ಶನಿವಾರ, ಜನವರಿ 17, 2015

ಆಮ್ ಆದ್ಮಿಗಳು


ಕೇಜ್ರಿ ಥರ ಮಾತಾಡೋರಿಗೆ ಜಾರ್ಜ್ ಥರ ಬದುಕೋಕೆ ಬರ್ಬೇಕು



ಮತ್ತೆ ಶುರುವಾಗಿದೆ ಟೆಲಿವಿಷನ್ ಗಳಲ್ಲಿ ಕೂಗಾಟ. ದೇಶದ ಆಶಾಕಿರಣ ಯಾರು? ಅರವಿಂದ ಕೇಜ್ರಿವಾಲ್ ಅಥವಾ ನರೇಂದ್ರ ಮೋದಿ?

ಎಷ್ಟೊಂದು ಮಾತಾಡಿದ್ದಾರೆ ಇವರಿಬ್ಬರೂ ದೇಶದ ಬಗ್ಗೆ. ಒಬ್ಬರು ಪ್ರಧಾನ ಮಂತ್ರಿಯಾಗಿದ್ದಾರೆ. ಇನ್ನೊಬ್ಬರು ದಿಲ್ಲಿ ಮುಖ್ಯಮಂತ್ರಿಯಾಗಿ ಕೆಳಗಿಳಿದಿದ್ದಾರೆ. ನರೇಂದ್ರ ಮೋದಿ ಬಗ್ಗೆ ಟೀಕೆ ಮಾಡಲು ಬೇಕಾದಷ್ಟು ಸರಕುಗಳಿವೆ. ಅದಾನಿ, ಅಂಬಾನಿ ಮತ್ತು ಬಿ.ಜೆ.ಪಿ ಸಂಬಂಧ, ಗೋದ್ರಾ ನಂತರದ ಕೋಮು ಗಲಭೆ, ಮದುವೆಯಾದರೂ ಪತಿ ಧರ್ಮ ಪಾಲಿಸದಿದ್ದದ್ದು…. ಆದರೆ ಕೇಜ್ರಿವಾಲ್ ಬಗ್ಗೆ ಸ್ವಲ್ಪ ಕಷ್ಟನೇ.

ಮಫ್ಲರ್ ಸುತ್ತಿಕೊಂಡು, ದಿಲ್ಲಿಯ ಮೂಲೆ ಮೂಲೆಯಲ್ಲೂ ಸುತ್ತುತ್ತಿರುತ್ತಾರೆ. ಮುಖ್ಯಮಂತ್ರಿ ಆಗಿದ್ದಾಗಂತೂ, ವಿರೋಧ ಪಕ್ಷದ ನಾಯಕ ಯಾರು ಮತ್ತು ಆಡಳಿತ ಯಾರು ನೆಡೆಸುತ್ತಿದ್ದಾರೆ ಎನ್ನುವುದರ ಬಗ್ಗೆ ನನಗಂತೂ ಒಂದೆರೆಡು ಸಲ ಅನುಮಾನವೇ ಬಂದಿತ್ತು. ರಾಜಕಾರಣಿಗಳ ಮತ್ತು ರಾಜಕೀಯ ಪಕ್ಷಗಳ ದುಂದುವೆಚ್ಚದ ಬಗ್ಗೆ ಕೇಜ್ರಿವಾಲ್ ಮಾತನಾಡುತ್ತಲೇ, ದಿಲ್ಲಿಯಲ್ಲಿ ಐದು ಬೆಡ್ ರೂಂಗಳ ಬಂಗಲೆಯನ್ನು ಮುಖ್ಯಮಂತ್ರಿ ನಿವಾಸವಾಗಿ ಕೇಳಿದಾಗ, ನನಗೆಲ್ಲೋ ನೆನಪಾಗಿದ್ದು `ಆ ಮುಗ್ದ ನಗೆ’.

ಆಗ ದೇಶದಲ್ಲಿ ಅಟಲ್ ಬಿಹಾರಿ ವಾಜಪೇಯಿ ಪ್ರಧಾನಮಂತ್ರಿಯಾಗಿದ್ದರು. ಏನೋ ಕೆಲಸದ ಮೇಲೆ ಅರಣ್ಯ ಭವನಕ್ಕೆ ಹೋಗಿದ್ದ ನಾನು, ವಾಪಾಸ್ ಇಂಡಿಯನ್ ಎಕ್ಸ್ ಪ್ರೆಸ್ ಆಫೀಸಿನ ಕಡೆ ಹೊರಟಿದ್ದೆ. ವಿಂಡ್ಸರ್ ಮ್ಯಾನರ್ ಹೋಟೇಲಿನ ಹತ್ತಿರ ಬಂದಾಗ, ಪಕ್ಕದಲ್ಲಿದ್ದ ಮುಖ್ಯಮಂತ್ರಿ ಕಛೇರಿಗೆ ಹೋಗಿ ಏನಾದರೂ ಸುದ್ದಿ ಸಿಗುತ್ತಾ ಅಂತ ನೋಡೋಣ ಅನ್ನಿಸಿ, ನನ್ನ ಮೋಟಾರ್ ಸೈಕಲ್ ಸಿಗ್ನಲ್ ನಲ್ಲಿ ನಿಲ್ಲಿಸಿಕೊಂಡೆ. ನನ್ನ ಪಕ್ಕದಲ್ಲೊಂದು ಬಿಳಿ ಅಂಬಾಸಿಡರ್ ಕಾರು, ಸಿಗ್ನಲ್ ಗಾಗಿ ಕಾದು ನಿಂತಿತ್ತು.

ಕಾರನ್ನೊಮ್ಮೆ ಹಾಗೇ ನೋಡಿ, ಒಳಗೊಮ್ಮೆ ಕಣ್ಣು ಹಾಯಿಸಿದೆ. ಕಾರಿನಲ್ಲಿದ್ದದ್ದು ಇಬ್ಬರೆ. ಒಬ್ಬ ಡ್ರೈವರ್, ಮತ್ತೊಬ್ಬ ಆಗಿನ ರಕ್ಷಣಾ ಮಂತ್ರಿ ಜಾರ್ಜ್ ಫರ್ನಾಂಡಿಸ್.

ಗಲಿಬಿಲಿಗೊಂಡು ಮತ್ತೊಮ್ಮೆ ಕಾರಿನೊಳಗೆ ಸರಿಯಾಗಿ ನೋಡಿದೆ. ಸಾಧಾರಣವಾದ ಹಳೇ ಅಂಬಾಸಡರ್ ಕಾರು. ಕಿಟಕಿ ಗಾಜುಗಳನ್ನು ಇಳಿಸಲಾಗಿತ್ತು. ಮುಂದೆ, ಹಿಂದೆ ಯಾವುದೇ ಪೋಲಿಸ ಬಂದೋಬಸ್ತು ಇಲ್ಲದೆ, ಟ್ರಾಫೀಕ್ ಬಿಡಲು ಸಾಮಾನ್ಯ ಜನರ ಕಾರಿನಂತೆ ನಿಂತಿತ್ತು.

ಏನನ್ನಿಸಿತೋ ಏನೋ. ಪರಿಚಯವಿಲ್ಲದಿದ್ದರೂ ಕಾರಿನ ಪಕ್ಕಕ್ಕೇ ಹೋಗಿ ``ಸರ್’’ ಎಂದೆ.

ಮುಂದುಗಡೆ ಕಿಟಕಿ ಪಕ್ಕ ಕುಳಿತು ಏನೋ ಯೋಚಿಸುತ್ತಿದ್ದ ರಕ್ಷಣಾಮಂತ್ರಿಗಳು ನನ್ನತ್ತ ತಿರುಗಿ, ಒಂದು ಮುಗ್ದ ಮುಗುಳ್ನಗೆ ಚೆಲ್ಲಿದ್ದರು.

ನನಗಿನ್ನೂ ಗಲಿಬಿಲಿಯಾಯಿತು. ``ಸರ್, ಯು ಆರ್ ಮೂವಿಂಗ್ ವಿತೌಟ್ ಸೆಕ್ಯುರಿಟಿ,’’ ಅಂದೆ.

``ವೈ ಐ ನೀಡ್ ಸೆಕ್ಯುರಿಟಿ? ಐ ಡೋಂಟ್ ಹ್ಯಾವ್ ಎನಿ ತ್ರೆಟ್ಸ್,’’ ಅಂದರು.

``ಐ ಡು ಅಗ್ರೀ ಇಟ್ ಫಾರ್ ಮಿಸ್ಟರ್ ಜಾರ್ಜ್ ಫರ್ನಾಂಡಿಸ್ ಸರ್, ಬಟ್ ಯು ಆರ್ ನೌ ಅವರ್ ಡಿಫೆನ್ಸ್ ಮಿನಿಸ್ಟರ್. ಐ ಫೀಲ್ ಯು ಶುಡ್ ಗೋ ವಿಥ್ ಸೆಕ್ಯುರಿಟಿ,’’ ಎಂದೆ.

ಕಾರಿಂದ ಕೈ ಹೊರಗಡೆ ಹಾಕಿ, ನನ್ನ ಕೈಯನ್ನೊಮ್ಮೆ ಮೆಲ್ಲಗೆ ತಟ್ಟಿ, ``ಡೋಂಟ್ ವರಿ. ನತಿಂಗ್ ವಿಲ್ ಹ್ಯಾಪೆನ್ ಟು ಯುವರ್ ಡಿಫೆನ್ಸ್ ಮಿನಿಸ್ಟರ್… ಹಿ ಇಸ್ ಸೇಫ್,’’ ಅಂತ ಅವರು ಹೇಳುವಾಗಲೇ, ಸಿಗ್ನಲ್ ಬಿಟ್ಟು, ಅವರ ಕಾರು ಮುಂದೆ ಹೋಯ್ತು.

ಮುಖ್ಯಮಂತ್ರಿಗಳ ಕಛೇರಿಗೆ ಹೋಗುವ ವಿಚಾರ ಕೈಬಿಟ್ಟು, ಸೀದ ಪೋಲಿಸ್ ಇಂಟೆಲಿಜೆನ್ಸ್ ಐಜಿಪಿ ಯಾಗಿದ್ದ ಟಿ ಜಯಪ್ರಕಾಶ್ ಆಫೀಸಿಗೆ ನುಗ್ಗಿದೆ. ಚಿಕ್ಕಮಗಳೂರಿನವರಾಗಿದ್ದರಿಂದ, ಅವರ ಜೊತೆ ತುಂಬಾ ಸಲುಗೆಯಿಂದ ಇದ್ದೆ. ``ಅಣ್ಣ, ಈಗ ಜಾರ್ಜ್ ಫರ್ನಾಂಡಿಸ್ ಸಿಕ್ಕಿದ್ದರು. ಆ ಸಿಗ್ನಲ್ ನಲ್ಲಿ, ಯಾವುದೇ ಸೆಕ್ಯುರಿಟಿ ಇಲ್ದೆ ನಿಂತಿದ್ರು. ಏನಾದ್ರೂ ಹೆಚ್ಚು ಕಡಿಮೆ ಆದ್ರೆ ಏನಣ್ಣಾ ಕಥೆ?’’ ಅಂದೆ.

ನೆಡೆದ ವಿಷಯವನ್ನೆಲ್ಲ ಕೇಳಿಸಿಕೊಂಡ ಜಯಪ್ರಕಾಶ್, ``ಅವರು ಹಾಗೇ ಕಣ್ರಿ…. ಸೆಕ್ಯುರಿಟಿ ತಗೊಳ್ಳೋಕೆ ಒಪ್ಪೋದಿಲ್ಲ,’’ ಅಂದ್ರು.

``ಅಲ್ಲ ಅಣ್ಣ… ಏನೂ ಬೇಡ, ಯಾರಾದ್ರು ಕಲ್ಲು ಹೊಡೆದ್ರೆ ಸಾಕಲ್ವಾ? ಯಾರ್ಯಾರೋ ಕೆಲಸಕ್ ಬಾರ್ದವ್ರಿಗೆಲ್ಲ ಗನ್ ಮ್ಯಾನ್, ಸೆಕ್ಯುರಿಟಿ ಅಂತ ಕೊಡ್ತೀರ. ಇವ್ರಿಗೆ ಒಂದು ಎಸ್ಕಾರ್ಟ್ ಆದ್ರೂ ಹಾಕ್ಬೇಕಲ್ಲಣ್ಣ?’’ ಅಂತ ಕೇಳಿದೆ.

``ನೋಡಿ ವಿನಯ್, ನಂಗೆ ಜಾರ್ಜ್ ಮೊದಲಿಂದ್ಲೂ ಗೊತ್ತು. ಅವ್ರು ಹಾಗೇನೇ. ಹಿ ಇಸ್ ಎಬೌ ಎವೆರಿತಿಂಗ್. ನಾನ್ ಏನಾದ್ರೂ ಫೋರ್ಸ್ ಮಾಡಿ ಹಾಕಿದ್ರೆ, ನಂಗೆ ಫೋನ್ ಮಾಡಿ ಜಗಳ ಆಡ್ತಾರೆ. ನಂಗೂ ಕೆಲವು ಸಲ, ಇವ್ರು ಯಾಕೆ ಬೆಂಗಳೂರಿಗೆ ಬರ್ತಾರೆ ಅಂತ ಅನ್ನಿಸುತ್ತೆ. ಕೆಲವು ಮಿನಿಸ್ಟರ್ ಗಳು ಯಾಕೆ, ಎಂಪಿ, ಎಮ್ಮೆಲ್ಲೆ ಗಳನ್ನ ನೋಡಬೇಕು, ಸೆಕ್ಯುರಿಟಿ ಕೊಟ್ರೂ ಕಮ್ಮಿಯಾಯ್ತು ಅಂತಾರೆ. ಈ ಮನುಷ್ಯ ನೋಡಿದ್ರೆ ಹೀಗೆ. ನಾನೇನ್ಮಾಡ್ಲಿ ನೀವೇ ಹೇಳಿ,’’ ಅಂದ್ರು.

ಅಲ್ಲಿವರೆಗೆ ಜಾರ್ಜ್ ಫರ್ನಾಂಡಿಸ್ ಬಗ್ಗೆ ನನಗೆ ಗೌರವ ಇತ್ತು. ಅವತ್ತಿನಿಂದ ಇನ್ನೂ ಜಾಸ್ತಿಯಾಯ್ತು. ಆ ಮುಗ್ದ ನಗು ನನ್ನ ಮನಸ್ಸಲ್ಲೇ ಉಳಿದು ಹೋಯಿತು.

ಇದಕ್ಕಿಂತ ಒಂದೆರೆಡು ವರ್ಷಗಳ ಮುಂಚೆ ಇನ್ನೊಂದು ಘಟನೆ ನೆಡೆದಿತ್ತು. ಆಗಿನ್ನೂ ನಾನು ಪತ್ರಿಕೋದ್ಯಮಕ್ಕೆ 
ಕಾಲಿಟ್ಟು ಎರಡು-ಮೂರು ವರ್ಷಗಳಾಗಿದ್ದವಷ್ಟೆ. ದೀಪಾವಳಿ ಹಬ್ಬದ ಸಮಯವಾದ್ದರಿಂದ, ಆಫೀಸಿನಲ್ಲಿ ಹೆಚ್ಚಿನ ಜನ ರಜಾ ತೆಗೆದುಕೊಂಡಿದ್ದರು. ರಜಾ ಶುರುವಾಗುವಾಗಲೇ ನನ್ನ ಛೀಫ್  ರಿಪೋರ್ಟರ್ ನಚ್ಚಿ ನನಗೆ ಎಚ್ಚರಿಸಿದ್ದರು. ``ನೋಡೋ ಮಾಕೋನಹಳ್ಳಿ, ಮುಂದಿನ ವಾರ ಯಾರೂ ಕೆಲಸ ಮಾಡೋಲ್ಲ. ಎಷ್ಟಾಗುತ್ತೆ ಅಷ್ಟು ಸ್ಟೋರಿ ರೆಡಿ ಮಾಡಿಕೋ. ನಿನ್ನ ತಲೇ ಮೇಲೇ ಪೇಜ್ ತುಂಬೋ ಕೆಲಸ ಬೀಳುತ್ತೆ,’’ ಅಂತ.

ದೀಪಾವಳಿ ಹಿಂದಿನ ದಿನ ಆಫೀಸಿನಲ್ಲಿ ಒಬ್ಬನೇ ಕೂತಿದ್ದೆ. ಕ್ರೈಂ ರಿಪೋರ್ಟ್ ಗಳು ಕಡಿಮೆ ಇದ್ದಿದ್ದರಿಂದ, ಮೊದಲೇ ಬರೆದಿಟ್ಟಿದ್ದ ಕೆಲವು ಸ್ಟೋರಿಗಳನ್ನು ರಿಲೀಸ್ ಮಾಡೋಕೆ ಅಂತ ಇಟ್ಟು, ಬಂದ ಪ್ರೆಸ್ ನೋಟ್ ಗಳಲ್ಲಿ ಏನಾದ್ರೂ ಸಿಗುತ್ತಾ ಅಂತ ಕಣ್ಣಾಡಿಸುತ್ತಾ ಇದ್ದೆ. ನಾಲ್ಕು ಘಂಟೆ ಸುಮಾರಿಗೆ ನಚ್ಚಿ ಕಾಲೆಳೆದುಕೊಂಡು ಒಳಗೆ ಬಂದವರೇ, ``ಹ್ಯಾಗಿದೆಯೋ ಮಾಕೋನಹಳ್ಳೀ ಸ್ಟೋರಿ ಪೊಸಿಷನ್? ಪೇಜ್ ತುಂಬಿಸ್ಬೋದೇನೋ?’’ ಅಂತ ಕೇಳಿದ್ರು.

``ತೊಂದ್ರೆ ಇಲ್ಲ ಅಂತ ಅನ್ನಿಸ್ತದೆ ನಚ್ಚಿ. ಪ್ರೆಸ್ ನೋಟ್ ಗಳನ್ನ ನೋಡ್ತಿದ್ದೀನಿ. ಇನ್ಯಾರು ಬರ್ತಾರೆ ಇವತ್ತು?’’ ಅಂತ ಕೇಳಿದೆ.

``ಯಾರೂ ಇಲ್ಲ ಅಂತ ಕಾಣುತ್ತೆ. ಆದಿ ಬರ್ತೀನಿ ಅಂದಿದ್ದ. ನೋಡ್ಬೇಕು ಗುರೂ. ಇರೋ ಸ್ಟೋರಿನೆಲ್ಲ 
ರಿಲೀಸ್ ಮಾಡಮ್ಮಾ,’’ ಅಂದವರೇ, ``ಏನಾದ್ರೂ ಸ್ಟೋರಿ ಸಿಕ್ಕುತ್ತಾ ಅಂತ ಪಟೇಲನ ಹತ್ರ ಹೋಗಿದ್ದೆ ಕಣೋ…. ಪಾಲಿಟಿಕ್ಸ್ ಬಿಟ್ಟು ಎಲ್ಲಾ ಮಾತಾಡಿದ್ವಿ ನೋಡು,’’ ಅಂದ್ರು.

ಆಗಿನ ಮುಖ್ಯಮಂತ್ರಿಯಾಗಿದ್ದ ಜೆ ಎಚ್ ಪಟೇಲರ ಬಗ್ಗೆ ಬಹಳಷ್ಟು ಕಥೆಗಳನ್ನು ಕೇಳಿದ್ದ ನಾನು, ``ಏನಂದ್ರು ಪಟೇಲರು? ಏನು ಮಾತಾಡಿದ್ರಿ ನಚ್ಚಿ?’’ ಅಂದೆ.

``ಆಮೇಲೆ ಹೇಳ್ತೀನಿ. ಮೊದ್ಲು ಸ್ಟೋರಿ ರಿಲೀಸ್ ಮಾಡಿ, ಪ್ರೆಸ್ ನೋಟ್ ನಲ್ಲಿ ಏನಾದ್ರೂ ಸಿಗುತ್ತಾ ನೋಡು. ನೀ ಕಳ್ಸಿದ ಸ್ಟೋರಿಗಳಲ್ಲೇ ಪೇಜ್ ತುಂಬಿಸೋಕೆ ಆಗುತ್ತಾ ನೋಡ್ತೀನಿ. ಬಾಲು ಮತ್ತೆ ಅಫ್ಶಾನ್ ಕೂಡ ಸ್ಟೋರಿ ಬರೆದಿಟ್ಟು ಹೋಗಿದ್ದಾರೆ,’’ ಅಂದ್ರು.

ಎಷ್ಟೇ ಬೇಗ ಅಂದ್ರೂ, ಕೆಲಸ ಮುಗಿಯೋ ಹೊತ್ತಿಗೆ ಏಳು ಘಂಟೆ ದಾಟಿತ್ತು. ಹಬ್ಬದ ದಿನವಾದ್ದರಿಂದ, ನಚ್ಚಿ ಮನೆ ಕಡೆಗೆ ಹೊರಡೋಕೆ ರೆಡಿಯಾಗಿದ್ದರು. ``ಅಲ್ಲ ನಚ್ಚಿ, ಪಟೇಲ್ರು ಏನಂದ್ರು?’’ ಅಂದೆ.

``ಓ ನೆನಪಾಯ್ತು ನೋಡು…. ಬ್ಲೂ ಲೇಬಲ್ ಟೇಸ್ಟ್ ಮಾಡಿದ್ದೀಯೇನೋ ಮಾಕೋನಹಳ್ಳಿ. ಪಟೇಲನ ಮನೆಯಿಂದ ಫ್ಲಾಸ್ಕ್ ನಲ್ಲಿ ಹಾಕ್ಕೊಂಡು ಬಂದೆ. ಟೇಸ್ಟ್ ಮಾಡ್ತೀಯಾ?’’ ಅಂತ ಕೇಳಿದ್ರು.

``ನಚ್ಚಿ…. ಪಟೇಲ್ರು ಏನಂದ್ರು?’’ ಅಂತ ಅದೇ ಪ್ಲೇಟ್ ಹಾಕಿದೆ.

``ಏನೂ ಇಲ್ಲ ಕಣೋ…. ಪಟೇಲನ ಮನೆಗೆ ಹೋದ್ನಾ? ಗೇಟಲ್ಲಿ ಸೆಕ್ಯುರಿಟಿ ಸಮೇತ ಇರ್ಲಿಲ್ಲ. ಯಾರೂ ಇಲ್ಲ ಅಂತ ಅಂದ್ಕೊಂಡೆ. ಒಳಗೆ ಹೋದ್ರೆ, ಪೋರ್ಟಿಕೋದಲ್ಲಿ ಪುಸ್ತಕ ಓದ್ತಾ ಕೂತಿದ್ದ. ನನ್ನ ನೋಡಿದ ತಕ್ಷಣ, ಬಾರೋ ನಚ್ಚಿ ಅಂದ. ಏನೋ ಸಿಗುತ್ತೆ ಅಂತ ಖುಶಿಯಲ್ಲಿ ಕೂತ್ರೆ, ನೋಡೋ ನಚ್ಚಿ, ಈ ದರಿದ್ರ ಪಾಲಿಟಿಕ್ಸ್ ಇದ್ದಿದ್ದೆ. ನೀನೂ ತುಂಬಾ ಪುಸ್ತಕಗಳನ್ನ ಓದ್ಕೊಂಡಿದ್ದೀಯಾ. ಯಾವುದಾದ್ರೂ ಒಳ್ಳೆ ಪುಸ್ತಕದ ವಿಷಯ ಮಾತಾಡೋಣ, ಅಂತ ಹೇಳಿ, ಬ್ಲೂ ಲೇಬಲ್ ತರಿಸ್ದ. ಸ್ಟೋರಿ ಸಿಗಲೇ ಇಲ್ಲ ಗುರೂ,’’ ಅಂದ್ರು.

``ಸೆಕ್ಯುರಿಟಿ ಇರಲಿಲ್ಲ ಅಂದ್ರಿ?’’ ಅಂತ ಕೇಳಿದೆ.

``ಓ ಅದಾ? ಕೇಳ್ದೆ ಕಣೋ. ಮನೆಯವರೆಲ್ಲ ಹಬ್ಬಕ್ಕೆ ಊರಿಗೆ ಹೋಗಿದ್ದಾರೆ. ನನಗ್ಯಾವ ಹಬ್ಬ ನಚ್ಚಿ? ಮೂರು ದಿನ ಹಾಯಾಗಿರೋಣ ಅಂತ ಇಲ್ಲೇ ಉಳ್ಕೊಂಡೆ. ಅಡುಗೆ ಮಾಡೋಕೆ ಒಬ್ಬ ಇದ್ದಾನೆ. ಅವನ ಮನೆ ಇಲ್ಲೇ ಹಿಂದೆ. ಇನ್ನು ನನ್ನ ಹೆಣ ಕಾಯೋಕೆ ಪಾಪ ಆ ಪೋಲಿಸರನ್ನ ಹಾಕಿದ್ರು. ನಂಗೆ ಹಬ್ಬ ಇಲ್ಲ ಅಂದ್ರೆ ಅವ್ರಿಗೇನೂ ಇರಲ್ವಾ? ಅವ್ರಲ್ಲಿದ್ರೆ, ನಾನಿಲ್ಲಿರೋದು ಎಲ್ಲರ್ಗೂ ಗೊತ್ತಾಗುತ್ತೆ. ನಾಡಿದ್ದು ಬೆಳಗ್ಗೆವರೆಗೆ ಬರ್ಬೇಡಿ, ಬರ್ದೇ ಇರೋದನ್ನ ನಿಮ್ಮ ಸೀನಿಯರ್ ಆಫೀಸರ್ ಗಳಿಗೆ ಹೇಳ್ಬೇಡಿ ಅಂತ ಹೇಳಿ, ಮನೆಗೆ ಕಳುಹಿಸ್ದೆ ಅಂದ,’’ ಅಂದ್ರು ನಚ್ಚಿ.

ನಚ್ಚಿ ಹೋದ ದಾರಿಯನ್ನೇ ನೋಡ್ತಾ ಕೂತೆ. ಪಟೇಲ್ರು ಏನಂದ್ರು ಅಂತ ಮತ್ತೆ ಕೇಳೋಕೆ ಮರೆತು ಹೋಯಿತು. ಪಟೇಲರು ಇನ್ನೇನೂ ಹೇಳೋ ಅವಶ್ಯಕತೆಯೂ ಇರಲಿಲ್ಲ ಅಂತ ಕಾಣುತ್ತೆ.

ಕಳೆದೆರೆಡು ವರ್ಷಗಳಿಂದ ರಾಜಕೀಯದ ಬದಲಾವಣೆಯ ಗಾಳಿ ಬೀಸುತ್ತಿರುವುದೇನೋ ನಿಜ. ತಾವು ಬೇರೆಯವರಿಗಿಂತ ಭಿನ್ನ ಎಂದು ಟೆಲಿವಿಷನ್ ಗಳಲ್ಲಿ ಬಿಂಬಿಸುತ್ತಾ, ತಮ್ಮ ಪಾರದರ್ಶಕತೆಯ ಕುರುಹಾಗಿ, ಸಾವಿರ ರೂಪಾಯಿಗೆ ಜೊತೆಯಲ್ಲಿ ಸೆಲ್ಫಿ, ಇಪ್ಪತ್ತು ಸಾವಿರ ರೂಪಾಯಿಗೆ ಜೊತೆಯಲ್ಲಿ ಊಟ ಮಾಡಿ ಚುನಾವಣೆ ದೇಣಿಗೆ ಸಂಗ್ರಹಿಸುವಾಗ, ನಮ್ಮ ಮಧ್ಯದಲ್ಲಿದ್ದ ಜಾರ್ಜ್, ಪಟೇಲರು, ಭೈರೇಗೌಡ, ಕೆ.ಎಚ್. ರಂಗನಾಥ್ ಥರದ `ಆಮ್ ಆದ್ಮಿಗಳು’ ನೆನಪಾಗುತ್ತಾರೆ…..



ಮಾಕೋನಹಳ್ಳಿ ವಿನಯ್ ಮಾಧವ.