ನನ್ನ ಪ್ರೀತಿಯ ನಿಮ್ಮಿ
`ಅದೇನೋ ಕಣಾ... ಇಂಗ್ಲಿಷ್ ಒಂದು ಕಲೀದೇ ಇದ್ದಕ್ಕೆ ಬೇಜಾರಿದೆ ನೋಡು.... ಇಲ್ದೆ ಹೋದ್ರೆ ಏನೂ ತೊಂದ್ರೆ ಇಲ್ಲ’
`ಇಲ್ಲ ಕಣಾ... ನಂಗೆ ಇಂಗ್ಲಿಷ್ ಬರಲ್ಲ ಅಂತ ಒಂದು ಅವಾರ್ಡ್ ಬರೋದು ತಪ್ಪಿಹೋಯ್ತು. ಮಹಾರಾಷ್ಟ್ರದಲ್ಲಿ ಪಾಟೀಲ್ ಯುನಿವರ್ಸಿಟಿ ಅಂತ ಇದೆಯಲ್ಲ, ಅವರು ಪೇಪರಿನಲ್ಲಿ ಹಾಕಿ, ಅಪ್ಲಿಕೇಷನ್ ಕರೆದಿದ್ರು. ಆದಿನ ಹಿಡ್ಕೊಂಡು ಅಪ್ಲಿಕೇಷನ್ ಹಾಕಿ, ಇಂಟರ್ ವ್ಯೂನಲ್ಲಿ ಕೊನೆ ಐದರವರೆಗೂ ಹೋಗಿದ್ದೆ. ಅವ್ರು ಇಂಗ್ಲಿಷ್ ಮತ್ತೆ ಹಿಂದಿಯಲ್ಲಿ ಪ್ರಶ್ನೆ ಕೇಳಿದ್ರು, ನಂಗೆ ಉತ್ರ ಹೇಳೋಕೆ ಆಗ್ಲಿಲ್ಲ. ಆ ಅವಾರ್ಡ್ ಕನ್ನಂಗಿ ಶೇಷಾದ್ರಿಯಣ್ಣಂಗೂ ಬಂದಿತ್ತು. ಅವ್ರೇ ಹೇಳಿದ್ರು... ನಿಮಗೆ ಇಂಗ್ಲಿಷ್ ಬಂದಿದ್ರೆ, ಅವಾರ್ಡ್ ಸಿಕ್ತಿತ್ತು ಅಂತ,’ ಎಂದು ನಿಮ್ಮಿ ಹೇಳಿದಾಗ, ಹಾಗೇ ತಲೆ ಎತ್ತಿ ಅವಳ ಮುಖವನ್ನೇ ನೋಡಿದೆ.
`ಅವಾರ್ಡ್ ಸಿಗದಿದ್ರೆ ಕತ್ತೆ ಬಾಲ, ನಿನಗೆ ಅವಾರ್ಡ್ ಕೊಡದೇ ಹೋದ್ರೆ ಅದು ಅವರಿಗೇ ಲಾಸ್,’ ಅಂತ ಹೇಳೋಕೆ ಹೋದವನು, ನಿಮ್ಮಿಯ ನಿರಾಸೆ ಮುಖ ನೋಡಿ ಸುಮ್ಮನಾದೆ.
ನಿಮ್ಮಿ ಉರುಫ್ ನಿರ್ಮಲತ್ತೆ, ಅಮ್ಮನ ತಮ್ಮ ಪ್ರಕಾಶ ಮಾವನ ಹೆಂಡತಿ. ಸೋಮವಾರಪೇಟೆಯಿಂದ ನಾಲ್ಕು ಕಿಲೋಮೀಟರ್ ದೂರದ ಕರ್ಕಳ್ಳಿ ನನ್ನ ಅಜ್ಜಿಯ ಮನೆ. ನಾನು ಹೈಸ್ಕೂಲಿನಲ್ಲಿದ್ದಾಗಲೇ ಅಜ್ಜ, ಅಜ್ಜಿ ಇಬ್ಬರೂ ತೀರಿಹೋದರು. ಅಮ್ಮನ ಅಣ್ಣ ತಿಮ್ಮೇಮಾವ, ಅಕ್ಕ ಗೌರದೊಡ್ಡಮ್ಮನೂ ತೀರಿಹೋಗಿದ್ದಾರೆ. ಅಲ್ಲಿರೋದು ಅಮ್ಮನ ಅಣ್ಣ ಕಾಶೀಮಾವ ಮತ್ತೆ ಪ್ರಕಾಶ ಮಾವ ಮಾತ್ರ. ಅಮ್ಮನಿಗೆ ಇನ್ನೂ ಇಬ್ಬರು ಅಕ್ಕಂದಿರು ಮತ್ತೆ ಒಬ್ಬಳು ತಂಗಿ ಇದ್ದಾರೆ. ಕರ್ಕಳ್ಳಿ ಮೊಮ್ಮಕ್ಕಳೆಲ್ಲ, ಒಂದಲ್ಲ ಒಂದು ನೆಪ ಮಾಡಿಕೊಂಡು, ವರ್ಷಕ್ಕೋ, ಎರಡು ವರ್ಷಕ್ಕೋ ಒಂದು ಸಲ ಅಲ್ಲಿ ಸೇರ್ಕೊಳ್ಳುತ್ತೇವೆ.
ಹಾಗಂತ, ನಿಮ್ಮಿಯೇನು ಮುಸುರೆ ತೊಳೆದುಕೊಂಡು, ಅಡುಗೆ ಮಾಡಿಕೊಂಡು, ಮೂಲೆಯಲ್ಲಿ ಕೂತಿರುವ ಹೆಂಗಸೇನಲ್ಲ. ವೆನಿಲ್ಲಾ ಅನ್ನೋ ಮಾಯೆ ಮಲೆನಾಡನ್ನು ಆವರಿಸಿಕೊಂಡಾಗ, ಅದನ್ನು ಅದ್ಭುತವಾಗಿ ಕೃಷಿ ಮಾಡಿ, ಸಂಬಾರು ಮಂಡಳಿಯಿಂದ ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದಿದವಳು. ಗದ್ದೆಗೆ ನೀರು ಹತ್ತುದೇ ಇದ್ದಾಗ, ಅಲ್ಲೇ ಕೆರೆ ಮಾಡಿಸಿ, ಎರಡೂವರೆ ಎಕರೆಯಲ್ಲಿ, ಕಾಫಿ, ಮೆಣಸು, ಯಾಲಕ್ಕಿ, ತೆಂಗು, ಅಡಿಕೆ, ಬಾಳೆ ಮತ್ತು ಕೋಕಾವನ್ನು ಬೆಳೆದು ತೋರಿಸಿದವಳು. ಆ ಕೆರೆಯಲ್ಲಿ ಮೀನುಗಳನ್ನೂ ಸಾಕಿದಳು. ಇವತ್ತಿಗೂ, ಕರ್ಕಳ್ಳಿಗೆ ಹೋದಾಗ, ಆ ತೋಟಕ್ಕೆ ಒಂದು ಸಲವಾದರೂ ಹೋಗಿ ಬರುತ್ತೇನೆ. ಇದೇ ಜಾಗದ ಕೃಷಿಯ ಬಗ್ಗೆ ನಿಮ್ಮಿ ಮಹಾರಾಷ್ಟ್ರದ ಪ್ರಶಸ್ತಿಗೆ ಅರ್ಜಿ ಹಾಕಿದ್ದು.
ನಿಮ್ಮಿ ಸುಮ್ಮನೆ ಇರೋದನ್ನು ನಾನು ಒಂದು ಸಲವೂ ನೋಡಿಲ್ಲ. ತೋಟದಲ್ಲಿ ಏನಾದ್ರೂ ಹೊಸದು ಮಾಡುತ್ತಿರುತ್ತಾಳೆ, ಇಲ್ಲದೇ ಹೋದರೆ, ಮನೆ ಸುತ್ತ ಹೂಗಿಡಗಳನ್ನು ಸರಿ ಮಾಡ್ತಾ ಇರ್ತಾಳೆ. ಮನೆ ಹತ್ತಿರ ಬೆಳೆದ ದೊರೆ ಹಣ್ಣು (Passion Fruit), ಹಿರಳೆ ಹಣ್ಣುಗಳ ಜ್ಯೂಸ್ ಮಾಡಿ ಮಾರುತ್ತಾಳೆ. ಮಹಿಳಾ ಸಮಾಜದಲ್ಲಂತೂ ತುಂಬಾನೇ ಭಾಗವಹಿಸುತ್ತಾಳೆ ಮತ್ತು ಅವಳ ಅಧ್ಯಕ್ಷತೆಯಲ್ಲಿ ಒಂದು ಸಮುದಾಯ ಭವನವನ್ನೂ ಕಟ್ಟಿಸಿದ್ದಾಳೆ. ಸೋಮವಾರಪೇಟೆಯಲ್ಲಿ ಮಹಿಳಾ ಸಮಾಜ ಅಥವಾ ಇನ್ಯಾವುದಾದರೂ ಸಂಘಗಳು ವಸ್ತು ಪ್ರದರ್ಶನಗಳನ್ನು ಏರ್ಪಡಿಸಿದರೆ, ನಿಮ್ಮಿಯೂ ಒಂದು ಅಂಗಡಿ ಹಾಕುತ್ತಾಳೆ. ಶುರುವಾದ ಎರಡು, ಮೂರು ಘಂಟೆಗಳಲ್ಲಿ, ಅವಳು ಇಟ್ಟ ವಸ್ತುಗಳೆಲ್ಲ ಖಾಲಿಯಾಗಿ, ಸುತ್ತಾಡುತ್ತಿರುತ್ತಾಳೆ.
ಇಷ್ಟೆಲ್ಲ ಮಾಡಿದ ನಿಮ್ಮಿಯೇನೂ ಅನಾಮಿಕಳಾಗಿ ಬದುಕಿಲ್ಲ. ರಾಷ್ಟ್ರೀಯ ಪ್ರಶಸ್ತಿ ಬಂದ ಎರಡು ದಿನಗಳಲ್ಲೇ ಪಾವಗಡದಲ್ಲಿ ಒಂದು ದೊಡ್ಡ ರೈತರ ಸಮಾವೇಶವನ್ನು ಉದ್ದೇಷಿಸಿ ಮಾತನಾಡಿದ್ದಾಳೆ. ಸಂಬಾರ ಮಂಡಳಿಯವರು ನೆಡೆಸುವ ಕಾರ್ಯಾಗಾರಗಳಲ್ಲಿ, ಉದಯೋನ್ಮುಖ ಮತ್ತು ಪ್ರಗತಿಪರ ರೈತರಿಗೆ ತರಬೇತಿಯನ್ನೂ ಕೊಡುತ್ತಾಳೆ. ರೇಡಿಯೋ ಕಾರ್ಯಕ್ರಮಗಳಲ್ಲೂ ಭಾಗವಹಿಸಿದ್ದಾಳೆ ಮತ್ತು ಕೆಲವು ಪತ್ರಿಕೆಗಳಲ್ಲೂ, ಅವಳ ಬಗ್ಗೆ ಲೇಖನಗಳು ಬಂದಿವೆ. ಟಿವಿಯಲ್ಲೊಮ್ಮೆ, ಅಡುಗೆ ವಿಷಯದ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಧುಬಾನ ಮಾಡುವ ವಿಧಾನವನ್ನು ತೋರಿಸಿದ್ದಳು. ನಿಮ್ಮಿಯ ತೌರುಮನೆಯಾದ ಕುಂದಳ್ಳಿಯಲ್ಲಿ, ಅವಳ ತಮ್ಮ ಮಂಜು ಮಾವ ಮನೆ ಕಟ್ಟಬೇಕು ಅಂದಾಗ, ಅದಕ್ಕೆ ಒಂದು ಪ್ಲ್ಯಾನ್ ಮಾಡಿಕೊಟ್ಟಿದ್ದಾಳೆ. ಅದನ್ನು ನೋಡಿದ ಮನೆ ಕಟ್ಟುವ ಇಂಜಿನಿಯರ್, `ನೀವು ಯಾವ ಕಾಲೇಜಿನಲ್ಲಿ ಇಂಜಿನೀಯರಿಂಗ್ ಓದಿದ್ದು?’ ಅಂತ ನಿಮ್ಮಿಯನ್ನು ಕೇಳಿದ್ದಾನೆ. ಆಕೆ ಬರೀ ಪಿಯುಸಿ ವರೆಗೆ ಓದಿದ್ದು ಅಂತ ಗೊತ್ತಾದಾಗ, ಸ್ವಲ್ಪ ಹೊತ್ತು ನಂಬಲೇ ಇಲ್ಲವಂತೆ.
ನಾನೂ ಎಷ್ಟೋ ಸಲ ಯೋಚಿಸುತ್ತಿದ್ದೆ... ನಿಮ್ಮಿಗೆ ಇಷ್ಟೆಲ್ಲಾ ವಿಷಯ ಹೇಗೆ ಗೊತ್ತಿರುತ್ತೆ? ಅಂತ. ಒಂದು ಸಲ, ಬೆಳಗ್ಗೆ ಅಡುಗೆ ಮನೆ ಕಟ್ಟೆಯ ಮೇಲೆ ಕೂತ್ಕೊಂಡು ಕಾಫಿಗೆ ಕಾಯುತ್ತಿದ್ದೆ. ಒಂದು ಭರಣಿ ಮತ್ತೆ ಲೋಟ ಹಿಡಿದುಕೊಂಡು ಬಂದ ನಿಮ್ಮಿ, `ಈ ನೀರು ಒಂಚೂರು ಕುಡಿದು ನೋಡು,’ ಅಂದಳು.
ಏನೂ ವಿಶೇಷ ಕಾಣಲಿಲ್ಲ. `ಇದು ಸ್ವಾತಿ ಮಳೆಯ ನೀರು. ಸ್ವಾತಿ ಮಳೆ ನೀರು ಎಷ್ಟು ದಿನ ಇಟ್ಟರೂ ಕೆಡೋದಿಲ್ಲವಂತೆ, ಮತ್ತೆ ಎಷ್ಟೋ ಕಾಯಿಲೆಗಳು ಬರೋಲ್ಲವಂತೆ. ಮಲೆನಾಡಲ್ಲಿ ಸ್ವಾತಿ ಮಳೆ ಬರೋದಿಲ್ಲ. ಈ ವರ್ಷ ಬಂದಿತ್ತು. ಅದಕ್ಕೆ ಹಿಡಿದಿಟ್ಟಿದ್ದೆ,’ ಅಂದವಳೇ, ಅಡುಗೆ ಮನೆಯ ಕಪಾಟಿನಿಂದ ಒಂದು ದೊಡ್ಡ ಪುಸ್ತಕ ತೆಗೆದು, ಅದರಲ್ಲಿ ಒಂದು ಪುಟ ಹುಡುಕಿ, ನನ್ನ ಮುಂದೆ ಹಿಡಿದಳು. ಯಾವುದೋ ಪತ್ರಿಕೆಯಲ್ಲಿ ಸ್ವಾತಿ ಮಳೆಯ ಬಗ್ಗೆ ಬರೆದಿದ್ದ ಲೇಖನವನ್ನು ಕತ್ತರಿಸಿ ಅಂಟಿಸಿದ್ದಳು. ಅದನ್ನು ಓದಿ, ಹಾಗೇ ಆ ಪುಸ್ತಕವನ್ನು ತಿರುವಿ ಹಾಕಲು ಶುರು ಮಾಡಿದೆ. ಕೃಷಿ, ನೀರು, ಮಳೆ ಹಾಗೂ ತಂತ್ರಜ್ಞಾನದ ಬಗ್ಗೆ ಎಷ್ಟೋ ಲೇಖನಗಳನ್ನು ಸಂಗ್ರಹಿಸಿಟ್ಟಿದ್ದಳು. ಅದರಲ್ಲಿ ಎಷ್ಟೋ ವಿಷಯಗಳು ನನಗೆ ಗೊತ್ತೇ ಇರಲಿಲ್ಲ.
ನಿಮ್ಮಿ ಚಿಕ್ಕಂದಿನಿಂದಲೇ ಹೀಗಂತೆ. ಅವಳ ಊರು ಕುಂದಳ್ಳಿ ಒಂದು ಮಲೆನಾಡಿನ ಕಾಡಿನ ಮಧ್ಯದ ಕುಗ್ರಾಮ. ಮುಂಚೆಲ್ಲಾ, ಮಳೆಗಾಲದಲ್ಲಿ ಕೂತಿ, ಕುಂದಳ್ಳಿ ಕಡೆಗೆ ಯಾರೂ ಹೋಗುತ್ತಿರಲಿಲ್ಲ. ಆ ಕಾಡಿನ ಮಧ್ಯದಲ್ಲೇ, ನಿಮ್ಮಿ ತನ್ನದೇ ಒಂದು ಹೂವಿನ ತೋಟ ಮಾಡಿಟ್ಟಿದ್ದಳಂತೆ. ಯಾವ ವಸ್ತು ಕೈಗೆ ಸಿಕ್ಕಿದರೂ ಸರಿ, ಅದನ್ನ ಬಿಚ್ಚಿ, ಮತ್ತೆ ಜೋಡಿಸುತ್ತಿದ್ದಳಂತೆ. ಕುಂದಳ್ಳಿಯಿಂದ ದಿನಾ ಬಸ್ಸಿನಲ್ಲಿ ಸೋಮವಾರಪೇಟೆಗೆ ಬಂದು, ಪಿಯುಸಿ ವರೆಗೆ ಓದಿದ್ದಾಯಿತು. ಮುಂದೆ ಓದೋಕೆ ಅವಕಾಶವಿಲ್ಲದೆ, ಪ್ರಕಾಶ ಮಾವನ ಜೊತೆ ಮದುವೆನೂ ಆಯ್ತು.
ಚಿಕ್ಕಂದಿನಲ್ಲಿ, ಮೊಮ್ಮಕ್ಕಳಿಗೇನೂ ಪ್ರಕಾಶ ಮಾವನ ಹತ್ತಿರ ಜಾಸ್ತಿ ಸಲುಗೆ ಇರಲಿಲ್ಲ, ಸೈಕಲ್ ಹೊಡೆಯಲು ಬಿಡೋದಿಲ್ಲ, ಹುಲ್ಲಿನಲ್ಲಿ ಆಡಲು ಬಿಡೋದಿಲ್ಲ ಅನ್ನುವ ಹತ್ತು ಹಲವು ಕಾರಣಗಳಿಗೆ ಜಗಳವಾಡುತ್ತಲೇ ಬೆಳೆದೆವು. ಕಾಲೇಜಿಗೆ ಬರುವ ಹೊತ್ತಿಗೆ, ಒಟ್ಟಿಗೆ ಸಿಗರೇಟ್ ಸೇದುವ ಸಲುಗೆ ಬೆಳೆದಿತ್ತು. ಮದುವೆಯಾದ ಮೇಲೆ ಪ್ರಕಾಶ ಮಾವನ ದೂರ್ವಾಸ ಮುನಿ ಅವತಾರ ಸಂಪೂರ್ಣವಾಗಿ ಬದಲಾಗಿತ್ತು. ಪಾಲಾದಾಗ, ಅಜ್ಜನ ಮನೆ ಪ್ರಕಾಶ ಮಾವನಿಗೆ ಸಿಕ್ಕಿತ್ತು. ಅಜ್ಜ, ಅಜ್ಜಿ ಇಲ್ಲದಿದ್ದರೂ, ನಮಗೆ ಮನೆ ಹಾಗೇ ಉಳಿದುಕೊಂಡಿದೆ. ಗೌರ ದೊಡ್ಡಮ್ಮನ ಮಕ್ಕಳನ್ನು ಬಿಟ್ಟರೂ, ನಾವು ಹನ್ನೊಂದು ಜನ ಮೊಮ್ಮಕ್ಕಳಿದ್ದೇವೆ. ಆಮೇಲೆ ನಮ್ಮ ಮಕ್ಕಳೂ ಇರ್ತಾರೆ. ಅಮೇರಿಕಾದಲ್ಲಿರುವ ದೇವಿ ಪ್ರಸಾದ್ ಮತ್ತು ಮೇದಿನಿ, ರಜಾದಲ್ಲಿ ಬಂದಾಗ ಕರ್ಕಳ್ಳಿಗೆ ಹೋಗುವ ಮಾತಾಡುತ್ತಾರೆ.
ನಿಮ್ಮಿಯ ಜೀವನವೇನೂ ಹೂ ಹಾಸಿಗೆಯಾಗಿರಲಿಲ್ಲ. ಮೂರು ಜನ ಗಂಡು ಮಕ್ಕಳಲ್ಲಿ, ಕೊನೆಯವನಾದ ಅಮೋಘ, 13ನೇ ವಯಸ್ಸಿನಲ್ಲಿ ತೀರಿಹೋದ. ರಜಾ ದಿನ ಕಳೆಯಲ್ಲು ಚಂದ್ರಕಲಕ್ಕನ ಮನೆಗೆ ಹೋಗಿದ್ದ ಅವನು ಮತ್ತು ಚಂದ್ರಕಲಕ್ಕನ ಮಗ ವಿಶ್ವಾಸ್, ಮನೆಯ ಹತ್ತಿರದ ಕುಮಾರಧಾರ ನದಿಯಲ್ಲಿ ಮುಳುಗಿಹೋದರು. ಮೊದಲನೆಯವನಾದ ಆಶಿಕ್, ಎಲ್ ಎಲ್ ಬಿ ಪರೀಕ್ಷೆ ಬರೆದ ರಾತ್ರಿಯೇ, ಕಾರಿನ ಅಪಘಾತದಲ್ಲಿ ತೀರಿಕೊಂಡ. ಉಳಿದವನು ಆದಿತ್ಯ ಮಾತ್ರ. ಈ ವಿಷಯದಲ್ಲಿ ಪ್ರಕಾಶ ಮಾವನನ್ನು ಎಷ್ಟೋ ಸಲ ಸಮಾಧಾನ ಮಾಡಿದ್ದೆ. ಆದರೆ, ನಿಮ್ಮಿಯ ಹತ್ತಿರ ಮಾತನಾಡುವ ಧೈರ್ಯ ಯಾವತ್ತೂ ಬರಲಿಲ್ಲ.
ಈ ಪುಟ್ಟ, ಪೀಚು ದೇಹದಲ್ಲಿ, ನಿಮ್ಮಿಗೆ ಅದೆಷ್ಟು ಶಕ್ತಿ ತುಂಬಿದೆ ಅನ್ನೊದು ನನಗೆ ಯಾವಾಗಲೂ ಆಶ್ಚರ್ಯ. ಸದಾ ಲವಲವಿಕೆಯಿಂದ, ನಗುನಗುತ್ತಾ ಓಡಾಡುವ ನಿಮ್ಮಿಯ ಹಿಂದೆ ಎಲ್ಲರೂ ಇರುತ್ತಾರೆ, ನಿರ್ಮಲ ಕಾಫಿ, ಅತ್ತೆ ಸ್ವಲ್ಪ ಬಿಸಿ ನೀರು, ನಿರ್ಮಲಾಂಟಿ ಅದು ಇದೆಯಾ? ಇದು ಬೇಕಿತ್ತು..... ಹೀಗೇ ಸಾಲು ಸಾಲಾಗಿ ಬೇಡಿಕೆಗಳು ಬರುತ್ತಲೇ ಇರುತ್ತವೆ. ಎಲ್ಲವನ್ನೂ ನಗುತ್ತಲೇ ಸಂಬಾಳಿಸುತ್ತಾಳೆ. ಹರಿದು ಹಂಚಿಹೋದ ಕುಟುಂಬಗಳಲ್ಲಿ ಬೆಳೆಯುತ್ತಿರುವ ನಮ್ಮ ಮಕ್ಕಳಿಗೆ ಮತ್ತು ಈಗಿನ ಪೀಳಿಗೆಗೆ, ನಿಮ್ಮಿಯಂಥಹ ವ್ಯಕ್ತಿತ್ವವನ್ನು ಊಹಿಸಿಕೊಳ್ಳಲೂ ಕಷ್ಟವಾಗಬಹುದು.
ಹದಿನೈದು ದಿನದ ಹಿಂದೆ, ಎಂಟು ಜನ ಮೊಮ್ಮಕ್ಕಳು, ನಾಲ್ಕು ಹೆಣ್ಣು ಮಕ್ಕಳು ಮತ್ತು ಇಬ್ಬರು ಅಳಿಯಂದಿರು ಕರ್ಕಳ್ಳಿಯಲ್ಲಿ ಜಾಂಡಾ ಹೂಡಿದ್ದೆವು. ಅಮೇರಿಕಾದಿಂದ ಮೇದಿನಿ, ವೈಯಕ್ಕನ (ವೈದೇಹಿ) ಮಗಳು, ಚೊಚ್ಚಿಲು ಬಾಣಂತಿಯಾದ ಅನ್ವಿತ ಸಹ ಬರಲಾಗದಿದ್ದಕ್ಕೆ ಬೇಸರ ಮಾಡಿಕೊಂಡರು. ನಿಮ್ಮಿಗೂ ವಯಸ್ಸಾಗುತ್ತಿದೆ ಕಣೋ, ಇಷ್ಟೊಂದು ಜನ ಬಂದಾಗ ಕಷ್ಟ ಆಗುತ್ತೆ ಅಂತ ಆದಿತ್ಯನಿಗೆ ಹೇಳಿದಾಗ, ತೊಂದರೆ ಇಲ್ಲ, ಅಡುಗೆ ಮಾಡುವವರಿಗೆ ಹೇಳಿದ್ದೀನಿ ಅಂತ ಹೇಳಿದ್ದ. ಆ ಮಟ್ಟಿಗೆ ನಿಮ್ಮಿಯ ಕೆಲಸ ಸುಲಭವಾಗಿತ್ತು ಅಷ್ಟೆ. ಇನ್ನುಳಿದ ಹಾಗೆ, ನಿಮ್ಮಿಗೆ ಬಾಲಂಗೋಚಿಗಳು ನಾವಿದ್ದೆವು.
ನಿಮ್ಮಿ ಏನೂಂತ ಹೇಳೋಕೆ ಕಷ್ಟವಾಗುತ್ತೆ. ಪ್ರಕಾಶ ಮಾವನ ಹೆಂಡತಿ, ಆದಿತ್ಯನ ಅಮ್ಮ, ಅವನ ಹೆಂಡತಿ ಅರ್ಪಿತಾಳ ಅತ್ತೆ, ಇಬ್ಬರು ಮೊಮ್ಮಕ್ಕಳ ಅಜ್ಜಿ, ನನ್ನ ನಿಮ್ಮಿ, ಇನ್ನುಳಿದವರಿಗೆ ನಿರ್ಮಲತ್ತೆ, ನಿರ್ಮಲಾಂಟಿ.... ಅವಳೇ ಒಂದು ಸಣ್ಣ ಪ್ರಪಂಚ ಅನ್ನಿಸೋಕೆ ಶುರುವಾಗುತ್ತೆ.
ಅಂದ ಹಾಗೆ, ನಿಮ್ಮಿ ಹುಟ್ಟಿದ್ದು ಫೆಬ್ರವರಿ 14.... ನಮಗೆ, ವ್ಯಾಲೆಂಟೈನ್ ದಿನಕ್ಕಿಂತ, ನಿಮ್ಮಿ ಹುಟ್ಟು ಹಬ್ಬವೇ ದೊಡ್ಡದಾಗಿ ಕಾಣುತ್ತದೆ.
ಮಾಕೋನಹಳ್ಳಿ ವಿನಯ್ ಮಾಧವ