ಗುರುವಾರ, ಏಪ್ರಿಲ್ 5, 2018

ತೇಜಸ್ವಿ



ತೇಜಸ್ವಿ ಮತ್ತು ಅರ್ಥವಾಗದ ವಿಷಯಗಳು



ನಮ್ಮ ಪ್ರೆಸ್ ಕ್ಲಬ್ ನಲ್ಲಿ ಕಾಮ್ರೇಡ್ ನಾಗೇಶ್ ರನ್ನು ನೋಡಿದಾಗಲೆಲ್ಲ ತೇಜಸ್ವಿ ಹೇಳುತ್ತಿದ್ದ ಮಾತುಗಳು ನೆನಪಾಗುತ್ತದೆ : `ಈ ಲೆಫ್ಟಿಸ್ಟ್ ಗಳು ಇದ್ದಾರಲ್ಲ, ಒಂಥರಾ ಭ್ರಮೆಯಲ್ಲಿರ್ತಾರೆ. ರಾತ್ರಿ ಪೂರ ಕುಡ್ದು, ನಾಳೆ ಬೆಳಗ್ಗೆಯಿಂದ ಕ್ರಾಂತಿ ಶುರುವಾಗುತ್ತೆ ಅಂತ ವಾದ ಮಾಡಿ, ಮನೆಗೆ ಹೋಗಿ ಮಲಗಿ, ಬೆಳಗ್ಗೆ ಹ್ಯಾಂಗ್ ಓವರ್ ನಲ್ಲಿ ಏಳ್ತಾರೆ. ಮತ್ತೆ ಅವತ್ತು ಕೂಡಾ ಅದೇ ಕಥೆಯಾಗಿರ್ತದೆ’.

ನಮ್ಮ ಪ್ರೆಸ್ ಕ್ಲಬ್ ನಲ್ಲಿ ಎಡ ಪಂಥೀಯರ ಸಂಖ್ಯೆ ಕಡಿಮೆಯಾದರೂ, ಪೂರ್ತಿ ನಶಿಸಿ ಹೋಗಿಲ್ಲ. ಹಾಗಂತ ಬಲ ಪಂಥೀಯರೇ ತುಂಬಿ ಹೋಗಿದ್ದಾರೆ ಅಂತ ನನಗನ್ನಿಸೋದಿಲ್ಲ. ಮುಂಚೆ ಎಡ ಪಂಥೀಯರಾಗಿದ್ದವರೆಲ್ಲ ಈಗ ಅವರವರ ಜಾತಿ ಪಂಥೀಯರಾದಂತೆ ಅನ್ನಿಸೋಕೆ ಶುರುವಾಗಿದೆ.

ಆದರೆ ನಮ್ಮ ನಾಗೇಶ್ ಒಂಥರಾ.... ಪೂರ್ತಿ ಎಡ ಪಂಥೀಯರಲ್ಲ. ಆದರೆ, ಬಲ ಪಂಥೀಯ ದ್ವೇಷಿ ಅಂತ ಹೇಳಬಹುದು. ಜಾತಿವಾದಿಯೂ ಅಲ್ಲ. ಯಾರ ಮಾತನ್ನೂ ಅಷ್ಟು ಸುಲಭವಾಗಿ ಒಪ್ಪಿಕೊಳ್ಳೋ ಸ್ವಭಾವವಲ್ಲ. ಯಾರಿಗೂ ಹಾನಿ ಮಾಡುವುದಿಲ್ಲ. ಆಗಾಗ, ಬೇಡದ ಕೆಲಸ ಮಾಡಲು ಕೈ ಹಾಕಿ, ಸೆಲ್ಫ್ ಗೋಲ್ ಹೊಡ್ಕೊಳೋ ಗಿರಾಕಿ. ಇತ್ತೀಚೆಗೆ ನಾಗೇಶ್ ಅದೇ ಥರ ಸೆಲ್ಫ್ ಗೋಲ್ ಹೊಡ್ಕೊಂಡಾಗ, ತೇಜಸ್ವಿಯವರು ಮೈಸೂರಿನಲ್ಲಿ ಉದಯ ರವಿ ಪ್ರೆಸ್ ಮಾಡಿದ ಘಟನೆ ನೆನಪಾಯ್ತು. ನಮ್ಮ ನಾಗೇಶ್, ಒಂಥರಾ....

ನಾಗೇಶ್ ಬೆಳೆದು ಬಂದ ದಾರಿಯಲ್ಲಿ ಎಡವಿಕೊಂಡದ್ದು ಸಾಹಿತಿಗಳು ಮತ್ತು ರೈತ ಚಳುವಳಿಗಳಿಗೆ. ಚಿಕ್ಕ ವಯಸ್ಸಿನಲ್ಲೇ, ಪ್ರೊಫೆಸರ್ ನಂಜುಂಡಸ್ವಾಮಿಯವರಿಗೆ ಮಾರು ಹೋಗಿ, ಇನ್ನೂ ಅವರ ಗುಂಗಿನಿಂದ ಹೊರಬರಲಾಗದೇ ಇರುವವರಲ್ಲಿ, ನಾಗೇಶ್ ಕೂಡ ಒಬ್ಬರು. ರೈತ ಸಂಘದ ಎಷ್ಟೋ ಬೆಳವಣಿಗೆಗಳನ್ನು ಹತ್ತಿರದಿಂದ ಮೂಕಪ್ರೇಕ್ಷಕರಾಗಿ ನೋಡಿರುವವರು. ಯಾಕಂದರೆ, ಆಗ ಇವರಿಗೆ ಇನ್ನೂ ನಾಯಕರಾಗುವ ವಯಸ್ಸಾಗಿರಲಿಲ್ಲ.

ಹೀಗೇ ಮಾತಾಡ್ತಾ ಇದ್ದಾಗ, ನಾಗೇಶ್ ರೈತ ಸಂಘದ ಒಂದು ಕಥೆ ಹೇಳಿದ್ದರು. 1983 ರ ಸಮಯದಲ್ಲಿ, ತೇಜಸ್ವಿಯವರು ಸಹ ರೈತ ಸಂಘದ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ಆಗ, ರೈತ ಸಂಘವು  ಚುನಾವಣೆಗೆ ಸ್ಪರ್ಧಿಸುವ ನಿರ್ಧಾರ ಮಾಡಿತ್ತು. ಬೆಂಗಳೂರಿನ ಗಾಂಧಿ ಭವನದಲ್ಲಿ ಸಭೆಯಲ್ಲಿ ಪ್ರೊಫೆಸರ್, ತೇಜಸ್ವಿ ಸೇರಿದಂತೆ, ಎಲ್ಲಾ ರೈತ ಸಂಘದ ನಾಯಕರೂ ಸೇರಿದ್ದರು. ಪ್ರೊಫೆಸರ್ ಮತ್ತು ತೇಜಸ್ವಿಯವರು ವೇದಿಕೆ ಮೇಲೆ ಕುಳಿತಿದ್ದರು.

ಭಾಷಣಗಳು ನೆಡೆಯುತ್ತಿದ್ದಾಗ, ತೇಜಸ್ವಿಯವರು ಶೌಚಾಲಯದ ಕಡೆಗೆ ಹೋಗಲೆಂದು ವೇದಿಕೆಯ ಕೆಳಗೆ ಇಳಿದರಂತೆ. ಬಾಗಿಲ ಹತ್ತಿರ ಒಂದಿಬ್ಬರು ತೇಜಸ್ವಿಯವರನ್ನು ತಡೆದು, `ಸರ್, ನೀವು ವೇದಿಕೆಯ ಮೇಲೆ ಹೋಗಿ. ಆ ಕಡೆ ಬೇರೇನೇ ಚರ್ಚೆ ನೆಡೆಯುತ್ತಿದೆ. ಲಿಂಗಾಯಿತರೆಲ್ಲ ಸೇರಿ, ನಮ್ಮ ಸರ್ಕಾರದಲ್ಲಿ ನಂಜುಂಡಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡ್ಬೇಕೂಂತ ಕೂತಿದ್ದಾರಂತೆ. ಒಕ್ಕಲಿಗರೆಲ್ಲ ನಿಮ್ಮನ್ನು ಮಾಡ್ಬೇಕೂಂತ ಇದ್ದೀವಿ. ನೀವು ಕೆಳಗೆ ಬಂದರೆ, ಲಿಂಗಾಯಿತರು ನಂಜುಂಡಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡುವ ವಿಷಯದಲ್ಲಿ ನಿಮ್ಮನ್ನು ಒಪ್ಪಿಸಿಬಿಡುವ ಸಾಧ್ಯತೆ ಇದೆ. ನೀವು ಮೇಲೆ ಇದ್ದರೆ, ಉಳಿದ ವಿಷಯವನ್ನು ನಾವು ನಿಭಾಯಿಸಿಕೊಳ್ಳುತ್ತೇವೆ,’ ಅಂದರಂತೆ.

`ತಾಳ್ರಯ್ಯ... ರೀಸಸ್ ಗೆ ಹೋಗಿ ಬಂದು ಬಿಡ್ತೀನಿ. ಆಮೇಲೆ ನೀವು ಹೇಳಿದ ಹಾಗೇ ಮಾಡೋಣ,’ ಅಂತ ಹೊರಗಡೆ ಹೋದ ತೇಜಸ್ವಿ, ಅಲ್ಲೇ ಒಂದು ಕುರ್ಚಿಯ ಮೇಲೆ ತಮ್ಮ ಹೆಗಲಲ್ಲಿದ್ದ ಹಸಿರು ಶಾಲನ್ನು ಇಟ್ಟು, ಸಭೆ ಮುಗಿಯುವ ಹೊತ್ತಿಗೆ ಮೂಡಿಗೆರೆ ಸೇರಿಕೊಂಡರಂತೆ.

ಮಾರನೇ ದಿನ ಪ್ರೋಫೆಸರ್ ನಂಜುಂಡಸ್ವಾಮಿ ಫೋನ್ ಮಾಡಿದಾಗ, `ಅಲ್ಲಾಕಣ್ರಿ, ಇನ್ನೂ ಎಲೆಕ್ಷನ್ ಗೆ ನಿಂತಿಲ್ಲ, ಗೆದ್ದಿಲ್ಲ. ಈಗ್ಲೇ ಸಂಘದಲ್ಲಿ ಯಾವ ಜಾತಿಯವರು ಮುಖ್ಯಮಂತ್ರಿ ಆಗ್ಬೇಕೂಂತ ಶುರುವಾದ್ರೆ, ರೈತರು ಉದ್ದಾರ ಕಣ್ರಿ. ನಾನು ಸಂಘದ ಕಡೆ ಬರೋಲ್ಲ,’ ಅಂತ ಫೋನ್ ಕುಕ್ಕಿದರಂತೆ. ಆಮೇಲೆಂದೂ ಅವರು ರೈತ ಸಂಘದ ಚಟುವಟಿಕೆಗಳಲ್ಲಿ ಕಾಣಿಸಿಕೊಳ್ಳಲೇ ಇಲ್ಲವಂತೆ.

 ಈ ವಿಷಯ ಮೊನ್ನೆ ಹಿಂದೂ ದಿನಪತ್ರಿಕೆಯ ಮುರಳೀಧರ ಖಜಾನೆ ಜೊತೆ ಮಾತನಾಡುವಾಗ ಈ ವಿಷಯ ಬಂತು. ಎಡ ಪಂಥ ಮತ್ತು ರೈತ ಚಳುವಳಿಯ ಹಿನ್ನೆಯಲ್ಲಿ ಬಂದ ಖಜಾನೆಗೆ ಸಿಟ್ಟೇ ಬಂದಿತು. `ಯಾರೋ, ಏನೋ ಮಾತಾಡಿದ್ರು ಅಂತ ಶಾಲು ಎಸೆದು ಹೋಗ್ಬಿಟ್ರೆ, ಅವ್ರನ್ನ ನಂಬಿಕೊಂಡು ಬಂದವರೆಲ್ಲ ಎಲ್ಲಿಗೆ ಹೋಗಬೇಕು? ಅದೇ ವಿಷಯದಲ್ಲಿ ನಾನು ತೇಜಸ್ವಿ ಜೊತೆ ಒಂದೆರೆಡು ಸಲ ಜಗಳ ಆಡಿದ್ದೇನೆ,’ ಅಂದ.

`ಅವ್ರನ್ನ ನಂಬ್ಕೊಂಡು ಯಾರಯ್ಯ ಅಲ್ಲಿ ಬಂದಿದ್ದವರು? ಅದೊಂದು ಚಳುವಳಿ ಮತ್ತೆ ಎಲ್ಲರಿಗೂ ಅವರದೇ ಆದ ಆಕಾಂಕ್ಷೆಗಳಿರ್ತವೆ. ಹಾಗಾಗಿ ಬಂದಿರ್ತಾರೆ ಅಷ್ಟೆ. ತೇಜಸ್ವಿಗೆ ಇಷ್ಟ ಆಗಲಿಲ್ಲ ಎದ್ದು ಹೋದ್ರು. ಆಮೇಲೆ ಶಾಮಣ್ಣನ್ನ (ಕಡಿದಾಳ್) ಕಂಡ್ರೆ ಪ್ರೊಫೆಸರ್ ಗೆ ಇಷ್ಟ ಆಗ್ಲಿಲ್ಲ  ಅಂತ ಸಂಘದಿಂದ ಹೊರಗೆ ಹಾಕಿರ್ಲಿಲ್ವಾ? ಅದಕ್ಯಾಕೆ ನೀನು ಸಿಟ್ಟಾಗ್ಬೇಕು?’ ಅಂತ ಕೇಳಿದೆ.

`ಅಲ್ಲ ಮಾರಾಯ... ನಂಬಿ ನಾಯಕತ್ವ ಕೊಟ್ಟಿರ್ತೀವಿ. ಇಷ್ಟ ಇಲ್ಲ ಅಂತ ಮಧ್ಯದಲ್ಲಿ ಎದ್ದು ಹೋದರೆ? ನಾವೆಲ್ಲ ಎಷ್ಟು ತೊಂದರೆಗೊಳಗಾದ್ವಿ ಅಂತ ನಿಂಗೆ ಗೊತ್ತಾ. ರೈತ ಚಳುವಳಿ ಹಾಳಾಗಿದ್ದೇ ಹೀಗೆ. ನಾಯಕತ್ವ ವಹಿಸಿಕೊಂಡವರೆಲ್ಲ ಮಧ್ಯದಲ್ಲಿ ಎದ್ದು ಹೋದರೆ, ರೈತರು ಏನು ಮಾಡ್ಬೇಕು?’ ಅಂತ ಕೂಗಾಡೋಕೆ ಶುರು ಮಾಡಿದ.

`ಅಲ್ಲಾ ಮಾರಾಯ... ತೇಜಸ್ವಿ ಚಳುವಳಿಗೆ ಅನಿವಾರ್ಯ ಅಂತ ನಿನಗ್ಯಾರು ಹೇಳಿದ್ರು? ಯಾವುದೇ ಚಳುವಳಿಗೆ ಯಾರೂ ಅನಿವಾರ್ಯವಲ್ಲ. ಅವರು ಹೋದರೆ, ನೀನೇ ನಾಯಕತ್ವ ವಹಿಸಿಕೋಬೇಕಿತ್ತು. ನೀನೇ ಸರ್ಕಾರನ ಪ್ರಶ್ನಿಸಬೇಕಿತ್ತು. ನಾಯಕರು ಅನ್ನಿಸಿಕೊಳ್ಳೋರು ಒಂದು ಮೇಲ್ಪಂಕ್ತಿ ಹಾಕಿ ಕೊಡ್ತಾರೆ ಅಷ್ಟೆ. ಇನ್ನುಳಿದ ಹಾಗೆ, ಜನಗಳು ಅದನ್ನು ಮುಂದುವರೆಸಿಕೊಂಡು ಹೋಗಬೇಕು. ಒಬ್ಬ ನಾಯಕ ಹೋದರೆ, ಆ ಜಾಗಕ್ಕೆ ಇನ್ನೊಬ್ಬ ಬರಬೇಕು. ಇಲ್ಲದೇ ಹೋದರೆ, ಅದು ಸಂಘಟನೆ ಅಂತ ಅನ್ನಿಸಿಕೊಳ್ಳೋದಿಲ್ಲ. ರೈತ ಸಂಘ ಮುಳುಗೋಕೆ ಇನ್ನೂ ಹತ್ತಾರು ಕಾರಣಗಳಿವೆ,’ ಅಂದೆ.

`ನಾವು ಅನುಭವಿಸಿದ ನೋವು ನಿನಗೆ ಹೇಗೆ ಅರ್ಥವಾಗಬೇಕು?’ ಅಂತ ಗೊಣಗುತ್ತಾ ಖಜಾನೆ ಮಾತು ಮುಗಿಸಿದ. ಖಜಾನೆ ಹೇಳಿದ್ದು ಸರಿಯಾಗಿತ್ತು. ನನಗಿಂತ ವಯಸ್ಸಿನಲ್ಲಿ ಹಿರಿಯನಾದ ಖಜಾನೆ, ಚಳುವಳಿಗಳನ್ನು ತುಂಬಾ ಹಚ್ಚಿಕೊಂಡಿದ್ದ. ಆ ನೋವು ನನಗೆ ಅರ್ಥವಾಗುವ ಸಾಧ್ಯತೆ ಬಹಳ ಕಡಿಮೆ.

ತೇಜಸ್ವಿಯವರು ಯಾವುದೇ ತತ್ವ ಸಿದ್ದಾಂತಗಳಿಗೆ ಅಂಟಿಕೊಂಡಿದ್ದು ನಾನು ನೋಡಿಲ್ಲ. ಉದಯ ರವಿಯ ಮೇಲೆ ಎಬಿವಿಪಿ ಹುಡುಗರು ದಾಳಿ ಮಾಡಿದ ಸಮಯದಿಂದ, ಬಲ ಪಂಥೀಯರ ವಿಷಯದಲ್ಲಿ ಕಟು ನಿಲುವು ತೆಗೆದುಕೊಂಡರೂ, ಅದಕ್ಕೋಸ್ಕರ ಎಡ ಪಂಥಕ್ಕೆ ವಾಲಿದವರಲ್ಲ. ಅವರ ಹೊಸ ವಿಚಾರಗಳು ಸಂಕಲನವನ್ನು ಓದುವಾಗ, ಎಲ್ಲರನ್ನೂ ಎಗ್ಗಿಲ್ಲದೆ ಟೀಕಿಸುವ ಅವರ ಸ್ವಭಾವ ಅರ್ಥವಾಗುತ್ತದೆ.

ಮೂಡಿಗೆರೆಯ ಕಮ್ಯುನಿಸ್ಟ್ ನಾಯಕ ದಿವಂಗತ ಬಿ ಕೆ ಸುಂದರೇಶ್ ಬಗ್ಗೆ ಒಳ್ಳೆಯ ಅಭಿಪ್ರಾಯ ಹೊಂದಿದ್ದರೂ, ಹೊಸ ವಿಚಾರಗಳಲ್ಲಿ ಕಾರ್ಲ್ ಮಾರ್ಕ್ಸ್ ನ ವಿಚಾರಧಾರೆಯನ್ನು ಅಧ್ಬುತವಾಗಿ ವಿಮರ್ಶಿಸಿದ್ದಾರೆ. ಅವರ ಪ್ರಕಾರ, ಕಾರ್ಲ್ ಮಾರ್ಕ್ಸ್ ತತ್ವ ಹುಟ್ಟುತ್ತಲೇ ಸೋತಿತ್ತು. ಯಾಕಂದರೆ, ಆ ತತ್ವವು ಆಗಿನ ಕಾಲದಲ್ಲಿ ಕೈಗಾರಿಕರಣ ಹೊಂದಿದ್ದ ಯೂರೋಪ್ ನ ಇಂಗ್ಲೆಂಡ್, ಫ್ರಾನ್ಸ್ ಮತ್ತು ಅಮೆರಿಕಾ ದೇಶಗಳಲ್ಲಿ ಹೆಚ್ಚು ಜನಪ್ರಿಯವಾಗಬೇಕಿತ್ತು. ಅಲ್ಲಿ ಆಳುವವರ ಮತ್ತು ಆಳಿಸಿಕೊಳ್ಳುವವರ ಅಂತರ ಹೆಚ್ಚಾಗಿತ್ತೇ ಹೊರತು, ರಷ್ಯಾ, ಚೈನಾ ಮತ್ತು ದಕ್ಷಿಣ ಅಮೆರಿಕಾ ದೇಶಗಳಲಲ್ಲ. ಹಾಗಾಗಿ, ಅದು ಸಲ್ಲದ ಪ್ರದೇಶಗಳಲ್ಲಿ ಮಾತ್ರ ಪ್ರಭಲವಾಗಿ ಹರಡಿ, ಆ ದೇಶದ ಸ್ಥಿತಿಗತಿಗಳನ್ನೂ ಹಾಳು ಮಾಡಿತ್ತು.

ಎಡ-ಬಲಗಳನ್ನು ತಿರಸ್ಕರಿಸಿದ ಮಾತ್ರಕ್ಕೆ, ಕಾಂಗ್ರೆಸ್ ಅಥವಾ ಜನತಾ ಪಕ್ಷಗಳಿಗೆ ಮಣೆ ಹಾಕಲೂ ಹೋಗಲಿಲ್ಲ. ದೇಶವನ್ನು ಅಧಿಕಾರಶಾಹಿಗಳ ತೆಕ್ಕೆಗೆ ದೂಡಿದವರೇ ಈ ಎರಡೂ ಪಕ್ಷಗಳು ಅನ್ನೋದು ಅವರ ವಿಚಾರವಾಗಿತ್ತು. ಅದು ವಾಸ್ತವ ಕೂಡ. ಹೊಸ ವಿಚಾರಗಳಲ್ಲಿ, ಭೂ ಸುಧಾರಣೆ ಹರಿಕಾರ ಎಂದೇ ಹೆಸರಾಗಿರುವ ದಿ. ದೇವರಾಜ್ ಅರಸು ಅವರನ್ನು ಮುಲಾಜಿಲ್ಲದೆ ತರಾಟೆಗೆ ತೆಗೆದುಕೊಂಡಿರುವುದನ್ನೂ ಕಾಣಬಹುದು. ಅರಸುರವರನ್ನು ಟೀಕಿಸುವುದು ಎಂದರೆ ಇಂದಿಗೂ ಊಳಿಗಮಾನ್ಯ ಪದ್ದತಿಯನ್ನು ಪ್ರತಿಪಾದಿಸುವುದು ಎಂದೇ ಭಾವಿಸುತ್ತಾರೆ. ತೇಜಸ್ವಿಯವರನ್ನು ಬಿಟ್ಟರೆ, ಅರಸುರವರನ್ನು ಟೀಕಿಸಿದವರು ಕೇಶವರೆಡ್ಡಿ ಹಂದ್ರಾಳ ಮಾತ್ರ ಅಂತ ನನಗನ್ನಿಸುತ್ತದೆ.

ನಂತರದ ದಿನದಲ್ಲಿ, ಲಂಕೇಶರ ಜೊತೆ ಸೇರಿ ಪ್ರಗತಿರಂಗ ಅನ್ನೊ ಸಂಘ ಕಟ್ಟಿದರೂ, ಅದು ಕಡಿದು ಕಟ್ಟೆ ಹಾಕಿದ್ದು ಅಷ್ಟರಲ್ಲೇ ಇದೆ. ಕೊನೆಗೂ, ಇವರ ರಾಜಕೀಯ ನಿಲುವೇನು ಅನ್ನೋದು ನನಗೆ ಅರ್ಥವಾಗಲೇ ಇಲ್ಲ. ಆರ್ಥಿಕ ಉದಾರೀಕರಣ ಸಾಮಾಜಕ್ಕೆ ಪಿಡುಗು ಅನ್ನೋದನ್ನು ಹೇಳುತ್ತಲೇ, ಅದೊಂದು ಅನಿವಾರ್ಯ ಭೂತ ಮತ್ತು ಅದರಲ್ಲಿ ನಮ್ಮದೇ ಆದ ಸ್ಥಾನಮಾನ ಕಂಡುಕೊಳ್ಳುವ ಅನಿವಾರ್ಯತೆ ಇದೆ ಅಂತ ಹೇಳಿದ್ದರು.

ಒಮ್ಮೆ ತೇಜಸ್ವಿಯವರನ್ನು ಹೆಮಿಂಗ್ವೆಗೆ ಹೋಲಿಸಿ ಬರೆದ ಲೇಖನವನ್ನು ಓದಿದ್ದೆ. ಹಾಗೇ ಅದರ ವಿಷಯವನ್ನು, ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿ ನನ್ನ ಹಿರಿಯರಾಗಿದ್ದ ನಚ್ಚಿಯವರ ಜೊತೆ ಪ್ರಸ್ತಾವಿಸಿದೆ. `ಇಲ್ವೋ ಮಾಕೋನಹಳ್ಳಿ... ಅವರಿಬ್ಬರನ್ನು ಒಂದೇ ತಕ್ಕಡಿಗೆ ಹಾಕಿ ತೂಗೋಕೆ ಆಗೋದಿಲ್ಲ. ಇಬ್ಬರೂ ಬದುಕಿದ ರೀತಿಗಳೇ ಬೇರೆ. ಹೆಮಿಂಗ್ವೆ ಹೆಮಿಂಗ್ವೆನೇ, ತೇಜಸ್ವಿ ತೇಜಸ್ವಿನೇ,’ ಅಂತ ಹೇಳಿದರು. ಅವತ್ತು ಆ ಮಾತು ನನಗಿಷ್ಟವಾಗಿರಲಿಲ್ಲ. ಕೆಲವು ವರ್ಷಗಳ ಮೇಲೆ, ನಚ್ಚಿ ಹೇಳಿದ್ದು ಸರಿ ಅಂತ ಅನ್ನಿಸ್ತು.

ಜೀವನದಲ್ಲಿ ಅರ್ಥವಾಗದ ವಿಷಯಗಳು ಎಷ್ಟೋ ಇರುತ್ತವೆ. ಕೆಲವೊಮ್ಮೆ, ಅರ್ಥವಾಗಿಯೂ, ಅರ್ಥವಾಗದೇ ಇರುವ ವಿಷಯಗಳೂ ಇವೆ. ಅದು ಗ್ರಹಿಕೆಯ ಲೋಪವೋ, ಅಥವಾ ಅರ್ಥವಾಗಿದೆ ಅನ್ನೋ ತಪ್ಪು ಗ್ರಹಿಕೆಯೋ ಅನ್ನುವುದೇ ಒಂದು ಗೊಂದಲದ ಗೂಡು.

ನನ್ನ ಅಭಿಪ್ರಾಯದಲ್ಲಿ, ಮನುಷ್ಯನನ್ನು ಹೆಚ್ಚಾಗಿ ಕಾಡುವ ವಿಷಯಗಳೆಂದರೆ, ಮೌನ ಮತ್ತು ಸಾವು. ಕಾಡಿನಲ್ಲಿ ಒಬ್ಬನೇ ಕುಳಿತು, ಶೂನ್ಯದತ್ತ ದೃಷ್ಟಿ ನೆಟ್ಟು, ಮೌನದ ನೀರವತೆಯನ್ನು ಅನುಭವಿಸುವುದರಿಂದ ಅಪಾರ ಮನಶಾಂತಿ ದೊರಕುತ್ತದೆ ಅನ್ನೋದು ನನ್ನ ಅಭಿಪ್ರಾಯ. ಅದನ್ನು ತೇಜಸ್ವಿಯವರು ಅಪಾರವಾಗಿ ಅನುಭವಿಸಿದ್ದರು.

ಅದೇ, ಸಾವಿನ ಬಗ್ಗೆ ಯೋಚನೆ ಮಾಡಿದರೆ, ಗೊಂದಲಗಳೇ ಹೆಚ್ಚಾಗುತ್ತದೆ. ಅಮರ ಅನ್ನೋ ಪದಕ್ಕೆ ಅರ್ಥ ಹುಡುಕೋಕೆ ಹೋಗೋದು ಒಂದು ಸಾಹಸವೇ ಸರಿ.

ಹನ್ನೊಂದು ವರ್ಷಗಳ ಕೆಳಗೆ, ಏಪ್ರಿಲ್ ಒಂದನೇ ತಾರೀಖಿನಂದು ಎಷ್ಟು ನಕ್ಕಿದ್ದೆನೋ ಏನೋ? ಮೂರ್ಖರ ದಿನವಲ್ಲವೇ ಅದು? ಆದರೆ, ಇನ್ನೂ ನಾಲ್ಕು ದಿನಗಳ ನಂತರ ದೊಡ್ಡ ಮೂರ್ಖನಾಗುವೆ ಅನ್ನೋದು ಗೊತ್ತಿರಲಿಲ್ಲ. ತೇಜಸ್ವಿಯವರ ಮಾಯಾ ಲೋಕದ ಎರಡನೇ ಭಾಗಕ್ಕಾಗಿ ಕಾಯುತ್ತಿದ್ದ ಕಾಲ ಅದು. ಒಂದು ಗುಡ್ ಬೈನೂ ಹೇಳದೆ ಹೋಗಿಬಿಟ್ಟರು.
ಸಾವೇ ಕೊನೆಯಾಗಿದ್ದರೆ, ಅವತ್ತೇ ತೇಜಸ್ವಿಯೂ ನಮ್ಮೆಲ್ಲರ ಜೀವನದಿಂದ ಹೊರಗಾಗಬೇಕಿತ್ತು. ಪ್ರಕೃತಿ, ಪರಿಸರ, ವಿಕಾಸ, ವಿಜ್ಞಾನ, ದಿನ ನಿತ್ಯದ ಜೀವನ, ರಾಜಕೀಯ, ರೈತರ ಬವಣೆ ಎಲ್ಲವನ್ನೂ ಸರಳವಾಗಿ ಜನರ ಮನ ಮುಟ್ಟುವಂತೆ ಬರೆದು, ಹಾಗೇ ನಮ್ಮೊಳಗೆ ಉಳಿದುಕೊಂಡರು. ಹಾಗೇಕೆ? ಸಾವಿನ ನಂತರವೂ ತೇಜಸ್ವಿ ನನ್ನ ಜೀವನದಿಂದ ಏಕೆ ಮಾಸಿ ಹೋಗಿಲ್ಲ ಅಂತ ಎಷ್ಟೋ ಸಲ ನನ್ನನ್ನು ನಾನೇ ಕೇಳಿಕೊಂಡಿದ್ದೇನೆ. ಉತ್ತರ ಇನ್ನೂ ಸಿಕ್ಕಿಲ್ಲ.

ಜೀವನದಲ್ಲಿ ನನಗರ್ಥವಾಗದ ವಿಷಯಗಳ ಪಟ್ಟಿ ದೊಡ್ಡದಿದೆ. ಅದರಲ್ಲಿ ಒಂದು.... ತೇಜಸ್ವಿ.


ಮಾಕೋನಹಳ್ಳಿ ವಿನಯ್ ಮಾಧವ




ಬುಧವಾರ, ಫೆಬ್ರವರಿ 14, 2018

ನಿಮ್ಮಿ



ನನ್ನ ಪ್ರೀತಿಯ ನಿಮ್ಮಿ



`ಅದೇನೋ ಕಣಾ... ಇಂಗ್ಲಿಷ್ ಒಂದು ಕಲೀದೇ ಇದ್ದಕ್ಕೆ ಬೇಜಾರಿದೆ ನೋಡು.... ಇಲ್ದೆ ಹೋದ್ರೆ ಏನೂ ತೊಂದ್ರೆ ಇಲ್ಲ

ಅಡುಗೆ ಮನೆ ಕಟ್ಟೆ ಮೇಲೆ ಕೂತು ಕಾಫಿ ಕುಡಿಯುತ್ತಿದ್ದ ನಾನು, `ಅದೊಂದು ಕಮ್ಮಿ ಇತ್ತು ನೋಡು ನಿಂಗೆಇಂಗ್ಲಿಷ್ ಕಲಿತುಬೇಡದ ವಿಷಯಗಳನ್ನ ತಲೆಗೆ ಹಾಕ್ಕೊಂಡುಮಾಡೋ ಕೆಲಸ ಬಿಟ್ಟು ತಲೆ ಹಾಳು ಮಾಡ್ಕೋತ್ತಿದ್ದೆ ಅಷ್ಟೆಈಗ ನೀನು ಮಾಡ್ತಾ ಇರೋ ಕೆಲ್ಸದ ಅರ್ಧದಷ್ಟೂ ಇಂಗ್ಲಿಷ್ ಕಲಿತವರು ಮಾಡೋಕ್ಕಾಗಲ್ಲ,’ ಅಂದೆ.

`ಇಲ್ಲ ಕಣಾ... ನಂಗೆ ಇಂಗ್ಲಿಷ್ ಬರಲ್ಲ ಅಂತ ಒಂದು ಅವಾರ್ಡ್ ಬರೋದು ತಪ್ಪಿಹೋಯ್ತುಮಹಾರಾಷ್ಟ್ರದಲ್ಲಿ ಪಾಟೀಲ್ ಯುನಿವರ್ಸಿಟಿ ಅಂತ ಇದೆಯಲ್ಲಅವರು ಪೇಪರಿನಲ್ಲಿ ಹಾಕಿಅಪ್ಲಿಕೇಷನ್ ಕರೆದಿದ್ರುಆದಿನ ಹಿಡ್ಕೊಂಡು ಅಪ್ಲಿಕೇಷನ್ ಹಾಕಿಇಂಟರ್ ವ್ಯೂನಲ್ಲಿ ಕೊನೆ ಐದರವರೆಗೂ ಹೋಗಿದ್ದೆಅವ್ರು ಇಂಗ್ಲಿಷ್ ಮತ್ತೆ ಹಿಂದಿಯಲ್ಲಿ ಪ್ರಶ್ನೆ ಕೇಳಿದ್ರುನಂಗೆ ಉತ್ರ ಹೇಳೋಕೆ ಆಗ್ಲಿಲ್ಲಆ ಅವಾರ್ಡ್ ಕನ್ನಂಗಿ ಶೇಷಾದ್ರಿಯಣ್ಣಂಗೂ ಬಂದಿತ್ತುಅವ್ರೇ ಹೇಳಿದ್ರು... ನಿಮಗೆ ಇಂಗ್ಲಿಷ್ ಬಂದಿದ್ರೆಅವಾರ್ಡ್ ಸಿಕ್ತಿತ್ತು ಅಂತ,’ ಎಂದು ನಿಮ್ಮಿ ಹೇಳಿದಾಗಹಾಗೇ ತಲೆ ಎತ್ತಿ ಅವಳ ಮುಖವನ್ನೇ ನೋಡಿದೆ.

`ಅವಾರ್ಡ್ ಸಿಗದಿದ್ರೆ ಕತ್ತೆ ಬಾಲನಿನಗೆ ಅವಾರ್ಡ್ ಕೊಡದೇ ಹೋದ್ರೆ ಅದು ಅವರಿಗೇ ಲಾಸ್,’ ಅಂತ ಹೇಳೋಕೆ ಹೋದವನುನಿಮ್ಮಿಯ ನಿರಾಸೆ ಮುಖ ನೋಡಿ ಸುಮ್ಮನಾದೆ.

ನಿಮ್ಮಿ ಉರುಫ್ ನಿರ್ಮಲತ್ತೆಅಮ್ಮನ ತಮ್ಮ ಪ್ರಕಾಶ ಮಾವನ ಹೆಂಡತಿಸೋಮವಾರಪೇಟೆಯಿಂದ ನಾಲ್ಕು ಕಿಲೋಮೀಟರ್ ದೂರದ ಕರ್ಕಳ್ಳಿ ನನ್ನ ಅಜ್ಜಿಯ ಮನೆನಾನು ಹೈಸ್ಕೂಲಿನಲ್ಲಿದ್ದಾಗಲೇ ಅಜ್ಜಅಜ್ಜಿ ಇಬ್ಬರೂ ತೀರಿಹೋದರುಅಮ್ಮನ ಅಣ್ಣ ತಿಮ್ಮೇಮಾವಅಕ್ಕ ಗೌರದೊಡ್ಡಮ್ಮನೂ ತೀರಿಹೋಗಿದ್ದಾರೆಅಲ್ಲಿರೋದು ಅಮ್ಮನ ಅಣ್ಣ ಕಾಶೀಮಾವ ಮತ್ತೆ ಪ್ರಕಾಶ ಮಾವ ಮಾತ್ರಅಮ್ಮನಿಗೆ ಇನ್ನೂ ಇಬ್ಬರು ಅಕ್ಕಂದಿರು ಮತ್ತೆ ಒಬ್ಬಳು ತಂಗಿ ಇದ್ದಾರೆಕರ್ಕಳ್ಳಿ ಮೊಮ್ಮಕ್ಕಳೆಲ್ಲಒಂದಲ್ಲ ಒಂದು ನೆಪ ಮಾಡಿಕೊಂಡುವರ್ಷಕ್ಕೋಎರಡು ವರ್ಷಕ್ಕೋ ಒಂದು ಸಲ ಅಲ್ಲಿ ಸೇರ್ಕೊಳ್ಳುತ್ತೇವೆ.

ಮಾಷೆ ಎಂದರೆಅತೀ ಕಿರಿಯ ಮೊಮ್ಮಗುವಿಗೂ 40 ವರ್ಷ ದಾಟಿದೆಗೌರದೊಡ್ಡಮ್ಮನ ಮಕ್ಕಳಾದ ಸುರೇಂದ್ರಣ್ಣಚಂದ್ರಕಲಕ್ಕ ಎಲ್ಲರೂ 65ರ ಆಸುಪಾಸಿನವರುಇವರಿಬ್ಬರಲ್ಲದೆಶಾರದ ದೊಡ್ಡಮ್ಮನ ಮಗಳಾದ ವೈಯಕ್ಕ (ವೈದೇಹಿ)ನಿಗೂ ಮೊಮ್ಮಕ್ಕಳಿವೆಅಂತೂನಮ್ಮ ಮಕ್ಕಳುಮೊಮ್ಮಕ್ಕಳು ಎಲ್ಲರೂ ನಮ್ಮಜ್ಜಿ ಮನೆಗೆ ಹೋಗುವವರೆಕರ್ಕಳ್ಳಿಗೆ ಹೋಗೋದು ಅಂದ ತಕ್ಷಣ ಎಲ್ಲರೂ ಮೊದಲು ಮಾತಾಡೋದು ನಿಮ್ಮಿಯ ಹತ್ತಿರಎರಡನೇ ತಲೆಮಾರಿನ ಸಂಬಂಧಿಗಳನ್ನೇ ಮರೆತು ಹೋಗುವ ಈ ಕಾಲದಲ್ಲಿಐದು ತಲೆಮಾರುಗಳನ್ನು ಸುಧಾರಿಸುವ ನಿಮ್ಮಿಯನ್ನು ನೋಡಿದರೆ ಆಶ್ಚರ್ಯವಾಗುತ್ತದೆ.

ಹಾಗಂತನಿಮ್ಮಿಯೇನು ಮುಸುರೆ ತೊಳೆದುಕೊಂಡುಅಡುಗೆ ಮಾಡಿಕೊಂಡುಮೂಲೆಯಲ್ಲಿ ಕೂತಿರುವ ಹೆಂಗಸೇನಲ್ಲ.  ವೆನಿಲ್ಲಾ ಅನ್ನೋ ಮಾಯೆ ಮಲೆನಾಡನ್ನು ಆವರಿಸಿಕೊಂಡಾಗಅದನ್ನು ಅದ್ಭುತವಾಗಿ ಕೃಷಿ ಮಾಡಿಸಂಬಾರು ಮಂಡಳಿಯಿಂದ ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದಿದವಳುಗದ್ದೆಗೆ ನೀರು ಹತ್ತುದೇ ಇದ್ದಾಗಅಲ್ಲೇ ಕೆರೆ ಮಾಡಿಸಿಎರಡೂವರೆ ಎಕರೆಯಲ್ಲಿಕಾಫಿಮೆಣಸುಯಾಲಕ್ಕಿತೆಂಗುಅಡಿಕೆಬಾಳೆ ಮತ್ತು ಕೋಕಾವನ್ನು ಬೆಳೆದು ತೋರಿಸಿದವಳುಆ ಕೆರೆಯಲ್ಲಿ ಮೀನುಗಳನ್ನೂ ಸಾಕಿದಳುಇವತ್ತಿಗೂಕರ್ಕಳ್ಳಿಗೆ ಹೋದಾಗಆ ತೋಟಕ್ಕೆ ಒಂದು ಸಲವಾದರೂ ಹೋಗಿ ಬರುತ್ತೇನೆಇದೇ ಜಾಗದ ಕೃಷಿಯ ಬಗ್ಗೆ ನಿಮ್ಮಿ ಮಹಾರಾಷ್ಟ್ರದ ಪ್ರಶಸ್ತಿಗೆ ಅರ್ಜಿ ಹಾಕಿದ್ದು.

ನಿಮ್ಮಿ ಸುಮ್ಮನೆ ಇರೋದನ್ನು ನಾನು ಒಂದು ಸಲವೂ ನೋಡಿಲ್ಲತೋಟದಲ್ಲಿ ಏನಾದ್ರೂ ಹೊಸದು ಮಾಡುತ್ತಿರುತ್ತಾಳೆಇಲ್ಲದೇ ಹೋದರೆಮನೆ ಸುತ್ತ ಹೂಗಿಡಗಳನ್ನು ಸರಿ ಮಾಡ್ತಾ ಇರ್ತಾಳೆಮನೆ ಹತ್ತಿರ ಬೆಳೆದ ದೊರೆ ಹಣ್ಣು (Passion Fruit), ಹಿರಳೆ ಹಣ್ಣುಗಳ ಜ್ಯೂಸ್ ಮಾಡಿ ಮಾರುತ್ತಾಳೆಮಹಿಳಾ ಸಮಾಜದಲ್ಲಂತೂ ತುಂಬಾನೇ ಭಾಗವಹಿಸುತ್ತಾಳೆ ಮತ್ತು ಅವಳ ಅಧ್ಯಕ್ಷತೆಯಲ್ಲಿ ಒಂದು ಸಮುದಾಯ ಭವನವನ್ನೂ ಕಟ್ಟಿಸಿದ್ದಾಳೆಸೋಮವಾರಪೇಟೆಯಲ್ಲಿ ಮಹಿಳಾ ಸಮಾಜ ಅಥವಾ ಇನ್ಯಾವುದಾದರೂ ಸಂಘಗಳು ವಸ್ತು ಪ್ರದರ್ಶನಗಳನ್ನು ಏರ್ಪಡಿಸಿದರೆನಿಮ್ಮಿಯೂ ಒಂದು ಅಂಗಡಿ ಹಾಕುತ್ತಾಳೆಶುರುವಾದ ಎರಡುಮೂರು ಘಂಟೆಗಳಲ್ಲಿಅವಳು ಇಟ್ಟ ವಸ್ತುಗಳೆಲ್ಲ ಖಾಲಿಯಾಗಿಸುತ್ತಾಡುತ್ತಿರುತ್ತಾಳೆ.

ಇಷ್ಟೆಲ್ಲ ಮಾಡಿದ ನಿಮ್ಮಿಯೇನೂ ಅನಾಮಿಕಳಾಗಿ ಬದುಕಿಲ್ಲರಾಷ್ಟ್ರೀಯ ಪ್ರಶಸ್ತಿ ಬಂದ ಎರಡು ದಿನಗಳಲ್ಲೇ ಪಾವಗಡದಲ್ಲಿ ಒಂದು ದೊಡ್ಡ ರೈತರ ಸಮಾವೇಶವನ್ನು ಉದ್ದೇಷಿಸಿ ಮಾತನಾಡಿದ್ದಾಳೆಸಂಬಾರ ಮಂಡಳಿಯವರು ನೆಡೆಸುವ ಕಾರ್ಯಾಗಾರಗಳಲ್ಲಿಉದಯೋನ್ಮುಖ ಮತ್ತು ಪ್ರಗತಿಪರ ರೈತರಿಗೆ ತರಬೇತಿಯನ್ನೂ ಕೊಡುತ್ತಾಳೆ.  ರೇಡಿಯೋ ಕಾರ್ಯಕ್ರಮಗಳಲ್ಲೂ ಭಾಗವಹಿಸಿದ್ದಾಳೆ ಮತ್ತು ಕೆಲವು ಪತ್ರಿಕೆಗಳಲ್ಲೂಅವಳ ಬಗ್ಗೆ ಲೇಖನಗಳು ಬಂದಿವೆಟಿವಿಯಲ್ಲೊಮ್ಮೆಅಡುಗೆ ವಿಷಯದ ಕಾರ್ಯಕ್ರಮದಲ್ಲಿ ಭಾಗವಹಿಸಿಮಧುಬಾನ ಮಾಡುವ ವಿಧಾನವನ್ನು ತೋರಿಸಿದ್ದಳುನಿಮ್ಮಿಯ ತೌರುಮನೆಯಾದ ಕುಂದಳ್ಳಿಯಲ್ಲಿಅವಳ ತಮ್ಮ ಮಂಜು ಮಾವ ಮನೆ ಕಟ್ಟಬೇಕು ಅಂದಾಗಅದಕ್ಕೆ ಒಂದು ಪ್ಲ್ಯಾನ್ ಮಾಡಿಕೊಟ್ಟಿದ್ದಾಳೆಅದನ್ನು ನೋಡಿದ ಮನೆ ಕಟ್ಟುವ ಇಂಜಿನಿಯರ್, `ನೀವು ಯಾವ ಕಾಲೇಜಿನಲ್ಲಿ ಇಂಜಿನೀಯರಿಂಗ್ ಓದಿದ್ದು?’ ಅಂತ ನಿಮ್ಮಿಯನ್ನು ಕೇಳಿದ್ದಾನೆಆಕೆ ಬರೀ ಪಿಯುಸಿ ವರೆಗೆ ಓದಿದ್ದು ಅಂತ ಗೊತ್ತಾದಾಗಸ್ವಲ್ಪ ಹೊತ್ತು ನಂಬಲೇ ಇಲ್ಲವಂತೆ.

ನಾನೂ ಎಷ್ಟೋ ಸಲ ಯೋಚಿಸುತ್ತಿದ್ದೆ... ನಿಮ್ಮಿಗೆ ಇಷ್ಟೆಲ್ಲಾ ವಿಷಯ ಹೇಗೆ ಗೊತ್ತಿರುತ್ತೆಅಂತಒಂದು ಸಲಬೆಳಗ್ಗೆ ಅಡುಗೆ ಮನೆ ಕಟ್ಟೆಯ ಮೇಲೆ ಕೂತ್ಕೊಂಡು ಕಾಫಿಗೆ ಕಾಯುತ್ತಿದ್ದೆಒಂದು ಭರಣಿ ಮತ್ತೆ ಲೋಟ ಹಿಡಿದುಕೊಂಡು ಬಂದ ನಿಮ್ಮಿ, `ಈ ನೀರು ಒಂಚೂರು ಕುಡಿದು ನೋಡು,’ ಅಂದಳು.

ಏನೂ ವಿಶೇಷ ಕಾಣಲಿಲ್ಲ. `ಇದು ಸ್ವಾತಿ ಮಳೆಯ ನೀರುಸ್ವಾತಿ ಮಳೆ ನೀರು ಎಷ್ಟು ದಿನ ಇಟ್ಟರೂ ಕೆಡೋದಿಲ್ಲವಂತೆಮತ್ತೆ ಎಷ್ಟೋ ಕಾಯಿಲೆಗಳು ಬರೋಲ್ಲವಂತೆಮಲೆನಾಡಲ್ಲಿ ಸ್ವಾತಿ ಮಳೆ ಬರೋದಿಲ್ಲಈ ವರ್ಷ ಬಂದಿತ್ತುಅದಕ್ಕೆ ಹಿಡಿದಿಟ್ಟಿದ್ದೆ,’ ಅಂದವಳೇಅಡುಗೆ ಮನೆಯ ಕಪಾಟಿನಿಂದ ಒಂದು ದೊಡ್ಡ ಪುಸ್ತಕ ತೆಗೆದುಅದರಲ್ಲಿ ಒಂದು ಪುಟ ಹುಡುಕಿನನ್ನ ಮುಂದೆ ಹಿಡಿದಳುಯಾವುದೋ ಪತ್ರಿಕೆಯಲ್ಲಿ ಸ್ವಾತಿ ಮಳೆಯ ಬಗ್ಗೆ ಬರೆದಿದ್ದ ಲೇಖನವನ್ನು ಕತ್ತರಿಸಿ ಅಂಟಿಸಿದ್ದಳುಅದನ್ನು ಓದಿಹಾಗೇ ಆ ಪುಸ್ತಕವನ್ನು ತಿರುವಿ ಹಾಕಲು ಶುರು ಮಾಡಿದೆಕೃಷಿನೀರುಮಳೆ ಹಾಗೂ ತಂತ್ರಜ್ಞಾನದ ಬಗ್ಗೆ ಎಷ್ಟೋ ಲೇಖನಗಳನ್ನು ಸಂಗ್ರಹಿಸಿಟ್ಟಿದ್ದಳುಅದರಲ್ಲಿ ಎಷ್ಟೋ ವಿಷಯಗಳು ನನಗೆ ಗೊತ್ತೇ ಇರಲಿಲ್ಲ.

ನಿಮ್ಮಿ ಚಿಕ್ಕಂದಿನಿಂದಲೇ ಹೀಗಂತೆಅವಳ ಊರು ಕುಂದಳ್ಳಿ ಒಂದು ಮಲೆನಾಡಿನ ಕಾಡಿನ ಮಧ್ಯದ ಕುಗ್ರಾಮಮುಂಚೆಲ್ಲಾಮಳೆಗಾಲದಲ್ಲಿ ಕೂತಿಕುಂದಳ್ಳಿ ಕಡೆಗೆ ಯಾರೂ ಹೋಗುತ್ತಿರಲಿಲ್ಲಆ ಕಾಡಿನ ಮಧ್ಯದಲ್ಲೇನಿಮ್ಮಿ ತನ್ನದೇ ಒಂದು ಹೂವಿನ ತೋಟ ಮಾಡಿಟ್ಟಿದ್ದಳಂತೆಯಾವ ವಸ್ತು ಕೈಗೆ ಸಿಕ್ಕಿದರೂ ಸರಿಅದನ್ನ ಬಿಚ್ಚಿಮತ್ತೆ ಜೋಡಿಸುತ್ತಿದ್ದಳಂತೆಕುಂದಳ್ಳಿಯಿಂದ ದಿನಾ ಬಸ್ಸಿನಲ್ಲಿ ಸೋಮವಾರಪೇಟೆಗೆ ಬಂದುಪಿಯುಸಿ ವರೆಗೆ ಓದಿದ್ದಾಯಿತುಮುಂದೆ ಓದೋಕೆ ಅವಕಾಶವಿಲ್ಲದೆಪ್ರಕಾಶ ಮಾವನ ಜೊತೆ ಮದುವೆನೂ ಆಯ್ತು.

ಚಿಕ್ಕಂದಿನಲ್ಲಿಮೊಮ್ಮಕ್ಕಳಿಗೇನೂ ಪ್ರಕಾಶ ಮಾವನ ಹತ್ತಿರ ಜಾಸ್ತಿ ಸಲುಗೆ ಇರಲಿಲ್ಲಸೈಕಲ್ ಹೊಡೆಯಲು ಬಿಡೋದಿಲ್ಲಹುಲ್ಲಿನಲ್ಲಿ ಆಡಲು ಬಿಡೋದಿಲ್ಲ ಅನ್ನುವ ಹತ್ತು ಹಲವು ಕಾರಣಗಳಿಗೆ ಜಗಳವಾಡುತ್ತಲೇ ಬೆಳೆದೆವುಕಾಲೇಜಿಗೆ ಬರುವ ಹೊತ್ತಿಗೆಒಟ್ಟಿಗೆ ಸಿಗರೇಟ್ ಸೇದುವ ಸಲುಗೆ ಬೆಳೆದಿತ್ತುಮದುವೆಯಾದ ಮೇಲೆ ಪ್ರಕಾಶ ಮಾವನ ದೂರ್ವಾಸ ಮುನಿ ಅವತಾರ ಸಂಪೂರ್ಣವಾಗಿ ಬದಲಾಗಿತ್ತುಪಾಲಾದಾಗಅಜ್ಜನ ಮನೆ ಪ್ರಕಾಶ ಮಾವನಿಗೆ ಸಿಕ್ಕಿತ್ತುಅಜ್ಜಅಜ್ಜಿ ಇಲ್ಲದಿದ್ದರೂನಮಗೆ ಮನೆ ಹಾಗೇ ಉಳಿದುಕೊಂಡಿದೆಗೌರ ದೊಡ್ಡಮ್ಮನ ಮಕ್ಕಳನ್ನು ಬಿಟ್ಟರೂನಾವು ಹನ್ನೊಂದು ಜನ ಮೊಮ್ಮಕ್ಕಳಿದ್ದೇವೆಆಮೇಲೆ ನಮ್ಮ ಮಕ್ಕಳೂ ಇರ್ತಾರೆಅಮೇರಿಕಾದಲ್ಲಿರುವ ದೇವಿ ಪ್ರಸಾದ್ ಮತ್ತು ಮೇದಿನಿರಜಾದಲ್ಲಿ ಬಂದಾಗ ಕರ್ಕಳ್ಳಿಗೆ ಹೋಗುವ ಮಾತಾಡುತ್ತಾರೆ.

ನಿಮ್ಮಿಯ ಜೀವನವೇನೂ ಹೂ ಹಾಸಿಗೆಯಾಗಿರಲಿಲ್ಲಮೂರು ಜನ ಗಂಡು ಮಕ್ಕಳಲ್ಲಿಕೊನೆಯವನಾದ ಅಮೋಘ, 13ನೇ ವಯಸ್ಸಿನಲ್ಲಿ ತೀರಿಹೋದರಜಾ ದಿನ ಕಳೆಯಲ್ಲು ಚಂದ್ರಕಲಕ್ಕನ ಮನೆಗೆ ಹೋಗಿದ್ದ ಅವನು ಮತ್ತು ಚಂದ್ರಕಲಕ್ಕನ ಮಗ ವಿಶ್ವಾಸ್ಮನೆಯ ಹತ್ತಿರದ ಕುಮಾರಧಾರ ನದಿಯಲ್ಲಿ ಮುಳುಗಿಹೋದರುಮೊದಲನೆಯವನಾದ ಆಶಿಕ್ಎಲ್ ಎಲ್ ಬಿ ಪರೀಕ್ಷೆ ಬರೆದ ರಾತ್ರಿಯೇಕಾರಿನ ಅಪಘಾತದಲ್ಲಿ ತೀರಿಕೊಂಡಉಳಿದವನು ಆದಿತ್ಯ ಮಾತ್ರಈ ವಿಷಯದಲ್ಲಿ ಪ್ರಕಾಶ ಮಾವನನ್ನು ಎಷ್ಟೋ ಸಲ ಸಮಾಧಾನ ಮಾಡಿದ್ದೆಆದರೆನಿಮ್ಮಿಯ ಹತ್ತಿರ ಮಾತನಾಡುವ ಧೈರ್ಯ ಯಾವತ್ತೂ ಬರಲಿಲ್ಲ.

ಈ ಪುಟ್ಟಪೀಚು ದೇಹದಲ್ಲಿನಿಮ್ಮಿಗೆ ಅದೆಷ್ಟು ಶಕ್ತಿ ತುಂಬಿದೆ ಅನ್ನೊದು ನನಗೆ ಯಾವಾಗಲೂ ಆಶ್ಚರ್ಯಸದಾ ಲವಲವಿಕೆಯಿಂದನಗುನಗುತ್ತಾ ಓಡಾಡುವ ನಿಮ್ಮಿಯ ಹಿಂದೆ ಎಲ್ಲರೂ ಇರುತ್ತಾರೆನಿರ್ಮಲ ಕಾಫಿಅತ್ತೆ ಸ್ವಲ್ಪ ಬಿಸಿ ನೀರುನಿರ್ಮಲಾಂಟಿ ಅದು ಇದೆಯಾಇದು ಬೇಕಿತ್ತು..... ಹೀಗೇ ಸಾಲು ಸಾಲಾಗಿ ಬೇಡಿಕೆಗಳು ಬರುತ್ತಲೇ ಇರುತ್ತವೆಎಲ್ಲವನ್ನೂ ನಗುತ್ತಲೇ ಸಂಬಾಳಿಸುತ್ತಾಳೆಹರಿದು ಹಂಚಿಹೋದ ಕುಟುಂಬಗಳಲ್ಲಿ ಬೆಳೆಯುತ್ತಿರುವ ನಮ್ಮ ಮಕ್ಕಳಿಗೆ ಮತ್ತು ಈಗಿನ ಪೀಳಿಗೆಗೆನಿಮ್ಮಿಯಂಥಹ ವ್ಯಕ್ತಿತ್ವವನ್ನು ಊಹಿಸಿಕೊಳ್ಳಲೂ ಕಷ್ಟವಾಗಬಹುದು.

ಹದಿನೈದು ದಿನದ ಹಿಂದೆಎಂಟು ಜನ ಮೊಮ್ಮಕ್ಕಳುನಾಲ್ಕು ಹೆಣ್ಣು ಮಕ್ಕಳು ಮತ್ತು ಇಬ್ಬರು ಅಳಿಯಂದಿರು ಕರ್ಕಳ್ಳಿಯಲ್ಲಿ ಜಾಂಡಾ ಹೂಡಿದ್ದೆವುಅಮೇರಿಕಾದಿಂದ ಮೇದಿನಿವೈಯಕ್ಕನ (ವೈದೇಹಿಮಗಳುಚೊಚ್ಚಿಲು ಬಾಣಂತಿಯಾದ ಅನ್ವಿತ ಸಹ ಬರಲಾಗದಿದ್ದಕ್ಕೆ ಬೇಸರ ಮಾಡಿಕೊಂಡರುನಿಮ್ಮಿಗೂ ವಯಸ್ಸಾಗುತ್ತಿದೆ ಕಣೋಇಷ್ಟೊಂದು ಜನ ಬಂದಾಗ ಕಷ್ಟ ಆಗುತ್ತೆ ಅಂತ ಆದಿತ್ಯನಿಗೆ ಹೇಳಿದಾಗತೊಂದರೆ ಇಲ್ಲಅಡುಗೆ ಮಾಡುವವರಿಗೆ ಹೇಳಿದ್ದೀನಿ ಅಂತ ಹೇಳಿದ್ದಆ ಮಟ್ಟಿಗೆ ನಿಮ್ಮಿಯ ಕೆಲಸ ಸುಲಭವಾಗಿತ್ತು ಅಷ್ಟೆಇನ್ನುಳಿದ ಹಾಗೆನಿಮ್ಮಿಗೆ ಬಾಲಂಗೋಚಿಗಳು ನಾವಿದ್ದೆವು.

ನಿಮ್ಮಿ ಏನೂಂತ ಹೇಳೋಕೆ ಕಷ್ಟವಾಗುತ್ತೆಪ್ರಕಾಶ ಮಾವನ ಹೆಂಡತಿಆದಿತ್ಯನ ಅಮ್ಮಅವನ ಹೆಂಡತಿ ಅರ್ಪಿತಾಳ ಅತ್ತೆಇಬ್ಬರು ಮೊಮ್ಮಕ್ಕಳ ಅಜ್ಜಿನನ್ನ ನಿಮ್ಮಿಇನ್ನುಳಿದವರಿಗೆ ನಿರ್ಮಲತ್ತೆನಿರ್ಮಲಾಂಟಿ.... ಅವಳೇ ಒಂದು ಸಣ್ಣ ಪ್ರಪಂಚ ಅನ್ನಿಸೋಕೆ ಶುರುವಾಗುತ್ತೆ.

ಅಂದ ಹಾಗೆನಿಮ್ಮಿ ಹುಟ್ಟಿದ್ದು ಫೆಬ್ರವರಿ 14.... ನಮಗೆವ್ಯಾಲೆಂಟೈನ್ ದಿನಕ್ಕಿಂತನಿಮ್ಮಿ ಹುಟ್ಟು ಹಬ್ಬವೇ ದೊಡ್ಡದಾಗಿ ಕಾಣುತ್ತದೆ.



ಮಾಕೋನಹಳ್ಳಿ ವಿನಯ್ ಮಾಧವ








ಶನಿವಾರ, ಜನವರಿ 6, 2018

ಅಂಡಮಾನಿನಲ್ಲಿ ಅಲೆಮಾರಿಗಳು


ನಾನು ಎಲ್ಲಿಯವಳೂ ಅಲ್ಲ.... ಎಲ್ಲೆಡೆ ಸಲ್ಲುವವಳು





`ನೀನು ಇಲ್ಲಿಯವಳೆನಾ?’ ನೇರವಾಗಿ ಬಂದ ನನ್ನ ಪ್ರಶ್ನೆ ಶೃತಿಗೆ ಇಷ್ಟವಾಗಲಿಲ್ಲ ಅಂತ ಕಾಣುತ್ತೆ. ನನ್ನನ್ನೊಮ್ಮೆ ಮತ್ತೆ ಅಂಬಿಕಾಳನ್ನೊಮ್ಮೆ ನೋಡಿದವಳು ಒಂದು ಕ್ಷಣ ಮೌನವಾದಳು.
ಮೋಟಾರು ದೋಣಿಯ ಮೂತಿಯ ಮೇಲೆ ಚಕ್ಕಳ ಮಕ್ಕಳ ಹಾಕಿ ಕುಳಿತಿದ್ದ ಶೃತಿ, ಚಿತ್ರಗಳಲ್ಲಿನ ಕಾಳಿಯಂತೆ ಕಾಣುತ್ತಿದ್ದಳು. ಆದರೆ ಬೆಂಕಿಯನ್ನೇನು ಉಗುಳದೆ, ಸೌಮ್ಯವಾಗೇ ಇದ್ದಳು. ಬಿಸಿಲಿಗೆ ಚರ್ಮ ಕಂದಿಹೋಗಿದೆ ಅಂತ ಹೇಳೋದ್ದಕ್ಕಿಂತ, ಒಂದು ಸುತ್ತು ಸುಟ್ಟುಹೋಗಿದೆ ಅಂತಾನೇ ಹೇಳಬಹುದಿತ್ತು. ಸಮುದ್ರದ ನೀರು ಮತ್ತೆ ಬಿಸಿಲಿನ ಹೊಡೆತಕ್ಕೆ, ಕೂದಲು ಬ್ಲೀಚ್ ಆಗಿ, ವಿದೇಶಿಯರ ಕೂದಲ ಬಣ್ಣಕ್ಕೆ ತಿರುಗಿತ್ತು. ಆದರೂ, ಮುಖ ಲಕ್ಷಣವಾಗೇ ಇದೆ ಅಂತ ಅನ್ನಿಸ್ತು.
`ನಮ್ಮ ತಂದೆ ಕೊಲ್ಕತ್ತಾದವರು. ಅವರು ಸೈನ್ಯದಲ್ಲಿದ್ದುದ್ದರಿಂದ, ನಾನು ದೇಶದ ಎಲ್ಲಾ ಕಡೆ ಬೆಳೆದೆ. ಈಗ ಇಲ್ಲಿದ್ದೀನಿ. ಅದೊಂಥರಾ…. ನಾನು ಎಲ್ಲಿಯವಳೂ ಅಲ್ಲ, ಎಲ್ಲಾ ಕಡೆಗೂ ಸಲ್ಲುವವಳು,’ ಅಂತ ಮೌನ ಮುರಿದಳು.
`ನಿಂದೊಂದು ಫೋಟೋ ತಗೀಲಾ?’ ಅಂದಾಗ ಮತ್ತೆ ಗಲಿಬಿಲಿಗೊಂಡಳು.
`ನಾನು ಸಾಧಾರಣವಾಗಿ ಮನುಷ್ಯರ ಫೋಟೋ ತೆಗೆಯೋದಿಲ್ಲ. ನಿಂದೊಂದು ತೆಗೀಬೇಕು ಅಂತ ಅನ್ನಿಸ್ತಿದೆ,’ ಅಂದೆ. ನನ್ನ ಜೊತೆ ದನಿಗೂಡಿಸಿದ ಅಂಬಿಕಾ, `ಅವರು ಯಾವಾಗಲೂ ಕಾಡು ಪ್ರಾಣಿಗಳ ಹಿಂದೆ ಇರ್ತಾರೆ. ನಿಂದೇ ಮೊದಲು ಅಂತ ಕಾಣುತ್ತೆ, ಮನುಷ್ಯರದ್ದು ತೆಗೀಬೇಕೂಂತ ಅನ್ನಿಸಿರೋದು,’ ಅಂದಾಗ, ಶೃತಿ ನಕ್ಕು ಸುಮ್ಮನಾದಳು.
ನಾನು ಫೋಟೋ ತೆಗೆಯುವಾಗ ಮಾತು ಮುಂದುವರೆಸಿದ ಶೃತಿ, `ನಾನೂ ಜರ್ನಲಿಸ್ಟ್ ಆಗಿದ್ದೆ,’ ಅಂತ ತಣ್ಣಗೆ ಹೇಳಿದಳು.
`ಹೌದಾ? ಎಲ್ಲಿ?’ ಅಂತ ಕೇಳಿದೆ.
`ಮೊದಲು ಡೆಲ್ಲಿಯಲ್ಲಿ ವಾಲ್ ಸ್ಟ್ರೀಟ್ ಜರ್ನಲ್ ನಲ್ಲಿ ಕೆಲಸ ಮಾಡಿದೆ. ಆಮೇಲೆ ಮುಂಬಯಿಗೆ ಬಂದೆ. ನನ್ನ ಕೊನೆ ಕೆಲಸ `ಕ್ಯೂ3’ ಅನ್ನೋ ಸಂಸ್ಥೆಗೆ. ಅಲ್ಲಿ ಕೆಲಸ ಮಾಡಿದ್ದು ಬರೀ ಹತ್ತು ತಿಂಗಳು. ನೆಟ್ಟಗೆ ಇಲ್ಲಿ ಬಂದೆ. ಎರಡು ವರ್ಷ ಆಯ್ತುನೆಮ್ಮದಿಯಾಗಿದ್ದೇನೆ,’ ಅಂದಳು.
`ಮನೆಯವರು ಏನೂ ಹೇಳಲಿಲ್ಲವಾ?’ ಅಂತ ಕೇಳಿದೆ.
`ನಾನು ಯಾರಿಗೂ ಕೇಳಲಿಲ್ಲ. `ಕ್ಯೂ3’ ಗೆ ಸೇರೋ ಮೊದಲೇ ಸ್ಕೂಬಾ ಡೈವಿಂಗ್ ಕೋರ್ಸ್ ಮಾಡಿದ್ದೆ. ಮುಂಬಯಿಯಲ್ಲಿ ಕೆಲಸ ಮಾಡುವಾಗ ಅಂಡಮಾನ್ ನನ್ನನ್ನು ತುಂಬಾ ಕಾಡುತ್ತಿತ್ತು. ಒಂದು ದಿನ ಯೋಚನೆ ಮಾಡಿದವಳೇ, ಇಲ್ಲಿಗೆ ಬಂದು ಸೇರಿಕೊಂಡೆ.
ಯಾವುದಕ್ಕೂ ಮನೆಯಿಂದ ದುಡ್ಡು ಕೇಳಲಿಲ್ಲ. ಮೊದಲು ಅಮ್ಮ ಸ್ವಲ್ಪ ಹೆದರಿದ್ದರು. ನಾನೇ ಸಮಾಧಾನ ಮಾಡಿದೆ. ಮುಂಬಯಿಗಿಂತ ಇದು ಎಷ್ಟೋ ಕ್ಷೇಮ ಅಂತ ಹೇಳಿದೆ. ಅಲ್ಲಿ ಯಾವಾಗ ಬೇಕಾದರೂ ಅಪಘಾತವಾಗಬಹುದು. ರಾತ್ರಿ ಹೆಣ್ಣು ಮಕ್ಕಳು ಹೊರಗೆ ಹೋಗುವಾಗ ಯೋಚನೆ ಮಾಡಬೇಕು. ಇಲ್ಲಿ ಅಂಥಹದ್ದೇನೂ ಇಲ್ಲ. ಎಷ್ಟು ಹೊತ್ತಿಗೆ, ಎಲ್ಲಿ ಬೇಕಾದ್ರೂ ಒಬ್ಬಳೇ ತಿರುಗುತ್ತೇನೆ,’ ಅಂದಳು.

ಸ್ಕೂಬಾ ಡೈವಿಂಗ್ ಮಾಡ್ಬೇಕೂ ಅಂತ ಮಗಳು ಸೃಷ್ಟಿ ಹೇಳಿದಾಗ, ನನಗೂ ಮಾಡಬೇಕು ಅಂತ ಅನ್ನಿಸಿತ್ತು. ಲಕ್ಷದ್ವೀಪದ ಬಗ್ಗೆ ಯೋಚನೆ ಮಾಡುವಾಗ, ಗೆಳೆಯ ಸುಧಾಕರ ಶಾಸ್ತ್ರಿ ಅಂಡಮಾನಿನಲ್ಲಿ ಮಾಡಲು ಸಲಹೆ ನೀಡಿದರು. ಸರಿ, ಒಂದು ವಾರದ ಮಟ್ಟಿಗೆ ನನ್ನ ಅಂಡಮಾನಿನ ಪ್ರವಾಸದ ಮೂರನೇ ದಿನದಂದು ಸ್ಕೂಬಾ ಡೈವಿಗೆ ಹೋದೆವು.
ಅಂಡಮಾನಿಗೆ ತಲುಪಿದ ಮೊದಲನೇ ದಿನ ಪೋರ್ಟ್ ಬ್ಲೇರ್ ನಲ್ಲೇ ಉಳಿದುಕೊಂಡೆವು. ಮಾರನೇ ದಿನ, ಹ್ಯಾವ್ ಲಾಕ್ ದ್ವೀಪಕ್ಕೆ ಬಂದು, ಬೇರ್ ಫುಟ್ ರೆಸಾರ್ಟ್ ನಲ್ಲಿ ಉಳಿದುಕೊಂಡೆವು. ಅಲ್ಲೇ ಗೊತ್ತಾಗಿದ್ದು ನಮಗೆ…. ಬೇರ್ ಫೂಟ್ ಸಮುದ್ರ ಕ್ರೀಡೆಗಳನ್ನು ನೆಡೆಸುವ ದೊಡ್ಡ ಸಂಸ್ಥೆ ಅಂತ. ಬೇರೆ ಸಣ್ಣ ಸಣ್ಣ ಸಂಸ್ಥೆಗಳಿದ್ದರೂ, ಬೇರ್ ಫೂಟ್ ತುಂಬಾನೇ ದೊಡ್ಡ ಸಂಸ್ಥೆ.
ಸಾಯಂಕಾಲ ರೆಸಾರ್ಟ್ ಗೆ ಸಮೀರ್ ಮತ್ತು ಶೃತಿ ಬಂದರು. ಯಾರಿಗೆ ಸಮುದ್ರ ಕ್ರೀಡೆಗಳಲ್ಲಿ ಆಸಕ್ತಿ ಇರುತ್ತೋ, ಅವರು ಅವರು ಹೆಸರು ನೊಂದಾಯಿಸಿಕೊಳ್ಳಬಹುದಿತ್ತು. ಮಾರನೇ ದಿನ ಬೆಳಗ್ಗೆ ಬೇರ್ ಫೂಟ್ ಇನ್ನೊಂದು ಕೇಂದ್ರಕ್ಕೆ – ಸ್ಕೂಬಾ ಸೆಂಟರ್ ಗೆ ಹೋದಾಗ, ಸಮೀರ್ ಮತ್ತು ಶೃತಿ ಕಾಯುತ್ತಿದ್ದರು. ಅವರ ಜೊತೆ ವಿದೇಶಿಯನಾದ ಮಾರ್ಕ್ ಮತ್ತೆ ಇನ್ನಿಬ್ಬರು ಹುಡುಗರೂ ಇದ್ದರು. ಒಟ್ಟು ಆರು ಜನ ನಾವು ಮತ್ತೆ ಏಳೆಂಟು ಜನ ನಮ್ಮ ತರಬೇತುದಾರರನ್ನು ಹೊತ್ತ ಮೋಟಾರು ದೋಣಿ ಸ್ಕೂಬಾ ಮಾಡುವ ಜಾಗದ ಕಡೆ ಹೊರಟಿತು. ನಮ್ಮ ಜೊತೆ ಇದ್ದವರೆಲ್ಲ ಹುಡುಗಾಟದ ವಯಸ್ಸಿನವರು ಅಂತ ಅನ್ನಿಸಿತ್ತು. ನಾವೆಲ್ಲ ದೋಣಿಯಲ್ಲಿ ನೆರಳು ಹುಡುಕಿ ಕುಳಿತಿದ್ದರೆ, ಇವರೆಲ್ಲ ಬಿಸಿಲನ್ನು ಹುಡುಕಿಕೊಂಡು ಹೋಗಿ ಕೂತಿದ್ದರು. ಶೃತಿಯಂತೂ, ದೋಣಿಯ ಮೂತಿಯ ಮೇಲೆ ಚಕ್ಕಳ ಮಕ್ಕಳ ಹಾಕಿದವಳು, ಸ್ಕೂಬಾ ಮಾಡುವ ಜಾಗ ಬರುವವರೆಗೆ ಕೆಳಗಿಳಿಯಲಿಲ್ಲ.
 ಮೊದಲನೇ ಸುತ್ತು ಸ್ಕೂಬಾಗೆ ನನ್ನ ಕುಟುಂಬವನ್ನು ಕರೆದುಕೊಂಡು ಹೋದರು. ಎರಡನೇ ಸುತ್ತಿಗೆ, ಇನ್ನೊಂದು ಜೋಡಿಯನ್ನು ಕರೆದುಕೊಂಡು ಹೋದರು. ಆಗ ದೋಣಿಯಲ್ಲಿ ಶೃತಿ ನಮ್ಮ ಜೊತೆ ಉಳಿದುಕೊಂಡಳು.
`ನಾನೊಬ್ಬಳೇ ಅಲ್ಲ. ಇಲ್ಲಿ ಎಲ್ಲರೂ ಬೇರೆ ಬೇರೆ ಜೀವನಗಳಿಂದ ಬಂದವರು. ಇಲ್ಲಿಗೆ ಬರೋಕೆ ಮುಂಚೆ, ಸಮೀರ್ ` ಆಂಡ್ ಎಂಅಡ್ವರ್ಟೈಸ್ ಮೆಂಟ್ ಕಂಪನಿಯಲ್ಲಿ, ಡೆಲ್ಲಿಯಲ್ಲಿ ಕೆಲಸ ಮಾಡುತ್ತಿದ್ದ. ಒಳ್ಳೆಯ ಹುದ್ದೆಯಲ್ಲೇ ಇದ್ದ. ಒಂದು ದಿನ ಎಲ್ಲವನ್ನೂ ಬಿಟ್ಟು ಇಲ್ಲಿಗೆ ಬಂದು ಕೆಲಸಕ್ಕೆ ಸೇರಿದ. ಹಾಗೇ, ಕೆಲವರು ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದವರೂ ಇಲ್ಲಿಗೆ ಬಂದು ಸೇರಿದ್ದಾರೆ. ಮುಂಚೆಲ್ಲ ಎಲ್ಲಾದರೂ ಕೆಲಸ ಮಾಡುತ್ತಿದ್ದವರು ಮಾತ್ರ ಇಲ್ಲಿಗೆ ಬಂದು ಕೆಲಸಕ್ಕೆ ಸೇರುತ್ತಿದ್ದರು. ಈಗ ಬದಲಾಗಿದೆ. ಜನಗಳಿಗೆ ಸ್ಕೂಬಾ ಬಗ್ಗೆ ತಿಳುವಳಿಕೆ ಜಾಸ್ತಿಯಾಗಿದೆಯಲ್ಲ, ಕೆಲವರು ಕಾಲೇಜು ಮುಗಿಸಿ ನೇರವಾಗಿ ಬಂದು ಇಲ್ಲಿ ಕೆಲಸಕ್ಕೆ ಸೇರುತ್ತಿದ್ದಾರೆ. ಬೇರ್ ಫೂಟ್ ದೊಡ್ಡ ಸಂಸ್ಥೆ ಮತ್ತು ಈಗ ಅಂಡಮಾನಿನ ಡಿಗ್ಲಿಪುರ ಮತ್ತೆ ಚೆನೈನಲ್ಲೂ ಸ್ಕೂಬಾ ಶುರು ಮಾಡಿದ್ದಾರೆ,’ ಅಂದಳು.
ಸ್ಕೂಬಾಗೆ ಇತ್ತೀಚಿನವರೆಗೆ ಅಂಥಾ ಹೆಗ್ಗಳಿಕೆಯೇನೂ ಇರಲಿಲ್ಲ. ಆದರೆ, ಪ್ಯಾಡಿ ಸಂಸ್ಥೆ (Professional Association for Diving Instructors) ಅಸ್ತಿತ್ವಕ್ಕೆ ಬಂದ ಮೇಲೆ, ಅದರದೇ ಆದ ಒಂದು ಪ್ರಪಂಚ ಸೃಷ್ಟಿಯಾಗಿದೆ. ಪ್ರಪಂಚದ ಎಲ್ಲಾ ಸ್ಕೂಬಾ ಚಟುವಟಿಕೆಗಳನ್ನು ಗಮನಿಸುತ್ತಾ, ಅವುಗಳ ತರಬೇತುದಾರರಿಗೆ ಪ್ರಮಾಣಿಕರಣ ಮಾಡುತ್ತದೆ. ಹಾಗಾಗಿ, ಈಗ ಸ್ಕೂಬಾದಲ್ಲೂ ವೃತ್ತಿಪರತೆ ಶುರುವಾಗಿದೆ, ಅಂತ ಶೃತಿ ಹೇಳಿದಳು.
ಆನಂತರ ಶೃತಿ ಮತ್ತು ಅಂಬಿಕಾ ನೆಡುವೆ ಹೆಂಗಸರ ಮಾತುಕತೆ ಶುರುವಾಯ್ತು. `ನಾವು ವರ್ಷಕೊಮ್ಮೆ ಒಂದು ತಿಂಗಳು ಊರಿಗೆ ಹೋಗಿ ಬರುತ್ತೇವೆ. ಹಾಗೆ ಬರೋವಾಗ ಚರ್ಮ ಸ್ವಲ್ಪ ಬೆಳ್ಳಗಾಗಿ, ನಮ್ಮ ಕೂದಲು ಕಪ್ಪಾಗಿ ಬರುತ್ತೇವೆ. ಈ ಕೂದಲಿನ ಬಣ್ಣ ಇದೆಯಲ್ಲ, ಇದು ಸಮುದ್ರದ ನೀರು ಮತ್ತೆ ಇಲ್ಲಿನ ಬಿಸಿಲಿಗೆ ಬ್ಲೀಚ್ ಆಗಿರೋದು. ಅಲ್ಲಿ ಹೋದಾಗ ನಮ್ಮ ಚಿಕ್ಕಮ್ಮ ಎಲ್ಲ ಹೇಳ್ತಿರ್ತಾರೆ…. ಥರ ಕೂದಲು ಮಾಡ್ಕೊಳ್ಳೋಕೆ ಇಲ್ಲಿನ ಹುಡುಗಿಯರು ಎಷ್ಟೆಲ್ಲ ಖರ್ಚು ಮಾಡ್ತಾರೆನಿಂಗೆ ಅದಾಗೇ ಬರುತ್ತೆ ಅಂತ. ಈ ಥರ ಬ್ಲೀಚ್ ಆಗೋದು ಕೂದಲಿಗೆ ಒಳ್ಳೆಯದಲ್ಲ… ಒಂಥರಾ ಪುಡಿ ಪುಡಿಯಾಗುತ್ತೆ… ಏನೂ ಮಾಡೋಕ್ಕಾಗೋಲ್ಲ.’
ನಾನು ಮೊದಲನೇ ಸಲ ಸ್ಕೂಬಾಗೆ ಹೋದದ್ದು ಟರ್ಟಲ್ ಬೀಚಿನಲ್ಲಿ…. ಸಮೀರ್ ಜೊತೆ. ಎರಡನೇ ಸಲ ಸ್ಕೂಬಾಗೆ ಲೈಟ್ ಹೌಸ್ ಹತ್ತಿರ ಹೋದಾಗ, ನನ್ನನ್ನು ಶೃತಿ ನೀರಿನೊಳಗೆ ಕರೆದುಕೊಂಡು ಹೋದಳು. ಮೊದಲನೇ ಸಲ ಹೋದಾಗ ಒಂದು ಆಕ್ಟೋಪಸ್ ನೋಡಿದ್ದೆ. ಸಲ, ಲಯನ್ ಫಿಶ್ ಮತ್ತು ದೊಡ್ಡ ದೊಡ್ಡ ಕಪ್ಪೆಚಿಪ್ಪುಗಳನ್ನೂ ನೋಡಿದೆ. ಮೇಲಕ್ಕೆ ಬರೋ ಹೊತ್ತಿಗೆ ಸುಸ್ತಾಗಿದ್ದೆ.
ಸ್ಕೂಬಾ ಮುಗಿಸಿ ಕ್ಯಾಂಪಿನ ಕಡೆಗೆ ವಾಪಾಸ್ ಹೋಗುವಾಗ ಶೃತಿ ಮಾತಾಡಿದ್ದನ್ನೇ ಯೋಚಿಸುತ್ತಿದ್ದೆ. ಶೃತಿ, ಸಮೀರ್, ಮಾರ್ಕ್ ಎಲ್ಲರೂ ಒಂಥರಾ ಅಲೆಮಾರಿಗಳಂತೆ ಕಾಣಿಸೋಕೆ ಶುರುವಾದರು. ಎಪ್ಪತ್ತು-ಎಂಬತ್ತರ ದಶಕಗಳಲ್ಲಿ ಪ್ರಪಂಚ ಕಂಡ ಜಿಪ್ಸಿಗಳು, ಓಶೋ ಮತ್ತು ಹರೇ ಕೃಷ್ಣ ಪಂತದಂತೆ, ಸ್ಕೂಬಾನೂ ಒಂದು  ಅಲೆಮಾರಿ ಜಗತ್ತು ಅನ್ನಿಸೋಕೆ ಶುರುವಾಯ್ತು.
ಆದರೆ, ಅದಕ್ಕೂ, ಇದಕ್ಕೂ ಒಂದು ವ್ಯತ್ಯಾಸವಿದೆ. ಪ್ರಪಂಚಗಳಿಗೆ ಹೋದವರು ಸಮಾಜವನ್ನು ಹೇಗೆ ತಿರಸ್ಕರಿಸಿದ್ದರೋ, ಸಮಾಜವೂ ಅವರನ್ನು ತಿರಸ್ಕರಿಸಿತ್ತು. ಅವರುಗಳ ಜೀವನ ಶೈಲಿಯಲ್ಲಿ ಶಿಸ್ತು ಅನ್ನೋದು ಇರಲಿಲ್ಲ ಮತ್ತು ಡ್ರಗ್ಸ್ ಅನ್ನೋದು ಜೀವನದ ಶೈಲಿ ಅನ್ನೋ ಆರೋಪ ಹೊತ್ತಿದ್ದರು.
ಆದರೆ, ಅಲೆಮಾರಿಗಳ ಶಿಸ್ತು ಮತ್ತು ಕಾರ್ಯಕ್ಷಮತೆಯನ್ನು ಯಾರೂ ಪ್ರಶ್ನಿಸಲಾಗುವುದಿಲ್ಲ. ಇವರುಗಳು ಸಮಾಜವನ್ನೂ ತಿರಸ್ಕರಿಸಿಲ್ಲ, ಅಥವಾ ಸಮಾಜವೂ ಇವರನ್ನು ತಿರಸ್ಕರಿಸಲು ಕಾರಣಗಳಿಲ್ಲ. ವರ್ಷದಲ್ಲಿ ಒಂದೆರೆಡು ತಿಂಗಳು ಪ್ರವಾಸಿಗರಿಗೆ ದ್ವೀಪಗಳು ಮುಚ್ಚಿರುತ್ತವೆ. ಆಗ ಇವರೆಲ್ಲ ತಮ್ಮ ಕುಟುಂಬದ ಬಳಿ ಹೋಗಿ ಬರುತ್ತಾರೆ.
ಇವರೆಲ್ಲ ಸಮುದ್ರವನ್ನು ಅದರಷ್ಟೇ ಅಗಾಧವಾಗಿ ಪ್ರೀತಿಸ್ತಾರೆ ಅನ್ನೋದು ಗೊತ್ತಾಯ್ತು. ಬರುವ ಪ್ರವಾಸಿಗಳಿಗೆಲ್ಲ ಹೇಳೋದಿಷ್ಟೆ. `ಇದು ನಮ್ಮ ಮನೆ ಅಲ್ಲ. ನಾವಿಲ್ಲಿ ಅತಿಥಿಗಳು. ಇದು ಸಮುದ್ರ ಜೀವಿಗಳ ಮನೆ. ಅವುಗಳನ್ನು ಟೀಕಿಸಬೇಡಿ… ಅವುಗಳಿಗೆ ತೊಂದರೆ ಕೊಡಬೇಡಿ. ದಯವಿಟ್ಟು ಪ್ಲಾಸ್ಟಿಕ್ ಮತ್ತು ಇತರೆ ವಸ್ತುಗಳನ್ನು ಸಮುದ್ರಕ್ಕೆ ಹಾಕಬೇಡಿ. ಅವುಗಳನ್ನು ನೋಡಿ ಸಂತೋಷ ಪಡಿ.’ ಅವರು ಹೇಳಿದಂತೆ ನೆಡೆದುಕೊಳ್ಳುತ್ತಿದ್ದರು ಕೂಡ.
ಅದಕ್ಕಿಂತ ಹೆಚ್ಚಾಗಿ, ಇವರೆಲ್ಲ ಒಂದು ವೃತ್ತಿಯಲ್ಲಿ ಇದ್ದು ತಮ್ಮ ಜೀವನವನ್ನು ತಾವೇ ದುಡಿದುಕೊಳ್ಳುತ್ತಾರೆ. ವೃತ್ತಿಗೆ ಒಂದು ಬಂಡವಾಳಶಾಹಿ ಮತ್ತು ಜಾಗತೀಕರಣದ ಸ್ಪರ್ಷವಿದೆ. ಹಾಗಾಗಿ, ಈ ಅಲೆಮಾರಿಗಳಿಗೆ ನಮ್ಮ ಪ್ರಮಾಣಿಕರಣ ಬೇಕಾಗೊಲ್ಲ ಅಂಥ ಅನ್ನಿಸ್ತು.
ಸ್ಕೂಬಾ ಸೆಂಟರ್ ಗೆ ವಾಪಾಸ್ ಬಂದಾಗ, ನನಗೆ ನನ್ನ ಕಣ್ಣನ್ನೇ ನಂಬಲಾಗಲಿಲ್ಲ. ಹೊರಡುವಾಗ, ನೂರೆಂಟು ಪೇಪರ್ ಗಳಿಗೆ ಸಹಿ ಹಾಕಿ, ಸಮೀರ್ ಮತ್ತು ಮಾರ್ಕ್ ಜೊತೆಯಲ್ಲಿ ಸ್ಕೂಬಾ ಮಾಡೋದರ ಬಗ್ಗೆ ತಿಳುವಳಿಕೆ ತೆಗೆದುಕೊಳ್ಳುವ ಗಡಿಬಿಡಿಯಲ್ಲಿ ಏನನ್ನೂ ಗಮನಿಸಿರಲಿಲ್ಲ. ಆದರೆ, ಈಗ ನೋಡಿದರೆ ಅದೊಂದು ಚಟುವಟಿಕೆಗಳ ಕೇಂದ್ರ. ನಾವು ಬಟ್ಟೆ ಬದಲಿಸುವ ಗಡಿಬಿಡಿಯಲ್ಲಿದ್ದಾಗ ನಮ್ಮ ಜೊತೆ ಬಂದ ಶೃತಿ, ಸಮೀರ್ ಮತ್ತೆ ಇನ್ನೆರೆಡು ಹುಡುಗರು ನಿಧಾನವಾಗಿ ಗುಂಪಿನಲ್ಲಿ ಕರಗಿಹೋಗಿದ್ದರು.
ಆದರೆ, ಅಲ್ಲಿ ಎಷ್ಟೋ ಶೃತಿ, ಸಮೀರ್, ಮಾರ್ಕ್ ಗಳು ಮತ್ತು ವಿದೇಶಿ ಹುಡುಗಿಯರು, ಯಂತ್ರಗಳಂತೆ ತಮ್ಮ ಕೆಲಸ ಮಾಡುತ್ತಿದ್ದರು. ಅವರೆಲ್ಲರೂ ಅಲ್ಲಿನ ಸ್ಕೂಬಾ ತರಬೇತುದಾರರು ಮತ್ತು ಬೇರ್ ಫೂಟ್ ಸಂಸ್ಥೆಯ ಸಿಬ್ಬಂದಿ ಅಂತ ಗೊತ್ತಾಯ್ತು. ಜಾಗತೀಕರಣದ ಪ್ರಭಾವಕ್ಕೊಳಗಾಗಿ, ಕಾಂಕ್ರೀಟ್ ಕಾಡುಗಳಿಂದ ತಪ್ಪಿಸಿಕೊಂಡು, ಪ್ರಕೃತಿಯತ್ತ ಬಂದ ಇವರು, ಜಾಗತೀಕರಣದ ಪ್ರಭಾವಳಿಗಳಿಂದ ಹೊರ ಬರಲಾಗಿಲ್ಲ. ಬಂಡವಾಳಶಾಹಿಯಿಂದಲೂ ಬಿಡುಗಡೆಯಿಲ್ಲ. ಯಾಕೆಂದರೆ, ಇಲ್ಲಿ ಬಂಡವಾಳ ಹೂಡಿರುವವರೇ ಬೇರೆ ಮತ್ತು ಇವರೆಲ್ಲ ಆ ಬಂಡವಾಳದ ನೆರಳಲ್ಲೇ ಬದುಕುತ್ತಿರುವವರು. ಆದರೂ, ಸಂಬಳ, ಸವಲತ್ತು ಮತ್ತೆ ಕಾರ್ಪರೇಟ್ ಕಂಪನಿಯ ಕೆಲಸ ಅಂತ ಜೀವನವಿಡೀ ಕಂಪ್ಯೂಟರ್ ಮುಂದೆ ಕುಳಿತುಕೊಂಡು, ವೈಯಕ್ತಿಕ ಜೀವನದ ಬಗ್ಗೆ ನೂರೆಂಟು ಪ್ರಶ್ನೆಗಳನ್ನು ತಲೆ ಮತ್ತು ಹೃದಯದಲ್ಲಿ ತುಂಬಿಟ್ಟುಕೊಂಡು ತೊಳಲಾಡುತ್ತಾ, ಭವಿಷ್ಯದ ಅನಿಶ್ಚಿತತೆಯನ್ನು ಮರೆಯಲು ಜಾಗ ಹುಡುಕುತ್ತಿರುವ ಈಗಿನ ನಗರವಾಸಿಗಳಿಗಿಂತ ಎಷ್ಟೋ ವಾಸಿ ಅನ್ನಿಸ್ತು.
ತೇಜಸ್ವಿ ಒಮ್ಮೆ ಹೇಳಿದ ಮಾತು ನೆನಪಾಯ್ತು. ಜಾಗತೀಕರಣ ಮತ್ತೆ ಬಂಡವಾಳಶಾಹಿಗಳ ವಿರುದ್ದ ಹೋರಾಡೋದ್ರಲ್ಲಿ ಅರ್ಥವಿಲ್ಲ ಅಂತ ಅನ್ನಿಸುತ್ತೆ. ಅವು ಅನಿವಾರ್ಯವಾಗಿಬಿಟ್ಟಿವೆ. ನಾವು ಮತ್ತು ನಮ್ಮ ರೈತರು ಕಲಿಯಬೇಕಾದ್ದೇನೆಂದರೆ, ಈ ಜಾಗತೀಕರಣದ ಜಗತ್ತಿನಲ್ಲಿ ನಮ್ಮ ಅಸ್ತಿತ್ವ ಉಳಿಸಿಕೊಳ್ಳುವುದು.
ಇವರೆಲ್ಲ ಅದನ್ನು ಪ್ರಾಯಶ: ಜೀವನದಲ್ಲಿ ಅರ್ಥಮಾಡಿಕೊಂಡಿದ್ದಾರೆ ಅನ್ನಿಸ್ತು. ಇವರನ್ನೆಲ್ಲ ನಾನು ಒಂದೇಸಲಕ್ಕೆ ಒಪ್ಪಿಕೊಂಡಿದ್ದೆ.
ಶೃತಿಯಂತೆ ಸುಟ್ಟುಹೋದ ಐದಾರು ಭಾರತೀಯ ಹುಡುಗಿಯರಿದ್ದರೆ, ಸಮೀರ್ ಮತ್ತು ಮಾರ್ಕ್ ನಂಥವರೂ ಬೇಕಾದಷ್ಟಿದ್ದರು. ಎಲ್ಲರೂ ಅವರವರ ಕೆಲಸಗಳಲ್ಲಿ ತೊಡಗಿದ್ದರು. ಯಾರೂ, ಯಾರನ್ನೂ ಗಮನಿಸುವ ಸ್ಥಿತಿಯಲ್ಲಿರಲಿಲ್ಲ. ಸ್ಕೂಬಾ ಮಾಡಬೇಕೆಂದು ಬಂದವರಿಗೆ ಅದರ ವಿಷಯ ವಿವರಿಸುತ್ತ, ತಮ್ಮ ಪಾಡಿಗೆ ತಾವಿದ್ದರು. ನಾನು ಯಾವುದೋ ಭ್ರಮಾಲೋಕದಲ್ಲಿ ತೇಲುತ್ತಿದ್ದೇನೆ ಅನ್ನಿಸಿತು ಮತ್ತೆ ಇವರೆಲ್ಲರೂ ಆ ಲೋಕದ ಪಾತ್ರದಾರಿಗಳು ಅಂತ ಅನ್ನಿಸ್ತು.
ನಾನು ಸಮುದ್ರಕ್ಕೆ ಹೊರಡುವಾಗ, ಸಮೀರ್ ನಿಂದ ಟೋಪಿಯನ್ನು ಎರವಲು ಪಡೆದಿದ್ದೆ. ಬಟ್ಟೆ ಬದಲಿಸಿದ ನಂತರ, ಅದನ್ನು ವಾಪಾಸ್ ಕೊಡಲು ಅವನನ್ನು ಹುಡುಕುತ್ತಾ ಹೊರಟೆ. ಸಮೀರ್ ಸಿಗಲಿಲ್ಲ, ಆದರೆ, ಮಾರ್ಕ್ ಸಿಕ್ಕ.
ಟೋಪಿಯನ್ನು ಮಾರ್ಕ್ ಕೈಯಲ್ಲಿ ಕೊಟ್ಟು, ಸಮೀರ್ ಗೆ ತಲುಪಿಸುವಂತೆ ಹೇಳಿದೆ. ಹಾಗೇ, ನೀನು ಎಲ್ಲಿಯವನು ಅನ್ನೋ ಪ್ರಶ್ನೆ ನಾಲಿಗೆ ತುದಿಯವರೆಗೆ ಬಂತು. ಅಷ್ಟರಲ್ಲಿ ಶೃತಿಯ ಉತ್ತರ ನೆನಪಾಯ್ತು. `ನಾನು ಎಲ್ಲಿಯವಳೂ ಅಲ್ಲ, ಆದರೆ ಎಲ್ಲಾ ಕಡೆಗೂ ಸಲ್ಲುವವಳು.’
ಪ್ರಶ್ನೆಯನ್ನು ಹಾಗೆ ನುಂಗಿ, ಸುಮ್ಮನೆ ನಕ್ಕು ಮಾರ್ಕ್ ಗೆ ಥ್ಯಾಂಕ್ಸ್ ಹೇಳಿ ವಾಪಾಸ್ಸಾದೆ.

ಮಾಕೋನಹಳ್ಳಿ ವಿನಯ್ ಮಾಧವ.