ಬದುಕು
ಕಲಿಸಿದವರ ಹಿಂದೆ ಕೆಲವು ಪುಟ್ಟ ಹೆಜ್ಜೆಗಳು….
ಒಂಬತ್ತು
ಗಂಟೆಗೆ ಬೆಲ್ ಹೊಡೆದ ತಕ್ಷಣ ಎಲ್ಲರೂ ಅವರವರ ಮಂಚದ ಕಡೆಗೆ ಹೆಜ್ಜೆ ಹಾಕಿದರು. ಇನ್ನೊಂದು ಬೆಲ್ ಹೊಡೆಯುವುದರೊಳಗೆ
ಮಲಗಿರಬೇಕು ಅಂತ ಹಿರಿಯ ವಿದ್ಯಾರ್ಥಿಗಳು ಹೇಳಿದ್ದರಿಂದ, ಸೀದ ಹೋಗಿ ಮಂಚದ ಮೇಲೆ ಮಲಗಿದೆ. ಯಾಕೋ ತಳಮಳವಾಗತೊಡಗಿತು.
ಮನೆಯಲ್ಲಿ ಒಬ್ಬನೇ ನನ್ನ ಕೋಣೆಯಲ್ಲಿ ಮಲಗಿ ಅಭ್ಯಾಸವಿದ್ದರೂ, ಇಲ್ಲಿ ಅಕ್ಕಪಕ್ಕದ ಮಂಚಗಳಲ್ಲಿ ಬೇರೆಯವರು
ಇದ್ದರೂ, ಯಾಕೋ ಅನಾಥಪ್ರಜ್ಞೆ ಕಾಡತೊಡಗಿತು.
ಮನೆಯಲ್ಲಾದರೆ
ಒಂಬತ್ತು ಗಂಟೆಗೆ ಮಲಗಿ ಅಭ್ಯಾಸವಿತ್ತು. ಏನೋ ಕಳೆದುಕೊಂಡಂತೆ
ಭಾಸವಾಗತೊಡಗಿತು. ನಿದ್ರೆ ದೂರ ಅಂತ ಅನ್ನಿಸತೊಡಗಿತು. ಅಷ್ಟರಲ್ಲೇ ಇಂಟರ್ ಕಾಮ್ ನಲ್ಲಿ, `ಮಕ್ಕಳೇ,
ಕಥೆ ಬೇಕಾ?’ ಅಂತ ಗಡಸು ಧ್ವನಿಯೊಂದು ಮೂಡಿ ಬಂತು. ಡಾರ್ಮೆಟರಿಯಲ್ಲಿ ಮಲಗಿದ್ದ ಎಲ್ಲಾ ಹಿರಿಯ ವಿದ್ಯಾರ್ಥಿಗಳೂ
ಒಮ್ಮೆಗೆ `ಬೇಕೂ…’ ಅಂತ ಕೂಗಿದರು.
ನಾನು
ಬೆಚ್ಚಿ ಬಿದ್ದೆ. ಏನಾಗುತ್ತಿದೆ ಅನ್ನೋದು ಗೊತ್ತಾಗಲೇ ಇಲ್ಲ. ಮುಂದಿನ ಎಷ್ಟೋ ಹೊತ್ತು ಇಂಟರ್ ಕಾಮ್
ನಲ್ಲಿ ಕಥೆಯೊಂದು ಕೇಳುತ್ತಿತ್ತು. ಅದು ಯಾವ ಕಥೆ, ನಾನು ಎಷ್ಟು ಹೊತ್ತು ಕೇಳಿ ನಿದ್ರೆಗೆ ಜಾರಿದೆ
ಅನ್ನೋದು ಮಾತ್ರ ನೆನಪಿಲ್ಲ. 1978 ನೇ ಇಸವಿಯಲ್ಲಿ, ಮೈಸೂರಿನ ರಾಮಕೃಷ್ಣ ವಿದ್ಯಾಶಾಲೆಗೆ ನಾನು ಆರನೇ
ತರಗತಿಗೆ ಸೇರ್ಪಡೆಯಾದ ಮೊದಲನೇ ದಿನ ಕೊನೆಗೊಂಡದ್ದು ಮಾತ್ರ ಹೀಗೆ.
ಬೆಳಗ್ಗೆ
ಎದ್ದವನೇ ಅಲ್ಲೇ ಏಳನೇ ತರಗತಿಯಲ್ಲಿ ಓದುತ್ತಿದ್ದ ನನ್ನ ಚಿಕ್ಕಪ್ಪನ ಮಗ ಕರಣ್ ನನ್ನು ಹಿಂದಿನ ರಾತ್ರಿ
`ಮೈಕಿನಲ್ಲಿ’ ಕಥೆ ಹೇಳಿದ್ದು ಯಾರು? ಅಂತ ಕೇಳಿದೆ. `ಅದು ಮೈಕ್ ಅಲ್ಲ, ಇಂಟರ್ ಕಾಮ್, ಕಥೆ ಹೇಳೋದು
ಡಾಕ್ಟರ್ ಸ್ವಾಮೀಜಿ,’ ಅಂತ ಹೇಳಿದ. ಯಾರೂ ಪರಿಚಯವಿಲ್ಲದ, 350 ಹುಡುಗರು ಓದುತ್ತಿದ್ದ ವಸತಿ ಶಾಲೆಗೆ
ಬಂದು ಸೇರಿದ ಮೊದಲನೇ ದಿನ, ಈ ಡಾಕ್ಟರ್ ಸ್ವಾಮೀಜಿ ಯಾರು ಅನ್ನೋದು ನನಗೆ ಅರ್ಥವಾಗಲಿಲ್ಲ.
ಬೆಳಗ್ಗೆ
ಬೇಗ ಎದ್ದು, ಪ್ರಾರ್ಥನೆ ಕೋಣೆಗೆ ಬಂದಾಗ ಬಂದಾಗ, ನಾಲ್ಕಾರು ಹುಡುಗರ ಮುಂದೆ ಹಾರ್ಮೋನಿಯಂ ಎದುರಿನಲ್ಲಿ
ಆಜಾನುಬಾಹು ಸ್ವಾಮೀಜಿಯೊಬ್ಬರು ಕುಳಿತಿದ್ದದ್ದು ನೋಡಿದೆ. ಅವರು ಪ್ರಾರ್ಥನೆ ಶುರು ಮಾಡಿದ ತಕ್ಷಣ
ಗೊತ್ತಾಯಿತು – ಡಾಕ್ಟರ್ ಸ್ವಾಮೀಜಿ ಯಾರು ಅಂತ.
ಊಟದ
ಕೋಣೆಯ ಪಕ್ಕದಲ್ಲಿ ಒಂದು ಚಿಕ್ಕ ತುರ್ತು ಚಿಕಿತ್ಸಾಲಯವಿತ್ತು. ಅದನ್ನು ನೋಡಿಕೊಳ್ಳುತ್ತಿದ್ದವರೇ
ಡಾಕ್ಟರ್ ಸ್ವಾಮೀಜಿ. ಬೆಳಗಿನ ಹೊತ್ತಿನ ಪ್ರಾರ್ಥನೆ ಜವಾಬ್ದಾರಿಯನ್ನು ಅವರೇ ಹೊತ್ತಿದ್ದರು. ಸಾಯಂಕಾಲದ
ಪ್ರಾರ್ಥನೆಯನ್ನು ಮಾತ್ರ ಎ-ಬ್ಲಾಕ್ ನೋಡಿಕೊಳ್ಳುತ್ತಿದ್ದ ಶ್ರೀರಂಗ ಮಹಾರಾಜ್ ಅನ್ನೋ ಸ್ವಾಮೀಜಿ ನೆಡೆಸಿಕೊಡುತ್ತಿದ್ದರು.
ಎರಡನೇ
ರಾತ್ರಿ ಒಂಬತ್ತು ಗಂಟೆ ಬೆಲ್ ಹೊಡೆಯುವ ಮುಂಚೆಯೇ ನಾನು ಹಾಸಿಗೆ ಸಿದ್ದ ಪಡಿಸಿಕೊಂಡು ಮಂಚದ ಮೇಲೆ
ಕುಳಿತಿದ್ದೆ. ಬೆಲ್ ಹೊಡೆದ ಕೆಲವೇ ನಿಮಿಷಗಳಲ್ಲಿ ಇಂಟರ್ ಕಾಮ್ ಗೆ ಜೀವ ಬಂತು. ಡಾಕ್ಟರ್ ಸ್ವಾಮೀಜಿಯ
ಗಡಸು ಧ್ವನಿಯಿಂದ ಕಥೆ ನಿರರ್ಗಳವಾಗಿ ಹರಿಯಲು ಶುರುವಾಯಿತು. ಅಂದು ಮಾತ್ರ, ಕಥೆ ಮುಗಿಯುವವರೆಗೆ ನಾನು
ನಿದ್ರೆ ಮಾಡಲಿಲ್ಲ ಎನ್ನುವುದು ನನ್ನ ನೆನಪು. ನಮಗೆ ಪರೀಕ್ಷೆ ಇರುವ ಸಮಯ ಬಿಟ್ಟರೆ, ಮುಂದಿನ ಮೂರು
ವರ್ಷಗಳ ಕಾಲ ಡಾಕ್ಟರ್ ಸ್ವಾಮೀಜಿಯ ಕಥೆ ದಿನಚರಿಯ ಕಡೆಯ ಭಾಗವಾಗಿರುತ್ತಿತ್ತು.
ಸ್ವಾಮೀಜಿ
ಹೇಳುತ್ತಿದ್ದ ಕಥೆಗಳಿಗೆ ಯಾವುದೇ ನಿಯಮಗಳಿರುತ್ತಿರಲಿಲ್ಲ. ಕೆಲವೊಮ್ಮೆ ನೀತಿ ಕಥೆಗಳಾದರೆ, ಇನ್ನು
ಕೆಲವೊಮ್ಮೆ, ಕೆನ್ನತ್ ಅಂಡರ್ಸನ್, ಜಿಮ್ ಕಾರ್ಬೆಟ್ ರ ನರಭಕ್ಷಕ ಹುಲಿ, ಚಿರತೆಗಳ ಕಥೆಗಳಾಗಿರುತ್ತಿದ್ದವು.
ಪುನರ್ಜನ್ಮ, ಭೂತದ ಕಥೆಗಳು, ವೈಜ್ಞಾನಿಕ ವಿಸ್ಮಯಗಳು, ತತ್ವಜ್ಞಾನಕ್ಕೆ ಸಂಬಂದ ಪಟ್ಟ ಕಥೆಗಳು, ಹೀಗೆ
ಎಷ್ಟೋ ವಿಷಯಗಳು ಸಾಗುತ್ತಿದ್ದವು. ಬರ್ಮುಡಾ ಟ್ರೈಯಾಂಗಲ್,
ಹಿಮಾಲಯದ ವಿಸ್ಮಯಗಳು, ಪುನರ್ಜನ್ಮಕ್ಕೆ ಸಂಬಂಧಿಸಿದ ಎಷ್ಟೋ ಸಂಶೋಧನೆಗಳು ನಮಗೆ ತಿಳಿದದ್ದೆ ಇಲ್ಲಿಂದ.
ಪ್ರತಿಯೊಂದು ಕಥೆಗೂ ವೈಜ್ಞಾನಿಕ ತಳಹದಿ ಇರುತ್ತಿತ್ತು. ಡಾಕ್ಟರ್ ಸ್ವಾಮೀಜಿಯ ವಾಕ್ ಲಹರಿ ಎಷ್ಟು
ಪ್ರಭಲವಾಗಿತ್ತೆಂದರೆ, ಕಥೆ ಕೇಳುತ್ತಿದ್ದ ಮಕ್ಕಳೆಲ್ಲ ತಲ್ಲೀನರಾಗಿರುತ್ತಿದ್ದರು. ಅವರು ನರಭಕ್ಷಕ,
ಪುನರ್ಜನ್ಮ, ಭೂತದ ಕಥೆಗಳನ್ನು ಹೇಳಿದ ದಿನವಂತೂ, ಕಥೆ ಮುಗಿದ ಮೇಲೆ ಮಂಚದ ಕೆಳಗಿನಿಂದ ಚಿರತೆಯೋ,
ಭೂತವೋ ಹೊರಗೆ ಬರುತ್ತದೆ ಎಂದು ನಡುಗಿದ್ದೂ ಇದೆ.
ಡಾಕ್ಟರ್
ಸ್ವಾಮೀಜಿಯ ಹೆಸರು ಸ್ವಾಮಿ ಜಗದಾತ್ಮಾನಂದ ಎಂದು ತಿಳಿಯಲು ನಮಗೆ ತಿಂಗಳುಗಳೇ ಹಿಡಿದಿದ್ದವು. ಸಾಧಾರಣವಾಗಿ
ನಾವು ಸ್ವಾಮೀಜಿಗಳನ್ನು ಕರೆಸ್ಪಾಂಡೆಂಟ್ ಸ್ವಾಮೀಜಿ, ಎ-ಬ್ಲಾಕ್ ಸ್ವಾಮೀಜಿ, ಡಿ-ಬ್ಲಾಕ್ ಸ್ವಾಮೀಜಿ
ಅಂತಾನೇ ಗುರುತಿಸುತ್ತಿದ್ದದ್ದು. ಹಾಗಾಗಿ, ಅವರ ಹೆಸರು ಗೊತ್ತಿದ್ದರೂ ಅಂಥಾ ವ್ಯತ್ಯಾಸವೇನೂ ಆಗುತ್ತಿರಲಿಲ್ಲ.
ರಾತ್ರಿ ಕಥೆಗಳನ್ನು ಬಿಟ್ಟರೆ, ಭಾನುವಾರ, ರಜಾ ದಿನಗಳಲ್ಲಿ ಮತ್ತು ಹಬ್ಬದ ದಿನಗಳಲ್ಲಿ ಸಣ್ಣ ಪ್ರವಚನಗಳಿರುತ್ತಿದ್ದವು.
ಡಾಕ್ಟರ್ ಸ್ವಾಮೀಜಿ ಮಾತನಾಡುತ್ತಾರೆ ಎಂದರೆ ನಮಗೆ ಖುಶಿ. ಧ್ವನಿ ಎಷ್ಟು ಗಡಸೋ, ಅಷ್ಟೇ ಮೃದು ಸ್ವಭಾವದ
ಸ್ವಾಮೀಜಿಯ ಸುತ್ತ ಯಾವಾಗಲೂ ಹುಡುಗರ ಹಿಂಡೇ ಇರುತ್ತಿತ್ತು.
ಈಗ
ಅನ್ನಿಸುತ್ತದೆ. ಡಾಕ್ಟರ್ ಸ್ವಾಮೀಜಿಗೆ ನವಿರಾದ ಹಾಸ್ಯ ಪ್ರಜ್ಞೆ ಇತ್ತು ಅಂತ. ಮಗನಿಗೂ, ಮಂಗನಿಗೂ
ಮತ್ತು ಚಿತೆಗೂ, ಚಿಂತೆಗೂ ಸೊನ್ನೆ ಮಾತ್ರ ವ್ಯತ್ಯಾಸ ಅಂತ ನಮಗೆ ಮೊದಲು ಹೇಳಿದವರೇ ಡಾಕ್ಟರ್ ಸ್ವಾಮೀಜಿ.
ಸಾಕ್ಷರ ಅನ್ನೋ ಪದವನ್ನು ಹಿಂದು ಮುಂದಾಗಿ ಓದಿದರೆ ರಾಕ್ಷಸ ಅನ್ನೋ ಅರ್ಥ ಬರುತ್ತದೆ ಅಂತಾನೂ ಅವರೇ
ಹೇಳಿದ್ದು. ಸಾಕ್ಷರ ವಿದ್ಯಾವಂತನಾಗದಿದ್ದರೆ, ಅವನು ರಾಕ್ಷಸನಾಗುತ್ತಾನೆ ಎಂದು ಹೇಳುತ್ತಿದ್ದರು.
ಒಮ್ಮೆ ತಟ್ಟೆ ತೊಳೆಯುವ ಜಾಗದ ಹತ್ತಿರ ಓಡಲು ಹೋಗಿ, ಒಬ್ಬ ಹುಡುಗ ಜಾರಿ ಬಿದ್ದ. ಅಲ್ಲಿಯೇ ನಿಂತಿದ್ದ
ಡಾಕ್ಟರ್ ಸ್ವಾಮೀಜಿ, `ಏ ನಾಯಿ ತೂ’ ಅಂದೇ ಬಿಟ್ಟರು. ಮೊದಲೇ ಬಿದ್ದು ಪೆಟ್ಟು ಮಾಡಿಕೊಂಡು ಹುಡುಗ,
ಅವಮಾನದಿಂದ ಸ್ವಾಮೀಜಿಯ ಮುಖವನ್ನೇ ಮಿಕ ಮಿಕ ನೋಡಲಾರಂಬಿಸಿದ. ಸ್ವಾಮೀಜಿ ತಣ್ಣನೆಯ ಧ್ವನಿಯಲ್ಲಿ ಮತ್ತೆ
ಹೇಳಿದರು: `ಏನಾಯಿತೂ?’ ಅಂತ. ನೋವನ್ನೂ ಮರೆತ ಆ ಹುಡುಗ, ನಮ್ಮೆಲ್ಲರ ಜೊತೆ ಬಿದ್ದು ಬಿದ್ದು ನಗೋಕೆ
ಶುರುಮಾಡಿದ.
ಇನ್ನೊಂದು
ಸಲ ನಾನು ಚಿಕಿತ್ಸಾಲಯಕ್ಕೆ ಹೋಗಿ ಏನೋ ಹುಡುಕುತ್ತಿದ್ದೆ. ಹಿಂದಿನಿಂದ ಬಂದ ಸ್ವಾಮೀಜಿ ಜೋರಾಗಿ,
`ಏನು ಬೇಕೂಫಾ?’ ಅಂದರು. ಗಲಿಬಿಲಿಗೊಂಡ ನಾನು ನೆಟ್ಟಗೆ ನಿಂತು ಏನೋ ಹೇಳಲು ಹೋಗಿ ತೊದಲಿದೆ. ನಗುತ್ತಾ
ಸ್ವಾಮೀಜಿ, `ಏನು ಬೇಕಪ್ಪಾ?’ ಅಂದರು. ನಗೋಕೆ ಶುರುಮಾಡಿದ ನನಗೆ, ನಾನು ಚಿಕಿತ್ಸಾಲಯಕ್ಕೆ ಯಾಕೆ ಹೋಗಿದ್ದೆ
ಅನ್ನೋದೆ ಮರೆತು ಹೋಗಿತ್ತು.
ಆ ದಿನಗಳಲ್ಲಿ
ಡಾಕ್ಟರ್ ಸ್ವಾಮೀಜಿ ನಮಗೊಬ್ಬ ಕಥೆಗಾರರಾಗಿದ್ದರಷ್ಟೆ. ಅವರು ಕಥೆಗಳ ಮೂಲಕ ನಮ್ಮ ಜೀವನದ ಹಾದಿಗೆ ಸಿದ್ದ
ಪಡಿಸುತ್ತಿದ್ದಾರೆ ಅನ್ನೋ ಯಾವುದೇ ಸುಳಿವು ಇರಲಿಲ್ಲ. ಯಾವುದೇ ವಿಷಯಕ್ಕೆ ವೈಜ್ಞಾನಿಕ ತಳಹದಿ ಇಲ್ಲದೆ
ಡಾಕ್ಟರ್ ಸ್ವಾಮೀಜಿ ಮಾತನಾಡುತ್ತಿರಲಿಲ್ಲ. ಅವರ ಕಥೆಗಳ ಪ್ರಭಾವದಿಂದಲೇ ಎಷ್ಟೋ ಹುಡುಗರು ಶಾಲೆಯ ಗ್ರಂಥಾಲಯಕ್ಕೆ
ಹೆಚ್ಚು ಭೇಟಿ ಕೊಡುವಂತಾದದ್ದು ಅಂದರೆ ಸುಳ್ಳಲ್ಲ.
ವೈಜ್ಞಾನಿಕತೆ
ಅನ್ನೋದು ದೇವರನ್ನೂ ಬಿಟ್ಟಿರಲಿಲ್ಲ. ದೇವರ ಬಗ್ಗೆ ಹೆದರುವವರ ಬಗ್ಗೆ ಅವರು ಹೇಳುತ್ತಿದ್ದದ್ದು ಇಷ್ಟು.
`ದೇವರ ಬಗ್ಗೆ ಜನರು ನಾನಾ ತರಹದ ಭಯಗಳನ್ನು ಬೆಳೆಸಿಕೊಳ್ಳುತ್ತಾರೆ. ಇದಕ್ಕೆ ಕಾರಣ, ದೇವರ ಬಗ್ಗೆ
ಬಾಲ್ಯದಿಂದಲೇ ಅವರು ರೂಢಿಸಿಕೊಂಡ ನಾನಾ ತೆರನಾದ ಅಸಂಬದ್ಧ ಕಲ್ಪನೆಗಳು. ಸ್ತೋತ್ರ ಪಾಠ ಮಾಡುವಾಗ ಮಡಿ
ಸಾಕಾಗಲಿಲ್ಲ, ಮೈಲಿಗೆಯಾಯಿತೋ ಏನೋ ಎಂದು ಹೆದರಿಕೊಂಡೇ ದೇವರನಾಮ ಪರಾಯಣ ಮಾಡಿ ಕೆಡುಕನ್ನು ನಿರೀಕ್ಷಸುವವರಿದ್ದಾರೆ.
ದೇವರು ಶಾಪ ಕೊಟ್ಟು ಬಿಡುತ್ತಾನೆಂದು ಯೋಚಿಸುವವರಿದ್ದಾರೆ! ಆ ಸ್ತೋತ್ರಪಾಠ, ದೇವರ ನಾಮ ಹೇಳತೊಡಗಿದ
ಮೇಲೆಯೇ ದಾರಿಯಲ್ಲಿ ಕಾಲುಜಾರಿ ಬಿದ್ದು ಜಖಂ ಆದದ್ದು! ಆ ಸ್ತೋತ್ರ ನನಗಾಗುವುದಿಲ್ಲ! ಅದರಿಂದಲೇ ಕಡುಕಾದುದು
ಎನ್ನುವವರಿದ್ದಾರೆ!
`ಯಾವುದೇ
ಸಂಸ್ಕಾರ ಸುಪ್ತಮನಸ್ಸಿನಲ್ಲಿ ಮುದ್ರಿತವಾಗಿದ್ದರೆ, ಅದು ವ್ಯಕ್ತವಾಗದೇ ಇರದು. ನಾವು ಆಸಿಸದಿರುವುದನ್ನು,
ನಮಗೆ ಬೇಡವಾದುದನ್ನು ತೀವ್ರವಾಗಿ ಚಿಂತನೆ ಮಾಡುವುದೆಂದರೆ, ನಮ್ಮ ಸುಪ್ತ ಮನಸ್ಸಿನಲ್ಲಿ ನಮಗೆ ಬೇಡವಾದುದರ
ಬೀಜವನ್ನೇ ಸರಿಯಾಗಿ ಬಿತ್ತಿದಂತಾಗುತ್ತದೆ. ಇದರಿಂದಲೇ ಅದೇ ಬೆಳೆದು ಬಲವಾಗಿ ಯಾವುದನ್ನು ನಾವು ದೂರಕ್ಕೆಸೆಯಬೇಕೆಂದು
ಭಾವಿಸುತ್ತೇವೋ, ಅದರಲ್ಲೇ ಮುಳುಗಿಬಿಡುವ ಪ್ರಸಂಗ ಉಂಟಾಗುತ್ತದೆ.’
1981
ರಲ್ಲಿ ರಜೆ ಮುಗಿಸಿ ವಿದ್ಯಾಶಾಲೆಗೆ ವಾಪಾಸ್ಸಾದಾಗ ನಮಗೆಲ್ಲ ಆಘಾತ ಕಾದಿತ್ತು. ಡಾಕ್ಟರ್ ಸ್ವಾಮೀಜಿಯವರನ್ನು
ವಿದ್ಯಾಶಾಲೆಯಿಂದ, ಅಲ್ಲೇ ಯಾದವಗಿರಿಯಲ್ಲಿದ್ದ ಆಶ್ರಮಕ್ಕೆ ವರ್ಗಾಯಿಸಲಾಗಿತ್ತು. ಸ್ವಾಮೀಜಿ ಆಗಲೇ
ಆಶ್ರಮಕ್ಕೆ ಸ್ಥಳಾಂತರಗೊಂಡಾಗಿತ್ತು. ಅಲ್ಲಿಂದ, ನಮ್ಮನ್ನೆಲ್ಲ ನೋಡಲು ಅವರು ಮೊದಲ ಸಲ ವಿದ್ಯಾಶಾಲೆಗೆ
ಬಂದಾಗ ಕಣ್ಣೀರಿಟ್ಟ ಮಕ್ಕಳಲ್ಲಿ ನಾನೂ ಒಬ್ಬ. ಅಲ್ಲಿಂದ ಮುಂದೆ ನಮ್ಮ ರಾತ್ರಿ ಕಥೆ ಎನ್ನುವುದೊಂದು
ನೆನಪಾಗೇ ಉಳಿಯಿತು. ಆ ನೆನಪನ್ನು ನಾನಾಗಲೀ, ಆಗ ನನ್ನ ಜೊತೆ ಓದಿದವರಾಗಲೀ, ಇನ್ನೂ ಮರೆತಿಲ್ಲ. ಐವತ್ತರ
ಆಸುಪಾಸಿನಲ್ಲಿರುವ ನನ್ನ ಸಹಪಾಠಿಗಳ ಜೊತೆ ಗುಂಡು ಪಾರ್ಟಿಗೆ ಸೇರಿದಾಗಲೂ, ಡಾಕ್ಟರ್ ಸ್ವಾಮೀಜಿಯ ವಿಷಯ
ಒಂದು ಸಲವಾದರೂ ಚರ್ಚೆಗೆ ಬರುತ್ತದೆ.
ವಿದ್ಯಾಶಾಲೆ
ಬಿಟ್ಟು ಕಾಲೇಜಿಗೆ ಸೇರಿದ ಮೇಲೆ ಡಾಕ್ಟರ್ ಸ್ವಾಮೀಜಿ ನಿಧಾನವಾಗಿ ಸ್ಮೃತಿ ಪಟಲದಿಂದ ದೂರವಾಗತೊಡಗಿದರು.
ಎರಡು ವರ್ಷದ ನಂತರ, ಕಾರ್ಕಾಳದಲ್ಲಿ ಪರಿಚಯದವರೊಬ್ಬರು `ನಿನಗೆ ರಾಮಕೃಷ್ಣ ಆಶ್ರಮದಲ್ಲಿ ಯಾರಾದರೂ
ಪರಿಚಯವಿದ್ದಾರಾ? ಸ್ವಾಮಿ ಜಗದಾತ್ಮಾನಂದ ಬರೆದ ಬದುಕಲು ಕಲಿಯಿರಿ ಅನ್ನೋ ಪುಸ್ತಕ ತರಿಸಬೇಕಿತ್ತು,’
ಅಂದರು.
`ಅವ್ರು
ಪುಸ್ತಕ ಬೇರೆ ಬರ್ದಿದ್ದಾರಾ? ನಂಗೊತ್ತಿಲ್ಲಪ್ಪ,’ ಅಂತ ಹೇಳಿ, ವಿದ್ಯಾಶಾಲೆಯ ವಿಳಾಸ ಕೊಟ್ಟೆ. ಕೆಲವು
ದಿನಗಳ ನಂತರ, ಯಾವುದೋ ಪುಸ್ತಕದ ಅಂಗಡಿಯಲ್ಲಿ ಪುಸ್ತಕ ಕಣ್ಣಿಗೆ ಬಿತ್ತು. ಭಾಗ-1 ಮತ್ತು ಭಾಗ-2 ಅಂತ
ಎರಡು ಪುಸ್ತಕಗಳಿದ್ದವು. ತೆಗೆದುಕೊಂಡು ಓದಿದೆ. ಅಂಥಾ ವಿಶೇಷವೇನೂ ಕಾಣಿಸಲಿಲ್ಲ. ಸ್ವಾಮೀಜಿ ನಮಗೆ
ಹೇಳುತ್ತಿದ್ದ ಕಥೆಗಳು, ಪ್ರವಚನಗಳ ಭಾಗಗಳೆಲ್ಲ ಆ ಪುಸ್ತಕಗಳಲ್ಲಿ ಇದ್ದವು. ಇನ್ನೂ ಸ್ವಲ್ಪ ಹೆಚ್ಚೇ
ಇತ್ತು ಅನ್ನಬಹುದು. ಓದಿ ಬದಿಗಿಟ್ಟೆ.
ಜೀವನದಲ್ಲಿ
ತೊಂದರೆ ಶುರುವಾದದ್ದೇ ಕಾಲೇಜು ಬಿಟ್ಟು ಬೆಂಗಳೂರಿಗೆ ಬಂದ ಮೇಲೆ. ಡಿಗ್ರಿ ಮುಗಿಸದೆ ಕಾಲೇಜಿನಿಂದ
ಹೊರಬಿದ್ದ ನಾನು, ಜೀವನದಲ್ಲಿ ಏನು ಮಾಡಬೇಕು ಅನ್ನೋದರ ಸ್ಪಷ್ಟ ಕಲ್ಪನೆ ಇರಲಿಲ್ಲ. ಸ್ನೇಹಿತರೆಲ್ಲ
ಕೆಲಸಕ್ಕೆ ಸೇರಿ, ಹೊಸ ಜೀವನ ಪ್ರಾರಂಭಿಸುವಾಗ, ನಾನು ಏಕಾಂಗಿಯಾಗತೊಡಗಿದೆ. ಮತ್ತೆ ಓದು ಮುಂದುವರೆಸಬೇಕೆಂಬ
ಯೋಚನೆಯಲ್ಲಿ, ಪುಸ್ತಕಗಳ ಮೊರೆ ಹೋದೆ. ಇದ್ದುದ್ದರಲ್ಲಿ, ಡೇಲ್ ಕಾರ್ನಿಗ್ ಬರೆದ HOW TO STOP
WORRYING AND START LIVING ಮತ್ತು HOW TO
MAKE FRIENDS ಎಂಬ ಎರಡು ಪುಸ್ತಕಗಳು ಸ್ವಲ್ಪ ಸಮಾಧಾನ ಕೊಟ್ಟರೂ, ಏನೋ ಕೊರತೆ ಕಾಡುತ್ತಿತ್ತು. ಆ
ಸಮಯದಲ್ಲಿ ಮತ್ತೆ ಕೈಗೆ ಸಿಕ್ಕಿದ ಪುಸ್ತಕವೇ ಬದುಕಲು ಕಲಿಯಿರಿ.
ಮತ್ತೆ
ಈ ಪುಸ್ತಕ ಓದುವಾಗ ಅದಕ್ಕೆ ಹೊಸ ಆಯಾಮ ಸಿಕ್ಕಿತ್ತು. ಅದು ಡಾಕ್ಟರ್ ಸ್ವಾಮೀಜಿಯ ಕಥೆಗಳಾಗಿ ಉಳಿದಿರಲಿಲ್ಲ.
ಕೆಲವು ಘಟನೆಗಳನ್ನು ಓದುತ್ತಾ ಹೋದಂತೆ ತಾನಾಗೇ ಮುಗುಳ್ನಗೆ ಮೂಡಿದರೆ, ಇನ್ನು ಕೆಲವು ಘಟನೆಗಳನ್ನು
ಓದಿದಾಗ ರೋಮಾಂಚನವಾಗುತ್ತಿತ್ತು. ಎಷ್ಟೋ ಸಲ ರಾತ್ರಿ ನಿದ್ದೆಗೆಡಿಸುತಿತ್ತು. ಸಮಸ್ಯೆಗಳಿದದಾಗ ಯಾವುದೋ
ಒಂದು ಪುಟ ತೆಗೆದು ಓದಲು ಶುರುಮಾಡಿದರೆ, ಸಮಸ್ಯೆಯನ್ನು ಎದುರಿಸುವ ಧೈರ್ಯ ಮತ್ತು ವಿಧಾನ ತನ್ನಿಂದ
ತಾನೇ ಬರಲು ಶುರುವಾಯಿತು.
ಜೀವನದ
ಸರಳ ಅಭ್ಯಾಸಗಳಿಂದ ಹೇಗೆ ಯಾವುದೇ ಕೆಲಸವನ್ನು ಕರಗತ ಮಾಡಿಕೊಳ್ಳಬಹುದು ಅನ್ನುವುದು ಅರ್ಥವಾಗತೊಡಗಿತು.
ಹಾಗೆಯೇ, ಆತ್ಮ ವಿಶ್ವಾಸ, ಮೌನಗಳಿಗಿರುವ ಶಕ್ತಿ ಮತ್ತು ಚಿಂತೆಯ ಚಿತಾ ಶಕ್ತಿಯ ಅರಿವೂ ಮೂಡತೊಡಗಿತು.
ಇದು ನನ್ನ ಯೋಚನಾ ಲಹರಿಯನ್ನೇ ಬದಲಿಸಿದವು. ನನಗರಿವಿಲ್ಲದಂತೆ ಜೀವನದತ್ತ ಮತ್ತೆ ಮುಗುಳ್ನಗಲು ಆರಂಭಿಸಿದೆ.
ಇಲ್ಲಿಯವರೆಗೆ,
ಈ ಪುಸ್ತಕವನ್ನು ನಾಲ್ಕೈದು ಬಾರಿ ಓದಿರಬಹುದು. ಒಂದಿಪ್ಪತ್ತು ಪ್ರತಿಗಳನ್ನು ಬೇರೆಯವರಿಗೆ ಓದಲು ಕೊಟ್ಟು
ಕಳೆದಿರಬಹುದು. ಆದರೂ, ಯಾವಾಗಲೂ ಒಂದು ಪ್ರತಿಯನ್ನು ಇಟ್ಟುಕೊಂಡಿರುತ್ತೇನೆ. ಈ ಪುಸ್ತಕ ಒಂಬತ್ತು
ಭಾಷೆಗಳಿಗೆ ಭಾಷಾಂತರಗೊಂಡಿದೆ ಎಂದು ತಿಳಿದ ಮೇಲೆ ಸ್ವಾಮೀಜಿಯ ಮೇಲಿನ ಗೌರವ ನೂರ್ಮಡಿಯಾಯಿತು.
ಈ ಪುಸ್ತಕದಲ್ಲಿ
ತುಂಬಾ ಕಾಡುವುದ ಹುಟ್ಟು, ಸಾವು, ಪುನರ್ಜನ್ಮ ಮತ್ತು ದೇವರಿದ್ದಾನೆಯೇ? ಎನ್ನುವ ವಿಷಯಗಳು. ಹಲವು
ಪ್ರಶ್ನೆಗಳಿಗೆ ನಾವೇ ಉತ್ತರ ಹುಡುಕಿಕೊಳ್ಳಬೇಕಾಗುತ್ತದೆ. ಆದರೆ, ಪುನರ್ಜನ್ಮ ಮತ್ತು ಆತ್ಮದ ವಿಷಯ
ಬಂದಾಗ ಹುಟ್ಟುವ ಜಿಜ್ಞಾಸೆಗಳು ನೂರಾರು. ಪರಕಾಯ ಪ್ರವೇಶದ ಎಡ್ಗರ್ ಕೇಸಿಯನ್ನು ಒಪ್ಪಿಕೊಂಡ ಹಾಗೆ,
ಭವಿಷ್ಯವನ್ನು ನುಡಿದ ನಾಸ್ಟ್ರೋಡಾಮಸ್ ನನ್ನು ಸ್ವಾಮೀಜಿ ಒಪ್ಪಿಕೊಂಡಿಲ್ಲ. ಎರಡನೇ ಮಹಾಯುದ್ದದಲ್ಲಿ
ಮಡಿದ ಜರ್ಮನ್ ವೈದ್ಯ ಡಾ ಫ್ರಿಟ್ಸ್ ಅನಕ್ಷರಸ್ತನಾದ ಬ್ರೆಸಿಲ್ ನ ಅಹಿರ್ನೋನ ದೇಹದಲ್ಲಿ ಬಂದು ಶಸ್ತ್ರಚಿಕಿತ್ಸೆ
ಮಾಡುವುದನ್ನು ಓದುವಾಗ ಮೈ ಜುಂ ಎನ್ನುತ್ತದೆ. ಒಟ್ಟಿನಲ್ಲಿ, ಜೀವನದ ಎಲ್ಲಾ ಅಂಶಗಳನ್ನು ಸವಿವರವಾಗಿ,
ಸರಳವಾಗಿ ವಿಶ್ಲೇಷಿಸಿದ ಪುಸ್ತಕ ಎನ್ನುವುದು ನನ್ನ ನಂಬಿಕೆ.
ಈ ನೆಡುವೆ,
ಡಾಕ್ಟರ್ ಸ್ವಾಮೀಜಿ ಈಶಾನ್ಯ ರಾಜ್ಯಗಳಲ್ಲಿ ಕೆಲಸ ಮಾಡಿ, ಅಲ್ಲಿಂದ ಸಿಂಗಾಪುರಕ್ಕೆ ಹೋಗಿದ್ದಾರೆಂದು
ಗೊತ್ತಾಯಿತು. ಸ್ವಲ್ಪ ಕಾಲದ ನಂತರ, ಅವರು ಭಾರತಕ್ಕೆ ಹಿಂದುರುಗಿ, ಕೊಡಗಿನ ಪೊನ್ನಂಪೇಟೆಯಲ್ಲಿ ನೆಲೆಸಿದ್ದಾರೆ
ಎನ್ನುವುದೂ ತಿಳಿಯಿತು.
ಕಾಲ ಹಾಗೇ ಜಾರಿ ಹೋಗುತ್ತಿತ್ತು. ನನಗರಿವಿಲ್ಲದಂತೆ ನಾನೊಬ್ಬ ಪತ್ರಕರ್ತನಾಗಿದ್ದೆ. ಈ ಮಧ್ಯೆ,
ಒಂದೆರೆಡು ಬಾರಿ ಡಾಕ್ಟರ್ ಸ್ವಾಮೀಜಿಯವರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದೆ. ವಿದ್ಯಾಶಾಲೆಯ ಹಳೇ
ಸ್ನೇಹಿತರು ಸಿಕ್ಕಾಗ ಅವರ ವಿಷಯ ಮಾತನಾಡುತ್ತಿದ್ದೆವು. ಒಂದು ದಿನ, ಬಿಜೆಪಿ ಪಕ್ಷದ ವಕ್ತಾರನಾಗಿರುವ
ಪ್ರಕಾಶ್ ಶೆಷರಾಘವಾಚಾರ್ ಸಿಕ್ಕು, ಭಾನುವಾರ ಅವರ ಮನೆಗೆ ಸ್ವಾಮಿ ಜಗದಾತ್ಮಾನಂದ ಬರುತ್ತಾರೆ ಎಂದು
ಹೇಳಿದ. ನಾನು ತಕ್ಷಣವೇ ಸಹಪಾಠಿಗಳಾಗಿದ್ದ ಅಮರೇಶ್ ದಾಸ್, ವಿನೋದ್ ಮತ್ತು ಮಹೇಶ್ ರಿಗೆ ವಿಷಯ ತಿಳಿಸಿದೆ.
ಭಾನುವಾರ ನಾಲ್ಕೂ ಜನರೂ ಪ್ರಕಾಶ್ ಮನೆಗೆ ದಾಳಿ ಇಟ್ಟೆವು.
ಸ್ವಾಮೀಜಿಯನ್ನು
ಭೇಟಿಯಾಗಿ ಇಪ್ಪತ್ತು ವರ್ಷಗಳಿಗೂ ಹೆಚ್ಚಾಗಿತ್ತು. ಅಮರೇಶ್ ನನ್ನು ಸುಲಭವಾಗಿ ನೆನಪು ಮಾಡಿಕೊಂಡರು.
ಯಾಕಂದರೆ, ಅಮರೇಶ್ ತಂದೆ ತುಳಸಿದಾಸ್ ದಾಸಪ್ಪ ಮತ್ತು ಅವನ ಅಣ್ಣ ಲೋಕೇಶ್ ದಾಸ್, ವಿದ್ಯಾಶಾಲೆಯ ಹಳೆಯ
ವಿದ್ಯಾರ್ಥಿಗಳೆ. ನಾವು ನಮ್ಮಗಳನ್ನು ಪರಿಚಯ ಮಾಡಿಕೊಂಡೆವು ಅಷ್ಟೆ.
ಸ್ವಾಮಿಜಿಗೆ
ಇಪ್ಪತ್ತು ವರ್ಷ ವಯಸ್ಸು ಮಾತ್ರ ಹೆಚ್ಚಾಗಿತ್ತು. ಇನ್ನುಳಿದಂತೆ, ಅದೇ ಗಡಸು ಧ್ವನಿ, ಧೃಡಕಾಯ ಮತ್ತು
ಪ್ರೀತಿ. ಅವರನ್ನು ಭೇಟಿಯಾಗಿದ್ದೇ ನಮ್ಮ ಸೌಭಾಗ್ಯ ಅಂತ ಮಾತನಾಡಿಕೊಂಡು ವಾಪಾಸ್ಸಾದೆವು. ಒಂದೆರೆಡು
ವರ್ಷಗಳ ನಂತರ ವಿನೋದ್ ನಮಗೆಲ್ಲ ಅಘಾತಕರ ಸುದ್ದಿ ಹೇಳಿದ. ಡಾಕ್ಟರ್ ಸ್ವಾಮೀಜಿಯ ಬಾಯಿಯಲ್ಲಿ ಕ್ಯಾನ್ಸರ್
ಆಗಿ, ಅವರ ಹಲ್ಲುಗಳನ್ನೆಲ್ಲ ಕೀಳಲಾಗಿದೆ ಎಂದು.
ಅದಾದ
ಕೆಲವು ಸಮಯದ ನಂತರ, ನನ್ನ ಬಾವ ನರೇಂದ್ರಣ್ಣ ಫೋನ್ ಮಾಡಿ, ಡಾಕ್ಟರ್ ಸ್ವಾಮೀಜಿ ಅವರ ಬಸವನಗುಡಿಯ ಮನಗೆ
ಬರುತ್ತಾರೆಂದು ಹೇಳಿದರು. ನರೇಂದ್ರಣ್ಣನೂ ವಿದ್ಯಾಶಾಲೆಯ ಹಳೆಯ ವಿದ್ಯಾರ್ಥಿ ಮತ್ತು ಅವರ ತಂದೆ ಎಂ
ಚಂದ್ರಶೇಖರ್ ಜನತಾ ಸರ್ಕಾರದಲ್ಲಿ ಮಂತ್ರಿಯಾಗಿದ್ದರು. ಸರಳ ಜೀವಿಯಾದ ಅವರು ವಿವೇಕಾನಂದರ ಅನುಯಾಯಿಯೂ
ಆಗಿದ್ದರು.
ನರೇಂದ್ರಣ್ಣನ
ಮನೆಗೆ ಹೋದಾಗ ಡಾಕ್ಟರ್ ಸ್ವಾಮೀಜಿ ಆಗಲೇ ಬಂದಾಗಿತ್ತು. ತುಂಬಾ ಜನ ಸೇರಿದ್ದರು. ನಾನು ನಮಸ್ಕಾರ ಮಾಡಿ
ಮತ್ತೆ ಪರಿಚಯ ಮಾಡಿಕೊಂಡೆ. ಸ್ವಾಮೀಜಿ ಸ್ವಲ್ಪ ಸೊರಗಿದಂತೆ ಕಾಣುತ್ತಿದ್ದರು. ಉಚ್ಚಾರದಲ್ಲಿ ಮೊದಲಿನ
ಸ್ಪಷ್ಟತೆ ಇರಲಿಲ್ಲ. ಸ್ವಾಮೀಜಿ ಪ್ರವಚನ ಶುರುಮಾಡುವಾಗ ಚಂದ್ರಶೇಖರ್ ಅಡ್ಡ ಬಂದು, `ನೋಡಿ, ಸ್ವಾಮೀಜಿಯವರು
ಪೊನ್ನಂಪೇಟೆಯಲ್ಲಿ ಆಶ್ರಮ ಕಟ್ಟುತ್ತಿದ್ದಾರೆ. ಅದಕ್ಕೆ ಹಣಕಾಸಿನ ಅಡಚಣೆಯಾಗಿದೆ. ನಿಮ್ಮಲ್ಲಿ ಇಷ್ಟವಿದ್ದವರು
ಶಕ್ತ್ಯಾನುಸಾರವಾಗಿ ಕೊಡಬಹುದು,’ ಎಂದರು. ಅಲ್ಲಿ ಸಂಗ್ರಹವಾದ ಹಣದ ಕಡೆ ತಿರುಗಿಯೂ ನೋಡದೆ, ಸ್ವಾಮೀಜಿ
ಸ್ಥಿತಪ್ರಜ್ಞರಂತೆ ಕುಳಿತಿದ್ದರು.
ಕಾಲಚಕ್ರ
ತಿರುಗುತ್ತಲೇ ಇತ್ತು. ವರ್ಷಕ್ಕೆ ಐದಾರು ಬಾರಿಯಾದರೂ ನಾಗರಹೊಳೆಗೆ ಹೋಗುವ ನಾನು, ಅದಕ್ಕೆ ಅಂಟಿಕೊಂಡಂತೆ
ಇರುವ ಪೊನ್ನಂಪೇಟೆಗೆ ಮಾತ್ರ ಹೋಗಲಾಗಲಿಲ್ಲ. ಈ ವರ್ಷ ಮಾರ್ಚ್ ತಿಂಗಳಲ್ಲಿ ನಾಗರಹೊಳೆಗೆ ಹೊರಟಾಗ ನಿರ್ಧಾರ
ಮಾಡಿದ್ದೆ. ಏನೇ ಆದರೂ, ಡಾಕ್ಟರ್ ಸ್ವಾಮೀಜಿಯವರನ್ನು ಭೇಟಿಯಾಗದೆ ಬರುವುದಿಲ್ಲ ಎಂದು.
ನಾನು
ಪೊನ್ನಂಪೇಟೆಯ ರಾಮಕೃಷ್ಣ ಆಶ್ರಮ ತಲುಪಿದಾಗ ಸುಮಾರು 10.30. ಆಗ ತಾನೆ ಸ್ನಾನ ಮುಗಿಸಿ ಹೊರಗೆ ಬಂದ
ಸ್ವಾಮೀಜಿಯವರನ್ನು ಕಂಡು ಸಂಕಟವಾಯಿತು. ವಯಸ್ಸು ಅವರನ್ನು ಬಹಳವಾಗಿ ಕುಗ್ಗಿಸಿತ್ತು. ಮಾತಿನಲ್ಲಿ
ಸ್ಪಷ್ಟತೆ ಕಾಣೆಯಾಗಿತ್ತು. ಆದರೂ, ಮಾತನಾಡುವ ಹುಮ್ಮಸ್ಸು ಕುಗ್ಗಿರಲಿಲ್ಲ. ಅವರೆಷ್ಟೇ ಹೇಳಿದರೂ,
ನಾನು ಕುರ್ಚಿಯ ಮೇಲೆ ಕೂರಲು ಒಪ್ಪಲಿಲ್ಲ.
ನನ್ನನ್ನು
ಪರಿಚಯಿಸಿಕೊಂಡ ಮೇಲೆ, ನಾನು ಏನು ಮಾಡುತ್ತಿದ್ದೇನೆ, ಎಷ್ಟು ಮಕ್ಕಳು ಎಂದು ಕೇಳಿದರು. ಒಬ್ಬಳೇ ಮಗಳು
ಎಂದು ಹೇಳಿದಾಗ, ಪಕ್ಕದ ಡಬ್ಬಿಯಿಂದ ಮೂರು ಸಣ್ಣ ಲಾಡುಗಳನ್ನು ತೆಗೆದು ನನ್ನ ಕೈಯಲ್ಲಿಟ್ಟರು. ನಾನು
ಮನೆಗೆ ತಲುಪಲು ಇನ್ನೂ ಎರಡು ದಿನ ಬಾಕಿಯಿತ್ತು. ಹಾಗಾಗಿ, ಈ ಲಾಡುಗಳು ನನ್ನ ಮಗಳನ್ನು ತಲುಪುವುದಿಲ್ಲ
ಎನ್ನುವ ಸತ್ಯ ಗೊತ್ತಿದ್ದರೂ, ಮೌನವಾಗಿ ಸ್ವೀಕರಿಸಿದೆ.
ಮಾತಿನ
ಮಧ್ಯ, `ನಾನೊಂದು ಪುಸ್ತಕ ಬರೆದಿದ್ದೇನೆ. ನೀನು ಓದಿದ್ದೀಯಾ?’ ಅಂತ ಕೇಳಿದರು. ಮೂರು ಲಕ್ಷ ಪ್ರತಿಗಳು
ಮಾರಾಟವಾದ ಪುಸ್ತಕವದು. ಏನು ಹೇಳಬೇಕು ಅಂತ ಗೊತ್ತಾಗದೆ, ಹೌದು ಅನ್ನುವಂತೆ ತಲೆ ಆಡಿಸಿದೆ. `ದೇವರೇ
ನನ್ನ ಕೈಯಲ್ಲಿ ಆ ಕೆಲಸ ಮಾಡಿಸಿದ. ತುಂಬಾ ಜನ ಓದಿದ್ದಾರಂತೆ,’ ಅಂದರು.
ಹೆಚ್ಚು
ಮಾತಾಡಿದರೆ ಸ್ವಾಮೀಜಿಗೆ ಆಯಾಸವಾಗುತ್ತದೆ ಅಂತ ನನಗೆ ಮೊದಲೇ ಹೇಳಿದರು. ಸ್ವಲ್ಪ ಹೊತ್ತು ಇರುವ ಮನಸ್ಸಿದ್ದರೂ,
ಕೆಲಸವಿದೆ ಎಂದು ಹೇಳಿ ಹೊರಟೆ. ಸ್ವಾಮೀಜಿಯೇನೋ ಊಟ ಮಾಡಿ ಹೊರಡು ಎಂದರು. ಊಟಕ್ಕೆ ಕಾದರೆ ಅವರು ಹೆಚ್ಚು
ಮಾತನಾಡುವುದರಲ್ಲಿ ಅನುಮಾನವಿರಲಿಲ್ಲ.
ಹೊರಗೆ
ಬರುವಾಗ ನಾನು ಇನ್ನೆಂದೂ ಡಾಕ್ಟರ್ ಸ್ವಾಮೀಜಿಯವರನ್ನು ಭೇಟಿಯಾಗುವುದಿಲ್ಲ ಎನ್ನುವುದು ಖಾತರಿಯಾಗಿತ್ತು.
ಅವರನ್ನು ಭೇಟಿಯಾದ ತೃಪ್ತಿ ಇತ್ತು. ಮನಸ್ಸು ಹಗುರವಾಗಿ, ಒಂಥರಾ ಶಾಂತಿ ನೆಲೆಸಿತ್ತು. ಹೊರಗೆ ಬಂದವನೇ,
ಸ್ವಾಮೀಜಿ ಕಟ್ಟಿಸಿದ ಆಶ್ರಮವನ್ನು ದೀರ್ಘವಾಗಿ ನೋಡಿ, ಕಾರು ಹತ್ತಿ ನಾಗರಹೊಳೆ ಕಡೆಗೆ ಹೊರಟೆ.
ಎಲ್ಲೋ
ಹುಟ್ಟಿ, ಎಲ್ಲೋ ಬೆಳೆಯುವ ಕಾಲದಲ್ಲಿ, ಯಾರೋ ನಮಗೆ ಬದುಕುವ ದಾರಿ ತೋರಿಸುವ ಈ ಜಗತ್ತು ವಿಚಿತ್ರ ಎನ್ನಿಸುತ್ತದೆ.
ನಾನು ಯಾವುದೇ ದಾರ್ಶನಿಕರನ್ನು ಭೇಟಿ ಮಾಡಿಲ್ಲ. ಆದರೆ, ನನಗೆ ಬದುಕಲು ಕಲಿಸಿದವರ ಹಿಂದೆ ಕೆಲವು ಪುಟ್ಟ
ಹೆಜ್ಜೆಗಳನ್ನು ಇಟ್ಟೆ ಎನ್ನುವುದೇ ತೃಪ್ತಿ.