ಶುಕ್ರವಾರ, ನವೆಂಬರ್ 16, 2018

ಜಗದಾತ್ಮಾನಂದ




ಬದುಕು ಕಲಿಸಿದವರ ಹಿಂದೆ ಕೆಲವು ಪುಟ್ಟ ಹೆಜ್ಜೆಗಳು….


ಒಂಬತ್ತು ಗಂಟೆಗೆ ಬೆಲ್ ಹೊಡೆದ ತಕ್ಷಣ ಎಲ್ಲರೂ ಅವರವರ ಮಂಚದ ಕಡೆಗೆ ಹೆಜ್ಜೆ ಹಾಕಿದರು. ಇನ್ನೊಂದು ಬೆಲ್ ಹೊಡೆಯುವುದರೊಳಗೆ ಮಲಗಿರಬೇಕು ಅಂತ ಹಿರಿಯ ವಿದ್ಯಾರ್ಥಿಗಳು ಹೇಳಿದ್ದರಿಂದ, ಸೀದ ಹೋಗಿ ಮಂಚದ ಮೇಲೆ ಮಲಗಿದೆ. ಯಾಕೋ ತಳಮಳವಾಗತೊಡಗಿತು. ಮನೆಯಲ್ಲಿ ಒಬ್ಬನೇ ನನ್ನ ಕೋಣೆಯಲ್ಲಿ ಮಲಗಿ ಅಭ್ಯಾಸವಿದ್ದರೂ, ಇಲ್ಲಿ ಅಕ್ಕಪಕ್ಕದ ಮಂಚಗಳಲ್ಲಿ ಬೇರೆಯವರು ಇದ್ದರೂ, ಯಾಕೋ ಅನಾಥಪ್ರಜ್ಞೆ ಕಾಡತೊಡಗಿತು.

ಮನೆಯಲ್ಲಾದರೆ ಒಂಬತ್ತು ಗಂಟೆಗೆ ಮಲಗಿ ಅಭ್ಯಾಸವಿತ್ತು. ಏನೋ  ಕಳೆದುಕೊಂಡಂತೆ ಭಾಸವಾಗತೊಡಗಿತು. ನಿದ್ರೆ ದೂರ ಅಂತ ಅನ್ನಿಸತೊಡಗಿತು. ಅಷ್ಟರಲ್ಲೇ ಇಂಟರ್ ಕಾಮ್ ನಲ್ಲಿ, `ಮಕ್ಕಳೇ, ಕಥೆ ಬೇಕಾ?’ ಅಂತ ಗಡಸು ಧ್ವನಿಯೊಂದು ಮೂಡಿ ಬಂತು. ಡಾರ್ಮೆಟರಿಯಲ್ಲಿ ಮಲಗಿದ್ದ ಎಲ್ಲಾ ಹಿರಿಯ ವಿದ್ಯಾರ್ಥಿಗಳೂ ಒಮ್ಮೆಗೆ `ಬೇಕೂ…’ ಅಂತ ಕೂಗಿದರು.

ನಾನು ಬೆಚ್ಚಿ ಬಿದ್ದೆ. ಏನಾಗುತ್ತಿದೆ ಅನ್ನೋದು ಗೊತ್ತಾಗಲೇ ಇಲ್ಲ. ಮುಂದಿನ ಎಷ್ಟೋ ಹೊತ್ತು ಇಂಟರ್ ಕಾಮ್ ನಲ್ಲಿ ಕಥೆಯೊಂದು ಕೇಳುತ್ತಿತ್ತು. ಅದು ಯಾವ ಕಥೆ, ನಾನು ಎಷ್ಟು ಹೊತ್ತು ಕೇಳಿ ನಿದ್ರೆಗೆ ಜಾರಿದೆ ಅನ್ನೋದು ಮಾತ್ರ ನೆನಪಿಲ್ಲ. 1978 ನೇ ಇಸವಿಯಲ್ಲಿ, ಮೈಸೂರಿನ ರಾಮಕೃಷ್ಣ ವಿದ್ಯಾಶಾಲೆಗೆ ನಾನು ಆರನೇ ತರಗತಿಗೆ ಸೇರ್ಪಡೆಯಾದ ಮೊದಲನೇ ದಿನ ಕೊನೆಗೊಂಡದ್ದು ಮಾತ್ರ ಹೀಗೆ.

ಬೆಳಗ್ಗೆ ಎದ್ದವನೇ ಅಲ್ಲೇ ಏಳನೇ ತರಗತಿಯಲ್ಲಿ ಓದುತ್ತಿದ್ದ ನನ್ನ ಚಿಕ್ಕಪ್ಪನ ಮಗ ಕರಣ್ ನನ್ನು ಹಿಂದಿನ ರಾತ್ರಿ `ಮೈಕಿನಲ್ಲಿ’ ಕಥೆ ಹೇಳಿದ್ದು ಯಾರು? ಅಂತ ಕೇಳಿದೆ. `ಅದು ಮೈಕ್ ಅಲ್ಲ, ಇಂಟರ್ ಕಾಮ್, ಕಥೆ ಹೇಳೋದು ಡಾಕ್ಟರ್ ಸ್ವಾಮೀಜಿ,’ ಅಂತ ಹೇಳಿದ. ಯಾರೂ ಪರಿಚಯವಿಲ್ಲದ, 350 ಹುಡುಗರು ಓದುತ್ತಿದ್ದ ವಸತಿ ಶಾಲೆಗೆ ಬಂದು ಸೇರಿದ ಮೊದಲನೇ ದಿನ, ಈ ಡಾಕ್ಟರ್ ಸ್ವಾಮೀಜಿ ಯಾರು ಅನ್ನೋದು ನನಗೆ ಅರ್ಥವಾಗಲಿಲ್ಲ.

ಬೆಳಗ್ಗೆ ಬೇಗ ಎದ್ದು, ಪ್ರಾರ್ಥನೆ ಕೋಣೆಗೆ ಬಂದಾಗ ಬಂದಾಗ, ನಾಲ್ಕಾರು ಹುಡುಗರ ಮುಂದೆ ಹಾರ್ಮೋನಿಯಂ ಎದುರಿನಲ್ಲಿ ಆಜಾನುಬಾಹು ಸ್ವಾಮೀಜಿಯೊಬ್ಬರು ಕುಳಿತಿದ್ದದ್ದು ನೋಡಿದೆ. ಅವರು ಪ್ರಾರ್ಥನೆ ಶುರು ಮಾಡಿದ ತಕ್ಷಣ ಗೊತ್ತಾಯಿತು – ಡಾಕ್ಟರ್ ಸ್ವಾಮೀಜಿ ಯಾರು ಅಂತ.

ಊಟದ ಕೋಣೆಯ ಪಕ್ಕದಲ್ಲಿ ಒಂದು ಚಿಕ್ಕ ತುರ್ತು ಚಿಕಿತ್ಸಾಲಯವಿತ್ತು. ಅದನ್ನು ನೋಡಿಕೊಳ್ಳುತ್ತಿದ್ದವರೇ ಡಾಕ್ಟರ್ ಸ್ವಾಮೀಜಿ. ಬೆಳಗಿನ ಹೊತ್ತಿನ ಪ್ರಾರ್ಥನೆ ಜವಾಬ್ದಾರಿಯನ್ನು ಅವರೇ ಹೊತ್ತಿದ್ದರು. ಸಾಯಂಕಾಲದ ಪ್ರಾರ್ಥನೆಯನ್ನು ಮಾತ್ರ ಎ-ಬ್ಲಾಕ್ ನೋಡಿಕೊಳ್ಳುತ್ತಿದ್ದ ಶ್ರೀರಂಗ ಮಹಾರಾಜ್ ಅನ್ನೋ ಸ್ವಾಮೀಜಿ ನೆಡೆಸಿಕೊಡುತ್ತಿದ್ದರು.

ಎರಡನೇ ರಾತ್ರಿ ಒಂಬತ್ತು ಗಂಟೆ ಬೆಲ್ ಹೊಡೆಯುವ ಮುಂಚೆಯೇ ನಾನು ಹಾಸಿಗೆ ಸಿದ್ದ ಪಡಿಸಿಕೊಂಡು ಮಂಚದ ಮೇಲೆ ಕುಳಿತಿದ್ದೆ. ಬೆಲ್ ಹೊಡೆದ ಕೆಲವೇ ನಿಮಿಷಗಳಲ್ಲಿ ಇಂಟರ್ ಕಾಮ್ ಗೆ ಜೀವ ಬಂತು. ಡಾಕ್ಟರ್ ಸ್ವಾಮೀಜಿಯ ಗಡಸು ಧ್ವನಿಯಿಂದ ಕಥೆ ನಿರರ್ಗಳವಾಗಿ ಹರಿಯಲು ಶುರುವಾಯಿತು. ಅಂದು ಮಾತ್ರ, ಕಥೆ ಮುಗಿಯುವವರೆಗೆ ನಾನು ನಿದ್ರೆ ಮಾಡಲಿಲ್ಲ ಎನ್ನುವುದು ನನ್ನ ನೆನಪು. ನಮಗೆ ಪರೀಕ್ಷೆ ಇರುವ ಸಮಯ ಬಿಟ್ಟರೆ, ಮುಂದಿನ ಮೂರು ವರ್ಷಗಳ ಕಾಲ ಡಾಕ್ಟರ್ ಸ್ವಾಮೀಜಿಯ ಕಥೆ ದಿನಚರಿಯ ಕಡೆಯ ಭಾಗವಾಗಿರುತ್ತಿತ್ತು.

ಸ್ವಾಮೀಜಿ ಹೇಳುತ್ತಿದ್ದ ಕಥೆಗಳಿಗೆ ಯಾವುದೇ ನಿಯಮಗಳಿರುತ್ತಿರಲಿಲ್ಲ. ಕೆಲವೊಮ್ಮೆ ನೀತಿ ಕಥೆಗಳಾದರೆ, ಇನ್ನು ಕೆಲವೊಮ್ಮೆ, ಕೆನ್ನತ್ ಅಂಡರ್ಸನ್, ಜಿಮ್ ಕಾರ್ಬೆಟ್ ರ ನರಭಕ್ಷಕ ಹುಲಿ, ಚಿರತೆಗಳ ಕಥೆಗಳಾಗಿರುತ್ತಿದ್ದವು. ಪುನರ್ಜನ್ಮ, ಭೂತದ ಕಥೆಗಳು, ವೈಜ್ಞಾನಿಕ ವಿಸ್ಮಯಗಳು, ತತ್ವಜ್ಞಾನಕ್ಕೆ ಸಂಬಂದ ಪಟ್ಟ ಕಥೆಗಳು, ಹೀಗೆ ಎಷ್ಟೋ ವಿಷಯಗಳು ಸಾಗುತ್ತಿದ್ದವು.  ಬರ್ಮುಡಾ ಟ್ರೈಯಾಂಗಲ್, ಹಿಮಾಲಯದ ವಿಸ್ಮಯಗಳು, ಪುನರ್ಜನ್ಮಕ್ಕೆ ಸಂಬಂಧಿಸಿದ ಎಷ್ಟೋ ಸಂಶೋಧನೆಗಳು ನಮಗೆ ತಿಳಿದದ್ದೆ ಇಲ್ಲಿಂದ. ಪ್ರತಿಯೊಂದು ಕಥೆಗೂ ವೈಜ್ಞಾನಿಕ ತಳಹದಿ ಇರುತ್ತಿತ್ತು. ಡಾಕ್ಟರ್ ಸ್ವಾಮೀಜಿಯ ವಾಕ್ ಲಹರಿ ಎಷ್ಟು ಪ್ರಭಲವಾಗಿತ್ತೆಂದರೆ, ಕಥೆ ಕೇಳುತ್ತಿದ್ದ ಮಕ್ಕಳೆಲ್ಲ ತಲ್ಲೀನರಾಗಿರುತ್ತಿದ್ದರು. ಅವರು ನರಭಕ್ಷಕ, ಪುನರ್ಜನ್ಮ, ಭೂತದ ಕಥೆಗಳನ್ನು ಹೇಳಿದ ದಿನವಂತೂ, ಕಥೆ ಮುಗಿದ ಮೇಲೆ ಮಂಚದ ಕೆಳಗಿನಿಂದ ಚಿರತೆಯೋ, ಭೂತವೋ ಹೊರಗೆ ಬರುತ್ತದೆ ಎಂದು ನಡುಗಿದ್ದೂ ಇದೆ.

ಡಾಕ್ಟರ್ ಸ್ವಾಮೀಜಿಯ ಹೆಸರು ಸ್ವಾಮಿ ಜಗದಾತ್ಮಾನಂದ ಎಂದು ತಿಳಿಯಲು ನಮಗೆ ತಿಂಗಳುಗಳೇ ಹಿಡಿದಿದ್ದವು. ಸಾಧಾರಣವಾಗಿ ನಾವು ಸ್ವಾಮೀಜಿಗಳನ್ನು ಕರೆಸ್ಪಾಂಡೆಂಟ್ ಸ್ವಾಮೀಜಿ, ಎ-ಬ್ಲಾಕ್ ಸ್ವಾಮೀಜಿ, ಡಿ-ಬ್ಲಾಕ್ ಸ್ವಾಮೀಜಿ ಅಂತಾನೇ ಗುರುತಿಸುತ್ತಿದ್ದದ್ದು. ಹಾಗಾಗಿ, ಅವರ ಹೆಸರು ಗೊತ್ತಿದ್ದರೂ ಅಂಥಾ ವ್ಯತ್ಯಾಸವೇನೂ ಆಗುತ್ತಿರಲಿಲ್ಲ. ರಾತ್ರಿ ಕಥೆಗಳನ್ನು ಬಿಟ್ಟರೆ, ಭಾನುವಾರ, ರಜಾ ದಿನಗಳಲ್ಲಿ ಮತ್ತು ಹಬ್ಬದ ದಿನಗಳಲ್ಲಿ ಸಣ್ಣ ಪ್ರವಚನಗಳಿರುತ್ತಿದ್ದವು. ಡಾಕ್ಟರ್ ಸ್ವಾಮೀಜಿ ಮಾತನಾಡುತ್ತಾರೆ ಎಂದರೆ ನಮಗೆ ಖುಶಿ. ಧ್ವನಿ ಎಷ್ಟು ಗಡಸೋ, ಅಷ್ಟೇ ಮೃದು ಸ್ವಭಾವದ ಸ್ವಾಮೀಜಿಯ ಸುತ್ತ ಯಾವಾಗಲೂ ಹುಡುಗರ ಹಿಂಡೇ ಇರುತ್ತಿತ್ತು.

ಈಗ ಅನ್ನಿಸುತ್ತದೆ. ಡಾಕ್ಟರ್ ಸ್ವಾಮೀಜಿಗೆ ನವಿರಾದ ಹಾಸ್ಯ ಪ್ರಜ್ಞೆ ಇತ್ತು ಅಂತ. ಮಗನಿಗೂ, ಮಂಗನಿಗೂ ಮತ್ತು ಚಿತೆಗೂ, ಚಿಂತೆಗೂ ಸೊನ್ನೆ ಮಾತ್ರ ವ್ಯತ್ಯಾಸ ಅಂತ ನಮಗೆ ಮೊದಲು ಹೇಳಿದವರೇ ಡಾಕ್ಟರ್ ಸ್ವಾಮೀಜಿ. ಸಾಕ್ಷರ ಅನ್ನೋ ಪದವನ್ನು ಹಿಂದು ಮುಂದಾಗಿ ಓದಿದರೆ ರಾಕ್ಷಸ ಅನ್ನೋ ಅರ್ಥ ಬರುತ್ತದೆ ಅಂತಾನೂ ಅವರೇ ಹೇಳಿದ್ದು. ಸಾಕ್ಷರ ವಿದ್ಯಾವಂತನಾಗದಿದ್ದರೆ, ಅವನು ರಾಕ್ಷಸನಾಗುತ್ತಾನೆ ಎಂದು ಹೇಳುತ್ತಿದ್ದರು. ಒಮ್ಮೆ ತಟ್ಟೆ ತೊಳೆಯುವ ಜಾಗದ ಹತ್ತಿರ ಓಡಲು ಹೋಗಿ, ಒಬ್ಬ ಹುಡುಗ ಜಾರಿ ಬಿದ್ದ. ಅಲ್ಲಿಯೇ ನಿಂತಿದ್ದ ಡಾಕ್ಟರ್ ಸ್ವಾಮೀಜಿ, `ಏ ನಾಯಿ ತೂ’ ಅಂದೇ ಬಿಟ್ಟರು. ಮೊದಲೇ ಬಿದ್ದು ಪೆಟ್ಟು ಮಾಡಿಕೊಂಡು ಹುಡುಗ, ಅವಮಾನದಿಂದ ಸ್ವಾಮೀಜಿಯ ಮುಖವನ್ನೇ ಮಿಕ ಮಿಕ ನೋಡಲಾರಂಬಿಸಿದ. ಸ್ವಾಮೀಜಿ ತಣ್ಣನೆಯ ಧ್ವನಿಯಲ್ಲಿ ಮತ್ತೆ ಹೇಳಿದರು: `ಏನಾಯಿತೂ?’ ಅಂತ. ನೋವನ್ನೂ ಮರೆತ ಆ ಹುಡುಗ, ನಮ್ಮೆಲ್ಲರ ಜೊತೆ ಬಿದ್ದು ಬಿದ್ದು ನಗೋಕೆ ಶುರುಮಾಡಿದ.

ಇನ್ನೊಂದು ಸಲ ನಾನು ಚಿಕಿತ್ಸಾಲಯಕ್ಕೆ ಹೋಗಿ ಏನೋ ಹುಡುಕುತ್ತಿದ್ದೆ. ಹಿಂದಿನಿಂದ ಬಂದ ಸ್ವಾಮೀಜಿ ಜೋರಾಗಿ, `ಏನು ಬೇಕೂಫಾ?’ ಅಂದರು. ಗಲಿಬಿಲಿಗೊಂಡ ನಾನು ನೆಟ್ಟಗೆ ನಿಂತು ಏನೋ ಹೇಳಲು ಹೋಗಿ ತೊದಲಿದೆ. ನಗುತ್ತಾ ಸ್ವಾಮೀಜಿ, `ಏನು ಬೇಕಪ್ಪಾ?’ ಅಂದರು. ನಗೋಕೆ ಶುರುಮಾಡಿದ ನನಗೆ, ನಾನು ಚಿಕಿತ್ಸಾಲಯಕ್ಕೆ ಯಾಕೆ ಹೋಗಿದ್ದೆ ಅನ್ನೋದೆ ಮರೆತು ಹೋಗಿತ್ತು.

ಆ ದಿನಗಳಲ್ಲಿ ಡಾಕ್ಟರ್ ಸ್ವಾಮೀಜಿ ನಮಗೊಬ್ಬ ಕಥೆಗಾರರಾಗಿದ್ದರಷ್ಟೆ. ಅವರು ಕಥೆಗಳ ಮೂಲಕ ನಮ್ಮ ಜೀವನದ ಹಾದಿಗೆ ಸಿದ್ದ ಪಡಿಸುತ್ತಿದ್ದಾರೆ ಅನ್ನೋ ಯಾವುದೇ ಸುಳಿವು ಇರಲಿಲ್ಲ. ಯಾವುದೇ ವಿಷಯಕ್ಕೆ ವೈಜ್ಞಾನಿಕ ತಳಹದಿ ಇಲ್ಲದೆ ಡಾಕ್ಟರ್ ಸ್ವಾಮೀಜಿ ಮಾತನಾಡುತ್ತಿರಲಿಲ್ಲ. ಅವರ ಕಥೆಗಳ ಪ್ರಭಾವದಿಂದಲೇ ಎಷ್ಟೋ ಹುಡುಗರು ಶಾಲೆಯ ಗ್ರಂಥಾಲಯಕ್ಕೆ ಹೆಚ್ಚು ಭೇಟಿ ಕೊಡುವಂತಾದದ್ದು ಅಂದರೆ ಸುಳ್ಳಲ್ಲ.

ವೈಜ್ಞಾನಿಕತೆ ಅನ್ನೋದು ದೇವರನ್ನೂ ಬಿಟ್ಟಿರಲಿಲ್ಲ. ದೇವರ ಬಗ್ಗೆ ಹೆದರುವವರ ಬಗ್ಗೆ ಅವರು ಹೇಳುತ್ತಿದ್ದದ್ದು ಇಷ್ಟು. `ದೇವರ ಬಗ್ಗೆ ಜನರು ನಾನಾ ತರಹದ ಭಯಗಳನ್ನು ಬೆಳೆಸಿಕೊಳ್ಳುತ್ತಾರೆ. ಇದಕ್ಕೆ ಕಾರಣ, ದೇವರ ಬಗ್ಗೆ ಬಾಲ್ಯದಿಂದಲೇ ಅವರು ರೂಢಿಸಿಕೊಂಡ ನಾನಾ ತೆರನಾದ ಅಸಂಬದ್ಧ ಕಲ್ಪನೆಗಳು. ಸ್ತೋತ್ರ ಪಾಠ ಮಾಡುವಾಗ ಮಡಿ ಸಾಕಾಗಲಿಲ್ಲ, ಮೈಲಿಗೆಯಾಯಿತೋ ಏನೋ ಎಂದು ಹೆದರಿಕೊಂಡೇ ದೇವರನಾಮ ಪರಾಯಣ ಮಾಡಿ ಕೆಡುಕನ್ನು ನಿರೀಕ್ಷಸುವವರಿದ್ದಾರೆ. ದೇವರು ಶಾಪ ಕೊಟ್ಟು ಬಿಡುತ್ತಾನೆಂದು ಯೋಚಿಸುವವರಿದ್ದಾರೆ! ಆ ಸ್ತೋತ್ರಪಾಠ, ದೇವರ ನಾಮ ಹೇಳತೊಡಗಿದ ಮೇಲೆಯೇ ದಾರಿಯಲ್ಲಿ ಕಾಲುಜಾರಿ ಬಿದ್ದು ಜಖಂ ಆದದ್ದು! ಆ ಸ್ತೋತ್ರ ನನಗಾಗುವುದಿಲ್ಲ! ಅದರಿಂದಲೇ ಕಡುಕಾದುದು ಎನ್ನುವವರಿದ್ದಾರೆ!

`ಯಾವುದೇ ಸಂಸ್ಕಾರ ಸುಪ್ತಮನಸ್ಸಿನಲ್ಲಿ ಮುದ್ರಿತವಾಗಿದ್ದರೆ, ಅದು ವ್ಯಕ್ತವಾಗದೇ ಇರದು. ನಾವು ಆಸಿಸದಿರುವುದನ್ನು, ನಮಗೆ ಬೇಡವಾದುದನ್ನು ತೀವ್ರವಾಗಿ ಚಿಂತನೆ ಮಾಡುವುದೆಂದರೆ, ನಮ್ಮ ಸುಪ್ತ ಮನಸ್ಸಿನಲ್ಲಿ ನಮಗೆ ಬೇಡವಾದುದರ ಬೀಜವನ್ನೇ ಸರಿಯಾಗಿ ಬಿತ್ತಿದಂತಾಗುತ್ತದೆ. ಇದರಿಂದಲೇ ಅದೇ ಬೆಳೆದು ಬಲವಾಗಿ ಯಾವುದನ್ನು ನಾವು ದೂರಕ್ಕೆಸೆಯಬೇಕೆಂದು ಭಾವಿಸುತ್ತೇವೋ, ಅದರಲ್ಲೇ ಮುಳುಗಿಬಿಡುವ ಪ್ರಸಂಗ ಉಂಟಾಗುತ್ತದೆ.’

1981 ರಲ್ಲಿ ರಜೆ ಮುಗಿಸಿ ವಿದ್ಯಾಶಾಲೆಗೆ ವಾಪಾಸ್ಸಾದಾಗ ನಮಗೆಲ್ಲ ಆಘಾತ ಕಾದಿತ್ತು. ಡಾಕ್ಟರ್ ಸ್ವಾಮೀಜಿಯವರನ್ನು ವಿದ್ಯಾಶಾಲೆಯಿಂದ, ಅಲ್ಲೇ ಯಾದವಗಿರಿಯಲ್ಲಿದ್ದ ಆಶ್ರಮಕ್ಕೆ ವರ್ಗಾಯಿಸಲಾಗಿತ್ತು. ಸ್ವಾಮೀಜಿ ಆಗಲೇ ಆಶ್ರಮಕ್ಕೆ ಸ್ಥಳಾಂತರಗೊಂಡಾಗಿತ್ತು. ಅಲ್ಲಿಂದ, ನಮ್ಮನ್ನೆಲ್ಲ ನೋಡಲು ಅವರು ಮೊದಲ ಸಲ ವಿದ್ಯಾಶಾಲೆಗೆ ಬಂದಾಗ ಕಣ್ಣೀರಿಟ್ಟ ಮಕ್ಕಳಲ್ಲಿ ನಾನೂ ಒಬ್ಬ. ಅಲ್ಲಿಂದ ಮುಂದೆ ನಮ್ಮ ರಾತ್ರಿ ಕಥೆ ಎನ್ನುವುದೊಂದು ನೆನಪಾಗೇ ಉಳಿಯಿತು. ಆ ನೆನಪನ್ನು ನಾನಾಗಲೀ, ಆಗ ನನ್ನ ಜೊತೆ ಓದಿದವರಾಗಲೀ, ಇನ್ನೂ ಮರೆತಿಲ್ಲ. ಐವತ್ತರ ಆಸುಪಾಸಿನಲ್ಲಿರುವ ನನ್ನ ಸಹಪಾಠಿಗಳ ಜೊತೆ ಗುಂಡು ಪಾರ್ಟಿಗೆ ಸೇರಿದಾಗಲೂ, ಡಾಕ್ಟರ್ ಸ್ವಾಮೀಜಿಯ ವಿಷಯ ಒಂದು ಸಲವಾದರೂ ಚರ್ಚೆಗೆ ಬರುತ್ತದೆ.

ವಿದ್ಯಾಶಾಲೆ ಬಿಟ್ಟು ಕಾಲೇಜಿಗೆ ಸೇರಿದ ಮೇಲೆ ಡಾಕ್ಟರ್ ಸ್ವಾಮೀಜಿ ನಿಧಾನವಾಗಿ ಸ್ಮೃತಿ ಪಟಲದಿಂದ ದೂರವಾಗತೊಡಗಿದರು. ಎರಡು ವರ್ಷದ ನಂತರ, ಕಾರ್ಕಾಳದಲ್ಲಿ ಪರಿಚಯದವರೊಬ್ಬರು `ನಿನಗೆ ರಾಮಕೃಷ್ಣ ಆಶ್ರಮದಲ್ಲಿ ಯಾರಾದರೂ ಪರಿಚಯವಿದ್ದಾರಾ? ಸ್ವಾಮಿ ಜಗದಾತ್ಮಾನಂದ ಬರೆದ ಬದುಕಲು ಕಲಿಯಿರಿ ಅನ್ನೋ ಪುಸ್ತಕ ತರಿಸಬೇಕಿತ್ತು,’ ಅಂದರು.
`ಅವ್ರು ಪುಸ್ತಕ ಬೇರೆ ಬರ್ದಿದ್ದಾರಾ? ನಂಗೊತ್ತಿಲ್ಲಪ್ಪ,’ ಅಂತ ಹೇಳಿ, ವಿದ್ಯಾಶಾಲೆಯ ವಿಳಾಸ ಕೊಟ್ಟೆ. ಕೆಲವು ದಿನಗಳ ನಂತರ, ಯಾವುದೋ ಪುಸ್ತಕದ ಅಂಗಡಿಯಲ್ಲಿ ಪುಸ್ತಕ ಕಣ್ಣಿಗೆ ಬಿತ್ತು. ಭಾಗ-1 ಮತ್ತು ಭಾಗ-2 ಅಂತ ಎರಡು ಪುಸ್ತಕಗಳಿದ್ದವು. ತೆಗೆದುಕೊಂಡು ಓದಿದೆ. ಅಂಥಾ ವಿಶೇಷವೇನೂ ಕಾಣಿಸಲಿಲ್ಲ. ಸ್ವಾಮೀಜಿ ನಮಗೆ ಹೇಳುತ್ತಿದ್ದ ಕಥೆಗಳು, ಪ್ರವಚನಗಳ ಭಾಗಗಳೆಲ್ಲ ಆ ಪುಸ್ತಕಗಳಲ್ಲಿ ಇದ್ದವು. ಇನ್ನೂ ಸ್ವಲ್ಪ ಹೆಚ್ಚೇ ಇತ್ತು ಅನ್ನಬಹುದು. ಓದಿ ಬದಿಗಿಟ್ಟೆ.

ಜೀವನದಲ್ಲಿ ತೊಂದರೆ ಶುರುವಾದದ್ದೇ ಕಾಲೇಜು ಬಿಟ್ಟು ಬೆಂಗಳೂರಿಗೆ ಬಂದ ಮೇಲೆ. ಡಿಗ್ರಿ ಮುಗಿಸದೆ ಕಾಲೇಜಿನಿಂದ ಹೊರಬಿದ್ದ ನಾನು, ಜೀವನದಲ್ಲಿ ಏನು ಮಾಡಬೇಕು ಅನ್ನೋದರ ಸ್ಪಷ್ಟ ಕಲ್ಪನೆ ಇರಲಿಲ್ಲ. ಸ್ನೇಹಿತರೆಲ್ಲ ಕೆಲಸಕ್ಕೆ ಸೇರಿ, ಹೊಸ ಜೀವನ ಪ್ರಾರಂಭಿಸುವಾಗ, ನಾನು ಏಕಾಂಗಿಯಾಗತೊಡಗಿದೆ. ಮತ್ತೆ ಓದು ಮುಂದುವರೆಸಬೇಕೆಂಬ ಯೋಚನೆಯಲ್ಲಿ, ಪುಸ್ತಕಗಳ ಮೊರೆ ಹೋದೆ. ಇದ್ದುದ್ದರಲ್ಲಿ, ಡೇಲ್ ಕಾರ್ನಿಗ್ ಬರೆದ HOW TO STOP WORRYING AND START LIVING  ಮತ್ತು HOW TO MAKE FRIENDS ಎಂಬ ಎರಡು ಪುಸ್ತಕಗಳು ಸ್ವಲ್ಪ ಸಮಾಧಾನ ಕೊಟ್ಟರೂ, ಏನೋ ಕೊರತೆ ಕಾಡುತ್ತಿತ್ತು. ಆ ಸಮಯದಲ್ಲಿ ಮತ್ತೆ ಕೈಗೆ ಸಿಕ್ಕಿದ ಪುಸ್ತಕವೇ ಬದುಕಲು ಕಲಿಯಿರಿ.

ಮತ್ತೆ ಈ ಪುಸ್ತಕ ಓದುವಾಗ ಅದಕ್ಕೆ ಹೊಸ ಆಯಾಮ ಸಿಕ್ಕಿತ್ತು. ಅದು ಡಾಕ್ಟರ್ ಸ್ವಾಮೀಜಿಯ ಕಥೆಗಳಾಗಿ ಉಳಿದಿರಲಿಲ್ಲ. ಕೆಲವು ಘಟನೆಗಳನ್ನು ಓದುತ್ತಾ ಹೋದಂತೆ ತಾನಾಗೇ ಮುಗುಳ್ನಗೆ ಮೂಡಿದರೆ, ಇನ್ನು ಕೆಲವು ಘಟನೆಗಳನ್ನು ಓದಿದಾಗ ರೋಮಾಂಚನವಾಗುತ್ತಿತ್ತು. ಎಷ್ಟೋ ಸಲ ರಾತ್ರಿ ನಿದ್ದೆಗೆಡಿಸುತಿತ್ತು. ಸಮಸ್ಯೆಗಳಿದದಾಗ ಯಾವುದೋ ಒಂದು ಪುಟ ತೆಗೆದು ಓದಲು ಶುರುಮಾಡಿದರೆ, ಸಮಸ್ಯೆಯನ್ನು ಎದುರಿಸುವ ಧೈರ್ಯ ಮತ್ತು ವಿಧಾನ ತನ್ನಿಂದ ತಾನೇ ಬರಲು ಶುರುವಾಯಿತು.
ಜೀವನದ ಸರಳ ಅಭ್ಯಾಸಗಳಿಂದ ಹೇಗೆ ಯಾವುದೇ ಕೆಲಸವನ್ನು ಕರಗತ ಮಾಡಿಕೊಳ್ಳಬಹುದು ಅನ್ನುವುದು ಅರ್ಥವಾಗತೊಡಗಿತು. ಹಾಗೆಯೇ, ಆತ್ಮ ವಿಶ್ವಾಸ, ಮೌನಗಳಿಗಿರುವ ಶಕ್ತಿ ಮತ್ತು ಚಿಂತೆಯ ಚಿತಾ ಶಕ್ತಿಯ ಅರಿವೂ ಮೂಡತೊಡಗಿತು. ಇದು ನನ್ನ ಯೋಚನಾ ಲಹರಿಯನ್ನೇ ಬದಲಿಸಿದವು. ನನಗರಿವಿಲ್ಲದಂತೆ ಜೀವನದತ್ತ ಮತ್ತೆ ಮುಗುಳ್ನಗಲು ಆರಂಭಿಸಿದೆ.

ಇಲ್ಲಿಯವರೆಗೆ, ಈ ಪುಸ್ತಕವನ್ನು ನಾಲ್ಕೈದು ಬಾರಿ ಓದಿರಬಹುದು. ಒಂದಿಪ್ಪತ್ತು ಪ್ರತಿಗಳನ್ನು ಬೇರೆಯವರಿಗೆ ಓದಲು ಕೊಟ್ಟು ಕಳೆದಿರಬಹುದು. ಆದರೂ, ಯಾವಾಗಲೂ ಒಂದು ಪ್ರತಿಯನ್ನು ಇಟ್ಟುಕೊಂಡಿರುತ್ತೇನೆ. ಈ ಪುಸ್ತಕ ಒಂಬತ್ತು ಭಾಷೆಗಳಿಗೆ ಭಾಷಾಂತರಗೊಂಡಿದೆ ಎಂದು ತಿಳಿದ ಮೇಲೆ ಸ್ವಾಮೀಜಿಯ ಮೇಲಿನ ಗೌರವ ನೂರ್ಮಡಿಯಾಯಿತು.

ಈ ಪುಸ್ತಕದಲ್ಲಿ ತುಂಬಾ ಕಾಡುವುದ ಹುಟ್ಟು, ಸಾವು, ಪುನರ್ಜನ್ಮ ಮತ್ತು ದೇವರಿದ್ದಾನೆಯೇ? ಎನ್ನುವ ವಿಷಯಗಳು. ಹಲವು ಪ್ರಶ್ನೆಗಳಿಗೆ ನಾವೇ ಉತ್ತರ ಹುಡುಕಿಕೊಳ್ಳಬೇಕಾಗುತ್ತದೆ. ಆದರೆ, ಪುನರ್ಜನ್ಮ ಮತ್ತು ಆತ್ಮದ ವಿಷಯ ಬಂದಾಗ ಹುಟ್ಟುವ ಜಿಜ್ಞಾಸೆಗಳು ನೂರಾರು. ಪರಕಾಯ ಪ್ರವೇಶದ ಎಡ್ಗರ್ ಕೇಸಿಯನ್ನು ಒಪ್ಪಿಕೊಂಡ ಹಾಗೆ, ಭವಿಷ್ಯವನ್ನು ನುಡಿದ ನಾಸ್ಟ್ರೋಡಾಮಸ್ ನನ್ನು ಸ್ವಾಮೀಜಿ ಒಪ್ಪಿಕೊಂಡಿಲ್ಲ. ಎರಡನೇ ಮಹಾಯುದ್ದದಲ್ಲಿ ಮಡಿದ ಜರ್ಮನ್ ವೈದ್ಯ ಡಾ ಫ್ರಿಟ್ಸ್ ಅನಕ್ಷರಸ್ತನಾದ ಬ್ರೆಸಿಲ್ ನ ಅಹಿರ್ನೋನ ದೇಹದಲ್ಲಿ ಬಂದು ಶಸ್ತ್ರಚಿಕಿತ್ಸೆ ಮಾಡುವುದನ್ನು ಓದುವಾಗ ಮೈ ಜುಂ ಎನ್ನುತ್ತದೆ. ಒಟ್ಟಿನಲ್ಲಿ, ಜೀವನದ ಎಲ್ಲಾ ಅಂಶಗಳನ್ನು ಸವಿವರವಾಗಿ, ಸರಳವಾಗಿ ವಿಶ್ಲೇಷಿಸಿದ ಪುಸ್ತಕ ಎನ್ನುವುದು ನನ್ನ ನಂಬಿಕೆ.
ಈ ನೆಡುವೆ, ಡಾಕ್ಟರ್ ಸ್ವಾಮೀಜಿ ಈಶಾನ್ಯ ರಾಜ್ಯಗಳಲ್ಲಿ ಕೆಲಸ ಮಾಡಿ, ಅಲ್ಲಿಂದ ಸಿಂಗಾಪುರಕ್ಕೆ ಹೋಗಿದ್ದಾರೆಂದು ಗೊತ್ತಾಯಿತು. ಸ್ವಲ್ಪ ಕಾಲದ ನಂತರ, ಅವರು ಭಾರತಕ್ಕೆ ಹಿಂದುರುಗಿ, ಕೊಡಗಿನ ಪೊನ್ನಂಪೇಟೆಯಲ್ಲಿ ನೆಲೆಸಿದ್ದಾರೆ ಎನ್ನುವುದೂ ತಿಳಿಯಿತು.

ಕಾಲ ಹಾಗೇ ಜಾರಿ ಹೋಗುತ್ತಿತ್ತು. ನನಗರಿವಿಲ್ಲದಂತೆ ನಾನೊಬ್ಬ ಪತ್ರಕರ್ತನಾಗಿದ್ದೆ. ಈ ಮಧ್ಯೆ, ಒಂದೆರೆಡು ಬಾರಿ ಡಾಕ್ಟರ್ ಸ್ವಾಮೀಜಿಯವರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದೆ. ವಿದ್ಯಾಶಾಲೆಯ ಹಳೇ ಸ್ನೇಹಿತರು ಸಿಕ್ಕಾಗ ಅವರ ವಿಷಯ ಮಾತನಾಡುತ್ತಿದ್ದೆವು. ಒಂದು ದಿನ, ಬಿಜೆಪಿ ಪಕ್ಷದ ವಕ್ತಾರನಾಗಿರುವ ಪ್ರಕಾಶ್ ಶೆಷರಾಘವಾಚಾರ್ ಸಿಕ್ಕು, ಭಾನುವಾರ ಅವರ ಮನೆಗೆ ಸ್ವಾಮಿ ಜಗದಾತ್ಮಾನಂದ ಬರುತ್ತಾರೆ ಎಂದು ಹೇಳಿದ. ನಾನು ತಕ್ಷಣವೇ ಸಹಪಾಠಿಗಳಾಗಿದ್ದ ಅಮರೇಶ್ ದಾಸ್, ವಿನೋದ್ ಮತ್ತು ಮಹೇಶ್ ರಿಗೆ ವಿಷಯ ತಿಳಿಸಿದೆ. ಭಾನುವಾರ ನಾಲ್ಕೂ ಜನರೂ ಪ್ರಕಾಶ್ ಮನೆಗೆ ದಾಳಿ ಇಟ್ಟೆವು.
ಸ್ವಾಮೀಜಿಯನ್ನು ಭೇಟಿಯಾಗಿ ಇಪ್ಪತ್ತು ವರ್ಷಗಳಿಗೂ ಹೆಚ್ಚಾಗಿತ್ತು. ಅಮರೇಶ್ ನನ್ನು ಸುಲಭವಾಗಿ ನೆನಪು ಮಾಡಿಕೊಂಡರು. ಯಾಕಂದರೆ, ಅಮರೇಶ್ ತಂದೆ ತುಳಸಿದಾಸ್ ದಾಸಪ್ಪ ಮತ್ತು ಅವನ ಅಣ್ಣ ಲೋಕೇಶ್ ದಾಸ್, ವಿದ್ಯಾಶಾಲೆಯ ಹಳೆಯ ವಿದ್ಯಾರ್ಥಿಗಳೆ. ನಾವು ನಮ್ಮಗಳನ್ನು ಪರಿಚಯ ಮಾಡಿಕೊಂಡೆವು ಅಷ್ಟೆ.

ಸ್ವಾಮಿಜಿಗೆ ಇಪ್ಪತ್ತು ವರ್ಷ ವಯಸ್ಸು ಮಾತ್ರ ಹೆಚ್ಚಾಗಿತ್ತು. ಇನ್ನುಳಿದಂತೆ, ಅದೇ ಗಡಸು ಧ್ವನಿ, ಧೃಡಕಾಯ ಮತ್ತು ಪ್ರೀತಿ. ಅವರನ್ನು ಭೇಟಿಯಾಗಿದ್ದೇ ನಮ್ಮ ಸೌಭಾಗ್ಯ ಅಂತ ಮಾತನಾಡಿಕೊಂಡು ವಾಪಾಸ್ಸಾದೆವು. ಒಂದೆರೆಡು ವರ್ಷಗಳ ನಂತರ ವಿನೋದ್ ನಮಗೆಲ್ಲ ಅಘಾತಕರ ಸುದ್ದಿ ಹೇಳಿದ. ಡಾಕ್ಟರ್ ಸ್ವಾಮೀಜಿಯ ಬಾಯಿಯಲ್ಲಿ ಕ್ಯಾನ್ಸರ್ ಆಗಿ, ಅವರ ಹಲ್ಲುಗಳನ್ನೆಲ್ಲ ಕೀಳಲಾಗಿದೆ ಎಂದು.

ಅದಾದ ಕೆಲವು ಸಮಯದ ನಂತರ, ನನ್ನ ಬಾವ ನರೇಂದ್ರಣ್ಣ ಫೋನ್ ಮಾಡಿ, ಡಾಕ್ಟರ್ ಸ್ವಾಮೀಜಿ ಅವರ ಬಸವನಗುಡಿಯ ಮನಗೆ ಬರುತ್ತಾರೆಂದು ಹೇಳಿದರು. ನರೇಂದ್ರಣ್ಣನೂ ವಿದ್ಯಾಶಾಲೆಯ ಹಳೆಯ ವಿದ್ಯಾರ್ಥಿ ಮತ್ತು ಅವರ ತಂದೆ ಎಂ ಚಂದ್ರಶೇಖರ್ ಜನತಾ ಸರ್ಕಾರದಲ್ಲಿ ಮಂತ್ರಿಯಾಗಿದ್ದರು. ಸರಳ ಜೀವಿಯಾದ ಅವರು ವಿವೇಕಾನಂದರ ಅನುಯಾಯಿಯೂ ಆಗಿದ್ದರು.
ನರೇಂದ್ರಣ್ಣನ ಮನೆಗೆ ಹೋದಾಗ ಡಾಕ್ಟರ್ ಸ್ವಾಮೀಜಿ ಆಗಲೇ ಬಂದಾಗಿತ್ತು. ತುಂಬಾ ಜನ ಸೇರಿದ್ದರು. ನಾನು ನಮಸ್ಕಾರ ಮಾಡಿ ಮತ್ತೆ ಪರಿಚಯ ಮಾಡಿಕೊಂಡೆ. ಸ್ವಾಮೀಜಿ ಸ್ವಲ್ಪ ಸೊರಗಿದಂತೆ ಕಾಣುತ್ತಿದ್ದರು. ಉಚ್ಚಾರದಲ್ಲಿ ಮೊದಲಿನ ಸ್ಪಷ್ಟತೆ ಇರಲಿಲ್ಲ. ಸ್ವಾಮೀಜಿ ಪ್ರವಚನ ಶುರುಮಾಡುವಾಗ ಚಂದ್ರಶೇಖರ್ ಅಡ್ಡ ಬಂದು, `ನೋಡಿ, ಸ್ವಾಮೀಜಿಯವರು ಪೊನ್ನಂಪೇಟೆಯಲ್ಲಿ ಆಶ್ರಮ ಕಟ್ಟುತ್ತಿದ್ದಾರೆ. ಅದಕ್ಕೆ ಹಣಕಾಸಿನ ಅಡಚಣೆಯಾಗಿದೆ. ನಿಮ್ಮಲ್ಲಿ ಇಷ್ಟವಿದ್ದವರು ಶಕ್ತ್ಯಾನುಸಾರವಾಗಿ ಕೊಡಬಹುದು,’ ಎಂದರು. ಅಲ್ಲಿ ಸಂಗ್ರಹವಾದ ಹಣದ ಕಡೆ ತಿರುಗಿಯೂ ನೋಡದೆ, ಸ್ವಾಮೀಜಿ ಸ್ಥಿತಪ್ರಜ್ಞರಂತೆ ಕುಳಿತಿದ್ದರು.

ಕಾಲಚಕ್ರ ತಿರುಗುತ್ತಲೇ ಇತ್ತು. ವರ್ಷಕ್ಕೆ ಐದಾರು ಬಾರಿಯಾದರೂ ನಾಗರಹೊಳೆಗೆ ಹೋಗುವ ನಾನು, ಅದಕ್ಕೆ ಅಂಟಿಕೊಂಡಂತೆ ಇರುವ ಪೊನ್ನಂಪೇಟೆಗೆ ಮಾತ್ರ ಹೋಗಲಾಗಲಿಲ್ಲ. ಈ ವರ್ಷ ಮಾರ್ಚ್ ತಿಂಗಳಲ್ಲಿ ನಾಗರಹೊಳೆಗೆ ಹೊರಟಾಗ ನಿರ್ಧಾರ ಮಾಡಿದ್ದೆ. ಏನೇ ಆದರೂ, ಡಾಕ್ಟರ್ ಸ್ವಾಮೀಜಿಯವರನ್ನು ಭೇಟಿಯಾಗದೆ ಬರುವುದಿಲ್ಲ ಎಂದು.

ನಾನು ಪೊನ್ನಂಪೇಟೆಯ ರಾಮಕೃಷ್ಣ ಆಶ್ರಮ ತಲುಪಿದಾಗ ಸುಮಾರು 10.30. ಆಗ ತಾನೆ ಸ್ನಾನ ಮುಗಿಸಿ ಹೊರಗೆ ಬಂದ ಸ್ವಾಮೀಜಿಯವರನ್ನು ಕಂಡು ಸಂಕಟವಾಯಿತು. ವಯಸ್ಸು ಅವರನ್ನು ಬಹಳವಾಗಿ ಕುಗ್ಗಿಸಿತ್ತು. ಮಾತಿನಲ್ಲಿ ಸ್ಪಷ್ಟತೆ ಕಾಣೆಯಾಗಿತ್ತು. ಆದರೂ, ಮಾತನಾಡುವ ಹುಮ್ಮಸ್ಸು ಕುಗ್ಗಿರಲಿಲ್ಲ. ಅವರೆಷ್ಟೇ ಹೇಳಿದರೂ, ನಾನು ಕುರ್ಚಿಯ ಮೇಲೆ ಕೂರಲು ಒಪ್ಪಲಿಲ್ಲ.

ನನ್ನನ್ನು ಪರಿಚಯಿಸಿಕೊಂಡ ಮೇಲೆ, ನಾನು ಏನು ಮಾಡುತ್ತಿದ್ದೇನೆ, ಎಷ್ಟು ಮಕ್ಕಳು ಎಂದು ಕೇಳಿದರು. ಒಬ್ಬಳೇ ಮಗಳು ಎಂದು ಹೇಳಿದಾಗ, ಪಕ್ಕದ ಡಬ್ಬಿಯಿಂದ ಮೂರು ಸಣ್ಣ ಲಾಡುಗಳನ್ನು ತೆಗೆದು ನನ್ನ ಕೈಯಲ್ಲಿಟ್ಟರು. ನಾನು ಮನೆಗೆ ತಲುಪಲು ಇನ್ನೂ ಎರಡು ದಿನ ಬಾಕಿಯಿತ್ತು. ಹಾಗಾಗಿ, ಈ ಲಾಡುಗಳು ನನ್ನ ಮಗಳನ್ನು ತಲುಪುವುದಿಲ್ಲ ಎನ್ನುವ ಸತ್ಯ ಗೊತ್ತಿದ್ದರೂ, ಮೌನವಾಗಿ ಸ್ವೀಕರಿಸಿದೆ.

ಮಾತಿನ ಮಧ್ಯ, `ನಾನೊಂದು ಪುಸ್ತಕ ಬರೆದಿದ್ದೇನೆ. ನೀನು ಓದಿದ್ದೀಯಾ?’ ಅಂತ ಕೇಳಿದರು. ಮೂರು ಲಕ್ಷ ಪ್ರತಿಗಳು ಮಾರಾಟವಾದ ಪುಸ್ತಕವದು. ಏನು ಹೇಳಬೇಕು ಅಂತ ಗೊತ್ತಾಗದೆ, ಹೌದು ಅನ್ನುವಂತೆ ತಲೆ ಆಡಿಸಿದೆ. `ದೇವರೇ ನನ್ನ ಕೈಯಲ್ಲಿ ಆ ಕೆಲಸ ಮಾಡಿಸಿದ. ತುಂಬಾ ಜನ ಓದಿದ್ದಾರಂತೆ,’ ಅಂದರು.

ಹೆಚ್ಚು ಮಾತಾಡಿದರೆ ಸ್ವಾಮೀಜಿಗೆ ಆಯಾಸವಾಗುತ್ತದೆ ಅಂತ ನನಗೆ ಮೊದಲೇ ಹೇಳಿದರು. ಸ್ವಲ್ಪ ಹೊತ್ತು ಇರುವ ಮನಸ್ಸಿದ್ದರೂ, ಕೆಲಸವಿದೆ ಎಂದು ಹೇಳಿ ಹೊರಟೆ. ಸ್ವಾಮೀಜಿಯೇನೋ ಊಟ ಮಾಡಿ ಹೊರಡು ಎಂದರು. ಊಟಕ್ಕೆ ಕಾದರೆ ಅವರು ಹೆಚ್ಚು ಮಾತನಾಡುವುದರಲ್ಲಿ ಅನುಮಾನವಿರಲಿಲ್ಲ.

ಹೊರಗೆ ಬರುವಾಗ ನಾನು ಇನ್ನೆಂದೂ ಡಾಕ್ಟರ್ ಸ್ವಾಮೀಜಿಯವರನ್ನು ಭೇಟಿಯಾಗುವುದಿಲ್ಲ ಎನ್ನುವುದು ಖಾತರಿಯಾಗಿತ್ತು. ಅವರನ್ನು ಭೇಟಿಯಾದ ತೃಪ್ತಿ ಇತ್ತು. ಮನಸ್ಸು ಹಗುರವಾಗಿ, ಒಂಥರಾ ಶಾಂತಿ ನೆಲೆಸಿತ್ತು. ಹೊರಗೆ ಬಂದವನೇ, ಸ್ವಾಮೀಜಿ ಕಟ್ಟಿಸಿದ ಆಶ್ರಮವನ್ನು ದೀರ್ಘವಾಗಿ ನೋಡಿ, ಕಾರು ಹತ್ತಿ ನಾಗರಹೊಳೆ ಕಡೆಗೆ ಹೊರಟೆ.

ಎಲ್ಲೋ ಹುಟ್ಟಿ, ಎಲ್ಲೋ ಬೆಳೆಯುವ ಕಾಲದಲ್ಲಿ, ಯಾರೋ ನಮಗೆ ಬದುಕುವ ದಾರಿ ತೋರಿಸುವ ಈ ಜಗತ್ತು ವಿಚಿತ್ರ ಎನ್ನಿಸುತ್ತದೆ. ನಾನು ಯಾವುದೇ ದಾರ್ಶನಿಕರನ್ನು ಭೇಟಿ ಮಾಡಿಲ್ಲ. ಆದರೆ, ನನಗೆ ಬದುಕಲು ಕಲಿಸಿದವರ ಹಿಂದೆ ಕೆಲವು ಪುಟ್ಟ ಹೆಜ್ಜೆಗಳನ್ನು ಇಟ್ಟೆ ಎನ್ನುವುದೇ ತೃಪ್ತಿ.







ಮಾಕೋನಹಳ್ಳಿ ವಿನಯ್ ಮಾಧವ.


ಬುಧವಾರ, ಅಕ್ಟೋಬರ್ 31, 2018

ಕಾಳಿಂಗ




ಕಾಳಿಂಗರಾಯನ ಪುನರ್ವಸತಿ ಪುರಾಣ….


`ಅಗಾ… ಅಲ್ಲಿದೆ ನೋಡಿ,’ ಅಂತ ಬಾಲಣ್ಣನ (ಬಾಲಾಜಿ) ಮೇಸ್ತ್ರಿ ಕೈ ತೋರಿಸಿದ. ಕಾಫಿ ಗಿಡದ ಕೆಳಗೆ ಬಗ್ಗಿ ನೋಡಿದಾಗ, ಒಂದಿಪ್ಪತೈದು ಅಡಿ ಕೆಳಗೆ, ಕಾಫಿ ಗಿಡಗಳ ಮಧ್ಯದಲ್ಲಿ ಮರ ಕಸಿ ಮಾಡಿದಾಗ ಕೆಳಗೆ ಬಿದ್ದಿದ್ದ ಒಣಗಿದ ಕೊಂಬೆಗಳ ನೆಡುವೆ ಅರ್ಧ ಅಡಿ ಮುಖ ಮಾತ್ರ ಕಾಣುತ್ತಿತ್ತು.

ಕಾಳಿಂಗ ಸರ್ಪವನ್ನು ಕಾಡಿನಲ್ಲಿ ನೋಡಿದ್ದು ಮೊದಲಲ್ಲದೇ ಹೋದರೂ, ಅದನ್ನು ಹಿಡಿಯುವುದು ನೋಡುವುದು ಮೊದಲನೇ ಸಲವಾದ್ದರಿಂದ ವಿಪರೀತ ಕುತೂಹಲವಿತ್ತು. ಅದನ್ನು ಹಿಡಿದು ಬೇರೆಕಡೆ ಬಿಡುವುದರ ಬಗ್ಗೆ ನನಗೆ ಭಿನ್ನಾಭಿಪ್ರಾಯವಿದ್ದರೂ, ನಾನು ಬಿಳಗಲಿಗೆ ಹೋಗುವುದಕ್ಕಿಂತ ಮುಂಚೆಯೇ ಅದನ್ನು ಹಿಡಿಯುವುದಕ್ಕೆ ಮುಹೂರ್ತ ನಿಗದಿಯಾಗಿತ್ತು. ಮುಂದೇನಾಗುತ್ತೆ ನೋಡೋಣ ಅಂತ ಸುಮ್ಮನಾದೆ.

ಮೂಡಿಗೆರೆಯ ಕಳಸದ ಹತ್ತಿರ ಇರೋ ಈ ಬಿಳಗಲಿಯ ನಂಟು ಕಳೆದುಕೊಳ್ಳೋದು ನನಗೆ ಬಹಳ ಕಷ್ಟ. ಅಪ್ಪನ ತಂಗಿ ಶಾಂತತ್ತೆಯನ್ನು ಅಲ್ಲಿಗೆ ಕೊಟ್ಟಿದ್ದು ಮಾತ್ರವಲ್ಲ, ನನ್ನಜ್ಜಿಯ ತವರು ಮನೆಯೂ ಬಿಳಗಲಿಯೇ. ಚಿಕ್ಕಂದಿನಲ್ಲಿ ಹೆಚ್ಚಿನ ರಜಾದಿನಗಳನ್ನು ಕಳೆದಿರುವುದೂ ಇಲ್ಲೇ. ಬಿಳಗಲಿ ಕುಟುಂಬದ ಎಲ್ಲರೂ ಮಾವ, ಭಾವಂದಿರೇ. ಹಾಗಾಗಿ, ಬಿಳಗಲಿ ಕುಟುಂಬದವರ ಜೊತೆ ನನಗೆ ಕೆಲವು ಅಘೋಶಿತ ಸ್ವಾತಂತ್ರ್ಯಗಳಿವೆ.

ಶಾಂತತ್ತೆ ಮಗ ಅಶೋಕಣ್ಣ ಇರುವ ಮನೆಯೇ ನಾನು ಹುಟ್ಟಿದಾಗ ಹೇಗಿತ್ತೋ, ಹಾಗೇ ಇದೆ. ಸದಾ ಹರಿಯುವ ಹಳ್ಳದ ಸೇತುವೆ ದಾಟಿದರೆ, ಮೂರು ಸುತ್ತಲೂ ಗದ್ದೆ ಬೈಲು, ಮನೆ ಪಕ್ಕದಲ್ಲೊಂದು ಚಿಕ್ಕ ದೇವಸ್ಥಾನ, ಹಿಂದೆ ಗುಡ್ಡ, ಕಾಡು ಮತ್ತೆ ಸುತ್ತಲೂ ಕಣ್ಣು ಹಾಯಿಸುವಷ್ಟೂ ಹಸಿರು. ಮಲೆನಾಡಿನಲ್ಲಿ ಹುಟ್ಟಿ ಬೆಳೆದವರು ಸಹ `ವಾವ್’ ಎನ್ನುವಂಥಹ ಜಾಗ.

ಅವತ್ತು ಅಶೋಕಣ್ಣನ ಎರಡನೇ ಮಗ ಪ್ರತೀಕ್ ನ ಮದುವೆಯ ಹಿಂದಿನ ದಿನದ ಸಮಾರಂಭ. ಮನೆ ತಲುಪಿ ಇನ್ನೂ ಬಂದ ನೆಂಟರನ್ನು ಮಾತಾಡಿಸಿ ಮುಗಿದಿರಲಿಲ್ಲ. ಅಷ್ಟರಲ್ಲಿ ಸುಂಕಸಾಲೆ ರವಿ ಮಾವ ಬಂದವನೇ, `ಅಳಿಯ, ಕಾಳಿಂಗ ಸರ್ಪ ಹಿಡಿಯೋಕೆ ಹೋಗ್ತಿದ್ದೀನಿ,’ ಅಂದ.

`ಎಲ್ಲಿ? ಯಾವಾಗ?’ ಅಂದೆ.

`ಇಲ್ಲೇ ಹಿಂದೆ ಕಣೋ… ಬಾಲು ತೋಟದಲ್ಲಿದೆ. ನಾಲ್ಕೈದು ದಿನದಿಂದ ಅಲ್ಲೇ ಮಲಗಿದೆಯಂತೆ. ಏನಾಗಿದೆ ಅಂತ ಗೊತ್ತಿಲ್ಲ. ಅಲ್ಲೇ ಇದೆ ಅಂದ್ರೆ ಏನಾದ್ರೂ ಆಗಿರ್ಬೇಕು,’ ಅಂದ. `ಇರಬಹುದು… ನೀನೇ ಹಿಡೀತ್ತೀಯಾ?’ ಅಂತ ಕೇಳಿದೆ.

`ಯಾರೋ ಬರ್ತಾರಂತೆ. ಇಲ್ಲದೇ ಹೋದರೆ ನಾನೇ ಹಿಡಿಯೋದು,’ ಅಂದ. ಪೂರ್ತಿ ನಂಬಿಕೆ ಬರದೇ ಹೋದರೂ, ತಲೆ ಅಲ್ಲಾಡಿಸಿದೆ. ಅಷ್ಟರಲ್ಲೇ ನೆನಪಾಯಿತು. ಯಾವಾಗಲೂ ಬೆಂಗಳೂರು ಬಿಡುವಾಗ ಕ್ಯಾಮರಾ ಕಾರಿನಲ್ಲಿ ಹಾಕಿಕೊಳ್ಳುತ್ತಿದ್ದ ನಾನು, ಮದುವೆ ಮನೆಗೆ ಏಕೆ ಅಂತ ಬಿಟ್ಟು ಬಂದಿದ್ದೆ. ಪಿಚ್ಚೆನಿಸಿತು, ಅಂತೂ ಮೊಬೈಲ್ ನಲ್ಲಿ ಎಷ್ಟಾಗುತ್ತೋ ನೋಡೋಣ ಅಂತ ಸುಮ್ಮನಾದೆ.

ಊಟ ಮುಗಿದರೂ ಹಾವು ಹಿಡಿಯುವ ಸುದ್ದಿಯೇ ಇರಲಿಲ್ಲ. ಸ್ವಲ್ಪ ಹೊತ್ತು ಬಿಟ್ಟು ರವಿ ಮಾವನನ್ನು ಕೇಳಿದಾಗ, ಹಿಡಿಯುವವರು ಮತ್ತು ಫಾರೆಸ್ಟ್ ಗಾರ್ಡ್ ಊಟ ಮಾಡುತ್ತಿದ್ದಾರೆ, ಮುಗಿದ ತಕ್ಷಣ ಹೋಗೋಣ ಅಂದ. ಅವರ ಊಟ ಮುಗಿದ ತಕ್ಷಣ, ನಾನು, ಅಣ್ಣ ವೆಂಕಟೇಶ್, ರವಿ ಮಾವ, ಶ್ರೀನಾಥ್ ಎಲ್ಲರೂ ಬಾಲಣ್ಣನ ಜೀಪಿನಲ್ಲಿ ಹೊರಟೆವು. ನಮ್ಮ ಜೀಪಿನ ಹಿಂದೆ ಕಾರಿನಲ್ಲಿ ಇಬ್ಬರು ಮತ್ತು ಬೈಕಿನಲ್ಲಿ ಫಾರೆಸ್ಟ್ ಗಾರ್ಡ್ ಬಂದರು.

ನಮಗಾಗೇ ಕಾಯುತ್ತಿದ್ದ ಬಾಲಣ್ಣನ ಮೇಸ್ತ್ರಿ ಮತ್ತು ತೋಟದ ಕೆಲಸದವರು ಸೀದ ಕಾಫಿ ಗಿಡಗಳ ಮಧ್ಯೆ ನೆಡೆಯೋಕೆ ಶುರುಮಾಡಿದರು. ನಾನು ಅವರ ಬೆನ್ನ ಹಿಂದೆಯೇ ಇದ್ದೆ. ಸ್ವಲ್ಪ ದೂರ ಹೋದವರೇ, ಬಗ್ಗಿ ನೋಡುತ್ತಾ, ಕಾಫಿಗಿಡಗಳ ನೆಡುವೆ ತೋರಿಸಿದಾಗ, ನನಗೆ ಕಾಣಿಸಿದ್ದು ಬರೀ ಅರ್ಧ ಅಡಿಯಷ್ಟು ಮಾತ್ರ. ಹಿಂದೆ ಬರುತ್ತಿದ್ದ ಆರು ಜನಗಳಿಗೆ ನಾನೇ ಜೋರಾಗಿ ಹೇಳಿದೆ – ಇಲ್ಲೇ ಇದೆ, ಅಂತ.

ಒಂದು ನಿಮಿಷ ಹಾಗೇ ಇದ್ದ ಕಾಳಿಂಗ ಸರ್ಪ, ತನ್ನ ತಲೆಯನ್ನು ಸರಕ್ಕನೆ ಹಿಂದಕ್ಕೆ ಎಳೆದುಕೊಂಡು ಮಾಯವಾಯಿತು. ಒಣಗಿದ ಸೌದೆ ಮತ್ತು ಸೊಪ್ಪುಗಳ ನೆಡುವೆ ಏನೂ ಕಾಣಲಿಲ್ಲ. ಹಾವು ಹಿಡಿಯಲು ಬಂದ ರಫೀಕ್ ಮತ್ತು ಅಹ್ಮದ್ ರಿಗೆ ಕೆಳಗಿನಿಂದ ಬರಲು ಹೇಳಿ, ನಾನೂ ಬಳಸಿಕೊಂಡು ಕೆಳಗಿನಿಂದ ಕಾಫಿಗಿಡಗಳ ನಡುವೆ ಬಂದೆ. ಯಾಕೋ ಕೆಳಗೆ ಬಿದ್ದಿದ್ದ ಎಲ್ಲಾ ಕೊಂಬೆ ಮತ್ತು ಎಲೆಗಳೂ ಒಂದೇ ಥರ ಕಾಣೋಕೆ ಶುರುವಾಯಿತು. `ಈ ಕೊಂಬೆ ಹತ್ತಿರ ಇತ್ತು ಅಂತ ಕಾಣುತ್ತೆ,’ ಅಂತ ಹೇಳುವಾಗಲೇ, ಮೇಲಿನಿಂದ ನನಗೆ ಹಾವು ತೋರಿಸಿದ ಮೇಸ್ತ್ರಿ, `ಇಲ್ಲ ಅಣ್ಣ, ಆ ಮುಂದಿನ ಕೊಂಬೆ ಹತ್ತಿರ ಇತ್ತು,’ ಅಂದ. ಅವನು ನಿಂತಿದ್ದ ಜಾಗ ನೋಡಿದಾಗಲೇ ನಾನು ಎಲ್ಲಿದ್ದೇನೆ ಅನ್ನುವುದು ಸರಿಯಾಗಿ ಗೊತ್ತಾಗಿದ್ದು. ಹಾಗೇ ಕೆಳಗೆ ಕಣ್ಣು ಹಾಯಿಸಿದೆ…. ಯಾಕೋ, ಕಾಳಿಂಗ ತಪ್ಪಿಸಿಕೊಂಡಿತು ಅಂತ ಅನ್ನಿಸೋಕೆ ಶುರುವಾಯಿತು.

ಅಹ್ಮದ್ ಸುಮ್ಮನೆ ಸುತ್ತಾ ಕಣ್ಣಾಡಿಸುತ್ತಿದ್ದ. ರಫೀಕ್ ಮಾತ್ರ ನನಗೆ ಎಷ್ಟು ಕಾಣಿಸಿತು? ಹೇಗೆ ತಲೆ ಹಿಂದೆ ಎಳೆದುಕೊಂಡಿತು ಅಂತ ಪ್ರಶ್ನೆ ಮಾಡುತ್ತಾ, ಅಕ್ಕಪಕ್ಕದಲ್ಲಿದ್ದ ಮರಗಳ ಬುಡಗಳ ಕಡೆ ಕಣ್ಣಾಡಿಸುತ್ತಾ ಇದ್ದ. ನಾನು ಪಕ್ಕದಲ್ಲಿದ್ದ ನೇರಳೆ ಮರದ ಕಡೆಗೆ ಹೋಗಲು ಹೆಜ್ಜೆ ಹಾಕಿದ ತಕ್ಷಣ, ನನ್ನ ಕೈ ಹಿಡಿದು ಬದಿಗೆಳೆದ. ಸುತ್ತಲೂ ನೋಡಿದೆ, ಏನೂ ಕಾಣಿಸಲಿಲ್ಲ.
ನಿಧಾನವಾಗಿ ಮರದ ಬುಡದ ಹತ್ತಿರ ಕುಳಿತ ರಫೀಕ್, `ಓ, ಬುಡದಲ್ಲಿ ಒಟ್ಟೆ (ತೂತು) ಇವೆ… ಇಲ್ಲಿ ನೋಡಿ, ಹಾವು ಓಡಾಡಿ ಅಂತ ಕಾಣ್ತದೆ, ದಾರಿ ಸವೆದಿದೆ,’ ಅಂತ ತೋರಿಸಿದ. ಮರದ ಎರಡು ಬೇರುಗಳ ಮಧ್ಯದಲ್ಲಿ ಇದ್ದ ಬಿಲದ ಥರದ ತೂತಿನ ದಾರಿಯೇನೋ ಸವೆದು, ಮಣ್ಣು ನುಣುಪಾಗಿ ಹೋಗಿತ್ತು. ಆದರೆ, ನಾನು ನೋಡಿದ ಹಾವಿನ ಗಾತ್ರಕ್ಕಿಂತ ಬಿಲದ ಬಾಗಿಲು ಚಿಕ್ಕದಾಗಿದೆ ಅನ್ನಿಸಿತು. ಒಬ್ಬೊಬ್ಬರಾಗಿ ಬಂದು ಮರದ ಸುತ್ತ ನಿಲ್ಲೋಕೆ ಶುರು ಮಾಡಿದರು.

ಮೊಬೈಲ್ ಫೋನಿನ ಟಾರ್ಚ್ ಹಾಕಿ, ರಫೀಕ್ ಒಳಗೆ ಬಗ್ಗಿ ನೋಡಿದ. `ಕಾಣ್ತಿದೆಯಾ?’ ಅಂತ ನಾನು ಕೇಳಿದಾಗ, ಅದಕ್ಕೆ ಉತ್ತರ ಕೊಡುವ ಗೋಜಿಗೆ ಹೋಗದೆ, `ಒಂದು ಕಡ್ಡಿ ಕೊಡಿ,’ ಅಂದ. ಪಕ್ಕದಲ್ಲಿದ್ದ ಮೇಸ್ತ್ರಿ ಒಂದು ಒಣಗಿದ ಕಡ್ಡಿ ಕೊಟ್ಟಾಗ, `ಇದರಲ್ಲಿ ಚುಚ್ಚಿದರೆ, ಅಲ್ಲಿ ಹಾವು ಇದ್ದರೆ, ಅದಕ್ಕೆ ಗಾಯವಾಗುತ್ತೆ. ಹಸಿ ಕಡ್ಡಿ ಕೊಡಿ. ಒಳಗೆ ತಾಗಿದರೆ ಬಗ್ಗಬೇಕು, ಅಂತಹದು,’ ಅಂದ. ಒಂದು ಹಸಿ ಕಾಫಿ ಗಿಡದ ಚಿಗುರು ರೆಂಬೆಯನ್ನು ಒಳಗೆ ಚುಚ್ಚಿ ನೋಡಿದ ರಫೀಕ್, ಏನೂ ಸಿಗಲಿಲ್ಲ ಅನ್ನುವಂತೆ ತಲೆ ಆಡಿಸಿದ. ಆದರೆ, ದೃಷ್ಟಿ ಮಾತ್ರ ಅಲ್ಲಿಂದ ಕದಲಲಿಲ್ಲ.

`ಇವೆರೆಡು ಬೇರುಗಳನ್ನು ಬಿಡಿಸಬೇಕು… ಪಿಕಾಸಿ ತರಿಸಿ’, ಅಂತ ರಫೀಕ್ ಹೇಳಿದ ತಕ್ಷಣ, ಒಂದಿಬ್ಬರು ಆಳುಗಳು ಮೇಲೆ ಸಲಕರಣೆ ಇಡಲು ಕಟ್ಟಿರುವ ಕೋಣೆಗೆ ಓಡಿದರು. ಅಷ್ಟು ಹೊತ್ತಿಗಾಗಲೇ ಮರದ ಸುತ್ತ ಜನ ಕಡಿಮೆಯಾಗಿದ್ದರು. ಹಾರೆ ಮತ್ತು ಪಿಕಾಸಿ ಬಂದ ತಕ್ಷಣ, ಎರಡು ಬೇರುಗಳ ಮಧ್ಯ ಇದ್ದ ಮಣ್ಣನ್ನು ತೆಗೆಯೋಕೆ ಶುರುಮಾಡಿದರು. ಮೊಬೈಲ್ ನಲ್ಲಿ ಇದ್ದ ಟಾರ್ಚ್ ಬೆಳಕು ಬಿಟ್ಟು ಸಂದಿಯೊಳಗೆ ಬಗ್ಗಿನೋಡಿ, ತಲೆ ಆಡಿಸುವುದು ಮುಂದುವರೆದಿತ್ತು. ಆ ಮರಕ್ಕೆ ಹಬ್ಬಿದ ಮೆಣಸಿನ ಬಳ್ಳಿಯನ್ನೂ ಕತ್ತರಿಸಿ ಹಾಕಲಾಯಿತು. ಮಣ್ಣು ಸರಿಸಿದ ತಕ್ಷಣ, ಮರದ ಕೆಳಗೆ ಟೊಳ್ಳಾಗಿದ್ದು, ಗೆದ್ದಲು ಗೂಡಿನ ಅವಶೇಷಗಳು ಕಾಣಿಸಿದವು. ಅಂತೂ ಹಾವಿನ ಪತ್ತೆಯಿರಲಿಲ್ಲ. ಆದರೆ, ಮರದ ಕೆಳಗೆ ತುಂಬಾ ಜಾಗ ಇರುವುದು ಗೊತ್ತಾಯಿತು. ಗೆದ್ದಲುಗಳು ಹಾವಿಗೆ ಅರಮನೆ ಕಟ್ಟಿವೆ ಅಂತ ಅನ್ನಿಸ್ತು.

ರಫೀಕ್ ಮತ್ತು ಅಹ್ಮದ್ ತುಂಬಾ ಎಚ್ಚರಿಕೆಯಿಂದ ಮಣ್ಣು ತೆಗೆಯೋಕೆ ಹೇಳುತ್ತಿದ್ದ. ಸ್ವಲ್ಪ ಹೊತ್ತಿಗೆ, ಬೇರು ಕತ್ತರಿಸಲು ಮರ ಕುಯ್ಯುವ ಯಂತ್ರ ಸಹ ಬಂತು. ಯಾಕೋ, ನಾವು ಯೋಚನೆ ಮಾಡಿದ್ದಕ್ಕಿಂತ ಹೆಚ್ಚಿನ ಸಮಯ ಆಗುತ್ತೆ ಅಂತ ಅನಿಸಿ, ಗಿಡಗಳ ಮಧ್ಯದಿಂದ ರಸ್ತೆಗೆ ಬಂದು ನಿಂತೆ.

ರಸ್ತೆಯಲ್ಲಿದ್ದ ಬಾಲಣ್ಣ,  `ನೋಡಲ್ಲಿ ಕಾಣ್ತಾ ಇದ್ಯಲ್ಲ, ಅದೇ ಮಲ್ಲೇಶನ ಬೆಟ್ಟ,’ ಅಂದ.

`ಓ… ಆ ಕಡೆಯಿಂದ ಮಳೆ ಈಕಡೆಗೇ ಬರ್ತಾ ಇರೋ ಹಾಗಿದೆ?’ ಅಂದೆ.

`ಅದಕ್ಕೆ ಆಳುಗಳು ಕೊಡೆ ತಂದಿಟ್ಟಿದ್ದಾರೆ ನೋಡು,’ ಅಂದ ಬಾಲಣ್ಣ. ಅದ್ಯಾವ ಮಾಯೆಯಲ್ಲೋ, ಬಾಲಣ್ಣನ ಕೆಲಸದವರು ಆರು ಕೊಡೆಗಳು ಮತ್ತೆ ಎರಡು-ಮೂರು ದೊಡ್ಡ ಪ್ಲಾಸ್ಟಿಕ್ ಹಾಳೆಗಳನ್ನು ತಂದಿಟ್ಟಿದ್ದರು. ನೋಡ್ತಾ ಇದ್ದ ಹಾಗೆ ಮಳೆ ಬಂದೇ ಬಿಡ್ತು. ಕೊಡೆ ಹಿಡಿದುಕೊಂಡು ಕೆಳಗೆ ಕಾಲನ್ನು ನೋಡಿದರೆ, ಒಂದೆರೆಡು ಜಾಗದಲ್ಲಿ ಜಿಗಣೆ ಕಚ್ಚಿದ ರಕ್ತದ ಗುರುತು ಕಾಣಿಸಿತು. ಸಾಯಲಿ ಅಂತ ಸುಮ್ಮನಾದೆ.

ಹದಿನೈದಿಪ್ಪತ್ತು ನಿಮಿಷ ಕಳೆದಿರಬಹುದು. ಮರ ಕುಯ್ಯುವ ಯಂತ್ರದ ಸದ್ದು ಮತ್ತು ಮಣ್ಣು ತೆಗೆಯುವ ಸದ್ದು ಕೇಳುತ್ತಲೇ ಇತ್ತು. ಒಮ್ಮೆಗೆ ಗಿಡಗಳ ಮಧ್ಯದಿಂದ ಹೊರಗೆ ಓಡಿಬಂದ ಇಬ್ಬರು ಹೆಣ್ಣಾಳುಗಳು `ಹಾವು,’ ಅಂದರು. ನಾನು ಗಿಡಗಳೊಳಗೆ ನುಗ್ಗಿ, ನೇರಳೆ ಮರದ ಹತ್ತಿರ ಹೋದೆ. ಪ್ಲಾಸ್ಟಿಕ್ ಹೊದ್ದಿದ್ದ ಅಹ್ಮದ್, ನನಗೆ ಬೆನ್ನು ಹಾಕಿ, ಮರದ ಬೇರುಗಳ ನೆಡುವೆ ಮಾಡಿದ್ದ ಜಾಗದಲ್ಲಿ ಬಗ್ಗಿ ನೋಡುತ್ತಿದ್ದ. ಹಾವನ್ನು ಹಿಡಿಯುವ ಇಕ್ಕಳವೊಂದನ್ನು ಹಿಡಿದುಕೊಂಡ ರಫೀಕ್, ಅವನ ಪಕ್ಕ ನಿಂತಿದ್ದ.

ಒಂದೆರೆಡು ನಿಮಿಷದ ಬಳಿಕ, ಅಹ್ಮದ್ ಕೈ ಹಾಕಿ ಹಾವನ್ನು ಹೊರಗೆ ಎಳೆಯಲು ಪ್ರಯತ್ನಿಸಿದ. ಆದರೆ, ಮಳೆಯ ನೀರೂ ಸೇರಿಕೊಂಡು, ಎಳೆದಂತೆಲ್ಲ ಜಾರಿ ವಾಪಾಸ್ ಹೋಗುತ್ತಿತ್ತು. ಇಕ್ಕಳವನ್ನು ಮರದ ಕೆಳಗೆ ಹಾಕಿ, ಹಾವನ್ನು ಹೊರಗೆ ಎಳೆಯಲು ಪ್ರಯತ್ನಿಸಿದವನೇ, ಹಾಗೇ ಇಕ್ಕಳವನ್ನು ಪಕ್ಕಕ್ಕಿಟ್ಟರು. `ತಲೆ ಸಿಕ್ತಾ ಇಲ್ಲ. ಸೊಂಟಕ್ಕೆ ಕ್ಲ್ಯಾಂಪ್ ಹಾಕಿದರೆ ಅದಕ್ಕೆ ಏಟಾಗುತ್ತೆ. ಒಂದು ಸಣ್ಣ ಕೊಕ್ಕೆ ಮಾಡ್ಕೊಡಿ. ಕಾಫೀ ಗಿಡದ್ದಾದರೆ ಒಳ್ಳೆಯದು. ಗಟ್ಟಿ ಇರ್ತದೆ,’ ಅಂದ.

ಅಹ್ಮದ್ ಬೆನ್ನಿನಿಂದಾಗಿ, ಒಳಗೇನಾಗುತ್ತಿದೆ ಎನ್ನುವುದು ನನಗೆ ಸರಿಯಾಗಿ ಕಾಣಿಸುತ್ತಿರಲಿಲ್ಲ. ಮಳೆಯಲ್ಲೇ ಗಿಡದೊಳಗೆ ನುಗ್ಗಿದ್ದರಿಂದ ಬಟ್ಟೆಯೆಲ್ಲ ಒದ್ದೆಯಾಗಿತ್ತು. ಪಕ್ಕದ ಗಿಡದೊಳಗೆ ಹೋಗೋಣ ಅಂತ ನೋಡಿದರೆ, ರವಿ ಮಾವ ಅಲ್ಲಿ ನಿಂತುಕೊಂಡು ವಿಡಿಯೋ ಮಾಡುತ್ತಿದ್ದ. ಇರಲಿ ಅಂತ ಅಲ್ಲೇ ನಿಂತುಕೊಂಡೆ. ಎರಡೇ ನಿಮಿಷದಲ್ಲಿ ಕೊಕ್ಕೆಯೊಂದು ಅಹ್ಮದ್ ಕೈಸೇರಿತು. ಕೊಕ್ಕೆಯನ್ನು ಒಳಗೆ ಹಾಕಿ ಅರ್ಧ ಹಾವನ್ನು ಎಳದೇ ಬಿಟ್ಟ. ಏನಾಗ್ತಿದೆ ಅಂತ ನೋಡುವಷ್ಟರಲ್ಲಿ, ಮತ್ತೊಮ್ಮೆ ಹಾವಿನ ಮೈಯನ್ನು ಹೊರಗೆಳೆದು, ಕೊಕ್ಕೆಯನ್ನು ಅಲ್ಲೇ ಬಿಟ್ಟು, ಕೈ ಹಾಕಿ ಹೊರಗೆಳೆದಾಗ ನನಗೆ ಕಾಣಿಸಿದ್ದು ಅಹ್ಮದ್ ಕೈಯಲ್ಲಿದ್ದ ಕಾಳಿಂಗದ ತಲೆ. ಯಾವ ಗಳಿಗೆಯಲ್ಲಿ ಅಂತ ಗೊತ್ತಿಲ್ಲ, ರಫೀಕ್ ಅದರ ಬಾಲ ಹಿಡ್ಕೊಂಡಿದ್ದ....
ಮೊದಲು ನೋಡಿದಾಗ ನಾನೆಂದುಕೊಂಡಿದ್ದರಗಿಂತ ತಲೆ ದಪ್ಪವಾಗಿತ್ತು. ಮಳೆ ನೀರಿನಿಂದಾಗಿ, ಹಾವು ಒದ್ದಾಡಿದಾಗಲೆಲ್ಲ ಅಹ್ಮದ್ ಮತ್ತು ರಫೀಕರ ಕೈ ಜಾರುತ್ತಿತ್ತು ಅಂತ ಕಾಣುತ್ತೆ. ಹಂತ ಹಂತವಾಗಿ ತಮ್ಮ ಹಿಡಿತವನ್ನು ಬಿಗಿಗೊಳಿಸುತ್ತಿದ್ದರು. ಹಾವನ್ನು ಹಿಡಿದುಕೊಂಡೇ, ಬಗ್ಗಿಕೊಂಡು, ಗಿಡಗಳ ನೆಡುವಿನಿಂದ ರಸ್ತೆಗೆ ಬಂದರು. ಅಲ್ಲಿಂದ ಮೇಲೆ ಸಮತಟ್ಟಾದ ಜಾಗಕ್ಕೆ ನೂರೈವತ್ತು ಮೀಟರ್ ಗಳಾದರೂ ಇತ್ತು.

ನಾನು ಸ್ವಲ್ಪ ಹಿಂದಿದ್ದೆ. ಹನ್ನೊಂದರಿಂದ ಹನ್ನೆರೆಡು ಅಡಿ ಉದ್ದವಿದ್ದ ಹಾವು ಭಾರವಾಗಿ ಕಾಣುತ್ತಿತ್ತು. ಮಳೆ ಕಾರಣ ಜಾರುತ್ತಿದ್ದ ಹಾವಿನ ತಲೆಯನ್ನು ಒಂದೆರೆಡು ಬಾರಿ ಕೆಳಕ್ಕೆ ಅಹ್ಮದ್ ಇಟ್ಟರೂ, ರಫೀಕ್ ಬಾಲದಿಂದ ಕೈ ತೆಗೆಯುತ್ತಿರಲಿಲ್ಲ. ಹಾವು ತೋಟದೊಳಗೆ ಓಡಿಹೋಗಲು ಪ್ರಯತ್ನಿಸುತ್ತೇ ಹೊರತು, ಯಾವುದೇ ಪ್ರತಿರೋಧ ವ್ಯಕ್ತಪಡಿಸುತ್ತಿರಲಿಲ್ಲ.

ಆಗ ಶುರುವಾಯ್ತು ಜಿಜ್ಞಾಸೆ… ಹಾವನ್ನು ಚೀಲದೊಳಗೆ ಹಾಕಿಕೊಂಡು ಅಲ್ಲಿಗೆ ತೆಗೆದುಕೊಂಡು ಹೋಗಬೇಕೋ, ಅಥವಾ ಮತ್ತೆ ಹಾಗೇ ಎತ್ತಿಕೊಂಡು ಹೋಗಬೇಕೋ?  ಅಂತ. ಹಿಡಿದವರೇನೋ ಚೀಲಕ್ಕೆ ಹಾಕಲು ತಯಾರಾದರು, ಆದರೆ, ಫಾರೆಸ್ಟ್ ಗಾರ್ಡ್ ಮಾತ್ರ, ಒಂದು ಸಲ ಚೀಲಕ್ಕೆ ಹಾಕಿದರೆ, ಮತ್ತೆ ಹಾವನ್ನು ಹೊರಗೆ ತೆಗೆಯೋಕೆ ಬಿಡೋದಿಲ್ಲ ಅಂತ ಶುರು ಮಾಡಿದ. ಆದರೆ ರಫೀಕ್ ಅದಕ್ಕೆ ಒಪ್ಪಲಿಲ್ಲ. `ನಾವು ಇದನ್ನ ಚಾರ್ಮಾಡಿಗೆ ತಗೊಂಡು ಹೋಗಿ ಬಿಡಬೇಕು. ದಾರಿಯಲ್ಲಿ ಯಾರಾದರೂ ಕೇಳಿದರೆ, ನಾವು ಯಾರ ತೋಟದಲ್ಲಿ ಹಿಡಿದೆವು ಅನ್ನೋದನ್ನ ಹೇಳಬೇಕಾಗುತ್ತೆ. ಹಾಗಾಗಿ, ತೋಟದ ಯಜಮಾನರ ಜೊತೆ ನಮಗೆ ಹಾವಿನ ಫೋಟೋ ಬೇಕು. ಅದಕ್ಕಾದರೂ ಹೊರಗೆ ತೆಗೆಯಲೇ ಬೇಕು,’ ಅಂತ ಹಟ ಹಿಡಿದ.

ನನಗ್ಯಾಕೋ ಎರಡೂ ಅಪಾಯಕಾರಿ ಅಂತ ಅನ್ನಿಸಿತು. ಏನಾಗುತ್ತೋ ನೋಡೋಣ ಅಂತ ಸುಮ್ಮನಾದೆ. ಹಾವನ್ನು   ಹಾಗೇ ಹೊತ್ತುಕೊಂಡು ಹೋಗುವುದಕ್ಕೆ ಎಲ್ಲರ ವಿರೋಧ ಬಂತು. ಹಾಗೇ, ಚೀಲದಿಂದ ಮತ್ತೆ ತೆಗೆಯಲೇ ಬೇಕು ಅನ್ನುವವರ ಸಂಖ್ಯೆಯೂ ಹೆಚ್ಚಾಯಿತು. ಪೆಚ್ಚಾದ ಗಾರ್ಡ್, `ಏನಾದ್ರೂ ಮಾಡ್ಕೊಳ್ಳಿ,’ ಅಂತ ಸುಮ್ಮನಾದ. ಹಾವು ಚೀಲದೊಳಗೆ ಸೇರಿತು.

ತೋಟದ ಗೇಟಿನ ಹತ್ತಿರ ಚಪ್ಪರದ ಹಾಗಿರುವ, ಗೋಡೆಗಳಿಲ್ಲದ ಒಂದು ಹೆಂಚಿನ ಚಾವಣಿ ಇತ್ತು. ಹಾವನ್ನು ಅದರ ಕೆಳಗೆ ನೆಲದಲ್ಲಿ ಮೊದಲು ಬಿಟ್ಟರು. ಕಾಳಿಂಗ ಸರ್ಪದ ಬಗ್ಗೆ ಬಗೆಬಗೆಯ ಕಥೆಗಳನ್ನು ಕೇಳಿದ್ದ ಕೆಲಸದವರಿಗೆ ನಿರಾಸೆಯಾಗಿರಬೇಕು. `ಹೆಡೆನೇ ಎತ್ತುತ್ತಿಲ್ಲ? ಎಷ್ಟು ಎತ್ತರ ನಿಲ್ಲುತ್ತೇ?’ ಅಂತ ಪ್ರಶ್ನೆ ಕೇಳುತ್ತಿದ್ದರು. ಮೂವತ್ತಕ್ಕಿಂತಲೂ ಹೆಚ್ಚು ಕಾಳಿಂಗ ಹಿಡಿದಿದ್ದೇವೆ ಎಂದು ಹೇಳಿಕೊಂಡ ರಫೀಕ್ ಸುಮ್ಮನೆ ನಗುತ್ತಾ, `ಹಾಗೆಲ್ಲ ಸುಮ್ಮನೆ ಯಾರಿಗೂ ಕಚ್ಚಲ್ಲ. ಕಚ್ಚಿಸಿಕೊಂಡವರು ಉಳಿಯೋಲ್ಲ. ಕಳಸದ ಭಟ್ಟರನ್ನ ಬಿಟ್ಟರೆ, ಕಾಳಿಂಗದ ಕೈಯಲ್ಲಿ ಕಚ್ಚಿಸಿಕೊಂಡವರನ್ನು ನಾನು ಕೇಳೇ ಇಲ್ಲ. ಇದು ಇದ್ದ ಕಡೆ ಬೇರೆ ಹಾವು, ಹೆಗ್ಗಣಗಳ ಕಾಟನೇ ಇರಲ್ಲ. ಮನುಷ್ಯರು ಬರೋದು ಕಂಡ್ರೆ ಸಾಕು, ಓಡಿ ಹೋಗಿ ಅವಿತುಕೊಳ್ತದೆ. ಎಲ್ಲರೂ ಹೋದಮೇಲೆ ಹೊರಗೆ ಬರುತ್ತೆ,’ ಅಂದ.

ಬಾಲಣ್ಣನ ಮೇಸ್ತ್ರಿ, `ಓ, ಇದು ಇಲ್ಲೇ ಇದಿದ್ದಿದ್ದರೆ ಏನೂ ಆಗ್ತಿರಲಿಲ್ಲ, ಅಂತ ಹೇಳಿದಾಗ, ರಫೀಕ್ ಸುಮ್ಮನೆ ನಕ್ಕ. ಕೆಲಸದವರಿಂದಾದಿಯಾಗಿ ಎಲ್ಲರೂ ಅವರವರ ಮೊಬೈಲ್ ಫೋನ್ ಗಳಲ್ಲಿ ಫೋಟೋ ತೆಗೆಯುವುದರಲ್ಲಿ ನಿರತರಾದರು. ಹಾವು ಮಾತ್ರ ತಪ್ಪಿಸಿಕೊಂಡು ಹೋಗಲು ಜಾಗವಿದೆಯೇ ಎಂದು ಹುಡುಕುತ್ತಿತ್ತು. ರಫೀಕ್ ಅದಕ್ಕೆ ಅವಕಾಶ ಕೊಡದೆ, ಬಾಲ ಹಿಡಿದುಕೊಂಡಿದ್ದ. ಅಹ್ಮದ್ ಹಿಂದುಗಡೆಯಿಂದ ನಿಧಾನವಾಗಿ ಹಾವಿನ ಬೆನ್ನನ್ನು ತಡುವುತ್ತಾ ಬಂದವನು, ಒಮ್ಮೆ ಮೆಲ್ಲಗೆ ಅದರ ತಲೆ ಸವರಿದ.

ಒಂದೈದು ನಿಮಿಷದ ಬಳಿಕ, ಅಹ್ಮದ್ ಮತ್ತು ರಫೀಕ್ ಹಾವನ್ನೆತ್ತಿಕೊಂಡು ಸ್ವಲ್ಪ ಬಯಲಿಗೆ ತಂದರು. ಅಷ್ಟು ಹೊತ್ತಿಗೆ ಮಳೆಯೂ ನಿಂತಿತ್ತು. ಅವರಿಗೆ ಬಾಲಣ್ಣನ ಜೊತೆ ಒಂದು ಫೋಟೋ ಬೇಕಿತ್ತಷ್ಟೆ. ಬಾಲಣ್ಣ ಫೋಟೋಗೆ ಬರೋ ಹೊತ್ತಿಗೆ, ರವಿ ಮಾವ, ಶ್ರೀನಾಥ್ ಎಲ್ಲರೂ ಫೋಟೋಗಳನ್ನು ತೆಗೆಸಿಕೊಂಡಾಗಿತ್ತು. ಹಾವು ನಿಧಾನವಾಗಿ ಚೀಲದೊಳಗೆ ಸೇರಿದಾಗ, ಮನಸ್ಸಿಗೆ ಪಿಚ್ಚೆನಿಸಿತು. ಅಣ್ಣ ವೆಂಕಟೇಶ್ ಮಾತ್ರ ಫಾರೆಸ್ಟ್ ಗಾರ್ಡ್ ಗೆ, ರಫೀಕ್ ಮತ್ತು ಅಹ್ಮದ್ ಜೊತೆ ಹೋಗಿ, ಚಾರ್ಮಾಡಿಯಲ್ಲಿ ಬಿಡುವವರೆಗೆ ಇರಬೇಕೆಂದು ಹೇಳುತ್ತಿದ್ದ. ಕಾಳಿಂಗ ಸರ್ಪದ ಬಗ್ಗೆ ಇರುವಂತೆಯೇ, ಅವುಗಳನ್ನು ಹಿಡಿಯುವವರ ಬಗ್ಗೆಯೂ ಬಹಳಷ್ಟು ಕಥೆಗಳಿವೆ. ಅದರ ವಿಷವನ್ನು ಕ್ಯಾನ್ಸರ್ ಚಿಕಿತ್ಸೆಗಾಗಿ ಬಳಸುತ್ತಾರೆ ಮತ್ತು ಅದನ್ನು ಹಿಡಿದವರಿಂದ ಕಾಳಿಂಗ ಸರ್ಪವನ್ನು ಕೊಂಡು, ಮಾರುವವರ ದೊಡ್ಡ ಜಾಲವೇ ಇದೆ, ಅಂತ. ಇದರಲ್ಲಿ ಬಹಳಷ್ಟು ನಿಜವಿದ್ದರೂ, ಈ ಇಬ್ಬರು ಹುಡುಗರ ಬಗ್ಗೆ ಅನುಮಾನ ಪಡುವಂಥಹದು ನನಗೇನೂ ಕಾಣಿಸಲಿಲ್ಲ. 

ಕಾಳಿಂಗ ಸರ್ಪ ಆರು ಅಡಿ ಎತ್ತರ ನಿಂತು ವಿಷವನ್ನು ಉಗುಳುತ್ತದೆ, ಅದು ಅಟ್ಟಿಸಿಕೊಂಡು ಬಂದು ಕಚ್ಚುತ್ತದೆ, ಕಚ್ಚಿದ ಅರ್ಧ ನಿಮಿಷದೊಳಗೆ ಜೀವ ಹೋಗುತ್ತದೆ… ಇತ್ಯಾದಿ ಕಥೆಗಳನ್ನು ನಾವು ಮುಂಚಿನಿಂದಲೂ ಕೇಳಿಕೊಂಡೇ ಬೆಳೆದವರು.

ಮೊದಲನೆಯದಾಗಿ, ಕಾಳಿಂಗ ಸರ್ಪ ವಿಷಪೂರಿತ ಹಾವುಗಳಲ್ಲೇ ದೊಡ್ಡದು ಎನ್ನುವುದು ನಿಜ. ಹಾಗೆ ನೋಡಿದರೆ, ನಾವು ಹಿಡಿದ ಕಾಳಿಂಗ ಚಿಕ್ಕದು ಎಂದೇ ಹೇಳಬೇಕು. ಸಾಧಾರಣವಾಗಿ 13-14 ಅಡಿಗಳಷ್ಟು ಉದ್ದವಿರುತ್ತವೆ. 16 ಅಡಿ ಉದ್ದದ ಕಾಳಿಂಗ ಸರ್ಪವಿರುವುದೂ ನಿಜ. ಸಾಧಾರಣವಾಗಿ ಹಾವುಗಳು ತಮ್ಮ ಉದ್ದದ ಮೂರನೇ ಒಂದರಷ್ಟು ಎತ್ತರ ನಿಲ್ಲಬಲ್ಲವು. ಆ ಲೆಖ್ಖದಲ್ಲಿ ಹೇಳುವುದಾದರೆ ಮಾತ್ರ ಇವು ಐದು ಅಡಿಗಳಷ್ಟು ಎತ್ತರದವರೆಗೆ ನಿಲ್ಲಬಲ್ಲವು. ನೋಡಿದವರು ಯಾರೂ ಇಲ್ಲ.
ಕಾಳಿಂಗ ಸರ್ಪ ವಿಷ ಉಗುಳುವುದೂ ಒಂದು ಮೂಢನಂಬಿಕೆಯೇ ಹೊರತು ಸತ್ಯವಲ್ಲ. ಎಲ್ಲಾ ಹಾವುಗಳಂತೆ, ಇವುಗಳಿಗೂ ಕಣ್ಣು ಮಂದ ಮತ್ತುಕಿವಿ ಇರುವುದಿಲ್ಲ. ಅವುಗಳೇನಿದ್ದರೂ, ನಾಲಿಗೆಯಿಂದ ವಾಸನೆ ಹಿಡಿಯುತ್ತವೆ. ಸಾಧಾರಣವಾಗಿ, ಅವುಗಳು ತಾವು ಬದುಕುವ ಜಾಗದಲ್ಲಿ ಪ್ರಾದೇಶಿಕ ಪ್ರಾತಿಬಲ್ಯತೆ ಹೊಂದಿರುತ್ತವೆ. ಬೇರೆ ಕಾಳಿಂಗ ಸರ್ಪವನ್ನು ಆ ಜಾಗದಲ್ಲಿ ಬರಲು ಬಿಡುವುದಿಲ್ಲ. ತನ್ನ ಪ್ರದೇಶದಲ್ಲಿ ಬರುವ ಬೇರೆ ಹಾವುಗಳು, ನವಿಲಿನ ಮೊಟ್ಟೆಗಳು, ಇಲಿ, ಹೆಗ್ಗಣಗಳು ಮುಂತಾದ ಚಿಕ್ಕ ಪ್ರಾಣಿಗಳನ್ನು ತಿಂದು ಬದುಕುತ್ತವೆ. ನಿಜ ಹೇಳಬೇಕೆಂದರೆ, ಕಾಳಿಂಗ ರೈತ ಮಿತ್ರನೇ ಹೊರತು, ಶತ್ರುವಂತೂ ಅಲ್ಲವೇ ಅಲ್ಲ.

ಇಷ್ಟೆಲ್ಲಾ ಬಲಶಾಲಿಯಾದ ಈ ಹಾವು, ಅತೀವ ನಾಚಿಕೆ ಸ್ವಭಾವದ್ದು. ಮನುಷ್ಯರ ಹೆ‍ಜ್ಜೆ ಸದ್ದು ಕೇಳಿದ ತಕ್ಷಣ ಓಡಿಹೋಗಿ ಬಿಲದಲ್ಲಿ ಸೇರಿಕೊಳ್ಳುತ್ತವೆ. ನೇರಳೆ ಮರದ ಪೊಟರೆಯೊಳಗೆ ಆರಾಮವಾಗಿದ್ದ ಈ ಕಾಳಿಂಗ ಹೇಗೆ ನಾಲ್ಕೈದು ದಿನ ಹೊರಗಡೆ ಇತ್ತು ಅನ್ನೋದು ನನಗೆ ಅರ್ಥವಾಗಲಿಲ್ಲ.

ಹೋದ ವರ್ಷ, ಕಳಸದ ಹತ್ತಿರ ಪ್ರಫುಲ್ಲದಾಸ್ ಭಟ್ಟರು ತಾವೇ ಹಿಡಿದ ಕಾಳಿಂಗ ಸರ್ಪಕ್ಕೆ ಬಲಿಯಾದರು. ಬಹಳಷ್ಟು ಕಾಳಿಂಗಗಳನ್ನು ಹಿಡಿದಿದ್ದ ಭಟ್ಟರು, ಅತೀವ ಆತ್ಮವಿಶ್ವಾಸದಿಂದ ಫೋಟೋ ತೆಗೆಸುವ ಸಲುವಾಗಿ ಹಾವಿನ ತಲೆಯನ್ನು ತಮ್ಮ ಎದೆಯ ಬಳಿಗೆ ತಂದರು. ಮೊದಲೇ ಗಾಭರಿಯಾಗಿದ್ದ ಹಾವು, ಹಿಡಿತ ಸ್ವಲ್ಪ ಸಡಿಲವಾದ ತಕ್ಷಣ, ಅವರ ಎದೆಗೆ ಮತ್ತು ಕೈಗೆ ಕಚ್ಚಿತಂತೆ. ಬಹುಶಃ, ವಿಶ್ವದಲ್ಲಿ ಕಾಳಿಂಗ ಸರ್ಪದ ಕಡಿತಕ್ಕೆ ಬಲಿಯಾದ ಮೂರನೇ ವ್ಯಕ್ತಿ ಭಟ್ಟರು ಅಂತ ಕಾಣುತ್ತೆ.

ರಫೀಕ್ ಮತ್ತು ಅಹ್ಮದ್ ಚೀಲವನ್ನು ಕಾರಿನೊಳಗೆ ಹಾಕಿಕೊಂಡು ಹೊರಟಾಗ ಸ್ವಲ್ಪ ಬೇಸರವಾಯಿತು. ಕಾಳಿಂಗಕ್ಕೆ ಹೆದರಿ ಕೆಲಸದವರು ತೋಟದ ಆ ಕಡೆಗೆ ಹೋಗುವುದನ್ನೇ ನಿಲ್ಲಿಸಿದ್ದರು. ಹಾಗಾಗಿ, ಬಾಲಣ್ಣನಿಗೆ ಹೇಳಿದ್ದರೂ ಹಿಡಿಸದೇ ಬಿಡುತ್ತಿರಲಿಲ್ಲ.
ನಾನು ಅಲ್ಲಿಗೆ ತಲುಪುವ ಮೊದಲೇ ಆ ಕಾಳಿಂಗದ ಹಣೆಬರಹ ನಿರ್ಧಾರವಾಗಿದ್ದರಿಂದ, ನಾನೂ ಸುಮ್ಮನಾದೆ…


ಮಾಕೋನಹಳ್ಳಿ ವಿನಯ್ ಮಾಧವ












 



ಮಂಗಳವಾರ, ಅಕ್ಟೋಬರ್ 9, 2018

ವಿಶ್ವನಾಥ್





 ಕೊಂಡಿ ಕಳಚುವ ಮುನ್ನ ಮಾತನಾಡಿದ ವಿಶ್ವಣ್ಣನ ಲೇಖನಿ…..


ಪತ್ರಿಕೋದ್ಯಮಕ್ಕೆ ಬಂದು ಒಂದೆರೆಡು ವರ್ಷಗಳಾಗಿತ್ತು ಅಂತ ಕಾಣುತ್ತೆ. ಇಂಡಿಯನ್ ಎಕ್ಸ್ ‍ಪ್ರೆಸ್ ಕಛೇರಿಯಲ್ಲಿ ಕುಳಿತು ಯಾವುದೋ ಪೋಲಿಸ್ ಸ್ಟೇಷನ್ ಗೆ ಫೋನ್ ಮಾಡಿ, ಏನೋ ಮಾತಾಡುತ್ತಾ ಇರುವಾಗ, ನಮ್ಮ ಹಿರಿಯರಾದ ಎಂ ಎನ್ ಚಕ್ರವರ್ತಿ ಯಾರಿಗೋ ಹೇಳುತ್ತಿದ್ದದ್ದು ಕಿವಿಗೆ ಬಿತ್ತು.
`ನೋಡೋ, ವಿಶ್ವನಾಥ್ ಅವನ ಮಗಳ ಮದುವೆಯನ್ನ ಸಾಮೂಹಿಕ ವಿವಾಹದಲ್ಲಿ ಮಾಡ್ತಾನಂತೆ. ಒಂದೈವತ್ತು ಮದುವೆ ಒಟ್ಟಿಗೆ ಆಗ್ಬಹುದಂತೆ.’
ಫೋನ್ ಕೆಳಗಿಟ್ಟ ತಕ್ಷಣ ಕೇಳಿದೆ… `ನಚ್ಚಿ, ಯಾರದು ವಿಶ್ವನಾಥ್?’
`ಮುಂಚೆ ಫಾರೆಸ್ಟ್ ಮಿನಿಸ್ಟರ್ ಆಗಿರ್ಲಿಲ್ವಾ? ಕೆ ಆರ್ ನಗರದವನು…. ನಿಂಗೆ ಪಟೇಲ, ದೇವೇಗೌಡ ಬಿಟ್ರೆ ಯಾರು ಗೊತ್ತು? ಇವ್ನೂ ಸ್ವಲ್ಪ ಪಟೇಲನ ಥರ ಕಣೋ. ಒಳ್ಳೇ ಜೋಕ್ ಮಾಡ್ತಾನೆ, ಆದ್ರೆ, ಸ್ವಲ್ಪ raw ಅಷ್ಟೆ. ನಿಂಗಿಷ್ಟ ಆಗ್ತಾನೆ ನೋಡು,’ ಅಂತ ಅಂದ್ರು.
ಫಾರೆಸ್ಟ್ ಮಿನಿಸ್ಟರ್ ಆಗಿದ್ದ ವಿಶ್ವನಾಥ್ ಬಗ್ಗೆ ನನ್ನ ವನ್ಯಜೀವಿ ಗುರು ಚಿನ್ನಪ್ಪನವರ ಬಾಯಲ್ಲಿ ಕೇಳಿದ್ದೆ. 1994 ರ ಚುನಾವಣೆಯಲ್ಲಿ ಸೋತಿದ್ದರು. ನನಗೆ ಜೆ ಎಚ್ ಪಟೇಲರು ಇಷ್ಟವಾಗಿದ್ದವರು ಅನ್ನೋದರಲ್ಲಿ ಇವತ್ತಿಗೂ ಸಂಶಯವಿಲ್ಲ. ವಿಶ್ವನಾಥ್ ಮತ್ತು ಜೆ ಎಚ್ ಪಟೇಲರ ಹೋಲಿಕೆ ಬಗ್ಗೆ ನನಗೆ ಸಂಶಯವಿತ್ತು. ಆದರೂ, ನಚ್ಚಿ ಸಾಧಾರಣವಾಗಿ ಉತ್ಪ್ರೇಕ್ಷೆ ಮಾಡುವುದಿಲ್ಲವಾದ್ದರಿಂದ, ನಾನು ಸುಮ್ಮನಾದೆ. ವಿಶ್ವನಾಥ್ ರವರ ಮಗಳ ಮದುವೆ 125 ಸಾಮೂಹಿಕ ವಿವಾಹದಲ್ಲಿ ನೆಡೆದದ್ದು ಪತ್ರಿಕೆಗಳಲ್ಲೂ ಬಂದಿತ್ತು.
1999 ರ ಚುನಾವಣೆಯಲ್ಲಿ ವಿಶ್ವನಾಥ್ ಗೆದ್ದಿದ್ದಲ್ಲದೆ, ಮಂತ್ರಿಯೂ ಆದರು. ಪಟೇಲರಿಗಿಂತ ಸುಲಭವಾಗಿ ನನಗೆ ಸಿಗುತ್ತಿದ್ದರು. ಕಾರಣವೇನೆಂದರೆ, ಆಗಾಗ ವಿಧಾನಸೌಧಕ್ಕೂ ನನ್ನನ್ನು ನಚ್ಚಿ ಕಳುಹಿಸುತ್ತಿದ್ದರು. ಪಟೇಲರಂತೆ ಇವರಿಗೂ ಹಾಸ್ಯಪ್ರಜ್ಞೆ ಚೆನ್ನಾಗಿದೆ ಅಂತ ನನಗೆ ಅನ್ನಿಸಿತ್ತು. ಆದರೂ, ಪಟೇಲರಿಗೂ, ಇವರಿಗೂ ಏನೋ ಒಂದು ವ್ಯತ್ಯಾಸ ಎದ್ದು ಕಾಣುತ್ತಿತ್ತು. ಅದೇನೆಂದು ಅರ್ಥವಾಗಲು ಬಹಳ ವರ್ಷಗಳೇ ಬೇಕಾದವು.
1994 ರಿಂದ 2004 ರವರೆಗೆ ಇದ್ದ ಜನತಾ ಮತ್ತು ಕಾಂಗ್ರೆಸ್ ಸರ್ಕಾರಗಳಲ್ಲಿ ನಾನು ಗಮನಿಸಿದ್ದು ಎಂದರೆ, ನಮ್ಮ ವಿಧಾನ ಸಭೆ ಮತ್ತು ವಿಧಾನ ಪರಿಷತ್ತಿನಲ್ಲಿದ್ದ ಪ್ರತಿನಿಧಿಗಳು. ಅದರಲ್ಲಿ ಬಹಳಷ್ಟು ಉತ್ತಮ ವಾಗ್ಮಿಗಳು ಮತ್ತು ಜ್ಞಾನಿಗಳು ಇದ್ದರು ಅಂತ ಹೇಳಬಹುದು. ಜೆ ಎಚ್ ಪಟೇಲ್, ಎಂ ಪಿ ಪ್ರಕಾಶ್, ಎಸ್ ಎಂ ಕೃಷ್ಣ, ಎಂ ವೈ ಘೋರ್ಪಡೆ, ಮಲ್ಲಿಕಾರ್ಜುನ ಖರ್ಗೆ, ಭೈರೇಗೌಡ, ರಮೇಶ್ ಕುಮಾರ್, ನಂಜೇಗೌಡ, ಕೆ ಎಚ್ ರಂಗನಾಥ್, ಡಿ ಬಿ ಚಂದ್ರೇಗೌಡ, ಸಿದ್ದರಾಮಯ್ಯ… ಹೀಗೇ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಅವರ ಸಾಲಿನಲ್ಲಿ ವಿಶ್ವನಾಥ್ ಅನಾಮತ್ತಾಗಿ ಸೇರುತ್ತಾರೆ.
ಪಟೇಲರಿಗಿದ್ದ ತಾಳ್ಮೆ ವಿಶ್ವನಾಥ್ ರವರಿಗೆ ಇಲ್ಲ. ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ, ಪಟೇಲ್ ಒಂದು ಜ್ಞಾನಸಾಗರ ಅಂತಾನೇ ಹೇಳಬಹುದು. ಎಸ್ ಎಂ ಕೃಷ್ಣ ಬಿಟ್ಟರೆ, ಈ ವಿಷಯದಲ್ಲಿ ಅವರಿಗೆ ಯಾರನ್ನೂ ಹೋಲಿಸಲು ಕಷ್ಟ. ಆದರೂ, ಎಸ್ ಎಂ ಕೃಷ್ಣರಿಗಿಂತ ಪಟೇಲರು ಭಿನ್ನವೇ. ಪಟೇಲ್ ಸಮಾಜವಾದಿ ಮತ್ತು ಶ್ರೀಮಂತ ಹಿನ್ನೆಲೆಯಿಂದ ಬಂದವರು. ಆದರೆ, ಜೀವನದ ಅನುಭವ ಮತ್ತು ಅವರ ಅಗಾಧ ಜ್ಞಾನದಿಂದ, ಅವರು ಯಾವುದೇ ಸೈದ್ದಾಂತಿಕ ನೆಲೆಗಟ್ಟನ್ನು ಸಾರ್ವತ್ರಿಕ ಸತ್ಯ ಅಂತ ಒಪ್ಪಿಕೊಳ್ಳಲಿಲ್ಲ.
ಆದರೆ ವಿಶ್ವನಾಥ್ ಬೆಳೆದದ್ದೇ ಬೇರೆ ಮೂಸೆಯಲ್ಲಿ. ಕಡು ಬಡತನದಿಂದ ಬಂದಿರದಿದ್ದರೂ, ಕಾಂಗ್ರೆಸ್ ನ ಹಿಂದುಳಿದ ವರ್ಗಗಳ ಚಳುವಳಿಗಳನ್ನು ಮೈಗಂಟಿಸಿಕೊಂಡು, ದೇವರಾಜ ಅರಸುರವರ ಗರಡಿಯಲ್ಲಿ ಬೆಳೆದವರು. ಯಾವಾಗಲೂ ಸೈದ್ದಾಂತಿಕ ನೆಲೆಕಟ್ಟಿನಲ್ಲಿ ನಿಂತು ಮಾತನಾಡುತ್ತಿದ್ದರು. ಅದೇ ಅವರಿಗೂ, ಪಟೇಲರಿಗೂ ಇದ್ದ ವ್ಯತ್ಯಾಸ.
ಪರಿಚಯವಾದ ಮೇಲೆ ನಿಧಾನವಾಗಿ ವಿಶ್ವನಾಥರ ಜೊತೆ ಸಲುಗೆಯಿಂದ ಇರಲು ಆರಂಭಿಸಿದೆ. ಸರ್ ಅನ್ನೋ ಪದ ಹೋಗಿ, ರೀ ವಿಶ್ವಣ್ಣ ಅಂತಾನೂ ಕರೆಯೋಕೆ ಶುರು ಮಾಡಿದೆ. ಅವರ ಹಾಸ್ಯಪ್ರಜ್ಞೆಯಂತೂ ಬಹಳ ಇಷ್ಟವಾಗುತ್ತಿತ್ತು. ವಿಷಯಾಧಾರಿತ ಚರ್ಚೆಗಳಲ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯಿಸುತ್ತಿದ್ದರು. ಒಂದು ಸಲ ವಿಧಾನ ಪರಿಷತ್ತಿನಲ್ಲಿ ಉಮಾಶ್ರೀಯವರು, `ವಿಶ್ವನಾಥರು ಒಳ್ಳೆ ಜೋಕರ್,’ ಅಂದುಬಿಟ್ಟರು. ಒಂದು ಕ್ಷಣ ಸಿಟ್ಟಾದರೂ, ಸುಧಾರಿಸಿಕೊಂಡ ವಿಶ್ವನಾಥರು, ಜೋಕರ್ ಅನ್ನೋದರ ಬದಲು `ವಿಕಟಕವಿ’ ಅಂತ ಹೇಳಬಹುದು ಅಂದರು…. ಆ ಪದವನ್ನು ಯಾವಕಡೆಯಿಂದ ಓದಿದರೂ, ವಿಕಟಕವಿಯೇ ಆಗುತ್ತದೆ ಅಂತ ನನಗೆ ಅನ್ನಿಸಿತು.
2004 ಮತ್ತು 2008ರ ಚುನಾವಣೆಯಲ್ಲಿ ಸೋತನಂತರ, ವಿಶ್ವನಾಥ್ ಇನ್ನು ರಾಜಕೀಯ ನಿವೃತ್ತಿ ಅಂದುಕೊಂಡಿದ್ದೆ. ಅಷ್ಟರಲ್ಲಿ ಅವರು ಲೋಕಸಭೆಯ ಮೆಟ್ಟಿಲು ಹತ್ತಿದ್ದರು. ಮತ್ತೆ 2014ರಲ್ಲಿ ಸೋತರು. ಇನ್ನು ಮುಗಿದೇ ಹೋಯಿತು ಅನ್ನುವಷ್ಟರಲ್ಲಿ, ಕಾಂಗ್ರೆಸ್ ಬಿಟ್ಟು ಯಾರೂ ಊಹಿಸದಂತೆ ಜನತಾ ದಳಕ್ಕೆ ಸೇರಿ, ಮತ್ತೆ ಹುಣಸೂರಿನಿಂದ ಗೆದ್ದು, ಪಕ್ಷದ ಅಧ್ಯಕ್ಷರೂ ಆದರು.
ಇದರ ಹಿಂದಿನ ರಾಜಕೀಯ ವಿಶ್ಲೇಷಣೆ ಮಾಡಲು ಹೋಗುವುದಿಲ್ಲ. ಯಾಕಂದರೆ, ನಾನೀಗ ಬರೆಯುತ್ತಿರುವುದು ವಿಶ್ವನಾಥರ ಪುಸ್ತಕಗಳ ಬಗ್ಗೆ.  2004ರ ನಂತರ ವಿಧಾನಸಭೆಗೆ ಬರುವ ಸದಸ್ಯರ ಗುಣಮಟ್ಟ ಕಡಿಮೆಯಾಗಿದೆ ಅನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ. ವಿಷಯಾಧಾರಿತ ಚರ್ಚೆಗಳಿಗಿಂತ, ಗಲಾಟೆಗಳೇ ಹೆಚ್ಚಾದಂತ ಅನ್ನಿಸುತ್ತಿದೆ. ಹೊಸ ವಿಷಯಗಳು ತಿಳಿದುಕೊಳ್ಳುವುದು ಮರೀಚಿಕೆಯೇ ಸರಿ. ಕೆಲವೊಂದು ಕೊರೆತಗಳನ್ನೂ ಸೇರಿದಂತೆ, ಅಧ್ಬುತವಾದ ಚರ್ಚೆ, ಭಾಷಣಗಳನ್ನು ಕೇಳಿರುವ ನಮಗೆ, ಯಾಕೋ ವಿಧಾನಸಭಾ ಕಲಾಪಗಳು ಮೀನು ಮಾರುಕಟ್ಟೆಯ ಗಲಾಟೆಯಂತೆ ಅನ್ನಿಸುತ್ತದೆ ಅಂದರೂ ತಪ್ಪಾಗಲಾರದು.
ಮೊನ್ನೆ ನನ್ನ ಗಮನ ಸೆಳೆದದ್ದು ವಿಶ್ವನಾಥರ ಪುಸ್ತಕ -- `ಅಥೆನ್ಸ್ ನ ರಾಜ್ಯಾಡಳಿತ’ ಬಿಡುಗಡೆ ಸಮಾರಂಭ. ಮೊದಲಿಂದಲೂ ನನಗೆ ಗ್ರೀಕ್ ಕಥೆಗಳು ನಮ್ಮ ಪುರಾಣಗಳಷ್ಟೇ ಇಷ್ಟ. ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ ಗ್ರೀಕ್ ಮತ್ತು ಭಾರತದ ಪುರಾಣಗಳ ಮೂಲ ಒಂದೇ. ಗ್ರೀಕ್ ರಾಜ್ಯಾಡಳಿತದ ಬಗ್ಗೆ ವಿಶ್ವನಾಥ್ ಬರೆದಿದ್ದಾರೆ ಅಂದಾಗ ಕುತೂಹಲ ತಡೆಯಲಾಗಲಿಲ್ಲ. ಒಂದು ಪ್ರತಿಯನ್ನು ಪಡೆದು ಓದಿದೆ.
ಹಾಗಂತ, ಇದು ವಿಶ್ವನಾಥ್ ರವರ ಮೊದಲನೇ ಪುಸ್ತಕವೇನಲ್ಲ. ನನ್ನ ಗಮನಕ್ಕೆ ಬಂದ ಮೊದಲನೇ ಪುಸ್ತಕ ಎಂದರೆ ಅವರ ಆತ್ಮ ಚರಿತ್ರೆಯಾದ `ಹಳ್ಳಿ ಹಕ್ಕಿಯ ಹಾಡು’. ಜೀವನ, ಕಷ್ಟಗಳು, ಬಡತನ, ಹಾಸ್ಯ, ರಾಜಕೀಯ, ಸಿದ್ದಾಂತಗಳನ್ನು ಚರ್ಚೆ ಮಾಡುತ್ತಲೇ ಅಧ್ಬುತವಾಗಿ ಓದಿಸಿಕೊಂಡು ಹೋಗುವ ಪುಸ್ತಕ ಅದು. ಅದನ್ನು ಪಠ್ಯಪುಸ್ತಕವನ್ನಾಗಿ ಯಾವುದಾದರೂ ತರಗತಿಗೆ ಮಾಡಬಹುದಿತ್ತು ಅಂತ ನನಗೆ ಎಷ್ಟೋ ಸಲ ಅನ್ನಿಸಿದೆ. ಅದರ ನಂತರ ಕೆಲವು ಪುಸ್ತಕಗಳನ್ನು ಬರೆದರೂ, ಅವು ಹಳ್ಳಿ ಹಕ್ಕಿಯಷ್ಟು ಸುಲಭವಾಗಿ ಓದಿಸಿಕೊಂಡು ಹೋಗುವ ಪುಸ್ತಕಗಳಲ್ಲ. ತುರ್ತುಪರಿಸ್ಥಿತಿಯ ಕುರಿತು ಬರೆದ `ಆಪತ್ ಸ್ಥಿತಿಯ ಆಲಾಪಗಳು’ ಅಂದಿನ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿಯವರನ್ನು ಮತ್ತು ದೇವರಾಜ ಅರಸುರವರನ್ನು ಸಮರ್ಥಿಸುವ ಯತ್ನದಂತೆ ಕಾಣುತ್ತದೆ. ನಾನೂ ಇಂದಿರಾಗಾಂಧಿಯವರ ಅಭಿಮಾನಿ ಅನ್ನೋದು ಸುಳ್ಳಲ್ಲ. ತುರ್ತುಪರಿಸ್ಥಿತಿಯ ಕಾಲದಲ್ಲಿ 20 ಅಂಶಗಳ ಕಾರ್ಯಕ್ರಮ ಯಶಸ್ವಿಯಾಗಿ ಅನುಷ್ಟಾನವಾಯಿತು ಅನ್ನುವುದನ್ನೂ ಒಪ್ಪುತ್ತೇನೆ. ಅದನ್ನು ಸಮಾಜದ ವಿವಿಧ ಸ್ತರಗಳ ವ್ಯಕ್ತಿಗಳ ಸ್ವಗತ ರೀತಿಯಲ್ಲಿ ನಿರೂಪಿಸಲಾಗಿದೆ. ತುರ್ತುಪರಿಸ್ಥಿತಿಯ ಎಷ್ಟೋ ವಿಷಯಗಳ ಬಗ್ಗೆ ಬೆಳಕು ಚೆಲ್ಲಿದರೂ, ಎಲ್ಲರನ್ನೂ ಸುಲಭವಾಗಿ ಓದಿಸಿಕೊಂಡು ಹೋಗಲಾರದು.
ಹಾಗೆಯೇ, ಸಿರಿಭೂಮಿ… ಕೇಂದ್ರದಲ್ಲಿ ಬಂದ ಮೋದಿ ಸರ್ಕಾರವು ಭೂಸ್ವಾಧೀನವನ್ನು ಮಾರುಕಟ್ಟೆಗೆ ಹೋಗಿ ತರಕಾರಿ ತರುವಷ್ಟೇ ಸುಲಭಮಾಡಿದಾಗ ಆಕ್ರೋಶಗೊಂಡವರಲ್ಲಿ ನಾನೂ ಒಬ್ಬ. ಸಿರಿ ಭೂಮಿ ಈ ವಿಷಯವನ್ನು ಕೂಲಂಕುಶವಾಗಿ ಚರ್ಚಿಸುತ್ತದೆ. ಆದರೆ, ಇದನ್ನೂ ಪ್ರಕೃತಿಯ ಸ್ವಗತ ರೂಪದಲ್ಲಿ ಬರೆದಿದ್ದಾರೆ. ಈ ವಿಷಯದ ಬಗ್ಗೆ ಆಸಕ್ತಿ ಇಲ್ಲದವರನ್ನು ಸುಲಭವಾಗಿ ಓದಿಸಿಕೊಳ್ಳುವುದಿಲ್ಲ.
ಅಥೆನ್ಸ್ ನ ರಾಜ್ಯಭಾರದ ಮುಂಚೆ, ವಿಶ್ವನಾಥರು `ದಿ ಟಾಕಿಂಗ್ ಶಾಪ್’ ಅನ್ನೋ ಪುಸ್ತಕವನ್ನು ಬರೆದಿದ್ದರು. ಆ ಪುಸ್ತಕ ನನಗೆ ಓದಲಾಗಲಿಲ್ಲ. ಅದು ಹೆಚ್ಚಾಗಿ ಸಂಸದೀಯ ರಾಜಕೀಯ ಮತ್ತು ಅದರ ಚರಿತ್ರೆಯ ಬಗ್ಗೆ ಬರೆಯಲಾಗಿದೆಯಂತೆ. ಅದರ ಮುಂದುವರೆದ ಭಾಗವೇ, ಅಥೆನ್ಸ್ ನ ರಾಜ್ಯಭಾರ. ಇದು ಗ್ರೀಕ್ ಇತಿಹಾಸದಲ್ಲಿ, ಎರಡೂವರೆ ಸಾವಿರ ವರ್ಷಗಳ ಹಿಂದೆ ಪ್ರಜಾಪ್ರಭುತ್ವ ಹುಟ್ಟಿದ ಮತ್ತು ನೆಡೆದು ಬಂದ ದಾರಿಯ ಬಗ್ಗೆ ಸವಿಸ್ತಾರವಾಗಿ ಬೆಳಕು ಚೆಲ್ಲುತ್ತದೆ.
ಕ್ರಿಸ್ತ ಪೂರ್ವದಲ್ಲೇ ಅಥೆನ್ಸ್ ನಲ್ಲಿ ಹುಟ್ಟಿದ ಪ್ರಜಾಪ್ರಭುತ್ವದ ಬಗ್ಗೆ ನನಗೆ ಅಲ್ಪಸ್ವಲ್ಪ ತಿಳುವಳಿಕೆ ಇತ್ತು. ಆದರೆ, ವಿಲ್ಲಿಯಂ ಶೇಕ್ಸ್ ಪಿಯರ್ ನ ನಾಟಕಗಳ ಮೂಲಕ, ರೋಮನ್ ಸಾಮ್ರಾಜ್ಯದಲ್ಲಿ ಇದ್ದ ಪ್ರಜಾಪ್ರಭುತ್ವದ ಬಗ್ಗೆ ಗೊತ್ತಾದರೂ, ಸಮಗ್ರವಾದ ಜ್ಞಾನ ಇರಲಿಲ್ಲ. ಪ್ರಜಾಪ್ರಭುತ್ವದ ಮೂಲದ ಬಗ್ಗೆ ಯಾರಿಗಾದರೂ ತಿಳಿಯುವ ಹಂಬಲವಿದ್ದರೆ, ಈ ಪುಸ್ತಕ ಉತ್ತಮವಾದ ಕೈಪಿಡಿಯೂ ಆಗಬಲ್ಲದು ಹಾಗೂ ಸುಲಭವಾಗಿ ಓದಿಸಿಕೊಂಡು ಹೋಗಬಲ್ಲದು.
ಪ್ರಜಾಪ್ರಭುತ್ವದ ಮೂಲವನ್ನು ಸಾಕ್ಷ್ಯಚಿತ್ರದಂತೆ ನಿರೂಪಿಸುವುದರ ಬದಲು, ಕ್ರಿಸ್ತಪೂರ್ವದಲ್ಲಿದ್ದ ಗ್ರೀಕ್ ಸಮಾಜ, ಕಟ್ಟುಪಾಡುಗಳು, ನಂಬಿಕೆಗಳ ಬಗ್ಗೆ ಕೂಲಂಕುಶವಾಗಿ ಚರ್ಚಿಸಿದ್ದಾರೆ. ಗ್ರೀಕರ ಸಾಮಾಜಿಕ ಬೆಳವಣಿಗೆಗಳಿಗೆ ಕಾರಣಕರ್ತರಾದ ಮಹಾನ್ ಚಿಂತಕರಾದ ಪ್ಲಾಟೋ, ಸಾಕ್ರಟಿಸ್, ಅರಿಸ್ಟಾಟಲ್ ಮತ್ತು ಅವನ ಶಿಷ್ಯ ಅಲೆಕ್ಸಾಂಡರ್ ಬಗ್ಗೆಯೂ ವಿವರಗಳಿವೆ.  ಕಲ್ಲುಗಳೇ ಮತಗಳಾಗಿ, ಆಲಿವ್ ಮರದ ಕೆಳಗೆ ಅಥಿನಾ ದೇವಿಯ ಪೂಜೆಯೊಂದಿಗೆ ಆರಂಭವಾಗುತ್ತಿದ್ದ ಕಲಾಪಗಳನ್ನು ಲಿಖಿತ ರೂಪದಲ್ಲಿ ದಾಖಲಿಸಲಾಗುತ್ತಿತ್ತು. ಅದೂ ಎರಡೂವರೆ ಸಾವಿರ ವರ್ಷಗಳ ಕೆಳಗೆ ಅನ್ನುವುದೇ ಅಧ್ಬುತ.
ಹಾಗೆಯೇ, ಗ್ರೀಕ್ ಪ್ರಜಾಪ್ರಭುತ್ವಕ್ಕೆ ಅಪಾರ ಕೊಡುಗೆ ಇತ್ತು, ಕೊನೆಗೆ ಬೇಸತ್ತು ಅಧಿಕಾರ ತ್ಯಜಿಸಿದ ಸೋಲನ್, ಪ್ರಜಾಪ್ರತಿನಿಧಿಗಳ ಆಸ್ತಿ ಪಾಸ್ತಿಗಳ ವಿವರವನ್ನು ಅವರ ಮನೆಯ ಮುಂದೆಯೇ ತೂಗು ಹಾಕುವ ಪಾರದರ್ಶಕ ವಿಧಾನಗಳನ್ನು ನೋಡಿದರೆ ಆಶ್ಚರ್ಯವಾಗುತ್ತದೆ. ಹಾಗೆಯೇ, ಪ್ರಜಾಪ್ರಭುತ್ವದ ಆಶಯದಂತೆ ಎಲ್ಲಾ ವರ್ಗದವರಿಗೂ ಪ್ರಾತಿನಿಧ್ಯ ನೀಡಿ, ಸಾಮಾಜಿಕ ನ್ಯಾಯ ಒದಗಿಸಿದರೆ, ಕೆಳಸ್ತರ ವರ್ಗದಿಂದ ಬಂದ ಪ್ರಜಾ ಪ್ರತಿನಿಧಿಗಳು ಸೋಮಾರಿಗಳಾಗಿ, ಪ್ರಜೆಗಳ ಆಶಯವನ್ನು ಹಾಳುಮಾಡಿದ್ದನ್ನೂ ವಿವರಿಸಿದ್ದಾರೆ. ಹೆಣ್ಣುಮಕ್ಕಳಿಗೆ ಮತದಾನದ ಹಕ್ಕನ್ನು ಕೆಲವು ಶತಮಾನಗಳವರೆಗೆ ಮೊಟಕುಗೊಳಿಸಿದ್ದನ್ನು ಓದುವಾಗ ಮನಸ್ಸಿಗೆ ಪಿಚ್ಚೆನ್ನಿಸುತ್ತದೆ.
ನನ್ನ ಅಭಿಪ್ರಾಯದಲ್ಲಿ, ನಮ್ಮ ವಿಶ್ವವಿಧ್ಯಾಲಯಗಳಲ್ಲಿ ಇತಿಹಾಸ ಪ್ರಾಧ್ಯಾಪಕರು ಮಾಡಬೇಕಾಗಿದ್ದ ಕೆಲಸವನ್ನು, ವಿಶ್ವನಾಥ್ ಅವರಿಗಿಂತ ಚೆನ್ನಾಗಿ ಮಾಡಿದ್ದಾರೆ. ಪ್ರಜಾಪ್ರಭುತ್ವಕ್ಕೆ ಗ್ರೀಕ್ ಸಮಾಜದ ಕೊಡುಗೆಯ ಬಗ್ಗೆ ಇದೊಂದು ಉತ್ತಮ ಪುಸ್ತಕ. ಈ ಪುಸ್ತಕವನ್ನು ಓದಿ, ಗ್ರೀಕ್ ದೇಶದ ಇಂದಿನ ಸ್ಥಿತಿಗತಿಗಳನ್ನು ಅವಲೋಕಿಸಿದಾಗ, ಟ್ರಾಯ್ ಯುದ್ದಕ್ಕೆ ಹೊರಡುವ ಮುನ್ನ, ಯುದ್ದದ ನಾಯಕ ಅಕಿಲೀಸ್ ಗೆ ಅವನ ತಾಯಿ ಹೇಳುವ ಮಾತು ನೆನಪಾಗುತ್ತದೆ: `your glory walks hand in hand with your doom’.
ಪತ್ರಿಕೋದ್ಯಮದ ಆರಂಭದಲ್ಲಿ ನಾನು ಕಂಡ ರಾಜಕಾರಣಿಗಳು ಈಗ ಪಳೆಯುಳಿಕೆಗಳಾಗಿದ್ದಾರೆ. ಅದರ ಕೊನೆಯ ಕೊಂಡಿಯೇ ವಿಶ್ವನಾಥ್ ಅಂದರೆ ತಪ್ಪಾಗಲಾರದು. ಆ ಕೊಂಡಿ ಕಳಚುವ ಮುನ್ನ, ಅವರ ಲೇಖನಿ ಮತ್ತಷ್ಟು ಮಾತನಾಡಲಿ ಅಂತ ಅನ್ನಿಸ್ತಿದೆ…..

ಮಾಕೋನಹಳ್ಳಿ ವಿನಯ್ ಮಾಧವ.
  

ಶುಕ್ರವಾರ, ಸೆಪ್ಟೆಂಬರ್ 7, 2018

ತೇಜಸ್ವಿ-80



ನೀವೇನೋ ಹೋಗ್ಬಿಟ್ರಿ, ನಾವೇನು ಮಾಡ್ಬೇಕು?

`ಅಲ್ಲ ಮಾರಾಯಾ, ನೀವು ಪತ್ರಕರ್ತರಿಗೆ ಯಾವುದಕ್ಕೆ ಪ್ರಾಮುಖ್ಯತೆ ಕೊಡ್ಬೇಕು ಅನ್ನೋದು ಯಾರು ಹೇಳ್ತಾರೆ? ನೀನೂ ಇದನ್ನೇ ಕೇಳ್ತಿದ್ದೀಯ ನೋಡು. ಕಾಫಿ ಪ್ಲಾಂಟರ್ ಗಳ ಒತ್ತುವರಿ. ಕುದುರೇಮುಖದ ಬಗ್ಗೆ ಮಾತಾಡ್ತಾ ಇದ್ದಲ್ಲ, ಅದು ಏನಾಯ್ತು ಈಗ? ಕುದುರೇಮುಖದಲ್ಲಿ ಆ ದೊಡ್ಡ ಯಂತ್ರಗಳು ಒಂದು ಬಕೆಟ್ ಮಣ್ಣು ಅಗೀತ್ತಾವಲ್ಲ, ಅದು ಪರಿಸರಕ್ಕೆ ಮಾಡೋ ಹಾನಿ, ಈ ಒತ್ತುವರಿ ನೂರು ವರ್ಷದಲ್ಲಿ ಮಾಡೋಕೆ ಆಗಲ್ಲ. ನಿಮಗೆ ಕಾಫೀ ಪ್ಲಾಂಟರ್ ಗಳನ್ನು ಕಳ್ಳರು ಅಂತ ಹೇಳಿ ಜನಗಳು ನಿಮ್ಮ ಪತ್ರಿಕೆಗಳನ್ನು ಜಾಸ್ತಿ ಓದುವಂತೆ ಮಾಡೋದು ಮುಖ್ಯನೋ ಅಥವಾ ಪರಿಸರ ಉಳಿಸೋದಾ?’
ಆಗ ತಾನೆ ತೇಜಸ್ವಿಯವರ ಪರಿಚಯವಾಗಿತ್ತು. ಬಹಳ ಜನರಿಗಿದ್ದಂತೆ, ಅವರಿಗೆ ಹತ್ತಿರವಾಗಬೇಕು ಅನ್ನೋ ಆಸೆ ನನಗೂ ಇತ್ತು. ಯಾವುದೇ ಕಾಡಿನ ವಿಷಯ ಬಂದರೂ, ಅವರ ಒಂದು ಪ್ರತಿಕ್ರಿಯೆ ತೆಗೆದುಕೊಳ್ಳೋಕೆ ಪ್ರಯತ್ನ ಮಾಡ್ತಿದ್ದೆ. ಒತ್ತುವರಿ ವಿಷಯದಲ್ಲಿ ಅವರ ಪ್ರತಿಕ್ರಿಯೆ ತೆಗೆದುಕೊಳ್ಳಲು ಫೋನ್ ಮಾಡಿದಾಗ, ಏನು ಹೇಳಬೇಕು ಅನ್ನೋದು ಗೊತ್ತಾಗದೆ ಸುಮ್ಮನಾದೆ. ಹಾಗಂತ ತೇಜಸ್ವಿಯವರೇನೂ ಒತ್ತುವರಿ ಮಾಡಿದವರ ಪರ ಯಾವತ್ತೂ ವಕಾಲತ್ತು ವಹಿಸಿದ್ದು ನಾನು ನೋಡಿಲ್ಲ.
ಎರಡು ಮೂರು ದಿನಗಳಿಂದ ಈ ವಿಷಯ ತಲೆಯಲ್ಲಿ ಕೊರೆಯುತ್ತಿತ್ತು. ಯಾಕೋ ಏನೋ, ಈ ಸಲ ತೇಜಸ್ವಿಯವರ ಹುಟ್ಟುಹಬ್ಬದ ದಿನ ಅವರ ಬಗ್ಗೆ ಏನೂ ಬರೆಯಬಾರದು ಅಂತ ತೀರ್ಮಾನಿಸಿದೆ. ತೀರ್ಮಾನಿಸಿ ಒಂದು ಘಂಟೆಯೂ ಆಗಿರಲಿಲ್ಲ, ಮಿತ್ರ ಪ್ರವೀಣ್ ಭಾರ್ಗವ್ ಫೋನ್ ಮಾಡಿದರು. ಅದೂ, ಇದೂ ಮಾತಾಡ್ತಾ, ತೇಜಸ್ವಿಯವರ ವಿಷಯ ಬಂತು. ಕುದುರೇಮುಖದಲ್ಲಿ ಗಣಿಗಾರಿಕೆಯ ವಿರುದ್ಧ ಕಾನೂನು ಸಮರದಲ್ಲಿ ಪ್ರವೀಣ್ ಭಾರ್ಗವ್ ಪಾತ್ರ ಬಹಳ ದೊಡ್ಡದು. ಮಾತಿನ ಮಧ್ಯದಲ್ಲಿ, `ಆಗ ಶಾಸಕರಿಗೆಲ್ಲ ಅಂತ ಒಂದು ಪತ್ರ ಬರೆದಿದ್ದೆವಲ್ಲ, ತೇಜಸ್ವಿ ಮತ್ತೆ ಅನಂತಮೂರ್ತಿಯವರೂ ಸಹಿ ಹಾಕಿದ್ದರಲ್ಲ, ಅದು ನನ್ನ ಹತ್ತಿರ ಇನ್ನೂ ಇದೆ,’ ಅಂದರು.
ಯಾಕೋ ತಡೆಯಲಾಗಲಿಲ್ಲ. `ಆ ಪತ್ರ ಕಳುಹಿಸಿ,’ ಅಂದೆ. ಆ ಪತ್ರವನ್ನು ಮೇಲಿಂದ ಕೆಳಗಿನವರೆಗೆ ಎರಡು ಸಲ ಓದುವಾಗ, ಆ ಪತ್ರದ ಹಿಂದಿನ ನೆಡೆದ ಘಟನಾವಳಿಗಳೆಲ್ಲ ಕಣ್ಣಮುಂದೆ ಹಾದು ಹೋಯಿತು. 2002 ರಲ್ಲಿ, ಸರ್ವೋಚ್ಚ ನ್ಯಾಯಾಲಯ 2005, ಡಿಸೆಂಬರ್ ನಿಂದ ಗಣಿಗಾರಿಕೆ ನಿಲ್ಲಿಸಬೇಕು ಎಂದು ಆದೇಶವನ್ನೇನೋ ಕೊಟ್ಟಿತ್ತು. ಆದರೆ, 2005ರ ಮಧ್ಯಭಾಗದಲ್ಲಿ, ಗಣಿಗಾರಿಕೆ ಕಂಪನಿ ಪುನರ್ವಿಮರ್ಶನಾ ಅರ್ಜಿಯನ್ನು ಸಲ್ಲಿಸಿತ್ತು. ಹೋರಾಟ ಶುರುವಾಗಿ ಎಂಟು ವರ್ಷಗಳಾಗಿತ್ತು ಮತ್ತು ಕಾನೂನು ಸಮರವೇ ಐದು ವರ್ಷಗಳಷ್ಟಾಗಿತ್ತು. ಇನ್ನು ಈ ಅರ್ಜಿಯನ್ನು ಪುರಸ್ಕರಿಸಿ, ಸರ್ವೋಚ್ಚ ನ್ಯಾಯಾಲಯ 2002ನೇ ಆದೇಶಕ್ಕೆ ತಡೆಯಾಜ್ಞೆ ನೀಡಿದರೆ, ಹೋರಾಟ ಮುಂದುವರೆಸಬೇಕಾಗುತ್ತಿತ್ತು. ರಾಜ್ಯ ಸರ್ಕಾರ, ನ್ಯಾಯಾಲಯದ ಮುಂದೆ ಸಲ್ಲಿಸುವ ಪ್ರಮಾಣಪತ್ರದ ಮೇಲೆ ಅರ್ಜಿಯ ಹಣೆಬರಹ ನಿಂತಿತ್ತು.
ಇದರ ಮಧ್ಯೆ ಊರಿಗೆ ಹೋಗಿದ್ದಾಗ ತೇಜಸ್ವಿಯವರ ಮನೆಗೆ ಹೋಗಿದ್ದೆ. ಕುದುರೆಮುಖದ ವಿಷಯ ಹೇಳಿದಾಗ, `ನಾನು ಹೇಳ್ದೆ ಅಂತ ಕಾನೂನು ಮಂತ್ರಿ ಪಾಟೀಲರಿಗೆ ಹೇಳು,’ ಅಂತ ಅಂದರು. ಅವರು ಹೇಳಿದ ರೀತಿ ನೋಡಿ ನಾನು ತೇಜಸ್ವಿ ಮತ್ತು ಎಚ್ ಕೆ ಪಾಟೀಲರು ಹಳೇ ಸ್ನೇಹಿತರಿರಬೇಕು ಅಂತ ತಿಳಿದು, ಬೆಂಗಳೂರಿಗೆ ಬಂದ ತಕ್ಷಣ ಪಾಟೀಲರನ್ನು ಭೇಟಿಯಾದೆ. ತೇಜಸ್ವಿಯವರ ಹೆಸರನ್ನು ಹೇಳಿದ ತಕ್ಷಣ ಪಾಟೀಲರ ಮುಖ ಅರಳಿತು.
`ತೇಜಸ್ವಿಯವರು ನನಗೆ ಸೂಚನೆ ಕೊಟ್ರೇ? ಬಹಳ ಸಂತೋಷ. ನೋಡಿ, ನಾನು ತೇಜಸ್ವಿಯವರನ್ನು ಭೇಟಿ ಮಾಡಬೇಕು ಅಂತ ಎಷ್ಟೋ ಕಾಲದಿಂದ ಅಂದುಕೊಂಡಿದ್ದೆ. ನಾಡಿದ್ದು ಗುರುವಾರ ರಾತ್ರಿ ಅವರನ್ನು ನಮ್ಮ ಮನೆಗೆ ಊಟಕ್ಕೆ ಕರೆದುಕೊಂಡು ಬನ್ನಿ. ನಿಮ್ಮ ಕೆಲಸ ಮಾಡಿಕೊಡುತ್ತೇನೆ,’ ಅಂದೇ ಬಿಟ್ಟರು. ನನಗೆ ಬಿಟ್ಟಿದ್ದ ಬಾಯಿ ಮುಚ್ಚೋಕೆ ಮರೆತೇ ಹೋಗಿತ್ತು.
ತೇಜಸ್ವಿಯವರನ್ನು ಮೂಡಿಗೆರೆಯಿಂದ ಬೆಂಗಳೂರಿಗೆ ಕರೆದುಕೊಂಡು ಬರೋದೇ ದೊಡ್ಡ ವಿಷಯ. ಅದರಲ್ಲೂ ರಾಜಕಾರಣಿಯೊಬ್ಬರ ಮನೆಗೆ, ನನ್ನ ತಪ್ಪು ಗ್ರಹಿಕೆಯಿಂದಾದ ಯಡವಟ್ಟನ್ನು ಸರಿಪಡಿಸೋಕೆ ಕರೆದುಕೊಂಡು ಬರಲು ಸಾಧ್ಯವೇ ಇಲ್ಲ ಅಂತ ಅನ್ನಿಸ್ತು. ನಾನೂ ಮತ್ತೆ ಪ್ರವೀಣ್ ಚರ್ಚೆ ಮಾಡಿ, ನನ್ನ ಸಂಬಂಧಿ ಗಿರೀಶನಿಗೆ ಈ ಕೆಲಸ ವಹಿಸಿದೆವು. ಅವರನ್ನು ಒಪ್ಪಿಸೋ ಹೊತ್ತಿಗೆ ಗಿರೀಶನಿಗೆ ನೀರಿಳಿದು ಹೋದರೆ, ಪಾಟೀಲರ ಮನೆ ಹತ್ತಿರ ಇಳಿದ ತಕ್ಷಣ, ತೇಜಸ್ವಿಯವರು ನನಗೆ ನೀರಿಳಿಸಿದರು. `ಅಲ್ಲಾ ಮಾರಾಯ, ಒಂದು ಕೆಲ್ಸ ಸರಿ ಮಾಡೋಕೆ ಬರ್ದೆ ಹೋದ್ರೆ, ಯಾಕೆ ಆ ಕೆಲ್ಸ ಮಾಡ್ಬೇಕು. ನಾಯಿಗೆ ಹೇಳಿದ್ರೆ, ಅದು ಬಾಲಕ್ಕೆ ಹೇಳ್ತಂತೆ. ಇದ್ರ ಮಧ್ಯ ನನ್ನ ಸಮಯ ಮತ್ತೆ ಕೆಲಸ ಎರಡೂ ಹಾಳು. ನಿಮಗೆಲ್ಲ ಯಾವಾಗ ಬುದ್ದಿ ಬರುತ್ತೋ ಏನೋ?’ ಅಂತ ಬೈಯುತ್ತಲೇ ಮನೆ ಒಳಗೆ ಹೋದರು.
ಹೋಗಿ ಕೂತು ಒಂದು ನಿಮಿಷವೂ ಆಗಿರಲಿಲ್ಲ. ಚಿತ್ರಣವೇ ಬದಲಾಯಿತು. ಪಾಟೀಲರ ಸಹೋದರ ಡಿ.ಆರ್. ಪಾಟೀಲರು ಮತ್ತು ಅವರ ಮನೆಯವರೆಲ್ಲ ತೇಜಸ್ವಿಯವರ ಹತ್ತಿರ ಬಂದು ಪರಿಚಯ ಮಾಡಿಕೊಂಡರು. ರಾಮಕೃಷ್ಣ ಆಶ್ರಮದ ವಿಷಯದಿಂದ ಶುರುವಾದ ಚರ್ಚೆ, ಜೀವನ, ಮಲೆನಾಡು, ಬಯಲುಸೀಮೆ, ಕೃಷಿ, ಪರಿಸರ ಹೀಗೇ ಸಾಗುತ್ತಿತ್ತು. ಊಟಕ್ಕೆ ಏಳುವಾಗ ಮಧ್ಯರಾತ್ರಿಯಾಗಿತ್ತು. ಇದರ ಮಧ್ಯೆ ಕುದುರೇಮುಖ ಕಳೆದೇ ಹೋಗಿತ್ತು. ನಾವು ತೆಗೆದುಕೊಂಡು ಹೋಗಿದ್ದ ದಾಖಲೆಗಳ ಕಂತೆಯನ್ನಾಗಲೀ, ಲ್ಯಾಪ್ ಟಾಪ್ ನಲ್ಲಿದ್ದ ಪವರ್ ಪಾಯಿಂಟ್ ಪ್ರೆಸೆಂಟೇಷನ್ ಆಗಲೀ ನೋಡಲು ಪಾಟೀಲರು ಒಪ್ಪಲೇ ಇಲ್ಲ.
ಕೊನೆಗೆ ತೇಜಸ್ವಿಯವರು ಕುದುರೇಮುಖದ ಬಗ್ಗೆ ವಿಷಯ ಎತ್ತುವಾಗಲೇ ಪಾಟೀಲರು ಅಡ್ಡ ಬಂದು ಆ ವಿಷಯದ ಬಗ್ಗೆ ತೇಜಸ್ವಿಯವರು ಚಿಂತಿಸುವ ಪ್ರಮೇಯವಿಲ್ಲ ಎಂದುಬಿಟ್ಟರು. ನನಗೆ ಮತ್ತು ಅವರ ಆಪ್ತ ಸಹಾಯಕ ಪುರೋಹಿತ್ ಕಡೆಗೆ ಕೈ ತೋರಿಸಿ, `ನೀವಿಬ್ಬರು ನೋಡಿಕೊಳ್ಳಿ, ಉಳಿದದ್ದು ನಾನು ಮಾಡ್ತೇನೆ,’ ಅಂದರು.
ಊಟ ಮುಗಿದು ಹೊರಡುವಾಗ, ಪಾಟೀಲರು ಒಂದು ಸಲಹೆ ನೀಡಿದರು. `ಈ ಕುದುರೇಮುಖ ಕಂಪನಿಯವರು ಕೆಲವು ಶಾಸಕರನ್ನು ಹಿಡಿದು ಗಲಾಟೆ ಮಾಡಿಸುವ ಸಾಧ್ಯತೆ ಇರುತ್ತದೆ. ನೀವು ಎಲ್ಲಾ ಶಾಸಕರಿಗೆ ಒಂದು ಪತ್ರ ಬರೆದು, ಅವರಿಗೆ ಅನಾಹುತದ ಬಗ್ಗೆ ವಿವರಣೆ ಕೊಟ್ಟಿರಿ. ಆಮೇಲೆ ನೋಡೋಣ,’ ಅಂದರು.
ಅದರಂತೆ, ಪ್ರವೀಣ್ ಪತ್ರವನ್ನು ತಯಾರು ಮಾಡಿ ತೇಜಸ್ವಿಯವರಿಗೆ ಕಳುಹಿಸಿದಾಗ, ಅವರು ಕೆಲವು ಬದಲಾವಣೆಗಳನ್ನೂ ಮಾಡಿದರು. ಯು ಆರ್ ಅನಂತಮೂರ್ತಿಯವರೂ ಸಹ ಆಗ ಕುದುರೇಮುಖ ಗಣಿಗಾರಿಕೆಯ ವಿರುದ್ದ ಚಳುವಳಿಯಲ್ಲಿ ಭಾಗವಹಿಸಿದ್ದರಿಂದ, ಅವರ ಸಹಿಯನ್ನೂ ಪಡೆಯಲಾಯಿತು. ಇನ್ನುಳಿದಂತೆ, ಅರ್ಜಿದಾರರಾದ ಚಿಣ್ಣಪ್ಪ ಮತ್ತು ಪ್ರವೀಣ್ ರವರು, ಮತ್ತೆ ವನ್ಯಜೀವಿ ಸಂಶೋಧನಕಾರರಾದ ಉಲ್ಲಾಸ್ ಕಾರಂತರ ಸಹಿಯನ್ನೂ ಹಾಕಿಸಲಾಯಿತು. ಆದರೆ, ಆ ಪತ್ರವನ್ನು ಬಿಡುಗಡೆ ಮಾಡುವ ಪ್ರಮೇಯವೇ ಬರಲಿಲ್ಲ. ಪುರೋಹಿತ್ ಮತ್ತು ಪಾಟೀಲರು ಎಷ್ಟು ಚೆನ್ನಾಗಿ ನಿಭಾಯಿಸಿದರೆಂದರೆ, ರಾಜ್ಯದ ಪ್ರಮಾಣಪತ್ರ ಗಣಿಗಾರಿಕೆಯ ವಿರುದ್ದವಾಗಿ ಸಲ್ಲಿಕೆಯಾಯಿತು. ಕಂಪನಿಯ ಅರ್ಜಿ ವಜಾ ಆಯಿತು.
ಡಿಸೆಂಬರ್ 31, 2005 ರಲ್ಲಿ ಕುದುರೇಮುಖದಲ್ಲಿ ಗಣಿಗಾರಿಕೆ ಕೊನೆಗೊಂಡರೆ, 2007, ಏಪ್ರಿಲ್ ನಲ್ಲಿ, ತೇಜಸ್ವಿಯವರು ಹೋಗಿಬಿಟ್ಟರು.
ಇದೆಲ್ಲದರ ನೆಡುವೆ, ಮಲೆನಾಡಿನ ಅವನತಿಗೆ ಒಂದು ಬೀಜ ಮೊಳಕೆಯೊಡೆಯಲು ಶುರುವಾಗಿದ್ದನ್ನು ನಾವು ನಿರ್ಲಕ್ಷಿಸಿದ್ದೆವೆಂದೇ ಹೇಳಬೇಕು. 2003ರ ಕೊನೆ ಭಾಗದಲ್ಲಿರಬೇಕು. ಮಲೆನಾಡಿನವರೇ ಆದ, ನನ್ನ ದೂರದ ಸಂಬಂಧಿ ಮತ್ತು ಐಎಎಸ್ ಅಧಿಕಾರಿಯಾಗಿದ್ದ ಐ ಎಂ ವಿಠ್ಠಲಮೂರ್ತಿಯವರು `ಹೋಂ ಸ್ಟೇ’ ಅನ್ನೋ ಕಲ್ಪನೆಯನ್ನು ಪ್ರವಾಸೋಧ್ಯಮ ಇಲಾಖೆಯಿಂದ ಹರಿಬಿಟ್ಟರು. ವಿದೇಶ ಪ್ರವಾಸಕ್ಕೆ ಹೋದಾಗ, ಸ್ವಿಟ್ಸರ್ಲೆಂಡಿನಲ್ಲಿ ಈ ಮಾದರಿಯ ಪ್ರವಾಸೋಧ್ಯಮ ಬಹಳ ಜನಪ್ರಿಯ ಅಂತ ನನ್ನ ಬಳಿ ಹೇಳಿದರು.
`ಅಲ್ಲ ಅಣ್ಣ, ಸ್ವಿಟ್ಸರ್ಲೆಂಡಿಗೂ, ನಮ್ಮ ಮಲೆನಾಡಿಗೂ ವ್ಯತ್ಯಾಸ ಇಲ್ವಾ? ಈಗ ಹಾಳಾಗಿರೋದೇ ಸಾಕು. ಇವೆಲ್ಲ ಮಾಡಿ ಇನ್ನಷ್ಟು ಅಧ್ವಾನ ಮಾಡೋದು ಬೇಡ,’ ಅಂತ ನೇರವಾಗಿ ಹೇಳಿದೆ.
`ಹಾಗಲ್ಲ… ಅಲ್ಲಿರೋ ನಮ್ಮ ಹುಡುಗರಿಗೆ ಕೆಲಸ ಇರೋದಿಲ್ಲ. ಅವರಿಗೆಲ್ಲ ಇದೊಂಥರಾ ಬ್ಯುಸಿನೆಸ್ ಆಗುತ್ತದೆ. ಖಾಲಿ-ಪೋಲಿ ಸುತ್ಕೊಂಡು ಇರೋದ್ ಬಿಟ್ಟು, ಸಂಪಾದನೆ ಮಾಡೋಕೆ ಶುರುಮಾಡ್ತಾರೆ. ನಮ್ಮಲ್ಲಿ ಏನೇನು ಇದೆ ಅನ್ನೋದನ್ನ ಬೇರೆಯವರಿಗೂ ತೋರಿಸ್ಬೇಕಲ್ಲಾ? ಹೊಸದೊಂದು ಎಕಾನಮಿನೇ ಶುರುವಾಗುತ್ತೆ, ನೋಡ್ತಿರಿ,’ ಅಂದರು.
`ದುಡ್ಡು ಮಾಡೋದೇ ಮುಖ್ಯ ಆದರೆ, ಇವೆಲ್ಲ ಯಾಕೆ. ಕ್ಯಾಸಿನೋ ಹಾಕಿದ್ರೆ ಸಾಕು. ಅದ್ರ ಜೊತೆ ಥಾಯ್ಲೆಂಡ್ ಥರ ಸೆಕ್ಸ್ ಟೂರಿಸಂ ಶುರುಮಾಡಿದ್ರೆ, ಬೇಕಾದಷ್ಟು ದುಡ್ಡು ಬರುತ್ತೆ. ಹಾಗಂತ ಎಲ್ಲಾದನ್ನೂ ಹಾಳು ಮಾಡ್ತಾ ಕೂರೋಕೆ ಆಗುತ್ತಾ?,’ ಅಂತ ನೇರವಾಗಿ ಹೇಳಿದೆ.
`ಅದಕ್ಕೆ ನೋಡಿ ನಮ್ಮ ದೇಶ ಮುಂದೆ ಬರ್ತಾ ಇಲ್ಲ. ಇವೆಲ್ಲ ಹಳೇಕಾಲದ ಯೋಚನೆಗಳು. ಸುಮ್ಮನೆ ಇರೋ ನಮ್ಮ ಹುಡುಗರ ಕೈಗೆ ದುಡ್ಡು ಬರಬೇಕು. ಆಗ ಅವರು ಚುರುಕಾಗ್ತಾರೆ. ದೇಶದ ಸಂಪತ್ತೂ ಜಾಸ್ತಿಯಾಗುತ್ತೆ,’ ಅಂತ  ಹೇಳಿದರು.
`ನೋಡಿ ಅಣ್ಣ, ನಾನೂ ಎಕನಾಮಿಕ್ಸ್ ಓದಿದವನು. ಬರೀ ಜಿಡಿಪಿ, ಗ್ರೋತ್ ರೇಟ್, ಎಂಪ್ಲಾಯ್ ಮೆಂಟು ಅಂತ ಹೇಳ್ಕೊಂಡು, ಒಂದಿಷ್ಟು ಅಂಕಿ, ಅಂಶಗಳನ್ನು ಜನಗಳ ಮುಖಕ್ಕೆ ಎರಚಿ ಬೆಳವಣಿಗೆ ಅಂತ ಬಡ್ಕೋತ್ತಿದ್ದೀವಿ ಅಷ್ಟೆ. ಅದು ನಮ್ಮ ಜೀವನಾನ ಎಷ್ಟರ ಮಟ್ಟಿಗೆ ಹಾಳು ಮಾಡಿದೆ ಅನ್ನೋದನ್ನ ಯಾರೂ ಮಾತಾಡ್ತಿಲ್ಲ. ಮಾತಾಡೋದೆಲ್ಲ ಏನಿದ್ರೂ ಯಾವ ಕಾರು, ಎಷ್ಟರ ಮನೆ, ಎಷ್ಟು ಸಂಬಳ ಅಂತ. ಅಲ್ಲ ಅಣ್ಣ, ಇಲ್ಲಿ ಕೆಲಸಕ್ಕೆ ಸೇರ್ತಾರಲ್ಲ, ನಲ್ವತ್ತು, ಐವತ್ತು ಸಾವಿರ ಸಂಬಳ ತಗೊಂಡು, ಅವರಿಗೆ ಕೆಲಸ ಹೋದ್ರೆ ಏನಾಗುತ್ತೆ ಅಂತ ನೀವ್ಯಾವತ್ತಾದ್ರೂ ಯೋಚನೆ ಮಾಡಿದ್ದೀರಾ? ಮನೆ, ಫ್ಲ್ಯಾಟು ಎಲ್ಲಾ ಮಾರ್ಕೊಂಡು ಹೋಗ್ಬೇಕಾಗುತ್ತೆ, ಬೇರೆ ಕಡೆ ಕೆಲ್ಸ ಸಿಗದಿದ್ರೆ. ಈ `ಡಾಟ್ಕಾಮ್’ ಕಂಪನಿಗಳು ಮುಚ್ಚಿದಾಗ ನಾವು ನೋಡಿರ್ಲಿಲ್ವಾ?’ ಅಂದೆ.
`ಎಲ್ಲಾದಕ್ಕೂ ಹಾಗೇ ಯೋಚನೆ ಮಾಡಿದ್ರೆ ಹ್ಯಾಗೆ? ನಾವು ಜೀವನದಲ್ಲಿ ಪಾಸಿಟಿವ್ ಆಗಿರ್ಬೇಕು. ಮುಂದೆ ನೋಡಿ, ನಮ್ಮ ಮಲೆನಾಡಿನ ಜೀವನ ಹೇಗಾಗುತ್ತೆ ಅಂತ,’ ಅಂದರು.
`ಏನಾದ್ರೂ ಮಾಡ್ಕೊಂಡು ಸಾಯ್ರಿ, ನಂಗೇನಾಗ್ಬೇಕು? ಬಟ್ಟೆ ಬಿಚ್ಚಿ ಬೆತ್ತಲೆಯಾಗೋದೊಂದು ಬಾಕಿಯಾಗಿದೆ ಅಷ್ಟೆ,’ ಅಂತ ಸಿಟ್ಟಿನಲ್ಲಿ ಎದ್ದು ಹೊರಗೆ ಹೋದೆ. ಅಲ್ಲಿಂದ ನೇರವಾಗಿ ಐಜಿಪಿ ಯಾಗಿದ್ದ ಚಿಕ್ಕಮಗಳೂರಿನ ಟಿ ಜಯಪ್ರಕಾಶ್ ರವರ ಆಫೀಸಿಗೆ ಹೋಗಿ, ವಿಷಯ ಹೇಳಿದೆ.
`ಅಣ್ಣ, ನೀವಾದ್ರೂ ಅವ್ರಿಗೆ ಹೇಳಿ. ಇಲ್ಲದ್ದನೆಲ್ಲ ಮಾಡೋಕೆ ಹೊರಟಿದ್ದಾರೆ,’ ಅಂತ ಹೇಳಿದೆ.
`ಯಾರು ಮಾತಾಡ್ತಾರೆ ಅವರ ಹತ್ರ. ಬರೀ ಶೋಕಿ ಅಷ್ಟೆ, ಆ ಮನುಷ್ಯಂಗೆ. ಆ ಪಿಕ್ಚರ್ ತೆಗೆದು, ಒಂದಿಷ್ಟು ಹೈ ಸೊಸೈಟಿಯವರ ಜೊತೆ ಇರ್ತಾರೆ. ಇವ್ರಿಗೆಲ್ಲ ನಮ್ಮೂರು ಅಂದ್ರೆ ಮಾರಾಟದ ವಸ್ತು ಆಗಿದೆ ಅಷ್ಟೆ. ಮಾತಾಡೋದ್ರಿಂದ ಏನೂ ಪ್ರಯೋಜನ ಇಲ್ಲರಿ. ನಮ್ಮ ತಲೆ ಹಾಳಾಗುತ್ತೆ, ಗಂಟಲು ನೋವುತ್ತೆ, ಅಷ್ಟೆ,’ ಅಂತ ಅವರು ತಣ್ಣಗೆ ಹೇಳಿದಾಗ, ತೆಪ್ಪಗಾದೆ. ವಿಠ್ಠಲಮೂರ್ತಿಯವರು , ಕುವೆಂಪುರವರ ಕಾನೂರು ಸುಬ್ಬಮ್ಮ ಹೆಗ್ಗಡತಿ ಕಾದಂಬರಿಯನ್ನು ಚಲನಚಿತ್ರವಾಗಿ ಮಾಡಿದ್ದರು ಮತ್ತು ಅದಕ್ಕೆ ರಾಷ್ಟ್ರ ಪ್ರಶಸ್ತಿಯೂ ದೊರೆತಿತ್ತು.
ಆ ವಿಷಯ ನನ್ನ ತಲೆಯಿಂದ ಹಾಗೇ ಜಾರಿಹೋಯಿತು. ಮತ್ತೆರೆಡು ವರ್ಷ ಚುನಾವಣೆಯಲ್ಲಿ ಎಸ್ ಎಂ ಕೃಷ್ಣ ಸರ್ಕಾರ ಸೋತು, ಸಮ್ಮಿಶ್ರ ಸರ್ಕಾರ ಬಂದಿದ್ದು, ಕುದುರೇಮುಖದ ವಿಷಯ, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದು, ಹೀಗೇ ಕಳೆದುಹೋಯಿತು. ನಮ್ಮದೇ ನೂರೆಂಟು ವಿಷಯಗಳ ಬಗ್ಗೆ `ಹೋಂ ಸ್ಟೇ’ ಅನ್ನೋ ವಿಷಯ ನನಗೆ ಗಮನದಲ್ಲಿಟ್ಟುಕೊಳ್ಳಬೇಕು  ಅಂತ ಅನ್ನಿಸಿರಲಿಲ್ಲ.
ನಿಧಾನವಾಗಿ, ಬೆಂಗಳೂರಿನಿಂದ ಬಹಳ ಜನ ಕೊಡಗಿಗೆ ಹೋಗಿ ಬರುತ್ತಿದ್ದಾರೆ ಅನ್ನುವುದು ನನ್ನ ಗಮನಕ್ಕೆ ಬರಲು ಶುರುವಾಯಿತು. ಮುಂಚೆ ಊಟಿಗೆ ಹೋಗಿ ಬರುವವರೆಲ್ಲ ಈಗ ಕೊಡಗಿಗೆ ದಾಳಿ ಇಡುತ್ತಿದ್ದಾರೆ ಅಂತ ತಿಳಿದಾಗ, ಮಡಿಕೇರಿಯ ಬಾಲಾಜಿಗೆ ಫೋನ್ ಮಾಡಿದೆ.
`ಸಾವು ಮಾರಾಯ… ಈ ಹೋಂ ಸ್ಟೇಗಳ ಹಾವಳಿ. ಶುಕ್ರವಾರ ಸಾಯಂಕಾಲಕ್ಕೆ ಮಡಿಕೇರಿಯಲ್ಲಿ ಟ್ರಾಫಿಕ್ ಜಾಮ್ ಆದರೆ, ಭಾನುವಾರ ಸಾಯಂಕಾಲವೇ ಸರಿ ಆಗೋದು. ಜೀವನ ಬರ್ಬಾದ್ ಆಗಿದೆ,’ ಅಂದ.
`ಅಲ್ವೋ, ನಿನ್ನ ಅಂಗಡೀಲಿ ವ್ಯಾಪಾರ ಜೋರಾಗಿರಬೇಕಲ್ಲ?’ ಅಂದೆ.
`ಈ ಥರದ ಜೀವನ ಆದ್ರೆ ವ್ಯಾಪಾರ ಆದ್ರೆಷ್ಟು, ಬಿಟ್ರೆಷ್ಟು…. ಲೈಫೇ ಇಲ್ಲ ಕಣೋ ಇಲ್ಲಿಯವರಿಗೆ. ಎಲ್ಲಾ ಕಡೆಯಿಂದ ಬಂದವರ ಸೇವೆ ಮಾಡ್ಕೊಂಡು, ಅವ್ರ ಕಸ ತೊಳೆಯೋ ಕೆಲಸ ಆಗಿದೆ. ಹೋಂ ಸ್ಟೇಗಳ ಒಂದೊಂದು ಕಥೆ ಕೇಳಿದರೆ ಗಾಭರಿಯಾಗ್ತದೆ. ಇಲ್ಲಿ ಬರೋ ಜನಗಳೋ, ದೇವರಿಗೇ ಪ್ರೀತಿ. ಅವರನ್ನು ಮನುಷ್ಯರು ಅಂತ ಹೇಳೋಕೆ ನಾಚಿಗೆಯಾಗುತ್ತೆ. ಎಲ್ಲಾ ಕಡೆ ಕಸ ಎಸೀತ್ತಾರೆ, ಗಲೀಜು ಜನಗಳು. ಸಾಕಾಗಿ ಹೋಗಿದೆ ಮಾರಾಯ,’ ಅಂದ.
`ನಾನೂ ಮಡಿಕೇರಿಗೆ ಬಂದು ಹತ್ತು ವರ್ಷ ಆಗ್ತಾ ಬಂತು ಅಂತ ಕಾಣುತ್ತೆ. ಹುಣಸೂರಿನಿಂದ ನಾಗರಹೊಳೆಗೆ ತಿರುಗಿಸಿ, ಹಾಗೇ ವಾಪಾಸ್ ಹೋಗ್ತೀನಿ. ಈ ಕಾಟ ಇನ್ನೂ ಚಿಕ್ಕಮಗಳೂರಿಗೆ ಕಾಲಿಟ್ಟಿಲ್ಲ ನೋಡು,’ ಅಂದೆ.
`ಅದೇನೂ ದೂರ ಇಲ್ಲ. ಅಲ್ಲೂ ಇದ್ದಾವೆ, ಇಷ್ಟಿಲ್ಲ. ನೋಡ್ತಾ ಇರು, ಅಲ್ಲೂ ಬರ್ತಾವೆ,’ ಅಂದ.
ಹಾಗೇ ಯೋಚನೆ ಮಾಡುತ್ತಾ ಕೂತೆ. ಎಷ್ಟೊಂದು ಬದಲಾವಣೆಗಳಾಗಿವೆ ಅನ್ನಿಸಿತು. ನಮ್ಮ ಮನೆಯಲ್ಲೇ ಗದ್ದೆ ಮಾಡೋದನ್ನ ಬಿಟ್ಟಿದ್ದೆವು. ನಿಧಾನವಾಗಿ ಒಬ್ಬೊಬ್ಬರೇ ಗದ್ದೆ ಮಾಡುವುದನ್ನು ನಿಲ್ಲಿಸುತ್ತಿದ್ದರು. ಇದ್ದ ಬದ್ದ ಗದ್ದೆ ಬೈಲುಗಳೆಲ್ಲ ಶುಂಠಿ ಬೆಳೆಸಿ, ಕಾಫೀ ತೋಟಗಳಾಗಿ ಮಾರ್ಪಾಡಾಗಲು ಶುರುವಾಗಿತ್ತು. ನಿಧಾನವಾಗಿ, ಎಷ್ಟೋ ಹಳ್ಳಗಳು ಹರಿಯುವುದನ್ನೇ ನಿಲ್ಲಿಸಿದ್ದವು. ನಾನು ನೋಡಿದ ಅತೀ ದೊಡ್ಡ ಗದ್ದೆಬೈಲು ಅಂದರೆ ವಿರಾಜಪೇಟೆಯ ಹತ್ತಿರದ ಬಿಟ್ಟಂಗಾಲ. ಅಲ್ಲಿಯೂ ಗದ್ದೆ ಮಾಡುವುದನ್ನು ನಿಲ್ಲಿಸಿ, ವಿರಾಜಪೇಟೆಯ ಕಡೆಯಿಂದ ಮನೆಗಳನ್ನು ಕಟ್ಟುವುದಕ್ಕೆ ಶುರುಮಾಡಿದ್ದಾರೆ.
ಬೆಂಗಳೂರು-ಹಾಸನ ಮಧ್ಯದ ರಸ್ತೆ ಅಭಿವೃದ್ಧಿಯಾದಮೇಲೆ, ಹೋಂ ಸ್ಟೇ ಹಾವಳಿ ಸಕಲೇಶಪುರ, ಮೂಡಿಗೆರೆ ಮತ್ತು ಚಿಕ್ಕಮಗಳೂರಿಗೆ ದಾಳಿ ಇಟ್ಟವು. ತೋಟದ ಕೆಲಸಕ್ಕಿಂತ, ಆಳುಗಳಿಗೆ ಹೋಂ ಸ್ಟೇ ಕೆಲಸ ಬಹಳ ಇಷ್ಟವಾಗತೊಡಗಿತು. ಜೀವನ ಶೈಲಿಯೇ ಬದಲಾಯಿತು. ಮುಂಚೆಲ್ಲ ಊರಿಗೆ ಹೋದರೆ, ನಮ್ಮ ಕುಟುಂಬದವರ ಮನೆಗಳಿಗೆ ಹೋಗುವುದು ಸಹಜ. ಈಗ, ಅವರ ಮನೆಯಲ್ಲಿ ಹೋಂ ಸ್ಟೇ ಇದ್ದರೆ, ಹೋಗಲು ಹಿಂಜರಿಯುತ್ತೇವೆ. ಅವರಿಗೂ ಇಷ್ಟವಾಗುವುದಿಲ್ಲ. ಕುಟುಂಬಗಳಲ್ಲಿದ್ದ ಅನೋನ್ಯತೆಗೆ ಕುತ್ತು ಬಂದಂತೆ ಅನ್ನಿಸುತ್ತಿದೆ. ಯಾರಿಗೂ ಅದರ ಬಗ್ಗೆ ಪರಿತಾಪವಿಲ್ಲ. ಕಾಡನ್ನು ಒತ್ತುವರಿ ಮಾಡಿ ಹೋಂ ಸ್ಟೇ, ರೆಸಾರ್ಟ್ ಮಾಡುವವರಿಗೆ ಲೆಖ್ಖವಿಲ್ಲ. ನಿಯಂತ್ರಿಸುವವರು ಯಾರೂ ಇಲ್ಲ. ಎಲ್ಲರ ಲಕ್ಷ್ಯವಿರುವುದು ಕುಣಿಯುವ ಕಾಂಚಾಣದ ಮೇಲೆ ಮಾತ್ರ.
ವಾರಾಂತ್ಯದಲ್ಲಿ ಎಲ್ಲಿ ನೋಡಿದರೂ ಬೆಂಗಳೂರಿನಿಂದ ಬರೋ ಕಾರುಗಳನ್ನು ನೋಡಿದರೆ ಗಾಭರಿಯಾಗುತ್ತದೆ. ಬಸ್ಸಿನಲ್ಲಿ ಬರುವವರ ಸಂಖ್ಯೆಯೂ ಕಡಿಮೆಯಿಲ್ಲ. ಚಿಕ್ಕಮಗಳೂರಿನ ಎಂ ಜಿ ರಸ್ತೆ, ವಾರಾಂತ್ಯದಲ್ಲಿ ತೆರೆದ ಬಾರ್ ಆಗಿರುತ್ತದೆ ಅಂತ ನಮ್ಮವರೇ ಹೇಳುತ್ತಾರೆ. ಇನ್ನು ವಾರಾಂತ್ಯಕ್ಕೆ ಹೊಂದಿಕೊಂಡಂತೆ ರಜೆ ಇದ್ದರಂತೂ ಕೇಳುವುದೇ ಬೇಡ. ಹೋದ ವರ್ಷ, ಒಂದೇ ದಿನದಲ್ಲಿ ಮುಳ್ಳಯ್ಯನಗಿರಿಗೆ 75000 ಜನ ಬಂದಿದ್ದರಂತೆ. ಗಿರಿ ರಸ್ತೆಯಲ್ಲಿ ಐದು ಕಿಲೋಮೀಟರ್ ಟ್ರಾಫಿಕ್ ಜಾಮ್. ಕೇಳಿ ತಲೆ ಕೆಟ್ಟು ಹೋಯಿತು. ಈ ಶನಿ ಸಂಸ್ಕೃತಿ ನಿಧಾನವಾಗಿ ಶಿವಮೊಗ್ಗ, ಉತ್ತರಕನ್ನಡ ಮತ್ತು ಬೆಳಗಾವಿ ಜಿಲ್ಲೆಗಳನ್ನೂ ಆವರಿಸುತ್ತಿದೆ.
ಇದರ ನೆಡುವೆ ವಕ್ಕರಿಸಿದ ಇನ್ನೊಂದು ಭೂತವೇ ಎತ್ತಿನಹೊಳೆ ಯೋಜನೆ. ಇದರ `ಪ್ರಯೋಜನ’ ಪ್ರಪಂಚಕ್ಕೇ ಗೊತ್ತಿದ್ದರೂ, ಯಾರೂ ನಿಲ್ಲಿಸಲಾಗಲಿಲ್ಲ. ವಿರೋಧ ಪಕ್ಷದಲ್ಲಿದ್ದಾಗ ವಿರೋಧಿಸಿದ ಎಚ್ ಡಿ ಕುಮಾರಸ್ವಾಮಿಯವರೂ ಮೌನಕ್ಕೆ ಶರಣಾಗಿದ್ದಾರೆ. ನಮ್ಮ ರಾಜ್ಯದ `ನೀತಿ ಚಿಂತಾಮಣಿ’ ಒಬ್ಬರು, ಈ ಯೋಜನೆಯನ್ನು ವಿರೋಧಿಸಲು ವಿದೇಶಗಳಿಂದ ಪರಿಸರವಾದಿಗಳಿಗೆ ಹಣ ಹರಿದು ಬಂದಿದೆ ಅಂತ ವಿಧಾನಸಭೆಯಲ್ಲೇ ಆರೋಪಿಸಿದರು. ಅವರ ವಿರುದ್ದ ಅರಣ್ಯ ಒತ್ತುವರಿಯ ಆರೋಪ ಬಂದಾಗ, ಅದು ವಿರೋಧಿಗಳ ಕುತಂತ್ರ ಅಂತ ವಾದಿಸಿದವರು. ಹಾಗೆಯೇ, ಈ ಹದಿಮೂರು ಸಾವಿರ ಕೋಟಿ ರೂಪಾಯಿಯ ಯೋಜನೆಯ ಕಮಿಷನ್ ಎಷ್ಟು ಅಂತ ಆಡಳಿತ, ವಿರೋಧಿ ಪಕ್ಷದವರ್ಯಾರೂ ಚಕಾರವೆತ್ತುತ್ತಿಲ್ಲ. ಇದೆಲ್ಲದರ ಮಧ್ಯ ಸೊರಗಿದ್ದು ಮಲೆನಾಡು ಮಾತ್ರ.
ಎತ್ತಿನ ಹೊಳೆ ನಂತರ ಎಲ್ಲರ ಕಣ್ಣು ಬಿದ್ದಿರುವುದು ಎತ್ತಿನ ಭುಜದ ಮೇಲೆ. ಶಿಶಿಲ-ಭೈರಾಪುರ ರಸ್ತೆ ಮಲೆನಾಡಿನ ಅಭಿವೃದ್ದಿಯ ಪಥ ಎಂದೇ ರಾಜಕಾರಣಿಗಳು ಬಣ್ಣಿಸುತ್ತಿದ್ದಾರೆ. ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರಿಂದ ಹಿಡಿದು, ಎಲ್ಲಾ ರಾಜಕಾರಣಿಗಳೂ ಇದರ ಹಿಂದೆ ಬಿದ್ದಿದ್ದಾರೆ. ಈ ರಸ್ತೆ ಬಂದರೆ, ತಮ್ಮ ಆಸ್ತಿಗಳಿಗೆ ಎಕರೆಗೆ 40 ಲಕ್ಷ ರೂಪಾಯಿ ದೊರಕುತ್ತದೆ ಅಂತ ಅಲ್ಲಿನ ಜನಗಳೂ ನಂಬಿದ್ದಾರೆ. ಒಂದು ಕಡೆ ಶಿರಾಡಿ, ಇನ್ನೊಂದು ಕಡೆ ಚಾರ್ಮಾಡಿ ರಸ್ತೆಗಳು ಇರುವಾಗ, ಇನ್ನೊಂದು ರಸ್ತೆ ಯಾಕೆ ಅಂತ ಕೇಳುವವರನ್ನು ಅಭಿವೃದ್ಧಿ ವಿರೋಧಿಗಳು ಅಂತ ಬಿಂಬಿಸುತ್ತಾರೆ. ಇವರ ಪ್ರಕಾರ ಅಭಿವೃದ್ದಿ ಅಂದರೆ ಟಾರು ಮತ್ತು ಕಾಂಕ್ರೀಟು.
ಈ ಯೋಜನೆಯನ್ನು ಕೈಬಿಡುವಂತೆ ಮನವೊಲಿಸಲು ನನ್ನ ಕುಟುಂಬದವರೇ ಆದ ಮತ್ತು ಎಂಎಲ್ಸಿಯಾಗಿರುವ ಪ್ರಾಣೇಶಣ್ಣನ ಹತ್ತಿರ ಕೆಲವರು ಹೋದಾಗ, ಅವರನ್ನು ಬೈದು ಕಳುಹಿಸಿದರಂತೆ. ನನಗೆ ಅಂಗೈ ತೋರಿಸಿ ಅವಲಕ್ಷಣ ಅನ್ನಿಸಿಕೊಳ್ಳುವ ತೆವಲು ಇಲ್ಲದಿರುವುದರಿಂದ, ನಾನು ಯಾವತ್ತೂ ಆ ವಿಷಯವನ್ನು ಅವರ ಹತ್ತಿರ ಮಾತನಾಡಲು ಹೋಗಲಿಲ್ಲ. ಆದರೆ, ಒಂದು ಮಾತಂತೂ ಸತ್ಯ. ಈ ಯೋಜನೆಯ ಹಿಂದಿರುವವರು  ಕಾಂಟ್ರಾಕ್ಟರ್ ಗಳು ಮತ್ತು ಇವರ ಕಮಿಷನ್ ಗೋಸ್ಕರ ಪಕ್ಷಾತೀತವಾಗಿ ಎಲ್ಲರೂ ತಮ್ಮನ್ನು ಮಾರಿಕೊಂಡಿದ್ದಾರೆ.
ಮೂಡಿಗೆರೆಯ ಚಿತ್ರಣವೇ ಬದಲಾಗಿದೆ. ಹೋದ ವರ್ಷ ದೇವರ ಮನೆಗೆ ಹೋಗುವಾಗ, ದಾರಿಯಲ್ಲಿ ಅರುಂದತಿ ಅಕ್ಕನ ಮನೆಗೆ ಹೋಗಿದ್ದೆ. ಮನೆ ತುಂಬಾ ಚೆನ್ನಾಗಿದೆ. ತೋಟದ ಚಿತ್ರಣ ನೋಡಿ ಬೆಚ್ಚಿಬಿದ್ದೆ. ರೋಬಸ್ಟಾ ತೋಟಕ್ಕೆ ನೆರಳು ಬೇಕು ಅಂತ ಇದ್ದ ಕಾಡುಮರಗಳನ್ನೆಲ್ಲ ತೆಗೆದು, ಅಲ್ಲೊಂದು, ಇಲ್ಲೊಂದು ಸಿಲ್ವರ್ ಮರ ಬಿಟ್ಟಿದ್ದಾರೆ. ಅದು ಇವರೊಬ್ಬರಿಗೆ ಮಾತ್ರ ಸೀಮಿತವಾಗಿಲ್ಲ. ಮೂಡಿಗೆರೆ-ಬಣಗಲ್ ರಸ್ತೆಯಿಂದ ದೇವರ ಮನೆಗೆ ಎಡಕ್ಕೆ ತಿರುಗಿದ ತಕ್ಷಣದಿಂದ ಶುರುವಾಗುತ್ತೆ. ಎಲ್ಲೆಲ್ಲಿ ಕಾಫೀ ತೋಟಗಳಿವೆಯೋ, ಅಲ್ಲೆಲ್ಲ ಇದೇ ಅವಸ್ಥೆ. ಇದೇ ದಾರಿಯಲ್ಲಿ ಮುಂದೆ ಹೋದರೆ ಭೈರಾಪುರ-ಶಿಶಿಲ ಸಿಗುವುದು.
ಮುಂಚೆಲ್ಲ ದೇವರ ಮನೆ, ಕೋಗಿಲೆಗೆ ಹೋಗುವುದೆಂದರೆ ಅದೊಂದು ಸಾಹಸವೇ ಸರಿ. ಕಗ್ಗಾಡು. ತೇಜಸ್ವಿಯವರ ನಿಗೂಡ ಮನುಷ್ಯರು, ಹುಲಿಯೂರಿನ ಸರಹದ್ದು, ಕಿರಗೂರಿನ ಗಯ್ಯಾಳಿಗಳ ವಿವರಗಳನ್ನು ನೋಡಿದರೆ, ಈ ಜಾಗವನ್ನು ನೋಡಿದಂತೆ ಅನ್ನಿಸುತ್ತಿತ್ತು. ಈಗ ದೇವರ ಮನೆಗೆ ವಾರಾಂತ್ಯದಲ್ಲಿ ಕಾಲಿಡಲು ಸಾಧ್ಯವೇ ಇಲ್ಲ. ಜನಗಳ ಜಾತ್ರೆ.
ತೇಜಸ್ವಿಯವರ ವರ್ಣನೆಯಂತೆ ಮೂಡಿಗೆರೆಯ ಸೌಂದರ್ಯ ಆಸ್ವಾದಿಸಲು ಸಾಧ್ಯವೇ ಇಲ್ಲ. ಯಾಕಂದರೆ, ಎರ್ರಾಬಿರ್ರಿಯಾಗಿ ಬರುವ ಬೆಂಗಳೂರಿನ ಕಾರುಗಳಿಂದ ತಪ್ಪಿಸಿಕೊಳ್ಳುವುದೇ ಒಂದು ದೊಡ್ಡ ಸಾಹಸ. ವಾರಾಂತ್ಯದಲ್ಲಿ, ಹೋಂಸ್ಟೇ ಮತ್ತು ರೆಸಾರ್ಟ್ ಗಳಲ್ಲಿ ಹಾಕುವ ಸಂಗೀತ ಎರಡು, ಮೂರು ಕಿಲೋಮೀಟರ್ ದೂರಕ್ಕೆ ಕೇಳುತ್ತಿರುತ್ತದೆ. ಎಲ್ಲೂ ಉಳಿಯಲು ಜಾಗ ಸಿಗದಿದ್ದವರು, ಯಾರಾದದರೂ ತೋಟದ ಬೇಲಿ ಪಕ್ಕದಲ್ಲಿ ಪಾರ್ಟಿ ಮಾಡಿ ಹೋಗಿರುತ್ತಾರೆ. ಬೆಳಗ್ಗೆ ಎದ್ದಾಗ ಬೇಲಿ ಪಕ್ಕದಲ್ಲಿರುವ ಪ್ಲಾಸ್ಟಿಕ್ ಮತ್ತು ಬಾಟ್ಲಿಗಳ ರಾಶಿ ನೋಡಿದಾಗಲೇ ಗೊತ್ತಾಗುವುದು. ಒಟ್ಟಾರೆ, ಬೆಂಗಳೂರಿನ ಜನಗಳು ವಾರಾಂತ್ಯ ಪಾರ್ಟಿಗೆ ಅಂತ ಮೂರೂವರೆ ಘಂಟೆ ಪ್ರಯಾಣ ಮಾಡಿ ಮಲೆನಾಡು ತಲುಪುತ್ತಾರೆ ಅಷ್ಟೆ.
ಕೃಪಾಕರ-ಸೇನಾನಿ ಬರೆದ ಕೆನ್ನಾಯಿಯ ಜಾಡಿನಲ್ಲಿ ಪುಸ್ತಕ ಓದುವಾಗ ತೇಜಸ್ವಿಯವರು ಹೇಳಿದ ಮಾತೋಂದರ ಉಲ್ಲೇಖವಿತ್ತು.  `ಅಲ್ರಯ್ಯಾ, ನಾನು ನೋಡಿದ ಕಾಡಿರಲಿ, ನೀವು ನೋಡುತ್ತಿರುವ ಕಾಡು, ನೀವು ಬರೆಯುವ ಕಾಡಿನ ಕಥೆಗಳನ್ನೆಲ್ಲ ಮುಂದೊಮ್ಮೆ ಜನ ಬರೀ ಸುಳ್ಳು ಬರೆದಿದ್ದಾರೆ ಅಥವಾ ಅವುಗಳೆಲ್ಲಾ ಕಾಲ್ಪನಿಕ ಚಿತ್ರಣಗಳಿರಬಹುದೆಂದು ಹೇಳಬಹುದು. ಆಗ ಏನ್ ಮಾಡ್ತೀರ ನೋಡೋಣ…’ ಎಂದು ನಕ್ಕಿದ್ದರಂತೆ.
ಇಂದು ತೇಜಸ್ವಿ ಇದ್ದಿದ್ದರೆ, ಅವರಿಗೆ 80 ವರ್ಷಗಳಾಗಿರುತ್ತಿತ್ತು. ಅವರು ಹೋಗಿ ಬರೀ ಹನ್ನೊಂದು ವರ್ಷಗಳಷ್ಟೇ ಆಗಿರುವುದು. ಈಗಾಗಲೇ ಅವರ ಕಥೆಗಳಲ್ಲಿ ಬರುವ ಪಾತ್ರಗಳು ಮತ್ತು ಹಿನ್ನೆಲೆಗಳು, ಹೊಸ ಪೀಳಿಗೆಗಳಿಗೆ ಕಾಲ್ಪನಿಕವಾಗಿ ಕಾಣುತ್ತಿವೆ. ಅಷ್ಟೇಕೆ, ಅವರ ಕರ್ವಾಲೋ ಕಾದಂಬರಿಯಿಂದ ಎದ್ದು ಬಂದು ಅವರನ್ನೇ ಪ್ರಶ್ನಿಸಿದ ಯಂಕ್ಟ ಮತ್ತು ಬಿರಿಯಾನಿ ಕರಿಯಪ್ಪ ಕೂಡ ಕಾಲ್ಪನಿಕವಾಗೇ ಕಾಣುತ್ತಾರೆ.
ಸೋಮಾರಿತನವನ್ನೇ ಹೊದ್ದುಕೊಂಡು, ಸಾಹಿತ್ಯದ ಬಂಜರುಭೂಮಿಯಾದ ಮೂಡಿಗೆರೆ ಎಂಬ ಸಣ್ಣ ಪಟ್ಟಣದಲ್ಲಿ ಇದ್ದ ಜೀವಸೆಲೆಯನ್ನು ಬಗೆದು ತೆಗೆದವರೇ ತೇಜಸ್ವಿ. ಈಗ, ಆ ಪಟ್ಟಣ ತೇಜಸ್ವಿಯವರು ಕಂಡ ಮುಗ್ದತೆ, ಸಾಮಾಜಿಕ, ನೈತಿಕ ಮತ್ತು ಭೌಗೋಳಿಕ ಚೌಕಟ್ಟನ್ನು ಹರಿದು, ಹೊಸ ಪ್ರಪಂಚವಾಗಿ ಪರಿವರ್ತನೆಗೊಂಡಿದೆ. ಯಾಕೋ ಮನಸ್ಸಿಗೆ ಪಿಚ್ಚೆನಿಸುತ್ತದೆ. ಒಮ್ಮೆ ತೇಜಸ್ವಿಯವರಿಗೆ ಕೇಳಬೇಕು ಅನ್ನಿಸ್ತಿದೆ -- `ನೀವೇನೋ ಹೋಗ್ಬಿಟ್ರಿ, ನಾವೇನು ಮಾಡ್ಬೇಕು’?

ಮಾಕೋನಹಳ್ಳಿ ವಿನಯ್ ಮಾಧವ


ಬುಧವಾರ, ಏಪ್ರಿಲ್ 18, 2018

ಹಬ್ಬಾಚರಣೆ



ಹಬ್ಬಾಚರಣೆ ಎಂಬ ಹುಚ್ಚು ಮುಂಡೇ ಮದುವೆ


`ಈ ವರ್ಷ ನಮ್ಮ ಕ್ಲಬ್ ನಲ್ಲಿ ಕ್ರಿಸ್ ಮಸ್ ಪಾರ್ಟಿಗೆ ಬರ್ತೀಯಾ? ಮುಂಚೇನೇ ಹೇಳಿ ಹೆಸರು ರಿಜಿಸ್ಟರ್ ಮಾಡ್ಬೇಕು,’ ಅಂತ ನನ್ನ ಸಂಬಂಧಿಯೊಬ್ಬನು ಕೇಳಿದಾಗ, ಪುಸುಕ್ಕನೆ ಅವನ ಮುಖಕ್ಕೇ ನಕ್ಕೆ.

`ಏನಾಯ್ತೋ? ಪಾರ್ಟಿಗೆ ಬರ್ತೀಯಾ ಅಂತ ಕೇಳಿದ್ರೆ ನಗ್ತೀಯಲ್ಲಾ?’ ಅಂದ.

`ಅಲ್ವೋ, ಮೊನ್ನೆ ನೋಡಿದ್ರೆ ತೋಟದ ಆಳುಗಳನ್ನ ಈ ಕ್ರಿಶ್ಚಿಯನ್ ಮಿಷನರಿಯವರು ಬಂದು ಮತಾಂತರ ಮಾಡಿ ಹಾಳುಮಾಡ್ತಿದ್ದಾರೆ ಅಂತ ಕೂಗಾಡ್ತಿದ್ದಲ್ಲ. ನೀನ್ಯಾವಾಗ ಪರ್ಬು (ಕ್ರಿಶ್ಚಿಯನ್ ಗಳಿಗೆ ಮಲೆನಾಡಿನಲ್ಲಿ ಉಪಯೋಗಿಸುವ ಪದ) ಆದೆ? ನಿಮ್ಮ ಕ್ಲಬ್ ನಲ್ಲಿ ಎಷ್ಟು ಜನ ಪರ್ಬುಗಳಿದ್ದಾರೆ?’ ಅಂತ ಕೇಳಿದೆ.

`ಹತ್ತಿಪ್ಪತ್ತು ಇರ್ಬೇಕು. ಅವ್ರು ಬರಲ್ಲ ಕಣಾ... ಚರ್ಚ್ ಗೆ ಹೋಗಿರ್ತಾರೆ. ನಾವೇ ಪಾರ್ಟಿ ಮಾಡಾದು,’ ಅಂದ.

`ನಿಮ್ಮನೆಲಿ ಚೌಡಿಗೆ ಕೋಳಿ, ಹಂದಿ ಕಡ್ದಾಗ ಅಥವಾ ಸುಗ್ಗಿ ಸಮಯದಲ್ಲಿ ಕ್ಲಬ್ ನಲ್ಲಿ ಪಾರ್ಟಿ ಮಾಡ್ತೀರಾ?’ ಅಂತ ಕೇಳ್ದೆ.

`ಇಲ್ಲಪ್ಪ... ಅವೆಲ್ಲ ಮನೆ ಮಟ್ಟಿಗೆ ಮಾತ್ರ ಅಲ್ಲಾ ಮಾರಾಯಾ... ಯಾಕ್ಹೇಳು?’ ಅಂದ.

`ಅಲ್ವೋ... ನಮ್ ಮಲೆನಾಡಲ್ಲಿ, ಗಣಪತಿ ಹಬ್ಬ ಸೇರ್ದಂಗೆ ಎಲ್ಲಾ ಹಬ್ಬದಲ್ಲೂ ಮಾಂಸ ಮಾಡ್ತಾರೆ. ನಮ್ಮ ಹಬ್ಬ ಯಾವ್ದೂ ನಿಮ್ ಕ್ಲಬ್ ನಲ್ಲಿ ಮಾಡಲ್ಲ. ಯುಗಾದಿ ಸಮೇತ ಮಾಡಲ್ಲ. ಕ್ರಿಸ್ ಮಸ್ ಮತ್ತೆ ಹೊಸ ವರ್ಷ ಮಾತ್ರ ಮಾಡ್ತೀರ. ಹೆಂಗೋ ಇದು?’ ಅಂತ ಕೇಳ್ದೆ.

`ಬರ್ತೀಯೋ ಇಲ್ವೋ ಹೇಳೋ ಮಾರಾಯ. ಸುಮ್ಮನೆ ತಲೆ ತಿನ್ಬೇಡ. ಬರೋದಿದ್ರೆ ನಿನ್ನ ಹೆಸರು ಬರ್ಸಿರ್ತೀನಿ. ಇಲ್ದೇ ಹೋದ್ರೆ ತೆಪ್ಪಗೆ ಬೆಂಗ್ಳೂರಲ್ಲೇ ಬಿದ್ದಿರು,’ ಅಂದ.  ನಾ ಸುಮ್ಮನೆ ನಕ್ಕೆ.

ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಅನ್ನೋದು ಮಲೆನಾಡಿನಲ್ಲಿ ಒಂದು ಪಿಡುಗು. ಇವಾಂಗಲಿಸ್ಟ್ ಅನ್ನೋ ಒಂದು ಪಂಗಡ ಇದೆ. ಮತಾಂತರವನ್ನು ದಂಧೆಯಾಗಿ ಮಾಡಿಕೊಂಡಿದೆ. ಆಳುಗಳ ಕೇರಿಗೆ ಹೋಗಿ, ಏಸುಕ್ರಿಸ್ತನ ಬಗ್ಗೆ ಮತ್ತು ಅವನು ಮಾಡುವ ಜಾದುಗಳ ಬಗ್ಗೆ ಕಥೆಗಳನ್ನು ಹೇಳುತ್ತಾರೆ. ಕೆಲವು ಸಭೆಗಳನ್ನು ಆಯೋಜಿಸಿ, ಅಲ್ಲಿದೆವ್ವದ ಕಾಟಕ್ಕೊಳಗಾದವರು ಎನ್ನಲಾದ ಕೆಲವರನ್ನು ಕರೆತಂದು, ಅವರ ಮೈಮೇಲಿನ ದೆವ್ವವನ್ನು ಬಿಡಿಸಿ ತೋರಿಸುತ್ತಾರೆ. ಆನಂತರ, ಅಲ್ಲಿಗೆ ಹೋದ ಈ ಕೆಲಸದ ಆಳುಗಳನ್ನು ಮತಾಂತರ ಮಾಡಿ, ಅವರ ಕುತ್ತಿಗೆಗೆ ಶಿಲುಬೆ ಸಿಗಿಸಿ ಕಳುಹಿಸುತ್ತಾರೆ.

ಮನೆಗೆ ವಾಪಾಸಾದ ಆಳುಗಳು ಮುಂಚಿನಂತೆಯೇ ಕಾಫಿ ತೋಟದ ಕೆಲಸಗಳಿಗೆ ಬರುತ್ತಿರುತ್ತಾರೆ. ಹೋದ ವರ್ಷ ಸುಗ್ಗಿ, ಗಣಪತಿ ಹಬ್ಬ ಮತ್ತು ಆಯುಧ ಪೂಜೆಗಳಲ್ಲಿ ಮುಂಚೂಣಿಯಲ್ಲಿರುತ್ತಿದ್ದವರು, ಈ ವರ್ಷ ಬದಿಯಲ್ಲಿ ನಿಂತು ನೋಡುತ್ತಿರುತ್ತಾರೆ. ಪ್ರಸಾದ ಕೊಡಲು ಹೋದರೆ, `ನಮ್ಮ ಜಾತಿಯಲ್ಲಿ ಪ್ರಸಾದ ತಗೊಳ್ಳೋದಿಲ್ಲ,’ ಅಂತ ಮುಖಕ್ಕೆ ಹೊಡೆದ ಹಾಗೆ ಹೇಳ್ತಾರೆ. ಇವರುಗಳಿಗೆ ಜಾತಿ ಮತ್ತು ಧರ್ಮದ ನೆಡುವಿನ ವ್ಯತ್ಯಾಸವೇ ಗೊತ್ತಿರೋದಿಲ್ಲ. ತೋಟದ ಮಾಲಿಕರು ಮತ್ತು ಮತಾಂತರಗೊಳ್ಳದ ಆಳುಗಳಿಗೆ ಇದೊಂದು ದೊಡ್ಡ ಕಿರಿಕಿರಿಯ ವಿಷಯ. ವರ್ಷವಿಡೀ ಪರ್ಬುಗಳನ್ನು ಬೈದುಕೊಂಡು ತಿರುಗ್ತಿರ್ತಾರೆ.

ತಮಾಷೆ ಎಂದರೆ, ಮತಾಂತರವಾದವರಿಗೆ ಏಸು ಕ್ರಿಸ್ತನ ಭಜನೆಗಳನ್ನು ಸಹ ಹೇಳಿಕೊಟ್ಟಿರುತ್ತಾರೆ. ಇವ್ಯಾವುದೂ ನಿಜವಾದ ಕ್ರೈಸ್ತ ಧರ್ಮದ ಆಚರಣೆಯಲ್ಲಿ ಇಲ್ಲ. ಮೂಡಿಗೆರೆಯ ಚರ್ಚ್ ನ  ಫಾದರ್ ಪಿಂಟೋ ಹತ್ತಿರ ಈ ವಿಷಯ ಕೇಳಿದಾಗ, ಅವರು ನಗಲಾರಂಬಿಸಿದರು. `ಏನು ಮಾಡುವುದು ಹೇಳಿ?  ಭಾನುವಾರ ಚರ್ಚ್ ಗೆ ಬಂದು, ಇಲ್ಲಿ ಭಜನೆ ಮಾಡೋದಿಲ್ಲ ಅಂತ ಗೊತ್ತಾದಾಗ ಕಕ್ಕಾಬಿಕ್ಕಿಯಾಗುತ್ತಾರೆ. ಇಲ್ಲಿ ಬೈಬಲ್ ಓದುವುದು ಮಾತ್ರ. ಯಾವಾಗಾದ್ರೂ ಹಾಡುವವರು ಸಿಕ್ಕಿದಾಗ ಕಾಯರ್ (Choir) ಇರುತ್ತದೆ. ಭಜನೆಗಳಿಗೂ ಮತ್ತು ಕಾಯರ್ ಗಳಿಗೂ ವ್ಯತ್ಯಾಸ ಇರುತ್ತದೆ ನೋಡಿ. ಇಲ್ಲಿ ಯಾರೇ ಬಂದರೂ ನಾವು ಬರಬೇಡ ಅನ್ನೋದಿಲ್ಲ. ಬಂದು ಪ್ರಾರ್ಥನೆ ಮಾಡಿಕೊಂಡು ಹೋಗ್ತಾರೆ. ಇನ್ನು ಮಾಟ, ಮಂತ್ರ ಎಲ್ಲ ಇಲ್ಲಿ ಇರೋದಿಲ್ಲ,’ ಅಂದರು.

ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ, ಬಡವರೇ ಹೆಚ್ಚಾಗಿರೋ ಜಾಗಗಳಲ್ಲಿ ಬೋರ್ಡ್ ಹಾಕಿಕೊಂಡಿರೋ ಮಾಂತ್ರಿಕ, ತಾಂತ್ರಿಕರು ಮತ್ತು ದರ್ಗಾಗಳಲ್ಲಿ ಎಲ್ಲಾ ಕಾಯಿಲೆ ವಾಸಿ ಮಾಡುತ್ತೇವೆ ಎಂದು ಹೇಳಿಕೊಳ್ಳೋ ಬಾಬಾಗಳಷ್ಟೇ ಡೋಂಗಿಗಳು ಇವರು. ಮಲೆನಾಡಿನಲ್ಲಿ ಈ ಥರದ ಮತಾಂತರದ ಪಿಡುಗನ್ನು ಕುವೆಂಪುರವರ `ಕ್ರೈಸ್ತನಲ್ಲ, ಪಾದ್ರಿಯ ಮಗಳು,’ ಅನ್ನೋ ಸಣ್ಣ ಕಥೆಯಿಂದ ಹಿಡಿದು, ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ ಸಹ ನೋಡಬಹುದು. ಕುವೆಂಪುರವರ ಬಾಲ್ಯದಿಂದ ಹಿಡಿದು, ಇವತ್ತಿನವರೆಗೆ, ಮಲೆನಾಡಿನಲ್ಲಿ ಇದೊಂದು ದಂಧೆಯಾಗಿ ಉಳಿದಿದೆ.

ಅದೆಲ್ಲ ಹಾಳಾಗಲಿ. ದಿನ ಬೆಳಗೆದ್ದರೆ ಪರ್ಬುಗಳನ್ನ ಬೈಕೊಂಡು, ಬಿಜೆಪಿಗೆ ಓಟು ಕೊಡೋ ಹುಡುಗರು ಸಹ, ಕ್ರಿಸ್ ಮಸ್ ಮತ್ತು ಹೊಸ ವರ್ಷ ಆಚರಣೆಗೆ, ಹೊಸ ಸೂಟುಗಳನ್ನು ಹೊಲಿಸಿಕೊಂಡು, ಕ್ಲಬ್ ಎಡತಾಗುವುದನ್ನು ನೋಡಿದರೆ, ನಗು ಬರುತ್ತದೆ. ಪಾರ್ಟಿ ಎಂದರೆ ಗುಂಡು, ತುಂಡು ಮತ್ತು ಸೊಂಟ ಬಿದ್ದು ಹೋಗುವವರೆಗೆ ಕುಣಿತ. ಕೆಲವು ಆಟಗಳು. ಇನ್ನೇನೂ ಘನಾಂದಾರಿ ಕೆಲಸ ಮಾಡೋದು ನನ್ನ ಗಮನಕ್ಕಂತೂ ಬಂದಿಲ್ಲ.

ಈಗೆಲ್ಲ ಹಬ್ಬಗಳ ಆಚರಣೆ ನೋಡಿದಾಗ ತಲೆ ಬಿಸಿಯಾಗುತ್ತೆ. ನಮಗೆಲ್ಲ ಯುಗಾದಿ, ದೀಪಾವಳಿ, ಗಣಪತಿ ಹಬ್ಬ ಬಿಟ್ಟರೆ ಬೇರೆ ಹಬ್ಬಗಳ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ನಮ್ಮ ಕಡೆ ಹೋಳಿಯೇನು ಅಂಥಾ ದೊಡ್ಡ ಹಬ್ಬವಲ್ಲ. ಇನ್ನುಳಿದ ಹಾಗೆ, ಚೌಡಿ ಕಲ್ಲಿಗೆ ಪೂಜೆ, ಸುಗ್ಗಿ ಹಬ್ಬಗಳು ನಮಗೆ ವಿಶೇಷ ಅಷ್ಟೆ. ಸಕಲೇಶಪುರದ ಕಾನ್ವೆಂಟ್ ನಲ್ಲಿ ಓದುವಾಗ, ಕ್ರಿಸ್ ಮಸ್ ಸಮಯದಲ್ಲಿ ಸಿಸ್ಟರ್ ಗಳು ಕೇಕ್ ಕೊಡುತ್ತಿದ್ದದ್ದು ನೆನಪಿದೆ. ಇನ್ನೊಂದೆರೆಡು ತುಂಡು ಕೊಟ್ಟಿದ್ದರೆ ಇವರ ಗಂಟೇನು ಹೋಗ್ತಿತ್ತು ಅಂತ ಗೊಣಗಿಕೊಳ್ಳುತ್ತಿದ್ದೆವು.

ಕಾಲೇಜಿಗೆ ಬರುವ ಹೊತ್ತಿಗೆ ಬಕ್ರೀದ್ ಹಬ್ಬಕ್ಕೆ ಗೆಳೆಯರ ಮನೆಯಿಂದ ಬಿರಿಯಾನಿ ಬರುತ್ತಿತ್ತು, ಇಲ್ಲಾ ಅವರ ಮನೆಗೆ ನಾವೇ ಹೋಗುತ್ತಿದ್ದೆವು. ಮನೆಗೆ ಹೋಗೋದು ತುಂಬಾ ಇಷ್ಟ. ಯಾಕಂದರೆ, ಬಿರಿಯಾನಿ ತಿಂದ ಮೇಲೆ ಫಿರ್ನಿ ತಿನ್ನೋ ಮಜಾನೇ ಬೇರೆ. ಇತ್ತೀಚಿನ ವರ್ಷಗಳಲ್ಲಿ ಬಕ್ರೀದ್ ಗೆ ಯಾರೂ ಕರೆದದ್ದು ನೆನಪಿಲ್ಲ. ಆದರೆ, ಪ್ರತಿ ಈದ್ ಮಿಲಾದ್ ಸಮಯದಲ್ಲಿ, ಈಗ ದೂರದರ್ಶನದಲ್ಲಿ ಕೆಲಸ ಮಾಡುತ್ತಿರುವ ಆಯೆಶಾ ಖಾನುಂ, ಮನೆಗೆ ಕರೆದು ಊಟ ಹಾಕುತ್ತಾಳೆ.

ಇತ್ತೀಚಿನ ದಿನಗಳಲ್ಲಿ ಯಾವ ಹಬ್ಬ, ಯಾಕೆ ಆಚರಿಸುತ್ತಾರೆ ಅಂತ ಗೊತ್ತೇ ಆಗೋದಿಲ್ಲ. ಮೊನ್ನೆ ಆಫೀಸಿನಲ್ಲಿ ಸುಧಾ ಜೊತೆ ಮಾತಾಡುವಾಗ, ಅಕ್ಷಯ ತೃತೀಯದ ಬಗ್ಗೆ ಮಾತು ಬಂತು. `ನೀನೇನು ಚಿನ್ನ ತಗೊಳೋಲ್ವಾ?’ ಅಂತ ತಮಾಷೆ ಮಾಡಿದೆ.

`ಅಕ್ಷಯ ತದಿಗೆ ತಗೊಳ್ಳೋ ಹಬ್ಬ ಅಲ್ಲಾರಿ. ಇದು ದಾನ ಕೊಡೋ ಹಬ್ಬ. ತಗೊಳ್ಳೋ ಹಬ್ಬ ಅಂತ ಯಾಕಾಯ್ತು ಅನ್ನೋದು ನಮಗೇ ಗೊತ್ತಿಲ್ಲ,’ ಅಂದಳು.
ಅಂದ್ರೆ, ಇದು ನಿಮ್ಮ ಹಬ್ಬಾನ? ತದಿಗೆ ಅಂದ್ರೆ? ‘ ಅಂತ ಜೈನ ಧರ್ಮಕ್ಕೆ ಸೇರಿದ ಸುಧಾಳಿಗೆ ಕೇಳಿದೆ.

`ತದಿಗೆ ಅಂದ್ರೆ, ಇದು ಪಕ್ಷದ ಮೂರನೇ ದಿನ ಬರೋದು. ಪಾಡ್ಯ, ಬಿದಿಗೆ, ತದಿಗೆ ಇಲ್ವಾ? ಅದು. ಈ ಹಬ್ಬಕ್ಕೆ ಒಂದು ಕಥೆ ಇದೆ. ನಮ್ಮ ಮೊದಲ ತೀರ್ಥಂಕರರು ಕಾಡಲ್ಲಿ ಹನ್ನೆರೆಡು ವರ್ಷ ತಪಸ್ಸು ಮಾಡಿ, ಊರಿಗೆ ಇದೇ ತದಿಗೆಯ ದಿನ ವಾಪಾಸು ಬಂದರಂತೆ. ಆಗ ಕಬ್ಬಿನ ಹಾಲು ಮಾರುತ್ತಿದ್ದವನೊಬ್ಬ, ಅವನ ಹತ್ತಿರ ಏನೂ ಇಲ್ಲ ಅಂತ, ತೀರ್ಥಂಕರರಿಗೆ ಕಬ್ಬಿನ ಹಾಲು ಕೊಟ್ಟನಂತೆ. ಅಲ್ಲಿಂದ ಮುಂದೆ ಅವನ ವ್ಯಾಪಾರ ಅಭಿವೃದ್ದಿಯಾಯಿತಂತೆ. ಹಾಗಾಗಿ, ಈ ತದಿಗೆಯ ದಿನ ಏನಾದರೂ ದಾನ ಮಾಡಿದರೆ, ಅದು ಅಕ್ಷಯವಾಗುತ್ತೆ ಅಂತ ನಂಬಿಕೆ. ಅದಕ್ಕೇ ನೋಡಿ, ಶ್ರವಣಬೆಳಗೊಳದಲ್ಲಿ ನಾಳೆ ಗೊಮ್ಮಟೇಶ್ವರನಿಗೆ ಕಬ್ಬಿನ ಹಾಲಿನ ಅಭಿಷೇಕ ಇರುತ್ತೆ,’ ಅಂದಳು.

`ಓ... ತೃತೀಯ ಅನ್ನೋದೇ ಸುಳ್ಳು. ಮತ್ತೆ ಚಿನ್ನ ತಗೊಳ್ಳೋದು ಅನ್ನೋ ನಂಬಿಕೆ ಯಾವಾಗ ಬಂತು?’ ಅಂತ ಕೇಳಿದೆ.

`ಗೊತ್ತಿಲ್ಲ ಕಣ್ರಿ.... ರಾಜಸ್ಥಾನದಿಂದ ಮಾರ್ವಾಡಿಗಳು ಚಿನ್ನದ ವ್ಯಾಪರಕ್ಕೆ ಬಂದ್ರಲ್ಲ, ಅದರ ಸಲುವಾಗಿ ಆಗಿರ್ಬೇಕು. ಅದೂ ಇತ್ತೀಚೆಗೆ ಶುರುವಾಗಿದ್ದು,’ ಅಂದಳು.

ಅಕ್ಷಯ ತೃತೀಯಕ್ಕೆ ಒಂದು ತಿಂಗಳಿಂದ ಎಲ್ಲಾ ಚಿನ್ನದ ಅಂಗಡಿಗಳು ಸಿಂಗರಿಸಿಕೊಂಡಿರುತ್ತವೆ. ಎಲ್ಲಾ ಬಗೆಯ ವ್ಯಾಪಾರಿಗಳೂ ಒಂದೊಂದು ಗಿಮಿಕ್ ಮಾಡುತ್ತಿರುತ್ತಾರೆ. ಕಾರು ಕೊಂಡರೂ ಸಹ, ಐದು ಗ್ರಾಂ ಚಿನ್ನ ಉಚಿತ ಅನ್ನೋ ಜಾಹಿರಾತುಗಳು ರೇಡಿಯೋ ಮತ್ತು ಟೀವಿಗಳಲ್ಲಿ ಕೂಗಾಡುತ್ತಿರುತ್ತವೆ. ಅಕ್ಷಯ ತದಿಗೆಯನ್ನು ಅಕ್ಷಯ ತೃತೀಯ ಅಂತ ನಂಬಿದವರ ಜೇಬಿಗೆ ತೂತು ಕೊರೆಯೋ ಯೋಜನೆ ಅಷ್ಟೆ.

ಅದೇ ಯೋಚನೆ ಮಾಡುತ್ತಾ ಇದ್ದೆ. ನಾವೆಲ್ಲ ಓದುವಾಗ, ಯಾರದಾದರೂ ಹುಟ್ಟಿದ ಹಬ್ಬಕ್ಕೆ ಮತ್ತು ಹೊಸ ವರ್ಷಕ್ಕೆ ಗ್ರೀಟಿಂಗ್ ಕಾರ್ಡ್ ಕಳುಹಿಸುವುದು ಒಂದು ವಾಡಿಕೆಯಾಗಿತ್ತು. ನಂತರ, ಯುಗಾದಿ, ಸಂಕ್ರಾಂತಿ ಮತ್ತು ದೀಪಾವಳಿ ಹಬ್ಬಗಳು ಇವಕ್ಕೆ ಸೇರ್ಪಡೆಯಾದವು. ಇವುಗಳ ಸಂಖ್ಯೆ ನಿಧಾನವಾಗಿ ಹೆಚ್ಚಾಗಿದ್ದು ಆರ್ಚೀಸ್ ಅನ್ನೋ ಗ್ರೀಟಿಂಗ್ ಮತ್ತು ಉಡುಗೊರೆಗಳ ಕಂಪನಿ ಭಾರತಕ್ಕೆ ಬಂದ ಮೇಲೆ.
ಹುಟ್ಟಾ ಹುಂಬರಾಗಿ, ನಿಂತಕಾಲಲ್ಲಿ ಯಾರ ಜೊತೆ, ಎಲ್ಲಿ ಬೇಕಾದರೂ ಹೊಡೆದಾಟಕ್ಕೆ ನಿಲ್ಲುವಂತಹ ನಾವು, ಕಾಲೇಜಿನಲ್ಲಿ ಓದುವಾಗ ಹೀರೋಗಳಾಗುವ ಕನಸು ಕಾಣಲೂ ಸಾಧ್ಯವಿರಲಿಲ್ಲ. ಆದರೂ, ವಯಸ್ಸು. ಫುಟ್ ಬಾಲ್, ಬ್ಯಾಸ್ಕೆಟ್ ಬಾಲ್ ಆಡುವಾಗ, ಯಾವುದಾದರೂ ಹುಡುಗಿ ನಮ್ಮ ಕಡೆಗೂ ನೋಡುತ್ತಿರಬಹುದು ಅನ್ನೋ ಆಸೆ. ಕದ್ದು ಮುಚ್ಚಿ ನೋಡಿದರೂ, ನೋಡುತ್ತಿದ್ದಾರೋ, ಇಲ್ಲವೋ ಅನ್ನೋದು ಗೊತ್ತಾಗ್ತಾ ಇರಲಿಲ್ಲ. ಮತ್ತೆ, ಆಗೇನೂ ವ್ಯಾಲೆಂಟೈನ್ಸ್ ಡೇ ಅನ್ನೋದನ್ನ ನಾವು ಕೇಳೇ ಇರಲಿಲ್ಲ. ಆಗೇನಾದ್ರು ಗೊತ್ತಿದ್ದರೆ, ಒಂದು ಪ್ರಯತ್ನ ಮಾಡಬಹುದಿತ್ತೋ, ಏನೋ?

ಆಗೆಲ್ಲ ಕೆಂಪು ಬಟ್ಟೆ ಹಾಕಿದವರನ್ನು ಕೊಂಗ, ತಮಿಳ ಅಂತ ತಮಾಷೆ ಮಾಡ್ತಿದ್ವಿ. ಈಗ ನೋಡಿದರೆ, ವ್ಯಾಲೆಂಟೈನ್ಸ್ ದಿನ ಎಲ್ಲರೂ ಕೆಂಪು ಬಟ್ಟೆಯನ್ನೇ ಹಾಕಿಕೊಂಡು ತಿರುಗುತ್ತಿರುತ್ತಾರೆ. ಹೊಟೆಲ್ ಗಳಿಂದ ಹಿಡಿದು, ಮೊಬೈಲ್, ಚಿನ್ನ, ಪ್ರವಾಸೋದ್ಯಮ..... ಎಲ್ಲಾರೂ ಹೇಳೋದು ಒಂದೆ. `ನಮ್ಮ ಗ್ರಾಹಕರು ಮಾತ್ರ ತಮ್ಮ ಮನದನ್ನೆಯನ್ನು ಹೆಚ್ಚು ಪ್ರೀತಿಸುವುದು,’ ಅಂತ. ಅದನ್ನು ನಂಬಿ ಪಿಗ್ಗಿ ಬಿದ್ದವರ ಸಂಖ್ಯೆ ಎಷ್ಟು ಅನ್ನೋದು, ವ್ಯಾಪಾರಿಗಳು ಜಾಹಿರಾತಿಗೆ ಖರ್ಚು ಮಾಡುವ ಪರಿ ನೋಡಿದರೆ ಗೊತ್ತಾಗುತ್ತೆ.

ಅದಷ್ಟೇ ಅಲ್ಲ. ಪ್ರೇಮಿಗಳ ದಿನದ ಜೊತೆಗೆ, ಅಪ್ಪ, ಅಮ್ಮ, ಮಗ, ಮಗಳು, ಗಂಡ ಮತ್ತು ಹೆಂಡತಿಯ ದಿನಗಳೂ ಹುಟ್ಟಿಕೊಂಡಿವೆ. ವ್ಯಾಪಾರಿಗಳಿಗೆ ಇವೆಲ್ಲ `ಮಿನಿ ಲಾಟರಿಗಳು’ ಅಷ್ಟೆ. ಒಟ್ಟಲ್ಲಿ, ಈ ಹಬ್ಬದಾಚರಣೆಗಳು ಒಂಥರಾ ಹುಚ್ಚು ಮುಂಡೆ ಮದುವೆ ಅಷ್ಟೆ. ಇದರಲ್ಲಿ ಉಣ್ಣೋಕೇನಾದ್ರೂ ಕಲ್ತಿದ್ರೆ, ನಂಗೂ ನಾಕು ಕಾಸು ಸಿಕ್ತಿತ್ತೇನೋ?....



ಮಾಕೋನಹಳ್ಳೀ ವಿನಯ್ ಮಾಧವ