡಿದ್ದಾರೆ ಅಂತ…. ಅದಕ್ಕೇ ಕೇಳ್ತಿದ್ದೆ,’ ಅಂದೆ.
`ಆ ಶನಿಸ್ವಾಮಿದಾ… ಅಲ್ಲಾ ಸರ್, ಈ ಸಾಹೇಬ್ರು ಮಾಡೋ ಕೆಲ್ಸಕ್ಕೆ, ನಾವು ಜೀವ ಕೈಯಲ್ಲಿ ಇಟ್ಕೊಂಡು ತಿರುಗಬೇಕು ಅಷ್ಟೆ. ಆ ಸ್ವಾಮಿ ಏನೋ ನಕಲಿ ದಾಖಲೆ ತಯಾರು ಮಾಡಿದ್ನಂತೆ. ಅದಕ್ಕೆ ಶನಿ ದೇವಸ್ಥಾನನೇ ತಗೊಂಡು ಬಂದು ನಮ್ಮ ಆಫೀಸಿನಲ್ಲಿ ಇಡೋದಾ? ಮೊದಲೇ ದಿನಾ ಪೂಜೆ ನೆಡಿತ್ತಿದ್ದ ದೇವಸ್ಥಾನ. ಆಫೀಸಿನೊಳಗೆ ಬರುವಾಗ ಆ ಕಡೆ ತಿರುಗಿ ನೋಡೋಕೇ ಹೆದರಿದೆ ಆಗುತ್ತೆ,’ ಅಂದ.
`ಯಾಕ್ರೀ? ಏನಾಯ್ತು?’ ಅಂದೆ.
`ಹೋದ ವಾರ ಸಾಹೇಬ್ರು ನಮ್ಮನೆಲ್ಲ ಕರ್ಕೊಂಡು ಬನಶಂಕರಿಗೆ ಹೋದ್ರು. ಅಲ್ಲಿ ನಕಲಿ ದಾಖಲೆ ತಯಾರು ಮಾಡಿದ ಜಾಗನೆಲ್ಲ ನೋಡಿದ್ವಿ. ಅಲ್ಲೇನೂ ಕಟ್ಟಿರಲಿಲ್ಲ. ಎಲ್ಲಾನೂ ಕಾರ್ಪೋರೇಶನ್ ಜಾಗ ಅಂತ ಬೋರ್ಡ್ ಹಾಕಿ ವಾಪಾಸ್ ಬರುವಾಗ, ಅಲ್ಲೋಂದು ಶನಿದೇವರ ಗುಡಿ ಇತ್ತು. ಆ ಶನಿದೇವರ ಗುಡಿಯ ಪೂಜಾರಿನೇ ನಕಲಿ ದಾಖಲೆ ತಯಾರು ಮಾಡಿದ್ದಂತೆ. ಹಾಗಂತ, ಆ ದೇವಸ್ಥಾನವನ್ನೇ ಎತ್ತಿಸಿಕೊಂಡು ಬಂದು, ನಮ್ಮ ಆಫೀಸಿನ ಹಿಂದುಗಡೆ ಇಡೋದಾ? ಸಾಹೇಬ್ರಿಗೇನೋ ದೇವರ ಬಗ್ಗೆ ಹೆದರಿಕೆ ಇಲ್ಲ. ಜೊತೆಯಲ್ಲಿ, ಆ ದೇವಸ್ಥಾನದ ಗುಡಿಯನ್ನು ನಮ್ಮ ಕೈಲೇ ಎತ್ತಿಸಿದರು. ನಮ್ಮ ಕಥೆ ಹೇಳಿ ಈಗ, ಎಲ್ಲಾದರೂ ಹೋಗಿ ಹರಕೆ ಕಟ್ಕೋಬೇಕು ಅಷ್ಟೆ’ ಅಂತ ಗೋಳಾಡಿದ.
ನನಗಂತೂ ಕುಣಿದಾಡುವಷ್ಟು ಖುಶಿಯಾಯ್ತು. ಮೊದಲೇ ಕಸ್ತೂರಿ ರಂಗನ್ ಮೇಲೆ ನನಗೆ ಅಭಿಮಾನ.. ಅದು ಹತ್ತು ಪಾಲು ಹೆಚ್ಚಾಯ್ತು. `ಬಡ್ಡಿಮಗಂಗೆ ಹಾಗೇ ಆಗಬೇಕು’ ಅಂತ ಮನಸ್ಸಿನಲ್ಲೇ ಶಪಿಸಿದೆ.
ಆಗ, ಇಂಡಿನ್ ಎಕ್ಸಪ್ರೆಸ್ ಗೆ ನಚ್ಚಿ ಮುಖ್ಯ ವರದಿಗಾರರಾಗಿದ್ದರು. ಏನಾದರೂ ಸುದ್ದಿ ಬೆಳವಣಿಗೆ ಇದ್ದಾಗ, ಎದುರು ಸಿಕ್ಕಿದವರನ್ನು `ಹೋಗಿ ನೋಡ್ಕೊಂಡು ಬಾ’ ಅಂತಿದ್ರು. ಹಾಗಾಗಿ, ಒಂದೆರಡು ಬಾರಿ ಮುಖ್ಯಮಂತ್ರಿಯಾಗಿದ್ದ ಜೆ ಎಚ್ ಪಟೇಲರ ಹಿಂದೆ ನಾನು ತಿರುಗಬೇಕಾಗಿತ್ತು. `ಅವರೇನು ಹೇಳ್ತಾರೆ ಕೇಳ್ಕೊಂಡು ಬಂದು ಬರಿ. ನಾನು ಕಾಪಿ ಸರಿ ಮಾಡಿಕೊಡ್ತೀನಿ’ ಅಂತ ಹೇಳ್ತಿದ್ರು. ನಾನಂತೂ, ಬೇಕಾದ್ದು, ಬೇಡದಿದ್ದದ್ದು ಎಲ್ಲಾ ಬರೆದಿಟ್ಟು, ಅವರ ತಲೆ ಹಾಳು ಮಾಡ್ತಿದ್ದೆ.
ಅದರಿಂದ ನಚ್ಚಿಗೆಷ್ಟು ಪ್ರಯೋಜನವಾಯ್ತೋ ನಂಗೊತ್ತಿಲ್ಲ. ನನಗಂತೂ, ಪಟೇಲರ ಮಾಧ್ಯಮ ಸಲಹೆಗಾರರಾದ ಶಂಕರಲಿಂಗಪ್ಪನವರ ಪರಿಚಯವಾಯ್ತು. ತುಂಬಾ ಸಂಭಾವಿತರಾದ ಶಂಕರಲಿಂಗಪ್ಪನವರಿಗೆ, ನಮ್ಮ ಕುಟುಂಬದಲ್ಲಿ ಕೆಲವರ ಪರಿಚಯವಿದ್ದ ಕಾರಣ, ನನ್ನನ್ನು ವಿಶ್ವಾಸದಿಂದ ಮಾತನಾಡಿಸುತ್ತಿದ್ದರು. ನಾನು ಅವರ ಹತ್ತಿರ ಸ್ವಲ್ಪ ಹೆಚ್ಚು ಅನ್ನಿಸುವಷ್ಟು ಸಲಿಗೆ ಬೆಳೆಸಿಕೊಂಡಿದ್ದೆ. ಯಾವಾಗಲೂ ಸಮಾಧಾನದಿಂದಿರುತ್ತಿದ್ದ ಶಂಕರಲಿಂಗಪ್ಪ, ನನ್ನ ಹುಚ್ಚು ಮತ್ತು ಪೆದ್ದು ಮಾತುಗಳನ್ನು ನಗುತ್ತಲೇ ಸಹಿಸಿಕೊಂಡಿದ್ದರು.
ಒಂದಿನ, ವಿಧಾನಸೌಧದ ಹತ್ತಿರ ಶಂಕರಲಿಂಗಪ್ಪನವರು ಆ ಶನಿಸ್ವಾಮಿಯ ಹತ್ತಿರ ಮಾತನಾಡುತ್ತಿದ್ದದ್ದು ನೋಡಿದೆ. ಸ್ವಾಮಿ ಆಕಡೆ ಹೋದಕೂಡಲೇ, ಶಂಕರಲಿಂಗಪ್ಪನವರ ಹತ್ತಿರ ಹೋಗಿ, `ಏನು ಸಮಾಚಾರ? ಏನಂತೆ ಆ ಸ್ವಾಮಿದೂ?’ ಅಂತ ಕೇಳಿದೆ.
`ಏನೋ ಪಾಪ, ಪೋಲಿಸರು ತುಂಬಾ ತೊಂದರೆ ಕೊಡ್ತಾರಂತೆ. ಸಾಹೇಬರನ್ನು ನೋಡಬೇಕಂತೆ…ಮಾತಾಡ್ತಾ ಇದ್ದ್ರು’ ಅಂದರು.
`ರೀ, ಅವನು ಪಿಂಪ್ ಕಣ್ರೀ. ಎಲ್ಲಾದರೂ ನಿಮ್ಮ ಸಾಹೇಬರಿಗೆ ಪರಿಚಯ ಮಾಡಿಸ್ಬೇಕಲ್ಲಾ…. ನಿಮ್ಮನ್ನ ಸುಮ್ಮನೆ ಬಿಡಲ್ಲ,’ ಅಂದೆ.
`ಹೋಗ್ಲಿ ಬಿಡೋ.. ಅವ್ರೂ ಬದುಕಬೇಕು. ಏನೋ ಕಷ್ಟ ಹೇಳ್ಕೊಂಡಾಗ ಹ್ಯಾಗೆ ಸುಮ್ಮನಾಗೋದು? ಏನೋ ಕೈಲಾದ ಸಹಾಯ ಮಾಡ್ಬೇಕು,’ ಅಂದರು. ನಾನೇನೋ ಹೇಳಲು ಹೊರಟೆ. ಆದರೆ ಬೇರೆ ಯಾರೋ ಬಂದಿದ್ದರಿಂದ ಸುಮ್ಮನಾದೆ.
ಒಂದೆರೆಡು ವಾರದಲ್ಲಿ, ನಚ್ಚಿ ಮತ್ತೆ ನನ್ನನ್ನು ಪಟೇಲರ ಮನೆಗೆ ಓಡಿಸಿದರು. ಏನೋ ರಾಜಕೀಯ ಬೆಳವಣಿಗೆ, ಪಟೇಲರು ಏನು ಹೇಳ್ತಾರೆ ಅಂತ ಕೇಳ್ಕೊಂಡು ಬಾ ಅಂದರು. ಒಂದೆರೆಡು ಬೇರೆ ಪತ್ರಿಕೆಗಳ ವರದಿಗಾರರೂ ಇದ್ದರು. ಪಟೇಲರು ಯಾಕೋ ಮುಂದಿನ ಬಾಗಿಲ ಬದಲು, ಮನೆಯ ಬದಿಯಲ್ಲಿದ್ದ ಬಾಗಿಲಿಂದ ಹೊರಟರು. ನಾವೆಲ್ಲಾ ಪಕ್ಕದ ಬಾಗಿಲಿನ ಹತ್ತಿರ ಓಡುವುದರೊಳಗೆ, ಪಟೇಲರು ಕಾರಿನೊಳಗೆ ಕೂತಾಗಿತ್ತು. ನಾವು ಪ್ರಶ್ನೆ ಕೇಳಿದಾಗ ಪಟೇಲರು, ವಾಪಾಸ್ ಬಂದು ಮಾತಾಡ್ತೀನಿ ಅಂದರು.
 ನಾವು ತಿರುಗುವುದರೊಳಗೆ ಹಿಂದಿನಿಂದ ಶಂಕರಲಿಂಗಪ್ಪನವರ ಧ್ವನಿ ಬಂತು: `ಸರ್, ಸ್ವಾಮೀಜಿ ನಿಮ್ಮ ಹತ್ತಿರ ಮಾತಾಡಬೇಕಂತೆ.'
ತಿರುಗಿ ನೋಡಿದರೆ, ಶಂಕರಲಿಂಗಪ್ಪನವರ ಪಕ್ಕ ನಿಂತಿದ್ದ.. `ಶನಿಸ್ವಾಮಿ'.
`ಏನಂತೆ?' ಅಂದರು ಪಟೇಲರು.
`ನಾನು ಶನಿಪುತ್ರ... ಶನಿಮಹಾಸ್ವಾಮಿ' ಅಂದ ಸ್ವಾಮೀಜಿ.
ಪಟೇಲರಿಗೆ ಸರಿಯಾಗಿ ಕೇಳಲಿಲ್ಲ ಅಂತ ಕಾಣುತ್ತೆ. `ಏನಾಯ್ತು?’ ಅಂದರು.
`ನಾನು… ಶನಿಯ ಮಗ.. ಶನಿಪುತ್ರ ಮಹಾಸ್ವಾಮಿ,’ ಅಂತ ಎದೆ ಉಬ್ಬಿಸಿ ಹೇಳಿದ.
`ಸರಿ, ನಿಮ್ಮ ತಂದೆಯವರನ್ನು ಕೇಳಿದೆ ಅಂತ ಹೇಳಿ,’ ಅಂದ ಪಟೇಲರು, ಕಾರ್ ಡ್ರೈವರ್ ಬೆನ್ನು ಮುಟ್ಟಿದರು. ಕಾರು ಬುರ್ರನೆ ಮುಂದೆ ಹೋಯ್ತು. ಎಲ್ಲರೂ ಘೊಳ್ಳನೆ ನಕ್ಕರು. ನಾನೂ ಹೊಟ್ಟೆ ಹಿಡ್ಕೊಂಡು ಶನಿಸ್ವಾಮಿಯ ಕಡೆ ನೋಡಿದೆ. ಅವನು ಪೆಚ್ಚಾಗಿ ಶಂಕರಲಿಂಗಪ್ಪನವರ ಮುಖ ನೋಡುತ್ತಿದ್ದ. ಶಂಕರಲಿಂಗಪ್ಪನವರು ನಗು ತಡೆಯಲು ಎಲ್ಲೋ ನೋಡುತ್ತಿರುವಂತೆ ನಟಿಸುತ್ತಿದ್ದರು. ಮತ್ತೆ ಶನಿಸ್ವಾಮಿಯ ಕಡೆ ನೋಡುವಾಗ, ಅವನು ಏನೋ ಗೊಣಗುತ್ತ, ಮುಖ್ಯಮಂತ್ರಿಗಳ ಮನೆಯಿಂದ ಹೊರಗಡೆ ಹೋಗುತ್ತಿದ್ದ.
`ಹೇಳಿದ್ರೆ ಕೇಳ್ತೀರಾ… ಹಾಗೇ ಆಗಬೇಕು ನಿಮಗೆ,’ ಅಂತ ಶಂಕರಲಿಂಗಪ್ಪನವರಿಗೆ ಹೇಳ್ದೆ.
`ಸರಿ ಬಿಡೋ ಮಾರಾಯಾ… ನಿಂದೊಳ್ಳೆ ಕಥೆ ಆಯ್ತಲ್ಲಾ. ಸಾಹೇಬ್ರನ್ನ ಮೀಟ್ ಮಾಡ್ಸೋಕೆ ಸ್ವಾಮೀಜಿ ಹೇಳಿದ್ರು, ನಾನು ಮಾಡಿಸ್ದೆ ಅಷ್ಟೆ,’ ಅಂತ ನಗ್ತಾನೇ ಹೇಳಿದ್ರು. ಎಷ್ಟೋ ದಿನಗಳವರೆಗೆ, ಈ ವಿಷಯ ತೆಗೆದು ಶಂಕರಲಿಂಗಪ್ಪನವರಿಗೆ ತಮಾಷೆ ಮಾಡ್ತಿದ್ದೆ.
ಅದಾದ ಮೇಲೂ ಶನಿಸ್ವಾಮಿಯನ್ನು ಎಷ್ಟೋ ಸಲ ಕಮೀಷನರ್ ಆಫೀಸು, ವಿಧಾನಸೌಧದ ಹತ್ತಿರ ನೋಡಿದ್ದೇನೆ. ದೇಹವೆಲ್ಲ ಇಳಿದುಹೋಗಿತ್ತು. ಕೈಕಾಲು ಸಣ್ಣ, ಹೊಟ್ಟೆ ಡುಮ್ಮ ಅನ್ನುವ ಹಾಗೆ ಆಗಿಹೋಗಿದ್ದ. ನೆಡೆಯುವಾಗಲೂ ಅಷ್ಟೆ, ಕಾಲನ್ನು ದೂರವಾಗಿ ಅಡ್ಡಗಾಲು ಹಾಕುತ್ತಿದ್ದ. ಕಾಯಿಲೆಯವನ ತರಹ ಕಾಣ್ತಿದ್ದ. `ಯಾರೋ ಸೊಂಟ ಮುರಿದಿರಬೇಕು, ಇಲ್ಲವೇ, ಯಾವುದೋ ಕಾಯಿಲೆ ಹತ್ತಿಸಿಕೊಂಡಿದ್ದಾನೆ,’ ಅಂದ್ಕೊಂಡು ಸುಮ್ಮನಾದೆ. ಬರುಬರುತ್ತಾ, ಅವನು ಸಿಗುವುದೂ ಕಮ್ಮಿಯಾಯ್ತು.
ಆಗೆಲ್ಲಾ, ವಿಧಾನಸೌಧದೊಳಗೆ ಕಾವಿಧಾರಿಗಳು ಬರುವುದು ಕಡಿಮೆಯಿತ್ತು. ಈಗ ತುಂಬಾ ಜನ ಸಿಕ್ತಾರೆ. ಕಾವಿಬಟ್ಟೆ ಕಂಡಾಗಲೆಲ್ಲಾ ನನ್ನ ಕಣ್ಣು ಸುಮ್ಮನೆ ಹುಡುಕುತ್ತೆ: `ಆ ಉದ್ದವಾದ ಟೋಪಿ’

ಮಾಕೋನಹಳ್ಳಿ ವಿನಯ್ ಮಾಧವ್





ಶುಕ್ರವಾರ, ಡಿಸೆಂಬರ್ 16, 2011

ಕತ್ತೆ, ಕುದುರೆ


ಬನ್ಸಿಯ ಕುದುರೆ ಮತ್ತು ವಾಟಾಳ್ ಕತ್ತೆ….

ಮೊನ್ನೆ ಬನ್ಸಿ ಸಿಕ್ಕಿದ್ದ. ತುಂಬಾ ದಿನಗಳಾಗಿತ್ತು, ಹಾಗೇ ಲೋಕಾಭಿರಾಮವಾಗಿ ಮಾತಾಡಿ ಹೊರಡುವಾಗ ಮತ್ತೆ ನೆನಪಾಗಿದ್ದು ಕುದುರೆ. ಯಾವಾಗಲೂ ಹಾಗೆ. ಬನ್ಸಿಯನ್ನು ನೋಡಿದಾಗ ಕುದುರೆ ಮತ್ತು ಕನ್ನಡ ಚಳುವಳಿಗಾರ ವಾಟಾಳ್ ನಾಗರಾಜ್ ರನ್ನು ನೋಡುವಾಗ ಕತ್ತೆ ನೆನಪಾಗದೇ ಇರುವುದಿಲ್ಲ.
ಬನ್ಸಿ ಮತ್ತು ನಾನು ಒಟ್ಟಿಗೇ ಪತ್ರಕರ್ತರಾಗಿದ್ದು. ಅವನು ಏಶಿಯನ್ ಏಜ್ ಸೇರಿ, ಅಲ್ಲಿಂದ ಟೈಮ್ಸ್ ಆಫ್ ಇಂಡಿಯಾಗೆ ಸೇರಿದ. ನಾನು ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿದ್ದೆ. ಇಬ್ಬರೂ ಕ್ರೈಂ ರಿಪೋರ್ಟರ್ ಗಳು.
ದಿನಗಳಲ್ಲಿ, ಕ್ರೈಂ ರಿಪೋರ್ಟರ್ ಗಳ ನೆಡುವೆ ಪೈಪೋಟಿ ಜೋರಾಗಿತ್ತು. ನಮ್ಮ ಪತ್ರಿಕೆಯಲ್ಲಿ ನಾನೊಬ್ಬನೇ ಇದ್ದೆ. ಆದರೆ, ಟೈಂಸ್ ಆಫ್ ಇಂಡಿಯಾ ಸೇರಿದಂತೆ, ಕೆಲವಾರು ಪತ್ರಿಕೆಗಳಲ್ಲಿ ಇಬ್ಬರು, ಮೂವರು ಕ್ರೈಂ ರಿಪೋರ್ಟರ್ ಗಳು ಇರುತ್ತಿದ್ದರು. ದೇವರಿಗಿರಬೇಕಾದ ತಾಳ್ಮೆ ಇದ್ದ ಬನ್ಸಿಗೆ, ದೂರ್ವಾಸ ಮುನಿಯ ಅಪರಾವತಾರದಂತಿದ್ದ ಶ್ರೀಧರ್ ಪ್ರಸಾದ್, ಬನ್ಸಿಯ ಜೊತೆಗಾರ.
ಪೈಪೋಟಿಗಳ ನೆಡುವೆ, ಕೆಲವು ಪತ್ರಿಕೆಗಳ ವರದಿಗಾರರ ಗೋಳು ಹೇಳತೀರದು. ಯಾವುದಾದರೂ ಸುದ್ದಿ ಸಿಗದೇಹೋದರೆ, ಮರುದಿನ ಆಫೀಸ್ ನಲ್ಲಿ ಅವರ ತಿಥಿ! ನನಗ್ಯಾವತ್ತೂ ಇಂಥಾ ಪರಿಸ್ತಿತಿ ಬಂದಿರಲಿಲ್ಲ. ಒಟ್ಟಿಗೆ, ಪೋಲಿಸ್ ಕಮಿಷನರ್ ಆಫೀಸಿನಲ್ಲಿ ಕೂತು ಮಾತಾಡುವಾಗ, ನನಗೆ ಬೇರೆಯವರ ಕಷ್ಟ ಅರ್ಥವಾಗುತ್ತಿತ್ತು. ಕೆಲವರಂತೂ, ಅಫೀಸಿನಲ್ಲಿ ಕ್ರೈಂ ರಿಪೋರ್ಟಿಂಗ್ ನಿಂದ ಹೊರ ಬರಲು ಎಲ್ಲಾ ತರಹದ ಕಾರಣಗಳನ್ನೂ ಕೊಡುತ್ತಿದ್ದರು.
 ನಿಧಾನವಾಗಿ, ವರದಿಗಾರರೆಲ್ಲ, ಒಂದು ಒಳ ಒಪ್ಪಂದಕ್ಕೆ ಬಂದೆವು. ಅದೇನೆಂದರೆ, ದಿನದ ಸುದ್ದಿಗಳನ್ನು ಎಲ್ಲರೂ ಹಂಚಿಕೊಳ್ಳುವುದು. ವಿಶೇಷ ವರದಿಗಳನ್ನು ಮಾತ್ರ ಯಾರೂ ಪ್ರಶ್ನಿಸುವಂತಿಲ್ಲ. ಸರಿ, ರಾತ್ರಿ ಒಂಬತ್ತು ಘಂಟೆಗೆ ನಮ್ಮ ಸುದ್ದಿ ವಿನಿಮಯ ನೆಡೆಯುತ್ತಿತ್ತು. ನಮಗ್ಯಾರಿಗೂ ಮದುವೆಯಾಗಿಲ್ಲದಿದ್ದ ಕಾರಣ, ಕೆಲವೊಮ್ಮೆ ಒಟ್ಟಿಗೆ ರಾತ್ರಿ ಊಟಕ್ಕೂ ಹೋಗುತ್ತಿದ್ದೆವು.
ನನಗೊಂದು ಅಭ್ಯಾಸವಿತ್ತು. ನನ್ನ ಕೈಯಲ್ಲಿದ್ದ ವರದಿಗಳನ್ನು ಮುಗಿಸಿದ ತಕ್ಷಣ, ಯಾವುದಾದರೂ ಪೋಲಿಸ್ ಅಧಿಕಾರಿಗೆ ಫೋನ್ ಮಾಡಿ, ಸುಮ್ಮನೆ ತಲೆ ತಿನ್ನುತ್ತಿದ್ದೆ. ಅದು ಕಮಿಷನರ್ ಇರಬಹುದು, ಅಥವಾ ಕಾನ್ಸ್ ಟೇಬಲ್ ಇರಬಹುದು. ಕೆಲವೊಮ್ಮೆ, ಮಾತಿನ ಮಧ್ಯ ಒಳ್ಳೆ ವಿಶೇಷ ವರದಿಗಳು ಹುಟ್ಟಿದ್ದೂ ಇದೆ. ಆಗೇನೂ ಮೊಬೈಲ್ ಫೋನ್ ಗಳು ಇರಲಿಲ್ಲ. ಒಂದು ದಿನ, ಆಗಿನ ದಕ್ಷಿಣ ವಿಭಾಗದ ಡಿ.ಸಿ.ಪಿ. ಆಗಿದ್ದ ಸತ್ಯನಾರಾಯಣ ರಾವ್ ಅವರಿಗೆ ಫೋನ್ ಹಚ್ಚಿದೆ.
`ಸಾಹೇಬ್ರು ಇಲ್ಲ, ಊರಲ್ಲಿಲ್ಲಅಂತ ಕಡೆಯಿಂದ ಉತ್ತರ ಬಂತು.
ಧ್ವನಿ ಯಾಕೋ ಅವರ ಡ್ರೈವರ್ ದು ಅಂತ ಅನ್ನಿಸಿತು. ಯಾಕೋ ಸ್ವಲ್ಪ ಮೂಡ್ ಹಾಳಾಗಿದೆ ಅಂತಾನೂ ಅನ್ನಿಸಿತು. `ಯಾರು? ರಾಜುನಾಅಂದೆ.
ಅವನಿಗೂ ನನ್ನ ಧ್ವನಿ ಗುರುತಾಯ್ತು. `ವಿನಯ್ ಸರ್, ಸಾಹೇಬ್ರು ನಾಡಿದ್ದು ಬರ್ತಾರೆಅಂದ.
`ಯಾಕ್ರೀ, ಸುಸ್ತಾಗಿದ್ದ ಹಾಗಿದೆ?’ ಅಂದೆ.
`ಬೆಳಗ್ಗಿಂದ ಕುದುರೆ ಹಿಡಿತಾ ಇದ್ವಲ್ಲ. ಬಡ್ಡೀಮಗಂದು, ಸಾಯಂಕಾಲದವರೆಗೆ ಆಟಾಡಿಸಿತು. ಊಟ ಸಮೇತ ಇಲ್ಲ, ತಲೆ ನೋಯ್ತಾ ಇದೆ. ಮನೆಗೆ ಹೋಗಿ ಮಲಗಿದರೆ ಸಾಕು,’ ಅಂದು.
`ಯಾವ ಕುದುರೆರೀ? ನಿವ್ಯಾಕೆ ಹಿಡಿಯೋಕೆ ಹೋದಿರಿ?’ ಅಂದೆ.
`ನಿಮಿಗೊತ್ತಾಗಲಿಲ್ವಾ? ಬೆಳಗ್ಗೆ ಜಯನಗರ 5ನೀ ಬ್ಲಾಕ್ ಆಟದ ಮೈದಾನ ಇದೆಯಲ್ಲ, ಅದರ ಹತ್ತಿರ ಒಂದು ಹುಚ್ಚು ಕುದುರೆ ಬಂದಿತ್ತು. ಬೆಳಗ್ಗೆ ಆಫೀಸ್ ಗೆ ಹೋಗ್ತಿದ್ದ ನಾಲ್ಕೈದು ಜನಕ್ಕೆ ಕಚ್ಚಿ ಬಿಡೋದಾ? ಸ್ಕೂಟರ್ ನಲ್ಲಿ ಹೋಗೋರನ್ನ ಬೀಳಿಸಿ ಕಚ್ಚಿದೆ ಸರ್. ಸರಿ, ನಮಗೆ ಗೊತ್ತಾಯ್ತು. ಸಾಹೇಬರೂ ಇರಲಿಲ್ಲ. ನಾನೂ ಹೋದೆ. ಕುದುರೇನೇನೋ ಆಟದ ಮೈದಾನದ ಒಳಗೆ ಓಡಿಸಿದ್ವಿ. ಹಿಡಿಯೋಕೆ ಮಾತ್ರ ಆಗಲಿಲ್ಲ. ಒಂದು ವ್ಯಾನ್ ಪೋಲಿಸ್ ಕರೆಸಿದ್ವಿ. ಆಗ್ಲೇ ಇಲ್ಲ. ಕೊನೆಗೆ, ಹೆಬ್ಬಾಳದ ನಾಯಿ ಆಸ್ಪತ್ರೆಯಿಂದ ಡಾಕ್ಟರ್ ಕರೆಸಿದ್ವಿ. ಅವರು ಇಂಜೆಕ್ಷನ್ ಕೊಟ್ಟು ಮಲಗಿಸಿ, ತಗೊಂಡು ಹೋದ್ರು. ಊಟಾನೂ ಇಲ್ಲ, ಏನೂ ಇಲ್ಲ. ಅದು ಕಚ್ಚಿದ್ರೆ ಹುಚ್ಚು ಹಿಡಿಯುತ್ತಂತೆ,’ ಅಂದ.
` ಡಾಕ್ಟ್ರ ನಂಬರ್ ಇದೆಯಾ?’ ಅಂದೆ.
`ಇಲ್ಲೇ ಬರ್ಕೊಂಡಿದ್ದೆ, ತಗೊಳ್ಳಿ,’ ಅಂತ ಕೊಟ್ಟ. ಸರಿ, ಡಾಕ್ಟರ್ ಗೂ ಪೋನ್ ಮಾಡಿ, ದೊಡ್ಡದೊಂದು ರಿಪೋರ್ಟ್ ತಯಾರಿಸಿದೆ.
ಹತ್ತೇ ನಿಮಿಷದಲ್ಲಿ ನಮ್ಮ ಸಂಪಾದಕರಾಗಿದ್ದ ಕೆ.ವಿ.ರಮೇಶ್ ಬಂದು ವರದಿಯ ಬಗ್ಗೆ ಒಂದೆರೆಡು ಪ್ರಶ್ನೆ ಕೇಳಿದರು. `ಮೈ ಗಾಡ್ಎನ್ನುತ್ತಾ ಅವರ ಕೋಣೆಗೆ ಹೋದರು. ಆಗಲೇ ನನಗೆ ಗೊತ್ತಾಗಿದ್ದು: `ಇದು ತುಂಬಾ ಇಂಪಾರ್ಟೆಂಟ್. ನಾಳೆ, ಬೇರೆ ಪತ್ರಿಕೆ ವರದಿಗಾರರಿಗೆ ಪೂಜೆಯಾಗುತ್ತೆ,’ ಅಂತ.
ಯಾರಿಗಿಲ್ಲದಿದ್ದರೂ ಪರವಾಗಿಲ್ಲ. ಬನ್ಸಿಗೆ ತೊಂದರೆ ಆಗೋದು ಬೇಡ ಅಂತ ಅವನಿಗೆ ಫೋನ್ ಮಾಡಿದೆ. `ಶ್ರೀಧರ್ ಹಿಯರ್ಅಂತ ಎತ್ತಿದ, ದೂರ್ವಾಸ ಮುನಿ.
`ನೋಡೋ, ಒಂದು ರಿಪೋರ್ಟ್ ಇದೆ. ನಾನು ದೊಡ್ಡದಾಗಿ ಕೊಟ್ಟಿದ್ದೀನಿ. ನಿಮಗೆ ಸುದ್ದಿ ತಪ್ಪಿ ಹೋಗಬಾರದಷ್ಟೆ. ನಾಲ್ಕು ಪ್ಯಾರಾ ಕೊಡ್ತೀನಿ. ಜಾಸ್ತಿ ಬರೀಬಾರ್ದು,’ ಅಂದೆ.
`ಅಣ್ಣಾನನ್ನ ಶಿಫ್ಟ್ ಮುಗೀತು. ಬನ್ಸಿ ಬರ್ತಾ ಇದ್ದಾನೆ. ಅವನಿಗೆ ಫೋನ್ ಕೊಡ್ತೀನಿ. ಅವನಿಗೇ ಕೊಡು,’ ಅಂತ ಬನ್ಸಿ ಕೈಗೆ ಫೋನ್ ವರ್ಗಾಯಿಸಿದ. ಬನ್ಸಿ ಸುದ್ದಿ ತೆಗೆದುಕೊಂಡಿದ್ದಲ್ಲದೆ, ಅವನಿಗೆ ಸಿಕ್ಕಿದ್ದ ಒಂದೆರೆಡು ಸಣ್ಣ ಸುದ್ದಿಗಳನ್ನೂ ನನಗೆ ಕೊಟ್ಟ. ಸರಿ, ಅವುಗಳನ್ನೂ ವರದಿ ಮಾಡಿ, ನಾನು ಮನಗೆ ಹೋದೆ.
ಬೆಳಗ್ಗೆ ನೋಡಿದರೆ, ಸುದ್ದಿ ನಮ್ಮ ಪತ್ರಿಕೆಯಲ್ಲಿ ಮುಖಪುಟದಲ್ಲಿ ಬಂದಿತ್ತು. ಟೈಂಸ್ ಆಫ್ ಇಂಡಿಯಾದಲ್ಲಿ ಸೇರಿದಂತೆ, ಯಾವುದೇ ಪತ್ರಿಕೆಯಲ್ಲಿ ಅದರ ಸುಳಿವೇ ಇರಲಿಲ್ಲ. ಜಾಗ ಕಡಿಮೆ ಇತ್ತೇನೋ ಅಂದುಕೊಂಡು ಸುಮ್ಮನಾದೆ.
ಮಧ್ಯಾಹ್ನದ ಹೊತ್ತಿಗೆ, ಕಮೀಷನರ್ ಅಫಿಸ್ ಗೆ ಹೋಗಿ, ಪ್ರೆಸ್ ರೂಮಿನಲ್ಲಿ ಎಲ್ಲರ ಜೊತೆ ಮಾತಾಡ್ತಾ ಕೂತಿದ್ದೆ. ಮುಖ ಗಂಟಿಕ್ಕಿಕೊಂಡು ಶ್ರೀಧರ್ ಬರುವುದು ಕಂಡ ನಾನು: `ಅಲ್ವೋ, ಜಾಗ ಇರಲಿಲ್ವಾ? ಕುದುರೆ ಸುದ್ದಿ ಕೊಟ್ಟಿದ್ನಲ್ಲಾ?’ ಅಂದೆ.
`ನನ್ನೇನ್ ಕೇಳ್ತೀಯಾ? ಬರ್ತಾ ಇದ್ದಾನಲ್ಲಾ, ಅವನ್ನೇ ಕೇಳು,’ ಅಂದವನೇ, ಸಿಗರೇಟು ಹಚ್ಚಿ ಬುಸಬುಸನೆ ಹೊಗೆ ಬಿಡೋಕೆ ಶುರು ಮಾಡಿದ. ಹಿಂದೆಯೇ ಬಂದ ಬನ್ಸಿ, ಸಮಾಧಾನದಿಂದಲೇ, `ಸಿಟ್ಟು ಮಾಡ್ಕೋಬೇಡ ಕಣೋ, ಅದೇನಾಯ್ತು ಗೊತ್ತಾ?’ ಅಂದ.
`ಇನ್ನೇನೋ ಅಗ್ಬೇಕು? ಅಲ್ಲಾ, ಇವನು ಫೋನ್ಮಾಡಿ ಕೊಟ್ಟಿದ್ದಾನೆ. ನಿನಗಾಗ್ದೆ ಹೋಗಿದ್ದರೆ, ಹೇಳ್ಬೇಕಿತ್ತು. ಐದು ನಿವಿಷದಲ್ಲಿ ನಾನೇ ಬರೀತ್ತಿದ್ದೆ,’ ಅಂತ ಕೂಗಾಡಿದ. ಬನ್ಸಿ ಪೆಚ್ಚಾಗಿ ನಿಂತ.
`ಏನಾಯ್ತೋ ಬನ್ಸಿ?’ ಅಂತ ನಾನೇ ಕೇಳಿದೆ. ` `ಅಣ್ಣಾ… ನೀ ಸುದ್ದಿ ಕೊಟ್ಟಲ್ಲಾ, ಅದ್ನ ಒಂದು ಪೇಪರ್ ನಲ್ಲಿ ಬರ್ಕೊಂಡೆ. ಅದನ್ನ ಟೈಪ್ ಮಾಡೋಣಾ ಅಂತ ಇದ್ದೆ, ಅಷ್ಟೊತ್ತಿಗೆ ರೈಲ್ವೇ ರಿಸರ್ವೇಷನ್ ಬಂತು. ಅದೇ ಪೇಪರ್ ತಿರುಗಿಸಿ, ಅದರ ಹಿಂದೆ ರೈಲ್ವೇ ರಿಸರ್ವೇಷನ್ ಬರ್ಕೊಂಡು, ಆ ಪೇಪರ್ ನ ಡೆಸ್ಕಿಗೆ ಕೊಟ್ಟೆ. ಮರ್ತೇ ಹೋಯ್ತು,’ ಅಂದ ತಣ್ಣಗೆ.
`ಅಲ್ವೋ…..’ ಅಂತ ಏನೋ ಹೇಳಲು ಹೋಗಿ, ಸುಮ್ಮನಾದೆ. ಇಬ್ಬರನ್ನೂ ಬೆಳಗ್ಗೆ ಎಬ್ಬಿಸಿದ್ದು ಅವರ ಸಂಪಾದಕ ಬಲರಾಮರ ಫೋನ್. ಹತ್ತುಘಂಟೆಯ ಹೊತ್ತಿಗೆ ಆಫೀಸಿಗೆ ಕರೆಸಿ, ಸೋಪು, ನೀರು ಏನೂ ಇಲ್ಲದೆ, ಇಬ್ಬರಿಗೂ ಒಂದು ಘಂಟೆ ಸ್ನಾನ ಮಾಡಿಸಿ ಕಳುಹಿಸಿದ್ದರು, ಅಷ್ಟೆ! ಇವರಿಬ್ಬರ ಅವಸ್ಥೆಗಿಂತ, ಹಿಂದಿನ ದಿನ, ಕುದುರೆ ಕೈಲಿ ಕಚ್ಚಿಸಿಕೊಂಡು, ಊಟಬಿಟ್ಟು ಅದನ್ನು ಹಿಡಿದವರ ಪರಿಸ್ಥಿತಿಯೇ ವಾಸಿ ಅಂತ ಅನ್ನಿಸಿತು.
ಒಂದು ಪತ್ರಿಕೆ ಹೇಗೆ ಕೆಲಸ ಮಾಡುತ್ತೆ ಅಂತ ಸಾಮಾನ್ಯ ಪ್ರಜ್ನೆಯೂ ಇಲ್ಲದ ಆ ಕಾಲದಲ್ಲಿ, ನಾವ್ಯಾವುದೋ ಸಾಮ್ರಾಜ್ಯ ಆಳುತ್ತಿದ್ದೇವೆ ಎಂಬ ಭ್ರಮೆಯಲ್ಲಿರುತ್ತಿದ್ದೆವು. ಏನು ಬರೆಯಬೇಕು, ಏನು ಬರೆಯಬಾರದು ಅನ್ನೋದು ನಮ್ಮದೇ ನಿರ್ಧಾರ. ಸರಿಯಾಗಿದ್ದಾಗ, ನಾಲ್ಕಾರು ಜನ ಹೊಗಳಿದಾಗ, ಎದೆ ಉಬ್ಬಿಸಿಕೊಂಡು ನೆಡೆಯುತ್ತಿದ್ದೆವು. ಯಡವಟ್ಟಾಗಿ, ಆಫೀಸಿನಲ್ಲಿ ಯದ್ವಾತದ್ವಾ ಬೈಸಿಕೊಂಡಾಗ ಮಾತ್ರ, ಪೆಕರು ಪೆಕರಾಗಿ, ತಲೆಕೆರೆದುಕೊಂಡು ತಿರುಗುತ್ತಿದ್ದೆವು.
ಅಂತಹ ನಿರ್ಧಾರಗಳಲ್ಲಿ, ಬೆಂಗಳೂರಿನಲ್ಲಿ ಪ್ರತಿನಿತ್ಯ ನೆಡೆಯುತ್ತಿದ್ದ ಪ್ರತಿಭಟನೆಗಳನ್ನು ವರದಿ ಮಾಡುವುದಿಲ್ಲ ಎಂಬುದೂ ಒಂದು. ಆಗ ಮಹಿಳಾ ಸಂಘಟನೆಗಳು, ದಲಿತ ಸಂಘಟನೆಗಳು ಮತ್ತು ಕನ್ನಡ ಪರ ಸಂಘಟನೆಗಳು, ದಿನವೂ ಒಂದಲ್ಲೋಂದು ಕಾರಣದಿಂದ ಪ್ರತಿಭಟನೆ ನೆಡೆಸುತ್ತಿದ್ದವು. ನನ್ನ ನಿರ್ಧಾರಕ್ಕೆ, ಸೈದ್ದಾಂತಿಕ ಕಾರಣವೇನೂ ಇರಲಿಲ್ಲ. ಎಂಬತ್ತಕ್ಕೂ ಹೆಚ್ಚು ಪೋಲಿಸ್ ಠಾಣೆಗಳಲ್ಲಿ ನೆಡೆಯುವ ಅನಾಹುತಗಳ ಹಿಂದೆ ಹೋಗುವುದರೊಳಗೆ, ಇದಕ್ಕೆ ಸಮಯ ಸಿಗುತ್ತಿರಲಿಲ್ಲ.
ಕನ್ನಡ ಸಂಘಟನೆಗಳಲ್ಲಿ ಆಗ ಎಂ ಎಲ್ ಎ ಆಗಿದ್ದ ವಾಟಾಳ್ ನಾಗರಾಜ್ ಅವರದ್ದೇ ಸಾಮ್ರಾಜ್ಯ. ದಿನಕ್ಕೊಂದು ವಿನೂತನ ಪ್ರತಿಭಟನೆ, ಫೋಟೋಗ್ರಾಫರ್ ಗಳಿಗೆ ಹಬ್ಬ. ಕನ್ನಡ ಪತ್ರಿಕೆಗಳಲ್ಲಿ ಆಗಾಗ ನೋಡುತ್ತಿದ್ದರೂ, ಇಂಗ್ಲಿಷ್ ಪತ್ರಿಕೆಗಳು ಅಷ್ಟೇನು ತಲೆಕೆಡಿಸಿಕೊಂಡಿರಲಿಲ್ಲ.
ಇದಲ್ಲದೆ, ನಮ್ಮ ಛೀಫ್ ಆಗಿದ್ದ ನಚ್ಚಿ ಒಮ್ಮೆ ವಾಟಾಳ್ ಅವರಿಗೆ ತಗುಲಿಕೊಂಡಿದ್ದರು. ಅಸೆಂಬ್ಲಿಯಲ್ಲಿ ಮಾತಾಡುತ್ತಾ ವಾಟಾಳ್, ಇಂಡಿಯನ್ ಎಕ್ಸ್ ಪ್ರೆಸ್ ತಮಿಳುನಾಡಿನ ಪೇಪರ್, ಕನ್ನಡ ವಿರೋದಿ ಅಂತ ಹೇಳಿಬಿಟ್ಟರು. ಕೆರಳಿದ ನಚ್ಚಿ ಬರೆದೇ ಬಿಟ್ಟರು: `ಕನ್ನಡ ಆಕ್ಟಿವಿಸ್ಟ್ ವಿ.ನಾಗರಾಜ್ ಸೇಸ್…….’ ಅಂತ. `ವಾಟಾಳ್’ ಅನ್ನೋ ಟ್ರಂಪ್ ಕಾರ್ಡ್ ಮೂಲಕ್ಕೇ, ನಚ್ಚಿ ಕೈ ಹಾಕಿದ್ದರು. ಮರುದಿನ ಅಸೆಂಬ್ಲಿಯಲ್ಲಿ ನಚ್ಚಿಗೆ ಕೈ ಮುಗಿದು: `ಸ್ವಾಮಿ, ಇನ್ನು ನಿಮ್ಮ ಸಹವಾಸಕ್ಕೆ ಬರೋಲ್ಲ. ಏನಾದರೂ ಮಾಡಿಕೊಳ್ಳಿ, ವಿ.ನಾಗರಾಜ್ ಅಂತ ಮಾತ್ರ ಬರೀಬೇಡಿ,’ ಅಂದಿದ್ದರು. ಹಾಗಾಗಿ, ವಾಟಾಳ್ ಬಗ್ಗೆ ಏನೂ ಬರೆಯೋಲ್ಲ ಅಂತ  ನಾನೂ ನಿರ್ಧರಿಸಿದ್ದೆ.
ಆಗ ವಿಧಾನಸೌಧದ ಸುತ್ತ ಬೇಲಿಯಾಗಲೀ, ಈಗಿನಂತೆ ಭದ್ರತೆಯಾಗಲೀ ಇರಲಿಲ್ಲ. ವಿಧಾನಸೌಧದ ಒಳಗಿನ ರಸ್ತೆಯನ್ನು ಅಡ್ಡದಾರಿಯಾಗಿಯೂ ಉಪಯೋಗಿಸುತ್ತಿದ್ದೆವು. ಒಂದು ದಿನ, ಇದೇ ಅಡ್ಡದಾರಿಯಲ್ಲಿ ಬರುವಾಗ, ವಾಟಾಳ್ ನಾಗರಾಜ್ ಮತ್ತು ಒಂದ್ಹತ್ತು ಜನ ವಿಧಾನಸೌಧದ ಹತ್ತಿರ ಕಂಡರು. ಅವರ ಪಕ್ಕ ಒಂದು ಟೆಂಪೋ ಬೇರೆ ನಿಂತಿತ್ತು. ಏನು ಅಂತ ಆ ಕಡೆ ನೋಡಿದಾಗ, ಒಬ್ಬ ಒಂದು ಕತ್ತೆಯನ್ನು ಹಿಡಿದುಕೊಂಡಿದ್ದರೆ, ಇನ್ನೊಬ್ಬ ಎರಡು ಕೋಳಿಗಳನ್ನು ಹಿಡಿದುಕೊಂಡಿದ್ದ. ನಾಯಿ, ಬೆಕ್ಕು, ಕುರಿಗಳೂ ಇದ್ದವು. ಇನ್ನಿಬ್ಬರು, ಟೆಂಪೋದಿಂದ ಒಂದು ಎಮ್ಮೆಯನ್ನು ನಿಧಾನವಾಗಿ ಇಳಿಸುತ್ತಿದ್ದರು. ಸರಿ, ರಾಜಕಾರಣಿಗಳನ್ನು,  ಈ ಪಾಪದ ಪ್ರಾಣಿಗಳಿಗೆ ಹೋಲಿಸುವ ಪ್ರತಿಭಟನೆ, ಅಂತ ನೋಡುತ್ತಾ ನಿಂತೆ.
ಎಮ್ಮೆಯನ್ನು ಇಳಿಸಿದ ತಕ್ಷಣ, ಇಬ್ಬರೂ ಮತ್ತೆ ಟೆಂಪೋ ಮೇಲೆ ಹತ್ತಿದರು. ಏನು ಅಂತ ನೊಡುತ್ತಿದ್ದಂತೆ, ಒಂದು ಉದ್ದವಾದ ದೊಣ್ಣೆಯನ್ನು ಹೆಗಲಿಗೆ ಹೊತ್ತುಕೊಂಡರು. ಅದರಲ್ಲಿತ್ತು, ನಾಲ್ಕೂ ಕಾಲುಗಳನ್ನು ದೊಣ್ಣೆಗಳಿಗೆ ಬಿಗಿದು, ತಲೆಕೆಳಕ್ಕಾಗಿ ಕಟ್ಟಿದ್ದ ಹಂದಿ. ಇವರು ಎತ್ತುತ್ತಿದ್ದಂತೆ, ಹಂದಿ ಕಿರ್ರೋ…. ಅಂತ ಜೋರಾಗಿ ಕೂಗಲು ಶುರುಹಚ್ಚಿಕೊಂಡಿತು. ಏನಾಯ್ತು ಅಂತ ನೋಡೋದ್ರೊಳಗೆ, ಕತ್ತೆ ಗಾಬರಿಯಾಗಿ, ಹಿಡಿದುಕೊಂಡವನನ್ನು ಝಾಡಿಸಿ, ವಿಧಾನಸೌಧದ ಹುಲ್ಲುಗಳ ಮೇಲೆ ಓಡತೊಡಗಿತು. ವಾಟಾಳ್ ಜೊತೆ ತಮಟೆ ಹೊಡೆಯುತ್ತಿದ್ದ ಗೋಪಿ, `ಹಿಡ್ಕೊಳ್ರೋ…ಹಿಡ್ಕೊಳ್ರೋ’ ಅಂತ ಕೂಗಿದ ತಕ್ಷಣ, ಹಂದಿಯನ್ನು ಕೆಳಗೆ ಹಾಕಿದ ಇಬ್ಬರು ಕತ್ತೆಯ ಹಿಂದೆ `ಸತ್ತೆವೋ, ಬಿದ್ದೆವೋ’ ಅಂತ ಓಡಲು ಶುರುಮಾಡಿದರು. ಇನ್ನೂ ಗಾಬರಿಯಾದ ಕತ್ತೆ, ವಿಧಾನಸೌಧದ ಆವರಣ ದಾಟಿ, ರಸ್ತೆಯನ್ನೂ ದಾಟಿ, ಹೈಕೋರ್ಟ್ ಆವರಣದೊಳಗೆ ಹೋಗಿ, ಕಬ್ಬನ್ ಪಾರ್ಕ್ ನಲ್ಲಿ ಕಣ್ಮರೆಯಾಯ್ತು. ಅದರ ಹಿಂದೆಯೇ, ಇವರಿಬ್ಬರೂ ಕೂಡ…
ಆಫೀಸಿಗೆ ಬಂದವನೇ ನಚ್ಚಿಗೆ ನೋಡಿದ್ದನ್ನು ಹೇಳಿ, ನಗಲಾರಂಭಿಸಿದೆ. `ಲೋ ಮಾಕೋನಹಳ್ಳಿ, ಐಟಮ್ ಚೆನ್ನಾಗಿದೆ ಕಣೋ. ಬರಿಯೋ…. ನಸೀಬು ಚೆನ್ನಾಗಿದ್ದರೆ ಪ್ರಿಂಟ್ ಆಗುತ್ತೆ’ ಅಂದರು. ಸರಿ, ನೋಡೋಣ ಅನ್ಕೊಂಡು ಸುಮ್ಮನಾದೆ. ಒಂದೆರೆಡು ಘಂಟೆ ಬಿಟ್ಟು ವಿಧಾನಸೌಧದ ಹತ್ತಿರ ಹೋದೆ. ಅಲ್ಲಿ ಯಾರೂ ಇರಲಿಲ್ಲ. ಪ್ರತಿಭಟನೆ ಮುಗಿಸಿ ಹೋಗಿದ್ದಾರೆ ಅನ್ಕೊಂಡು, ನೃಪತುಂಗ ರಸ್ತೆಯಲ್ಲಿರುವ ಕೋರ್ಟ್ ಕಡೆ ಹೊರಟೆ. ಗೋಪಾಲಗೌಡ ವೃತ್ತದ ಹತ್ತಿರ ಹೋದಾಗ, ಕಬ್ಬನ್ ಪಾರ್ಕ್ ಮರದಡಿಯಲ್ಲಿ, ಕತ್ತೆಯನ್ನು ಹಿಡಿದುಕೊಂಡು, ಓಡಿದವರಿಬ್ಬರು ನಿಂತಿದ್ದರು. ಬೈಕ್ ನಿಲ್ಲಿಸಿ, ಅವರ ಹತ್ತಿರ ಹೋಗಿ: `ಕತ್ತೆ ಸಿಕ್ತಾ?’ ಅಂದೆ.
`ಇಡೀ ಪಾರ್ಕ್ ಎರಡು ಸುತ್ತು ಹೊಡಸ್ತು… ಅವರೇನೋ ಸ್ಟ್ರೈಕ್ ಮುಗಿಸಿ ಹೋದ್ರು. ನಾವೀಗ, ಕತ್ತೆ ಜೊತೆ ರಾಜಾಜಿನಗರ ಧೋಬಿ ಘಾಟ್ ವರೆಗೆ ನೆಡಕೊಂಡು ಹೋಗಬೇಕು,’ ಅಂದ ಒಬ್ಬ.
`ಟೆಂಪೋ ಇತ್ತಲ್ಲ?’ ಅಂದೆ.
`ಬೇರೆ ಪ್ರಾಣಿ ತಂದಿರ್ತರಲ್ಲಾ, ಅದನ್ನ ವಾಪಾಸ್ ಕೊಡೋಕೆ ಹೋಗಿರ್ತದೆ,’ ಅಂದ.
`ಅಲ್ಲಾ, ಈ ಕತ್ತೆ ಹಿಂದೆ ಯಾಕೆ ಓಡಿದ್ರೀ?’ ಅಂತ ಕೇಳಿದೆ.
`ಅಯ್ಯೋ ಸ್ವಾಮಿ, ಇದು ಧೋಬಿ ಘಾಟ್ ನಿಂದ ಬಾಡಿಗೆಗೆ ತಂದಿದ್ದು. ಬಾಡಿಗೆ ಐವತ್ತು ರೂಪಾಯಿ ಕೊಟ್ಟಿದ್ದೀವಿ. ಕತ್ತೆ ವಾಪಾಸ್ ಕೊಡದೇ ಹೋದರೆ, ಒಂದುವರೆ ಸಾವಿರ ಕೊಡಬೇಕು, ಅಷ್ಟೆ,’ ಅಂದ ಇನ್ನೊಬ್ಬ.
ಕತ್ತೆ ಕಡೆ ನೋಡಿದೆ. ಅದು ಏನೂ ಅಗಿಲ್ಲ ಎಂಬಂತೆ, ತಿನ್ನಲು ಏನಾದರೂ ಸಿಗುತ್ತಾ ಅಂತ, ಆ ಕಡೆ, ಈ ಕಡೆ ನೋಡ್ತಾ ಇತ್ತು. ಸರಿ ಅಂತ ಅಲ್ಲಿಂದ ಹೊರಟೆ.
ವಾಟಾಳ್ ಪ್ರತಿಭಟನೆ, ಕಡೆಗೂ ಸುದ್ದಿಯಾಗಲೇ ಇಲ್ಲ. ಆದರೆ, ಕತ್ತೆ ಓಡಿಹೋಗಿದ್ದು ಮಾತ್ರ, ನಮ್ಮ ಪತ್ರಿಕೆಯಲ್ಲಿ, ಮುಖಪುಟ ಸುದ್ದಿಯಾಗಿತ್ತು

ಮಾಕೋನಹಳ್ಳಿ ವಿನಯ್ ಮಾಧವ